ಅದೇಕೋ ಗೊತ್ತಿಲ್ಲ. ಈ ಭಾರಿಯ ಕ್ಯಾನ್ಸರ್ ದಿನದಂದು (ಫೆಬ್ರವರಿ ೪) ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಮೂಳೆ ಮಾಂಸದ ತಡಿಕೆಯಾಗಿರುವ ಮಾನವನಿಗೆ ಅದೇಕೆ ಕ್ಯಾನ್ಸರ್ ಎನ್ನುವ ಮಹಾಮಾರಿ ಬರುತ್ತದೆಯೋ ಎಂಬ ಪ್ರಶ್ನೆ ನನ್ನ ಗೊಂದಲಕ್ಕೆ ಕಾರಣವಾಗಿತ್ತು. ಯಾಕಾದ್ರೂ ಈ ರೋಗ ಬರುತ್ತದೆ, ಅದರ ನೋವು ಏನು? ಅದು ಬಂದ್ರೆ ಸಾಯದೇ ಬೇರೆ ದಾರಿಯೇ ಇಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ನನ್ನನ್ನು ತೊಯ್ದು ತೊಪ್ಪೆ ಮಾಡಿತ್ತು. ಕ್ಯಾನ್ಸರ್ ಪೀಡಿತರನ್ನು ಬಹಳ ಹತ್ತಿರದಿಂದ ನೋಡಿದ್ದರಿಂದ ನನ್ನ ಮನಸ್ಸು ಅವರಿಗಾಗಿ ಮಮ್ಮಲ ಮರುಗುತ್ತಿತ್ತು. ಹೊಸ ಆಶಾವಾದಕ್ಕಾಗಿ ಮನಸ್ಸು ಎದುರು ನೋಡುತ್ತಿತ್ತು.
ಕ್ಯಾನ್ಸರ್ ಎಂದರೆ ಸಾಯದೆ ಬೇರೆ ದಾರಿಯೇ ಇಲ್ಲವೇ ಎನ್ನುವ ಪ್ರಶ್ನೆ ಮೂಡಿತ್ತಲ್ಲ? ಆವಾಗಲೇ ನನಗೆ ಲ್ಯಾನ್ಸ್ ಆರ್ಮ್’ಸ್ಟ್ರಾಂಗ್, ಶಾನ್ ಸ್ವಾರ್ನರ್, ಯುವರಾಜ್ ಸಿಂಗ್ ಮುಂತಾದವರೆಲ್ಲಾ ಕಣ್ಣಿಗೆ ಬಿದ್ದಿದ್ದರು. ಕ್ಯಾನ್ಸರ್ ಗೆದ್ದವರ ಅನುಭವಗಳೇನು? ಅವರ ಸ್ಫೂರ್ತಿಯುತ ಮಾತುಗಳೇನು ಎಂಬುದನ್ನು ತಿಳಿಯುವ ಕುತೂಹಲ ಮೂಡಿದ್ದು ಅವಾಗಲೇ.. ತಡ ಮಾಡದೇ ಗೂಗಲ್ ಮಾಡಿದೆ. ಆರ್ಮ್’ಸ್ಟ್ರಾಂಗ್, ಯುವರಾಜ್ ಮುಂತಾದ ಹತ್ತು ಹಲವು ಸೆಲೆಬ್ರಿಟಿಗಳ ಸೆಲೆಬ್ರೆಟಿಗಳ ಮಾತುಗಳು ರಾರಾಜಿಸುತ್ತಿದ್ದವು. ಕ್ಯಾನ್ಸರ್ ಜೊತೆಗಿನ ಮಹಾಯುದ್ದದಲ್ಲಿ ಕಡೇಯವರೆಗೂ ಹೋರಾಡುತ್ತಲೇ ವೀರೋಚಿತವಾಗಿ ಶರಣಾದ ರಾಂಡಿ ಪಾಶ್, ಮಾರ್ಟಿನ್ ಕ್ರೋವ್ ಮುಂತಾದವರ ಕತೆಯೂ ಅಲ್ಲಿ ಗೋಚರಿಸಿತು. ಕೆಲವರಿಗೆ ಕ್ಯಾನ್ಸರ್ ತಗುಲಿತ್ತು ಎನ್ನುವುದು ನನಗೆ ಗೊತ್ತಾಗಿದ್ದು ಆವಾಗಲೇ. ಮತ್ತೆ ಕೆಲವರ ಪರಿ಼ಚಯವೇ ನನಗಿರಲಿಲ್ಲ. ಆದರೆ ಅದ್ಯಾವ ಉತ್ತರವೂ ನನ್ನ ಎಲ್ಲಾ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿಲ್ಲ. ಅರೆ.. ಇವರೆಲ್ಲಾ ಸೆಲೆಬ್ರೆಟಿಗಳು, ಚಿಕಿತ್ಸೆಗೆ ಬೇಕಾದಷ್ಟು ಹಣವಿದೆ, ವಿಶ್ವವಿಖ್ಯಾತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ತಾಕತ್ತಿದೆ. ಒಂದು ಕರೆ ಮಾಡಿದರೆ ಸಾಕು, ಪ್ರಸಿದ್ಧ ಡಾಕ್ಟರುಗಳನ್ನು ಮನೆಗೇ ಕರೆಸಿ ಚಿಕಿತ್ಸೆ ಪಡೆದುಕೊಳ್ಳುವಷ್ಟು ಕೆಪಾಸಿಟಿ ಇದೆ. ಲಕ್ಷಾಂತರ ಜನರ ಹಾರೈಕೆ, ಪ್ರಾರ್ಥನೆಗಳಿವೆ ಎಂದು ಯೋಚಿಸುತ್ತಿರುವಾಗಲೇ ಹೊಸತೊಂದು ಪ್ರಶ್ನೆ ಮೂಡಿತು. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ಈ ಅಸಾಮಾನ್ಯ ಕಾಯಿಲೆಯನ್ನು ಗೆದ್ದವರು ಯಾರೂ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಿರುವಾಗಲೇ ಕಣ್ಣಿಗೆ ಬಿದ್ದಿದ್ದು ಶೃತಿ ಬಿ ಎಸ್ .
ಇವಳ ಬಗ್ಗೆ ನೀವು ತಿಳಿದುಕೊಂಡಿರುತ್ತೀರಾ ಅಂದುಕೊಂಡಿದ್ದೇನೆ. ತಿಳಿದುಕೊಳ್ಳದವರಿಗೆ ಬ್ರೀಫ್ ಇಂಟ್ರೊಡಕ್ಷನ್ ಕೊಡುತ್ತೇನೆ ನೋಡಿ, ಶೃತಿ ಹೊಸನಗರ ತಾಲೂಕಿನ ಬಾಣಿಗ ಗ್ರಾಮದವರು. ತಂದೆ,ತಾಯಿ ಮತ್ತೊಬ್ಬ ತಂಗಿಯನ್ನೊಳಗೊಂಡಿದ್ದ ಚಿಕ್ಕ ಚೊಕ್ಕ ಕುಟುಂಬ ಅವರದ್ದು. ೨೦೦೮ರಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ ಆಗಷ್ಟೇ ಸಾಗರದ ಕಾಲೇಜೊಂದರಲ್ಲಿ ಡಿಪ್ಲೋಮಾ ಕೋರ್ಸಿಗೆ ಸೇರಿಕೊಂಡಿದ್ದಳು ಶೃತಿ.
