X

ಆತ್ಮ ಸಂವೇದನಾ. ಅಧ್ಯಾಯ 31

ಆತ್ಮ ಸಂವೇದನಾ. ಅಧ್ಯಾಯ 30

“ವಿಶಿ” ವಿಶಿ”ಅತ್ಯಂತ ಮಧುರವಾದ ದನಿಯೊಂದು ಉಲಿಯಿತು. ವಿಶ್ವಾತ್ಮ ಆಳವಾದ ದಿವ್ಯ ಮೌನದ ನೆಲೆಯಲ್ಲಿ ಸೆರೆಯಾಗಿದ್ದ. ಏಕೆ? ಏನು? ಏನೊಂದೂ ಅರ್ಥವಾಗದ ಗೊಂದಲದ ಗೂಡೊಳಗಿನ ಮರಿಗುಬ್ಬಿಯಂಥದೇ  ಸುಪ್ತತೆ; ಸ್ವಚ್ಛ ನಿರ್ಲಿಪ್ತತೆ.
ವಿಶ್ವಾತ್ಮನಿಗೆ ನೂರೆಂಟು ಆಲೋಚನೆಗಳು. ಅರ್ಥವಿಲ್ಲದ ಪ್ರಶ್ನೆಗಳು ಉದ್ಭವಿಸಿ ಆ ಸ್ಥಿತಿ ತಲುಪಿದ್ದ. ಅರೆ ಪ್ರಜ್ಞಾವಂತ ಸ್ಥಿತಿ. ಏನನ್ನೂ ಮಾಡಲಾಗದ ಭಾವ. ಮಾಡುವುದಾದರೂ ಏಕೆ ಎಂಬ ಅನಿಸಿಕೆಗಳು. ಮನಸ್ಸು ಏನಾಗಿರುತ್ತದೋ ಅದಾಗಿರದ ಸ್ಥಿತಿ.
ವಿಶ್ವಾತ್ಮನೂ ಅಂತಹ ಮಹಾಮೌನ ಮೀರಿದ್ದ. ಭೂಮಿಯ ಮೇಲೆ ನಡೆಯುತ್ತಿರುವ ಪ್ರತಿಯೊಂದೂ ಆತನಿಗೆ ತಿಳಿಯುತ್ತಿದೆ. ಆದರೂ ಏನು ಮಾಡಬೇಕೆಂದು ಅರಿವಾಗುತ್ತಿಲ್ಲ. ಮನಸ್ಸಿಗೆ ಬೇಲಿ ಹಾಕಿದಂತೆ, ತೆರೆದ ಕದವ ಕಣ್ಮುಂದೆಯೇ ಮುಚ್ಚಿದಂತೆ. ಮುಂದೆ ಹೆಜ್ಜೆ ಕಿತ್ತಿಡಲೂ ಸಾಧ್ಯವಿಲ್ಲದಂತೆ.
“ವಿಶಿ” “ವಿಶಿ” ಮತ್ತೆ ಕೇಳಿತು ಮೃದು ಮಧುರ ಧ್ವನಿ. ತಟ್ಟನೆ ಎದ್ದು ಕುಳಿತ ವಿಶ್ವಾತ್ಮ. ಆ ಧ್ವನಿಯನ್ನು ಆತ   ಮರೆಯಲಾರ. ಒಮ್ಮೆ ಆ ಧ್ವನಿಯನ್ನು ಕೇಳಿದರೆ ಯಾರೂ ಮರೆಯಲು ಸಾಧ್ಯವಿಲ್ಲ, ಎಲ್ಲರೂ ಆ ಧ್ವನಿಯನ್ನು ಕೇಳಿರಲಾರರು. ಕೇಳಿದರೂ ಗುರುತಿಸುವವರೇ ಇಲ್ಲ.
