X

ಸಂಬಂಧವೊಂದರ ದುರಂತ ಕಥೆ – 3

ಸಂಬಂಧವೊಂದರ ದುರಂತ ಕಥೆ – 1  

ಸಂಬಂಧವೊಂದರ ದುರಂತ ಕಥೆ – 2

ಮಾತೆಯೊಂದಿಗಿನ ಜೀವನ:

ಅನ್ನಪೂರ್ಣ ದೇವಿಯವರ ಸುರಬಹಾರ್ ವಾದನವನ್ನು ಹೊರಗಿನವರು ಕೇಳಿ ೬೦ ಕ್ಕೂ ಹೆಚ್ಚಿನ ವರ್ಷಗಳೇ ಸಂದಿವೆ. ಯಾರಾದರೂ ಅವರನ್ನು ವಿನಂತಿಸಿಕೊಂಡರೆ ಅವರು ಸರಳವಾಗಿ “ನನಗೇನೂ ನುಡಿಸಲು ಬರುವುದಿಲ್ಲ” ಎಂದಷ್ಟೇ ಹೇಳಿ ಮನವಿಯನ್ನು ತಳ್ಳಿಹಾಕುತ್ತಾರೆ. ಅವರ ಹತ್ತಿರದ ಶಿಷ್ಯಂದರಿಗೂ ಅವರು ಹಾಡುಗಾರಿಕೆಯ ಮೂಲಕವೇ ಕಲಿಸುವುದು ವರ್ಷಗಳ ಹಿಂದೆ ಅಣ್ಣನನ್ನು ತಿದ್ದಿದಂತೆ. ತಡರಾತ್ರಿ ಏಕಾಂತದಲ್ಲಿ ಪ್ರಾರಂಭವಾಗುವ ಅವರ ಸ್ವಂತದ ರಿಯಾಜ್ ಬೆಳಗಿನ ಜಾವದವರೆಗೂ ಮುಂದುವರೆಯುತ್ತದೆ. ಅವರ ಶಿಷ್ಯಂದಿರು ಪ್ರಮಾಣಿಸಿ ಹೇಳುವುದೇನೆಂದರೆ ದೇವಿಯವರ ರಿಯಾಜ್’ನ ಬಳಿಕ ಬೆಳಗ್ಗೆ ಮನೆ ತುಂಬ ಗಂಧದ ಸುವಾಸನೆ ಹರಡಿರುತ್ತದೆಯಂತೆ! ಖಾಸಗಿ ಬರಹದಲ್ಲಿ ಅವರು ಇದರ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದರು. “ಕೆಲವು ಸಲ ತಡರಾತ್ರಿ ರಿಯಾಜ್ ಮಾಡುವಾಗ ನಾನು ಸುವಾಸನೆಯುಳ್ಳ ವಿವಿಧ ಹೂವುಗಳಿಂದ ಸುತ್ತುವರೆದಂತೆ ಭಾಸವಾಗುತ್ತಿತ್ತು. ಬಾಬಾ ಇದನ್ನು ನನಗೆ ಮೊದಲೇ ತಿಳಿಸಿದ್ದರು. “ಆ ತರಹದ ಘಟನೆಗಳು  ಮಾ ಶಾರದೆಯು ತನ್ನ ಸನ್ನಿಧಿಯ ಇರುವಿಕೆಯನ್ನು ತಿಳಿಸಲು ಸೃಷ್ಟಿಸುತ್ತಾಳೆ. ಅಂತಹ ಸಂದರ್ಭದಲ್ಲಿ ನೀನು ಇನ್ನಷ್ಟು ವಿಧೇಯದಿಂದ ನಿನ್ನನ್ನು ಸಂಗೀತಕ್ಕೆ ಅರ್ಪಿಸಕೊಳ್ಳಬೇಕೇ ಹೊರತು ಜಂಭದಿಂದ ಬೀಗಬಾರದು!”

