ಅನ್ನಪೂರ್ಣ ದೇವಿ, ಹಿಂದೂಸ್ಥಾನಿ ಸಂಗೀತ ವಲಯದಲ್ಲಿ ಬಹು ದೊಡ್ಡ ಹೆಸರು. ಬೆಳೆಯುತ್ತಿರುವ ದಂತಕಥೆ. ಪ್ರಖ್ಯಾತ ಸಂಗೀತ ಗುರು ಉಸ್ತಾದ್ ಅಲ್ಲಾವುದ್ದೀನ್ ಖಾನ್’ರವರ ಮಗಳು, ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್’ರ ತಂಗಿ. ಭಾರತ ರತ್ನ,ಪಂಡಿತ್ ರವಿಶಂಕರ್’ರವರ ವಿಚ್ಛೇದಿತ ಪತ್ನಿ. ಇಷ್ಟೇ ಇವರ ಗುರುತಲ್ಲ. ಭಾರತೀಯ ಸಂಗೀತ ಜಗತ್ತು ಕಂಡ,ಅದರಲ್ಲೂ ಸಿತಾರ್ ಹಾಗೂ ಸುರ್ಬಹಾರ್ ವಾದ್ಯಗಳ ಅತ್ಯುತ್ತಮ ವಾದಕಿ ಎಂಬ ಹೆಗ್ಗಳಿಕೆ.
ಆದರೆ ದುರಂತವೇನೆಂದರೆ ಜಗತ್ತಿನ ಪಾಲಿಗೆ ಅವರ ಸಂಗೀತ ಕಳೆದುಹೋಗಿದೆ. ರವಿಶಂಕರರೊಂದಿಗಿನ ಮನಸ್ತಾಪದ ದೆಸೆಯಿಂದ ‘ಇನ್ನೆಂದೂ ನಾನು ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡುವುದಿಲ್ಲ’ ಎಂಬ ಅವರ ಐದು ದಶಕಕ್ಕೂ ಹಿಂದಿನ ಪ್ರತಿಜ್ಞೆ ಸಂಗೀತ ಜಗತ್ತಿಗೆ ದೊರಕಬಹುದಾಗಿದ್ದ ಅತ್ಯುತ್ತಮ ಸಂಗೀತ ಸೇವೆಯನ್ನು ಮರೆಮಾಚಿದೆ. ಅಲ್ಲಿಂದ ಇಂದಿನವರೆಗೂ ಅನ್ನಪೂರ್ಣ ದೇವಿ ಅಕ್ಷರಶಃ ತಪಸ್ವಿಯಂತೆ ತಮ್ಮ ಬದುಕನ್ನು ಸಾಗಿಸಿದ್ದಾರೆ. ಮುಂಬೈನಲ್ಲಿರುವ ತಮ್ಮ ನಿವಾಸದಿಂದ ಅವರು ಹೊರಗೆ ಕಾಲಿಟ್ಟಿದ್ದು ತೀರಾ ವಿರಳವೇ. ಅವರಿಗೀಗ ೯೦ ವರ್ಷ. ಆದರೂ ಇಲ್ಲಿಯ ತನಕ ಅವರ ಒಂದೇ ಒಂದಾದರೂ ರೆಕಾರ್ಡಿಂಗ್ ದಾಖಲಾಗಿಲ್ಲ. ಬೀಟಲ್ ರಾಕ್’ಸ್ಟಾರ್ ಜಾರ್ಜ್ ಹ್ಯಾರಿಸನ್ ಒಬ್ಬರನ್ನು ಬಿಟ್ಟು ಕಳೆದ ೬೦ ವರ್ಷಗಳಲ್ಲಿ ಅವರು ಸಿತಾರ್ ಅಥವ ಸುರ್ಬಹಾರ್ ನುಡಿಸಿದ್ದನ್ನು ಹೊರಗಿನ ಯಾವ ವ್ಯಕ್ತಿಯೂ ಕೇಳಿಲ್ಲ ಅಥವ ನೋಡಿಲ್ಲ. ೧೯೭೦ರಲ್ಲಿ ಜಾರ್ಜ್ ಹ್ಯಾರಿಸನ್ ಭಾರತಕ್ಕೆ ಬಂದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸ್ವಂತ ಮನವಿಯ ಮೇರೆಗೆ ಹ್ಯಾರಿಸನ್ನರನ್ನು ತನ್ನ ನಿತ್ಯದ ರಿಯಾಜ್ ಸಮಯದಲ್ಲಿ ಹತ್ತಿರ ಕೂರಿಸಿಕೊಂಡಿದ್ದನ್ನು ಬಿಟ್ಟರೆ, ಬೇರೆ ಯಾರೂ ಅವರ ಸಂಗೀತವನ್ನು ಅನುಭವಿಸುವ ಭಾಗ್ಯಶಾಲಿಗಳಾಗಿಲ್ಲ. ಆದರೂ ಅನ್ನಪೂರ್ಣ ದೇವಿಯವರ ಶ್ರೇಷ್ಟತೆಗೆ ಸಾಕ್ಷಿಗಳೆಂಬಂತೆ ಅವರ ಶಿಷ್ಯಂದಿರು ಸಂಗೀತ ಲೋಕವನ್ನು ಆಳಿದ್ದಾರೆ, ಆಳುತ್ತಿದ್ದಾರೆ. ದಿವಂಗತ ಪಂಡಿತ್ ನಿಖಿಲ್ ಬ್ಯಾನರ್ಜಿ,ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ನಿತ್ಯಾನಂದ ಹಳದಿಪುರ, ಬಸಂತ್ ಕಬ್ರಾ, ಅಮಿತ್ ಭಟ್ಟಾಚಾರ್ಯ, ಅಮಿತ್ ರಾಯ್, ರಾಜೀವ್ ತಾರಾನಾಥ್ ಮುಂತಾದ ದಿಗ್ಗಜರು ಅನ್ನಪೂರ್ಣ ದೇವಿಯವರ ಬಳಿ ಕಲಿತವರು. ಇಷ್ಟೇ ಅಲ್ಲದೆ,ಮೇರು ಸಿತಾರ್ ವಾದಕ, ಭಾರತ ಕಂಡ ಅತ್ಯುತ್ತಮ ಸಂಗೀತಗಾರರಲ್ಲೊಬ್ಬರಾದ ಉಸ್ತಾದ್ ವಿಲಾಯತ್ ಖಾನರವರೂ ಅನ್ನಪೂರ್ಣ ದೇವಿಯವರ ಬಳಿ ಕೆಲ ಕಾಲ ಪಾಠ ಹೇಳಿಸಿಕೊಂಡಿದ್ದರೆನ್ನುವ ಪ್ರತೀತಿಯಿದೆ. ಇವೆಲ್ಲವೂ ಅವರ ಸಂಗೀತ ಶ್ರೇಷ್ಟತೆಗೆ ಹಿಡಿದ ಕನ್ನಡಿಗಳು.