ವಿಶ್ವಾತ್ಮ ತನ್ನ ಸ್ಥಿತಿಯನ್ನು ಮರೆತು ಎದ್ದು ಕುಳಿತಿದ್ದ. ಮತ್ತದೇ ಧ್ವನಿ. “ನಾನೆದುರು ನಿಂತಿದ್ದರೂ ನಿನಗಿಷ್ಟು ಆಲಸ್ಯವೇ? ಮಾತನಾಡಬಯಸುತ್ತಿಲ್ಲವೇ ನಿನ್ನ ಮನಸ್ಸು?” ಎಂದಿತು ಮುಗ್ಧವಾಗಿ. ವಿಶ್ವಾತ್ಮನಿಗೆ ಮಾತೇ ಹೊರಬರುತ್ತಿಲ್ಲ. ಅದು ಆನಂದವೋ, ದುಃಖವೋ ಅರಿವೂ ಆಗುತ್ತಿಲ್ಲ.
ವಿಶ್ವದ ಪ್ರತಿಯೊಂದು ಜೀವಿಯೂ ಯಾರ ಅಭಯಹಸ್ತದಲ್ಲಿ ಬದುಕುತ್ತಿದೆಯೋ, ಯಾವ ಅಭೂತಪೂರ್ವ ಶಕ್ತಿಯು ವಿಶ್ವದ ಎಲ್ಲ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳಿಗೆ ಚೈತನ್ಯ ತುಂಬುತ್ತಿದೆಯೋ ಆ ಮುಗ್ಧ ಧ್ವನಿ ಪಕ್ಕದಲ್ಲಿಯೇ ಕೇಳಿ ಬರುತ್ತಿತ್ತು. ವಿಶ್ವಾತ್ಮನೂ ಅದ್ಯಾವಾಗಲೋ ಒಮ್ಮೆ ಮಾತ್ರ ಆ ಧ್ವನಿಯನ್ನು ಕೇಳಿದ್ದ. ಮರೆಯುವಷ್ಟು ದಿನದ ಮೇಲೆ ಮತ್ತೆ ನೆನಪಾಯಿತು. ಅದೆಷ್ಟೋ ಕೋಟಿ ವರ್ಷಗಳ ಹಿಂದೆ ಕೇಳಿದ್ದು. ತದನಂತರದಲ್ಲಿ ವಿಶ್ವದ ಈ ಅಭೂತಚೇತನದ ಬಗ್ಗೆ ಮರೆತೇ ಬಿಟ್ಟಿದ್ದ ವಿಶ್ವಾತ್ಮ.  ನೆನಪಿಗೂ ಬಂದಿರಲಿಲ್ಲ.
ತಾನು ಸೃಷ್ಟಿಸಿದ ಪ್ರಪಂಚಕ್ಕೆ ವಿಶ್ವಾತ್ಮನಾಗಿ ಮೆರೆಯುತ್ತಿದ್ದ. ಅಭೂತಚೇತನದ ಬದುಕುವ ನೀತಿಯನ್ನು ಮರೆತಿದ್ದ. ವಿಶ್ವದಲ್ಲಿ ಎಲ್ಲವೂ ತನ್ನ ಇಚ್ಛೆಯಂತೆ ನಡೆಯಬೇಕು ಎಂದು ಬಯಸಿದ. ಹಾಗೆಯೇ ನಡೆಸುತ್ತಿದ್ದ ಕೂಡಾ.
ಆದರೆ ವಿಶ್ವ ಎಲ್ಲವನ್ನೂ ನೋಡುತ್ತದೆ. ಅದರೆದುರಲ್ಲಿ ವಿಶ್ವಾತ್ಮನೂ ಒಂದು ಜೀವಿಯಂತೆ. ಅವನಿಗೂ ಮನಸ್ಸಿದೆ ಮನುಷ್ಯನಂತೆ.. ಮರಗಳಂತೆ.. ತನ್ನ ಸೃಷ್ಟಿಯನ್ನು, ಭವ್ಯ ಬದುಕನ್ನು ನಿಯಂತ್ರಿಸುವ ರೀತಿಯನ್ನು ಹುಡುಕುತ್ತಿದ್ದ. ವಿಶ್ವಾತ್ಮನಲ್ಲೂ ಸಣ್ಣ ಸ್ವೇಚ್ಛೆ, ಸ್ವಲ್ಪ ಅಹಂಕಾರ ಬಂದಿತ್ತು. ಅದೇ ದಬ್ಬಾಳಿಕೆಗೆ ಕಾರಣ. ವರ್ಷಿಯನ್ನು ತನಗೆ ಬೇಕಾದಂತೆ ಬಳಸಿಕೊಂಡ, ಕೊನೆಗೆ ಬಿಸಾಡಿದ ಕೂಡಾ. ಅದನ್ನೆಲ್ಲ ವಿಶ್ವದ ಅಭೂತ ಚೇತನ ನೋಡುತ್ತಲೇ ಇತ್ತು; ಲೆಕ್ಕಾಚಾರಗಳು ತಾಳೆಯಾಗುತ್ತಲೇ ಇದ್ದವು.
