X

ಇದಲ್ಲವೇ ಅರೆಬೆಂದ ಮನಸ್ಥಿತಿಯೆಂದರೆ?

ಕೆ.ಎಸ್ ಭಗವಾನ್ ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದನ್ನು ಖಂಡಿಸಿ ವಿದ್ಯಾವಂತ ಯುವ ಸಮೂಹ ಸಾಹಿತ್ಯ ಅಕಾಡೆಮಿ ವಿರುಧ್ಧ ತಿರುಗಿ ಬಿದ್ದಿದ್ದು ನಿಮಗೆಲ್ಲಾ ಗೊತ್ತೇ ಇರುವ ವಿಚಾರ. ಭಾನುವಾರ ಆರಂಭವಾದ ಈ ಪತ್ರ ಚಳುವಳಿ, ಸಹಿ ಸಂಗ್ರಹ ಅಭಿಯಾನವನ್ನು ಅಕಾಡೆಮಿ ಅಧ್ಯಕ್ಷರಾದ ಮಾಲತಿ ಪಟ್ಟಣ ಶೆಟ್ಟಿಯವರು ‘ಪ್ರಶಸ್ತಿಯನ್ನು ಅಕಾಡೆಮಿಯು ಸೂಕ್ತ ವ್ಯಕ್ತಿಗೇ ನೀಡಿದೆ, ಈ ಸಹಿಸಂಗ್ರಹ ಅಭಿಯಾನವೆಲ್ಲಾ ಅರೆಬೆಂದ ಯುವಕರ ಪ್ರಲಾಪ’ ಎಂದು ಹೇಳಿದ್ದಾರೆ.
ಈ ವಿಷಯಕ್ಕೆ ಬರುವ ಮೊದಲೇ ಬೇರೊಂದಷ್ಟು ವಿಷಯಗಳನ್ನು ನೋಡಿ ಬರೋಣ.

ನಮ್ಮ ನಾಡಿನ ಸಮಸ್ತ ದುರ್ಬುದ್ಧಿ ಜೀವಿಗಳೆಲ್ಲಾ ಮೊನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದರು. ಬರುವಾಗಲೇ ಯಾವ ಯಾವ ವಿಷಯಗಳ ಕುರಿತಾಗಿ ಮುಖ್ಯಮಂತ್ರಿಗಳ ಕಿವಿ ಕಚ್ಚಬೇಕೆಂದು ನಿರ್ಧರಿಸಿಕೊಂಡೇ ಬಂದಿದ್ದರು. ಬಹುಶಃ ಅಜೆಂಡಾಗಳ ಲಿಸ್ಟ್ ಮಾಡುವುದಕ್ಕೆ ಸಮಸ್ತರೂ ಮೊದಲೇ ಸಭೆ ಸೇರಿದ್ದಿರಬಹುದು. ನಮಗೆ ಬೇಡದ ವಿಷಯ ಅದು. ಅವರ ಅಜೆಂಡಾವು ರೈತರ ಆತ್ಮಹತ್ಯೆಯ ವಿಷಯವೋ, ಕತ್ತಲೆ ಭಾಗ್ಯ ನಿವಾರಣೆಯ ವಿಷಯವೋ ಆಗಿರಲಿಲ್ಲ. ಬದಲಾಗಿ ಮೌಢ್ಯ ನಿವಾರಣಾ ಕಾಯಿದೆ, ಕಲ್ಬುರ್ಗಿ ಹಂತಕರನ್ನು ಸೆರೆಹಿಡಿಯುವುದು ಮತ್ತು ರಾಘವೇಶ್ವರ ಶ್ರೀಗಳನ್ನು ಬಂಧಿಸಬೇಕೆಂಬುದಾಗಿತ್ತು.

ಇವರ ಈ ವರಾತಗಳಲ್ಲಿ ವಿಶೇಷವೇನೂ ಇಲ್ಲ ಬಿಡಿ. ಆದರೆ ನಿಜವಾಗಿಯೂ ಈ ಬುಜೀಗಳಿಗೆ ಸಾಮಾಜಿಕ ಕಾಳಜಿ ಎಂಬುದಿದೆಯಾ? ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇವರುಗಳು ಸಾಧಿಸ ಹೊರಟಿರುವುದಾದರೂ ಏನು ಎಂಬುದೇ ನನ್ನ ಪ್ರಶ್ನೆ.

