X

ಮುತ್ತುಗ ಮರದ ಹೂವು – ಬಾನಾಡಿಗಳಿಗೆ ಮೇವು!

Butea Monosperma, ಪಾಲಾಶ, ಮುತ್ತುಗ ಎಂಬ ಹೆಸರಿನ ಈ ಮಧ್ಯಮಗಾತ್ರದ ಅಂಕುಡೊಂಕಿನ ಮರ ಇದೀಗ ಎಲ್ಲೆಡೆ ಹೂ ಬಿಡುವ ಸಿದ್ಧತೆಯಲ್ಲಿದೆ.

ಕರ್ನಾಟಕದ ಅತಿ ಬರಡು ಭೂಮಿಯಾದ ಚಾಮರಾಜ ನಗರದ ಕರಿಮಣ್ಣಿನಲ್ಲಿ, ಮೈಸೂರು ಬೆಂಗಳೂರಿನಂಥ ಬಯಲು ಸೀಮೆಯ ಕೆಮ್ಮಣ್ಣಿನಲ್ಲಿ, ಮಲೆನಾಡಿನ ಜೌಗು ಪ್ರದೇಶಗಳಲ್ಲಿ ಈ ವೃಕ್ಷ ತನ್ನ ದೊಡ್ಡ ತ್ರಿಪರ್ಣ ಎಲೆಗಳನ್ನು ಉದುರಿಸಿ ಕಪ್ಪು ಮೊಗ್ಗುಗಳನ್ನು ಹೊತ್ತು ಅರಳಲು ಸಿದ್ಧವಾಗಿದೆ.

A Clumpse of Butea-mono

ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್‍ನಲ್ಲಿ ಎಲೆರಹಿತ ಮರದಲ್ಲಿ ಮೊಗ್ಗು ಅರಳಿ, ಮಳೆಗಾಲದ ಶುರುವಿನಲ್ಲಿ ಬೀಜ ಬಲಿತು ಸಿದ್ಧವಾಗಿರುತ್ತದೆ. ಆದರೆ ಹವಾಮಾನ ವೈಪರೀತ್ಯ ಮತ್ತು ಒಂದೊಂದು ಪ್ರಾಂತ್ಯದ ಹವಾಮಾನ ಅನುಸಾರ ಈಗೀಗ ಜನವರಿಯಿಂದಲೇ ಹೂ ಅರಳಲು ಶುರುವಾಗುತ್ತಿದೆ. ಅರಸಿನಯುಕ್ತ ಕೆಂಪು ಬಣ್ಣದ ಒಂದೊಂದು ಹೂವೂ ಬೆಂಕಿಯ ನಾಲಗೆಯಂತೆ ಕಾಣುವುದು. ಇಡೀ ಮರ ಒಮ್ಮೆಲೆ ಹೂವು ಬಿಟ್ಟು ಕೆಂಪು ಗೋಲವಾಗಿ ಬಿಡುತ್ತದೆ. ಊರಿಗೆ ಊರೇ ಈ ರೀತಿ ಹೂವು ಬಿಡುವುದರಿಂದ ಇದು “ಅರಣ್ಯ ಜ್ವಾಲೆ” ( flame of forest ) ಯಂತೆ ಕಲ್ಪನಾ ವಿಲಾಸಿಗಳಿಗೆ  ಕಾಣಿಸುವುದು.