ಇದೇ ಕಾರಣದಿಂದ ವಿಶ್ವಾತ್ಮ ಇಂದು ಈ ಪರಿಸ್ಥಿತಿಯಲ್ಲಿದ್ದ. ವಿಶ್ವದ ಬಹುದೊಡ್ಡ ಆತ್ಮ. ಬಹುದೊಡ್ಡ ವಿಶ್ವದ ಮುಕ್ತ ಆತ್ಮ. ಎಷ್ಟೋ ವಿಶ್ವಾತ್ಮಗಳ ಪಾರಿಭಾಷಿಕ ಆತ. ನಿತ್ಯನೂತನ.. ಕಲಾಸಿಂಧು..
ಅವನಿಗೊಂದು ಪರಿಧಿಯೇ ಇಲ್ಲ. ಕತ್ತಲಿರಲಿ,ಬೆಳಕಿರಲಿ, ಜೀವವಿರಲಿ, ನಿರ್ಜೀವವಿರಲಿ, ವಿಶ್ವದ ಅತಿ ದೊಡ್ಡ ಆತ್ಮ ಅಲ್ಲಿರುತ್ತದೆ; ಎಲ್ಲ ಕಡೆಯೂ ಇರುತ್ತದೆ. ಎಲ್ಲ ಕಡೆಯೂ ಇರುತ್ತದೆ. ವಿಶ್ವದ ಎಲ್ಲ ಜೀವಿಗಳ ಜೊತೆಯೂ ಓಡಾಡುತ್ತಿರುತ್ತದೆ. ಕಷ್ಟದಲ್ಲಿ, ಸುಖದಲ್ಲಿ, ಸ್ವೇಚ್ಛೆಯಲ್ಲಿ, ಸ್ವಾರ್ಥದಲ್ಲಿ ನಿಮ್ಮ ಪಾಲೆಷ್ಟು ಎಂದು ವಿಭಾಗಿಸುತ್ತ ಸಾಗುತ್ತಾನೆ. ಒಂದು ದಿನ ಅಂತ್ಯ ಹಾಡುತ್ತದೆ, ಪುನಃ ಆರಂಭದ ಮುನ್ನುಡಿ. ಅಂತಹ ದಿವ್ಯಶಕ್ತಿ ಈಗ ವಿಶ್ವಾತ್ಮನನ್ನು ಮಾತನಾಡಿಸುತ್ತಿದೆ. ಇದಕ್ಕೆ ವಿಶ್ವಾತ್ಮ ಹಿಗ್ಗಿದ್ದು.
ಇಷ್ಟು ಕ್ರೂರ ನೋವನ್ನು ತಿಳಿಯಾಗಿಸುವುದು ಇದೊಂದೇ ಆತ್ಮ. ನಗುವಿನಲೆಯ ಮೇಲೆ ತೇಲಿಸುವುದು ವಿಶ್ವದ ಅಭೂತಚೇತನ ಮಾತ್ರವೇ ಎಂದುಕೊಂಡ ವಿಶ್ವಾತ್ಮ. ಅವನಿಗೆ ತನ್ನೆಲ್ಲ ತಪ್ಪುಗಳ ಅರಿವಾಗಿದೆ.
