X

ಕ್ಯಾನ್ಸರ್’ನ ನಂತರವೂ ಒಂದು ಸುಂದರ ಬದುಕಿದೆ…

“ಕ್ಯಾನ್ಸರ್ ಎಂದರೆ ಸಾವಿನ ಶಿಕ್ಷೆ ಅಲ್ಲ, ಉತ್ತಮವಾದುದನ್ನೇನೋ ಪಡೆಯುವ ದಾರಿಯಲ್ಲಿ ಒಂದು ಸ್ಪೀಡ್ ಬಂಪ್ ಇದ್ದಂತೆ” ಎಂದಿದ್ದಾನೆ ಶಾನ್. ನಿಜ, ಕ್ಯಾನ್ಸರ್ ಯಾವಾಗಲೂ ಸಾವಿನ ಶಿಕ್ಷೆಯೇ ಆಗಬೇಕೆಂದೇನಿಲ್ಲ. ಸ್ಪೀಡ್’ ಬಂಪ್’ನಂತೆ ಬಂದಾಗ ಬದುಕು ನಿಧಾನಿಸಿ, ಬದುಕಿನ ಬಗ್ಗೆ ಧೇನಿಸಲು, ಅದರ ಮೌಲ್ಯವನ್ನು ಅರಿಯಲು. ಬದುಕುವುದನ್ನು ಕಲಿಯಲು ಸಿಗುವ ಅವಕಾಶವಾಗಿ ಪರಿಣಮಿಸುತ್ತದೆ.

ಎಂಟು ವರ್ಷಗಳೇ ಕಳೆದು ಹೋಗಿವೆ ಈಗ, ಒಮ್ಮೆ ಹಿಂದಿರುಗಿ ಯೋಚಿಸಿದಾಗ ಬದುಕು ಎಷ್ಟು ಬದಲಾಗಿದೆ ಎಂದು ಆಶ್ಚರ್ಯವಾಗುತ್ತದೆ.!! ಬದಲಾವಣೆ ಮಾತ್ರ ಈ ಜಗದಲ್ಲಿ ಸ್ಥಿರವಾದದ್ದು ಎನ್ನುತ್ತಾರೆ. ಕ್ಯಾನ್ಸರ್ ಆಗದಿದ್ದರೂ ಬದುಕು ಬದಲಾಗಿರುತ್ತಿತ್ತೇನೋ ಆದರೆ ಈ ಮಟ್ಟಿಗಿಂತೂ ಖಂಡಿತಾ ಅಲ್ಲ. ಕ್ಯಾನ್ಸರ್ ನನ್ನ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸಿತು ಅಂತ ನಾನು ಹೇಳಬಹುದು. ನನ್ನ ಯೋಚನೆಗಳು, ಆಕಾಂಕ್ಷೆಗಳು, ಅಭಿಪ್ರಾಯಗಳು ಇನ್ನೂ ಹಲವಾರು ವಿಷಯಗಳು ಕ್ಯಾನ್ಸರಿನೊಂದಿಗೆ ಬದಲಾಯಿತು. ಆ ನೋವು ಯಾತನೆಗಳು ಬಹಳಷ್ಟು ಪಾಠಗಳನ್ನು ಹೇಳಿ ಕೊಟ್ಟಿದೆ.