ಅನ್ನಪೂರ್ಣ ದೇವಿಯವರ ತಟಸ್ಥ ಭಾವನೆ ಅವರು ಯಾರ ಫೋನ್ ಕರೆಗಳನ್ನೂ ಸ್ವೀಕರಿಸದ ಮಟ್ಟಕ್ಕೆ ವ್ಯಾಪಿಸಿದೆ. ಅವರು ಪತ್ರಿಕೆಗೆ ಒಂದೇ ಒಂದು ಸಂದರ್ಶನವನ್ನು ನೀಡಿದ್ದು, ಅದು ಅವರ ಶಿಷ್ಯಂದಿರ ಮೂಲಕ. ಈ ಲೇಖನಕ್ಕಾಗಿ ಲೇಖಕರನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವ ವಿನಾಯತಿಯನ್ನು ಅನ್ನಪೂರ್ಣ ದೇವಿಯವರು ತೋರಿದರಾದರೂ ಮುಖತಃ ಭೇಟಿಯಾಗುವ ಅವಕಾಶವನ್ನು ಮಾತ್ರ ಕಲ್ಪಿಸಲಿಲ್ಲ. ಅವರ ಮನಸ್ಸನ್ನು ಕಾಡಿದ ಬಹು ವಿಚಾರಗಳನ್ನು, ಅದರಲ್ಲೂ ಪಂಡಿತ್ ರವಿಶಂಕರರು ತಮ್ಮ ಜೀವನ ಚರಿತ್ರೆ ‘ರಾಗಮಾಲಾ’ದಲ್ಲಿ ತಮ್ಮ ಹಾಗೂ ಅವರ ನಡುವಿನ ಮದುವೆ, ಮನಸ್ತಾಪಗಳನ್ನು, ತಮ್ಮ ಒಬ್ಬನೇ ಮಗನಾದ ಶುಭೋನ ಸಾವನ್ನು ಬಿಂಬಿಸಿದ ರೀತಿಯಿಂದ ಅವರು ಅತೀವವಾಗಿ ನೊಂದಿದ್ದರು ಹಾಗೂ ಅವರ ನೋವನ್ನು ಬರಹದಲ್ಲಿ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಅವರು ‘ನನಗೆ, ನನ್ನ ಬಗ್ಗೆ ಹಾಗೂ ನನ್ನ ಮದುವೆಯ ನಂತರದ ಜೀವನದ ಬಗ್ಗೆ ಏನೇನು ಸುಳ್ಳುಗಳನ್ನು ಹೆಣೆಯಲಾಗಿದೆ, ಕಟ್ಟುಕಥೆಗಳನ್ನು ಹಬ್ಬಿಸಲಾಗಿದೆ ಎಂಬುದರ ಬಗ್ಗೆ ಅರಿವಿದೆ! ಎಂದು ಹೇಳುತ್ತಾರೆ.’ಹೆಚ್ಚಾಗಿ ಪಂಡಿತ್’ಜೀ ತಮ್ಮ ವಿವೇಕವನ್ನು ಕಳೆದುಕೊಂಡಿದ್ದಾರೆ ಅಥವ ಅವರ ಮಾನಸಿಕ ಸ್ಥಿಮಿತ ಹದಗೆಟ್ಟಿದೆ ಅಥವ ಅವರೊಬ್ಬ ರೋಗಿಷ್ಟ ಸುಳ್ಳುಗಾರರಾಗಿ ಬದಲಾಗಿದ್ದಾರೆ’ ಎಂದು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ.
ದಕ್ಷಿಣ ಮುಂಬೈನ ಆಕಾಶಗಂಗಾ ಅಪಾರ್ಟಮೆಂಟಿನ ಆರನೇ ಫ್ಲೋರಿನಲ್ಲಿರುವ ಅವರ ಮನೆಯ ಎದುರಿಗೆ ಅವರ ಹೆಸರಿರುವ ನಾಮಫಲಕವಿದೆ. ಅದರ ಮುಂದೆ ಹೀಗೆ ಬರೆದಿದೆ.’ದಯವಿಟ್ಟು ಕರೆಗಂಟೆಯನ್ನು ಮೂರೇ ಸಲ ಒತ್ತಿ.ಯಾರೂ ಉತ್ತರಿಸದಿದ್ದಲ್ಲಿ ನಿಮ್ಮ ಕಾರ್ಡ್ ಅಥವಾ ಪತ್ರವನ್ನು ಬಿಟ್ಟು ತೆರಳಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು.’ನಾನು ಒಂದೇ ಸಲ ಕರೆಗಂಟೆಯನ್ನು ಒತ್ತಿದ್ದು. ಹಸನ್ಮುಖಿಯಾದ ಋಷಿಕುಮಾರ್ ಪಾಂಡ್ಯಾರವರು ಬಾಗಿಲನ್ನು ತೆರೆದು ಸ್ವಾಗತಿಸಿದರು.(ಅವರು ಯಾವಾಗಲೂ ‘ನಗು-ನಗು’ ಎಂದು ಆಮೇಲೆ ಲಿಫ್ಟ್’ಮ್ಯಾನ್ ನನಗೆ ಹೇಳಿದ). ಮಾಂಟ್ರಿಯಲ್ ಕಾಲೇಜಿನಲ್ಲಿ ಮನಃಶಾಸ್ತ್ರ ಅಧ್ಯಾಪಕರಾಗಿದ್ದ ಪಾಂಡ್ಯಾರವರು ಸಂಗೀತವನ್ನು ಕಲಿಯಲೆಂದು ಮುಂಬೈಗೆ ಬಂದಿದ್ದು 1973’ರಲ್ಲಿ. ಅವರು ವಾಪಸ್ ತೆರಳದೆ ಅನ್ನಪೂರ್ಣ ದೇವಿಯವರನ್ನು 1982ರಲ್ಲಿ ಮದುವೆಯಾದರು. ಮನೆಗೆ ಬರುವ ಅಥಿತಿಗಳ್ಯಾರೂ ಮೇನ್ ಡೋರ್’ನಿಂದ ಸ್ವಲ್ಪವೇ ದೂರದಲ್ಲಿರುವ ಪಾಂಡ್ಯಾರವರ ರೂಮ್’ನ ಆಚೆಗೆ ಕಾಲಿಡಲಾರರು.ಆದರೆ ಅವರ ಶಿಷ್ಯರಲ್ಲೊಬ್ಬರಾದ ಅತುಲ್ ಮರ್ಚೆಂಟ್’ರವರು ‘ನಿಷೇಧಿತ ಪ್ರದೇಶ’ಕ್ಕೆ ನನ್ನನ್ನು ಕರೆದೊಯ್ದರು.