ತಪ್ಪಿಗೆ ಪ್ರಾಯಶ್ಚಿತ ಮಾತ್ರ ಪ್ರಾಯಶ್ಚಿತವಲ್ಲ. ತಪ್ಪಿನೆಲ್ಲ ಅನಾಹುತಗಳನ್ನ್ನು ಸರಿಪಡಿಸುವುದು ಅದಕ್ಕಿಂತ ದೊಡ್ಡ ಪ್ರಾಯಶ್ಚಿತ. ಇದು ಅಭೂತಚೇತನದ ಬದುಕುವ ರೀತಿ. ಎಲ್ಲದಕ್ಕೂ ಸಿದ್ಧನಿದ್ದಾನೆ ವಿಶ್ವಾತ ಎಲ್ಲವನ್ನೂ ಅರಿತುಕೊಂಡಿದ್ದಾನೆ. ತತ್ಕಾಲಕ್ಕೆ ಈ ಯಾಂತ್ರಿಕ ಸ್ಥಿತಿಯಿಂದ ಹೊರಬರಬೇಕು ಅಷ್ಟೆ.
ವಿಶ್ವಾತ್ಮನ ಕಣ್ಣುಗಳು ನೀರಾಗಿದ್ದವು.
ಕಂಬನಿಯೊಂದು ಕಣ್ಣೆದೆಯಿಂದ ಬೇರಾಯಿತು. ಮುಗ್ಧ ಮಗು ಅಳಲು ಸಮಯವೇ ಬೇಡ. ಸಂತೈಸಿಕೊಳ್ಳುವುದೂ ಅಷ್ಟೇ ಸಮಯದಲ್ಲಿ. ವಿಶ್ವಾತ್ಮನೂ ಮಗುವಿನಂತೆಯೇ. ಆತ ದಾರಿ ತಪ್ಪಿದ್ದರೂ ಮನಸ್ಸಿನಲ್ಲಿ ಮಗುವಿನ ಎಳಸುತನವೇ.
ಆತನ ಮನಸ್ಸಿನ ಹನಿಯಷ್ಟು ಕಲ್ಮಶವೇ ಮಹಾಸಮುದ್ರದಂತೆ ಆರ್ಭಟಿಸಿತ್ತು.
ಮತ್ತೆ ಅದೇ ಶಕ್ತಿ ಮಾತನಾಡಿತು “ವಿಶಿ ಈಗ ಭೂಮಿಗೆ ನಿನ್ನ ಅವಶ್ಯಕತೆ ಅನಿವಾರ್ಯ ಎಂದೆನ್ನಿಸುತ್ತಿಲ್ಲವೇ?”
“ನಿನಗೆ ತಿಳಿಯದಿರುವುದು ಯಾವುದು?” ನಕ್ಕ ವಿಶ್ವಾತ್ಮ. ವಿಶ್ವಾತ್ಮನಿಗೆ ಏನು ಕಾಣಿಸುತ್ತಿಲ್ಲ. ದನಿ ಮಾತ್ರ ಕೇಳಿಸುತ್ತಿತ್ತು. ವಿಶ್ವಾತ್ಮನಿಗೆ ಗೊತ್ತು ವಿಶ್ವದ ಅತಿದೊಡ್ಡ ಶಕ್ತಿಯನ್ನ್ನು ನೋಡಲು ಸಾಧ್ಯವಿಲ್ಲ. ತನಗೂ ಕೂಡ ಒಂದು ದೇಹ ಸ್ಥಿತಿಯನ್ನು ಹೊಂದಬಹುದು ಆದರೆ ವಿಶ್ವದ ಅಭೂತಚೇತನ ಅಗೋಚರ, ಅನಂತ..
ವಿಶ್ವಾತ್ಮ ಆತನನ್ನು ನೋಡಬೇಕೆಂದು ಪ್ರಯತ್ನಿಸಲು ಇಲ್ಲ. ಕಣ್ಣುಮುಚ್ಚಿ ಮಾತನಾಡುತ್ತ ಕುಳಿತಿದ್ದ. ಪಕ್ಕದಲ್ಲಿ ವಿಶ್ವದ ಅತಿದೊಡ್ಡ ಶಕ್ತಿ ಇದೆ, ಜೊತೆಯಲ್ಲಿ ಮಾತನಾಡುತ್ತಿದೆ ಎಂಬುದೇ ಅವನ ಮನಸ್ಸಿಗೆ ರೋಮಾಂಚನವನ್ನು, ದೇಹಕ್ಕೆ ಶಕ್ತಿಯನ್ನೂ ನೀಡುತ್ತಿತ್ತು. ಅದನ್ನ ಗ್ರಹಿಸಿತು.