ಇನ್ನುಳಿದಂತೆ ದೇವಿಯವರ ದಿನ ಯಾವುದೇ ಸಾಮಾನ್ಯ ಮಹಿಳೆಯ ದಿನಚರಿಯ ತರವೇ. ಸರೋದ್ ವಾದಕ ಸುರೇಶ್ ವ್ಯಾಸರು ಹೇಳುತ್ತಾರೆ. “ದೇವಿಯವರು ಬೆಳಿಗ್ಗೆ ಆರು ಗಂಟೆಗೆ ಏಳುತ್ತಾರೆ. ಸಾಮಾನ್ಯ ಗೃಹಿಣಿಯ ತರಹ ಹಾಲನ್ನು ಸಂಗ್ರಹಿಸುತ್ತಾರೆ.ನಂತರ ಮನೆಯನ್ನು ಸ್ವಚ್ಛಗೊಳಿಸಿ ಅಡುಗೆ ಮಾಡಿ ಬಟ್ಟೆಯನ್ನು ತೊಳೆದುಕೊಳ್ಳುತ್ತಾರೆ. ಅವರ ಮನೆಯಲ್ಲಿ ಯಾವುದೇ ಕೆಲಸಗಾರರಿಲ್ಲ. ಬಾಬಾ ಕಲಿಸಿದ ಪಾಠವದು.’ಯಾವುದೇ ಸಂದರ್ಭದಲ್ಲಿಯೂ ಸಹ ಬೇರೆಯವರು ನಮ್ಮ ಬಟ್ಟೆಗಳನ್ನು ತೊಳೆಯಲು ಬಿಡಬಾರದು’ ಎಂಬುದು ಅವರ ನಿಲುವಾಗಿತ್ತು. ಈಗಲೂ ಸಹ ದೇವಿಯವರು ಅನಾರೋಗ್ಯಪೀಡಿತರಾಗಿದ್ದರೂ ಸಹ ಬೇರೆಯವರಿಗೆ ತಮ್ಮ ಬಟ್ಟೆಯನ್ನು ತೊಳೆಯಲು ಬಿಡುವುದಿಲ್ಲ. ಇನ್ನು ಅಡುಗೆಯ ವಿಷಯಕ್ಕೆ ಬಂದರೆ, ಅವರು ರುಚಿಕಟ್ಟಾದ ತಿಂಡಿ ತಿನಿಸುಗಳನ್ನು ಮಾಡುವುದರಲ್ಲಿ ಸಂಗೀತದ ವಿಷಯದಂತೆಯೇ ಸಿದ್ಧಹಸ್ತರು. ಅವರ ಮನೆಯನ್ನು ಪ್ರವೇಶಿಸಿದ ಅತಿಥಿಗಳ್ಯಾರೂ ದೇವಿಯವರ ಕೈರುಚಿಯನ್ನು ಸವಿಯದೆ ಮನೆಯಿಂದ ಹೊರಬೀಳುವ ಪ್ರಶ್ನೆಯೇ ಇಲ್ಲ.”

ಅವರ ಬಗ್ಗೆ ತಿಳಿದವರಿಗೆ ಅವರಿಗೆ ಪಾರಿವಾಳದ ಬಗೆಗಿರುವ ಪ್ರೀತಿಯ ಬಗ್ಗೆ ತಿಳಿದಿರುತ್ತದೆ. ಬಾಬಾನ ತರಹ ಅವರೂ ಪಾರಿವಾಳಗಳನ್ನು ಹಚ್ಚಿಕೊಂಡಿದ್ದಾರೆ. ಸುರೇಶ್ ವ್ಯಾಸರು ಹೇಳುತ್ತಾರೆ “ಅವರ ವಿರಾಮದ ವೇಳೆಯಲ್ಲಿ ಅನ್ನಪೂರ್ಣ ದೇವಿಯವರು ಚಲನಚಿತ್ರ ಗೀತೆಗಳನ್ನು ಕೇಳುತ್ತಾರೆ.ಅವರು ಈಗಿನ ಕಾಲದ ಸಂಗೀತವೂ ಸೇರಿದಂತೆ ಎಲ್ಲ ತರಹದ ಸಂಗೀತಗಳತ್ತ ಗಮನ ಹರಿಸುತ್ತಾರೆ. ಎ ಆರ್ ರೆಹಮಾನ್’ರವರ ರೋಜಾ ಆಲ್ಬಮ್’ನ್ನು ಅವರು ಮೆಚ್ಚಿಕೊಂಡಿದ್ದರು ಎಂದು ಅವರ ಶಿಷ್ಯಂದಿರು ನೆನೆಯುತ್ತಾರೆ. ಸದ್ಯ ಕೇಬಲ್ ಟಿವಿಯೊಂದು ಸೇರ್ಪಡೆಯಾಗಿದೆ. ಅವರ ವಿದ್ಯಾರ್ಥಿಗಳು ಅವರನ್ನು ಸದಾ ಬ್ಯುಸಿಯಾಗಿಡುತ್ತಾರೆ. ವಯಸ್ಸಾಗುತ್ತಿರುವುದರಿಂದ ಹೊಸ ವಿದ್ಯಾರ್ಥಿಗಳನ್ನು ಅವರು ತೆಗೆದುಕೊಳ್ಳುತ್ತಿಲ್ಲ. ಋಷಿಕುಮಾರ ಪಾಂಡ್ಯರವರು ಹೇಳುತ್ತಾರೆ “ಅವರು ಏಕಾಂಗಿಯಾಗಿರಲು ಬಯಸುತ್ತಾರೆ ಎನ್ನುವುದು ಅರ್ಧ ಸತ್ಯವಷ್ಟೇ. ಸಮಾಜದಲ್ಲಿ ಸದಾ ಹೊಸ ಜನರನ್ನು ಭೇಟಿಯಾಗುವುದಿಲ್ಲವೆನ್ನುವುದು ಏನೋ ನಿಜ. ಆದರೆ ಸಂಗೀತದ ವಿಷಯಕ್ಕೆ ಬಂದರೆ ಅವರು ಸದಾ ಕಾರ್ಯನಿರತರು.ತಮ್ಮ ಶಿಷ್ಯಂದಿರ ಪ್ರಗತಿಯನ್ನು ಸದಾ ವಿಚಾರಿಸುತ್ತಿರುತ್ತಾರೆ. ಸಂಗೀತ ಕಲಿಸುವುದರಲ್ಲೇ ಅವರ  ಹೆಚ್ಚಿನ ಸಮಯ ಕಳೆದುಹೋಗುತ್ತದೆ. ಇನ್ನುಳಿದಂತೆ ಪೂಜೆ, ಅಡುಗೆ, ಸ್ವಂತ ರಿಯಾಜ್, ಉಳಿದ ಮನೆಕೆಲಸಗಳಲ್ಲಿ ಅವರ ದಿನ ಮುಗಿದುಹೋಗುತ್ತದೆ. ಆದ್ದರಿಂದ ಅವರಿಗೆ ಐಷಾರಾಮವಾಗಿ ವಿರಾಮದಲ್ಲಿ ಹೊರಗಿನ ಸಮಾಜದಲ್ಲಿ ತಿರುಗಾಡುವುದು ಸಾಧ್ಯವಿಲ್ಲ. ಹಾಗೂ ಅವರು ಆ ತರಹದ ಜೀವನಶೈಲಿಯಲ್ಲಿಯೇ ಆರಾಮದಾಯಕ ಮತ್ತು ಸಂತೃಪ್ತಿಯ ಬದುಕನ್ನು ಸಾಗಿಸುತ್ತಿದ್ದಾರೆ “