ಬದುಕಿಗೆ ಮಾರಕವಾದ ಕ್ಯಾನ್ಸರ್ ಎಷ್ಟು ದೊಡ್ಡ ಮಹಾಮಾರಿಯೆಂದರೆ ಕ್ಯಾನ್ಸರ್ ಎಂಬ ಶಬ್ದವೇ ಭಯಹುಟ್ಟಿಸುವಂತಾಗಿದೆ. ನನಗೂ ಕೂಡ ಮೊದಮೊದಲು, ಎರಡೂ ಒಂದೇ ಅರ್ಥವನ್ನು ನೀಡಿದರೂ ಕೂಡ ಕ್ಯಾನ್ಸರ್ ಎನ್ನುವುದಕ್ಕಿಂತ ಆಸ್ಟಿಯೋ ಸರ್ಕೋಮಾ ಎನ್ನುವುದು ಸುಲಭವಾಗಿತ್ತು. ಶಾನ್’ನ ಪುಸ್ತಕದಲ್ಲಿ ಗಮನಿಸಿದ್ದೆ, ಮೊದಮೊದಲು ಕ್ಯಾನ್ಸರ್ ಎಂಬ ಪದದ ಬದಲಾಗಿ “ಡ್ರೀಡೆಡ್ ಸಿ- ವರ್ಡ್ (dreaded C-word)” ಎಂದು ಬಳಸಿದ್ದ. ಮೊದಲು ಆಶ್ಚರ್ಯವೆನಿಸಿದರೂ ನಿಧಾನವಾಗಿ ಕ್ಯಾನ್ಸರ್ ಎಂಬ ಪದವನ್ನು ಒಪ್ಪಿಕೊಳ್ಳಲು ಆತನಿಗೆಷ್ಟು ಕಷ್ಟವಾಗಿರಬಹುದು ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಆ ಪದವನ್ನು ಒಪ್ಪಿಕೊಳ್ಳಲು ಬಹಳ ಸಮಯವೇ ಹಿಡಿಯುತ್ತದೆ, ಅಲ್ಲದೇ ಒಪ್ಪಿಕೊಳ್ಳದೇ ಬೇರೆ ವಿಧಿಯೂ ಇರುವುದಿಲ್ಲ.

ಆ ಪಯಣ ಸರಳವಾಗಿರಲಿಲ್ಲ. ಬರೀ ಸವಾಲುಗಳೇ ತುಂಬಿದ್ದವು. ಉಂಟಾಗಿರುವುದು ಕ್ಯಾನ್ಸರ್ ಎಂದು ಒಪ್ಪಿಕೊಳ್ಳುವುದು, ಮಾನಸಿಕ ತೊಳಲಾಟ, ಜರ್ಝರಿತಗೊಳಿಸುವ ಔಷಧಿ, ಸೈಡ್ ಎಫೆಕ್ಟ್ಸ್, ಅನಿಶ್ಚಿತ ನಾಳೆಗಳು, ಕಹಿಯಾಗಿದ್ದ ವರ್ತಮಾನ. ಇವೆಲ್ಲದನ್ನು ಮನದಲ್ಲಿ ಇಟ್ಟುಕೊಂಡು, ‘ನಾನು ಆರಾಮಾಗುತ್ತೇನೆ.. ನೀವು ಯೋಚಿಸಬೇಡಿ” ಎನ್ನುವುದು ಎಲ್ಲದಕ್ಕಿಂತ ಕಷ್ಟದಾಯಕವಾಗಿದ್ದು. ಆದರೂ ಆಸ್ಪತ್ರೆಯಲ್ಲಿ ರೋಗಗ್ರಸ್ಥ ದೇಹ ಕೀಮೋಗಳಿಂದ ಜರ್ಝರಿತಗೊಳ್ಳುತ್ತಿದ್ದರೂ ಒಂದು ಸುಂದರ ನಾಳೆಯ ಕನಸು ಕಾಣುತ್ತಿದ್ದೆ. ನೀವು ನನ್ನ ಒಂದೋ ಸ್ಟುಪಿಡ್ ಅಂತ ಕರೆಯಬಹುದು ಅಥವಾ ಅದನ್ನ ಭರವಸೆ ಅಂತ ಹೇಳಬಹುದು. ನನ್ನ ಭವಿಷ್ಯ ಅನಿಶ್ಚಿತ ಅಂತ ಗೊತ್ತಿತ್ತು (ಭವಿಷ್ಯ ಯಾವಾಗಲೂ ಅಸ್ಪಷ್ಟವೇ ಆ ಪ್ರಶ್ನೆ ಬೇರೆ), ಆದರೆ ಸಾವಿನ ಬಗ್ಗೆ ಚಿಂತಿಸುವುದಕ್ಕಿಂತ, ಸುಂದರ ನಾಳೆಗಾಗಿ ಪರಿತಪಿಸುವುದೇ ಉತ್ತಮ ಎನಿಸಿತ್ತು.

