X

ಸಿಂಪಲ್ ಸ್ಟಾರ್,ತುಂಬಾ ರೇರ್

“ನಾನು ಒಬ್ಬ ಕಥೆಗಾರ.ಕಥೆ ಹೇಳುವುದು ಸಾಮಾನ್ಯ ಕೆಲಸ ಅಲ್ಲ. ಒಂದೂರಲ್ಲಿ ಒಬ್ಬ ರಾಜ ಇದ್ದ….. ಒಂದಾನೊಂದು ಕಾಲದಲ್ಲಿ…. ಕಥೆಗಳು ಈಗ ಹೇಳುವ ಮೊದಲೇ ಮುಗಿಯುವ ಸಮಯ ಬಂದಿದೆ.ಯಾಕಂದ್ರೆ ಅಷ್ಟೂ ಕಥೆಗಳನ್ನ ಜನ ಕೇಳಿದ್ದಾರೆ,ನೋಡಿದ್ದಾರೆ.

ಒಂದು ಕಥೆ ಹೇಳಬೇಕು,ಆದರೆ ಹೇಳುವದು ಹೇಗೆ? ನಾನೇ ಹೇಳಬೇಕಾ ? ಅಥವಾ ಒಬ್ಬ ಕಥೆಗಾರನ ಹತ್ತಿರ ಹೇಳಿಸಬೇಕಾ? ಅಥವಾ ಪಾತ್ರಗಳೇ ಕಥೆ ಹೇಳ್ತಾವಾ? ಇವೆಲ್ಲಕ್ಕೂ ಉತ್ತರ ಕೊಟ್ಟಿದ್ದು “ಸಿಂಪಲ್ ಆಗಿ ಒಂದು ಲವ್ ಸ್ಟೋರಿ” ಮತ್ತು “ಉಳಿದವರು ಕಂಡಂತೆ”. “ಕಥೆಯನ್ನ ಪಾತ್ರವೇ ಹೇಳೋದು ಆದರೆ ಕಥೆ ಕೇಳುತ್ತಾ ಇರುವವರು ಕಥೆಯಲ್ಲಿ ಇರಬಹುದು” ಅನ್ನುವ ಲಾಜಿಕ್ ಕೊಟ್ಟಿದ್ದು “ಸಿಂಪಲ್ ಆಗಿ … “. ಹುಡುಗ ತನ್ನ ಪ್ರೀಯತಮೆಯ ಕಥೆಯನ್ನು ಎರಡನೇ ಹುಡುಗಿಗೆ ಹೇಳೋವಾಗ ಆ ಎರಡನೇ ಹುಡುಗಿಯನ್ನೇ ಪ್ರಿಯತಮೆಯ ಜಾಗದಲ್ಲಿ ನಿಲ್ಲಿಸಿ ಹೇಳೋದು ಹೊಸ ಅನುಭವ.ಲಾಜಿಕ್ ಸಿಂಪಲ್ ಆಗಿತ್ತು ಆದರೆ ಅದರಲ್ಲಿ ಇರುವ ಸೃಜನಶಿಲತೆ ಸೂಪರ್ ಆಗಿತ್ತು. ಇದೆ ರೀತಿಯ ಇನ್ನೊಂದು ಕಥೆ. ಈ ಕಥೆಯನ್ನು ಎಲ್ಲಾ ಪಾತ್ರಗಳು ತಾವು ನೋಡಿದ ಹಾಗೇ ಹೇಳೋದು. ಪೂರ್ತಿ ಕಥೆಯನ್ನ ಬೇರೆ ಬೇರೆ ಪಾತ್ರಗಳು ಬೇರೆ ರೀತಿ ನೋಡಿದ್ದು,ನಾವು ಆ ಕಥೆಯನ್ನ ಮೂರನೇ ಕಥೆಗಾರನಿಂದ ಹೇಳಿಸಿದರೆ ಕಥೆಗೆ ನ್ಯಾಯ ಸಿಗಲ್ಲ ಅನ್ನೋದು “ಉಳಿದವರು ಕಂಡಂತೆ” ಯ ಗ್ರಹಿಕೆ.

ಎರಡರಲ್ಲೂ ಎರಡು ವಿಷಯ ಕಾಮನ್ ಆಗಿ ಇತ್ತು. ಒಂದು ಸಿಂಪಲ್ ಆಗಿ,ಕಥೆ ಹೇಳೋದು.ಇನ್ನೊಂದು ಎರಡು ಚಿತ್ರದಲ್ಲಿ ಇರುವ ನಟ.ಆ ನಟನ ಅಭಿನಯ ಸಿಂಪಲ್,ಕಥೆ ಹೇಳುವ ಶೈಲಿ ಸಿಂಪಲ್,ಸಿಂಪಲ್ ಅನ್ನುವ ಶಬ್ದಕ್ಕೆ ಸಮಾನರ್ಥಕ ಪದವೇ ಆ ನಟ,ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.