ಗ್ರಹಿಸುವುದೇಕೆ? ಅದಕ್ಕೆಲ್ಲವೂ ಸ್ಪಷ್ಟವೇ.
“ವಿಶ್ವಾತ್ಮ ನೀನು ಕೂಡ ಮೂಢನಾಗಿಬಿಟ್ಟೆಯಾ!? ನಿನ್ನತನವನ್ನು ಕಳೆದುಕೊಳ್ಳದಿರು ವಿಶಿ” ತಾಯಿಯಷ್ಟು ಕಾಳಜಿ.
“ಹೌದು ನಾನು ಕೂಡಾ ತಪ್ಪುಗಳನ್ನು ಮಾಡಿದ್ದೇನೆ. ಹಿಂದಿರುಗಿ ಬರಲಾರದಷ್ಟು ಮುಂದೆ ಸಾಗಿದ್ದೇನೆ. ಅರ್ಥವಿಲ್ಲದ ಬದುಕು ಅನರ್ಥಕ್ಕೆ ನಾಂದಿ. ನನ್ನ ಕೊನೆಯಾಗಿ ಬಿಡಲಿ. ನನಗೆ ಈ ಬದುಕು ಸಾಕು.” ಕುಸಿದು ಕುಳಿತ ವಿಶ್ವಾತ್ಮ.
ಒಂದು ಕ್ಷಣದ ಪರಿಪೂರ್ಣ ನಿಶ್ಯಬ್ಧತೆ ಆವರಿಸಿತು.
ಪರಿಪೂರ್ಣತೆ ಎಂಬುದೇ ಹಾಗೇ. ಮತ್ತೆ ಕಳೆದುಕೊಳ್ಳುವುದಾಗಲಿ, ಏನನ್ನೋ ಪಡೆದುಕೊಳ್ಳುವುದಾಗಲೀ ಸಾಧ್ಯವಿಲ್ಲದ ಸ್ಥಿತಿ. ಎರಡು ಕ್ಷಣಗಳು ಹಾಗೆಯೇ ಕಳೆದವು ಪರಿಪೂರ್ಣತೆಯ ಹಾದಿಯಲ್ಲಿ. ವಿಶ್ವದ ಶಕ್ತಿ ಮೌನವಾಗಿತ್ತು. ವಿಶ್ವಾತ್ಮ ಗ್ರಹಿಸಿದ, ಯೋಚಿಸಲು ಸೂಚನೆ ನೀಡುತ್ತದೆ ಎಂದು.
ಅತೀ ಉನ್ಮಾದದಲ್ಲಿ, ತೀವ್ರ ಗಂಭೀರತೆಯಲ್ಲಿ, ಪೂರ್ತಿ ಸುಖದಲ್ಲಿ ಮನಸ್ಸು ವಿವೇಚನಾರಹಿತವಾಗಿರುತ್ತದೆ. ಅಲ್ಲಿಗೆ..?? ಅತಿಯೆಂಬ ಕಡೆಗಳಲ್ಲಿ ವಿವೇಚನೆ ಶೂನ್ಯ. ಎರಡು ನಿಮಿಷಗಳ ಸಮನ್ವಯ ಯೋಚನೆ, ಏಕಾಗ್ರತೆ ಅದನ್ನು ಸರಿಪಡಿಸಬಲ್ಲದು. ಅದೇ ಎರಡು ನಿಮಿಷಗಳನ್ನು ಅಭೂತ ಚೇತನ ವಿಶ್ವಾತ್ಮನಿಗೆ ಕೊಡುಗೆ ನೀಡಿತ್ತು.