ಯಾವುದೇ ವಸ್ತುವಿನ ಮೌಲ್ಯ ಅರ್ಥವಾಗುವುದು ಅದನ್ನು ಕಳೆದುಕೊಂಡಾಗಲೇ ಅಥವಾ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾಗ. ಬದುಕನ್ನ ಕಳೆದುಕೊಂಡಾಯಿತು ಎಂಬ ಸ್ಥಿತಿಯನ್ನು ತಲುಪಿಯಾಗಿತ್ತು ಆಗಲೇ ತಾನೆ ಬದುಕಿನ ಮೌಲ್ಯ ಅರ್ಥವಾಗಿದ್ದು!! ನಿಜ, ಬದುಕು ಸವಾಲುಗಳಿಂದಲೇ ಕೂಡಿದ್ದು ಅದರೆ ಅದೇ ತಾನೇ ಬದುಕಿನ ಸೌಂದರ್ಯವನ್ನು ಹೆಚ್ಚಿಸುವುದು. ಆಸ್ಪತ್ರೆಯಲ್ಲಿ ಎಷ್ಟೋ ದಿನಗಳನ್ನು ಕಳೆದ ನಂತರ, ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಚಸ್’ನ ಆಸರೆಯಲ್ಲಿ ಕಳೆದ ನಂತರ, ಹೆದರಿಸುವ ಯೋಚನೆಗಳ, ಭಯಾನಕ ಅನುಭವಗಳ ಎದುರಿಸಿದ ನಂತರ, ಆಂತರ್ಯದ ಗೊಂದಲಗಳೊಂದಿಗೆ ಗುದ್ದಾಡಿದ ನಂತರ ಹಾಗೂ ಅವುಗಳು ಕಲಿಸಿದ ಪಾಠಗಳನ್ನು ಕಲಿತ ನಂತರ ಬದುಕಿನ ಮೇಲೆ ಪ್ರೀತಿ ಉಂಟಾಗದೇ ಇರಲು ಹೇಗೆ ಸಾಧ್ಯ?!! ಜೀವನಪ್ರೀತಿ ಅರ್ಥವಾಗದಿರಲು, ನಮ್ಮನ್ನು ನಾವೇ ಪ್ರೀತಿಸಿಕೊಳ್ಳುವಂತಾಗದಿರಲು ಹೇಗೆ ಸಾಧ್ಯ?!! ಕನಸುಗಳನ್ನು ಕಾಣಲು ಕಲಿಯದಿರಲು ಹೇಗೆ ಸಾಧ್ಯ. ಇಷ್ಟಕ್ಕೂ ಸಿಕ್ಕ ಇನ್ನೊಂದು ಅವಕಾಶವನ್ನು ವ್ಯರ್ಥಗೊಳಿಸುವುದಾದರೂ ಹೇಗೆ?! ಸವಾಲುಗಳು ಈಗಲೂ ಇವೆ, ಮುಂದೆ ಹೋದಂತೆ ಇನ್ನೂ ಹೆಚ್ಚು ಬರಬಹುದು. ಆದರೆ ಒಂದಂತೂ ನಿಜ ಅವೆಲ್ಲವೂ ಔನ್ನತ್ಯದೆಡೆಗೇ ಒಯ್ಯುತ್ತದೆ.

ಈ ಎಂಟು ವರ್ಷಗಳಲ್ಲಿ ಹಲವು ಸರ್ವೈವರ್’ಗಳನ್ನು ಸಂಪರ್ಕಿಸಿದ್ದೇನೆ, ನೋಡಿದ್ದೇನೆ. ಅವರ ಬದುಕಿನ ಕಥೆಗಳನ್ನು, ಅವರ ಧೈರ್ಯದ ಬಗ್ಗೆ ಅರಿಯುವ ಪ್ರಯತ್ನ ಮಾಡಿದ್ದೇನೆ. ಎಲ್ಲರೂ ಕ್ಯಾನ್ಸರಿನ ನಂತರವೂ ಒಂದು ಸುಂದರ ಬದುಕಿದೆ ಎಂದು ತೋರಿಸಿಕೊಟ್ಟಿದ್ದಾರೆ. ಅದನ್ನು ನಾನೂ ಒಪ್ಪುತ್ತೇನೆ ಯಾಕೆಂದರೆ ನಾವು ನಿಜವಾಗಿ ಬದುಕಲಾರಂಭಿಸಿದ್ದೇ ಈಗ. ನಿಜ ಅರ್ಥದಲ್ಲಿ ನಮ್ಮ ಬದುಕು “ಬದುಕು” ಎನಿಸುತ್ತಿರುವುದೇ ಈಗ!!!

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post