X

ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ..

‘ಮನುಷ್ಯನಿಗೂ ರೆಕ್ಕೆಗಳಿದ್ದಿದ್ದರೆ ಎಷ್ಟು ಚನ್ನಾಗಿರುತ್ತಿತ್ತು.’ ಕಿಟಕಿಯಿಂದಾಚೆ ನೋಡುತ್ತಿದ್ದವಳಿಗೆ ಪಕ್ಷಿಗಳ ಹಾರಾಟ ಕಂಡು ಯೋಚನೆಯೊಂದು ಬಂದಿತ್ತು. ‘ನನಗೂ ಕೂಡ ರೆಕ್ಕೆಗಳಿದ್ದಿದ್ದರೆ, ಅವುಗಳಂತೆ ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡಬಹುದಿತ್ತು’ ಎಂದು ಯೋಚಿಸುತ್ತಿದ್ದೆ. ಆದರೆ ಪಕ್ಕದಲ್ಲಿದ್ದ ಕ್ರಚಸ್ ವಾಸ್ತವವನ್ನು ನೆನಪಿಸುತ್ತಿತ್ತು. ನಡೆಯಲೂ ಆಗದವಳು ಹಾರುವ ಕನಸು ಕಾಣುತ್ತಿದ್ದೆ.

ಜೀವನ ಒಂದು ರೀತಿ ವಿಚಿತ್ರ. ಇರುವುದೆಲ್ಲವ ಬಿಟ್ಟುಇರದುದರೆಡೆಗೆ ತುಡಿವುದೇ ಜೀವನ ಅಂತಾರಲ್ಲ ನಿಜ. ಬದುಕು ಕಳೆದುಕೊಳ್ಳುತ್ತೇನೆ ಎಂದಾಗ ಬದುಕೊಂದು ಸಿಕ್ಕಿದರೆ ಸಾಕು ಎಂಬ ತುಡಿತ. ಬದುಕು ಸಿಕ್ಕ ನಂತರ ಇನ್ನಷ್ಟು ಕಾರಣಕ್ಕೆ. ಸವಾಲುಗಳೂ ಕೂಡ ಅಷ್ಟೇ ಬಂದಿರುತ್ತದೆಯಲ್ಲ.
ಆ ದಿನ ಕಿಟಕಿಯಾಚೆಗೆ ನೋಡುತ್ತಾ ಯೋಚಿಸುತ್ತಿದ್ದ ನನಗೆ ಬದುಕು ಮರಳಿ ಸಿಕ್ಕಿತ್ತು, ಕ್ಯಾನ್ಸರ್ ಗುಣಮುಖವಾಗಿತ್ತು. ಬದುಕನ್ನ ಹೊಸರೀತಿಯಲ್ಲಿ ಆರಂಭಿಸಬೇಕಿತ್ತು, ಹೊಸದಾಗಿ ಹೆಜ್ಜೆ ಇಡುವುದನ್ನ ಕಲಿಯಬೇಕಿತ್ತು. ಬದಲಾವಣೆ ಯಾವಾಗಲೂ ನೋವಿನಿಂದ ಕೂಡಿರುತ್ತದೆಯಂತೆ. ಇಲ್ಲಿ ಇಡೀ ಬದುಕೇ ಬದಲಾಗಿಹೋಗಿತ್ತು. ಆ ಬದಲಾವಣೆಗೆ ಹೊಂದಿಕೊಳ್ಳಬೇಕಿತ್ತು. ಹಲವಾರು ಪ್ರಶ್ನೆಗಳು ಬಾಕಿ ಉಳಿದಿದ್ದವು. ಮುಂದೆ ಎನ್ನುವ ಪ್ರಶ್ನೆ? ಈ ಪ್ರಶ್ನೆ ಯಾವಾಗಲೂ ಎಲ್ಲರನ್ನೂ ತಲ್ಲಣಗೊಳಿಸುತ್ತೆ. ಆದರೆ ಎಲ್ಲವನ್ನೂ ಹೊಸತಾಗಿ ಆರಂಭಿಸಬೇಕಿದ್ದ ನನಗೆ ಈ ಪ್ರಶ್ನೆ ದೈತ್ಯಾಕಾರವಾಗಿ ನಿಂತಿತ್ತು. ಅರ್ಧಕ್ಕೆ ನಿಂತಿದ್ದ ಶಿಕ್ಷಣವನ್ನ ಮುಂದುವರೆಸಬೇಕಿತ್ತು, ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು, ಎಲ್ಲಿ ಮಾಡುವುದು, ಭವಿಷ್ಯ ಹೇಗೆ, ಬದುಕು ಹೇಗಿರತ್ತೆ ಎನ್ನುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿತ್ತು. ಆಗ ಪ್ರಶ್ನೆಗಳಲ್ಲದೇ ಬೇರೇನೂ ಇರಲಿಲ್ಲ ನನ್ನ ಪಾಲಿಗೆ, ಉತ್ತರ ಹುಡುಕುವ ಕೆಲಸ ಬಿಟ್ಟು ಬೇರೆ ಕೆಲಸವೂ ಇರಲಿಲ್ಲ. ಇವೆಲ್ಲದರ ಮಧ್ಯೆ ಒಂದು ಯೋಚನೆ ಸ್ಥಿರವಾಗಿತ್ತು, ಸಿಕ್ಕ ಎರಡನೇ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುಬೇಕು ಅಂತ. ಆದರೆ ಅದು ಹೇಗೆ, ಯಾವ ರೀತಿಯಲ್ಲಿ ಎನ್ನುವುದು ಅರ್ಥವಾಗಿರಲಿಲ್ಲ.