ಇನ್ನು ಈ ಮರವಾದರೂ ಮೊದಲೇ ತಿಳಿಸಿದಂತೆ ಯಾವ ವಾತಾವರಣಕ್ಕಾದರೂ ಒಗ್ಗುವ ಮರ. ಹಾಗಾಗಿ ಇದು ವನ ನಿರ್ಮಾಣದಲ್ಲಿ ಅತಿ ಪ್ರಾಮುಖ್ಯತೆ ಹೊಂದಿದೆ. ಬಂಜರು ಭೂಮಿಯಲ್ಲಿ ಇದು ತರಗೆಲೆಯನ್ನು ಉದುರಿಸಿ ಮೇಲ್ಮಣ್ಣನ್ನು ಉತ್ಪಾದಿಸುವಲ್ಲಿ ಸಹಕಾರಿ. ಬೀಜ ಭೂಮಿಯ ಸಂಬಂಧ ಪಡೆದ ಮೂರೇ ತಿಂಗಳಲ್ಲಿ 60ಸೆ.ಮೀ ಆಳಕ್ಕೆ ಬೇರು ಬಿಟ್ಟುಬಿಡುತ್ತದೆ. ಮೂರು ವರ್ಷದಲ್ಲಿ 1.3 ಮೀಟರ್ ಆಳಕ್ಕೆ ಇಳಿಯುತ್ತದೆ. ಮೊದಲು ಬೇರಿನ ಪಂಚಾಂಗ ಆಮೇಲೆ ಹಸುರಿನ ಕಟ್ಟಡ ನಿಧಾನವಾಗಿ ಆಗಸ ಮಾರ್ಗವಾಗಿ ತನ್ನ ದೊಡ್ಡ ತ್ರಿಪರ್ಣ ಎಲೆಯೊಂದಿಗೆ ಬೆಳೆಯಲಾರಂಭಿಸುತ್ತದೆ. ಈ ಎಲೆಯನ್ನು ಯಾವ ಜಾನುವಾರುಗಳೂ ಮೇಯುವುದಿಲ್ಲ. (ಪ್ಲಾಸ್ಟಿಕ್ ಹಾವಳಿ ಶುರುವಾಗುವ ಮೊದಲು ಈ ಎಲೆಯಿಂದ ಹೆಣೆದ ತಟ್ಟೆಗಳು ಊಟಕ್ಕೆ ಇದ್ದದ್ದು ಎಂಬುದನ್ನು ನೆನಪಿಸಿಕೊಳ್ಳಿ.) ಹೀಗೆ ಮೇಲೇರಲಾರಂಭಿಸಿದ ಪಾಲಾಶಕ್ಕೆ ಬಂಜರು ಭೂಮಿಗಳಲ್ಲಿ ಆಗಾಗ ಗೆದ್ದಲು ಬಂದು ಸಾಯುವುದುಂಟು. ಆದರೂ ತಾಯಿ ಬೇರು ಆಳಕ್ಕೆ ಇಳಿದುದರಿಂದ ಮತ್ತೆ ಪುಟಿದೇಳುವುವು. ವಿಚಾರಗಳು, ಚಿಂತನೆಗಳು ಆಳವಾಗಿದ್ದಲ್ಲಿ ಎಂಥವರಾದರೂ ಪುಟಿದೇಳಬಹುದು. ಹೀಗೆ ಪುಟಿದೇಳುವ ಮುತ್ತುಗ ಒಂದು ಪುಟ್ಟ ಮರವಾಗಲು ಏನಿಲ್ಲವಾದರೂ ಕನಿಷ್ಠ ಇಪ್ಪತ್ತು ವರ್ಷ ತೆಗೆದುಕೊಳ್ಳುತ್ತದೆ. ಈ ಇಪ್ಪತ್ತು ವರ್ಷದ ಅವಧಿಯಲ್ಲಿ ಅನೇಕ ಬಾರಿ ಸತ್ತು-ಗೆದ್ದು ಬರುತ್ತದೆ. ಇದನ್ನು ಪುನರ್ಬದುಕು (Die-back) ಎನ್ನುವರು.

