X

ಶುಭವಾಗಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ….ಆಲ್ ದಿ ಬೆಸ್ಟ್

ನೆನಪಿನ ಲೋಕದಿಂದ ಪ್ರಸ್ತುತದ ಲೋಕಕ್ಕೆ ಬಂದು ಚಿತ್ತದ ತುಂಬೆಲ್ಲ ಆವರಿಸಿಕೊಂಡಿದ್ದು ಅದೇನೋ ಭಯ, ಗಂಭೀರತೆಯ ಭಾವವ ಸೃಷ್ಟಿಸಿದ್ದ ಆ ಹತ್ತನೇ ತರಗತಿಯ ದಿನಗಳು. ಮನದ ತುಂಬೆಲ್ಲ ನಾವು ದೊಡ್ಡವರು ಎಂಬ ಭಾವ ಮೂಡಿ ಯಾರಿಗೂ ಗೊತ್ತಿಲ್ಲದಂತೆ ಮೀಸೆ ಕೆತ್ತಿಕೊಳ್ಳುತ್ತಿದ್ದೆವಲ್ಲ ಆ ದಿನಗಳತ್ತ ಪ್ರಸ್ತುತ ಪ್ರಯಾಣ ಬೆಳೆಸಿತ್ತು.ಇಡೀ ಹೈಸ್ಕೂಲ್’ಗೆ ನಾವೇ ದೊಡ್ಡವರು ಎಂಬ ಅಹಂಕಾರ ಬೇಡವೆಂದರೂ ಆವರಿಸಿಕೊಳ್ಳುತ್ತಿದ್ದ ದಿನಗಳು ಅವು..ಅಪ್ಪ ಕೊಡಿಸಿದ ಹೊಸ ಕೊಡೆ ಸರಿ ಇಲ್ಲ ಎಂದು ಹೊಸ ಸ್ಟೈಲ್’ನ ಕೊಡೆಯನ್ನು ಎಕ್ಸ್ಛೇಂಜ್ ಮಾಡಿಕೊಂಡು ಬಂದು ಅದೇನೋ ಸ್ಟೈಲ್ ಮಾಡುತ್ತ ಹತ್ತನೇ ತರಗತಿಯನ್ನು ಪ್ರಾರಂಭಿಸಿದ್ದೆವಲ್ಲ ಆ ಖುಷಿ ಈಗ ಲಕ್ಷ ಕೊಟ್ಟು ಕೊಂಡುಕೊಂಡ ಬೈಕ್’ನಲ್ಲೂ ಸಿಗುವುದು ಸ್ವಲ್ಪ ಕಷ್ಟವೇ.. ಹತ್ತನೇ ತರಗತಿ ಕಳೆದು ಎಂಟು ವರ್ಷ ಕಳೆದಿರಬಹುದು ಆದರೆ ಅದೇನೋ ಹೊಸತನವನ್ನು ನೀಡಿದ್ದ ಆ ತರಗತಿಯನ್ನು ನೀವು ಮರೆಯುವುದು ಸ್ವಲ್ಪ ಕಷ್ಟವೇ ಸರಿ..ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ ಪ್ರತಿಯೊಬ್ಬನಿಗೂ ಆ ಕನ್ನಡ ಶಾಲೆ ಕಲಿಸಿದ ಅದೆಷ್ಟೋ ಪಾಠಗಳು ಬದುಕಿನ ಪಯಣದಲ್ಲಿ ಬರುವ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಲು ಬಲವಾಗಿ ಸಾಥ್ ನೀಡುತ್ತದೆ..

