X

ಉದ್ದನೆಯ ಉಗುರುಳ್ಳೆ….

ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಇಂದಿನ, ಅದರಲ್ಲೂ ಹದಿಹರೆಯದವರಿಗೆ,ಅವರ ಸೌಂದರ್ಯ ಅಭಿವೃದ್ಧಿಗೆ ಪೂರಕವೆನಿಸುವ, ಈ ಫೇಶನ್ ಟೆಕ್ನೋಲೊಜಿಯನ್ನು ಪಚ್ಚಡಿ ಮಾಡಿದ ತಜ್ಞೆಯರು ಹೇಳಿದುದೇ ವೇದವಾಕ್ಯ.ಜೀರೊ ಸೈಝ್, ಪೆಡಿಕ್ಯೂರ್, ಮೆನಿಕ್ಯೂರ್, ಫೇಸ್ ಪ್ಯಾಕು ಅಂತ ಅವರ ತಲೆಗೆ ನಮ್ಮಂಥವರಿಗೆ ಉಚ್ಛರಿಸಲೂ ಸಾಧ್ಯವಿಲ್ಲದ ಶಬ್ದ ಭಂಡಾರಗಳನ್ನು ತುಂಬಿಸಿ ಬಿಡುವ ಇವರ ಬ್ಯೂಟಿ ಪಾರ್ಲರಿನ ಬಾಗಿಲು ತಟ್ಟಲೂ ಗಿರಾಕಿಗಳ ಕಿಸೆ ಭರ್ತಿಯಾಗಿರಬೇಕೆಂದು ಬೇರೆ ಹೇಳಬೆಕಿಲ್ಲ ತಾನೆ. ಹಾಕುವ ಬಟ್ಟೆಗೆ ಸರಿಯಾದ ಬಣ್ಣದ ನೈಲ್ ಪಾಲೀಶು ತಂದು ಉಗುರಿಗೆ ಬಳಿಯದಿರುವ ಯುವತಿಯರು ಬೆರಳೆಣಿಕೆ. ಅದನ್ನು ಕತ್ತರಿಸದೆ, ಹರಿತ ಮಾಡಿ ಶೇಪಿಸಿ, ರಂಗು ರಂಗಿನ ಬಣ್ಣ ಹಾಕಲು ಇಂದಿನ ಲಲನಾ ಮಣಿಗಳು ತಮ್ಮ ಮೇಕಪ್ಪಿನ ಸಮಯದ ಅರ್ಧಭಾಗದಷ್ಟು ವಿನಿಯೋಗಿಸುತ್ತಾರೆಂದು ಒಂದು ಜಾಗತಿಕ ತಜ್ಞ ವರದಿ ಮಾಡಿದ್ದಾನೆ.. . ಅಬ್ಬಾ.. ಈ ವಿಷಯಕ್ಕೂ ಸರ್ವೆ ಬೇರೆ ಕೇಡು !!! ಉಗುರು ಪುರಾಣ ಎಂದು ಇದರ ಬಗ್ಗೆ ಪುಟಗಟ್ಟಲೆ ಬರೆದು ಸಂಶೋಧನಾ ಗ್ರಂಥ ತಂದರೂ ಅಚ್ಚರಿಯೇನಿಲ್ಲ ಬಿಡಿ, ನೋಡಿ ಸ್ವಾಮೀ ಈ ಉಗುರು ಸಾಮಾನ್ಯದ್ದಲ್ಲ….,ಕೈಕಾಲು ಸೇರಿದರೆ ಹತ್ತಲ್ಲ, ಇಪ್ಪತ್ತಾಗುವ ಜಾತಿ….!!

ಇಂದು ಸರ್ವಜ್ಞ ಇದ್ದಿದ್ದರೆ ಹೀಗೊಂದು ವಚನ ಬರೆದಿರುತ್ತಿದ್ದರೊ ಏನೊ?

