X

ಜನರ ಸಂತೆಯ ನಡುವೆ

ಜನರ ಸಂತೆಯ ನಡುವೆ
ಮೌನಿಯಾಗಿದ್ದೇನೆ ನಾನು
ಕವನವೊಂದ ಗೀಚುತ್ತಿದ್ದೇನೆ ನಾನು…
ಭ್ರಷ್ಟಾಚಾರಗಳ, ಅತ್ಯಾಚಾರಗಳ
ಕೊಲೆ-ಸುಲಿಗೆ, ದರೋಡೆಗಳ
ದೇಶದ್ರೋಹಗಳ… ವಿರೋಧಗಳು
ತುಂಬಿವೆ ಕವನದೊಡಲನು….

ನನ್ನ ಕವನದೊಡಲ ಸೀಳುವಂತೆ
ಗೋಚರಿಸುತ್ತಿವೆ ಭೀಕರ ದೃಶಗಳು..
ತರಕಾರಿಗಳಂತಾಗಿವೆ ಮನುಷ್ಯ ದೇಹಗಳು..
ತುಂಡರಿಸುತ್ತಿವೆ ಚಾಕು, ಚೂರಿ, ಕತ್ತಿಗಳು
ಮರೆಯಾಗಿವೆ ಅವರಲ್ಲಿ ಮನುಷ್ಯತ್ವ,
ಮಾನವೀಯತೆಗಳು..

ಅದೋ..! ಅಲ್ಲಿ ಅವಳು !
ಓಡುತ್ತಿದ್ದಾಳೆ…ಕಾಮುಕರ ಕಂಡು
ಬೆನ್ನಟ್ಟಿದೆ ಕಾಮುಕರ ಹಿಂಡು..
ಇದೋ.. ! ಇಲ್ಲಿ ಬಾಂಬ್ ದಾಳಿ
ಅದೆಲ್ಲಿಂದಲೋ ಬರುತ್ತಿದ್ದಾರೆ
ದೇಶದ್ರೋಹಿಗಳು ಒಳನುಸುಳಿ..

ಚಂಡಿನಾಕೃತಿಯೊಂದು ಬರುತಿದೆ
ನನ್ನತ್ತಲೇ ಅದರ ಗುರಿಯಿದೆ ..
ಇನ್ನೂ ಸನಿಹವಾಗುತಿದೆ…
ನಾ ಬೆಚ್ಚಿದೆ  ! ದೂರ ಸರಿದೆ ಅಂಜಿ
ಬಿಳಿ ಹಾಳೆಯ ಕಪ್ಪಕ್ಷರಗಳ ಮೇಲೆ
ಚಿಮ್ಮಿತ್ತು ಕಾರಂಜಿ
ಮನುಷ್ಯ ರುಂಡದ ಕೆಂಪು ಕಾರಂಜಿ

ಬಿಳಿ ಹಾಳೆಯ ಮೇಲೆ ಕಪ್ಪು ತಲೆಯ
ರುಂಡವಿತ್ತು ,ಕೆಂಪು ರಕ್ತದ ಓಕುಳಿಯಿತ್ತು
ಲೇಖನಿಯೂ ಮುರಿದಿತ್ತು…
ಬಿಳಿ ಹಾಳೆಯಲ್ಲ ಕೆಂಪಾಗಿತ್ತು
ರಕ್ತದ ಮಡುವಿನಲಿ ಕವನ ಕೊಚ್ಚಿ ಹೋಗಿತ್ತು
ನನ್ನ ಕಣ್ಣುಗಳಲ್ಲಿ ವಿಷಾದವಿತ್ತು…

-Mamatha Channappa

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post