ಮಧ್ಯಾಹ್ನದ ಉರಿಬಿಸಿಲು ಇಳಿದು ಸುಂದರ ಸಂಜೆಯ ತಂಪುಗಾಳಿ ಮನಸ್ಸಿಗೆ ಮುದ ನೀಡುವ ಹೊತ್ತಿನಲ್ಲಿ ಅರಳಿ ವಿವಿಧ ಬಣ್ಣಗಳಿಂದ ಗಿಡ ತುಂಬ ಬಿರಿಯುವ ಹೂ ಸಂಜೆ ಮಲ್ಲಿಗೆ. ಕರಾವಳಿಗರು ಅಸ್ಥಾನ ಹೂವು, ಬಯ್ಯಮಲ್ಲಿಗೆ ಎಂದೂ ಕರೆಯುತ್ತಾರೆ. ಹದವಾದ ಕಂಪು,ರಂಗು ರಂಗಾಗಿ ಕಣ್ಮನ ಸೆಳೆಯುವ ಇವುಗಳು ರಾತ್ರಿ ದೇವರ ಪೂಜೆಗೆ ಅತ್ಯಂತ ಪ್ರಶಸ್ತವಾದುವುಗಳೆಂದು ನಂಬಿಕೆ. ಇದು ಸಂಜೆ ಸುಮಾರು ೪ ಗಂಟೆಗೆ ಅರಳುವುದರಿಂದ ಆಂಗ್ಲಭಾಷೆಯಲ್ಲಿ ಫೋರೊ ಕ್ಲಾಕ್ ಪ್ಲಾಂಟ್ ಎಂದು ಕರೆಯುತ್ತಾರೆ.ಆದರೆ ಹೊತ್ತನ್ನಾಧರಿಸದ ಇವು ಉಷ್ಣತೆ ಇಳಿಮುಖವಾದಾಗ ಹೂವರಳಸುತ್ತವೆಯೆಂಬುದಕ್ಕೆ ಮಳೆಗಾಲದಲ್ಲಿ ಬೇಗ ಅರಳುವುದೇ ಸಾಕ್ಷಿ. ದಕ್ಷಿಣ ಅಮೇರಿಕದ ಆಂಡೆಸ್ ಪರ್ವತಶ್ರೇಣಿ ಇದರ ತವರೂರಾಗಿದ್ದರಿಂದ ಇದನ್ನು ಮಾರ್ವೆಲ್ ಆಫ್ ಪೆರು ಎಂದೂ ಗುರುತಿಸುತ್ತಾರೆ. ಮಿರಾಬಿಲಿಸ್ ಜಲಾಪಾ(Mirabilis jalapa) ಸಸ್ಯಶಾಸ್ತ್ರೀಯ ಹೆಸರಾಗಿದ್ದು ಲ್ಯಾಟಿನ್ ಮೂಲದಲ್ಲಿ ಮಿರಾಬಿಲಿಸ್ ಎಂದರೆ ಅದ್ಭುತ ,ಜಲಾಪ ಉತ್ತರ ಅಮೇರಿಕದ ಒಂದು ನಗರವಾಗಿದೆ. ಉಷ್ಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ, ವರ್ಷದ ಎಲ್ಲಾ ಋತುಗಳಲ್ಲೂ ಅದರಲ್ಲೂ ಬೇಸಗೆಯಲ್ಲಿ ತುಂಬ ಹೂಬಿಡುವ ಈ ಸಸ್ಯ ೨೦ರಿಂದ ೮೫ ಸೆಂಟಿಮೀಟರುಗಳಷ್ಟು ಎತ್ತರ ಬೆಳೆಯಬಲ್ಲುದು.