ಅದು ಹದಿನೆಂಟರ ಹರೆಯ… ಕನಸುಗಳು ಕಣ್ಣು ತೆರೆಯಲು ಪ್ರಾರಂಭಿಸಿದ್ದವಷ್ಟೇ. ತಾನಾಯ್ತು ತನ್ನ ಓದಾಯ್ತು ಎಂಬಂತಿದ್ದಳು ಶೃತಿ. ಆದರೆ ಭವಿಷ್ಯದ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದ ಶೃತಿಗೆ ತನ್ನ ಕನಸಿನ ಗೋಪುರ ಕುಸಿದು ಬೀಳುವಂತಹಾ ಸುದ್ದಿಯೊಂದು ಸಿಕ್ಕಿತು. ಕಾಲಿನಲ್ಲೇನೋ ಹುಣ್ಣಾಗಿ ನಡೆಯಲಾರದಂತಾದ ಶೃತಿಯನ್ನು ನೋಡಿದ ಬಳಿಕ ಡಾಕ್ಟರ್ ಅಂದಿದ್ದು ‘ಆದಷ್ಟು ಬೇಗ ಮಣಿಪಾಲಕ್ಕೆ ಕರೆದುಕೊಂಡು ಹೋಗಿ” ಅಂತ. ಡಾಕ್ಟರ್ರೇ ಅಷ್ಟೊಂದು ಧಾವಂತದಲ್ಲಿ ಹೇಳಿದಾಗ ಇವರ ಗಾಬರಿಯೂ ಹೆಚ್ಚಾಗಿತ್ತು. ಮಣಿಪಾಲದಲ್ಲಿ ಸ್ಕ್ಯಾನಿಂಗ್ ಎಲ್ಲ ಆದ ಬಳಿಕ ಡಾಕ್ಟರ್ ಹೇಳಿದ್ದು “ಆಸ್ಟಿಯೋ ಸರ್ಕೋಮಾ… ಬೋನ್ ಕ್ಯಾನ್ಸರ್”
ತನ್ನದೇ ಕನಸಿನ ಲೋಕದಲ್ಲಿ ತೇಲುತ್ತಿದ್ದ ಶೃತಿಗೆ ಇಂತಹಾ ಒಂದು ಊಹೆಯೂ ಇರಲಿಲ್ಲ. ಯಾರೇ ಆಗಲಿ ಇಚ್ಚೆ ಪಟ್ಟು ರೋಗ ತಗುಲಿಸಿಕೊಳ್ಳುವುದಿಲ್ಲ ಅಥವಾ ರೋಗವೇನು ನಮ್ಮನ್ನು ಹೇಳಿ ಕೇಳಿ ಬರುವುದಿಲ್ಲ. ಅದರಲ್ಲೂ ಕ್ಯಾನ್ಸರ್ ಎಂದು ಗೊತ್ತಾದರೆ ಸಾಕು ರೋಗಿಗಿರುವ ಅರ್ಧ ಜೀವ ಹೆಸರು ಕೇಳುವಷ್ಟರಲ್ಲೇ ಹೋಗಿ ಬಿಡುತ್ತದೆ. ಶೃತಿಯ ಕೇಸೂ ಇದಕ್ಕಿಂತ ತೀರಾ ಭಿನ್ನವಾಗಿರಲಿಲ್ಲ. ಕಾಲಿನಲ್ಲಾದ ಒಂದು ಸಣ್ಣ ಹುಣ್ಣು ತನ್ನನ್ನೇ ನುಂಗಿ ಬಿಡಬಲ್ಲದು ಎನ್ನುವ ಸಣ್ಣ ಸುಳಿವೂ ಆಕೆಗಿರಲಿಲ್ಲ. “ನಾನಿದನ್ನು ಗೆದ್ದೇ ಗೆಲ್ಲುತ್ತೇನೆ” ಎನ್ನುವ ಆತ್ಮವಿಶ್ವಾಸ ಮತ್ತು ಮಗಳನ್ನು ಬದುಕಿಸಿಯೇ ಬದುಕಿಸುತ್ತೇನೆ ಎನ್ನುವ ತಂದೆಯ ಛಲ ಬಿಟ್ಟರೆ ಆಕೆಯ ಬಳಿ ಇನ್ನೇನೂ ಇರಲಿಲ್ಲ. ಕ್ಯಾನ್ಸರ್ ಅಂದ್ರೇನು? ಚಿಕಿತ್ಸೆಯ ವಿಧಾನ ಏನು? ತಗಲುವ ವೆಚ್ಚವೇನು?, ಏನೇನೂ ಗೊತ್ತಿರಲಿಲ್ಲ ಆಕೆಗೆ. ದುರಾದೃಷ್ಟವಶಾತ್ ಆಕೆಯ ಮನೆಯವರ ಬಳಿ ಬೇಕಾಗುವಷ್ಟು ಹಣವೂ ಇರಲಿಲ್ಲ…. ಇನ್ನು ಅಷ್ಟು ಸುಲಭಕ್ಕೆ ಜೀವ ಉಳಿಸಿಕೊಳ್ಳುವ ಮಾತೆಲ್ಲಿಂದ ಬಂತು?
