ಅದೇಕೋ ಗೊತ್ತಿಲ್ಲ. ಮೋದಿ ವಿದೇಶ ಪ್ರವಾಸ ಮಾಡಿದಾಗಲೆಲ್ಲ ಕೈ ತುರಿಸಲು ಶುರುವಾಗುತ್ತದೆ. ಭಾಷಣ ಕೇಳಿದಾಗಲೆಲ್ಲಾ ಪೆನ್ನು ಹಿಡಿಯಬೇಕೆಂದೆನಿಸುತ್ತದೆ. ಹೊಗಳಿದಷ್ಟೂ, ಹೆಮ್ಮೆ ಪಟ್ಟುಕೊಂಡಷ್ಟೂ ಅದು ಕಡಿಮೆಯೇ ಎಂದೆನಿಸುತ್ತದೆ.ಮೋದಿ ಮೋಡಿಯ ತಾಕತ್ತೇ ಅದು. ಇದು ಮೋದಿ ಮೇಲಿನ ಅಭಿಮಾನಕ್ಕೋ, ಕುರುಡು ಭಕ್ತಿಗೋ ಅಥವಾ ಬಿಜೆಪಿಯವರೆಂಬ ಕಾರಣಕ್ಕೋ ಬರುವ ಭಾವವಲ್ಲ. ಭಾರತ ಮಾತೆಯ ವರಪುತ್ರನೊಬ್ಬನ ಯಶೋಗಾಥೆಯನ್ನು ನೋಡುವಾಗ ತಾನೇ ತಾನಾಗಿ ಬರುವ ಭಾವವದು.
ಹೌದು. ಅಂತಹಾ ಮಾಂತ್ರಿಕ ಮೋಡಿ ಸೃಷ್ಟಿಸುತ್ತಿದ್ದಾರೆ ಮೋದಿ. ಒಂದು ಕಾಲದಲ್ಲಿ ವೀಸಾ ನಿರಾಕರಿಸಿತ್ತಲ್ಲಾ, ನಮ್ಮವರೇ ಈತನಿಗೆ ವೀಸಾ ಕೊಡಬೇಡಿ ಎಂದು ದುಂಬಾಲು ಬಿದ್ದಿತ್ತಲ್ಲ ಅಮೇರಿಕಾದ ಬಳಿ? ಈಗ ಅದೇ ಅಮೇರಿಕಾ ಅದೇ ಮೋದಿಗೆ ವಿಶ್ವದ ಬೇರಾವ ನಾಯಕರಿಗೂ ನೀಡದ ಪ್ರಾಶಸ್ಥ್ಯ ನೀಡುತ್ತದೆಯೆಂದರೆ ಮೋಡಿಯಲ್ಲದೆ ಮತ್ತೇನಿದು? ಹೋದಲ್ಲಿ ಬಂದಲ್ಲಿ ಪ್ರಶಂಸೆಯ ಸುರಿಮಳೆಯನ್ನೇ ಗಳಿಸಿಕೊಳ್ಳುತ್ತಿರುವ ಮೋದಿಯವರದ್ದು ಹವಾವಲ್ಲದೆ ಮತ್ತೇನಿದು? ಅದೇನು ಮಾಂತ್ರಿಕತೆಯಿದೆ ಈ ಮನುಷ್ಯನಲ್ಲಿ ಅಂತ? ಕಾಂಗ್ರೆಸ್ಸಿಗರನ್ನಲ್ಲ, ಈ ಪ್ರಶ್ನೆ ನನ್ನನ್ನೂ ಕಾಡುತ್ತಿದೆ.