ಏತನ್ಮಧ್ಯೆ ಇದರ ಬೇರಿಗೆ ಮುಳ್ಳುಹಂದಿ, ಇಲಿ, ಹೆಗ್ಗಣಗಳಿಂದ ಹಾನಿ ಉಂಟು.  ಜೊತೆಗೆ ಇದರ ಹುಟ್ಟು ಕೆಟ್ಟ ಕಲ್ಲಿನ ಪೆಟ್ಟು ಮಣ್ಣಿನ ಬರಡು ಜಾಗದಲ್ಲಾದರೆ ಮತ್ತಷ್ಟು ಸಾವು ಬದುಕಿನ ಹೋರಾಟ ಉಂಟು. ಇಷ್ಟೆಲ್ಲಾ ಕಷ್ಟದ ನಡುವೆಯೂ ಭೂಮಿಯನ್ನು ಹಸುರು ಮಾಡುವ “ಸಹಿಷ್ಣುತೆ” ಇದಕ್ಕೆ. ಎಂಥಾ ಕಾಡ್ಗಿಚ್ಚು ಬಿದ್ದರೂ ಪ್ರಪ್ರಥಮವಾಗಿ ಮೇಲೇಳುವ ಮರ ಈ ಮುತ್ತುಗ. ಆದ್ದರಿಂದ ನಮ್ಮ ಹೋಮ-ಹವನಗಳಲ್ಲಿ ಈ ಮುತ್ತುಗಕ್ಕೆ ಬಲು ಪ್ರಾಮುಖ್ಯತೆ. ಈ ಮುತ್ತುಗವು “ಅಗ್ನಿ” ಮರಗಳ ಪಟ್ಟಿಗೆ ಸೇರುತ್ತದೆ. ಉಪನಯನ ವಟುವಿಗೂ ಇದೇ ಪಾಲಾಶದ ಕೋಲನ್ನು ಕೊಡುತ್ತಾರೆ ಎಂಬುದನ್ನು ಗಮನಿಸಿ. ಉಪನಯನ ಎಂದರೆ ಹೊಸ ದೃಷ್ಟಿ. ಈ ಹೊಸ ದೃಷ್ಟಿಗೆ ಆಧಾರವಾಗಿ ಮತ್ತೆ ಮತ್ತೆ ಹುಟ್ಟಿಬರುವ ಮುತ್ತುಗದಲ್ಲಿ ಹಲವಷ್ಟು ಉನ್ನತ ಜೀವನ ಸಂದೇಶಗಳನ್ನು ನಾವು ಪಡೆಯಬಹುದು.

ಇಂಥಾ ಮುತ್ತುಗ ಇದೀಗ ಹೂ ಬಿಡುವ ಸಿದ್ಧತೆಯಲ್ಲಿದೆ, ನೀವೆಲ್ಲಾದರು ಕಂಡಿರಾ? ಬರೀ ಹೂವು ನೋಡಿದರೆ ಸಾಲದು, ಮುತ್ತುಗದ ಹೂವಿಗೆ ಬಾನಾಡಿಗಳು ಮುತ್ತಿರುವುದನ್ನು ಕಂಡಿರಾ? ಒಮ್ಮೆ ಕಣ್ತುಂಬ ನೋಡಿ ಜೇನ್ನೊಣಗಳೂ ನಾಚುವಂತೆ ಬಾನಾಡಿಗಳು ಮುತ್ತುಗಕ್ಕೆ ಮುತ್ತುತ್ತವೆ. ಈ ಮುತ್ತುಗದಲ್ಲಿ ಬಾನಾಡಿಗಳ ತುತ್ತಿದೆ!