ನಾವು ಅಡುಗೆ ಮನೆಯನ್ನು ಪ್ರವೇಶಿಸಿದೆವು. ಅನ್ನಪೂರ್ಣ ದೇವಿಯವರು ಸ್ವತಃ ಅಡುಗೆ ಮಾಡಿ, ಪಾತ್ರೆಗಳನ್ನು ತೊಳೆಯುವ ಸ್ಥಳ ಅದು. ಅವರ ಮನೆಯಲ್ಲಿ ಯಾವುದೇ ಕೆಲಸಗಾರಲಿಲ್ಲ. ಅಡುಗೆ ಮನೆಯಲ್ಲಿ ಬ್ಯುಸಿಯಾಗಿದ್ದರೂ ಅವರ ಕಿವಿ ಸಂಗೀತಕ್ಕೆ ಯಾವಾಗಲೂ ಕಿವುಡಾಗಿಲ್ಲ. ಯಾವ ಶಬ್ಧವೂ ಅವರ ಕಿವಿಯನ್ನು ತಪ್ಪಿಸಲು ಸಾಧ್ಯವೇ ಇಲ್ಲ. “ಒಮ್ಮೆ” ಎನ್ನುತ್ತ ಅತುಲ್’ರವರು ನೆನೆಯುತ್ತಾರೆ. “ಅವರ ಶಿಷ್ಯ,ಸರೋದ್ ವಾದಕ ಬಸಂತ್ ಕಬ್ರಾ, ಬಿಹಾಗ್ ರಾಗವನ್ನು ಅಭ್ಯಸಿಸುತ್ತಿದ್ದರು. ಅವರ ಹತ್ತಿರವೇ ಕುಳಿತಿದ್ದ ನಮಗ್ಯಾರಿಗೂ ಅವರ ವಾದನದಲ್ಲಿ ಯಾವುದೇ ಹುಳುಕುಗಳಿರುವುದು ಗಮನಕ್ಕೆ ಬಂದಿರಲಿಲ್ಲ. ಎಲ್ಲಿಯ ತನಕ ಅಂದರೆ ಅಡುಗೆ ಮನೆಯಿಂದಲೇ ಅಮ್ಮ ಕೂಗಿ ‘ನಿಷಾದ್’ನ ಪಡದಾ ಬೇಸುರ್ ಆಗಿದೆ,ಕೇಳುವುದಿಲ್ಲವೇ ನಿನಗೆ?’ ಎಂದು ಹೇಳುವ ತನಕ. ಅಡುಗೆ ಮನೆಯ ಸಮೀಪದಲ್ಲೇ ಮರದ ಹಲಗೆಯಿಂದ ಒಂದು ವಿಭಜನೆಯನ್ನು ಮಾಡಿದ್ದರು.ಅದು ಅವರ ಪ್ರೀತಿಯ ನಾಯಿ ‘ಮುನ್ನಾ’ಗೋಸ್ಕರ ಮಾಡಿದ್ದು. ಮುನ್ನಾ ಪರಲೋಕ ಸೇರಿ 30 ವರ್ಷಗಳೇ ಸಂದಿವೆ. ಆದರೆ ಮುನ್ನಾನ ಬಗೆಗಿದ್ದ ಅನ್ನಪೂರ್ಣ ದೇವಿಯವರ ಪ್ರೀತಿ ವಾತ್ಸಲ್ಯದ ಕುರುಹುಗಳು ಮಾತ್ರ ಇಂದಿಗೂ ಜೀವಂತವಾಗಿವೆ.
ಡ್ರಾಯಿಂಗ್ ರೂಮ್ ಹಾಗೂ ತಾಲೀಮ್ ರೂಮಿನತ್ತ ನನ್ನನ್ನು ಮುನ್ನಡೆಸುತ್ತ ಎದುರುಗಡೆ ಭದ್ರವಾಗಿ ಮುಚ್ಚಲ್ಪಟ್ಟ ಬಾಗಿಲನ್ನು ತೋರಿಸುತ್ತ ಅತುಲ್ ಹೇಳುತ್ತಾರೆ ‘ಅಮ್ಮ ಧ್ಯಾನಿಸುತ್ತಿದ್ದಾರೆ’ ಎಂದು. ರೂಮ್’ನ ಒಂದು ಗೋಡೆಗೆ ಹಲವು ಸೈಜ್’ನ ಸಿತಾರ್’ಗಳನ್ನು ಚಂದವಾಗಿ ನಿಲ್ಲಿಸಿದ್ದರು.ರೂಮ್’ನ ಮಧ್ಯ ಅಂದವಾದ ಟಾರ್ಪಾಲ್ ಒಂದನ್ನು ಹಾಸಲಾಗಿತ್ತು.’ಇಲ್ಲೇ ದಕ್ಷಿಣ ಮೋಹನ್ ಟಾಗೋರ್,ಹರಿಪ್ರಸಾದ್ ಚೌರಾಸಿಯಾ,ನಿತ್ಯಾನಂದ ಹಳದಿಪುರ,ಆಶಿಶ್ ಖಾನ್,ಬಸಂತ್ ಕಬ್ರಾ ಹಾಗೂ ಅಮ್ಮನ ಉಳಿದ ಎಲ್ಲ ಶಿಷ್ಯಂದಿರು ಕುಳಿತು ಅಮ್ಮನಿಂದ ಪಾಠ ಕಲಿತದ್ದು. ಈ ಬೆತ್ತದ ಕುರ್ಚಿಯಲ್ಲಿ ಅಮ್ಮ ಕುಳಿತು ಪಾಠ ಹೇಳುತ್ತಾರೆ’ ಎಂದು ಅತುಲ್ ಹೇಳುತ್ತಾರೆ. ಆ ಕೋಣೆಯಲ್ಲಿನ ಗಾಳಿಯ ಪ್ರತಿ ಕಣವೂ ವಿಧೇಯ ನಿಶ್ಯಬ್ದ ತಾಳಿರುವುದು ಅಲ್ಲಿ ಕುಳಿತಿರುವ ಯಾರ ಅರಿವಿಗಾದರೂ ಬರದೇ ಇರದು. ಹರಟುವ ಮನಸ್ಸು ಗಾಳಿಯ ಕಣಗಳೊಂದಿಗೇ ಒಂದು ಕ್ಷಣ ಮಂಜುಗಟ್ಟುತ್ತದೆ. ಕೋಣೆಯಲ್ಲಿ ಅವರ ತಂದೆ ಹಾಗೂ ಗುರು, ಅಲ್ಲಾವುದ್ದೀನ್ ಖಾನ್’ರವರ ಹಾಗೂ ಅವರ ಪ್ರಖ್ಯಾತ ಸುರ್ಬಹಾರ್’ನ ಚಿತ್ರ,ಪ್ರತಿಮೆಗಳಿವೆ. ಆದರೆ ನನ್ನ ಗಮನ ಸೆಳೆದದ್ದು ಮಾತ್ರ ಮೂಲೆಯಲ್ಲಿ ಇದ್ದ ಫ್ರೇಮ್ ಹಾಕಲ್ಪಟ್ಟ ಒಂದು ಚಿತ್ರ.’