ಅನ್ನಪೂರ್ಣ ದೇವಿಯವರ ‘ಪಾರಿವಾಳ ಪ್ರೀತಿ’ಯ ಬಗ್ಗೆಯೂ ಮಾತುಗಳು ಹರಿದಾಡುತ್ತವೆ. ಅದರ ಬಗ್ಗೆ ಕೇಳಿದಾಗ ಸುರೇಶ್ ವ್ಯಾಸರು “ಹೌದು,ನಿಜ” ಎಂದು ಹೇಳುತ್ತಾರೆ. “ನಾನು ಒಂದೆರಡು ಸಲ ಅಲ್ಲಿಗೆ ಹೋದಾಗ ಮಾತೆಯವರು ಬಾಲ್ಕನಿಯಲ್ಲಿ ನಿಂತು ಪಾರಿವಾಳಗಳಿಗೆ ತಿನ್ನಿಸುತ್ತಿದ್ದರು. ಸುಮ್ಮನೆ ಹೇಳುತ್ತಿಲ್ಲ ಕೇಳಿ, ಅವರಿಗೆ ಪ್ರತಿ ಪಾರಿವಾಳದ ಗುರುತೂ ಚೆನ್ನಾಗಿ ನೆನಪಿರುತ್ತಿತ್ತು. ‘ಹಾ ಇಲ್ಲಿ ನೋಡು,ಇಂವ ಭಾರೀ ತುಂಟ. ನಾನೇ ತಿನ್ನಿಸಬೇಕು ಇವನಿಗೆ’ ಎಂದು ಒಂದು ಪಾರಿವಾಳವನ್ನು ತೋರಿಸಿ ಹೇಳುತ್ತಿದ್ದರು. ಅವರ ಕುಟುಂಬಕ್ಕೆ ಈಗಷ್ಟೇ ಒಬ್ಬ ಹೊಸ ಅತಿಥಿಯ ಆಗಮನವಾಗಿದೆ. ಅದು ಒಂದು ಕಾಗೆ. ನಿತ್ಯ ಮಧ್ಯಾಹ್ನ ಅಡುಗೆಮನೆಯ ಕಿಟಕಿಯ ಬಳಿ ಬರುತ್ತದೆ. ಸ್ವತಃ ಮಾತೆಯವರು ತಮ್ಮ ಕೈಗಳಿಂದ ತಿನ್ನಿಸಿದರೆ ಮಾತ್ರ ಅದು ತಿನ್ನುವುದು.ಇಲ್ಲವೆಂದರೆ ಹಾರಿಹೋಗುತ್ತದೆ. ಅದಕ್ಕೆ ಮಲಾಯಿ ಇಷ್ಟವೆಂದು ಮಾತೆಯವರು ಮಲಾಯಿಯನ್ನು ಉಳಿಸಿ ಅದಕ್ಕೆ ನೀಡುತ್ತಾರೆ.”