ಶಾಲೆಯೆಂದರೆ ಅದೇನೋ ಕನಸನ್ನು ನನ್ನೊಳಗೆ ತುಂಬಿದ ಸ್ಥಳ.. ಪ್ರಸ್ತುತವ ಅನುಭವಿಸಿ ನಾಳೆಯ ಮೇಲೆ ಅದೇನೋ ಭರವಸೆಯ ಕಟ್ಟಿಕೊಟ್ಟ ದೇವಸ್ಥಾನ ಅದು.. ಗುಂಪಿನಲ್ಲಿ ಕೂತು ಹರಟೆ ಹೊಡೆಯುತ್ತಾ ಸರ್ ಬಂದ ತಕ್ಷಣ ಥಟ್ಟನೆ ಅದೇನೋ ಗ್ರೂಪ್ ಸ್ಟಡಿ ಮಾಡುವಂತೆ ನಾಟಕವಾಡುವಾಗ ಚೂರೂ ಪಾಪಪ್ರಜ್ಞೆ ಕಾಡಲೇ ಇಲ್ಲ.. “ಅವಳು” ನನ್ನೇ ನೋಡುತ್ತಿದ್ದಾಳೆ ಎಂದು ನನ್ನ ಮೇಲೆ ನಂಗೆ ವಿಪರೀತ ನಂಬಿಕೆ ತುಂಬಿದ್ದು ಅದೇ ಹೈಸ್ಕೂಲ್. ತೋಟದ ಕಳೆ ತೆಗೆಯಲು ಕಳುಹಿಸಿದರೆ ಎಳನೀರ ಕದ್ದು ಕುಡಿಯುತ್ತಿದ್ದೆವಲ್ಲ ಆಗ ಅದೇನೋ ಸಾಧಿಸಿದ ಖುಷಿ ನಮಗೆ. ಅನುಭವಿಸಿದ್ದನ್ನು ಮತ್ತೆ ಮತ್ತೆ ವಿಪರೀತವಾಗಿ ಮಿಸ್ ಮಾಡಿಕೊಂಡ ಕ್ಷಣವೇನಾದರೂ ಇದ್ದರೆ ಅದೇ ಹೈಸ್ಕೂಲ್’ನ ದಿನಗಳು.. ಬೇಡವೆಂದರೂ ಅವಳ ಹುಡುಕುವ ಕಣ್ಣು..ನಗು ಬಾರದಿದ್ದರೂ ಚೂರೂ ಜಾಸ್ತಿ ಎಂಬಂತೆ ನಗುತ್ತಿದ್ದ ಆ ತುಟಿ… ಅದ್ಯಾವುದೋ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡಿ ನಾಟಕ ನೋಡಲು ಬಂದಿದ್ದ ಮುದುಕಪ್ಪನಿಗೆ ಲೈನ್ ಹೊಡೆದಿದ್ದು.. ಆರ್’ಎಸ್’ಎಸ್ ಶಾಖೆಯಿಂದ ತಪ್ಪಿಸಿಕೊಳ್ಳಲು “ನಾವು ಎಸ್ಸೆಸ್ಸೆಲ್ಸಿ” ಎಂಬ ಉತ್ತರ ಕೊಟ್ಟು ಮುಸಿಮುಸಿ ನಗುತ್ತಿದ್ದುದು.. ಆ ಎಸ್ಸೆಸ್ಸೆಲ್ಸಿ ಎಂಬ ಒಂದು ಟ್ರೇಡ್ ಮಾರ್ಕ್’ನಿಂದ ಅದೆಷ್ಟೋ ಕ್ವಾಟ್ಲೆ ಮಾಡಿ ಬಿಸಾಕಿ ಮನೆಯವರೆದುರು ಮಾತ್ರ ಗಂಭೀರ ಪೋಸ್ ಕೊಡುತ್ತಿದ್ದ ನಮಗೆಲ್ಲ ನಾವೇ ಸಾಟಿ..ಅದೇನೋ ನೂರಕ್ಕೆ ನೂರು ಪರ್ಸೆಂಟೇಜ್ ಮಾಡಬೇಕೆಂಬ ನಮ್ಮ ಹೈಸ್ಕೂಲ್’ನ ಆಡಳಿತ ಮಂಡಳಿಯವರ ಆಸೆಗೆ ಅದ್ಯಾವಾಗಲೂ ಜಯವೇ ಸಿಕ್ಕಿರಲಿಲ್ಲ (ನಮ್ಮ ನಂತರದ ಬ್ಯಾಚ್’ನವರೆದ್ದಲ್ಲ ನೂರಕ್ಕೆ ನೂರು ಪರ್ಸೆಂಟೇಜ್ ಮಾಡಿದ್ದಾರೆ ಬಿಡಿ) ನಾವೂ ನಿಮಗೆ ಜಯ ಕೊಡಿಸುವುದಿಲ್ಲ ಎಂದು ತೀರ್ಮಾನಿಸಿದಂತೆ ಇತ್ತು ನಮ್ಮ ಬಿಹೇವಿಯರ್ .ಕೊನೆಗೆ ಆಗಿದ್ದೂ ಅದೇ..

