X

ಕಾಣಿಸಿಕೊಳದವನ ಜಾಡಿನಲಿ..

ಮೂರ್ತ ದೃಶ್ಯದಲೊ, ಅಮೂರ್ತದದೃಶ್ಯದಲೊ
ಸಂಕುಚಿತ ಗುಳಿಯಲೊ, ವಿಸ್ತಾರ ಬಯಲಲ್ಲೊ
ಮಾರುವೇಷದಲೊ, ನಿಜರೂಪಿನ ಸಹಜದಲೊ
ಕಾಣಿಸಿಕೊಳಬಾರದೆ ಬಂದು, ಕಣ್ಣ ಮುಂದೆಲ್ಲೊ ||

ನಿನ್ನ ಹೆಸರಿನದೆ ತತ್ತ್ವ , ನಿನದೆ ಸಿದ್ಧಾಂತ ನಿತ್ಯ
ನಿನ್ನ ಬೋಧನೆ ಲಕ್ಷ್ಯ, ನಿನದೆ ಮಂತ್ರದ ಘೋಷ
ನಿನ್ನದೆ ಪದಗಳಿಗೆ, ವ್ಯಾಖ್ಯಾನ ವಿವರಣೆ ಸಹಿತ
ನಿನಗೆ ಮಾತ್ರವದೇಕೆ, ಅಡಗಿ ಕೂರೊ ಸ್ವಾರ್ಥ ? ||

ಕಪಟವಲ್ಲವೆ ನಿಜದೆ, ಮಂದಿರದ ಶಿಲೆಯಾಗೆ
ವಂಚನೆ ತಾನೆ ಹೇಳು, ನಿರಾಕಾರ ರೂಪ ಬಗೆ
ದೇವಸುತ ಮನುಜ ಹಿತ, ಇನ್ನೆಂಥ ಪರಮಾರ್ಥ
ಜಿಜ್ಞಾಸೆಯಲಿ ಕೆಡವಿ, ಗೊಂದಲದಲೆಲ್ಲಾ ವ್ಯರ್ಥ ||

ನಿನದಿರಬಹುದು ಗುರಿ ಕಪಟ, ಉದ್ದೇಶ ನಿಮಿತ್ತ
ಕಾಣದದ ಮನುಜ ಗುಣ, ಬೆನ್ನಟ್ಟುತದನೆ ಸೂಕ್ತ
ಕಳೆದುಬಿಡುವಾ ಬದುಕು, ಅರಿವಿಗೆ ನಿಲುಕದಲೆ
ಮಂಪರು ಹರಿವ ಹೊತ್ತು, ಕಂತೆ ಒಗೆಸುವ ಕಲೆ ||

ನಿನಗದೆ ಬೇಕಿದೆಯೇನೊ, ಪುಟಕಿಟ್ಟ ಬಂಗಾರ
ಮೂಲದ್ರವ್ಯದ ಶುದ್ಧತೆ, ನಿನ್ನ ಲೋಕದ ಸಾರ
ಇಹಜೀವನ ಕಳೆವುದೆ, ಇರಬಹುದು ಅರ್ಹತೆ
ಸಾವಿನ್ಹೆಸರಲಿ ನೇರ, ನಿನ್ನ ಕಾಣುತಲಿ ಜಾಗ್ರತೆ ||

  • Naresh Mysore

nageshamysore@yahoo.co.in

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post