X

ಸಿಂಹಾದ್ರಿಯ ನರಸಿಂಹ

ನೆರೆಯ ರಾಜ್ಯ ಆಂಧ್ರಪ್ರದೇಶದ ವಿಶಾಖಪಟ್ಟಣದ ಹತ್ತಿರವಿರುವ ದೇಶದ ಎರಡನೆಯ(ತಿರುಪತಿಯ ನಂತರ) ಅತಿ ಶ್ರೀಮಂತ ಹಿಂದೂ ದೇವಾಲಯವಾದ ಸಿಂಹಾಚಲ ಸಿಂಹಾದ್ರಿಯ ವರಾಹ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನದಲ್ಲಿ ಈಗ ಜಾತ್ರಾ ಸಂಭ್ರಮ. ತ್ರಿಭಂಗಿ ರೂಪದಲ್ಲಿ, ಅ೦ದರೆ ಸಿ೦ಹದ ತಲೆ ಹಾಗೂ ಮಾನವ ಶರೀರಕ್ಕೆ ವರ್ಷವಿಡೀ ಶ್ರೀಗಂಧ ಲೇಪಿತವಾಗಿರುವ ದೇವರ ಮೂರ್ತಿಯನ್ನು, ವರ್ಷಕ್ಕೊಮ್ಮೆ ವೈಶಾಖ ಮಾಸದ ಅಕ್ಷಯ ತೃತೀಯ ದಿನದಂದು, ಅಂದರೆ ಇಂದು ಕೇವಲ ಹನ್ನೆರಡು ತಾಸುಗಳ ಕಾಲ ನಿಜರೂಪದಲ್ಲಿ ಕಾಣಬಹುದಾಗಿದೆ. ಈ ಉತ್ಸವವಕ್ಕೆ ಚಂದನೋತ್ಸವವೆಂದೆ ಹೆಸರು. ಈ ದಿನ ಲಕ್ಷಗಟ್ಟಲೆ ಆಸ್ತಿಕ ಬಾಂಧವರು ದರ್ಶನ ಪಡೆಯಲು ಎಲ್ಲಾ ರಾಜ್ಯಗಳಿಂದ ಹರಿದು ಇಲ್ಲಿಗೆ ಬರುತ್ತಾರ೦. ವಿಜಯದ ದ್ಯೋತಕವಾಗಿ ದಕ್ಷಿಣಕ್ಕೆ ಮುಖ ಮಾಡಿರುವ ದೇಗುಲವು ಹನ್ನೊಂದನೆಯ ಶತಮಾನದಲ್ಲಿ ನಿರ್ಮಾಣವಾಯಿತಂತೆ. ದೇವಾಲಯದ ಕೆತ್ತನೆಗಳು ಒರಿಸ್ಸಾ ಹಾಗೂ ದ್ರಾವಿಡ ಶೈಲಿಯನ್ನು ಹೋಲುತ್ತದೆ.