ಖಂಡಿತವಾಗಿಯೂ ಮೋದಿ ಒಬ್ಬ ಯುಗ ಪ್ರವರ್ತಕನೇ. ಜಡದಿಂದ ಸುಕ್ಕುಗಟ್ಟಿ ಹೋಗಿದ್ದ ದೇಶವನ್ನು ತನ್ನ ಮುಂದಾಲೋಚನೆಯಿಂದ, ಅವಿರತ ಪ್ರಯತ್ನದಿಂದ, ದೇಶವಾಸಿಗಳು ಮತ್ತು ವಿದೇಶಿ ನಾಯಕರುಗಳ ಜೊತೆ ಜೊತೆಗೆ ಮುನ್ನಡೆಸುತ್ತಿರುವ ಪರಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತಿದೆ. “ಎಂತ ಮನುಷ್ಯ ಮಾರ್ರೆ ಮೋದಿ, ರಾತ್ರಿ ಯುಎಯಿಯಲ್ಲಿರುತ್ತಾರೆ, ಬೆಳಗ್ಗೆ ಬಿಹಾರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುತ್ತಾರೆ. ದಣಿವಾಗುವುದಿಲ್ಲವಾ ಆ ಮನುಷ್ಯನಿಗೆ?” ಎಂಬ ಮಾತುಗಳು ಜನಸಾಮಾನ್ಯ ವಲಯದಲ್ಲಿ ಜನಜನಿತವಾಗಿದೆ. ಇವತ್ತು ವಿಶ್ವದ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ನಮ್ಮವರೇ ಸಿಇಓಗಳಾಗಿದ್ದಾರೆ. ಅವರಿಂದ ದೇಶಕ್ಕೇನು ಲಾಭ ಮಾಡಿಕೊಳ್ಳಬಹುದು? ದೇಶದ ಅಭಿವೃದ್ಧಿಯಲ್ಲಿ ಹೇಗೆ ಅವರ ಜ್ಞಾನವನ್ನು ಉಪಯೋಗಿಸಿಕೊಳ್ಳಬಹುದು? ಎಂಬ ಕಲೆ ನಮ್ಮ ಮೋದಿಗೆ ಮಾತ್ರ ಗೊತ್ತಿದೆ. ಹಿಂದೆಲ್ಲಾ ಭಾರತಕ್ಕೆ ಬರಲು ಹೇಸದೇ ಇರುತ್ತಿದ್ದ ಈ ಭಾರತೀಯ ಮೂಲದ ಸಿಇಓಗಳು ಮತ್ತು ಇತರ ವಿದ್ಯಾವಂತ ಉದ್ಯೋಗಿಗಳು ಇವತ್ತು ಮೋದಿಯ ಕಾರಣಕ್ಕಾಗಿ ತಾಯ್ನಾಡಿನತ್ತ ಮುಖ ಮಾಡಿದ್ದಾರೆ. ತಾಯ್ನಾಡಿನ ಪ್ರಗತಿಯಲ್ಲಿ ತಾವೂ ಅಳಿಲು ಸೇವೆ ಸಲ್ಲಿಸಬೇಕೆಂಬ ಮನಸ್ಸು ಮಾಡಿದ್ದಾರೆ.
ಮೋದಿಯ ಕಳೆದ ಭಾರಿಯ ಅಮೇರಿಕಾ ಭೇಟಿಯೇ ಅವಿಸ್ಮರಣಿಯವಾಗಿತ್ತು. ಈ ಭಾರಿಯಂತೂ “MODI RETURNS” ಅನ್ನೊ ಸಿನೆಮಾ ಮಾಡಬಹುದು, ಆ ಮಟ್ಟಿಗೆ ಅಲೆ ಸೃಷ್ಟಿಸಿದೆ. ಮೋದಿಯ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ನೀಡುವ ಸಲುವಾಗಿ ಫೇಸ್’ಬುಕ್ ಸಂಸ್ಥಾಪಕ ಮಾರ್ಕ್ ಝೂಕರ್’ಬರ್ಗ್’ರಿಂದ ಹಿಡಿದು ವಿಶ್ವಾದ್ಯಂತ ಕೋಟ್ಯಾಂತರ ಜನರ ಪ್ರೊಫ಼ೈಲ್ ಫೋಟೊಗಳು ತ್ರಿವರ್ಣಮಯವಾದವು. (ಥಾಂಕ್ ಗಾಡ್.. ಪ್ರೊಫ಼ೈಲ್ ಫೋಟೊದಲ್ಲಿ ಮೋದಿಯವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಕಾಂಗ್ರೆಸಿನ ಗೆಳೆಯರು ಆರೋಪ ಮಾಡದಂತೆ ಅವರಿಗೆಲ್ಲಾ ಬುದ್ಧಿ ಕೊಟ್ಟಿದ್ದಕ್ಕೆ). ವ್ಯಕ್ತಿ ಯಾರೇ ಆಗಿದ್ದರೂ ಈ ತ್ರಿವರ್ಣ ಬ್ಯಾಕ್’ಗ್ರೌಂಡನ್ನು ನೋಡುವಾಗ ಲೈಕು ಒತ್ತಬೇಕೆಂದು ಅನಿಸಿಬಿಡುತ್ತಿತ್ತು. ಜಗತ್ತಿನ ಮೊದಲ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ತನ್ನ ಡೂಡಲ್’ನ ಕೆಳಗೆ “Welcoming PM Narendra Modi to Google” ಎಂದು ಬರೆದುಕೊಳ್ಳುವ ಮೂಲಕ ಮೋದಿಗೆ ಅರ್ಥಪೂರ್ಣ ಸ್ವಾಗತ ನೀಡಿತು. ಇದು ಖಂಡಿತವಾಗಿಯೂ ಮೋದಿಯೊಬ್ಬರಿಗೆ ಸಿಕ್ಕಿದ ಗೌರವವಲ್ಲ. ನೂರಿಪ್ಪತ್ತೈದು ಕೋಟಿ ಭಾರತೀಯರಿಗೇ ಸಿಕ್ಕಿದ್ದು ಎಂದು ಹೇಳಿಕೊಳ್ಲಲು ಬಹಳ ಹೆಮ್ಮೆಯಾಗುತ್ತದೆಯೇ ಇಲ್ಲವೇ?.
ಈ ಪ್ರವಾಸಗಳಿಂದ ಮೋದಿ ಕಿಸಿಯುತ್ತಿರುವುದಾದರೂ ಏನು? ಎಂಬುದು ಇತ್ತಿಚೆಗೆ ಬಹಳ ಸುದ್ದಿ ಮಾಡುತ್ತಿದೆ. ಮೋದಿ ತಮ್ಮ ವಿದೇಶ ಪ್ರವಾಸಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಅವರೊಬ್ಬ ಟೂರಿಸ್ಟ್ ಪ್ರಧಾನಿ ಎಂಬ ಟೀಕೆಗಳು ಕೇಳಿ ಬಂದಿವೆ. ಈ ಟೀಕೆಗಳಿಗೆಲ್ಲಾ ಅವರು ಇದುವರೆಗೂ ಮಾತಿನ ಉತ್ತರ ಕೊಟ್ಟಿಲ್ಲ. ಅರ್ಥ ಮಾಡಿಕೊಳ್ಳುವವರಿಗೆ, ಒಪ್ಪುವವರಿಗೆ ಕೆಲಸದಿಂದಲೇ ಉತ್ತರ ಕೋಟಿದ್ದಾರೆ. ಹಿಂದೊಮ್ಮೆ ಹೇಳಿದಂತೆ ಅವರು ತಮ್ಮ ಮೇಲೆಸೆದ ಕಲ್ಲುಗಳನ್ನೇ ಮೆಟ್ಟಿಲು ಮಾಡಿ ಮೇಲೇರುತ್ತಾ ಬಂದವರು. ಎಷ್ಟಾದರೂ ಗುಜರಾತಿಯಲ್ಲವೇ? ಇನ್ವೆಸ್ಟ್ ಮಾಡಿ ಪ್ರಾಫಿಟ್ ತೆಗೆಯೋದು ಹೇಗೆ ಎಂಬುದು ಈ ಚಾಣಾಕ್ಷನಿಗೆ ಚೆನ್ನಾಗಿ ಗೊತ್ತಿದೆ. ಪ್ರತೀ ಭಾರಿ ಕೋಟ್ಯಾಂತರ ರೂ ವೆಚ್ಚ ಮಾಡಿ ವಿದೇಶ ಪ್ರವಾಸ ಕೈಗೊಂಡಾಗಲೂ ಅದರ ಹತ್ತು ಪಟ್ಟರಷ್ಟು ಲಾಭದೊಂದಿಗೆ ದೇಶಕ್ಕೆ ವಾಪಾಸಾಗಿದ್ದಾರೆ. ಬರಿಗೈಲಿ ವಾಪಾಸಾಗಿದ್ದು ಇದುವರೆಗೂ ಇಲ್ಲ.