ಇನ್ನು ಅವರ ಪ್ರೀತಿಯ ನಾಯಿ ಮುನ್ನಾ ಬಗ್ಗೆ ಅವರಿಗಿದ್ದ ಪ್ರೀತಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.ಬಹುಶಃ ಮುನ್ನಾ ಜಗತ್ತಿನ ‘ಪ್ರಪ್ರಥಮ ಶ್ವಾನ ಸಂಗೀತ ರಸಿಕ’ನಾಗಿದ್ದಿರಬೇಕು! ಮುನ್ನಾ ಅನ್ನಪೂರ್ಣ ದೇವಿಯವರ ಅತ್ಯಂತ ಕಷ್ಟದ ದಿನಗಳಲ್ಲಿ ಮಾನಸಿಕವಾಗಿ ಅವರಿಗೆ ಸಾಕಷ್ಟು ನೆರವಾಗಿದ್ದ. ದೇವಿಯವರ ಕೆಲವು ಶಿಷ್ಯಂದಿರಲ್ಲಿ, ನಿಖಿಲ್ ಬ್ಯಾನರ್ಜಿ, ಶುಭೋ ಅಥವಾ ಹರಿಪ್ರಸಾದ್  ಚೌರಾಸಿಯ ಯಾರಾದರೂ ಅತ್ಯುತ್ತಮವಾಗಿ ನುಡಿಸಿದರೆ ಅವರ ವಾದನ ಮುಗಿಯುವ ತನಕವೂ ಸುಮ್ಮನಿದ್ದು ನಂತರ ವಾದನ ಮುಗಿದ ಕೂಡಲೇ ಪ್ರೀತಿಯಿಂದ ಓಡಿ ಅವರ ತೊಡೆಯೇರಿ ಕುಳಿತು ಕೊಳ್ಳುತ್ತಿದ್ದನಂತೆ! “ಹಾಗಿದ್ದರೆ ಅವರು ಏಕಾಂಗಿಯಾಗಿಲ್ಲವಷ್ಟೆ?” ಎಂದು ನಾನು ಕೇಳಿದೆ. “ಖಂಡಿತವಾಗಿಯೂ ಇಲ್ಲ. ಅವರು ಈಗಿರುವ ಜೀವನಶೈಲಿಯಲ್ಲಿಯೇ ಅತ್ಯಂತ ಸಂತೃಪ್ತರಾಗಿದ್ದಾರೆ” ಎಂದು ವ್ಯಾಸರು ಹೇಳುತ್ತಾರೆ.. “ಆದರೆ ಅವರಿಗೆ ಬೇರೆಯದ್ದೇ ಆದ ದುಃಖವಿದೆ” ಎಂದು ಸೇರಿಸುತ್ತಾರೆ. “ಕುಸಿಯುತ್ತ ಸಾಗಿರುವ ಇಂದಿನ ಸಂಗೀತ ಕ್ಷೇತ್ರದ ಮೌಲ್ಯಗಳ ಬಗ್ಗೆ ಅವರಿಗೆ ಅತೀವವಾದ ನೋವಿದೆ. ಕ್ಷಣಿಕ  ಜನಪ್ರಿಯತೆ ಹಾಗೂ ದುಡ್ಡಿನ ಆಸೆಯ ಹಿಂದೆ ಬಿದ್ದು ಪ್ರತಿಭಾವಂತ ಯುವ ಸಂಗೀತಗಾರರು ತಮ್ಮ ಸಂಗೀತವನ್ನು ಹಾಳು ಮಾಡಿಕೊಳ್ಳುತ್ತಿರುವುದರ ಬಗ್ಗೆ ಅವರಿಗೆ ಆಳವಾದ ಖೇದವಿದೆ. ನೀವು ಅವರನ್ನು ಈ ತರಹ ನೋಡಿ. ನಾವೆಲ್ಲ ಶಿಷ್ಯಂದಿರು ಅವರಿಗೆ ಸಾಕಷ್ಟು ಹತ್ತಿರವಿರುವ ಕಾರಣ ಅವರನ್ನು ಮನುಷ್ಯ ಸಹಜ ದೌರ್ಬಲ್ಯಗಳಿಂದ ಅಳೆಯುತ್ತೇವೆ. ಆದರೆ ಸ್ವಲ್ಪ ವಿಶಾಲವಾದ ಮನಸ್ಸಿನಿಂದ ದೇವಿಯವರನ್ನು ನೋಡಿ “ಮಾತೆಯವರು ಜನಿಸಿದಾಗ ಸಂಗೀತಗಾರರು ರಾಜಾಶ್ರಯದಲ್ಲಿ ಜೀವನ ನಡೆಸುತ್ತಿದ್ದರು. ಅವರ ಸಂಗೀತವೇನಿದ್ದರೂ ಒಬ್ಬ ವ್ಯಕ್ತಿಯನ್ನು ಸಂತೃಪ್ತಿಗೊಳಿಸಲಾಗಿತ್ತು. ಆದರೆ ಇಂದು ಸಂಗೀತದ ವ್ಯಾಖ್ಯಾನ ಬದಲಾಗಿದೆ. ಜನರ ಗುಂಪುಗಳು ಸಂಗೀತವನ್ನು ಆಲಿಸುತ್ತವೆ. ಜನರನ್ನು ರಂಜಿಸುವ ಭರದಲ್ಲಿ ಸಂಗೀತಗಾರರು ಶುದ್ಧತೆಯನ್ನು ಮರೆಯುತ್ತಿದ್ದಾರೆ. ಅಗ್ಗದ ತಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಅನ್ನಪೂರ್ಣ ದೇವಿಯವರು ಜನರಿಗೋಸ್ಕರ ಎಂದೂ ತಮ್ಮ ಸಂಗೀತವನ್ನು ಬಲಿಕೊಡಲಿಲ್ಲ. ಅವರ ತಂದೆ ಅವರಿಗೆ ಕಲಿಸಿದ ಹಾಗೆ, ತಮ್ಮ ಶಿಷ್ಯಂದರಿಗೂ ಶ್ರದ್ಧೆಯಿಂದ ಶುದ್ಧ ಸಂಗೀತವನ್ನು ಕಲಿಸಿದರು. ಅವರ ತಂದೆಯೂ ಅವರಿಗೆ ಅವರ ಪೂರ್ವಜರು ಬಳುವಳಿಯಾಗಿ ನೀಡಿದ್ದ ಸಂಗೀತವೂ ಸೇರಿದಂತೆ ತಮ್ಮೆಲ್ಲ ಜ್ಞಾನವನ್ನೂ ನಿರ್ವಂಚನೆಯಿಂದ ಧಾರೆಯೆರೆದರು. ಮಾತೆಯವರು ಆ ಸಂಪ್ರದಾಯದ ಕೊನೆಯ ಕೊಂಡಿ. ಅವರನ್ನು ಬಿಟ್ಟರೆ ಈ ಆಸ್ತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವವರು ಬೇರೆ ಯಾರೂ ಇಲ್ಲ.”