ಬದುಕು ಎಲ್ಲವನ್ನೂ ಕಲಿಸಿಕೊಡತ್ತೆ, ಬದುಕಿನ ಅನಿವಾರ್ಯತೆಗಳು ಸುಮ್ಮನೆ ಕೂರಲು ಬಿಡುವುದಿಲ್ಲ. ಹೊಸದಾಗಿ ಆರಂಭಿಸಿದ ಬದುಕಲ್ಲಿ, ಹೊಸದಾಗಿ ಹೆಜ್ಜೆ ಇಡಲು ಕಲಿಯಬೇಕಿತ್ತು. ಕ್ರಚಸ್’ನ್ನು ಬಿಟ್ಟು ಸ್ವತಂತ್ರವಾಗಿ ನಡೆಯಲು ಆರಂಭಿಸಬೇಕಿತ್ತು. ಕಲಿಯುವಾಗ ಎಡವಿ ಬೀಳುವುದು ಸಾಮಾನ್ಯವೇ! ನಾನು ಕೂಡ ಸಾಕಷ್ಟು ಸಲ ಬಿದ್ದ ಮೇಲೆಯೇ ನಡೆಯುವುದನ್ನ ಕಲಿತೆ, ಚಿಕ್ಕಂದಿನಲ್ಲಿ ಮಕ್ಕಳು ಕಲಿಯುತ್ತಾರಲ್ಲ ಹಾಗೆ. ಮೊದಲು ಬಿದ್ದಾಗ ಹೆದರಿದ್ದೆ. ಆದರೆ ಎರಡನೇ ಬಾರಿ ಬಿದ್ದಾಗ ನಕ್ಕಿದ್ದೆ. ಹಾಗಂತ ನೋವಾಗಲಿಲ್ಲವೆಂದೇನಲ್ಲ. ಸರಿಯಾಗಿಯೇ ನೋವಾಗಿತ್ತು. ಆದರೆ ಬಿದ್ದ ರೀತಿಯನ್ನ ಮಾತ್ರ ಮನಸಲ್ಲಿ ರಿವೈಂಡ್ ಮಾಡಿ ಮಾಡಿ ಆ ದಿನವಿಡಿ ನಕ್ಕಿದ್ದೆ. ಅಲ್ಲದೇ ಹಾಗೇ ಬಿದ್ದು ಎದ್ದು ಕಲಿತಾಗಲೇ ಅರ್ಥವಾಗಿದ್ದು ಹೊಸತನ್ನ ಕಲಿತಾಗ ಆಗುವ ಸಂತಸ ಬೆಲೆ ಕಟ್ಟಲಾಗದ್ದು ಅಂತ. ಚಿಕ್ಕಂದಿನಲ್ಲೂ ಹೀಗೆ ಖುಷಿಯಾಗಿತ್ತೇನೋ, ಈಗ ನೆನಪಿಲ್ಲ.!!

