X

ಗೊನೆ ಮಾಗಿ ಬಾಳೇ ಜೀವನ್ಮುಕ್ತ

“ಎಲೆ ಹಳದಿ ತಿರುಗಿದೀ ಹಲಸು ನಿಂತಿದೆ ಹೆಳವ;

ಹದ ಬಿಸಿಲು ಸಾರಾಯಿ ನೆತ್ತಿಗೇರಿ;

ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ

ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ”

ಶ್ರೀಮಾನ್‍ಜಿ ತನ್ನ ಫೇವರಿಟ್ ಕವನದ ಸಾಲುಗಳನ್ನು ಓದಿದಾಗ ಘಾ ಸಾಹೇಬರಿಗೆ ಸುಮ್ಮನಿರಲಾಗಲಿಲ್ಲ. “ಆಹಾ ಎಂಥಾ ಪದ್ಯ! ಒಂದು ಗೊನೆ ಹಾಕಿ ಜೀವಕಳಕೊಳ್ಳುವ ಈ ಬಾಳೆಗಿಡ ತನ್ನ ಸಂತತಿಯನ್ನು ಹಿಂಡುಹಿಳ್ಳುಗಳಲ್ಲಿ ಊರಿ ಹೋಗುವ ಚಿತ್ರ ಹೇಗೆ ಕಟ್ಟಿಕೊಡ್ತಾರೆ ಅಡಿಗರು!” ಅಂತ ಬಾಯಿಚಪ್ಪರಿಸಿದರು.

“ಅಲ್ಲದೆ ಮಾಗುವ ಕ್ರಿಯೆ ಸ್ವಾಭಾವಿಕವಾಗಿ ಆದಾಗಲೇ ಅದಕ್ಕೆ ಮೌಲ್ಯ, ಪಕ್ವತೆ ಒದಗೋದು ಅನ್ನೋ ಧ್ವನಿಯೂ ಇದೆ ಅದರಲ್ಲಿ. ರಾಯರೇ, ಈ ಪದ್ಯದಲ್ಲಿ ಬಾಳೆ ಅನ್ನೋದನ್ನ ಎರಡು ಅರ್ಥದಲ್ಲಿ ಬಳಸಿರುವ ಚಮತ್ಕಾರ ನೋಡಿ. ಬಾಳೆಗಿಡ ಅಂದ ಹಾಗೂ ಆಯ್ತು, ಈ ಬಾಳೇ, ಅಂದರೆ ಜೀವನವೇ ಜೀವನ್ಮುಕ್ತ ಅಂದ ಹಾಗೂ ಆಯ್ತು!”, ಶ್ರೀಮಾನ್‍ಜಿ ವಿವರಿಸಿದರು.

ಬಾಳೆ ಅಂದ ಕೂಡಲೇ ಅಡುಗೆಮನೆಯಲ್ಲಿದ್ದ ಶ್ರೀಮತಿಯವರ ಆಂಟೆನ ಠಣ್ ಎಂದು ಹೊಡೆದುಕೊಂಡಿತು. ಧಡಧಡ ಹೊರ ಬಂದವರೇ “ಏನ್ರೀ, ಯುಗಾದಿ ಹಬ್ಬಕ್ಕೇ ಅಂತ ಬಾಳೇಕಾಯಿ ತರೋದಿಕ್ಕೆ ಹೇಳಿದ್ದೆ. ಗಾಂಧೀಬಜಾರಿನವರೆಗೆ ಪಾದಯಾತ್ರೆ ಮಾಡಿ ವಿದ್ಯಾರ್ಥಿಭವನದಲ್ಲಿ ಮಸಾಲೆದೋಸೆ ತಿಂದುಬಂದ್ರಲ್ಲಾ, ಬಾಳೇಕಾಯಿ ತಂದಿರೇನ್ರೀ?” ಅಂತ ದಬಾಯಿಸಿದರು.