ಈ ಅರಣ್ಯ ಜ್ವಾಲೆಗೆ ಮುತ್ತಿಕ್ಕುವ ಹಕ್ಕಿಗಳು ಒಂದೇ ಎರಡೇ? ಆ ಸಮಯವೇ ಅಂಥಾದ್ದು. ಬೆಂಕಿ ಇಲ್ಲದೆ ಭೂಮಿ ಬೇಯುವ ಬಿಸಿಲು. ಬಂಜರು ಭೂಮಿಯಲ್ಲಂತೂ ಈ ಮುತ್ತುಗ ಬಿಟ್ಟರೆ ಇನ್ನೊಂದು ಆಹಾರವಿಲ್ಲ ಎನ್ನುವಷ್ಟು ಅಭಾವ. ಹಕ್ಕಿಗಳು ಮಾತ್ರವಲ್ಲದೆ ಅನೇಕ ಕೀಟಗಳೂ  ಈ ಹೂವಿನ ಆಸರೆಯಲ್ಲಿರುತ್ತದೆ. 5-6 ಸೆ.ಮೀ ಉದ್ದದ ಬೆಂಕಿಯ ನಾಲಗೆಯಂಥಾ ಎಸಳುಗಳಿರುವ ಈ ಹೂವಿಗೆ 10 ಕೇಸರಗಳು/ಪುರುಷಾಂಗಗಳು (stamen) ಒಂದು ಶಲಾಕಾಗ್ರ (stigma). ಎಲ್ಲಾ ಹಕ್ಕಿಗಳಿಗೂ ಇದರಲ್ಲಿ ಆಹಾರವಿದೆಯಾದರೂ ಪರಿಣಾಮದಲ್ಲಿ ಆಗುವುದು ಮತ್ತು ಪ್ರಕೃತಿಯ ಮುಖ್ಯ ಉದ್ದೇಶ ಪರಾಗ ಸ್ಪರ್ಶ.

ಗಿಳಿಗಳು :

ನಾನು ಕಂಡಂತೆ ಕೆಂಪು ಕೊರಳಿನ ಗಿಳಿ (Rose-ringed parakeet (Psittacula krameri)), ಕೆಂಪು ತಲೆಯ ಗಿಳಿ (plum-headed parakeet (Psittacula cyanocephala)), ನೀಲಿ ರೆಕ್ಕೆಯ ಗಿಳಿ (Malabar parakeet (Psittacula columboides)), ಚಿಟ್ಟುಗಿಳಿ (( vernal hanging parrot (Loriculus vernalis)). ಈ ನಾಲ್ಕೂ ಪ್ರಭೇದದ ಗಿಳಿಗಳು ಈ ಹೂವಿನ ಎಸಳನ್ನು ಧಾರಾಳವಾಗಿ ತಿನ್ನುತ್ತವೆ. ಗಿಳಿಗಳೊಡನೆ ಎಸಳನ್ನು ತಿನ್ನಲು ಅಳಿಲುಗಳೂ ಬರುತ್ತವೆ. ಏನಿಲ್ಲವೆಂದರೂ 5-6 ಅಳಿಲುಗಳನ್ನು ಮುತ್ತುಗದ ಮರದಲ್ಲಿ ಗಮನಿಸಬಹುದು. ಬಹು ಎಸಳುಗಳಿರುವ ಕಾರಣ ಈ ಹೂವಿನಲ್ಲಿ ಶಲಾಕಾಗ್ರ (stigma) ಅವಿತಿರುತ್ತದೆ. ಬಹುಶಃ ಈ ಗಿಳಿ/ಅಳಿಲುಗಳು ಎಸಳನ್ನು ತೆರವುಗೊಳಿಸುವುದರಿಂದ  ದುಂಬಿಗಳಿಗೆ ಕೆಲಸ ಸುಲಭವಾಗುತ್ತದೆ. ಆ ಮೇಲೆ ಕಾಯಿಯಾಗುತ್ತದೆ. ಮೂರು ಬೆರಳಿನಗಲದ ಐದಿಂಚು ಉದ್ದದ ಚಪ್ಪಟೆ ಕೋಡುಗಳು. ತರಕಾರಿಯಂತೆ ಎಳೆಯದಿರುವಾಗಲೇ ಮತ್ತೊಮ್ಮೆ ಗಿಣಿಗಳಿಗೆ ಆಹಾರವಾಗುತ್ತದೆ.

