X

ಕದಿಂಚೇ ಭೂತಾನ್-: ಭಾಗ-೨

ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಥಿಂಪಾ ಪಿಂಗಿ: ಥಿಂಪಾ ಪಿಂಗಿಯ ಬಗ್ಗೆ ಪಾರೋವಿನ ಆರ್ಟ್ ಗ್ಯಾಲರಿ ಒಂದರ ಒಡೆಯ ಕರ್ಮ ಎಂಬಾತ ಹೇಳಿದ ಸುಂದರ ಕಥೆಯಿದು. ಬಹಳಾ ಹಿಂದೆ ಕಾಶಿಕಾ ಎಂಬೊಂದೂರಿನಲ್ಲಿ ಒಬ್ಬ ರಾಜನಿದ್ದನಂತೆ. ರಾಜನಿಗೂ, ಪ್ರಜೆಗಳಿಗೂ ಮಧ್ಯೆ ಒಮ್ಮೆ ಜೋರು ಗಲಾಟೆ. ವಿಷಯವೇನೆಂದರೆ, ರಾಜನ ಪ್ರಕಾರ ರಾಜ್ಯ ಸುಭಿಕ್ಷವಾಗಿರುವುದೂ ಹಾಗೂ ರಾಜ್ಯದ ಸಮಸ್ತ ಜನತೆ ಸುಖವಾಗಿರುವುದೂ ತನ್ನಿಂದಾಗಿ. ಆದರೆ ಪ್ರಜೆಗಳಿಗೆ ರಾಜನ ದುರಂಕಾರದ ಬಗ್ಗೆ ಅಸಮಧಾನ. ನಾವು ದಿನನಿತ್ಯ ಬಿಸಿಲ ಬೇಗೆಯಲ್ಲಿ ದುಡಿದು ಬೆಳೆ ತೆಗೆಯುತ್ತೆವೆ, ನಮ್ಮವರು ಪ್ರಾಣದ ಹಂಗು ತೊರೆದು ಸೈನ್ಯದಲ್ಲಿ ಹೋರಾಡುತ್ತಾರೆ, ಹೀಗಿದ್ದಾಗ ರಾಜ್ಯ ಸುಭಿಕ್ಷವಾಗಿರಲೂ, ರಾಜನು ವೈಭವದಿಂದ ರಾಜ್ಯಭಾರ ಮಾಡಲೂ ನಾವು ಕಾರಣಕರ್ಥರು ಎಂಬುದು ಪ್ರಜೆಗಳ ಅಭಿಪ್ರಾಯ. ಸಂಧಾನಕ್ಕೆಂದು ಮಂತ್ರಿಗಳು ಕಾಡಿನಲ್ಲಿ ವಾಸಿಸುವ ಸನ್ಯಾಸಿಯಲ್ಲಿಗೆ ರಾಜನನ್ನೂ, ಪ್ರಜೆಗಳನ್ನೂ ಕರೆತರುತ್ತಾರೆ. ಸಮಸ್ಯೆಯನ್ನಾಲಿಸಿದ ಸನ್ಯಾಸಿ, ಅದೇ ಕಾಡಿನಲ್ಲಿ ವಾಸಿಸುವ ಆನೆ, ಮಂಗ, ಮೊಲ ಮತ್ತು ಹಕ್ಕಿಯ ಸ್ನೇಹ, ಒಬ್ಬರಿಗೊಬ್ಬರು ಸಹಕಾರದಿಂದ ಸಹಬಾಳ್ವೆ ನಡೆಸುವುದನ್ನು ರಾಜ ಮತ್ತು ಪ್ರಜೆಗಳಿಗೆ ತೊರಿಸಿ, ಇವರಂತೆ ಬದುಕಿದರೆ ಮಾತ್ರ ಶಾಂತಿ, ಸೌಹಾರ್ಧತೆಯಿಂದ ಬದುಕಲು ಸಾಧ್ಯ ಎಂದು ಬುದ್ದಿವಾದ ಹೇಳುತ್ತಾನೆ. ಅಂದಿನಿಂದ ರಾಜನ ಕಣ್ತೆರೆಯುತ್ತದೆ. ರಾಜ್ಯದ ಸಮಸ್ತ ಜನತೆ ಪರಸ್ಪರ ಸ್ನೇಹ, ಸಹಕಾರದಿಂದ ಸುಖವಾಗಿರುತ್ತಾರೆ.