ಗಂಡಸರು ಸಹಜವಾಗಿ ಮರೆಯುವ ವಿಚಾರಗಳನ್ನು ಎತ್ತಿಹಿಡಿದು ಚುಚ್ಚಿ ಹೇಳಿ ಗೋಳು ಹೊಯ್ದುಕೊಳ್ಳುವುದು ಹೆಂಗಸರ ಜನ್ಮಜಾತ ಹಕ್ಕು. “ಏನು ಮಾಡಲಿ ಕಣೆ. ಹೋಟೇಲಿಂದ ಹೊರಬರ್ತಿದ್ದ ಹಾಗೆ ಮಳೆ ಹನಿಯೋದಕ್ಕೆ ಶುರುವಾಯ್ತು. ಮರೆತುಬಿಟ್ಟೆ” ಅಂತ ನಾಲಿಗೆ ಕಚ್ಚಿದರು ಶ್ರೀಮಾನ್‍ಜಿ.

“ನೆಪಕ್ಕೇನು! ನೂರೆಂಟು ಹೇಳ್ತೀರಿ! ಬಾಳೇಕಾಯಿ, ಬಾಳೇದಿಂಡು ಕಣ್ಣೆದುರು ಹೊಡೆಯೋ ಹಾಗೆ ರಾಶಿ ಹಾಕಿರ್ತಾರೆ ಅಲ್ಲಿ. ಆದರೂ ತರಲಿಲ್ಲವಲ್ಲ! ನನ್ನ ಕರ್ಮ!” ಅಂತ ಸಾರಿನ ಸೌಟಿಂದ ಹಣೆ ಬಡಿದುಕೊಂಡರು ಶ್ರೀಮತಿ.

“ನೋಡು ಚಿನ್ನ, ಪ್ರತಿಹಬ್ಬಕ್ಕೂ ಬಾಳೇದಿಂಡು ಕಡಿದು ತರುವುದು ಈ ಬೆಂಗಳೂರಿಗರಿಗೊಂದು ರೋಗ. ಸುಮ್ನೆ ಯೋಚನೆ ಮಾಡು – ಈ ಸಿಟಿಯ ಲಕ್ಷಾಂತರ ಜನ ಪ್ರತಿಹಬ್ಬಕ್ಕೂ ಕಡಿಯುವ ಬಾಳೇಗಿಡ ಎಷ್ಟು? ಅದರಿಂದ ಹುಟ್ಟುವ ಕಸ ಎಷ್ಟು? ಅದನ್ನು ವಿಲೇವಾರಿ ಮಾಡಲು ಕಾರ್ಪೋರೇಶನ್ನಿಗೆ ತಗುಲೋ ಖರ್ಚು, ಆ ಹೆಚ್ಚುವರಿ ಲೋಡಿಗೆ ವ್ಯಯವಾಗೋ ಡೀಸೆಲು..!”

“ಸುಮ್ನೆ ಬಡಿವಾರ! ಜ್ಯೋತಿಷ್ಯ ನಂಬದೋನು ಟೀವಿ ಸ್ವಾಮೀಜೀನ ಬಯ್ದನಂತೆ. ಹಾಗಾಯ್ತು!”

“ಕೇಳು ಮಾರಾಯ್ತಿ! ಆ ಬಾಳೇಹಣ್ಣಾದರೂ ಸ್ವಾಭಾವಿಕವಾದದ್ದಾ? ಕಾರ್ಬೈಡ್‍ನಿಂದ ಹಣ್ಣು ಮಾಡಿದ ಕಾಯಿ ಅದು. ಕೀಲುಗೊಂಬೆಗೆ ರೇಷ್ಮೆಸೀರೆ ಉಡಿಸಿದ ಹಾಗೆ – ಹೊರಗೆ ಕಣ್ಣು ಕುಕ್ಕೋ ಬಣ್ಣ. ಒಳಗೆ ಇನ್ನೂ ಮಾಗದ ಕಾಯಿ!”, ಶ್ರೀಮಾನ್‍ಜಿ ಸಂಯಮ ಕಳೆದುಕೊಳ್ಳದೆ ಮತ್ತೆ ವಿವರಣೆ ಕೊಟ್ಟರು.