ಈ ಭಾರಿಯ ಸ್ಯಾಂಪಲ್’ಗಳನ್ನು ನೋಡಿ. ಗೂಗಲ್’ನಿಂದ ಐನೂರು ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈಫ಼ೈ ಸೌಲಭ್ಯ, ಮೈಕ್ರೋಸಾಫ಼್ಟ್’ನಿಂದ ೫ ಲಕ್ಷ ಹಳ್ಳಿಗಳಲ್ಲಿ ಬ್ರಾಡ್’ಬ್ಯಾಂಡ್ ಸೌಲಭ್ಯ, ಕ್ವಾಲ್’ಕಾಂನಿಂದ ಸ್ಟಾರ್ಟಾಪ್’ಗಳಿಗಾಗಿ ಒಂದು ಸಾವಿರ ರೂಗಳ ನಿಧಿ ಸ್ಥಾಪನೆ, ಆಪಲ್’ನಿಂದ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪನೆ, ಫೇಸ್’ಬುಕ್’ನಿಂದ ಡಿಜಿಟಲ್ ಇಂಡಿಯಾಕ್ಕೆ ಸಂಪೂರ್ಣ ಸಹಕಾರ.. ಇನ್ನೇನು ಬೇಕು ನಮಗೆ? ಡಿಜಿಟಲ್ ಇಂಡಿಯಾದಿಂದ ನಮಗೇನೂ ಪ್ರಯೋಜನವಿಲ್ಲ, ಮೊದಲು ಹೊಟ್ಟೆಗೆ ಅನ್ನ ಕೊಡಿ ಎಂದು ಹಂಗಿಸುವವರ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ ಒಂದು ಮಾತು, ಇವತ್ತು ಒಂದೈದು ನಿಮಿಷ ಬ್ರಾಡ್’ಬ್ಯಾಂಡ್ ಇಲ್ಲದಿದ್ದರೂ ಕುಂತಲ್ಲಿ ಕೂರಲಾಗುವುದಿಲ್ಲ ನಮಗೆ, 3G ಸಿಗುವುದಿಲ್ಲ ಎಂದರೆ ನಖಶಿಕಾಂತ ಉರಿದು ಬೀಳುತ್ತೇವೆ. ನಮ್ಮ ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಇವತ್ತಿಗೂ ಬ್ರಾಡ್’ಬ್ಯಾಂಡ್ ಇಲ್ಲ. 3G ಬಿಟ್ಟಾಕಿ, ಕಾಲ್ ಮಾಡಲೂ ನೆಟ್ವರ್ಕ್ ಇರುವುದಿಲ್ಲ. ಅಂತಹಾ ಹಳ್ಳಿ ಮೂಲೆಗಳಲ್ಲಿ ಡಿಜಿಟಲ್ ಇಂಡಿಯಾದ ಮೂಲಕ ಅಂತರ್ಜಾಲ ಸಂಪರ್ಕ ಸಿಕ್ಕರೆ ಅದು ಒಳ್ಳೆಯ ಬೆಳವಣಿಗೆಯಲ್ಲವೇ? ಅದರ ಜೊತೆಗೆ ಲಕ್ಷಾಂತರ ಜನರಿಗೆ ಕೆಲಸವೂ ಸಿಗುತ್ತದೆ. ಹೊಟ್ಟೆಗೆ ಅನ್ನ ನೀಡಲು ಇನ್ನೇನು ಮಾಡಬೇಕು? ಇದು ಬರೇ ಡಿಜಿಟಲ್ ಇಂಡಿಯಾದ ಕುರಿತಷ್ಟೇ ಹೇಳಿದ್ದು. ಇನ್ನು ಅದ್ಯಾವ್ಯಾವ ಯೋಜನೆಗಳಿಗೆಲ್ಲಾ ಸಹಿ ಹಾಕಿಸಿಕೊಂಡು ಬರುತ್ತಾರೆಂದು ಮೋದಿಯೆಂಬ ಆ ಮಹಾಶಯರೊಬ್ಬರಿಗೇ ಗೊತ್ತು.