Plum headed parakeet

Rose ringed parakeet

Rose ringed parakeet

Malabar parakeet

ಮುತ್ತುಗಕ್ಕೆ ಮೈನಾಗಳ (ಗೊರವಂಕ) (common myna (Acridotheres tristis)) ಮುತ್ತು ಸಾಮಾನ್ಯ, ಹಾಗಲ್ಲದೆ ಅಡವಿಗೊರವಗಳು (Jungle myna (Acridotheres fuscus)), ಕರಿತಲೆ ಕಬ್ಬಕ್ಕಿಗಳು (Brahminy starling (Sturnia pagodarum)) ತಂಡೋಪತಂಡವಾಗಿ ಮರದಿಂದ ಮರಕ್ಕೆ ಭೇಟಿಕೊಡುತ್ತವೆ.

common myna

ಇವುಗಳೊಂದಿಗೆ ಬೂದುತಲೆಯ ಕಬ್ಬಕ್ಕಿ (Chestnut-tailed starling or Grey-headed myna (Sturnia malabarica)) ಮತ್ತು ಗುಲಾಬಿ ಕಬ್ಬಕ್ಕಿ (Rosy starling (Pastor roseus)) ಎಂಬ ಎರಡು ಪ್ರಭೇದದ ವಲಸೆ ಗೊರವಂಕಗಳು ಮುತ್ತುಗದ ಆತಿಥ್ಯ ಸ್ವೀಕರಿಸುತ್ತವೆ. ಈ ಮೈನಾಗಳು ಮುತ್ತುಗದ ಮಕರಂದವನ್ನು ಹೀರುತ್ತವೆ ಮತ್ತು ಹೂವಿಗೆ  ಬಾಧಿಸುವ ಕೀಟಗಳನ್ನು ತಿನ್ನುತ್ತವೆ.

Chestnut tailed starling

Rosy starling

ಕೀಟಗಳನ್ನು ಭಕ್ಷಿಸಲು ಎರಡು ತರಹದ ಮರಕುಟಿಕಗಳು Black-rumped flameback (Dinopium benghalense) &  white-naped woodpecker (Chrysocolaptes festivus ) ಬರುವುದನ್ನು ನಾನು ದಾಖಲಿಸಿದ್ದೇನೆ.

Black rumped flameback

ಕುಟ್ರು ಪಕ್ಷಿ ( Barbet ) ಕೂಡಾ ಎಸಳಿನ ಜೊತೆಗೆ ಮಕರಂದ ಹೀರುತ್ತವೆ. ಎಲೆಹಕ್ಕಿಗಳಾದ  ನೀಲಿರೆಕ್ಕೆಯ ಎಲೆಹಕ್ಕಿ Jerdon’s leafbird (Chloropsis jerdoni)  ಮತ್ತು ಹೊನ್ನಹಣೆಯ ಎಲೆಹಕ್ಕಿ (Golden-fronted leafbird (Chloropsis aurifrons)) ಮುತ್ತುಗದ ಮಧುವ ಹೀರಿ ಮತ್ತಿನಲ್ಲಿರುವುವು. ಪರಾಗಸ್ಪರ್ಶಕ್ಕೆ ಹೆಸರುವಾಸಿಯಾದ ಸೂರಕ್ಕಿಗಳು (sunbirds) ಮತ್ತು ಬದನಿಕೆಗಳು (Flower-peckers) ಹೆಚ್ಚಿನ ಸಂಖ್ಯೆಯಲ್ಲಿ ಈ ಮುತ್ತುಗಕ್ಕೆ ಮುತ್ತುತ್ತವೆ. ಮುತ್ತುಗಕ್ಕೆ ಮುತ್ತಿದ ಸೂರಕ್ಕಿಗಳು ಮುತ್ತಿನಂತೆ ಕಂಗೊಳಿಸುತ್ತವೆ.