ಕಾರ್ಬೈಡ್ ಅಂದ ಕೂಡಲೇ ಶ್ರೀಮತಿಗೆ ಅದೇನೋ ವಿಷ ಇರಬೇಕು ಅನ್ನುವ ಅನುಮಾನ ಬಂತು. ವಿಜ್ಞಾನವನ್ನು ಅರೆದು ಕುಡಿದ ಗಂಡ ಹೇಳ್ತಾ ಇರೋದರಿಂದ ನಿಜ ಇದ್ದರೂ ಇರಬಹುದು! ಗಂಡನ ತಲೆಗೆ ಕುಕ್ಕಲು ತಂದ ಸೌಟನ್ನು ನಿಧಾನಕ್ಕೆ ಇಳಿಸಿ ಮೆತ್ತಗಿನ ದನಿಯಲ್ಲಿ “ಇದೇನ್ರೀ ಕಾರ್ಬೈಡ್ ಅಂದರೆ? ವಿಷವೇ?” ಅಂತ ಆತಂಕದಿಂದ ಕೇಳಿದರು.

“ಹೌದಯ್ಯ! ಈ ಕಾರ್ಬೈಡ್ ಅಂದರೆ ಏನು? ನಾನು ಮಾವಿನಹಣ್ಣು ಕೊಳ್ಳೋದಕ್ಕೆ ಮಾರ್ಕೆಟ್ಟಿಗೆ ಹೋದರೆ, ಆ ಹಣ್ಣು ಮಾರೋ ರಂಗಯ್ಯ – ಸ್ವಾಮಿ, ಇದು ಕಾರ್ಬೈಡ್ ಹಣ್ಣಲ್ಲ, ಹಂಗೇ ಹಣ್ಣಾಗಿರೋ ಹಣ್ಣು!” ಅಂದ. ಏನು ಹಾಗಂದರೆ?” ಅಂತ ಘಾ ಕೂಡ ಕೊಕ್ಕರೆಯಂತೆ ಮುಂದೆ ಬಗ್ಗಿದರು.

“ಸರಿ ಹಾಗಾದರೆ. ಮರದಲ್ಲಿರೋ ಕಾಯಿ ಹಣ್ಣಾಗೋದು ಹೇಗೆ ಅಂತ ಹೇಳಿ”, ಶ್ರೀಮಾನ್‍ಜಿ, ಇಬ್ಬರು ವಿದ್ಯಾರ್ಥಿಗಳು ಅನಾಯಾಸವಾಗಿ ಸಿಕ್ಕಿದ್ದರಿಂದ ಪಾಠ ಶುರು ಮಾಡಿದರು.

“ಒಳ್ಳೇ ಪ್ರಶ್ನೆ! ಮದುವೆಯಾದಾಗ ಟಾರು ಹಚ್ಚಿದ ಹಾಗೆ ಕಪ್ಪಗಿದ್ದ ನಿಮ್ಮ ತಲೆಗೂದಲು ಈಗ ವೈಟ್‍ವಾಷ್ ಮಾಡಿದ ಹಾಗೆ ಬೆಳ್ಳಗಾಗಿಲ್ಲವಾ, ಹಾಗೇನೇ ಕಾಯಿಯೂ ಹಣ್ಣಾಗೋದು. ಅದೆಲ್ಲ ಕಾಲದ ಮಹಿಮೆ!”, ಶ್ರೀಮತಿ ಕುಕ್ಕಿದರು.

“ವಿಷಯಾಂತರ ಮಾಡಬೇಡ! ಇಷ್ಟು ಸಲ ಮಾರ್ಕೆಟ್ಟಿಗೆ ಹಣ್ಣು ಕೊಳ್ಳಲು ಹೋಗ್ತೀಯಲ್ಲ. ಚಳಿಗಾಲದಲ್ಲಿ ಕಿತ್ತಳೆ, ಸೇಬು; ಬೇಸಿಗೆಯಲ್ಲಿ ಮಾವು, ಹಲಸು ಯಾಕೆ ಹಣ್ಣಾಗುತ್ತವೆ ಅಂತ ಎಂದಾದರೂ ಯೋಚಿಸಿದ್ದೀಯ?”