ಕೊಟ್ಟು ಕಸಿಯುವುದಲ್ಲ ಅದರ ನೀತಿ;
ಕಸಿದುಕೊಳ್ಳುವ ಮುನ್ನ ಕೊಡುವುದರ ನಿರ್ಧಾರವಾಗಿರುತ್ತದೆ.
ಅದೆಷ್ಟು ಮೂಢತೆ ಮನೆ ಮಾಡಿರುತ್ತದೆ ಎಂದುಕೊಂಡ ವಿಶ್ವಾತ್ಮ. ಮನಸ್ಸು ಮರಳಿ ಎದೆಯ ಕಡಲಿಗೆ.. “ನನ್ನವರನ್ನೆಲ್ಲ ಬದುಕಿಸಿಕೊಳ್ಳಬೇಕು. ಈಗ ಎಲ್ಲವೂ ಸರಿಯಾಗಿದೆ. ನಾನು ಈ ವ್ಯೂಹದಿಂದ ಹೊರಬಂದೆನೆಂದರೆ ಯುದ್ಧ ಗೆದ್ದಂತೆಯೇ.”
ಈ ಬಾರಿ ನಕ್ಕಿತು ವಿಶ್ವದ ಅಭೌತಿಕ, ಅಲೌಕಿಕ ಅಂತರಾತ್ಮ. “ಅದಕ್ಕೆಂದೇ ನನ್ನ ಹಾಜರಾತಿ. ಈಗ ನೀನು ಭೂಮಿಗೆ ಅನಿವಾರ್ಯ. ನಿನ್ನ ಪರಿಧಿಯಿಂದ ಎದ್ದೇಳು. ಇಲ್ಲದ ಮನಸ್ಸು, ಸಹಕರಿಸದ ಯೋಚನೆಗಳಲ್ಲಿ ನಾಟಕದ ಅಂಕಗಳಷ್ಟೆ ಪರದೆ ಸರಿಯಲಿ, ಕಲಾವೇದಿಕೆ ನಲಿಯಲಿ” ಉತ್ತೇಜನ ನೀಡಿತು.
ಅಭೂತ ಚೇತನ ಯಾವುದೇ ಸಹಾಯಕ್ಕೆ ಸಿದ್ಧವಾಗಿರಲಿಲ್ಲ. ವಿಶ್ವಾತ್ಮನೇ ಎಲ್ಲದರಿಂದ ಹೊರಬಂದು ಅದ್ಭುತ ಸೃಷ್ಟಿಸಲಿ ಎಂದು ಸೂಚಿಸುತ್ತಿತ್ತು.
“ಆದರೂ ಇದೇಕೆ ಹೀಗೆ ಮಾಡುತ್ತಿರುವೆ? ನಿನಗೆ ಕೆಲಸವೇ ಅಲ್ಲದ ಕೆಲಸ ಇದು. ಈ ಸಮಸ್ಯೆಯ ಸುಳಿಯಿಂದ ಹೊರತರುವುದು ಕಷ್ಟವಲ್ಲ. ಮಾಡಿದ ತಪ್ಪಿಗೆ ಶಿಕ್ಷೆಯೇ?” ನೊಂದುಕೊಂಡ ವಿಶ್ವಾತ್ಮ.
ಮತ್ತದೇ ನಗು. “ನಿನಗೆ ತಿಳಿಯದೇ ಇಲ್ಲ ವಿಶ್ವಾತ್ಮ, ನೀನು ಸೃಷ್ಟಿಸಿದ ಜೀವಿಗಳಲ್ಲಿ ಕೂಡ ಸಮಸ್ಯೆಗಳಿವೆ, ಸಂದಿಗ್ಧತೆಗಳು ಎದುರಾಗಿವೆ. ನೀನು ಮನಸ್ಸಿಟ್ಟರೆ ಮರುಕ್ಷಣದಲ್ಲಿ ಮೊದಲಿನಂತಾಗಬಹುದು. ಆದರೂ ನೀನು ಹಾಗೆ ಮಾಡಲಾರೆ!