ಈ ಕಥೆಗೆ ಪೂರಕವಾಗಿರುವ ಚಿತ್ರ ಥಿಂಪಾ ಪಿಂಗಿ. ಶಾಂತಿ ಮತ್ತು ಸೌಹಾರ್ಧತೆಯ ಸಂಕೇತವಾಗಿ ಭೂತಾನೀಯರ ಮನೆಮನೆಗಳಲ್ಲೂ ಈ ಚಿತ್ರವನ್ನು ಕಾಣಬಹುದು. ಈ ಚಿತ್ರವಿದ್ದರೆ ಮನೆಯಲ್ಲಿ ನೆಮ್ಮದಿಯಿರುತ್ತದೆ, ಪರಸ್ಪರರ ಭಾಂಧವ್ಯ ಗಟ್ಟಿಯಿರುತ್ತದೆ ಎಂಬ ನಂಬಿಕೆ ಭೂತಾನೀಯರಲ್ಲಿ ಬೇರೂರಿದೆ.

ಮನೆ ನಿರ್ಮಿಸುವುದು, ವ್ಯವಸಾಯ ಮತ್ತು ಸಹಕಾರೀ ಪದ್ಧತಿ: ಭೂತಾನೀಯರು ಹೆಚ್ಚಾಗಿ ಮಣ್ಣು ಮತ್ತು ಪೈನ್ ಮರದ ಹಲಗೆಗಳನ್ನು ಉಪಯೋಗಿಸಿ ಮನೆ ಕಟ್ಟುತ್ತಾರೆ. ಮನೆ ನಿರ್ಮಿಸುವುದರಲ್ಲಿ ಮತ್ತು ವ್ಯವಸಾಯ ಮಾಡುವಲ್ಲಿ ಇವರು ಸಹಕಾರೀ ಧೊರಣೆ ಅನುಸರಿಸುತ್ತಾರೆ. ಊರಿನ ಒಬ್ಬ ಮನೆ ಕಟ್ಟಬೇಕಾದರೆ ಊರಿನ ಎಲ್ಲರೂ ದುಡಿಯುತ್ತಾರೆ. ಗಂಡಸರು ಪೈನ್ ಮರವನ್ನು ಕಡಿದು, ಒಣಗಿಸಿ, ವಿವಿಧ ಆಕಾರಗಳಲ್ಲಿ ಕತ್ತರಿಸಲು ನೆರವಾದರೆ, ಹೆಂಗಸರು ಮಣ್ಣು ಕಲೆಸುವುದು, ಗೋಡೆ ಕಟ್ಟುವುದು ಮುಂತಾದ ಕೆಲಸಗಳಲ್ಲಿ ನೆರವಾಗುತ್ತಾರೆ. ಮರದ ಕೆತ್ತನೆಗಳಿಗೆ ಸಲಹೆ ಕೊಡಲು ಮಾತ್ರಾ ಕಾರ್ಪೆಂಟರ್ ಒಬ್ಬನನ್ನು ನೇಮಿಸಿಕೊಳ್ಳುತ್ತಾರೆ. ಕಾರ್ಪೆಂಟರನಿಗೆ ಸಂಬಳ ಕೊಟ್ಟು ಕೆಲಸ ತೆಗೆದುಕೊಳ್ಳುತ್ತಾರೆ. ವ್ಯವಸಾಯದಲ್ಲಿ ಕೂಡಾ ಇದೇ ರೀತಿಯ ಸಹಕಾರೀ ಧೊರಣೆ ಕಂಡುಬರುತ್ತದೆ. ಗದ್ದೆ ನೆಟ್ಟಿಯಿಂದ ಹಿಡಿದು ಕೊಯ್ಲು ಕಟಾವು ಮಾಡುವ ವರೆಗೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾರೆ.

ಹೀಗೊಂದು ಸಾಮಾನ್ಯ ಮನೆ..