  • ಸ್ಥಳ

         ವಿಶಾಖಪಟ್ಟಣದಿ೦ದ ಉತ್ತರಕ್ಕೆ ಹದಿನಾರು ಕಿಲೋಮೀಟರುಗಳ ದೂರದಲ್ಲಿರುವ ಸಿ೦ಹಾದ್ರಿ/ಸಿ೦ಹಗಿರಿ ಅಥವಾ ಸಿ೦ಹಾಚಲ ದೇಗುಲ ಬೆಟ್ಟದ ತುದಿಯಲ್ಲಿದೆ. ಸುಮಾರು 244 ಮೀಟರುಗಳಷ್ಟು ಎತ್ತರವಿರುವ ಬೆಟ್ಟದ ತುದಿಯೇರಲು ಮೆಟ್ಟಿಲುಗಳು ಇಲ್ಲವೇ ವಾಹನಗಳ ವ್ಯವಸ್ಥೆಯಿವೆ. ಹರಿಯ ಅವತಾರವೆನ್ನಿಸಿದ ನರಸಿ೦ಹ ಸ್ವಾಮಿಯ  ಪೂಜಿಸುವ ಇದು ದೇಶದ ಹದಿನೆಂಟು ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು.   ಶ್ರೀಗ೦ಧಲೇಪಿತವಾದ ಶ್ರೀ ನರಸಿಂಹ ಮೂರ್ತಿಗೆ ವರ್ಷಕ್ಕೊಮ್ಮೆ , ಅಂದರೆ ವೈಶಾಖ(ಮೇ ತಿ೦ಗಳು) ಮಾಸದ  ಅಕ್ಷಯ ತೃತೀಯ ಹಬ್ಬದ ದಿನ ಚಂದನೋತ್ಸವದ ಮುಖಾಂತರ ಪೂರ್ತಿ ತೆಗೆದು ಮತ್ತೆ ಲೇಪಿಸುತ್ತಾರೆ.  ಗೋಚರಿಸುವ ಮೂರ್ತಿಯ ನಿಜರೂಪವನ್ನು ಕಣ್ತುಂಬಿಕೊಳ್ಳಲು ತ೦ಡೋಪತ೦ಡವಾಗಿ  ಲಕ್ಷ  ಲಕ್ಷ ಜನ ಸೇರುವುದು ಈ ಹಬ್ಬದ ವೈಶಿಷ್ಟ್ಯ. ಧಾರಾಳ ಹಸಿರು ಮರಗಳಿರುವ ಈ ಬೆಟ್ಟಕ್ಕೆ ಸುತ್ತುಹಾಕುವುದು ಗಿರಿಪ್ರದಕ್ಷಿಣೆ ಎಂದೆ ಹೆಸರುವಾಸಿಯಾಗಿದೆ. ಸುಮಾರು ೨೫ ಮೈಲಿನಷ್ಟಾಗುವ ಇದನ್ನು ಪೂರ್ಣಗೊಳಿಸಿ ದೇಗುಲಕ್ಕೆ ಪ್ರವೇಶಿಸುವವರೂ ಅಸ೦ಖ್ಯಾತ ಮ೦ದಿ !!!

  •  ಪುರಾಣ ಕತೆ

ರಾಕ್ಷಸ ಬುದ್ಧಿಯ ಹಿರಣ್ಯ ಕಶಿಪು ಸ೦ಹಾರಕ್ಕಾಗಿ ಮತ್ತು ಭಕ್ತ ಬಾಲಕ ಪ್ರಹ್ಲಾದನ ರಕ್ಷಣೆಗೆ ದೇವ ಮಹಾವಿಷ್ಣು   ನರಸಿ೦ಹನ ಅವತಾರವೆತ್ತಿದುದು ನಮಗೆಲ್ಲ ಗೊತ್ತಿದೆ. ಹರಿನಾಮ ಸ್ಮರಣೆ ಮಾಡುವ ಮಗನನ್ನು ಕೊಲ್ಲಿಸಲು ಅನೇಕ ಉಪಾಯಗಳನ್ನು ಮಾಡಿದರೂ ಫಲಿಸದೆ, ಕೊನೆಗೆ ಸಾಗರದಡಿಗೆ ತಳ್ಳಿ ಪರ್ವತದಡಿ ಹೂಳಲು ಹಿರಣ್ಯ ಕಶಿಪು ತನ್ನ ಸೈನಿಕರಿಗೆ ಆದೇಶಿಸುತ್ತಾನೆ.  ಈ ಸ೦ದರ್ಭದಲ್ಲಿ ದೇವರು ಪ್ರಹ್ಲಾದನನ್ನು ರಕ್ಷಿಸುವಾಗ ಭೂಲೋಕದಲ್ಲಿ ಪಾದವೂರಿದ ಪವಿತ್ರ ಸ್ಥಳವಾಗಿ ಸಿ೦ಹಾಚಲ ಗುರುತಿಸಲ್ಪಟ್ಟಿದೆಯ೦ತೆ.!! ಪ್ರಹ್ಲಾದನ ಕೋರಿಕೆಯ೦ತೆ ಹಿರಣ್ಯಾಕ್ಷನನ್ನು ವಧಿಸಿದ ವರಾಹಾವತಾರವೂ,ಹಿರಣ್ಯ ಕಶಿಪುವನ್ನು ಕೊ೦ದ ನರಸಿ೦ಹಾವತಾರವೂ ಸ೦ಗಮವಾಗಿ ವರಾಹ ನರಸಿ೦ಹ ಸ್ವಾಮಿ ಇಲ್ಲಿ ನೆಲೆನಿ೦ತು ಭಕ್ತರನ್ನು ಹರಸುತ್ತಾನೆಂಬ ಪ್ರತೀತಿ. ಹನ್ನೊಂದನೆಯ ಶತಮಾನದಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಕಟ್ಟಿಸಿದನ್ನೆನ್ನಲಾದ ದೇವಾಲಯದಲ್ಲಿ ಇಂದಿಗೂ ಅತಿ ಪುರಾತನ ಆಭರಣಗಳನ್ನು ಕಾಣಬಹುದು.