ಅದೇ ಬದುಕುವ ನೀತಿ. ಪ್ರಬಲತೆ ಮತ್ತು ದುರ್ಬಲತೆಯ ನಡುವಿನ ವ್ಯತ್ಯಾಸ ತಿಳಿಯುವುದೇ ಅಲ್ಲಿ. ದುರ್ಬಲತೆ ಸಮಸ್ಯೆಯಲ್ಲಿ ಸಿಲುಕಿದಾಗ ಸಹಾಯ ಹಸ್ತ ಬಯಸಿಬಿಡುತ್ತದೆ. ಆದರೆ ಪ್ರಬಲತೆ ಆತ್ಮಸ್ಥೈರ್ಯದ ಜೊತೆ ಮಾಡಿಕೊಳ್ಳುತ್ತದೆ.
ದುರ್ಬಲ ಸಾವಲ್ಲಿಯೂ ಪರಾವಲಂಭಿ;
ಪ್ರಬಲ ಹುಟ್ಟಿನಿಂದಲೇ ಸ್ವಾವಲಂಭಿ.”
“ಸಮಸ್ಯೆಯಲ್ಲಿರುವಾಗ ಸಹಾಯ ಮಾಡುವುದು ತಪ್ಪೇ?” ಪ್ರಶ್ನೆಯಾದ ವಿಶ್ವಾತ್ಮ.
“ಸಹಾಯ ಮಾಡುವುದು ತಪ್ಪೆಂದಾದರೆ ನಾನೇಕೆ ನಿನ್ನ ಜೊತೆ ನಿಲ್ಲುತ್ತಿದ್ದೆ? ಸಹಾಯ, ನಿರ್ದೇಶನಗಳು ಎಲ್ಲರಿಗೂ ಬೇಕು. ಅದು ಜೀವಿಯ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು. ಧೈರ್ಯವನ್ನು ಕಂಗೆಡಿಸುವಂತಿರಬಾರದು. ಸಮಸ್ಯೆಗಳಿಂದ ಹೊರಬರಲು ಹಿಂದೆ ನಿಲ್ಲಬೇಕೆ ಹೊರತು ಸಮಸ್ಯೆಯನ್ನೇ ಪರಿಹರಿಸುವುದಲ್ಲ.
ಎಡವಿದಾಗ ತಾಯಿಯೇ ಮಗುವಿನ ಹೆಜ್ಜೆಯಾದರೆ ಮಗು ನಡೆಯುವುದೇ ಇಲ್ಲ, ಹೆಗಲ ಮೇಲೇ ಇರುತ್ತದೆ.
ಮಗು ಒಮ್ಮೆ ಎಡವಿದರೂ ಮತ್ತೆ ಎದ್ದು ನಡೆಯುತ್ತದೆ. ಅದು ಆತ್ಮಸ್ಥೈರ್ಯ. ಸೋಲು ಗೆಲುವಿನೆಡೆಗೆ ಪಯಣ. ಸೋಲೇ ಕೊನೆಯೆಂದವ ದುರ್ಬಲ.
ಬದುಕಿನ ಪ್ರತಿ ಕ್ಷಣವೂ ಪರೀಕ್ಷೆಯೇ. ಎಲ್ಲದಕ್ಕೂ ಸ್ಪಷ್ಟ ಸ್ಪಂದನೆಗಳು ಬೇಕು. ಪ್ರಯತ್ನಿಸಿ ಸೋಲುವವ ದುರ್ಬಲನಲ್ಲ; ಪ್ರಯತ್ನಿಸದೆ ಗೆದ್ದುನಿಂತೆ ಎಂದುಕೊಂಡವ ಪ್ರಬಲನಾಗಲು ಸಾಧ್ಯವೇ ಇಲ್ಲ.
ಆತ್ಮಸ್ಥೈರ್ಯಕ್ಕಿಂತ ಬೇರೆ ಶಕ್ತಿಯಿಲ್ಲ ವಿಶಿ, ನಾನು ಕೂಡ ಇದನ್ನೆಲ್ಲಾ ಸಾಧಿಸುತ್ತಿರುವುದು ಆತ್ಮಬಲದಿಂದಲೇ.”