ಶುಭೋ ಸಣ್ಣವನಿದ್ದಾಗ ಬಿಡಿಸಿದ ಚಿತ್ರ ಅದು’ ಎಂದು ಅತುಲ್ ಹೇಳಿದರು. ಆ ಚಿತ್ರ ನೋಡಿದ ಯಾರನ್ನಾದರೂ ಸಮ್ಮೋಹನಗೊಳಿಸುವಂತಿತ್ತು. ಸರಣಿ ಬಾಗಿಲುಗಳು ನಿಮ್ಮನ್ನು ಅದರತ್ತ ಬರ ಮಾಡಿಕೊಳ್ಳುತ್ತಿವೆಯೇನೋ ಎಂದನ್ನಿಸುವಂತಹ ಪರಿಣಾಮಕಾರಿ ಹಾಗೂ ಬೆಚ್ಚಿ ಬೀಳಿಸುವಂತಹ ಚಿತ್ರ ಅದಾಗಿತ್ತು. ನನ್ನ ಭಾವವನ್ನು ತದನಂತರದಲ್ಲಿ ದೇವಿಯವರ ಹಿರಿಯ ಶಿಷ್ಯರೊಬ್ಬರು ಪುಷ್ಠೀಕರಿಸುತ್ತ ‘ಅ ಚಿತ್ರ ನಮ್ಮನ್ನು ಅದರೊಳಕ್ಕೆ ಎಳೆದುಕೊಳ್ಳುತ್ತದೆಯಲ್ಲವೇ?’ ಎಂದರು. ಶುಭೋ,1992 ರಲ್ಲಿ ಮೃತಪಟ್ಟ ಅನ್ನಪೂರ್ಣ ದೇವಿ ಹಾಗೂ ರವಿಶಂಕರ್ ದಂಪತಿಗಳ ಏಕೈಕ ಪುತ್ರ.
ಅನ್ನಪೂರ್ಣ ದೇವಿಯ ಬದುಕು
ಬನಾರಸ್ಸಿನಿಂದ ಸುಮಾರು ೧೬೦ ಮೈಲಿ ದೂರದಲ್ಲಿರುವ ಮೈಹಾರ್ ಗ್ರಾಮದಲ್ಲಿ ಕುಳಿತು ಬಾಲಕ ಅಲಿ ಅಕ್ಬರರು ಸರೋದ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ತಂಗಿ ಅನ್ನಪೂರ್ಣ ಹೊರಗಡೆ ಕುಂಟೆಬಿಲ್ಲೆ ಆಡುತ್ತಿದ್ದವಳು ಅಲಿ ಅಕ್ಬರರ ವಾದನವನ್ನು ಕೇಳುತ್ತ ಇದ್ದಕ್ಕಿದ್ದಂತೆ ತಿರುಗಿ ‘ಅಣ್ಣ,ಅಪ್ಪ ಹೇಳಿಕೊಟ್ಟಿದ್ದು ಹಾಗಲ್ಲ,ಹೀಗೆ’ ಎಂದು ಅಪ್ಪನು ಅಣ್ಣನಿಗೆ ಹೇಳಿಕೊಟ್ಟಿದ್ದ ಪಾಠಗಳನ್ನು ತಪ್ಪಿಲ್ಲದೆ ನಿರರ್ಗಳವಾಗಿ ಹಾಡಿ ತೋರಿಸುತ್ತ ಅಣ್ಣನನ್ನು ತಿದ್ದುತ್ತಾಳೆ. ಆದರೆ ಅನ್ನಪೂರ್ಣಳಿಗೆ ಸಂಗೀತ ಪಾಠವೇ ಆಗಿರಲಿಲ್ಲ! ತಮ್ಮ ಹಿರಿಯ ಮಗಳಿಗೆ ಅಲ್ಲಾವುದ್ದೀನ್ ಖಾನರು ಸಂಗೀತ ಶಿಕ್ಷಣವನ್ನು ನೀಡಿದ್ದರು. ಆದರೆ ಅವಳ ಮದುವೆಯಾದ ಬಳಿಕ ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಲ್ಲಿ ಅದುದರಿಂದ ಸಾಕಷ್ಟು ತೊಂದರೆಯುಂಟಾಗಿತ್ತು. ಆದ್ದರಿಂದ ಅವರು ಮತ್ತೆ ಅದೇ ತಪ್ಪನ್ನು ಮಾಡಲು ಸಿದ್ಧರಿರಲಿಲ್ಲ.ತನ್ಮಯಳಾಗಿ ಹಾಡುತ್ತ ನಿಂತಿದ್ದ ಅನ್ನಪೂರ್ಣಳಿಗೆ ತಂದೆ ಅಲ್ಲಾವುದ್ದಿನರು ಬಂದಿದ್ದೂ ತಿಳಿಯಲಿಲ್ಲ. “ಅವರು ಬಂದು ನನ್ನನ್ನು ನೋಡುತ್ತ ನಿಂತದ್ದು ನನಗೆ ತಿಳಿಯಲೇ ಇಲ್ಲ. ಗೊತ್ತಾದ ಕ್ಷಣ ನನಗೆ ಜೀವವೇ ನಡುಗಿಹೋದಂತಾಯಿತು” ಎಂದು ಅನ್ನಪೂರ್ಣ ದೇವಿಯವರು ನೆನೆಯುತ್ತಾರೆ.
