X

ಬೆಳಕು ಮಾರಾಟಕ್ಕಿದೆ…

ಮೊನ್ನೆಯಷ್ಟೇ,
ಮನೆಯ ಛಾವಣಿಯಲ್ಲಿ
ಸೋರುತ್ತಿದ್ದ ಬೆಳಕ
ಬೊಗಸೆಯಲಿ ಹಿಡಿದು
ಗೋದಾಮಿನಲಿ ತುಂಬಿಟ್ಟಿದ್ದೇನೆ..
ತಪ್ಪಿಸಿಕೊಳ್ಳಬಾರದೆಂದು
ಕಿಟಕಿ ಬಾಗಿಲುಗಳ ಮುಚ್ಚಿ
ಅಗಳಿ ಓಡಾಡದಂತೆ
ಒಂದೆರಡು ಬೀಗ ಜಡಿದಿದ್ದೇನೆ;
ಕಾಣೆಯಾಗಿದೆ ಬೀಗದ ಕೈ…

ಭೂಮಿ ಬಾನು
ದಿಗಂತದಲಿ ಸೇರುತ್ತವೆ
ಅಂದುಕೊಂಡ ತಪ್ತ ಸೂರ್ಯನ
ಮೈಯಿಂದೊಸರಿದ ಬೆವರ ಹನಿಗಳನ್ನ
ಶೀಷೆಯಲಿ ಶೇಖರಿಸಿ
ಮುಚ್ಚಳ ಹಾಕಿದ್ದೇನೆ;
ಗಾಳಿಗೂ ಆರಿ ಹೋಗದಂತೆ!
ಬೆಳಕನ್ನು ಬಂಧಿಸಿದ ಕೋಣೆಯಲ್ಲೇ
ಅದನ್ನೂ ಇಟ್ಟಿದ್ದೇನೆ;
ಬಿರಡೆ ಹೇಗೂ ಬಿಗಿಯಾಗಿದೆ…

ನೆರೆಮನೆಯ ಜಗುಲಿಯಲಿ
ಬೆಳಕಿನ ಬರವಿದೆಯಂತೆ!
ಒಂದೆರಡು ಗೋಣಿಚೀಲ
ಹೊತ್ತು ಬಂದಿದ್ದಾರೆ ನಾಲ್ಕಾರು ಪೋರರು..
ಕಾಯುವಂತಿಲ್ಲ;ಬೀಗ ಮುರಿದೆ,
ಕತ್ತಲೆಯೇ ಕೊಳೆಯುತ್ತಿದೆ…

ಹುಡುಕಬೇಕಲ್ಲ;ತಡಮಾಡಲಿಲ್ಲ..
ಕಿಟಕಿ ಬಾಗಿಲುಗಳ ತೆಗೆದೆ;
ಮಲ್ಲಿಗೆಯ ಅರಳು ನಗೆಯ ಸದ್ದಂತೆ
ಮೆಲ್ಲ ಅಡಿಯಿಟ್ಟಿತು,
ಬೆಳಕೀಗ ನೇರ ಎದೆಯೊಳಗೆ…

ಬೆವರಿ ಬೆವರಿ ಸೂರ್ಯ ಕರಗಿದಾಗ
ಆ ಚಂದ್ರ ಬಂದ
ಬೆಳ್ಳಿ ಲಾಂದ್ರ ಹಿಡಿದು..
ಬೀದಿ ದೀಪಗಳ ಜೊತೆ ಜೊತೆಗೆ
ಬಣ್ಣ ಬಣ್ಣದ ಕೊಳವೆಗಳು
ಅಂಗಡಿಗಳ ತೆರೆಯುತ್ತಿವೆ..
ಈಗ, ಬೆಳಕು ಮಾರಾಟಕ್ಕಿದೆ…

Facebook ಕಾಮೆಂಟ್ಸ್

ಶ್ರೀ ತಲಗೇರಿ: ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...
Related Post