ಶ್ರೀಮತಿಯ ಹುಬ್ಬು ಪ್ರಶ್ನಾರ್ಥಕವಾಯಿತು. “ಹೌದಲ್ಲ! ಇದರ ಬಗ್ಗೆ ಯೋಚನೇನೇ ಮಾಡಿಲ್ಲವಲ್ಲ!” ಅಂತ ಸೌಟಿಂದ ತನ್ನ ತಲೆಯನ್ನೆ ಮೊಟಕಿಕೊಂಡು ಶ್ರೀಮಾನ್‍ಜಿ ಎದುರು ಚೇರೆಳೆದು ಕೂತರು.

“ಈ ಕಾಯಿ ಹಣ್ಣಾಗುವ ಕ್ರಿಯೆಯೇ ಬಹಳ ರಸವತ್ತಾದ ಕತೆ. ಪ್ರತಿಯೊಂದು ಮರವೂ ವರ್ಷದ ಯಾವ ಕಾಲದಲ್ಲಿ ತನ್ನ ಕಾಯಿಗಳನ್ನು ಹಣ್ಣು ಮಾಡಿ ಬೀಜಪ್ರಸಾರ ಮಾಡಬೇಕು ಅಂತ ನಿರ್ಧರಿಸಿಕೊಂಡಿರುತ್ತೆ. ಮರದ ಬೇರುಗಳು, ತೊಗಟೆ, ಎಲೆಗಳು – ಹೊರಗಿನ ವಾತಾವರಣದ ಉಷ್ಣತೆ ಮತ್ತು ತೇವಾಂಶಗಳನ್ನು ಗಮನಿಸಿಕೊಂಡು ಕಾಲ ಪಕ್ವವಾದಾಗ ಸಿಗ್ನಲ್ ಕೊಡ್ತವೆ. ಇಡೀ ಮರ ಆಗ ಎಥಿಲೀನ್ ಅನ್ನುವ ರಾಸಾಯನಿಕವನ್ನು ಉತ್ಪಾದಿಸಿ ರೆಂಬೆರೆಂಬೆಗಳಿಗೂ ರವಾನಿಸುತ್ತೆ. ಹೀಗೆ ಹರಿದುಬಂದ ರಾಸಾಯನಿಕವು ಕಾಯಿಯ ಬುಡಕ್ಕೆ ಬಂದು ಅದರೊಳಗಿನ ಜೀವಕೋಶಗಳನ್ನು ಬಡಿದೆಬ್ಬಿಸುತ್ತದೆ. ಈ ಜೀವಕೋಶಗಳು ನಿದ್ದೆಯಿಂದ ಎದ್ದು ಕಿಣ್ವಗಳನ್ನು ಉತ್ಪಾದಿಸುವ ಕೆಲಸವನ್ನು ಪ್ರಾರಂಭಿಸುತ್ತವೆ”

“ಕಿಣ್ವ ಅಂದರೆ?”, ಘಾ ನಡುವೆ ಬಾಯಿ ಹಾಕಿದರು.

“ಕಿಣ್ವ ಅಂದರೆ ಜೀವಕೋಶಗಳಿಂದ ಉತ್ಪಾದನೆಯಾಗುವ ಒಂದು ಸಂಕೀರ್ಣವಾದ ಪ್ರೋಟೀನು. ನಮ್ಮ ದೇಹದೊಳಗಾಗಲೀ ಸಸ್ಯಗಳ ಒಳಗಾಗಲೀ ನಡೀತಾ ಇರುವ ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸುವ ಕೆಲಸವನ್ನು ಮಾಡುವ ಜವಾಬ್ದಾರಿ ಈ ಕಿಣ್ವದ್ದು. ಉದಾಹರಣೆಗೆ ಕಡೆಯುವ ಕಲ್ಲಿನಲ್ಲಿ ಸಾಂಬಾರಿನ ಮಸಾಲೆ ಅರೆಯುವ ಬದಲು ಮಿಕ್ಸಿ ಉಪಯೋಗಿಸಿದ ಹಾಗೆ. ನಡೆದುಕೊಂಡು ಊರು ಸುತ್ತುವ ಬದಲು ಬೈಕಿನಲ್ಲಿ ಓಡಾಡಿದ ಹಾಗೆ.”

