X

ಊರ್ಣನಾಭನಿಗೊಂದು ನಮಸ್ಕಾರ ಕಾರ್ಯಾಗಾರ

ಸಮಸ್ತ ಜೀವಸಂಕುಲದ ಸ್ಥಿತಿಕರ್ತನಾದ ಪದುಮನಾಭನ ಬಗೆಗೆ ನೀವೆಲ್ಲ ತಿಳಿದಿರುವಿರಿ. ಪದುಮನಾಭನು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುತ್ತಿದ್ದರೆ ಅದಕ್ಕೆ ಮಹತ್ತರ ಸಹಕಾರ ನೀಡುತ್ತಿರುವ ಊರ್ಣನಾಭನ ಬಗ್ಗೆ ನೀವೇನಾದರೂ ತಿಳಿದಿದ್ದೀರಾ? ಹೀಗೊಬ್ಬ ಊರ್ಣನಾಭನಿಲ್ಲದಿರುತ್ತಿದ್ದರೆ ಇಲ್ಲಿ ನಾವು ನೀವೆಲ್ಲ ಮೂಸುವ ಹೂವು, ತಿನ್ನುವ ಹಣ್ಣು ಇರುತ್ತಿರಲಿಲ್ಲ. ಬಹುಶಃ ಹಸು-ಹುಲ್ಲೆಗಳಿಗೆ ಹುಲ್ಲೇ ಇರುತ್ತಿರಲಿಲ್ಲ. ಆ ಪದುಮ ಸಂಭವನ ಸೃಷ್ಟಿಗೆಲ್ಲ ಅಲ್ಲಲ್ಲಿ ಆಹಾರವಿರುತ್ತಿರಲಿಲ್ಲ. ನೆಲ, ಜಲ, ನಭದ ಸಂಬಂಧ ಸ್ವಾರಸ್ಯವನ್ನು ವಿವರಿಸುವ ಮಹತ್ವಪೂರ್ಣ ಸಿದ್ಧಾಂತವಾದ ಪದುಮವೂ ಇರುತ್ತಿರಲಿಲ್ಲ. ಒಟ್ಟಾಗಿ ತ್ರಿಮೂರ್ತಿಗಳ ದಿವ್ಯಾವಿಷ್ಕಾರವಾದ ಊರ್ಣನಾಭನಿಗೊಂದು ದೀರ್ಘದಂಡ ನಮಸ್ಕಾರ ಮಾಡಿ ಮುಂದುವರಿಯುತ್ತೇನೆ.

Neoscana

ಇದ್ಯಾರು ಹೊಸ ದೇವರೆಂದು ಯಾರಾದರೂ ಆಶ್ಚರ್ಯ ಪಡಬೇಕಾಗಿಲ್ಲ. ನಾಭಿಯಿಂದ ಊರ್ಣವನ್ನು ಎಂದರೆ ಉಣ್ಣೆಯಂಥಾ ದಾರವನ್ನು (ಅಥವಾ ರೇಷ್ಮೆಯಂಥಾ ದಾರವನ್ನು) ಸ್ರವಿಸುವ ಜೇಡರ ಹುಳಕ್ಕೆ(ಸಾಲಿಗಕ್ಕೆ) ಇರುವ ಅನ್ವರ್ಥ ನಾಮವಿದು. ನಾಭಿಯಂತೆ ಭಾಸವಾಗುವ ತನ್ನ ಉದರ ಭಾಗದ ಹಿಂತುದಿಯಿಂದ (ತಂತುಕ-spinerets)  ಜೇಡವು ಆರು ಎಳೆಯ ನೂಲನ್ನು ಬಿಟ್ಟು ಸುಂದರ ಬಲೆಯನ್ನು ನೇಯುತ್ತದೆ. ಆ ಬಲೆಯು ಅನೇಕ ಕೀಟಗಳಿಗೆ ಮೃತ್ಯುಕೂಪವಾಗುತ್ತದೆ. ಪ್ರತಿನಿತ್ಯ ಜೇಡವೊಂದು ತನ್ನ ತೂಕದ ಮೂರು ಪಟ್ಟು ಆಹಾರ ತಿಂದು, ಮತ್ತೆಷ್ಟೋ ಹೆಚ್ಚು ಕೀಟಗಳನ್ನು ಬಲೆಯಲ್ಲಿ ಹಿಡಿದು ಆ ಪದುಮನಭನಿಗೆ ಪೂರಕವಾಗಿ ಕೆಲಸ ಮಾಡುತ್ತದೆ.