ಆ ಶಾಲೆಯಲ್ಲಿ ಅವಳನ್ನು ಹುಡುಕಿಕೊಂಡು ಅಲೆಯುತ್ತಿದ್ದ ಆ ಪ್ಯಾಸೇಜ್ ಇನ್ನೂ ನೆನಪಿದೆ.. ನಾವಾಡುತ್ತಿದ ಕ್ರಿಕೆಟ್ ಗ್ರೌಂಡ್’ನಲ್ಲಿ ನೆರಳು ನೀಡಿದ್ದ ಆ ಮರ ಇನ್ನೂ ನೆನಪಿದೆ.. ಕೊನೆ ದಿನ ಎಲ್ಲರೂ ಸೇರಿ ಫೋಟೋ ತೆಗೆಸಿಕೊಂಡ ಆ ಜಾಗ ಇನ್ನೂ ನೆನಪಿನಲ್ಲಿ ಹಸಿಯಾಗಿದೆ.. ಚಿತ್ರ ಬಿಡಿಸುವುದನ್ನು ಕಲಿಸಬೇಕಿದ್ದ ಎನ್ ಎಸ್ ಹೆಗಡೆ ಸರ್ ತೋಟದ ಕಳೆ ತೆಗೆಸಿದ್ದು ನೆನಪಿದೆ.. ಪ್ರೀತಿಯಿಂದ ಊಟ ಮಾಡಿ ಬಡಿಸುತ್ತಿದ್ದ ರಾಮಜ್ಜನ ಅಪ್ಪೆಹುಳಿಯ ರುಚಿ ನೆನೆಸಿಕೊಂಡಾಗಲೆಲ್ಲ ಬಾಯಲ್ಲಿ ನೀರುಕ್ಕಿ ಬರುತ್ತದೆ.. ಇನ್’ಷರ್ಟ್ ಮಾಡದಿದ್ದರೆ ಬಸ್ಕಿ ಹೊಡೆಸುತ್ತಿದ್ದ ಎನ್ ಜಿ ಭಟ್ಟರ ಶಿಸ್ತು ಬದುಕಿನಲ್ಲಿ ಅಳವಡಿಸಿಕೊಂಡಾಗ ಅದೇನೋ ಹೆಮ್ಮೆಯ ಖುಷಿಯನ್ನು ನೀಡುತ್ತದೆ.. ಸಂಸ್ಕೃತದ ಸಾರವನ್ನು ಹನಿ ಹನಿಯಾಗಿ ಉಣಬಡಿಸುತ್ತಿದ್ದ ಕೆ ವಿ ಭಟ್ ಸರ್’ರ ಅಪಾರ ಜ್ಞಾನವನ್ನು ಅರಿಯದ ನಮ್ಮ ಸಣ್ಣ ಮನಸ್ಸಿನ ಬಗ್ಗೆ ಅದೇನೋ ಕೋಪ ಮೂಡುತ್ತದೆ.. ಮಧ್ಯಾಹ್ನದ ಮೊದಲನೇ ಪೀರಿಯಡ್ ಆದ ವಿಜ್ಞಾನವನ್ನು ಕೂಡ ನಮಗೆಲ್ಲ ನಿದ್ರೆ ಬರದಂತೆ ಕಲಿಸುತ್ತಿದ್ದ ಬೂದಿಹಾಳ ಸರ್’ರ ಪಾಠ,ಅಪ್ಪಿ ತಪ್ಪಿ ಕಣ್ಮುಚ್ಚಿದರೆ ರಪರಪನೆ ಬಾರಿಸಿ ಎಚ್ಚರಿಸುತ್ತಿದ್ದ ಮೊಗೆರ್ ಸರ್ ಅವರ ಶಿಸ್ತಿನ ಸಮಾಜ ಪಾಠ, ಅರ್ಥವಿಲ್ಲದ ನಮ್ಮ ಇಂಗ್ಲಿಷ್ ಅನ್ನೂ ಹೊಟ್ಟೆಗೆ ಹಾಕ್ಕೊಂಡು ತಿದ್ದಲು ಪ್ರಯತ್ನಿಸುತ್ತಿದ್ದ ರೇಖ ಮೇಡಮ್ ಅವರ ಇಂಗ್ಲಿಷ್ ಪಾಠ, ಗಣಿತವನ್ನು ಬಹಳ ಚಂದವಾಗಿ ಕಲಿಸುತ್ತಾ ನಮ್ಮನ್ನೆಲ್ಲಾ ಸದಾ ನಗಿಸುತ್ತಿದ್ದ ರಾಘವ್ ಸರ್ ಹೀಗೆ ಇವರೆಲ್ಲರ ಪಾಠ ನಮಗೆ ಕೇವಲ ಮಾರ್ಕ್ಸ್ ತಂದುಕೊಡುವ ಪಾಠವಾಗಿರಲಿಲ್ಲ ಬದಲಾಗಿ ಅವರೆಲ್ಲರ ಜೀವನದ ಅನುಭವದ ಪಾಠವಾಗಿತ್ತು…ಮತ್ತೆ ಅದೇ ಡೆಸ್ಕ್’ನಲ್ಲಿ ಹೋಗಿ ಕೂತು ಪಾಠಕೇಳಬೇಕೆಂಬ ಆಸೆ ಕೇವಲ ಆಸೆಯೇ ಸೈ..ನೀವು ಕೂಡ ನಿಮಗೆ ಕಲಿಸಿದ ಆ ಶಿಕ್ಷಕರನ್ನು ನೆನಪಿಸಿಕೊಳ್ಳಿ ಅದೇನೋ ಖುಶಿ ನಿಮ್ಮನ್ನು ಆವರಿಸುತ್ತದೆ…ಕಳೆದುಕೊಳ್ಳುವುದು ಏನೂ ಇಲ್ಲಾ ಆದರೆ ಅದ್ಭುತ ಪ್ರಸ್ತುತದ ನಿರ್ಮಾಣವಂತೂ ಆಗುತ್ತದೆ..ನಾನೋ ಅದೇನೋ ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದೇ ಆದರೆ ಲೆಕ್ಕ ಮಾಡುವ ಇದ್ಯಾವುದೋ ಪ್ರೊಫೆಷನ್’ಗೆ ತಗಲಾಕ್ಕೊಂಡೆ.. ಹಾಗೆ ಜೀವನವನ್ನು ಅನುಭವಿಸಿ ಸಾಗುತ್ತಲಿರಬೇಕು ನಾಳೆಯ ಬಗ್ಗೆ ವಿಪರೀತ ಯೋಚಿಸುತ್ತ ಕುಳಿತರೆ ಅಮೂಲ್ಯವಾದ ಪ್ರಸ್ತುತ ಕಳೆದು ಹೋಗುತ್ತದೆ..

ಇವತ್ತಿನಿಂದ ಹತ್ತನೆಯ ತರಗತಿಯ ಪರೀಕ್ಷೆ ಶುರು.. ಮಕ್ಕಳೇ!!! ಮಾರ್ಕ್ಸು, ಪರ್ಸೆಂಟೇಜ್, ಸೈನ್ಸ್ ಕಾಮರ್ಸ್ ಆರ್ಟ್ಸ್,ಇಂಜಿನೀರಿಂಗ್,ಐಐಟಿ, ಐಐಎಂ ಎಂಬ ಅದೆಷ್ಟೋ ಒತ್ತಡಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ನಿಮ್ಮನ್ನು ನೋಡಿದರೇ ಅಯ್ಯೋ ಅನ್ನಿಸುತ್ತದೆ. ಕಳೆದೊಂದು ವರ್ಷದಿಂದ ಅಪ್ಪ ಅಮ್ಮ ಸಂಬಂಧಿಕರೆಲ್ಲರೂ ನಿಮಗೆ ಅದೇನೋ ಒಂದು ಒತ್ತಡವ ಹಾಕುತ್ತಲೇ ಇದ್ದಾರೆ. ಆದರೆ ಅದೇನೋ ಕನಸು ಹೊತ್ತುಕೊಂಡಿರುವ ನಿಮಗೆ ಅದನ್ನು ಅಪ್ಪನ ಹತ್ತಿರವೋ ಅಮ್ಮನ ಹತ್ತಿರವೋ ಹೇಳಲು ಅದೇನೋ ಅಳುಕು, ಭಯ ಕಾಡುತ್ತಲೇ ಇರುತ್ತದೆ. ಇನ್ನೂ ಪರೀಕ್ಷೆಯನ್ನೇ ಬರೆಯದ ನಿಮ್ಮ ನಾಳೆಯನ್ನು ಅವರಿಗಿಷ್ಟ ಬಂದಂತೆ ನಿರ್ಧರಿಸಿಲಾಗಿರುತ್ತದೆ. ಮಗನೇ/ಮಗಳೇ ನೀನು ಮುಂದೆ ಏನಾಗಬೇಕೆಂದಿದ್ದೀಯಾ?ಏನು ನೀನಿಷ್ಟ ಪಡುವ ವಿಷಯ? ಅದೇನು ನಿನ್ನ ಕನಸು ? ಹೇಳು ಎಂದು ಈಗಿನ ಅದೆಷ್ಟು ತಂದೆ ತಾಯಿಯರು ತಮ್ಮ ಮಗನೋ ಮಗಳನ್ನೋ ಕೂರಿಸಿಕೊಂಡು ಕೇಳುತ್ತಾರೆ? ಅವರ ಇಷ್ಟಗಳಿಗೆ ಬೆಲೆಕೊಡಿ. ಅವರ ಆಸಕ್ತಿಗೆ ಒಂಚೂರು ಬೆಂಬಲ ಕೊಡಿ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಷ್ಟ ಪಡುವ ವಿಷಯವನ್ನು ಕನಿಷ್ಟ ಪಕ್ಷ ಗುರುತಿಸುವ ಕೆಲಸವನ್ನಾದರೂ ಮಾಡಿ. ಇದೇನು ಕಾಲವೋ ನಾ ಅರಿಯೆ ಇಲ್ಲಿ ಆ ಮಕ್ಕಳ ಭವಿಷ್ಯವನ್ನು ಅಪ್ಪನದ್ದೋ ಅಮ್ಮನದ್ದೋ ಕನಸಿಗೆ ಸೀಮಿತಗೊಳಿಸಲಾಗಿದೆ. ಮಾರ್ಕ್ಸು ಪರ್ಸೆಂಟೇಜ್ ಬಿಟ್ಟು ಇಲ್ಲಿ ಬೇರೇನೂ ಇಲ್ಲ ಅಲ್ಲವೇ?

ಪರೀಕ್ಷೆಯನ್ನು ಕೇವಲ ಮಾರ್ಕ್ಸ್’ಗೆ ಸೀಮಿತಗೊಳಿಸದೇ ಅಥವಾ ಒಂದು ವೇಳೆ ಫೇಲ್ ಆದರೆ ಬದುಕೇ ಕೊನೆಯಾಯಿತೆಂದು ಆತುರದ ನಿರ್ಧಾರ ತೆಗೆದುಕೊಳ್ಳುವ ಬದಲು ಧೈರ್ಯವಾಗಿ ಬದುಕನ್ನು ಎದುರಿಸುವುದನ್ನು ಕಲಿಯಬೇಕು. ನಮ್ಮ ಜೀವನದ ಹಾದಿಯಲ್ಲಿ ಸಿಗುವ ಒಂದು ಚಿಕ್ಕ ಭಾಗ ಈ ಪರೀಕ್ಷೆ ಇದನ್ನೂ ಮೀರಿದ್ದು ಎಲ್ಲವನ್ನೂ ಎದುರಿಸುವ ನಿಮ್ಮ ಆತ್ಮಸ್ಥೈರ್ಯ. ನಾಳೆ ನೀವು ಮೂರು ತಾಸಿನಲ್ಲಿ ಬರೆಯುವ ಪರೀಕ್ಷೆ ನಿಮ್ಮ ಜೀವನದ ಒಂದು ಮೆಟ್ಟಿಲು ಅಷ್ಟೇ. ಹತ್ತನೇ ತರಗತಿಯನ್ನು ಕನಿಷ್ಠ ಪಾಸ್ ಮಾಡಲಾಗದ ಅದೆಷ್ಟೋ ಜನ ಸಮಾಜದ ಉನ್ನತ ಸ್ಥಾನ-ಮಾನದಲ್ಲಿಂದು ಇದ್ದಾರೆ. ಒಂದು ಪರೀಕ್ಷೆ ಚೆನ್ನಾಗಿ ಆಗಿಲ್ಲವೆಂದು ಜೀವ ಕಳೆದುಕೊಳ್ಳುವಂತ ನಿರ್ಧಾರ ಮಾಡಬೇಡಿ. ಪರೀಕ್ಷೆಯಲ್ಲಿ ಸೊನ್ನೆ ಸುತ್ತುತ್ತಿದ್ದ ಹುಡುಗನಲ್ಲಿ ಅದ್ಭುತ ಕಲಾವಿದನೇ ಅಡಗಿರಬಹುದು..