“ಸರಿ!”

“ಈ ಕಿಣ್ವಗಳು ಕಾಯಿಯ ಒಳಗೆ ತುಂಬಿಕೊಂಡಿರುವ ಪಿಷ್ಟವನ್ನು ಸರಳವಾದ ಸಕ್ಕರೆಯ ಕಣಗಳಾಗಿ ಒಡೆಯುತ್ತವೆ. ಅಂದರೆ, ಕಾಯಿ ನಿಧಾನಕ್ಕೆ ತನ್ನ ಹುಳಿ ಒಗರನ್ನು ಕಳೆದುಕೊಂಡು ಸಿಹಿಯಾಗುತ್ತಾ ಬರುತ್ತದೆ. ಅದನ್ನೇ ನಾವು ಕಾಯಿ ಹೋಗಿ ಹಣ್ಣಾಯಿತು ಅನ್ನೋದು”

“ಅಂದರೆ, ಈ ಕಾಯಿ ಹಣ್ಣಾಗೋ ಪ್ರಕ್ರಿಯೆ ಪೂರ್ತಿ ರಾಸಾಯನಿಕ ಕ್ರಿಯೆ ಅಂತ ಆಯ್ತು!”

“ಹಂಡ್ರೆಡ್ ಪರ್ಸೆಂಟ್!”, ವಿದ್ಯಾರ್ಥಿಗಳಿಗೆ ಅರ್ಥವಾಯಿತು ಅಂತ ಶ್ರೀಮಾನ್‍ಜಿಯ ಮುಖ ಅರಳಿತು.

“ಅದೆಲ್ಲ ಸರಿ, ಆದರೆ ಹಣ್ಣಿನ ಸಿಪ್ಪೆಯ ಬಣ್ಣ ಬದಲಾಗುತ್ತಲ್ಲ, ಅದು ಹೇಗೆ?”, ಶ್ರೀಮತಿಗೆ ಸಂಶಯ.

“ಅದಕ್ಕೂ ಎಥಿಲೀನೇ ಕಾರಣ. ಅದು ಬಂದು ಕಾಯಿಯ ಜೀವಕೋಶಗಳಿಗೆ ಟಾಂಗ್ ಕೊಟ್ಟ ಮೇಲೆ, ಸಿಪ್ಪೆಯ ಮೇಲಿನ ಜೀವಕೋಶಗಳು ವರ್ಣದ್ರವ್ಯವನ್ನು ತಯಾರಿಸ್ತವೆ. ಅದರಿಂದಾಗಿ ಕಿತ್ತಳೆ ಆರೆಂಜಾಗಿ, ಬಾಳೆ ಹಳದಿಯಾಗಿ, ಮಾವು ಕೆಂಪಾಗಿ ಬದಲಾಗುತ್ತವೆ.”

“ಹಾಗಾದ್ರೆ ಈ ಕಾರ್ಬೈಡ್ ಅಂದ್ರೆ ಏನಯ್ಯ? ಯಾವುದಾದರೂ ಆರ್ಟಿಫಿಶಲ್ ಪೇಂಟೋ ಏನು ಕತೆಯೋ?”, ಘಾ ಸಾಹೇಬರಿಗೆ ಅದೇ ಧ್ಯಾನ.