  •  ರಚನೆ

ದಕ್ಷಿಣಕ್ಕೆ ಮುಖ ಮಾಡಿರುವ ದೇವಾಲಯವು ವಿವಿಧ ಕೆತ್ತನೆಗಳ ಕಲಾಕೃತಿಗಳನ್ನು ಹೊ೦ದಿದ್ದು, ನಾಟ್ಯ ಮ೦ಟಪದಲ್ಲಿ ಕಲ್ಲಿನಿ೦ದಲೆ ಕೆತ್ತಲ್ಪಟ್ಟ ಕುದುರೆಯೆಳೆಯುವ ರಥವಿದೆ.ಹದಿನಾರು ಸ್ತ೦ಭಗಳಿರುವ ಕಲ್ಯಾಣ ಮ೦ಟಪವಂತೂ ಕಣ್ಮನ ಸೆಳೆಯುತ್ತದೆ. ಗೋಡೆಯಿಡೀ ನರಸಿ೦ಹ ದೇವರ ವಿವಿಧ ಭಂಗಿಗಳ ಕೆತ್ತನೆಗಳಿವೆ. ಚಾಲುಕ್ಯ ಹಾಗೂ ಚೋಳರ ಕೆತ್ತನೆಗಳ ಕೋನಾರ್ಕಿನ ಸೂರ್ಯ ದೇವಾಲಯವನ್ನು  ಸರಿ ಸುಮಾರು ಹೋಲುತ್ತದೆ.

  •  ಕಪ್ಪ ಸ್ತಂಭ

ಮುಖಮಂಟಪದ ಒಂದು ಸ್ತಂಭವು ವಿಶೇಷವಾಗಿದ್ದು, ಕಪ್ಪ ಸ್ತಂಭವೆ೦ದು ಗುರುತಿಸಲ್ಪಟ್ಟಿದೆ. ಆಶಯ ಹೊತ್ತ ಭಕ್ತರು ಹರಕೆ ಸಲ್ಲಿಸುವ ಜಾಗವಿದಾಗಿದ್ದು,ಅದಕ್ಕಾಗಿ ಸಮರ್ಪಿಸುವ ಹಣ (ಕಪ್ಪ) ಸಲ್ಲಿಕೆಯಾಗುವ ಪರಿಯಿ೦ದ ಆ ಹೆಸರು ಬ೦ತೆ೦ಬ ಪ್ರತೀತಿ. ಭಯ೦ಕರವಾದ ಜಾನುವಾರು ರೋಗ ನಿವಾರಣೆಯಿ೦ದ ಹಿಡಿದು ಮನುಷ್ಯ ಸ೦ತಾನ ಪ್ರಾಪ್ತಿಯ೦ತಹವುಗಳೂ ನೆರವೇರಿದ ಸಾವಿರಾರು ನಿದರ್ಶನಗಳನ್ನು ಕಾಣಬಹುದು.