“ಹಚ್ಚುವುದಕೆ ಬಣ್ಣಗಳು,

ಉದ್ದಕ್ಕೆ ಉಗುರಿರುವ ಕೈಯಿರಲು

ಸ್ವರ್ಗಕ್ಕೂ ಕಿಚ್ಚು ಹಚ್ಚೆಂದ ಸೌಂದರ್ಯ ತಜ್ಞೆ ”

“ಹರಿಪಾದ ನಖದಿಂದ ಇಳಿದು ಬಂದಳು ಗಂಗಾ” ಪವಿತ್ರ ಗಂಗಾಮಾತೆ ಹರಿಯ ಉಗುರಿನಿಂದಾಗಿ ಇಳಿದು ಬಂದವಳೆಂಬ ಪ್ರತೀತಿ. ಹಿಂದಿನ ಯುಗದಲ್ಲಿ ರಕ್ಕಸರ ಪ್ರಥಮ ಲಕ್ಷಣವೇ ಉದ್ದದ ಚೂಪಿರುವ ಉಗುರಂತೆ. ಬಾಲ್ಯದಲ್ಲಿ ನಮ್ಮ ಅಜ್ಜ ಕತೆ ಹೇಳುವಾಗ ದುಷ್ಟಬುದ್ದಿಯ ಮತ್ತೆ ಹೆದರಿಸುವ ಸಂಕೇತದಲ್ಲಿ ಉದ್ದ ಉಗುರಿರುವವರನ್ನು ಗುರುತಿಸುತ್ತಿದ್ದುದು ಈಗಲೂ ನನ್ನ ನೆನಪಲ್ಲಿದೆ. ಆ ಅಜ್ಜ ಈಗ ಇದ್ದಿದ್ದರೆ ಉದ್ದಕ್ಕೆ ಉಗುರು ಬೆಳೆಸಿರುವವರನ್ನು ಶೂರ್ಪನಖಿಯ ಸಂತಾನದವರೆನ್ನುತ್ತಿದ್ದರೇನೊ.. ಕೈಯ, ಕಾಲಿನ ಉಗುರುಬೆಳೆಯನ್ನು ಚೆನ್ನಾಗಿ ಬೆಳೆಸಿ, ಅದರ ತುದಿಯನ್ನು ಬೇಕಾದ ಆಕಾರಕ್ಕಿಳಿಸಿ, ಅದಕ್ಕೆ ಹೊಂದಿಕೆಯಾಗುವ ಪೈಂಟು ತಂದು ಬಳಿಯಲು, ಮತ್ತೆ ಸರಿಯಾಗದಿದ್ರೆ ರಿಮೂವರಿನಲ್ಲಿ ತೆಗೆದು ಪುನಃ ಹಾಕಲು ಸಾಧಾರಣ ತಾಳ್ಮೆ , ಶ್ರಮ ಸಾಲದು ಅಲ್ಲವೇ… ಮತ್ತೆ ಹೋದಲ್ಲಿ ಬಂದಲ್ಲಿ ಕಂಡಲ್ಲಿ ಎಲ್ಲ ಮಾತನಾಡುವಾಗ ಕೈಭಾಷೆ, ಕಾಲುಭಾಷೆಗಳಲ್ಲಿ ಪ್ರದರ್ಶನಾ ಕೌಶಲ್ಯಕ್ಕೆ ಇವರು ಮತ್ತೆ ಶ್ರಮ ಪಡಬೇಕೇನೊ…