ಸುಮ್ಮನೆ ಇವರ ಮೊದಲನೇ(ಪಾಪ್ಯುಲರ್) ಚಿತ್ರದಲ್ಲಿನ ಹೆಸರನ್ನೇ ಸ್ಟಾರ್ ಹಿಂದೆ ಜೋಡಿಸಿದ್ದು ಅಂಥಾ ಅನ್ನಿಸಿದ್ದರೆ ಅದು ನಮ್ಮ ಕಲ್ಪನೆ ಅನಿಸುತ್ತದೆ. ರಕ್ಷಿತ್ ಶೆಟ್ಟಿ ಅವರ ವ್ಯಕ್ತಿತ್ವಕ್ಕೆ,ಅವರು ಮಾಡಿದ ಬೆರೆಳೆಣಿಕೆಯ ಸಿನಿಮಾದಲ್ಲಿ ಅವರು ಕಂಡಂತೆ,ಅವರು ಯೋಚನೆ ಮಾಡೋ ರೀತಿ ಗೆ ಬಂದಿರುವ ಬಿರುದು “ಸಿಂಪಲ್”.

“ಉಳಿದವರು ಕಂಡಂತೆ” ಚಿತ್ರದಲ್ಲಿ ಒಂದು ದೃಶ್ಯ ಇದೆ, ರಕ್ಷಿತ್ ಶೆಟ್ಟಿ ಅವರು ಒಬ್ಬನ ಮೂಗನ್ನ ಒಡಿಬೇಕು,ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಬರುವ ನಟ,ಮೂಗು ವಡೆದು ಹೋದರೂ,ಅದು ಕ್ರೂರ ಅನಿಸಲ್ಲ.ಅದೇ ರೀತಿಯ ಇನ್ನೊಂದು ದೃಶ್ಯದಲ್ಲಿ ನಾಯಕ ನಟ ಒಬ್ಬನಿಗೆ ತೆಂಗಿನ ಗಿಡದ ಒಣಗಿದ ಗರಿಯಿಂದ ಹೊಡೆಯುದು.ಒಬ್ಬ ನಟ ಮತ್ತು ಒಬ್ಬ ನಿರ್ದೇಶಕ ಆ ಎರಡು ದೃಶ್ಯವನ್ನು ಸಾಧ್ಯವಾದಸ್ಟು ವೈಭವಿಕರಿಸಲು ಪ್ರಯತ್ನಿಸುತ್ತಾರೆ. ಆದರೆ ರಕ್ಷಿತ್ ಶೆಟ್ಟಿ ಅವರು ಗಾಯಾಳನ್ನು ಪ್ರೇಕ್ಷಕರಿಗೆ ತೋರಿಸದೆ,ಆ ನರಳುವ ದೃಶ್ಯವನ್ನ ಹಾಗೇ ಮರೆಮಾಚಿ ಬಿಡುವ ಕಲೆಯೇ ಅವರನ್ನು “ಸಿಂಪಲ್” ಮಾಡುತ್ತದೆ.

ಖಿನ್ನತೆಯ ಕಾಗೆ ರೂಪ, ಹೇಳದ ಪ್ರೀತಿಯ ಕನಸು,ಮರೀಚಿಕೆಯ ಮಗನ ಕಾಯುವ ಮಮತೆ,ಆಕರ್ಷಣೆಯ ಕಾಡುವ ಚಟ,ಭಾಲ್ಯದ ಮುಗ್ದ ಮನವನ್ನು ಕಥೆಯನ್ನಾಗಿ ಮಾಡಿ ಎಲ್ಲರ ಜಾಗದಲ್ಲೂ ನಿಂತು ಅದನ್ನ ಪರದೆ ಮೇಲೆ ತರುವದೆ ಒಂದು ಅಧ್ಬುತ. ಅದರಲ್ಲೂ ನಟ ಮತ್ತು ನಿರ್ದೇಶಕ ಎರಡು ರೀತಿಯಲ್ಲಿ ರಕ್ಷಿತ್ ಅವರು ತಮ್ಮದೇ ಛಾಪು ಮೂಡಿಸುವುದು ಗಮನಾರ್ಹ. ಮುಂದೆ ಶೆಟ್ಟರು ಬಟ್ಟರ ಕೈಯಲ್ಲಿ ಪಳಗಿ ಅಭಿನಯಿಸುವ ಪರಿ ರಕ್ಷಿತ್ ಅವರ ಮತ್ತೊಂದು ರೀತಿಯ ನಟನನ್ನು ಕಟ್ಟಿಕೊಡುತ್ತದೆ.