ನಡೆಯುವುದೇನೋ ಪ್ರಾರಂಭಿಸಿದೆ, ಜೊತೆಗೆ ಮನೆಯಲ್ಲಿಯೇ ಇದ್ದು ಶಿಕ್ಷಣವನ್ನು ಪುನರಾರಂಭಿಸಿದೆ. ನಿಧಾನವಾಗಿ ಒಂದೊಂದೆ ದಾರಿಗಳು ಸಿಕ್ಕರೂ ಮನದ ಗೊಂದಲಗಳಿನ್ನೂ ಕಡಿಮೆಯಾಗಿರಲಿಲ್ಲ. ಆ ತುಮುಲಗಳನ್ನೆಲ್ಲಾ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲೇ ಇದ್ದೆ. ಆಗಲೇ ತಂದೆ ಇದೆಲ್ಲವನ್ನು ಅಕ್ಷರರೂಪಕ್ಕೆ ಇಳಿಸಲು ಹೇಳಿದ್ದು. ನನ್ನೆಲ್ಲಾ ಗೊಂದಲಗಳಿಗೆ, ತುಮುಲಗಳಿಗೆ ಉತ್ತರ ಕಂಡುಕೊಂಡಿದ್ದೆ ಆ ರೀತಿಯಲ್ಲಿಯೇ. ಮತ್ತೊಮ್ಮೆ ಆ ಕ್ಷಣವನ್ನು ಬದುಕಿದ್ದು, ಮತ್ತೆ ಅದನ್ನೆಲ್ಲ ಅವಲೋಕಿಸಿದ್ದು, ಮತ್ತೆ ಆ ಆಳಕ್ಕಿಳಿದಿದ್ದು, ಅದನ್ನ ನನ್ನ ಬದುಕಿನ ಒಂದು ಭಾಗವಾಗಿ ಅಪ್ಪಿಕೊಳ್ಳಲು ಸಹಾಯ ಮಾಡಿತು. ಆ ತುಮುಲಗಳೆಲ್ಲಾ ಕೊನೆಗೊಂಡಿತ್ತು.

ಕ್ಯಾನ್ಸರಿನ ನಂತರ ಮಾನಸಿಕವಾಗಿ, ದೈಹಿಕವಾಗಿ ಸಾಕಷ್ಟು ಬದಲಾವಣೆಗಳಾಗಿದ್ದವು. ನನ್ನ ‘ಮಿತಿ’ಗಳು ನನಗೆ ಗೊತ್ತಿದ್ದವು, ಇನ್ನು ಸಾಧ್ಯತೆಗಳನ್ನ ಪರೀಕ್ಷಿಸಿಕೊಳ್ಳುವ ಬಾರಿಯಾಗಿತ್ತು.

ಕಾಲನ್ನು ೯೦%’ಗಿಂತ ಹೆಚ್ಚು ಮಡಿಸುವುದಕ್ಕೆ ಆಗುವುದಿಲ್ಲ, ಸಡನ್ ಆಗಿ ಮೂವ್ ಆಗುವುದಿಕ್ಕೆ ಆಗುವುದಿಲ್ಲ, ಆದರೂ ಮನೆಯಿಂದ ಹೊರಬಂದು ಶಟಲ್ ಕಾಕ್ ಆಡುವುದಕ್ಕೆ ನಿಂತಿದ್ದೆ. ಎಷ್ಟೋ ಬಾರಿ ಕಾಲಿಗೆ ಪೆಟ್ಟುಮಾಡಿಕೊಂಡು ವಾರಗಟ್ಟಲೇ ನೋವನುಭವಿಸಿದೆ. ಆದರೆ ಆ ತರಹದ ಪ್ರಯತ್ನಗಳನ್ನ ಮಾಡಲೇಬೇಕಿತ್ತು. ಆಗಲೇ ತಾನೆ ನಮ್ಮ ಸಾಧ್ಯತೆಗಳ ಅರಿವಾಗುವುದು!! ಇದಾದ ನಂತರ, ಅಪ್ಪನ ಬಳಿ “ನಾನು ಕಾರ್ ಡ್ರೈವಿಂಗ್ ಕಲಿಯಬೇಕು” ಎಂದಿದ್ದೆ. ಸರಿ ಅದನ್ನೂ ಶುರು ಮಾಡಿ ಆಯ್ತು.