ಉಗುರಿನಲ್ಲಿ ರಕ್ತ ಕಣಗಳು ಇಲ್ಲದಿರುವ ಕಾರಣ ನಾವು ಉಗುರು ಕತ್ತರಿಸಿದರೆ ನೋವಾಗುವುದಿಲ್ಲ. ಕತ್ತರಿಸಿದಷ್ಟು ಉಗುರು ಬೆಳೆಯುತ್ತಾನೇ ಇರುತ್ತದೆ. ಹೀಗೆ ತಿಂಗಳಿಗೆ 2.5 ಮಿಲಿ ಮೀಟರಿನಷ್ಟು ಉಗುರು ಬೆಳೆಯುವುದು. ಅಂದರೆ ಸುಮಾರು5- ತಿಂಗಳಿಗೆ ಉಗುರು ಇಡೀ ಬದಲಿ ಹೊಸ ಉಗುರಾಗುವುದು. ಹೊಸ ಉಗುರಿನ ಕಣಗಳು ಉಗುರಿನ ಬುಡದಲ್ಲಿ ಉತ್ಪಾದನೆ ಆಗುತ್ತಲೇ ಇರುವ ಕಾರಣ ನಾವು ಎಷ್ಟು ತುಂಡು ಮಾಡಿದರೂ ಉಗುರು ಖಾಲಿ ಆಗುವುದೇ ಇಲ್ಲ!

ಇದು ಹೆಂಗಸರಿಗೆ ಮಾತ್ರ ಸಂಬಂಧ ಪಟ್ಟ ವಿಷಯ ಅಲ್ಲ ಮಹರಾಯರೇ, ಕೆಲವು ಗಂಡಸರಿಗೂ ಉಗುರು ಬೆಳೆಸುವ ಬುದ್ಧಿ ಇದೆ. ನರಸಿಂಹಾವತರದ ವಿಷ್ಣು ಹಿರಣ್ಯಕಶಿಪುವಿನ ಹೊಟ್ಟೆ ಬಗೆಯಲು ಇದನ್ನೇ ಆಯುಧವಾಗಿ ಬಳಸಲಿಲ್ಲವೇ.. 2016ರಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡಿನಲ್ಲಿ ಅತಿ ಉದ್ದದ ಕೈಉಗುರಿರುವ ದಾಖಲೆ 78 ವರ್ಷದ ಒಬ್ಬ ಅಜ್ಜಂದು. ಶ್ರೀಧರ ಚಿಲ್ಲಾಳನೆ೦ಬ ಈ ಅಜ್ಜ ಉಗುರು ಬೆಳೆಸಲು ಕಾರಣ ಏನೆಂದು ತಿಳಿದರೆ ನೀವು ಖಂಡಿತಾ ಅಚ್ಚರಿಗೊಳ್ಳುತ್ತೀರಿ. ಚಿಕ್ಕವರಾಗಿದ್ದಾಗ ಅವರ ಶಾಲೆಯ ಅಧ್ಯಾಪಕರೊಬ್ಬರ ಉದ್ದ ಉಗುರನ್ನು ತಿಳಿಯದೆ ಈ ಹುಡುಗ ತುಂಡು ಮಾಡಿದ್ದಕ್ಕೆ ಬಿದ್ದ ಬೆನ್ನ ಪೆಟ್ಟಿನ ಪ್ರತೀಕಾರವಾಗಿಯಂತೆ… ನಿನಗೆ ಇದರ ಮಹತ್ವ ಹೇಗೆ ಗೊತ್ತು ಎಂದು ಹೇಳಿ ಮೂದಲಿಸಿದ್ದಕ್ಕೆ ಬೆಳೆಸಿ ತೋರಿಸುವೆಯೆಂದು ಹೇಳಿ, ಅಂದಿನಿಂದ ತುಂಡು ಮಾಡದೆ, ಪ್ರತಿ ಉಗುರನ್ನೂ 198 ಸೆಂಟಿ ಮೀಟರುಗಳಷ್ಟು ಬೆಳಸಿದ್ದಾರೆ!!! ಇಂತಹ ಉಗುರನ್ನಿಟ್ಟುಕೊಂಡು ಇವರೆಲ್ಲ ನಿತ್ಯಕರ್ಮಗಳನ್ನು ಹೇಗೆ ಮಾಡುವರೊ ದೇವನೆ ಬಲ್ಲ…. ವಿದೇಶದಲ್ಲೊಬ್ಬರು ಮಹಿಳೆ ಉಗುರುಗಳನ್ನು ಕೈಯ ಬೆಳೆ ಎನ್ನುವ ರೀತಿ ಅದಕ್ಕೆ ಆಲಿವ್ ಎಣ್ಣೆ ಮಸಾಜು ದಿನಾ ಮಾಡಿ, ತಿಂಗಳಿಗೆ ಐದು ಬಾಟಲ್ ಮೆನಿಕ್ಯೂರ್ ಬಳಸಿ ತುಂಬಾ ಜೋಪಾನವಾಗಿ ಆರೈಕೆ ಮಾಡುತ್ತಾಳಂತೆ… ಬೇಕಾ.. ಮಾಡುವುದಕ್ಕೆ ಬೇರೆ ಕೆಲಸ ಇಲ್ಲವೇನೊ..

ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇದೆ. ಅದಕ್ಕೂ ಸಂಶೋಧನೆ ಎಲ್ಲ ಮಾಡಿ ಇದು ಮಾನಸಿಕ ಒತ್ತಡದಿಂದ, ಪ್ರೀತಿ ಕಡಿಮೆಯಾಗಿ ಎಂದೆಲ್ಲ ವರದಿ ಮಾಡಿದ್ದಾರೆ. ಒಮ್ಮೆ ಹೀಗಾಯಿತಂತೆ… ಒಂದು ಕಾಲೇಜಿಗೆ ಸೇರಿದ ತರುಣಿಗೆ ತುಂಬ ಉಗುರು ಕಚ್ಚುವ ಚಟ ಇತ್ತು. ಅವಳ ಹೆತ್ತವರು ಎಷ್ಟು ಉಪಾಯ ಮಾಡಿದರೂ ಅದನ್ನು ನಿವಾರಿಸಲಾಗಲಿಲ್ಲವಂತೆ. ಆಗ ಅವಳ ಮಾವ ಒಂದು ಉಪಾಯ ಹೇಳಿದನಂತೆ.. ಏನು ಗೊತ್ತಾ… ಅವಳಿಗೆ ಯೋಗಾಸನ, ಮುದ್ರೆ ಎಲ್ಲ ಕಲಿಸಿ ಉಗುರಿನಲ್ಲಿ ತುರಿಸಲೂ ಎಡೆ ಮಾಡಿಕೊಡದಿರುವುದು !!! ತಿಂಗಳ ಮೇಲೆ ಬಂದು ನೋಡಿದ ಮಾವ, ಕೈ ಉಗುರು ಉದ್ದ ಬಂದಿರುವುದು ಕಂಡು ಉಪಾಯ ಫಲಿಸಿತು ಎಂದು ಹೆಮ್ಮೆಗೊಂಡನಂತೆ…ಆಗ ಅಲ್ಲೇ ಇದ್ದ ಅವಳ ಅಮ್ಮ, ಇವಳು ಯೋಗಾಸನ ಕಲಿತ ಮತ್ತೆ ಕೈಯುಗುರು ಕಚ್ಚುವುದಿಲ್ಲ,ಯಾಕೆಂದರೆ ಕಾಲ ಉಗುರು ಸಿಗುವುದಲ್ಲಾ… ಅವನ್ನೇ ಸರೀ ಕಚ್ಚಿಗೊಂಡಿರುತ್ತಾಳೆ…ಈ ಚಟಕ್ಕೇನು ಮಾಡುವುದೆಂದು ಮರು ಪ್ರಶ್ನಿಸಿದಾಗ ಮಾವನ ತಲೆ ಗಿರ್ರೆಂದಿತಂತೆ…!!!

ಲಾಸ್ಟ್ ಪಂಚ್ : “ಮಕ್ಕಳಿದ್ದರೆ ಮನೆ ಚೆಂದ, ಹಾಗೇ ಇರುವ ಉಗುರಿದ್ದರೆ ಕೈ ಕಾಲುಗಳು ಚೆಂದ”

ಏನ್ ಹೇಳ್ತೀರಾ ನೀವೂ ???

Facebook ಕಾಮೆಂಟ್ಸ್

Shylaja Kekanaje: ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.
Related Post