ಕ್ಲಾಸ್ ಮತ್ತು ಮಾಸ್’ನ ಒಂದೇ ರೀತಿಯಲ್ಲಿ ಇಟ್ಟುಕೊಂಡು ಬರುತ್ತಿರುವ ರಕ್ಷಿತ್ ಅವರ ನಡೆ ವಿಭಿನ್ನವಾಗಿದೆ.ಬಿಗ್ ಬಾಸ್’ನಲ್ಲಿ ಇವರನ್ನ ನೋಡಬೇಕು ಅಂಥ ಆಸೆ ಇಟ್ಟುಕೊಂಡ ಅಭಿಮಾನಿಗಳಿಗೆ ಒಂದೇ ಒಂದು ಫೇಸ್ಬುಕ್ ಪೋಸ್ಟ್ನಲ್ಲಿ ತಮ್ಮ ಮನದಾಳವನ್ನೇ ಬಿಚ್ಚಿಟ್ಟ ಶೆಟ್ರು ಎಲ್ಲರು ಕಾಯುವ ಅವಕಾಶವನ್ನು ಸಿಂಪಲ್ ಆಗಿ ಅದು ನನ್ನದಲ್ಲ ಅಂದಾಗ ಅದೇ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು.ಪರಿಚಯವಿಲ್ಲದ ಈ ವ್ಯಕ್ತಿ ಕೇವಲ ಹತ್ತು ಇಪ್ಪತ್ತು ಫ್ರೇಮ್ ನಿಂದ ನಮ್ಮ ಮನದೊಳಗೆ ಪುಟ್ಟ ಮನೆಮಾಡಿದ್ದಾರೆ ಅಂದ್ರೆ ಮುಂದೆ “ಥಗ್ಸ್ ಆಫ್ ಮಾಲ್ಗುಡಿ” ಯಲ್ಲಿನ ನಿರ್ದೇಶಕ,”ರಿಕ್ಕಿ”ಯಲ್ಲಿ ಬರುವ ರಾಧಾಕೃಷ್ಣ,ಗೋಧಿ ಬಣ್ಣದಲ್ಲಿ ಬಂದು ಕನ್ನಡಿಗರ ಮನದಲ್ಲಿ ಮನೆ ಕಟ್ಟೋದು ಮಾತ್ರ ಗ್ಯಾರಂಟಿ.

ಶಂಕರನಾಗ್ ಅವರಿಗೆ “ಮಿಂಚಿನ ಓಟ” ಇದ್ದಹಾಗೆ ರಕ್ಷಿತ್ ಅವರಿಗೆ “ಉಳಿದವರು” ಅಂತ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆ ಆಗಿದ್ದು ಇದೆ.ಅದು ಸತ್ಯವೆನ್ನಲು “ಉಳಿದವರು ಕಂಡಂತೆ”ಗೆ ಬಂದಿರುವ ಪ್ರಶಸ್ತಿಗಳೇ ಸಾಕ್ಷಿ. ನಿರಾಕರಣೆ,ಗಳಿಕೆ,ಪ್ರಶಸ್ತಿ,ಜನಪ್ರಿಯತೆ ಎಲ್ಲವನ್ನು ನೋಡಿದ ನಟ ಪ್ರಸ್ತುತ ರಾಧಾಕೃಷ್ಣರ ಕಥೆ ಹೇಳಲು ಬರುತ್ತಿದ್ದಾರೆ.ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಭಾರಿ ಅಭಿಮಾನಿ ಬಳಗದಿಂದ “ರಿಕ್ಕಿ”ಯ ಪೋಸ್ಟರ್ ಕಾಸ್ಟುಮ ಸೆಲ್ಫಿ ಟ್ರೆಂಡ್ ,ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

“ನಮ್ಮ ಏರಿಯಾದಲ್ಲಿ” ಹುಟ್ಟಿ,”ತುಘಲಕ್” ನಲ್ಲಿ ಎದ್ದು ಬಿದ್ದು,”ಸಿಂಪಲ್ ಆಗಿ” ಮೊದಲ ರೆಕ್ಕೆ ಬಿಚ್ಚಿ,ಕನ್ನಡಿಗರು “ಕಂಡಂತೆ” ಎರಡೂ ರೆಕ್ಕೆ ಬಡಿಯುತ್ತ, ವಾಸ್ತು ಪುರುಷನ ಆದೇಶದ ಮೇರೆಗೆ ಕಾಡಿಗೆ ಹೋಗತ್ತ ಇರುವ “ಸಿಂಪಲ್ ಸ್ಟಾರ್” ರಕ್ಷಿತ್ ಶೆಟ್ಟಿ ಯವರಂಥ ನಟ,ನಿರ್ದೇಶಕ,ಸ್ಟಾರ್ ಆದರು ಸಿನಿಮಾ ಜಗತ್ತಿನಲ್ಲಿ ಕಂಡು ಬರುವ ತುಂಬಾ ರೇರ್ ವ್ಯಕ್ತಿತ್ವ.

ಅದಕ್ಕೆ ಹೇಳಿದ್ದು “ಸಿಂಪಲ್ ಸ್ಟಾರ್ , ತುಂಬಾ ರೇರ್”.

Anand Rc
aanu.rc@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post