ಆದರೆ ಹೋಪ್ ಎನ್ನುವುದಿದೆಯಲ್ಲಾ? ಜೀವ ರಕ್ಷಕಗಳು ಒಂದೊಂದೇ ಸಾಯುತ್ತಾ ಬಂದರೂ ಆಕೆಯ ಹೋಪ್ ಇನ್ನೂ ಸತ್ತಿರಲಿಲ್ಲ. ದೈಹಿಕವಾಗಿ ನನಗೆ ನೋವು, ಆದರೆ ಮಾನಸಿಕವಾಗಿ ಮನೆಯವರೆಲ್ಲರಿಗೂ ನೋವು, ಆದ್ದರಿಂದ ನಾನು ಗಟ್ಟಿಗೊಂಡರಷ್ಟೇ ಮನೆಯವರು ಗಟ್ಟಿಯಾಗಿರುತ್ತಾರೆಂದು ಸ್ವತಃ ಶೃತಿಯೇ ಧೈರ್ಯ ತಂದುಕೊಂಡಳು. ದೇವರು ದೊಡ್ಡವನು, ಮೊದಲನೇ ಕೀಮೋ ಥೆರಪಿಗೆ ಮುನ್ನವೇ ಚಿಕಿತ್ಸೆಗೆ ಹಣದ ನೆರವು ದೊರೆಯತೊಡಗಿತು. ಆದ್ದರಿಂದ ಮೊದಲ ಕೀಮೋ ನಿರಾತಂಕವಾಗಿ ನಡೆಯಿತು. ಮೊದಲ ಕೀಮೋ ಮುಗಿದು ನಿರಾಳರಾಗುವಂತಿರಲಿಲ್ಲ, ಎರಡನೇ ಕೀಮೋಗೆ ಹಣ ಹೊಂದಿಸಬೇಕಲ್ಲ? ದೇವರು ದೊಡ್ಡವನು ಅಂದಿದ್ದು ಅದಕ್ಕೆಯೇ. ಪ್ರತೀ ಭಾರಿ ಕೀಮೋ ದಿನ ಹತ್ತಿರ ಬರುತ್ತಿದ್ದಂತೆ ಹಣದ ಸಹಾಯವೂ ಬರತೊಡಗಿತು. ಒಟ್ಟಿನಲ್ಲಿ ಕೀಮೋಕ್ಕೆ ತೆರಳುವ ಮುನ್ನವೇ ಹಣ ಹೊಂದಾಣಿಕೆಯಾಗುತ್ತಿತ್ತು.