ಭಾಷೆ ಮತ್ತು ಇತರೆ ಆಚರಣೆಗಳು: ಭೂತಾನಿನ ರಾಷ್ಟ್ರೀಯ ಭಾಷೆ ಝೋಂಕಾ, ಇಲ್ಲಿ ೧೫ಕ್ಕೂ ಹೆಚ್ಚು ಭಾಷೆಗಳು ಪ್ರಚಲಿತದಲ್ಲಿವೆ. ಒಂದೊಂದು ಬುಡಕಟ್ಟು ಜನರೂ ಒಂದೊಂದು ಭಾಷೆ ಮಾತನಾಡುತ್ತಾರೆ. ಪಶ್ಚಿಮ ಭೂತಾನೀಯರಿಗೆ ರಾಷ್ಟ್ರೀಯ ಭಾಷೆ ಝೋಂಕಾ ಕೂಡಾ ತಿಳಿದಿಲ್ಲ. ಭೂತಾನಿನ ಗುಡ್ಡಗಾಡು ಜನರು ಹಾಗೂ ಇರರೆ ಭಾಗಗಳ ಜನರ ಉಡುಗೆ ತೊಡುಗೆಗಳಲ್ಲಿ ಕೂಡಾ ಸ್ವಲ್ಪ ವ್ಯತ್ಯಾಸ ಕಾಣಬಹುದು.

ಭೂತಾನಿನಲ್ಲಿ ಎಲ್ಲರ ಮನೆಯ ಮುಂದೆ ಹಾಗೂ ಕೆಲವು ನಿರ್ಧಿಷ್ಟ ಪ್ರದೇಶಗಳಲ್ಲಿ “ಸೊಂಗ್ಫು” ಎಂದು ಕರೆಯಲ್ಪಡುವ ಒಲೆ ಇರುತ್ತದೆ. ಪೈನ್ ಮರದ ಎಲೆಗಳು ಹಾಗೂ ಸಿಪ್ರೆಸ್ಸ್ (ಇದು ಭೂತಾನೀ ರಾಷ್ಟ್ರೀಯ ಸಸ್ಯ) ಎಲೆಗಳಿಂದ ಹೊಗೆಬರಿಸಿ, ಸುಗಂಧವನ್ನು ಪ್ರತಿದಿನ ಬೆಳಿಗ್ಗೆ ಆಸ್ವಾದಿಸುವ ಆಚರಣೆ ಭೂತಾನಿನಲ್ಲಿ ಬಳಕೆಯಲ್ಲಿದೆ. ಭೂತಾನಿನ ಕೆಲವು ಭಾಗಗಳಲ್ಲಿ “ಬಿಷೆಗಾರೋ” ಎಂಬ ಆಯುಧಪೂಜೆ ಹಬ್ಬ ಕೂಡಾ ಬಳಕೆಯಲ್ಲಿದೆ. ನಾವು ಹೋದಾಗ ಥಿಂಫುವಿನಲ್ಲಿ ವಾಹನಗಳನ್ನು, ಅಂಗಡಿಗಳನ್ನು ಸಿಂಗರಿಸಿ ಈ ಹಬ್ಬ ಆಚರಿಸುತ್ತಿದ್ದುದು ಕಂಡುಬಂತು.

ಸೋಂಗ್ಫು ಎಂದು ಕರೆಯಲ್ಪಡುವ ಒಲೆ

ಭಾರತದದೊಂದಿಗೆ ವ್ಯವಹಾರಿಕ ಅವಲಂಬನೆ: ಭೂತಾನ್ ವ್ಯಾಪಾರ ವ್ಯವಹಾರಗಳಲ್ಲಿ ಸುಮಾರು ೭೫ ಪ್ರತಿಶತ ಭಾರತದ ಮೇಲೆ ಅವಲಂಭಿತವಾಗಿದೆ. ಬಟ್ಟೆ ನೇಯುವ ನೂಲಿನಿಂದ ಹಿಡಿದು ಕೆಲವು ಆಹಾರ ಪಧಾರ್ಥಗಳು ಭಾರತದಿಂದ ಆಮದಾಗುತ್ತದೆ.ಇಲ್ಲಿ ಪ್ರಾಣಿಗಳನ್ನು ಕೊಲ್ಲುವುದಿಲ್ಲ ಬದಲಾಗಿ ಭಾರತದಿಂದ ಮಾಂಸವನ್ನು ಕೊಂಡು ತಿನ್ನುತ್ತಾರೆ. ಇಲ್ಲಿನ ಶಾಲೆಗಳಲ್ಲಿ ಭಾರತೀಯ ಶಿಕ್ಷಕರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಭೂತಾನೀಯರಿಗೆ ಮಿಲಿಟರಿ ಶಿಕ್ಷಣ ಕೂಡಾ ಭಾರತದಲ್ಲೇ ಆಗುವುದು.

