ಹೂದೋಟದಲ್ಲಿ ನಾನೂ ಇದ್ದೆ
ಹೊಂಬಿಸಿಲಿನೊಂದಿಗೆ ಆಡುತ್ತಿದ್ದೆ
ಯಾರೋ ಬಂದರು,ಎತ್ತಿಕೊಂಡು ಹೊದರು
ಪ್ರೀತಿಯಿಂದ ಸವರುತ್ತ ನನ್ನ ಕೆಳಗಿಟ್ಟರು
ಅದೊಂದು ಖಾಲಿ-ಖಾಲಿ ಬಯಲು
ನೀರಿಲ್ಲದೆಯೇ ಒಣಗಿದ ಬೆತ್ತಲೆ ಒಡಲು
ಗಿಡಗಳಿಲ್ಲ,ಮರಗಳಿಲ್ಲ,ಹಕ್ಕಿಗಳೂ ಇರಲಿಲ್ಲ
ರಾತ್ರಿ ಎಲ್ಲ ಸ್ಮಶಾನ ಮೌನ ಯಾರೂ ಇರಲಿಲ್ಲ.
ಉಷೆ ಮೂಡಿತು,ಬೆಳಗಾಯಿತು ಸುತ್ತಲೂ ಸದ್ದು
ಮೈಕಿನ,ಜನಜಂಗುಳಿಯ ಸದ್ದೆ ಸದ್ದು
ಬಿಳಿ ಪೋಷಾಕಿನ,ಕಪ್ಪು ಕನ್ನಡಕದ ಆ ಧಡಿಯ ವ್ಯಕ್ತಿ
ಹೊಂಡದಲಿ ನನ್ನಿಟ್ಟು, ನೀರಿಟ್ಟು ತೋರಿದಾ ಭಕ್ತಿ
ಪರಿಸರ ,ಗಿಡ ಬೆಳೆಸಿ,ನಾಡು ಉಳಿಸಿ ಇನ್ನು ಏನೇನೋ
ಅವನು ಹೇಳಿದ್ದು,ಜನ ಕೇಳಿದ್ದು ಚಪ್ಪಾಳೆ ಇನ್ನು ಇನ್ನೂ
ಕರಗುತಿತ್ತು ಜನ ಸಮೂಹ ಇನ್ನೇನು
ಅನಿಸಿತ್ತು ಯಾರೂ ಬರಲಿಲ್ಲವೇನು
ಅಳುತಿದ್ದೆ ಸುತ್ತ ಯಾರೂ ಇಲ್ಲವೆಂದು
ಅರಿವಾಗಿತ್ತು ಇದು ನನ್ನ ಕರ್ಮ ಭೂಮಿಯೆಂದು
ಯಾರೂ ನನ್ನ ಸಲಹಲಿಲ್ಲ
ನನ್ನ ಬದುಕಿಗೆ ನೀರೆರೆಯಲಿಲ್ಲ
ರಾತ್ರಿಯಾಯಿತು,ಬೆಳಗಾಯಿತು,ದಿನಗಳೆರಡು ಕಳೆದಾಯಿತು
ಬಿಸಿಲಾಯಿತು, ಹಸಿವಾಯಿತು ,ಇಲ್ಯಾಕೆ ನೆಟ್ಟರೊ? ವ್ಯಥೆಯಾಯಿತು
ಕರೆಯುತ್ತಿದ್ದೆ ಕಾಯುತ್ತಿದ್ದೆ ಬಂದಿತು ನಿದ್ದೆ
ದೇಹ ಉರುಳಿತು,ಒಣಗಿತು…ಅದು ಮರಣ ನಿದ್ದೆ
ಗಿಡಗಳನ್ನು ನೆಡಿರಿ , ಉಳಿಸಿರಿ , ಬೆಳೆಸಿರಿ
-ಪ್ರಕಾಶ ತದಡಿಕರ
ನವಿ ಮುಂಬಯಿ
Facebook ಕಾಮೆಂಟ್ಸ್