ಒಂದರ ಮೇಲೊಂದು ಕೀಮೋಗಳು ಅದರ ಮೇಲೊಂದು ಆಪರೇಷನ್ ನಡೆದವು. ಶೃತಿಯ ಅದೃಷ್ಟಕ್ಕೆ ಮಣಿಪಾಲದಲ್ಲಿ ಅತ್ಯುತ್ತಮ ಡಾಕ್ಟರುಗಳೇ ಆಕೆಗೆ ಚಿಕಿತ್ಸೆ ನೀಡಿದರು. ಮೊದಲೇ ಆತ್ಮವಿಶ್ವಾಸದ ಚಿಲುಮೆಯಾಗಿದ್ದ ಈಕೆಯ ಹೋಪ್’ಅನ್ನು ದುಪ್ಪಟ್ಟು ಮಾಡಿದ್ದು ಆ ಮಹನೀಯರುಗಳೇ. ಮತ್ತು ಮಗಳ ಪ್ರತೀ ಕ್ಷಣದ ನೋವಿನಲ್ಲಿ ತಾನೂ ನೊಂದು ಕ್ಷಣ-ಕ್ಷಣವೂ ಶ್ರಮ ಪಟ್ಟ ತಂದೆ. ತಂದೆಯಂತೂ ಸಿಕ್ಕಾಪಟ್ಟೆ ಸ್ಪೋರ್ಟಿವ್, ಮಗಳು ಅದಕ್ಕಿಂತಲೂ ಒಂದು ತೂಕ ಜಾಸ್ತಿ ಸ್ಪೋರ್ಟಿವ್. ಈ ಎಲ್ಲಾ ಹೋರಾಟಗಳ ಫಲವಾಗಿ ಶೃತಿ ಬದುಕುಳಿದಳು. ಎಷ್ಟು ಮಾತ್ರಕ್ಕೂ ಸಾಯದ ಆಕೆಯ ಹೋಪ್’ನ ಮುಂದೆ ಕ್ಯಾನ್ಸರ್ ಮಂಡಿಯೂರಿತು. ಆ ಆರು ತಿಂಗಳ ನಿರಂತರ ಹೋರಾಟ, ಅಸಹನೀಯ ನೋವು ಶೃತಿಯ ಬದುಕಿನ ದಿಕ್ಕನ್ನೇ ಬದಲಿಸಿತು.
ಕ್ಯಾನ್ಸರ್’ನಿಂದ ಗುಣಮುಖವಾದ ಬಳಿಕ ತನ್ನ ಹೋರಾಟದ ಅನುಭವಗಳನ್ನು “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಎನ್ನುವ ಪುಸ್ತಕದಲ್ಲಿ ಸವಿವರವಾಗಿ ಬರೆದುಕೊಂಡಿದ್ದಾಳೆ ಶೃತಿ. ಇದು ಎಷ್ಟು ಚೆನ್ನಾಗಿದೆ ಎಂದರೆ ಓದಲು ಶುರುವಿಟ್ಟರೆ ಓದು ಮುಗಿಯುವವರೆಗೂ ನೀವು ವಿರಮಿಸಲಾರಿರಿ. ಓದು ಮುಗಿಯುವಾಗ ನಿಮ್ಮ ಕಣ್ಣಂಚು ಒದ್ದೆಯಾಗಿರದಿದ್ದರೆ ಮತ್ತೆ ಹೇಳಿ! ಕ್ಯಾನ್ಸರ್ ಪೀಡಿತರು ಮಾತ್ರ ಅಲ್ಲ, ಕ್ಯಾನ್ಸರ್ ಕುರಿತಾದ ಜಾಗೃತಿಗಾಗಿ ಎಲ್ಲರೂ ಓದಲೇಬೇಕಾದ ಪುಸ್ತಕ ಅದು. ಇನ್ನೊಂದು ಖುಷಿಯ ವಿಚಾರ ಏನೆಂದರೆ “ಬದುಕ ಬದಲಿಸಿದ ಆಸ್ಟಿಯೋ ಸರ್ಕೋಮಾ” ಪುಸ್ತಕದ ಇಂಗ್ಲೀಷ್ ಅನುವಾದ ಮುದ್ರಣಕ್ಕೆ ಹೋಗಿದೆ. ಶೃತಿ ಮತ್ತೊಂದು ಹೊಸ ಪುಸ್ತಕದ ರಚನೆಯಲ್ಲಿ ಬ್ಯುಸಿಯಾಗಿದ್ದಾಳೆ.