ಹಾಗಂತ ಮೋದಿ ಹೋದಲ್ಲೆಲ್ಲಾ ಭಿಕ್ಷೆಯಿತ್ತಿ ಇದನ್ನೆಲ್ಲಾ ಪಡೆದುಕೊಳ್ಳುತ್ತಿದ್ದಾರಂತಲ್ಲ. ಮೋದಿಯವರ ಐಡಿಯಾಲಜಿಗಳಿಗೆ ಮನಸೋತು ಅವರುಗಳೇ ಧಾರಾಳ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಇಲ್ಲಿ ಕೆಲಸಕ್ಕೆ ಬರುತ್ತಿರುವುದು ಮೋದಿಯವರ ಚಾಣಾಕ್ಷತನವೇ ಹೊರತು ಬೇರೇನೂ ಅಲ್ಲ.
ಮೊನ್ನೆ 21st Century Fox ಕಂಪೆನಿಯ ಸಿಇಓ ಒಂದು ಮಾತು ಹೇಳಿದ್ದರು. “ಸ್ವಾತಂತ್ರಾ ನಂತರ ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕ ನರೇಂದ್ರ ಮೋದಿ” ಅಂತ. ಅಬ್ಬಬ್ಬಾ.. ಸೂರ್ಯ ಸತ್ಯವಾದ ಈ ಮಾತು ಸಾಗರದಿಂದಾಚೆಗೂ ಹಬ್ಬಿತಲ್ಲಾ? ನಮ್ಮ ನಾಯಕನ ಕುರಿತು ಹೆಮ್ಮೆ ಪಡಲು ಇನ್ನೇನು ಕಾರಣ ಬೇಕು ನಮಗೆ? ಮೋದಿಯ ಅಮೇರಿಕಾ ಪ್ರವಾಸದ ಕುರಿತು ಫೇಸ್’ಬುಕ್’ನಲ್ಲಿ ಸ್ನೇಹಿತ ಅನೂಪ್ ವಿಠ್ಠಲ್ ಎಂಬವರು ಬರೆದಿರುವ ಪದ್ಯದ ಸಾಲುಗಳನ್ನು ನೋಡಿ ಎಷ್ಟು ಅರ್ಥಗರ್ಬಿತವಾಗಿದೆಯೆಂದು.
ಪರಮ ಪದವಿಯ ಪಡೆದು ಪಡುವಣಕೆ ಪೋಗಿರಲು
ಭಾರತ ಭಾಗ್ಯವನು ಬದಲಿಸಲು ಬಯಸಿರಲು |
ಮೋದಿ ಮರ್ಮವ ಮಾಡೆ ಮೇರಂಕೆ ಮಂದಿಯಂ
ಪಡುವಣದ ಅಂಕೆಯೊಳು ಅಂತ್ಯೋದಯ ಪೂರ್ವದೊಳ್ ||
ವ್ಯವಹಾರ ಮಧ್ಯದಲಿ ತಾಯ್ನೆಲವ ಮರೆಯದಿರೆ
ಪಾಶ್ಚಾತ್ಯ ದೇಶದಲಿ ಪೂರ್ವ ಸಂಸ್ಕೃತಿ ಬೆಳಗೆ |
ಸ್ತ್ರೀ ಪುರುಷ ಸಮತೆಯನು ದೃಢವಾಗಿ ಬೆಂಬಲಿಸೆ
ಮಾತೆಯನು ಮರೆಯದಿಹ ಮನುಜನನುಪಮನಾದ ||
ಮಾತೆಯನು ಮರೆಯದಿಹ ಮನುಜನನುಪಮನಾದ…. ವಾಹ್.. ಈ ಪದ್ಯದ ಅರ್ಥವನ್ನು ಸರಿಯಾಗಿ ತಿಳಿದುಕೊಂಡರೆ ಅದರ ವಸ್ತು”ಪುರುಷ” ಮತ್ತು ಪದ್ಯವನ್ನು ಬರೆದಿರುವವರಿಗೆ ಒಂದು ಸಲಾಂ ಹೇಳದೇ ಇರಲಾಗದು.