ವಿಶ್ವದ ಮಹಾಸತ್ಯವೊಂದು ಬತ್ತಲಾಯಿತು. ವಿಶ್ವಾತ್ಮ ಎಲ್ಲವನ್ನೂ ತಿಳಿದುಕೊಂಡವನಂತೆ ತಲೆಯಾಡಿಸಿದ.
ಪೂರ್ತಿ ಅರ್ಥವಾದವನದ್ದು ಇದೇ ಪ್ರತಿಕ್ರಿಯೆ;
ಅರ್ಥವೇ ಆಗದವರದ್ದೂ ಇದಕ್ಕೆ ಹೊರತಲ್ಲ.
“ಎಲ್ಲವೂ ನಿನ್ನ ಕೈಯಲ್ಲಿಯೇ ಇದೇ. ಸಹಾಯಕ್ಕೆ ನನ್ನ ಕೈ ಕೂಡ ನಿನ್ನ ಕೈಯಲ್ಲಿಯೇ. ದುರ್ಬಲ ಅಥವಾ ಪ್ರಬಲ ನಿನ್ನ ಯೋಚನೆಗಳಿಗೆ ಸೀಮಿತ. ಆತ್ಮಬಲವಿದ್ದರೆ ಯಾವುದೂ ಸಮಸ್ಯೆಗಳೇ ಅಲ್ಲ. ಪ್ರತಿಯೊಂದೂ ಇನ್ನೊಂದರ ಪ್ರಚೋದನೆ. ಸ್ಪಷ್ಟ ಪ್ರತಿಕ್ರಿಯೆ ದೊರೆತರೆ ಇನ್ನೊಂದಕ್ಕೆ ಪ್ರಚೋದನೆ. ನಿರಂತರವಾಗಿ ನಡೆಯುತ್ತಲೇ ಇರುವ ಬದುಕಿನ ಸೂತ್ರ.
ಪ್ರತಿಯೊಂದು ಜೀವಿಯ ಜೀವನದ ಸತ್ಯ ಇದೇ.. ಇಷ್ಟೇ..!! ನಾನು ಹೇಳಿರುವುದೆಲ್ಲ ಅರ್ಥವಾಗಿದ್ದರೆ ಅಷ್ಟೆ ಬದುಕಿನ ನಿತ್ಯ ಸೂತ್ರಗಳು. ಭೂಮಿಯನ್ನು ಉಳಿಸಿಕೊಳ್ಳುವುದು ಮತ್ತು ಬಳಸಿಕೊಳ್ಳುವುದು ನಿನ್ನ ಭಾವಗಳ ಬುನಾದಿಯ ಮೇಲೆ. ”
ದನಿ ಕ್ಷೀಣವಾಗುತ್ತ ಹೋಯಿತು. ವಿಶ್ವಾತ್ಮನಿಗೆ ಗೊತ್ತು ಧ್ವನಿ ಎಲ್ಲಿ ಸಾಗಿದರೂ ಎಲ್ಲ ಕಡೆಯೂ ಇರುತ್ತದೆಯೆಂದು. ಸೂಚನೆ ಸಲಹೆ ದೊರೆತಾಯಿತು. ಇನ್ನು ಪ್ರಚೋದನೆಗಳು ಅಷ್ಟೆ, ಉತ್ಕೃಷ್ಟ ಪ್ರತಿಕ್ರಿಯೆಗಳ ನಿರೀಕ್ಷೆ.. ನನ್ನಿಂದ ಎಲ್ಲವೂ ಸಾಧ್ಯ. ನನ್ನ ಭೂಮಿಯನ್ನು, ನನ್ನ ಸೃಷ್ಟಿಯನ್ನು ಉಳಿಸಿಕೊಳ್ಳಬೇಕು. ಎದ್ದು ನಿಂತ ವಿಶ್ವಾತ್ಮ.
ಅಭೂತ ಚೇತನ ಎಲ್ಲ ಕಡೆ ಹರಡಿಕೊಂಡಿತು…
ಯಾರಿಗೂ ಕಾಣಿಸದ ಹಾಗೆ…!!!

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post