ಹಿನ್ನುಡಿ:

ನಾನು ಕೊನೆಗೂ ಅವರನ್ನು ಭೇಟಿಯಾಗಲಿಲ್ಲ. ಒಂದುವೇಳೆ ಭೇಟಿಯಾಗಿದ್ದರೂ ಏನನ್ನು ವಿವರಿಸಬಹುದಾಗಿತ್ತು? ಅವರ ಸೀರೆಯ ಬಣ್ಣವನ್ನೇ? ಅವರ ಧ್ವನಿಯ ಶಬ್ಧವನ್ನೇ? ಅಥವಾ ಅವರ ಮೈಬಣ್ಣವನ್ನೇ? ಅಂತಹ ಕ್ಷುಲ್ಲಕ ವಿವರಗಳಿಂದ ನಾನು ಏನನ್ನು ತಾನೇ ಅರ್ಥ ಮಾಡಿಕೊಳ್ಳಬಹುದಾಗಿತ್ತು? ಅವರು ನನ್ನ ಪ್ರಶ್ನೆಗಳಿಗೆಲ್ಲ ಒಂದು ಪೇಪರ್’ನ ಹಾಳೆಯ ಮೇಲೆ ಉತ್ತರಿಸಿದರು. ಹಾಗೂ ಅವರ ಕೆಲವೇ ಕೆಲವು ಆತ್ಮೀಯರು ಹಾಗೂ ಶಿಷ್ಯಂದಿರಿಂದ ನಾನು ಜಗತ್ತು ಕಂಡ ಆದರೆ ನೀವ್ಯಾರೂ ಕೇಳದ ಅತಿ ಶ್ರೇಷ್ಠ ಸುರಬಹಾರ್ ವಾದಕಿಯ ಕಥೆಯನ್ನು ಕಟ್ಟಿ ಕೊಟ್ಟೆ. ಲಭ್ಯವಿರುವ ಕೆಲವು ಹಳೆಯ ಛಾಯಾ ಚಿತ್ರಗಳನ್ನು ಬಿಟ್ಟರೆ ಅವರ ಬೇರಾವುದೇ ನೆನಪಿನಲ್ಲುಳಿಯುವ ದೃಶ್ಯ ನನ್ನ ದೃಷ್ಟಿಯಲ್ಲಿಲ್ಲ. ಆದರೆ ಸ್ವತಃ ನಾನೇ ನೋಡಿದೆ ಎಂಬ ಅನುಭವ ನೀಡುವ ನನ್ನ ಕಲ್ಪನೆಯಲ್ಲಿರುವ ದೃಶ್ಯವೇನೆಂದರೆ ಅದು ಅನ್ನಪೂರ್ಣ ದೇವಿಯವರು ಬಿಸಿಲು ತುಂಬಿದ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಪಾರಿವಾಳಗಳಿಗೆ ಆಹಾರ ತಿನ್ನಿಸುತ್ತಿರುವ ದೃಶ್ಯ. ಯಾಕೆಂದ್ರೆ ಅವರು ಆಯ್ದುಕೊಳ್ಳದ ಜೀವನ ಸ್ವಾತಂತ್ರ್ಯ ಆ ಪಕ್ಷಿಗಳಿಗೆ ಇರುವುದಕ್ಕೋ ಏನೋ! ಇಲ್ಲಾಂದರೆ, ಹೆಚ್ಚಾಗಿ ಅವರ ತಂದೆ ಹಾಗೇ ಮಾಡುತ್ತಿದ್ದಿದ್ದಕ್ಕೆ, ತನ್ನ ತಂದೆ ಹಾಗೂ ಗುರುವಿಗೆ ಅವರು ನಿತ್ಯ ಸಲ್ಲಿಸಲು ಬಯಸುವ ನಮನಗಳಿಗೋ ಏನೋ ಅವರು ಪ್ರತಿ ಸಲವೂ ಆ ಮುಗ್ಧ ಜೀವಿಗಳಿಗೆ ಅಕ್ಕರೆಯಿಂದ ತಿನ್ನಿಸಿ ಪ್ರೀತಿಯಿಂದ ಮೈಸವರಿ ಮತ್ತೆ ಅದೇ ನೀಲಾಕಾಶಕ್ಕೆ ಬಿಟ್ಟುಬಿಡುವುದು!