ರಾಜಮನೆತನದ ಹೆಂಗಸರಿಗೆ ಕಿರಾ ನೇಯುತ್ತಿರುವ ಹೆಮೊ

ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಕಾರ್ಪೆಟ್ ನೇಯುತ್ತಿರುವ ಹುಡುಗಿ

ಶಿಕ್ಷಣ ಪದ್ಧತಿ: ಭೂತಾನಿನಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಎಂಬುದು ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಚಲಿತದಲ್ಲಿದೆ. ಆದರೂ ಇಲ್ಲಿ ಪದವಿ ಕಾಲೇಜುಗಳು ಇನ್ನೂ ಹೆಚ್ಚಾಗಿ ತಲೆಯೆತ್ತಿಲ್ಲ. ನಾನು ನೋಡಿದಂತೆ ಹೆಚ್ಚು ಜನರು ೧೦ ಅಥವಾ ೧೨ನೆಯ ತರಗತಿಯವರೆಗೆ ವಿಧ್ಯಾಭ್ಯಾಸ ಮಾಡಿದ್ದಾರೆ. ಇತ್ತೀಚೆಗೆ ಹೊಸ ಹೊಸ ಶಾಲಾ ಕಾಲೇಜುಗಳು ತಲೆಯೆತ್ತುತ್ತಿವೆ. ಭೂತಾನಿನ ರಾಜಧಾನಿ ಥಿಂಫುವಿನಲ್ಲಿ “ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಜೊರಿಗ್ ಚುಸುಮ್” ಎಂಬ ೧೩ ಕರಕುಶಲ ಕಲೆಗಳನ್ನು ಕಲಿಸುವ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಯಿದೆ. ವಿಧ್ಯಾರ್ಥಿಗಳು ತಮ್ಮ ಆಸಕ್ತಿಯ ಕಲಾ ಶಿಕ್ಷಣವನ್ನು ಆಯ್ದುಕೊಂಡು ೪/೬ ವರ್ಷಗಳ ತರಬೇತಿ ಪಡೆಯುತ್ತಾರೆ. ಇಲ್ಲಿನ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳ ಜೊತೆಗೆ ತಿಂಗಳ ವೇತನವನ್ನೂ ಕೊಡಲಾಗುತ್ತದೆ. ವಿಧ್ಯಾರ್ಥಿಗಳನ್ನು ನಾನು ಮಾತನಾಡಿಸಿದಾಗ ಹೆಚ್ಚಿನವರು ವಿಧ್ಯಾಭ್ಯಾಸ ಮುಗಿದ ನಂತರ ಸ್ವಂತ ಉದ್ಯೋಗದಲ್ಲಿ ತೊಡಗುವ ಬಯಕೆ ವ್ಯಕ್ತಪಡಿಸಿದರು. ಥಿಂಫುವಿನಲ್ಲಿ “ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಟ್ರಡಿಷನಲ್ ಮೆಡಿಸಿನ್” ಎಂಬ ಸಾಂಪ್ರದಾಯಿಕ ವೈಧ್ಯ ಶಿಕ್ಷಣ ಸಂಸ್ಥೆ ಕೂಡಾ ಇದೆ.

