X

ಕೊಳಲ ನುಡಿಸುವ ಕೊರಳನರಸುತ…!!!

ಮುರಳಿಯ ನಾದ ಹೊಮ್ಮಿರೆ,

ಗೋವುಗಳೆಲ್ಲ ಭಾವುಕವಾಗಿರೆ,

ಹೊರಳಿತ್ತು ಗೋಪಿಕೆಯ ಮನ;

ಮುರಳಿಯ ನುಡಿಸುವ ಕೊರಳನರಸುತ!!!

ಸುಳಿದಾಡಿದಳಾಕೆ,

ಬಯಕೆಗಳ ಬಳಿಯಲ್ಲಿ…

ತೊಳಲಾಡಿದಳು ಮತ್ತೆ,

ಸೆಳೆತಗಳ ಸುಳಿಯಲ್ಲಿ.

ಏನೋ ಕಳೆದಂತೆ ಕಳವಳದಿ ಕಾತರಿಸಿ,

ಸುರಿವ ಮಳೆಗರುಹಿದಳು…

ಹರಿವ ಹೊಳೆಯ ಕಳುಹಿದಳು…

ಮುರಳೀಧರನನ್ನು ಬಳಿಗೆ ಕರೆತರಲು.

ವಿರಹಬೇನೆಗೆ ಬಳಲಿ

ಬಸವಳಿದು ಕುಳಿತಳು;

ಬಳಸಿದವು ಕಣ್ರೆಪ್ಪೆಗಳು ಒಂದನೊಂದು.

ಅರಳಿದವು ಕನಸುಗಳು

ಮರುಳು ಮನದೊಳಗೆ.

ಮುಗುಳ್ನಕ್ಕವು ಅದರಗಳು

ಬಿರಿವ ಮೊಗ್ಗುಗಳಂತೆ.

 

ರೆಪ್ಪೆಗಳು ಸಡಿಲಿಸಿರೆ

ಅಪ್ಪುಗೆಯ ಬಂಧನವ,

ಕಣ್ಣೆದುರಿಗಿತ್ತು ಆ ಗಿರಿಧರನ ರೂಪ.

ಗೋಪಿಕೆಯ ಭಾವಗಳ

ಸಮ್ಮಿಲಿತ ರೂಪವದು.

ನಿದಿರೆಯಲ್ಲಿಯೂ ಅವಳ

ಮುಗುಳ್ನಗಿಸಿದ ರೂಪವದು.

ಇಡೀ ವಿಶ್ವ ಸವಿಯಬಯಸೊ

ಕೃಷ್ಣ ಎಂಬ ಚೆಲುವು ಅದು!!!

 

ಗೋಪಿಲೋಲನ ನಯನಗಳ ಕಡಲಲ್ಲಿ

ಗೋಪಿಕೆಯ ರೂಪವದು ತಾ ತೇಲುತಿರಲು,

ತನ್ನ ತಾನೇ ಕಂಡ

ಗೋಪಿಕೆಯ ನಯನಗಳು,

ಭಾವೋತ್ತುಂಗದಲಿ

ಫಳಫಳನೆ ಹೊಳೆದವು.

ಜಗವನ್ನೆ ಝಗಝಗಿಸೊ

ಪ್ರೇಮದ ಹೊಳಪು ಅದು.

ಕೊಳಲ ನುಡಿಸುವ ಕೊರಳ

ಮೋಹದ ಛಾಯೆಯದು

ಮತ್ತೆ ಮತ್ತೆ ಮರುಳಾಗಿಸೊ

ಮಾಧವನ ಮಾಯೆಯದು.

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post