ಮಳೆ ಸುರಿಯುತ್ತಿದೆ,ಧೋ ಎಂದು. “ಎಂತ ಸಾವು ಮಾರ್ರೆ, ಬಟ್ಟೆ ಸ್ವಲ್ಪಸಾ ಒಣಗುದಿಲ್ಲ”, ಆಚೆ ಮನೆಯವರು ಹೇಳುವುದು ಕೇಳಿತು. ಒಬ್ಬೊಬ್ಬರದ್ದು ಒಂದೊಂದು ಚಿಂತೆ. ನನಗಿನ್ನೂ ಶಾಲೆಯಿಂದ ಮಗ ಯಾಕೆ ಬರಲಿಲ್ಲವೆಂದು ಯೋಚಿಸಿ ತಲೆ ಕೆಡುತ್ತಿದೆ.ಇವರಿಗೋ, ಇವರ ಲೋಕವೇ ಆಯ್ತು. ಒಮ್ಮೆಯಾದರೂ ಮಗನ ಬಗ್ಗೆ ತಲೆಕೆಡಿಸಿಕೊಂಡದ್ದು ಇದೆಯೇ? ಅವನ ರಿಸಲ್ಟ್ ಬಂದದ್ದೂ ಇವರಿಗೆ ಗೊತ್ತಿರುವುದಿಲ್ಲ. ‘ಎಲ್ಲಾ ನನ್ನ ಕರ್ಮ!‘ ಹಣೆ ಚಚ್ಚಿಕೊಂಡು ಇವರಿಗೆ ಪುನಃ ಕಾಲ್ ಮಾಡಿದೆ,ಈ ಸಲವಾದರೂ ಕಾಲ್ ರಿಸೀವ್ ಮಾಡಲಿ ಎಂದುಕೊಳ್ಳುತ್ತಾ. “ಹಲೋ ಭೂಮಿ, ಇಶಾನ್ ನನ್ ಜೊತೆ ಇದ್ದಾನೆ” ಎಂದಿದ್ದು ಕೇಳಿಸಿತು. ನಿರುಮ್ಮಳವೆನಿಸಿದರೂ ವಿಷಯ ತಿಳಿಸುವಷ್ಟು ಜವಾಬ್ದಾರಿ ಇಲ್ಲವಲ್ಲ ಎಂದು ಕೋಪ ಬಂತು. ಮನೆಗೆ ಬರಲಿ ನೋಡಿಕೊಳ್ಳುತ್ತೇನೆ ಎನ್ನುತ್ತಾ ಅಡುಗೆ ಮನೆಗೆ ನಡೆದೆ.
ಹತ್ತು ನಿಮಿಷ ಮೌನದ ಬಳಿಕ “ಏನಾಯ್ತು ಭೂಮಿ?” ಎಂದು ಇವರಂದಾಗ “ಏನಿಲ್ಲ ಬಿಡಿ” ಎಂದು ಸುಮ್ಮನಾದೆ. ಮನದೊಳಗಿನ ಜ್ವಾಲಾಮುಖಿ ಸಿಡಿಯಲು ಸಿದ್ಧವಾಗಿತ್ತು. “ಇಲ್ಲ, ಯಾಕೆ ಸುಮ್ಮನಿದ್ದೀಯಾ?” ಎಂದಿದ್ದೇ ತಡ ಸ್ಫೋಟಗೊಂಡಿತು ಅದು. “ಸ್ವಲ್ಪವಾದ್ರೂ ಜವಾಬ್ದಾರಿ ಇದ್ಯಾ ನಿಮ್ಗೆ? ಯಾವಾಗ್ಲೂ ಆಫೀಸು ಅಂತಾ ಇರ್ತೀರಲ್ಲಾ,ಹೆಂಡತಿ ಮಗ ಅನ್ನೋರೂ ಇದ್ದಾರೆ ಅಂತ ನೆನ್ಪಿದ್ಯಾ? ಗಂಡನಿಗೂ ಕರ್ತವ್ಯ ಅನ್ನೋದು ಇರತ್ತೆ.” ಎನ್ನುವುದರಿಂದ ಮೊದಲುಗೊಂಡ ನನ್ನ ಪ್ರಲಾಪ ಆಗ ಸುರಿದ ಮಳೆಯಂತೆಯೇ ಧೋ ಎನ್ನತೊಡಗಿತು. ಇವರ ಮೌನ ಅದಕ್ಕೆ ಇನ್ನಷ್ಟು ಕುಮ್ಮಕ್ಕು ಕೊಟ್ಟಿತು. ಹೇಳುವುದೆಲ್ಲಾ ಹೇಳಿ ಮುಗಿಸಿದ ಮೇಲೆ ಮನ ಖಾಲಿಯಾದಂತೆನಿಸಿ ಹಾಯೆನಿಸಿತು. ಹಾಸಿಗೆ ಮೇಲೆ ಬಿದ್ದವಳಿಗೆ ನಿದ್ದೆ ಹತ್ತಿದ್ದೂ ತಿಳಿಯಲಿಲ್ಲ.