ನಿಜ ಹೇಳಬೇಕಂದರೆ ಹೈಟ್ ಕಮ್ಮಿ ಇದ್ದರೆ ಎಷ್ಟಲ್ಲ ಸಮಸ್ಯೆ ಆಗಬಹುದು ಅಂತ ಗೊತ್ತಾಗಿದ್ದೆ ಅವತ್ತು!! ಸೀಟನ್ನ ಎಷ್ಟು ಅಡ್ಜಸ್ಟ್ ಮಾಡಿಕೊಂಡರೂ ಮುಂದೆ ರೋಡ್ ಸರಿಯಾಗಿ ಕಾಣೋದಿಲ್ಲ! ಜೊತೆಗೆ ಕಾಲನ್ನ ಪೂರ್ತಿ ಮಡಿಸಲಿಕ್ಕೆ ಆಗದೆ ಇದ್ದಿದ್ದು, ಅಲ್ಲದೇ ಬ್ರೇಕ್ ಹಾಕಲು ಬಲಗಾಲನ್ನೇ ಬಳಸಬೇಕು. ಒಂಥರಾ ಸರ್ಕಸ್ ಮಾಡಿದ ಹಾಗಿತ್ತು. ಜೀವನವೇ ಒಂದು ಸರ್ಕಸ್ ಅಂತೆ. ಅದರ ಮಧ್ಯೆ ಈ ಸರ್ಕಸ್’ನ್ನು ಮಾಡಿದರಾಯ್ತು ಅಂತ ಯೋಚಿಸಿ, ಕಲಿಯಲು ಆರಂಭಿಸಿಯೂ ಆಯ್ತು, ಕಲಿತದ್ದೂ ಆಯ್ತು. ಹಾಗಂತ ಈಗ ಕೇಳಿದರೆ ನಾನು ಡ್ರೈವ್ ಮಾಡುವುದಿಲ್ಲ. ಯಾಕೆಂದರೆ ಗೆಳತಿಗಿರುವಂತೆ ನನಗೆ ಕಾರುಗಳ ಬಗ್ಗೆ ಹುಚ್ಚು ಪ್ರೀತಿಯೂ ಇಲ್ಲ, ಗೆಳೆಯನಿಗಿರುವಂತೆ ಸ್ಪೀಡ್ ಬಗ್ಗೆ ವ್ಯಾಮೋಹವೂ ಇಲ್ಲ. ನಾನು ತುಂಬಾ ಇಷ್ಟಪಟ್ಟು ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ನನ್ನ ಕಾಲು ಏನೇನನ್ನ ಮಾಡಬಲ್ಲದು ಅನ್ನೋ ಸಾಧ್ಯತೆಗಳನ್ನಷ್ಟೇ ಪರೀಕ್ಷಿಸಬೇಕಿತ್ತು ನನಗೆ.

ಸಮಯದೊಂದಿಗೆ ಎಲ್ಲ ಸರಿಹೋಗತ್ತೆ ಅಂತಾರೆ. ಹೊಸ ಬದುಕನ್ನೂ ಆರಂಭಿಸಿಯೂ ಆಗಿತ್ತು. ಆದರೂ ಎಲ್ಲೋ ಒಂದು ಕಡೆ ಬಹಳ ಹಿಂದೆಲ್ಲೋ ಒಬ್ಬಳೇ ಒಂಟಿಯಾಗಿ ಉಳಿದುಹೋಗಿರುವೆನೇನೋ ಎನಿಸುತ್ತಿತ್ತು. ಅದಕ್ಕೆ ನನ್ನ ಗೆಳೆಯ, “ತೂ ತೋ ಆಸ್ಮಾನ್ ಮೇ ಉಡ್ ರಹೀ ಹೋ ಯಾರ್..” ಅಂದಿದ್ದ. ಅವನ ಮಾತು ಕೇಳಿ ಅವತ್ತು ನಕ್ಕಿದ್ದರೂ ನಿಧಾನವಾಗಿ ಇಚ್ಛಾಶಕ್ತಿ ಎಂಬ ರೆಕ್ಕೆಗಳಿದ್ದರೆ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡೋದು ಕಷ್ಟವೇನಲ್ಲ ಎಂಬ ಅರಿವಾಗಿತ್ತು. ಇನ್ನು ಪ್ರಯತ್ನ ಪಡದಿದ್ದರೆ ಎಲ್ಲವೂ ಕಷ್ಟವೇ, ಹಾರುವುದು ಹಾಗಿರಲಿ ನಡೆಯುವುದು ಕೂಡ!