ಭೂತಾನಿನಲ್ಲಿ ನಾವು ಭೇಟಿಯಿತ್ತ ಸ್ಥಳಗಳೂ ಹಾಗೂ ಗಮನಿಸಿದ ಮುಖ್ಯ ಅಂಶಗಳು: ಭೂತಾನ್ ಗುಡ್ಡ, ಬೆಟ್ಟ, ಆಳವಾದ ಕಣಿವೆ, ಜಲಪಾತಗಳಿಂದ ಕೂಡಿದ ಸುಂದರ ಸ್ವರ್ಗ. ಬುದ್ದಿಷ್ಟ್ ಶೈಲಿಯ ಕಟ್ಟಡಗಳು ಭೂತಾನಿನ ಸೌಂದರ್ಯಕ್ಕೆ ಮೆರಗು ನೀಡಿವೆ. ಥಿಂಪು, ಪಾರೋ, ಹಾ ಕಣಿವೆ, ಪುನಾಕ, ವ್ಯಾಂಗ್ಡ್ಯೂ, ಟ್ರೋಂಗ್ಸಾ ಹಾಗೂ ಭೂತಾನಿನ ಸ್ವಿತ್ಸರ್ಲೆಂಡ್ ಎಂದು ಕರೆಯಲ್ಪಡುವ ಭುಮ್ತಾಂಗ್ ನಾವು ನೊಡಿದ ಪ್ರಮುಖ ಪ್ರದೇಶಗಳು. ಥಿಂಫು ಮತ್ತು ಪಾರೋ ತೆರೆದ ಪ್ರದೇಶಗಳೆಂದು ಅನುಮೋದನೆಯಾಗಿದ್ದರೂ, ಇತರೆ ಪ್ರದೇಶಗಳನ್ನು ಸಂದರ್ಷಿಸಲು ಥಿಂಫುವಿನ ಇಮಿಗ್ರೆಷನ್ ಆಫೀಸಿನಿಂದ ವಿಶೇಷ ಅನುಮತಿ ಪತ್ರ ಪಡೆಯುವುದು ಅನಿವಾರ್ಯ. ಇಲ್ಲಿನ ಪಟ್ಟಣಗಳು ಎಷ್ಟು ಚಿಕ್ಕವೆಂದರೆ ಇವುಗಳನ್ನು ನಡೆದೇ ಸುತ್ತಬಹುದು. ರಾಜಧಾನಿ ಥಿಂಫುವಿನ ಮುಖ್ಯ ಬೀದಿ ಹೆಚ್ಚೆಂದರೆ ೧ ಮೈಲು ಇರಬಹುದಷ್ಟೆ. ಭೂತಾನಿನ ಎಲ್ಲಾ ಭಾಗಗಳಲ್ಲೂ ಹೆಚ್ಚಾಗಿ ಭತ್ತದ ಗದ್ದೆಗಳೂ, ಸೇಬಿನ ತೋಟಗಳೂ ಕಂಡುಬರುತ್ತವೆ. ಹಾ ಕಣಿವೆ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಆಲೂಗಡ್ದೆ, ಕೋಸು ಮುಂತಾದ ತರಕಾರಿಗಳನ್ನು ಬೆಳೆಯುತ್ತಾರೆ. ಪ್ರತೀ ವಾರಾಂತ್ಯದಲ್ಲಿ ಜಿಲ್ಲೆಯ ಪ್ರಮುಖ ಭಾಗಗಳಲ್ಲಿ ವೀಕೆಂಡ್ ಮಾರ್ಕೆಟುಗಳು ನಡೆಯುತ್ತವೆ. ರೈತರು ತಾವು ಬೆಳೆದ ತಾಜಾ ತರಕಾರಿಗಳನ್ನು ಇಲ್ಲಿ ಮಾರಾಟಕ್ಕಿಟ್ಟಿರುತ್ತಾರೆ. “ಸೆಸೆ ಷಮೋ” ಎಂದು ಕರೆಯಲ್ಪಡುವ ಕಾಡಿನಲ್ಲಿ ಸಿಗುವ ಅಣಬೆ ಹಾಗೂ “ಬುದ್ದಾ ಮಶ್ರೂಮ್” ಎಂದು ಕರೆಯಲ್ಪಡುವ ಅಣಬೆಗಳಿಗೆ ಇಲ್ಲಿ ಅತೀ ಬೇಡಿಕೆಯಿದೆ. ಸೆಸೆ ಷಮೋ ಅಣಬೆಯಿಂದ ತಯಾರಿಸಿದ ಅದ್ಭುತ ಖಾದ್ಯವೊಂದನ್ನು ಕೆಂಪಕ್ಕಿ ಅನ್ನದೊಂದಿಗೆ ಸವಿಯುವ ಅವಕಾಶ ನನಗೆ ತೊಬ್ಗೆ ಎಂಬ ಹಳ್ಳಿಗನ ಮನೆಯಲ್ಲಿ ಸಿಕ್ಕಿತ್ತು.