“ಆದರೆ ಬಾಬಾ ನನಗೆ ಬೈಯಲಿಲ್ಲ. ನನ್ನಲ್ಲಿದ್ದ ಸಂಗಿತ ಪ್ರೀತಿಯನ್ನು ಅವರಾಗಲೇ ಗ್ರಹಿಸಿದ್ದರು. ನಾನು ಸಂಗೀತವನ್ನು ಪ್ರೀತಿಸುತ್ತೇನೆ ಹಾಗೂ ನನ್ನಲ್ಲಿ ಆ ಸಾಮರ್ಥ್ಯವಿದೆಯೆಂದು ಅವರಿಗೆ ಖಾತ್ರಿಯಾಗಿತ್ತು. ಹೀಗೆ ನನ್ನ ತಾಲೀಮು ಪ್ರಾರಂಭವಾಯಿತು” ಎಂದು ದೇವಿಯವರು ನೆನೆಯುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ ಕಲಿಸುವ ಹಾಗೆ ದ್ರುಪದ್ ಹಾಡುಗಾರಿಕೆಯೊಂದಿಗೆ ಅನ್ನಪೂರ್ಣಳ ಕಟ್ಟುನಿಟ್ಟಿನ ಅಭ್ಯಾಸ ಪ್ರಾರಂಭವಾಯಿತು.ಅಮೇಲೆ ಅವರಿಗೆ ಸಿತಾರ್ ಶಿಕ್ಷಣವಾಯಿತು. ಒಂದು ದಿನ ಬಾಬಾರವರು ಅನ್ನಪೂರ್ಣಳಿಗೆ ‘ಸಿತಾರ್ ಬಿಟ್ಟು ಸುರ್ಬಹಾರ್’ನ ಕೈಗೆತ್ತಿಕೊಳ್ಳುತ್ತೀಯಾ?’ ಎಂದು ಕೇಳಿದರು, ಸುರ್ಬಹಾರ್ ಸಿತಾರ್’ನ ಸೋದರ ಸಂಬಂಧಿ. ಗಾತ್ರದಲ್ಲಿ ದೊಡ್ಡದಾದ ಹಾಗೂ ನುಡಿಸಲು ಕಷ್ಟಕರವಾದಂತ ಆದರೆ ಕೊನೆಯಲ್ಲಿ ಹೆಚ್ಚು ಫಲ ಕೊಡಬಲ್ಲಂತಹ ವಾದ್ಯ. ಅನ್ನಪೂರ್ಣ ದೇವಿಯವರು ನೆನೆಯುತ್ತಾರೆ ‘ಬಾಬಾ ಹೇಳಿದರು, ನಾನು ನಿನಗೆ ನನ್ನೆಲ್ಲ ಗುರುವಿದ್ಯೆಯನ್ನು ಧಾರೆಯೆರೆಯುತ್ತೇನೆ. ಯಾಕೆಂದರೆ ನಿನ್ನಲ್ಲಿ ದುರಾಸೆಯಿಲ್ಲ. ಆದರೆ ಕಲಿಯಲು ನಿನ್ನಲ್ಲಿ ಅನಂತವಾದಂತಹ ತಾಳ್ಮೆ ಹಾಗೂ ಮನಶ್ಯಾಂತಿಯಿರಬೇಕು. ನನಗೆ ಅನ್ನಿಸಿದ ಹಾಗೆ ನೀನು ನನ್ನ ವಿದ್ಯೆಯನ್ನು ಕಾಪಾಡುತ್ತೀಯ ಯಾಕೆಂದರೆ ನಿನ್ನಲ್ಲಿ ಸಂಗೀತದ ಬಗ್ಗೆ ಅಂತಹ ಪ್ರೀತಿಯಿದೆ. ಆದರೆ ಅದು ಸಾಧ್ಯವಾಗಬೇಕೆಂದರೆ ನೀನು ಸಿತಾರ್’ನ್ನು ಬಿಡಬೇಕು. ಸಿತಾರ್’ನ್ನು ಕೇವಲ ಸಂಗೀತ ರಸಿಕರಷ್ಟೇ ಅಲ್ಲ, ಸಾಮಾನ್ಯ ಜನರೂ ಮೆಚ್ಚಿಕೊಳ್ಳುತ್ತಾರೆ. ಸಂಗೀತವನ್ನು ಆಳವಾಗಿ ಅರ್ಥ ಮಾಡಿಕೊಳ್ಳಬಲ್ಲ ಸಾಮರ್ಥ್ಯವಿರುವ ಹಾಗೂ ಮನಸ್ಸುತುಂಬಿ ಸಂಗೀತವನ್ನು ಆಸ್ವಾದಿಸಬಲ್ಲಂತ ಕೆಲವೇ ಕೆಲವು ಜನ ಮಾತ್ರ ಸುರ್’ಬಹಾರನ್ನು ಮೆಚ್ಚಿಯಾರು. ಸಾಮಾನ್ಯ ಜನ ನಿನ್ನತ್ತ ಟೊಮ್ಯಾಟೋಗಳನ್ನು ತೂರಬಹುದು. ಈಗ ಹೇಳು ನಿನ್ನ ನಿರ್ಧಾರವನ್ನು’ಎಂದು ಹೇಳಿದರು. ಅನ್ನಪೂರ್ಣ ದೇವಿ ಮೌನವಾಗಿದ್ದರು. ನಂತರ ‘ನಿನ್ನ ಆದೇಶದಂತೆ ನಡೆದುಕೊಳ್ಳುತ್ತೇನೆ’ ಎಂಬ ಸರಳ ಉತ್ತರವನ್ನಿಟ್ಟರು.
ಇದೇ ಸಮಯದಲ್ಲಿ ನೃತ್ಯಗಾರ ಉದಯ್ ಶಂಕರರ ತಮ್ಮ,18 ವರ್ಷದ ರೊಬಿಂದ್ರೋ ಶಂಕರ್ (ರವಿಶಂಕರ್ ಎಂದು ಹೆಸರು ಬದಲಾಯಿಸಿಕೊಂಡಿದ್ದು 1940 ರಲ್ಲಿ) ಸಂಗೀತ ಕಲಿಯಲೆಂದು ಮೈಹಾರ್’ಗೆ ಬಂದರು. ಆಗ ಅನ್ನಪೂರ್ಣ 13 ವರ್ಷದ ನಾಚಿಕೆ ಸ್ವಭಾವದ ಹುಡುಗಿ. ರವಿಶಂಕರ್’ರವರ ಮಾತಿನಲ್ಲಿ ಹೇಳುವುದಾದರೆ ‘ಬಹಳ ಚುರುಕು ಹಾಗೂ ಆಕರ್ಷಣೀಯವಾದ, ಸುಂದರ ಕಣ್ಣುಗಳನ್ನು ಹೊಂದಿದ, ಅಣ್ಣ ಅಲೂ ಭಾಯಿಗಿಂತ ಪ್ರಖರ ಮೈಬಣ್ಣ ಹೊಂದಿದ್ದ ಹುಡುಗಿ’ ಅವರ ಮದುವೆ ಪ್ರೇಮವಿವಾಹವಲ್ಲ. ‘ನಾನು,ತಂದೆ ತಾಯಿಯರಿಂದ ಆಶ್ರಮದಂತಹ ವಾತಾವರಣದಲ್ಲಿ ಸಾಕಲ್ಪಟ್ಟವಳು. ಹಾಗಾಗಿ ಹುಡುಗನೊಬ್ಬನನ್ನು ಪ್ರೀತಿಸುವ ಪ್ರಶ್ನೆಯೇ ಇರಲಿಲ್ಲ. ನಮ್ಮಿಬ್ಬರದು ಖಂಡಿತವಾಗಿಯೂ ಅರೇಂಜ್ಡ್ ಮದುವೆಯಾಗಿತ್ತು’ ಎಂದು ದೇವಿಯವರು ಸ್ಪಷ್ಟಪಡಿಸುತ್ತಾರೆ.