ಮರುದಿನ ಸಂಜೆ ವೆಂಕಟೇಶ್ವರ ಗುಡಿಗೆ ಸುತ್ತು ಹೊಡೆದು ಗಂಡ ಮಗ ಇಬ್ಬರ ಪರವಾಗಿಯೂ ದೇವರಲ್ಲಿ ಬೇಡಿಕೊಂಡು ಹೊರಗೆ ಬರುತ್ತಿದ್ದೇನೆ, ಇಬ್ಬರೂ ಅದರ ಬಳಿಯೇ ಪ್ರತ್ಯಕ್ಷ! ಇವರು ಯಾಕಿಲ್ಲಿ ಬಂದರಪ್ಪಾ ಅಂದುಕೊಳ್ಳುತ್ತಿರುವಂತೆಯೇ ಇಬ್ಬರೂ ಯಾವುದೋ ಕಟ್ಟಡದೊಳಕ್ಕೆ ನುಗ್ಗಿದ್ದು ಕಾಣಿಸಿತು.ಬಹುಶಃ ನನ್ನನ್ನು ನೋಡಿಲ್ಲವೇನೋ! ನಾನವರನ್ನು ಹಿಂಬಾಲಿಸಿದೆ.ಬೋರ್ಡು ನೋಡಿದರೆ Mytri Revival Centre ಎಂದಿದೆ. ಇದು ಡ್ರಗ್’ನ ಚಟ ಬಿಡಿಸುವ ಕೇಂದ್ರವಲ್ಲವೇ? ಒಮ್ಮೆಲೇ ಮೈ ನಡುಗಿತು. ಓಡಿ ಹೋಗಿ ಇವರನ್ನು ಹಿಡಿದು “ಏನಾಗ್ತಿದೆ ಇಲ್ಲಿ? ” ಎಂದೆ.ಧ್ವನಿ ಹೆಚ್ಚೂಕಮ್ಮಿ ಚೀರಿದಂತೆಯೇ ಇತ್ತು. ಇವರ ಮುಖ ಬೆವೆತಿತು. “ಭೂಮಿ, ನಿಧಾನಕ್ಕೆ ಕೇಳು. ಇಶಾನ್’ಗೆ ಯಾರೋ ಚಟ ಹಿಡಿಸಿದ್ದಾರೆ ಭೂಮಿ. ಪ್ರಾಯದ ಮಕ್ಕಳು ಏನೇನು ಮಾಡುತ್ವೋ, ಗೊತ್ತೇ ಆಗಲ್ಲ. ಪುಣ್ಯಕ್ಕೆ ಬೇಗ ಗೊತ್ತಾಗಿ ಇಲ್ಲಿ ಸೇರಿಸಿದ್ದೇನೆ.ಸ್ವಲ್ಪ ದಿನ ಆಯ್ತು. ನಿಂಗೆ ಗೊತ್ತಾದ್ರೆ ತುಂಬಾ ಚಿಂತೆ ಮಾಡ್ಕೋತ್ಯಾ ಅಂತ ಹೇಳ್ಲಿಲ್ಲ, I’m sorry.” ,ಕಪ್ಪಿಟ್ಟ ಮುಖದೊಂದಿಗೆ ಇವರಂದಾಗ ಮನದಲ್ಲೇ ಅಳತೊಡಗಿದೆ.
Facebook ಕಾಮೆಂಟ್ಸ್