ಜೈಗೊನ್ ಮಾರ್ಕೆಟ್..

ತ್ರಾಷಿ ಚೊಝಾಂಗ್ ಪಾರ್ಲಿಮೆಂಟ್ ಭವನ

ಥಿಂಫುವಿನ ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್ ನ ಒಂದು ಅಂಗಡಿ

ಭೂತಾನಿನಲ್ಲಿ ಕೆಲವು ಕಾನೂನು ಕಟ್ಟಲೆಗಳನ್ನು ನಿಷ್ಟೆಯಿಂದ ಪಾಲಿಸಲೇಬೇಕು. ಇಲ್ಲಿನ ಸರ್ಕಾರೀ ಕಛೇರಿಗಳಲ್ಲಿ ಕೆಲಸ ಮಾಡುವವರು ಹಾಗೂ ಟ್ಯಾಕ್ಸಿ ಚಾಲಕರು ಸಾಂಪ್ರದಾಯಿಕ ಉಡುಗೆಯನ್ನೇ ಧರಿಸಬೇಕು. ಪ್ರಯಾಣಿಕರು ಇಳಿಯುವಾಗ ಎಡಬದಿಯ ಬಾಗಿಲಿನಿಂದ ಮಾತ್ರಾ ಇಳಿಯಬೇಕು. ಕಾಲ್ನಡಿಗೆಯಲ್ಲಿ ಹೊಗುವಾಗ ಫುಟ್ ಬಾತ್ ಮೇಲೆ ಮಾತ್ರಾ ನಡೆಯಬೇಕು. ಹುಡುಗಿಯರಿಗೆ ಚುಡಾಯಿಸಿದರೆ ೧೨೦೦ ರೂ ದಂಡ ಗ್ಯಾರಂಟಿ. ವಾರಕ್ಕೊಮ್ಮೆ ಇಲ್ಲಿ ಮಧ್ಯ ಮಾರಾಟ ನಿಷೇಧ ಹಾಗೂ ಕಾಲ್ನಡಿಗೆಯ ದಿನವಿರುತ್ತದೆ. ಆ ದಿನ ಎಷ್ಟೇ ಶ್ರೀಮಂತ ವ್ಯಕ್ತಿ ಕೂಡಾ ಕಾಲ್ನಡಿಗೆಯಲ್ಲಿ ಅಥವಾ ಬೈಸಿಕಲ್ಲಿನಲ್ಲಿ ಪ್ರಯಾಣ ಮಾಡುತ್ತಾರೆ. ಇಂಧನ ಉಳಿಸುವಲ್ಲಿ ಹಾಗೂ ಆರೋಗ್ಯದ ದೃಷ್ಟಿಯಿಂದ ಇಂಥಹಾ ಕಾನೂನುಗಳನ್ನು ಜಾರಿಗಿಳಿಸುವುದು ಎಷ್ಟು ಸೂಕ್ತವಲ್ಲವೇ? …

ಭೂತಾನಿನಲ್ಲಿ ನಾವು ನೋಡಿದ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ಮೊದಲ ಹಾಗೂ ಕೊನೆಯ ವ್ಯಕ್ತಿ. ಎಲ್ಲ ನಿಯಮಗಳಿಗೂ ಒಂದೊಂದು ಎಕ್ಸೆಪ್ಶನ್ ಇರುತ್ತದಲ್ಲವೇ

ಹೇಳಲು ಮರೆತಿದ್ದೆ. ಕದಿಂಚೆ ಎಂದರೆ ಝೋಂಕಾ ಭಾಷೆಯಲ್ಲಿ ಧನ್ಯವಾದಗಳು ಎಂದರ್ಥ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post