ಮೋದಿಯ ವಿದೇಶ ಪ್ರವಾಸದ ಕುರಿತಾಗಿ ಬರೆಯುವಾಗ ಒಂದು ಮಾತನ್ನು ಹೇಳಲು ಮರೆಯಲೇಬಾರದು. ಮೋದಿ ವಿದೇಶ ಪ್ರವಾಸ ಮಾಡುತ್ತಾರೆಂದರೆ ಕಾಂಗ್ರೆಸ್ಸಿನ ನಾಯಕರಿಗೆ, ಢೋಂಗಿ ಜಾತ್ಯಾತೀತವಾದಿಗಳಿಗೆ ಮತ್ತು ದೇಶಾಂಧರಿಗೆ ಚಳಿ ಕೂರುತ್ತದೆ. ಯಾಕೆಂದರೆ ಇಲ್ಲಿಗಿಂತಲೂ ಜಾಸ್ತಿ ಮೋದಿ ಸಾಮರ್ಥ್ಯ ಜಗಜ್ಜಾಹೀರಾಗುವುದು ಅಲ್ಲೇ. ಇಲ್ಲಿಯಾದರೆ ರಾಜಕೀಯಕ್ಕೋಸ್ಕರ ಅಭಿಮಾನಿಗಳು, ಆಪ್ತೇಷ್ಟರು ಹೊಗಳುವುದು ಎಂದು ಸುಮ್ಮನಾಗಬಹುದು, ಆದರೆ ಅಲ್ಲಿ ವಿಶ್ವದ ಗಣ್ಯಾತಿಗಣ್ಯರೆಲ್ಲ ಹೊಗಳುವಾಗ ನಿದ್ದೆಯೇ ಕೆಡುತ್ತದೆ. ಈಗಿನ ಜಮಾನಕ್ಕೆ ಅರ್ಥವಾಗುವಂತೆ ಹೇಳುವುದಾದರೆ ಇದೊಂದು “Biggest Troll Moment”
“ಕೃಷ್ಣಂ ವಂದೇ ಜಗದ್ಗುರುಂ” ಅಂದರೆ ಜಗದ್ಗುರುವಾದಂತಹ ಕೃಷ್ಣನಿಗೆ ವಂದಿಸುತ್ತೇನೆ ಎನ್ನುವ ಮಾತಿದೆ. ಇದು ದ್ವಾಪರಯುಗದ ಮಾತಾಯಿತು. ಕಲಿಯುಗದಲ್ಲಿ ಇದನ್ನು “ಮೋದಿಂ ವಂದೇ ವಿಶ್ವಗುರುಂ” ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು. ಕೃಷ್ಣನಿಗೆ ಹೋಲಿಕೆ ಯಾರೂ ಇಲ್ಲ. ಆದರೆ ಭಾರತ ವಿಶ್ವಗುರುವಾಗಬೇಕೆನ್ನುವ ಕನಸು ಬಿತ್ತಿದ ಮೋದಿಗೆ ಇವತ್ತು ಇಡೀ ಜಗತ್ತೆ ವಂದಿಸುತ್ತಿರುವುದರಿಂದ ಮೇಲಿನ ಮಾತು ಹೇಳುವುದರಲ್ಲಿ ತಪ್ಪೇನೂ ಇಲ್ಲ.
Facebook ಕಾಮೆಂಟ್ಸ್