“ಅದೇ ವಿಷಯಕ್ಕೆ ಬರ್ತಿದೇನೆ ರಾಯರೇ. ಈಗ ನೋಡಿ ಅರ್ಜೆಂಟ್ ಯುಗ. ಮರ ಹೂಬಿಟ್ಟು  ಹೀಚುಕಾಯಿ ಬಿಡ್ತಿದ್ದ ಹಾಗೇನೇ ಅದನ್ನು ಕಿತ್ತುತಂದು ಬಜಾರಲ್ಲಿ ಮಾರುವ ಧಾವಂತ. ಅದಕ್ಕಾಗಿ ಏನು ಮಾಡ್ತಾರೆ ಅಂದರೆ, ಹಣ್ಣಾಗದ ಕಾಯಿಗಳನ್ನು ಕ್ರೇಟುಗಳಲ್ಲಿ ತುಂಬಿ ಅವುಗಳ ನಡುವೆ ಎಥಿಲೀನೋ ಅಸಿಟಲೀನೋ ಅನಿಲಗಳನ್ನು ಹಾಯಿಸ್ತಾರೆ. ಆ ಅನಿಲಗಳು ಕಾಯಿಯ ಬುಡಕ್ಕೆ ಬಂದು, ಮಾಗುವ ಕೆಲಸಕ್ಕೆ “ರೆಡಿ ಒನ್ ಟೂ ತ್ರೀ” ಹೇಳಿ ಹೋಗುತ್ತವೆ. ಕಾಯಿ ರಾತ್ರಿಬೆಳಗಾಗುವುದರಲ್ಲಿ ಹಣ್ಣಾಗುತ್ತದೆ! ಇನ್ನು ಕೆಲಸಂದರ್ಭಗಳಲ್ಲಿ ಹಣ್ಣಿನ ಮೇಲೆ ಕ್ಯಾಲ್ಸಿಯಂ ಕಾರ್ಬೈಡ್ ಅನ್ನೋ ರಾಸಾಯನಿಕವನ್ನು ಸಿಂಪಡಿಸ್ತಾರೆ. ಅದು ಹಣ್ಣಿನ ಮೇಲಿನ ತೇವಾಂಶದ ಜೊತೆ ವರ್ತಿಸಿ ಅಸಿಟಲೀನ್‍ಅನ್ನು ಉತ್ಪಾದಿಸುತ್ತೆ. ಅದರಿಂದ ಕಾಯಿ ಮಾಗುವ ಕೆಲಸ ಶುರುವಾಗುತ್ತೆ.”

“ಇದೆಲ್ಲ ವಿಷಕಾರಿ ಅಂತೀಯ?”, ಘಾ ಆತಂಕದಿಂದ ಕೇಳಿದರು. ಅದೇ ಸಂಶಯ ಶ್ರೀಮತಿಯ ಮುಖದಲ್ಲೂ ಲಾಸ್ಯವಾಡುತ್ತಿತ್ತು.

“ಏನ್ ಹೇಳ್ಳಿ ರಾಯರೇ! ವಿಷ ಅಂದರೆ ಹೌದು, ಅಲ್ಲ ಅಂದರೆ ಅಲ್ಲ! ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ನಮ್ಮ ಬೆಂಗಳೂರ ಮಾರ್ಕೆಟ್ಟಲ್ಲಿ ಸಿಗೋ ಎಂಭತ್ತರಷ್ಟು ಹಣ್ಣುಗಳು ಹಣ್ಣುಗಳಾದದ್ದು ಇಂತಹ ಕೃತಕ ವಿಧಾನಗಳಿಂದ! ಹಾಗಂತ ರಾಮನವಮಿಗೆ ಕರಬೂಜ ತರದೇ ಇರೋಕ್ಕಾಗುತ್ಯೆ?” ಅಂತ ಹೇಳಿ ಶ್ರೀಮತಿಯ ಮುಖ ನೋಡಿದರು. ಅಲ್ಲಿನ ಸಿಟ್ಟಿನ ಕಿಣ್ವ ಕಾಣಿಸಿತು!