ಒಂದೇ ಗಿಡದಲ್ಲಿ ಬೇರೇಬೇರೆ ಬಣ್ಣದ ಹೂಗಳಂತೆ ಒಂದೆ ಹೂವಿನಲ್ಲಿ ಬೇರೆ ಬೇರೆ ಬಣ್ಣಗಳು ಬೆರೆತಿರುವುದು ಈ ಸಸ್ಯದ ವಿಶೇಷತೆ. ಹಳದಿ, ಕೆಂಪು, ಪಿಂಕ್, ಕೇಸರಿ ಮತ್ತು ಬಿಳಿ ಬಣ್ಣಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೆಲವು ಬೆಳೆದಂತೆ ಹೂವಿನ ಬಣ್ಣ ಬದಲಿಸಬಲ್ಲ ಸಾಮಾರ್ಥ್ಯವನ್ನೂ ಹೊಂದಿವೆ. ಕಹಳೆಯಾಕಾರ ಹೊಂದಿರುವ ಹೂಗಳು ೨ ಇಂಚುಗಳಷ್ಟು ಉದ್ದವಿರುತ್ತವೆ. ಸಂಜೆ ಅರಳಿ ಬೆಳಗ್ಗಿನ ಹೊತ್ತಿಗೆ ಬಾಡುವ ಹೂವಿನ ೫ ಎಸಳುಗಳು ಕೂಡಿಕೊಂಡಂತಿವೆ. ವೈಜ್ಞಾನಿಕವಾಗಿ ಹೂವಿನ ಎಸಳುಗಳು ಇಲ್ಲಿ ಪುಷ್ಪಪಾತ್ರೆಯ ವರ್ಣದ್ರವ್ಯ ರೂಪಾಂತರವಾಗಿದ್ದು ತೊಟ್ಟು ಪುಷ್ಪಪಾತ್ರೆಯಂತೆ ಕಾಣಸಿಗುತ್ತದೆ.ಪರಾಗ ಸ್ಪರ್ಶದ ಮೂಲಕ ಹಬ್ಬುವ ಇದರಲ್ಲಿ ಸಾಧಾರಣ ೮ರಿಂದ ೧೦ ಕೇಸರಯುಕ್ತ ಶಲಾಕೆಗಳಿರುತ್ತವೆ.ಒಂದೊಂದೆ ಕಾಯಿಗಳನ್ನುತ್ಪಾದಿಸುವ ಇವು ಮೊದಲಿಗೆ ಹಸಿರಾಗಿದ್ದು ಕ್ರಮೇಣ ಕರಿಮೆಣಸಿನಂತೆ ದುಂಡಗೆ ಕಪ್ಪಾಗಿ ಕೊನೆಗೆ ಉದುರಿ ಹೋಗುತ್ತವೆ. ಕಾಯಿಬೀಜ ವಿಷಕಾರಕವಾಗಿದ್ದು ಸಂತಾನೋತ್ಪಾದನೆಯ ಇನ್ನೊಂದು ಭಾಗ ಬೇರುಗಳು.
ಸುಮಾರು ೪೫ ಜಾತಿಗಳನ್ನು ಈವರೆಗೆ ವಿಜ್ಞಾನಿಗಳು ಗುರುತಿಸಿದ್ದು ಸಸ್ಯದ ಹೂ,ಎಲೆ, ಬೇರುಗಳು ಔಷಧೀಯ ಗುಣಗಳನ್ನು ಹೊಂದಿವೆ.ಹೂಗಳನ್ನು ಆಹಾರ ವರ್ಣದ್ರವ್ಯವಾಗಿ ಕೇಕು ಹಾಗೂ ವಿವಿಧ ಜೆಲ್ಲಿಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ.ಎಲೆ ಮತ್ತು ಬೇರುಗಳು ಅತ್ಯಂತ ಪ್ರಮುಖವಾಗಿದ್ದು ವಿವಿಧ ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇವು ಶುದ್ಧಕಾರಕ,ಮೂತ್ರವರ್ಧಕ ಹಾಗೂ ನೋವು ಶಮನಕಾರಕಗಳಾಗಿ ಕಾರ್ಯವೆಸಗುತ್ತವೆ. ಎಲೆರಸವನ್ನು ಹಿಂಡಿ ಗಾಯ ಶಮನಕ್ಕೆ ಮತ್ತು ಬೇರಿನ ಕಷಾಯವನ್ನು ಕಾಮೋತ್ತೇಜಕವಾಗಿ ಮನೆಮದ್ದಿನಂತೆ ಹಳ್ಳಿಗಳಲ್ಲಿ ಈಗಲೂ ಬಳಸುತ್ತಾರೆ. ಹಾವಿನ ವಿಷ ತೆಗೆಯುವ ಪ್ರತ್ಯೌಷಧ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರಂತೆ. ಕಾಯಿಗಳು ವಿಷಕಾರಿಯಾಗಿದ್ದರೂ ಸೌಂದರ್ಯ ಸಾಮಾಗ್ರಿ ತಯಾರಿಕೆಯಲ್ಲಿ ಹಾಗೂ ರಾಸಾಯನಿಕ ರಂಗುಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ. ಪರಿಸರ ಶಾಸ್ತ್ರಜ್ಞರು ಕ್ಯಾಡ್ಮಿಯಂ ಲೋಹದಂಶ ಹೆಚ್ಚಿರುವ ಈ ಸಸ್ಯವನ್ನು ಕೆಲವೊಮ್ಮೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೊಚ್ಚಿ ಸೇರಿಸುವ ಸಲಹೆ ನೀಡುತ್ತಾರೆ.
Facebook ಕಾಮೆಂಟ್ಸ್