ನೇಯುವುದೇ ಜೇಡಗಳಿಗೆ ಪ್ರಮುಖ ಕೆಲಸ. ಬಲೆ ಹಾಳಾದರೆ ನಿಮಿಷಗಳಲ್ಲಿ ಅದನ್ನು ಪುನಃ ಅಷ್ಟೇ ಸುಂದರವಾಗಿ ತಯಾರು ಮಾಡುತ್ತದೆ. ಮನುಷ್ಯನಿಗೆ ತನ್ನ ಮೈ ಮುಚ್ಚಲು ಬೇಕಾದ ಬಟ್ಟೆಯನ್ನು ನೇಯಲು ಪ್ರೇರಣೆಕೊಟ್ಟ ಗುರುವೇ ಜೇಡಗಳೆಂದರೆ ಅದು ಅತಿಶಯೋಕ್ತಿಯಲ್ಲ. ಹಾಗಾಗಿಯೇ ನೇಕಾರರಿಗೆ ಇದರದೇ ಹೆಸರು! ಜೇಡರ ಬಲೆಯ ಬೆಲೆ ಮೈ ಬಟ್ಟೆಗಷ್ಟೇ ಸೀಮಿತವಾಗಿಲ್ಲ. ಜೀವನ ಬಟ್ಟೆಗೂ ಪ್ರೇರಣೆಯಾಗಿದೆ. ಜೇಡನೇ ಬೇಡನಿಗೂ ಪ್ರೇರೇಪಣೆ. ಬೇಡನು ಜೇಡದಂತೆ ಬಲೆಬೀಸಿಯಾನು. ಅಂದು ಪ್ರಾಣ , ಪಕ್ಷಿ, ಮೀನುಗಳನ್ನು ಬಲಿ ಪಡೆಯಲು ಬೀಸುತ್ತಿದ್ದ ಬಲೆಯ ವ್ಯಾಪ್ತಿ ಈಗ ವಿಸ್ತರಿಸಿದೆ. ಟಿ.ವಿ, ಮೊಬೈಲು ಮುಂತಾದ ರಂಗುರಂಗಿನ ಬಲೆಗೆ ನಾವು ನೀವೆಲ್ಲರೂ  ಬಿದ್ದಾಗಿದೆ. ಹೀಗೆ ನಾಗರಿಕವಾಗಿ ಜೇಡನು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರಲು ಅತ್ತ ಪ್ರಾಕೃತಿಕವಾಗಿ ಜೇಡಗಳು ಬೇಡವೆಂದೆನುವ ಸ್ಥಿತಿ ನಿರ್ಮಾಣವಾಗಿದೆ. ಜೇಡನೊಳಗಿರುವ ದೇವತ್ವವನ್ನು ತಿಳಿಯುವ ಅನಿವಾರ್ಯತೆ ಮತ್ತೆ ಬಂದಿದೆ.

೧೧೩ ಜೇಡಗಳ ಕುಟುಂಬ ಮತ್ತು ೪೫,೭೦೦ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ.ಆಧುನಿಕ ವಿದ್ಯಾವೈಖರಿಯ ದೃಷ್ಟಿಯಿಂದ ಪ್ರಾಣ, ಪಕ್ಷಿಗಳಿಗೆ ಹೋಲಿಸಿದರೆ ಜೇಡಗಳ ಬಗೆಗೆ ಅಧ್ಯಯನವಾದುದು ತುಂಬಾ ಕಡಿಮೆಯೇ. ಭಾರತದ ಮಟ್ಟಿಗಂತೂ ಜೇಡಗಳಿಗಾಗಿಯೇ ಒಂದು ಕಾರ್ಯಾಗಾರವನ್ನು ಮಾಡಿದ ನಿದರ್ಶನಗಳು ಎರಡೋ ಮೂರೋ! ಕರ್ನಾಟಕದಲ್ಲಂತೂ ಇದುವರೆಗೆ ಯಾರೂ ಮಾಡಿದ್ದಿಲ್ಲ. ಇಂಥಾ ಕೆಲಸಕ್ಕೆ ಇದೇ ಅಕ್ಟೋಬರ 28 ಮತ್ತು 29ರಲ್ಲಿ ಮೈಸೂರಿನ ಕಳಲವಾಡಿಯ ಇಂದ್ರಪ್ರಸ್ಥ ತೋಟ ಮೊದಲ ನಿದರ್ಶನವಾಗಲಿದೆ.