White cheeked barbet

Purple rumped sunbird

Jerdons leaf bird

ಕೊಕ್ಕರೆಗಳು :  ಕೆಂಬರಲು (Ibis), ಬೆಳ್ಳಕ್ಕಿ (Little egret), ಗೋವಕ್ಕಿ (cattle egret), ಬಕ (Heron). ಇವುಗಳಿಗೆ ಈ ವೃಕ್ಷದೊಂದಿಗೆ ಯಾವುದೇ ನೇರ ಒಡನಾಟವಿಲ್ಲದಿದ್ದರೂ ಮುತ್ತುಗ ಹೂ ಬಿಟ್ಟಾಗ ಮರದಮೇಲೆ ಬಹುಸಂಖೆಯಲ್ಲಿ ಆಶ್ರಯಿಸುವುದನ್ನು  ಕಾಣುತ್ತೇವೆ. ಹೂವನ್ನು ಮುಡಿದು ನಾವು ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವಂತೆ ಕೊಕ್ಕರೆಗಳೂ ತಮ್ಮ ಸೌಂದರ್ಯವನ್ನು ಇಮ್ಮುಡಿಗೊಳಿಸುತ್ತಿವೆ ಎಂದರೆ ತಪ್ಪಾಗಲಾರದು!

Little egret

ಇನ್ನು ಮುತ್ತುಗಕ್ಕೆ ಕಾಗೆಯೂ (crows) ಮಾರು ಹೋಗಿದೆ. ಸಾಮಾನ್ಯವಾಗಿ ಯಾವ ಹೂವಿನ ಹತ್ತಿರಕ್ಕೂ ಬಾರದ ಕಾಗೆ ಮುತ್ತುಗದ ಎಸಳಿನಲ್ಲಿ ತಮ್ಮ ಆಹಾರವನ್ನು ಗುರುತಿಸಿದೆ.

Jungle crow

ಪರೋಪಕಾರಾಯ ಫಲಂತಿ ವೃಕ್ಷಾ

ಪರೋಪಕಾರಾಯ ದುಹಂತಿ ಗಾವಃ

ಪರೋಪಕಾರಾಯ ವಹಂತಿ ನದ್ಯಃ

ಪರೋಪಕಾರಾರ್ಥಯಿದಂ ಶರೀರಂ.

ಎಂಬ ನೀತಿ ವಾಕ್ಯಕ್ಕೊಂದು ವೈಭವದ ದೃಷ್ಟಾಂತವಾಗಿ, ಅತ್ಯಂತ ಸಹನಾಮಯಿಯಾಗಿ ಎದ್ದೇಳುವ ಈ ಮುತ್ತುಗದ ಸೌಂದರ್ಯಕ್ಕೆ, ಆಹಾರಕ್ಕೆ ಸಾಮಾನ್ಯ ಹಕ್ಕಿಗಳೇ ಮರುಳಾಗಿರಲು, ಚಿಂತನಶೀಲನಾದ ಮನುಷ್ಯನು ಹಿಂಬೀಳಲು ಸಾಧ್ಯವೇ? ಹಾಗಾಗಿಯೇ ವೇದೋಪಕ್ರಿಯೆಗಳಿಂದ ತೊಡಗಿ, ದೈನಂದಿನ ಜೀವನದವರೆಗೆ ಮುತ್ತುಗವು ಮಾನ್ಯ ಎಂಬುದರಿಂದ ನಾವು ಹಕ್ಕಿಗಳಿಗಿಂತ ಹಿಂದೆ ಬಿದ್ದಿಲ್ಲ ಎಂದು ಹೆಮ್ಮೆಪಟ್ಟುಕೊಳ್ಳಬಹುದು.

ಇಂಥಾ ಮುತ್ತುಗ ನಿಮ್ಮೂರಿನಲ್ಲಿ ಹೂ ಬಿಟ್ಟಿರಬಹುದು. ಹೂವನ್ನು ನೋಡಿ. ಹೂವಿಗೆ ಬರುವ ಹಕ್ಕಿಗಳನ್ನು ನೋಡಿ ಖುಷಿ ಪಡಿ…

ಚಿತ್ರಗಳು: ಅಭಿಜಿತ್ ಎ.ಪಿ.ಸಿ. , ವಿಜಯಲಕ್ಷ್ಮೀ ರಾವ್, ಶಿವಪ್ರಕಾಶ್ ಅಡವಾನೆ

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post