ರವಿಶಂಕರ್ ಕೂಡ ತಮ್ಮ ಆತ್ಮಚರಿತ್ರೆಯಲ್ಲಿ ಸ್ಪಷ್ಟಪಡಿಸುತ್ತಾರೆ ‘ಆಗ ಎಲ್ಲ ಅಂದುಕೊಂಡಂತೆ ನನ್ನ ಹಾಗೂ ಅನ್ನಪೂರ್ಣಳ ನಡುವೆ ಮದುವೆಯ ಮುಂಚೆ ಖಂಡಿತವಾಗಿಯೂ ಯಾವುದೇ ರೀತಿಯ ಪ್ರೇಮವಾಗಲೀ, ರೊಮ್ಯಾನ್ಸ್ ಅಥವಾ ಕಣ್ಣಾಮುಚ್ಚಾಲೆಯಾಗಲೀ ಇರಲಿಲ್ಲ. ಮದುವೆಯ ಮುಂಚೆ ‘ಅವಳು ಒಪ್ಪಿಕೊಂಡಿದ್ದಾಳೆ’ ಎಂದಷ್ಟೇ ನನಗೆ ಹೇಳಿದ್ದರು.ಮೇ 15 1941’ರ ಬೆಳಿಗ್ಗೆ ಅನ್ನಪೂರ್ಣಳನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದರು. ಅಂದು ಸಂಜೆಯೇ ನಮ್ಮಿಬ್ಬರ ಮದುವೆಯಾಯಿತು’
ಸಂಗೀತ ವಿದ್ವಾಂಸರ ಪ್ರಕಾರ ಅನ್ನಪೂರ್ಣ ದೇವಿಯವರು ರವಿಶಂಕರ್ ಹಾಗೂ ಅಲಿ ಅಕ್ಬರರಿಗಿಂತ ಪ್ರತಿಭಾನ್ವಿತ ಸಂಗೀತಗಾರ್ತಿ. ಉಸ್ತಾದ್ ಅಮೀರ್ ಖಾನ್’ರು ಹೇಳುತ್ತಾರೆ ‘ಅನ್ನಪೂರ್ಣ ದೇವಿ ಅಲ್ಲಾವುದ್ದೀನ್ ಖಾನರ ಶೇಕಡ 80ರಷ್ಟು ಪ್ರತಿಭಾನ್ವಿತೆ. ಅವರಿಗೆ ಹೋಲಿಸಿದರೆ ಅಲಿ ಅಕ್ಬರರು ಶೇಕಡ 70 ಹಾಗೂ ರವಿಶಂಕರರು ಶೇಕಡ 40 ರಷ್ಟು ಮಾತ್ರ’ ಎಂದು. ಅಲಿ ಅಕ್ಬರರೂ ಒಮ್ಮೆ ಈ ಮಾತನ್ನು ಅನುಮೋದಿಸುತ್ತ ಹೇಳಿದ್ದರು ‘ರವಿಶಂಕರರನ್ನು, ಪನ್ನಾಲಾಲ್ ಘೋಶ್’ರನ್ನು ಹಾಗೂ ನನ್ನನ್ನು ಒಂದುಕಡೆ ಹಾಕಿ, ಇನ್ನೊಂದು ಕಡೆ ಅನ್ನಪೂರ್ಣ ದೇವಿಯವರನ್ನು ಹಾಕಿ, ಕೊನೆಯಲ್ಲಿ ಅವರೇ ಗೆಲ್ಲುವುದು. ಅವರ ಸಂಗೀತಕ್ಕೇ ತೂಕ ಜಾಸ್ತಿ’
ಅನ್ನಪೂರ್ಣ ದೇವಿಯವರ ಪ್ರಕಾರ ಇದೇ ಅಂಶ ಮುಂದೆ ಅವರ ಹಾಗೂ ರವಿಶಂಕರರ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾಯಿತು.’ನಾನು ಸಂಗೀತ ಕಾರ್ಯಕ್ರಮ ನೀಡಿದಾಗಲೆಲ್ಲ ಜನ ನನ್ನ ವಾದನವನ್ನು ಬಹುವಾಗಿ ಮೆಚ್ಚಿ ಕೊಂಡಾಡುತ್ತಿದ್ದರು. ಇದು ಪಂಡಿತ್’ಜೀ ಅವರಿಗೆ ಸರಿಬರಲಿಲ್ಲ. ನನಗೆ ಕಾರ್ಯಕ್ರಮ ನೀಡುವುದರ ಬಗ್ಗೆ ಅಷ್ಟೇನೂ ಆಸಕ್ತಿಯಿರಲಿಲ್ಲ. ಹಾಗಾಗಿ ಕಛೇರಿ ನೀಡುವುದನ್ನು ಬಿಟ್ಟು ನನ್ನ ಸಾಧನೆಯನ್ನು ಮುಂದುವರೆಸಿದೆ’ ಎಂದು ಹೇಳುತ್ತಾರೆ. ಹೃಷಿಕೇಷ್ ಮುಖರ್ಜಿ ನಿರ್ದೇಶನದ ಪ್ರಖ್ಯಾತ ಚಿತ್ರ ‘ಅಭಿಮಾನ್’ ಕೂಡ ಅನ್ನಪೂರ್ಣ ದೇವಿ ಹಾಗೂ ರವಿಶಂಕರ ದಾಂಪತ್ಯವನ್ನು ಆಧರಿಸಿಯೇ ತೆಗೆದದ್ದು ಎಂಬುವ ಸಂಗತಿಯೇನೂ ಈಗ ರಹಸ್ಯವಾಗಿ ಉಳಿದಿಲ್ಲ. ಆ ಚಿತ್ರದಲ್ಲಿಯೂ ಕೂಡ ಪ್ರಖ್ಯಾತ ಗಾಯಕ (ಅಮಿತಾಭ್ ಬಚ್ಚನ್) ಹಾಗೂ ಅವರ ನಾಚಿಕೆ ಸ್ವಭಾವದ ಹೆಂಡತಿ (ಜಯಾ ಬಚ್ಚನ್) ನಡುವೆ ಇದೇ ಕಾರಣಕ್ಕಾಗಿ ತಿಕ್ಕಾಟವಾಗುವ ಕಥೆಯಿದೆ. ಚಿತ್ರದ ಶೂಟಿಂಗ್’ಗಿಂತ ಮುಂಚೆ ಮುಖರ್ಜಿಯವರು ಅನ್ನಪೂರ್ಣ ದೇವಿಯವರನ್ನು ಸಂಪರ್ಕಿಸಿ ಚರ್ಚೆ ಮಾಡಿ ಅನುಮತಿ ತೆಗೆದುಕೊಂಡಿದ್ದರು.