Opdometa

ನನ್ನೊಂದಿಗೆ (ಡಾ.ಅಭಿಜಿತ್ ಎ.ಪಿ.ಸಿ) ನನ್ನ ಗೆಳೆಯರಾದ ವಿಪಿನ್ ಬಾಳಿಗ, ಸುಮುಖ ಜಾವಗಲ್, ಪವನ್ ರಾಮಚಂದ್ರ ಮತ್ತು ಕಿರಣ್ ಬಾಗಡೆ ಕೈ ಜೋಡಿಸಲಿದ್ದಾರೆ. ಕಾರ್ಯಾಗಾರಕ್ಕೆ ಹೆಸರು ಕೊಟ್ಟ ಮೊದಲ ಮೂವತ್ತು ಮಂದಿಗೆ ಮಾತ್ರ ಆದ್ಯತೆ. ನಾವು ಬೀಸಿದ ಬಲೆಗೆ ಬೆಲೆಕೊಟ್ಟು ಮೂವತ್ತು ಮಂದಿ ಬಂದೂ ಆಗಿದೆ. ಅಂದು ಶನಿವಾರ ಹಗಲಿನಲ್ಲಿ, ಮಾತಿನ ಮೂಲಕ ಜೇಡಲೋಕದ ಮಾಹಿತಿಗಳನ್ನು ಹಂಚಿಕೊಳುತ್ತೇವೆ. ಅಂದ ಹಾಗೆ ಹಗಲು ಮತ್ತು ಬೆಳಕು ಹುಲು ಮಾನವರಿಗೆ ವಿಶೇಷ. ಆದರೆ ಈ ಹುಲ್ಲಿಗಾಗಲೀ, ಹುಲ್ಲಿನಷ್ಟು ಮಾತ್ರ ಯೋಗ್ಯತೆಯುಳ್ಳ ಮನುಷ್ಯನಿಗಾಗಲೀ ಇಲ್ಲಿ ವಿಶೇಷವಾದ ಹಗಲಿರುವುದಾದರೆ ಇದಕ್ಕೆ ಕಾರಣವಾದ ರಾತ್ರಿ ಪಾಳಿಯ ಜೇಡಲೋಕದ ವಿಸ್ಮಯವನ್ನು ನೋಡಲು ನಡುರಾತ್ರಿಯವರೆಗೆ ನಾವೆಲ್ಲ ನಿದ್ದೆಗೆಡಲಿದ್ದೇವೆ. ನಮ್ಮ ಇಂದ್ರಪ್ರಸ್ಥ ತೋಟದೊಳಗೊಂದು ಸುತ್ತು ಬರಲಿದ್ದೇವೆ. ಅಯ್ಯೋ ನಾವು ಕಳಕೊಂಡದ್ದು ಎಷ್ಟು? ಎಂದು ಒಂದಷ್ಟು ಜನ ನಿದ್ದೆಗೆಟ್ಟು ಆಲೋಚಿಸಿದರೆ ನಮ್ಮ ಶ್ರಮವಷ್ಟು ಸಾರ್ಥಕವೆಂದುಕೊಂಡಿದ್ದೇವೆ.

ಕೇಳಿದ್ದು ನೋಡಿದ್ದು ಮತ್ತಷ್ಟು ಗಟ್ಟಿಯಾಗುವ ದೃಷ್ಟಿಯಿಂದ ಕಾರ್ಯಕ್ರಮ- ಕಾರ್ಯಾಗಾರ ತಾ 29ರ ಭಾನುವಾರವೂ ಮುಂದುವರಿಯುತ್ತದೆ.

ಮೈಸೂರಿನ ಲಿಂಗಾಂಬುದಿಪಾಳ್ಯದಲ್ಲಿರುವ ಅರಿವು ಶಿಕ್ಷಣಾ ಸಂಸ್ಥೆಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದಲೇ ಶಾಲಾ ಆವರಣದಲ್ಲಿ ಜೇಡಗಳ ಛಾಯಾಚಿತ್ರ ಪ್ರದರ್ಶನವಿರುತ್ತದೆ.( ಭಾನುವಾರ ಬಿಡುವಿಲ್ಲದವರು ಹಿಂದಿನದಿನವೂ ವೀಕ್ಷಿಸಬಹುದು). ಅಲ್ಲಿ ಸುಮಾರು 150 ಪ್ರಭೇದದ ಸಾಲಿಗನ ಚಿತ್ರಗಳು ಬಿತ್ತರಗೊಳ್ಳಲಿವೆ.

Meotipa

ಅದೇ ದಿನ ಸಂಜೆ 5:45ರಿಂದ 8:00 ಗಂಟೆಯವರೆಗೆ ಶಾಲಾ ಆವರಣದಲ್ಲಿ ಜೇಡಗಳ ಬಗೆಗೆ ಸಾರ್ವಜನಿಕ ಉಪನ್ಯಾಸವನ್ನೂ ಏರ್ಪಡಿಸಲಾಗಿದೆ. ಹಿಂದಿನ ದಿನ ಮೂವತ್ತು ಇದ್ದದ್ದು ಮುನ್ನೂರಾಗಬೇಕು, ಮುಂದುವರಿದು ಮೂರುಸಾವಿರವಾಗಬೇಕು… ಸಾವಿರ ಸಾವಿರ ಜೀವಜಗದೊಳೆಲ್ಲೆಲ್ಲೂ ಇರುವ ದೇವರ ಅರಿವು ನಮಗಾಗಬೇಕು. ಜೇಡನ ಹೆಸರಷ್ಟೇ ತಿಳಿದವರು ಆ ಹೆಸರಿಗಿರುವ ಮಹತ್ವವನ್ನು ತಿಳಿದು ಆಶ್ಚರ್ಯ ಪಡುವಂತಾಗಬೇಕು ಎಂಬ ನಮ್ಮ ಆಸೆ, ಆಶಯಗಳು ಈಡೇರುವಂತೆ ಸಾರ್ವಜನಿಕ ಪ್ರೋತ್ಸಾಹ ಸಿಗಲಿ ಎಂದು ಹಾರೈಸುತ್ತೇನೆ.

-ಡಾ. ಅಭಿಜಿತ್ ಎ.ಪಿ.ಸಿ

ಚಿತ್ರಗಳು: ಡಾ. ಅಭಿಜಿತ್ ಎ.ಪಿ.ಸಿ,  ಪವನ್ ರಾಮಚಂದ್ರ.

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post