ಈಗಲೂ ಆ ಕಿಟಕಿಯ ಪಕ್ಕ ಕುಳಿತು ಯೋಚಿಸುತ್ತೇನೆ ಸಮಯ ಎಷ್ಟು ಬೇಗ ಉರುಳಿಹೋಯಿತು ಅಂತ. ಬದುಕು ಎಷ್ಟೊಂದು ಬದಲಾಯಿತು ಎಂದು. ಕ್ಯಾನ್ಸರ್ ಆಗತ್ತೆ ಅಂತ ಗೊತ್ತಿರಲಿಲ್ಲ, ಅದಾದ ಮೇಲೆ ಪುಸ್ತಕ ಬರೆಯುತ್ತೇನೆ ಅಂತ ಅಂದುಕೊಂಡಿರಲಿಲ್ಲ, ಅದಕ್ಕೆ ಪ್ರಶಸ್ತಿ ಬರತ್ತೆ ಅನ್ನೋ ನಿರೀಕ್ಷೆಯೂ ಇರಲಿಲ್ಲ. ಆದರೆ ಅದೆಲ್ಲವೂ ಆಯಿತು. ಆದರೆ ಅದೆಲ್ಲಕ್ಕಿಂತ ದೊಡ್ಡದು ಬದುಕನ್ನ ಪ್ರೀತಿಸುವ ಕಲೆಯನ್ನು ಕಲಿತದ್ದು. ಅದಕ್ಕಿಂತ ದೊಡ್ಡ ತೃಪ್ತಿ ಯಾವುದರಲ್ಲೂ ಸಿಗುವುದಿಲ್ಲ. ಸಾವಿನ ಆಲಿಂಗನ ಯಾವಾಗ ಹೇಗೆ ಆಗುತ್ತದೆ ಅನ್ನೋದು ಯಾರಿಗೂ ಗೊತ್ತಿರೋದಿಲ್ಲ. ಆದರೆ ಈಗ ಕೊನೆಪಕ್ಷ ಬದುಕನ್ನ ಬದುಕಲಿಲ್ಲ ಎಂಬ ಪಶ್ಚಾತ್ತಾಪವಂತೂ ಇರುವುದಿಲ್ಲ. ಕ್ಯಾನ್ಸರ್ ಮಾಡಿದ ದೊಡ್ಡ ಉಪಕಾರವೇ ಅದು. ಬದುಕಲು ಹೇಳಿಕೊಟ್ಟದ್ದು.

ನಡೆಯುವುದು ಹೇಗೆ ಎಂಬ ಅಳುಕಿರುವಾಗ, ಹಾರಬೇಕು ಎಂಬ ಆಸೆ ಹುಟ್ಟಿದ್ದು. ಅಲ್ಲಿಂದಲೇ ಹೊಸ ಕನಸುಗಳ ಆರಂಭವಾಗಿದ್ದು. ತುಂಬಾ ದೊಡ್ಡ ಕನಸು, ಆ ಕನಸುಗಳು ಸಾಕಾರಗೊಳ್ಳಲು ಬಹಳ ದೂರ ಸಾಗಬೇಕಿದೆ. ಕೈಗೆಟುಕುವುದೋ ಇಲ್ಲವೋ ಎಂಬ ತರ್ಕಗಳು ಆಗಾಗ ಬಂದು ಮನಸನ್ನ ತಲ್ಲಣಗೊಳಿಸುವುದು ನಿಜ. ಅದರ ಮಧ್ಯೆ ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ ಎಂಬ ಭರವಸೆಯೂ ಮೂಡುತ್ತದೆ. ಹಾಂ, ಜೀವನದ ದೊಡ್ಡ ಕನಸೊಂದು ಇನ್ನೇನು ನನಸಾಗುತ್ತದೆ ಎಂಬ ಕ್ಷಣದಲ್ಲಿ ಕೈತಪ್ಪಿ ಹೋಗಿದ್ದಿದೆ. ಹಾಗಂತ ಕೈಬಿಟ್ಟುಬಿಟ್ಟರೆ ಅದೆಂತಹ ಕನಸು. ಬದುಕು ಇಲ್ಲಿತನಕ ಕಲಿಸಿದ್ದು ಕೂಡ ಅದನ್ನೇ ಅಲ್ಲವೇ, ಚೂರಾದ ಕನಸುಗಳ ಹೆಕ್ಕಿ ಆರಿಸಿ ಮತ್ತೆ ಸದೃಢವಾಗಿ ಕಟ್ಟುವುದು!!

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post