ಗಣಿತವೆಂದರೆ ಮಾರು ದೂರ ನಿಲ್ಲುವ ಹುಡುಗ ಅದ್ಭುತ ಓಟಗಾರನಾಗಿರಬಹುದು..ನಿಮ್ಮ ಮಗುವನ್ನು ನಿಮ್ಮ ಕನಸುಗಳಲ್ಲಿ ಬಂಧಿಯಾಗಿಸಬೇಡಿ ಪಾಲಕರೇ.. ಅರಳುವ ಹೂವನ್ನು ಚಿವುಟಬೇಡಿ,ನಾಳೆ ಅದು ಅರಳಿ ಸುವಾಸನೆ ನೀಡಬೇಕಲ್ಲವೇ ? ಮಕ್ಕಳನ್ನು ಅವರ ಇಷ್ಟವಾದ ಕ್ಷೇತ್ರಕ್ಕೆ ಹೋಗಲು ಬಿಡಿ ಮತ್ತು ಅವರ ಕೈ ಹಿಡಿದು “ ಮಗಳೇ/ಮಗನೇ ನೀನು ಮುಂದಡಿ ಇಡು ನಿನ್ನ ಕಷ್ಟದಲ್ಲಿ ನಿನ್ನ ಕೈಯನ್ನು ಬಿಗಿಯಾಗಿ ಹಿಡಿದು ಧೈರ್ಯ ತುಂಬುತ್ತೇನೆ, ಖುಷಿಯಲ್ಲಿ ಪಾಲುದಾರನಾಗಿ ಸಂಭ್ರಮಿಸುತ್ತೇನೆ “ ಎಂಬ ಭರವಸೆಯ ನಾಲ್ಕು ಮಾತಾಡಿ, ಅವರಿಗೆ ಅದೇನೋ ಶಕ್ತಿ ಜೊತೆಗಿದ್ದಂತ ಭಾವ ಆವರಿಸುತ್ತದೆ ಮತ್ತು ಭವಿಷ್ಯ ಸ್ಪಷ್ಟವಾಗುತ್ತದೆ. ಅದು ಬಿಟ್ಟು ಸದಾ ಮುಖ ಗಂಟುಹಾಕಿಕೊಂಡು ನೀನು ಹಾಗೆ ಮಾಡು ಹೀಗೆ ಮಾಡು ಎಂದು ಗದರಿಸುವುದರಿಂದ ಏನೂ ಪ್ರಯೋಜನವಿಲ್ಲ…ಪ್ರೀತಿಯಿಂದ ಅವರ ಕನಸಿಗೆ ಬೆನ್ನೆಲುಬಾಗಿ ನೀವು ನಿಂತರೆ ಸಮಾಜದಲ್ಲಿ ನಿಮ್ಮ ಗೌರವ ನಿಮ್ಮ ಮಗ ಅಥವಾ ಮಗಳಿಂದ ಇನ್ನೂ ಹೆಚ್ಚಬಹುದು..ಒತ್ತಡದಿಂದ ಪರೀಕ್ಷೆ ಬರೆಸದೆ ಪ್ರೀತಿಯಿಂದ ಬರೆಸಿ…

ಮಕ್ಕಳೇ ನಿಮಗೆಲ್ಲ ಇಂದಿನಿಂದ ಶುರುವಾಗುವ ಪರೀಕ್ಷೆಗೆ ಆಲ್ ದ ಬೆಸ್ಟ್ … ಖುಷಿಯಾಗಿ ಪರೀಕ್ಷೆ ಬರೆಯಿರಿ..

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post