ಚಿತ್ರದಲ್ಲಿ ದಂಪತಿಗಳಿಬ್ಬರೂ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಂಡು ಸುಖವಾಗಿ ಬಾಳುತ್ತಾರೆ. ಆದರೆ ಅನ್ನಪೂರ್ಣ ದೇವಿ ಹಾಗೂ ರವಿಶಂಕರ ದಾಂಪತ್ಯ ಮಾತ್ರ ಕ್ರಮೇಣ ಮತ್ತಷ್ಟು ಹದಗೆಟ್ಟು ವಿಚ್ಛೇದನದ ದಾರಿ ಹಿಡಿಯಿತು. ವಿವಾಹವನ್ನು ಉಳಿಸಲು ಅನ್ನಪೂರ್ಣ ದೇವಿಯವರು ತಮ್ಮ ತಂದೆಯ ಚಿತ್ರ ಹಾಗೂ ಮಾ ಸರಸ್ವತಿಯ ಪಟದ ಮುಂದೆ ಇನ್ನೆಂದೂ ನಾನು ಸಾರ್ವಜನಿಕ ಕಛೇರಿ ನೀಡಲಾರೆ’ ಎಂಬ ಪ್ರತಿಜ್ಞೆ ಕೈಗೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಹ ನಿಸ್ವಾರ್ಥ ಪ್ರತಿಜ್ಞೆಯೂ ವ್ಯರ್ಥವಾಗಿಹೋಯಿತು.
ಆದರೆ ರವಿಶಂಕರರು ಈ ಪ್ರಕರಣವನ್ನು ಸ್ವಲ್ಪ ಬೇರೆಯ ತರಹ ಹೇಳುತ್ತಾರೆ. ಟೀವಿ ಸಂದರ್ಶನವೊಂದರಲ್ಲಿ ಅವರು ಹೇಳುತ್ತಾರೆ ‘ನಾವಿಬ್ಬರೂ ಒಟ್ಟಿಗಿರುವ ತನಕ ನಾನು ಅನ್ನಪೂರ್ಣ ದೇವಿಯವರನ್ನು ಸಾರ್ವಜನಿಕ ಕಛೇರಿ ನೀಡುವಂತೆ ಒತ್ತಾಯಿಸುತ್ತಿದ್ದೆ. ಆದರೆ ತದನಂತರ ಒಬ್ಬರೇ ಕಛೇರಿ ಕೊಡುವುದನ್ನು ಅವರು ನಿಲ್ಲಿಸಿದರು. ಹೆಚ್ಚಾಗಿ ಅವರಿಗೆ ಒಬ್ಬರೇ ಕಛೇರಿ ಕೊಡುವುದು ಇಷ್ಟವಿರಲಿಲ್ಲ, ನನ್ನೊಂದಿಗೆ ಕೂರಲು ಬಯಸುತ್ತಿದ್ದರು ಅಥವ ಪಬ್ಲಿಕ್’ನ್ನು ಕಂಡರೆ ಅವರಿಗೆ ನರ್ವಸ್ ಆಗುತ್ತಿದ್ದಿರಬೇಕು. ಕಾರಣಗಳೇನೇ ಇರಲಿ, ಸಂಗೀತ ಕಾರ್ಯಕ್ರಮ ನೀಡುವುದನ್ನು ಬಿಟ್ಟಿದ್ದು ಅವರ ಸ್ವಂತ ಇಚ್ಛೆಯೇ ಹೊರತು ಬೇರೇನೂ ಅಲ್ಲ. ಅದು ನಿಜಕ್ಕೂ ದುಃಖಕರ ಯಾಕೆಂದರೆ ಅವರೊಬ್ಬ ಅತ್ಯುತ್ತಮ ಸಂಗೀತಗಾರ್ತಿಯಾಗಿದ್ದರು.’
ರವಿಶಂಕರರ ಶಿಷ್ಯ ಹಾಗೂ ನವಭಾರತ ಟೈಮ್ಸ್’ನೊಂದಿಗೆ ಕಳೆದ 36 ವರ್ಷಗಳಿಂದ ಸಂಗೀತ ವಿಮರ್ಶಕರಾಗಿರುವ ಮದನಲಾಲ್ ವ್ಯಾಸ್’ರವರು ಇನ್ನೊಂದು ದೃಷ್ಟಿಕೋನ ನೀಡುತ್ತಾರೆ. ‘ಕಛೇರಿ ಮುಗಿದ ಮೇಲೆ ಜನರು ಅನ್ನಪೂರ್ಣ ದೇವಿಯವರನ್ನು ಹೆಚ್ಚಾಗಿ ಮುತ್ತಿಕೊಳ್ಳುತ್ತಿದ್ದರು. ಇದು ಪಂಡಿತ್’ಜೀಯವರಿಗೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಯಾವ ದೃಷ್ಟಿಯಲ್ಲೂ ರವಿಶಂಕರರು ದೇವಿಯವರಿಗೆ ಸರಿಸಮಾನರಿರಲಿಲ್ಲ. ಅನ್ನಪೂರ್ಣ ದೇವಿ ಅಸಾಮಾನ್ಯ ಕಲಾವಿದೆಯಾಗಿದ್ದರು. ಅಂತಹ ಕಠಿಣ ಹಾಗೂ ರಾಜಿ ಮಾಡಿಕೊಳ್ಳದ ಸ್ವಭಾವ ಹೊಂದಿದ್ದ ಅಲ್ಲಾವುದ್ದೀನರೇ ಅನ್ನಪೂರ್ಣ ದೇವಿಯವರನ್ನು ಕುರಿತು “ಅವಳು ಮಾ ಸರಸ್ವತಿಯ ಸಾಕ್ಷಾತ್ ಅವತಾರ” ಎಂದು ಬಣ್ಣಿಸಿದ್ದರು. ತಂದೆ ಹಾಗೂ ಗುರುವಿನ ಬಾಯಿಂದ ಅಂತಹ ಮಾತುಗಳು ಬರುತ್ತಿವೆಯೆಂದರೆ ಅದಕ್ಕಿಂದ ಹೆಚ್ಚಿನ ಶ್ಲಾಘನೆ ಇನ್ನೇನು ಬೇಕು?’