ನೀವು ಯುವರಾಜ್ ಒಬ್ಬನನ್ನೇ ನೋಡಿ. ಆತನಿಗೆ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾದ ತಕ್ಷಣ ಆತನಿಗೆ ದೂರದ ಅಮೇರಿಕಾದ ಪ್ರಸಿದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು. ಆತನ ಬಳಿ ಬೇಕಾದಷ್ಟು ಹಣವೂ ಇತ್ತು. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆಯಿತ್ತು. ಆತ ಕೇಳಿದ್ದರೆ ವಿಶ್ವದ ಯಾವ ಮೂಲೆಯಿಂದಲೂ ನುರಿತ ವೈದ್ಯರುಗಳನ್ನು ಕರೆಸಬಹುದಿತ್ತು. ಎಲ್ಲವೂ ಇತ್ತು. ಆದರೆ ಶೃತಿಯ ಬಳಿ ಏನಿತ್ತು? ಅಕ್ಷರಶಃ ಏನೂ ಇರಲಿಲ್ಲ ಆತ್ಮವಿಶ್ವಾಸ ಒಂದನ್ನು ಬಿಟ್ಟು. ಕ್ಯಾನ್ಸರ್ ಗೆದ್ದ ಬಳಿಕವೂ ಕ್ರೀಡೆಯಲ್ಲಿ ಯುವರಾಜ್ ಸಾಧನೆ ಮಾಡಿದಂತೆ, ಆರ್ಮ್’ಸ್ಟ್ರಾಂಗ್ ಸೈಕ್ಲಿಂಗ್ ಮಾಡಿದಂತೆ ಶೃತಿ ಮಹಾನ್ ಸಾಧನೆಯನ್ನೇನೂ ಮಾಡಿಲ್ಲ. “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಪುಸ್ತಕದ ಮೂಲಕ ಕ್ಯಾನ್ಸರ್ ಪೀಡಿತರಿಗೆ ಸ್ಪೂರ್ತಿ ತುಂಬಿರುವುದನ್ನು ಬಿಟ್ಟರೆ.! ಎಲ್ಲಾ ಬಿಡಿ, ಒಬ್ಬ ಮನುಷ್ಯನಿಗೆ ಸಾವನ್ನೇ ಗೆಲ್ಲುವುದಕ್ಕಿಂತ ದೊಡ್ಡ ಚಾಲೆಂಜ್ ಇನ್ನೇನಿದೆ? ಅದಕ್ಕಿಂತ ಮಹೋನ್ನತ ಮತ್ತೊಂದು ಸಾಧನೆ ಏನಿದೆ? ಅಲ್ವಾ?
ಈಗ ಹೇಳಿ, ಯುವರಾಜ್ ಸಿಂಗ್, ಆರ್ಮಸ್ಟಾಂಗ್ ಮುಂತಾದವರೆಲ್ಲಾ ಕ್ಯಾನ್ಸರ್ ಪೀಡಿತರಿಗೆ ಐಕಾನ್ ಆಗೋದಾದ್ರೆ, ನಮ್ಮವಳೇ ಆದ ಶೃತಿ ಯಾಕೆ ಐಕಾನ್ ಆಗ್ಬಾರ್ದು? ಶೃತಿಯಂತಹ ಅದೆಷ್ಟೋ ಮಂದಿ ನಮ್ಮ ನಡುವೆಯೇ ಇದ್ದಾರೆ, ಅವರೆಲ್ಲಾ ಯಾಕೆ ನಮಗೆ ಸ್ಪೂರ್ತಿಯಾಗಬಾರದು?
Facebook ಕಾಮೆಂಟ್ಸ್