ಅವರ ಪ್ರೀತಿಯ ಬಾಬಾ ತಮ್ಮ ಕೊನೆ ದಿನಗಳಲ್ಲಿ ಹೇಳುತ್ತಿದ್ದ ಹಾಗೆ “ಪಾರಿವಾಳ ಹಾರಿದಾಗ ಅದರ ರೆಕ್ಕೆಯನ್ನು ಗಮನಿಸು. ಅದು ಒಂದು ನಿರ್ದಿಷ್ಟ ತಾಳದಲ್ಲಿ ರಪಗುಟ್ಟುತ್ತದೆ. ನೀನು ನನ್ನನ್ನು ನಂಬುವುದಿಲ್ಲವಾದರೆ ಬೇಕಾದರೆ ಗಮನಿಸು, ನೀನು ತಾಳದ ಮಾತ್ರೆಗಳನ್ನೂ ಎಣಿಸಬಹುದು.ಆಹ್, ಆ ಧ್ವನಿಯನ್ನು ಕೇಳು, ಎಷ್ಟೊಂದು ಮಧುರ.. ಆ ದೇವರು ತಾನು ಸೃಷ್ಟಿಸಿದ ಜೀವಿಗಳಲ್ಲಿ ಎಷ್ಟೊಂದು ಸೌಂದರ್ಯವನ್ನು ತುಂಬಿದ್ದಾನೆ..ಮನುಷ್ಯ ಅದರಿಂದ ಎಷ್ಟು ಬೇಕಾದರೂ ಬಗೆದು ತೆಗೆದುಕೊಳ್ಳಬಹುದು. ಆದರೂ ಆ ಸೌಂದರ್ಯ ಎಂದಿಗೂ ಬರಿದಾಗಲಾರದು.. ದೇವಿ ಸರಸ್ವತಿ ನನಗೆ ನೀಡಿದ್ದೂ ಸ್ವಲ್ಪವೇ..ಆದರೆ ನನಗೆ ಅದು ಎಂದಿಗೂ ಸಾಕು ಅನ್ನಿಸಲಿಲ್ಲ. ಸಂಗೀತವೆಂಬ ಮಹಾಸಾಗರದಿಂದ ನಾನು ಆಗಷ್ಟೇ ಸ್ವಲ್ಪ ಸೌಂದರ್ಯವನ್ನು ಬಾಚಲು ಪ್ರಾರಂಭಿಸಿದ್ದೆನೋ ಏನೋ, ಅಲ್ಲಿಗೆ ನನ್ನ ಸಮಯ ಆಗಿಬಿಟ್ಟಿತ್ತು!ಇದೇ ದೊಡ್ಡ ತೊಂದರೆ ನೋಡು. ನಿನ್ನ ಜೀವನದ ಹೋರಾಟ ಉತ್ಸಾಹಗಳೆಲ್ಲ ಆಗಷ್ಟೇ ಫಲ ಬಿಡುತ್ತಿರಲು ನಿನ್ನ ಸಮಯವಾಗಿರುತ್ತದೆ. ದೇವರ ಲೀಲೆಯನ್ನು ಅರ್ಥ ಮಾಡಿಕೊಳ್ಳುವವರಾದರೂ ಯಾರು? ಆದರೆ ಒಂದು ಸಂಗತಿಯನ್ನು ಮಾತ್ರ ನಾನು ಸ್ವಲ್ಪವಾದರೂ ತಿಳಿದುಕೊಂಡಿದ್ದೇನೆ. ಅದೇನೆಂದರೆ,ನಮ್ಮ ಬಳಿ ಒಂದು ಸೀತಾಫಲ ಹಣ್ಣಿದೆ ಎಂದಿಟ್ಟಿಕೊ. ನನಗೆ ಅದನ್ನು ಕಂಡರೆ ತುಂಬಾ ಇಷ್ಟ. ನಾನು ಅದನ್ನು ತಿಂದು ಅದರ ಬೀಜಗಳನ್ನು ಕಿಟಕಿಯಿಂದ ಹೊರಗೆಸೆಯುತ್ತೇನೆ. ಒಂದು ದಿನ ಹೊರಗೆ ನೋಡುತ್ತೇನೆ, ಅಲ್ಲೊಂದು ಸೀತಾಫಲದ ಗಿಡ ಬೆಳೆದಿರುತ್ತದೆ. ಹೊಸದಾದ ಹಾಗೂ ರುಚಿಯಾದ ಹಣ್ಣುಗಳನ್ನು ತನ್ನ ಕೊಂಬೆಗಳ ಮೇಲೆ ಹೊತ್ತು ನಿಂತಿರುತ್ತದೆ. ನಾನು ಅದನ್ನು ಖುಷಿಯಿಂದ ತಿನ್ನುತ್ತೇನೆ. ಉಳಿದವರೂ ಅದನ್ನು ತಿಂದು ಸಂತೋಷಪಡುತ್ತಾರೆ. ಸಂಗೀತವೂ ಹಾಗೇ. ಅದು ಯಾರೊಬ್ಬರ ಸೊತ್ತೂ ಅಲ್ಲ. ಅದು ಎಲ್ಲರಿಗೂ ಸೇರಿದ್ದು”

2000 ನೇ ಇಸವಿ, ಸೆಪ್ಟೆಂಬರ್ ತಿಂಗಳ “Man’s world “ ಸಂಚಿಕೆಯಿಂದ

ಲೇಖಕರು: ಆಲೀಫ್

ಕನ್ನಡಕ್ಕೆ: ಸಂದೀಪ್ ಹೆಗಡೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post