‘ದುರಾದೃಷ್ಟವೇನೆಂದರೆ ಜಗತ್ತಿನ ಪಾಲಿಗೆ ಅನ್ನಪೂರ್ಣ ದೇವಿಯವರ ಸಂಗೀತ ಕಳೆದುಹೋಗಿದೆ. ಅವರು ಕಛೇರಿ ನೀಡಿದ್ದನ್ನು ನೋಡಿದ ಬೆರಳಣಿಕೆಯಷ್ಟು ಜನರಿದ್ದಾರೆ. ಅವರ ಒಂದೇ ಒಂದು ರೆಕಾರ್ಡಿಂಗ್ ಲಭ್ಯವಿದೆ. ಅದು ರವಿಶಂಕರ್’ರೊಂದಿಗಿನ ಜುಗಲ್ ಬಂಧಿಯದು. ಅದೂ ಕಾರ್ಯಕ್ರಮದ ಹಾಲ್ ಫುಲ್ಲಾಗಿ ಬಾಗಿಲ ಹೊರಗಿಟ್ಟ ಸ್ಪೀಕರ್’ನಿಂದ ರೆಕಾರ್ಡಿಂಗ್ ಆದದ್ದು. ಸಾರ್ವಜನಿಕ ಜೀವನದಿಂದ ದೂರಾದ ಮೇಲೆ ಅನ್ನಪೂರ್ಣ ದೇವಿಯವರ ವಾದನವನ್ನು ಕೇಳಿದ್ದು ಇಬ್ಬರೇ ವ್ಯಕ್ತಿಗಳು. ಅವರ ಮೊದಲನೇ ಪತಿ ರವಿಶಂಕರ್ ಹಾಗೂ ಎರಡನೇ ಪತಿ ರುಶಿಕುಮಾರ್ ಪಾಂಡ್ಯ(ಇವರು ಈಗಿಲ್ಲ. 2013 ರಲ್ಲಿ ನಿಧನ ಹೊಂದಿದ್ದಾರೆ) ಇವರಿಬ್ಬರನ್ನು ಬಿಟ್ಟರೆ ಇವರ ವಾದನವನ್ನು ಕೇಳುವ ಅದೃಷ್ಟ ಸಿಕ್ಕಿದ್ದು ಬೀಟಲ್ಸ್’ನ ಜಾರ್ಜ್ ಹ್ಯಾರಿಸನ್ನರಿಗೆ ಮಾತ್ರ. ಇದರ ಕುರಿತಾದ ಕಥೆ 1970 ರಷ್ಟು ಹಿಂದಕ್ಕೆ ಹೋಗುತ್ತದೆ. ಜಾರ್ಜ್ ಹ್ಯಾರಿಸನ್ನರು ವಿಶ್ವವಿಖ್ಯಾತ ವೈಯಲಿನ್ ವಾದಕ ಯೆಹೂದಿ ಮೆನ್ಯುಹಿನ್’ರೊಂದಿಗೆ ಭಾರತಕ್ಕೆ ಬಂದಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ‘ನನ್ನಿಂದ ನಿಮಗೇನಾದರೂ ಆಗಬೇಕಿದ್ದಲ್ಲಿ ಹೇಳಿ’ ಎಂದು ವಿನಂತಿಸಿಕೊಂಡರು, ಮೆನ್ಯುಹಿನ್ನರು ಅಸಾಧ್ಯವಾದದ್ದನ್ನು ಕೇಳಲು ಬಯಸಿದ್ದರು. ಅದೇನೆಂದರೆ ಅನ್ನಪೂರ್ಣ ದೇವಿಯವರು ತಮ್ಮ ಸಂಗೀತವನ್ನು ಕೇಳಲು ಇವರಿಗೆ ಅನುಮತಿ ನೀಡಬೇಕೆನ್ನುವುದಾಗಿತ್ತು. ಸಾಕಷ್ಟು ಓಲೈಕೆಯ ನಂತರ ನಿರಾಸಕ್ತ ದೇವಿಯವರು ಅರೆಮನಸ್ಸಿನಿಂದಲೇ ಒಪ್ಪಿದರು ಆದರೆ ವಿಶೇಷ ಪ್ರದರ್ಶನಕ್ಕಲ್ಲ, ಅವರಿಬ್ಬರನ್ನು ತನ್ನ ನಿತ್ಯದ ಸಂಗೀತಾಭ್ಯಾಸದ ಸಮಯದಲ್ಲಿ ಒಂದು ಬಾರಿ ಕೂರಲು ಅವಕಾಶ ನೀಡಿದರಷ್ಟೇ!ಆದರೆ ಅವರು ಅನುಮತಿ ನೀಡಿದ ದಿನದಂದು ಮೆನ್ಯುಹಿನ್ನರು ತಮ್ಮ ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಯಿಂದ ತಮ್ಮ ತಾಯ್ನಾಡಿಗೆ ತೆರಳಬೇಕಾಯಿತು. ಹಾಗಾಗಿ ದೇವಿಯವರ ಸಂಗೀತವನ್ನು ಕೇಳುವ ಅದೃಷ್ಟ ಕೇವಲ ಹ್ಯಾರಿಸನ್ನರಿಗೆ ಮಾತ್ರ ಒದಗಿ ಬಂದಿತು.
(ಇನ್ನು ಅವರ ಹಾಗೂ ರವಿಶಂಕರರ ಮಗ ಶುಭೋನ ದುರಂತ ಕಥೆಯ ಬಗ್ಗೆ,ಅವರ ಹಾಗೂ ರವಿಶಂಕರರ ನಡುವಿನ ಮನಸ್ತಾಪದ ವಿವರಗಳನ್ನು ಹಾಗೂ ಈ ಅಸಮಾನ್ಯ ಸಂಗೀತಗಾರ್ತಿಯ ಸದ್ಯದ ಬದುಕನ್ನು ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ)
2000 ನೇ ಇಸವಿ, ಸೆಪ್ಟೆಂಬರ್ ತಿಂಗಳ “Man’s world “ ಸಂಚಿಕೆಯಿಂದ
ಲೇಖಕರು: ಆಲೀಫ್
ಕನ್ನಡಕ್ಕೆ: ಸಂದೀಪ್ ಹೆಗಡೆ
Facebook ಕಾಮೆಂಟ್ಸ್