“ಒಂದು ಮಾತು ಹೇಳಯ್ಯ. ಹೂವು ಕಾಯಾಗೋದು, ಕಾಯಿ ಹಣ್ಣಾಗೋದು, ಹುಳಿ ಸಿಹಿಯಾಗೋದು, ಹಸಿರು ಕೆಂಪಾಗೋದು – ಇವೆಲ್ಲ ಸರ್ಕಸ್ ಯಾಕೇ ಅಂತ! ಮರದಲ್ಲಿ ನೇರವಾಗಿ ಹಣ್ಣೇ ಹುಟ್ಟಬಾರದೆ!”, ಘಾ ಕೇಳಿದರು. ಬುದ್ಧಿವಂತ ಪ್ರಶ್ನೆ ಕೇಳಿ ವಿಜ್ಞಾನ ಪಂಡಿತನನ್ನು ಸಿಕ್ಕಿಸಿ ಹಾಕಿಸಿದೆ ಅಂತ ಅವರಿಗೆ ಹೆಮ್ಮೆ.

“ನಿಜವಾಗಿ ಹೇಳಬೇಕಂದರೆ ಇದೊಂದು ಪ್ರಕೃತಿಯ ಅದ್ಭುತವಾದ ಆಟ. ಕಾಯಿ ಹುಳಿಯಾಗಿರುತ್ತೆ. ಅದರೊಳಗಿನ ಬೀಜ – ಇನ್ನೂ ಹೀಚು. ಕಾಯಿಯ ಬಣ್ಣ ಹಸಿರು. ಹಸಿರೆಲೆಗಳ ಮಧ್ಯೆ ಈ ಕಾಯಿ – ಹಕ್ಕಿಗಳಿಗೆ, ಪ್ರಾಣಿಗಳಿಗೆ ಕಾಣಿಸೋದೇ ಇಲ್ಲ! ಕಾಣಿಸಿದರೂ ತಿನ್ನಲಿಕ್ಕಾದಷ್ಟು ಹುಳಿ. ಹಾಗಾಗಿ ಅವು ಇದರ ಉಸಾಬರಿಗೇ ಬರೋದಿಲ್ಲ.

ಆದರೆ, ಬೀಜ ಬಲಿತು ದೊಡ್ಡದಾಗಿ ಮೊಳಕೆ ಒಡೆಯಲು ರೆಡಿಯಾಗ್ತಾ ಇದ್ದ ಹಾಗೆ ಹಣ್ಣಿಗೆ ಬಣ್ಣ, ರುಚಿ ಎಲ್ಲ ಒದಗಿ ಬರುತ್ತೆ. ಪ್ರಾಣಿಗಳು, ಪಕ್ಷಿಗಳು ಬಂದು ಈ ಹಣ್ಣನ್ನು ಕಚ್ಚಿತಿಂದು ಬೀಜಕ್ಕೆ ಜಾಗ ಮಾಡಿಕೊಡುತ್ತವೆ. ಹಣ್ಣನ್ನು ಎಲ್ಲೆಲ್ಲೋ ಒಯ್ತವೆ, ಬೀಜವನ್ನು ಎಲ್ಲೋ ದೂರದಲ್ಲಿ ಹಾಕ್ತವೆ. ಅಂದರೆ, ಮರಕ್ಕೆ ಇದು ವಂಶಾಭಿವೃದ್ಧಿಯ, ಬೀಜಪ್ರಸಾರದ ಸುಲಭ ಉಪಾಯ! ಹೇಗಿದೆ!”

“ಅರರೆ! ಇಷ್ಟೆಲ್ಲ ನಾನು ಯೋಚನೇನೇ ಮಾಡಿರಲಿಲ್ವೆ!” ಅಂತ ಕಣ್ಣು-ಮೂಗು ಅರಳಿಸಿ ಪತಿಯನ್ನು ಅಭಿಮಾನದಿಂದ ನೋಡಿದ ಸೌಟುಹಿಡಿದ ಶ್ರೀಮತಿ, “ಬಾಳೇಕಾಯಿ ನಾಳೆ ತನ್ನಿ, ಪರವಾಯಿಲ್ಲ. ಮಾವಿನಕಾಯಿ ಗೊಜ್ಜು ಮಾಡಿದ್ದೇನೆ. ಊಟಕ್ಕೆ ಬನ್ನಿ!” ಎಂದು ಮಾಫಿ ಕೊಟ್ಟು ಪ್ರೀತಿಯಿಂದ ಊಟಕ್ಕೆ ಕರೆದರು.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post