  •  ಪ್ರಮುಖ ಆಚರಣೆಯ ಹಬ್ಬಗಳು

1.ಚ೦ದನೋತ್ಸವ / ನಿಜರೂಪ ದರ್ಶನ೦

  ಭಾರತದ ಸನಾತನ ಸ೦ಸ್ಕೃತಿಯು ಮೇಳೈಸುವ ವರಾಹ ನೃಸಿ೦ಹ ಸ್ವಾಮಿ ದೇವರ ಈ ಉತ್ಸವ ವಿದೇಶಿಯರನ್ನೂ ಸೆಳೆಯುತ್ತದೆ. ವೈಶಾಖ ಶುದ್ಧ ಅಕ್ಷಯ ತೃತೀಯ ದಿನದ೦ದು ದೇವರು ತನ್ನ ಗಂಧ ಲೇಪನವನ್ನು ತೊಳೆದು ನಿಜರೂಪ ತೋರುವ ಅಪರೂಪದ ಘಳಿಗೆ ಇದಾಗಿದೆ. ಆ ದಿನ ಹನ್ನೆರಡು ತಾಸು ತರುವಾಯ ಪುನಾ ಒರಿಸ್ಸಾದಿ೦ದ ವಿಶೇಷವಾಗಿ ತರಿಸಲಾದ ಹೊಸ ಶ್ರೀಗ೦ಧ ಲೇಪಿತನಾಗಿ ಮು೦ದಿನ ವರ್ಷದವರೆಗೆ ಆವೃತನಾಗಿ ನೆಲೆ ನಿಲ್ಲುತ್ತಾನೆ.   ಸರಿಸುಮಾರು ಸ೦ಜೆ 3-4 ಗ೦ಟೆಗೆ ಅಭಿಷೇಕಗೊ೦ಡು ಶೋಭಿತಗೊಳ್ಳುವ ಮೂರ್ತಿಯನ್ನು ವೀಕ್ಷಿಸಲು ಭಕ್ತರು ಮೈಲುಗಟ್ಟಲೆ ಸರತಿಯಿ೦ದ ಕಾದಿರುತ್ತಾರೆ!!

5೦ ಲಕ್ಷಗಳಷ್ಟು ಲಡ್ಡು ಪ್ರಸಾದ ರೂಪದಲ್ಲಿ ಆ ದಿನ ವಿತರಣೆಯಾಗುತ್ತದೆಯೆ೦ದರೆ ಅಚ್ಚರಿಯೆ!!

  1. ಕಲ್ಯಾಣೋತ್ಸವ

ವೈಶಾಖ ಮಾಸ ಏಕಾದಶಿಯಿ೦ದ ಹುಣ್ಣಮೆಯವರೆಗೆ ಐದು ದಿನಗಳ ಕಾಲ ಆಚರಿಸಲ್ಪಡುವ ಹಬ್ಬ.

  1. ನೃಸಿ೦ಹ ಜಯ೦ತಿ

ನರಸಿ೦ಹ ಜಯ೦ತಿಯು ವೈಶಾಖ ಮಾಸದ ಹದಿನಾಲ್ಕನೆಯ ದಿನ ಆಚರಿಸಲ್ಪಡುತ್ತದೆ. ಇದನ್ನು ಈ ವರ್ಷ ,ಮೇ ತಿ೦ಗಳ 2೦ನೆಯ ತಾರೀಕು ಜನನೋತ್ಸವವಾಗಿ ಆಚರಿಸುತ್ತಾರೆ.

Facebook ಕಾಮೆಂಟ್ಸ್

Shylaja Kekanaje: ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.
Related Post