ನಿಮಗೆ ನೆನಪಿದೆಯಾ? ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿನ ಎಟಿಎಮ್ ಒಂದರಲ್ಲಿ ಮಹಿಳೆ ಮೇಲೆ ಹಾಡುಹಗಲೇ ಮಾರಣಾಂತಿಕ ಹಲ್ಲೆಯಾಗಿತ್ತು. ರಾಜ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ ಮೇಲೂ ಆರೋಪಿಯನ್ನು ಇದುವರೆಗೂ ಹಿಡಿಯಲಾಗಲಿಲ್ಲ ನಮ್ಮ ಸರಕಾರಕ್ಕೆ. ನಮ್ಮ ಅದೃಷ್ಟಕ್ಕೆ ಯಾವೊಬ್ಬ ಸಾಹಿತಿಯೂ ಅದರ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಲಿಲ್ಲ. ಗಟ್ಟಿಗುಂಡಿಗೆಯ ಪೋಲೀಸ್ ಆಫೀಸರ್ ಮಲ್ಲಿಕಾರ್ಜುನ್ ಬಂಡೆಯವರ ಕೊಲೆಯಾಗಿ ವರ್ಷ ಎರಡಾಗುತ್ತಾ ಬಂತು. ಕೊಂದಿದ್ದು ಯಾರು, ರೌಡಿಗಳೇ? ಅಲ್ಲಾ ಸಹೋದ್ಯೋಗಿ ಪೋಲೀಸರೇ? ಯಾವ್ಯಾವ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಲು ನಮ್ಮ ಘನತೆವೆತ್ತ ಸಿಐಡಿಗೆ ಆಗಲಿಲ್ಲ. ಪೋಲೀಸ್ ಆಫೀಸರ್’ಗೇ ಹೀಗೆ ಆದರೆ ಜನಸಾಮಾನ್ಯರ ಪಾಡೇನು ಅಂತ ಯಾವ ಸಾಹಿತಿಯೂ ಮುಖ್ಯಮಂತ್ರಿಗಳನ್ನು ಪ್ರಶ್ನಿಸಲಿಲ್ಲ. ಬಿಡಿ. ಸಣ್ಣ ಮಕ್ಕಳ ಮೇಲೆ ಅತ್ಯಾಚಾರಗಳು, ಲೈಂಗಿಕ ಕಿರುಕುಳಗಳು ದಾಖಲೆಯ ಸಂಖ್ಯೆಯಲ್ಲಿ ನಡೆಯಿತು ಕಳೆದ ವರ್ಷ. ಎಷ್ಟೆಂದರೆ ಒಂದು ಹಂತದಲ್ಲಿ ಬೆಂಗಳೂರು ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನೂ ಪಡೆದಿತ್ತು. ಆ ಹಸುಗೂಸುಗಳ ಮೇಲೆ ನಡೆದ ದೌರ್ಜನ್ಯದ ಯಾವ ಪ್ರಕರಣದಲ್ಲೂ ನೈಜ ಆರೋಪಿಯನ್ನು ಹಿಡಿದು ಶಿಕ್ಷಿಸಲು ನಮ್ಮ ಸರಕಾರಕ್ಕೆ ಆಗಲಿಲ್ಲ. ಅತ್ಯಾಚಾರದ ವಿರುದ್ಧ ಕಠಿಣ ಕಾನೂನನ್ನು ತನ್ನಿ, ಆರೋಪಿಗಳನ್ನು ಹಿಡಿದು ಶಿಕ್ಷೆ ನೀಡಿ ಎಂದು ಯಾವ ಸಾಹಿತಿ ಮಹಾಶಯನೂ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಗ್ರಹಿಸಲಿಲ್ಲ. ಹೋಗಲಿ. ತನ್ನ ಕಾರ್ಯ ವೈಖರಿಯಿಂದ ಜನಮನಗೆದ್ದಿದ್ದ ಡಿಕೆ ರವಿಯವರ ಅನುಮಾನಾಸ್ಪದ ಸಾವಾದಾಗ ಅದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಜನ ಬೀದಿಗಿಳಿದರು. ನಮ್ಮ ಪುಣ್ಯ, ಕೆಲ ಸಾಹಿತಿಗಳು ರವಿಯವರನ್ನು ತೆಗಳಿ, ಸರ್ಕಾರವನ್ನು ಸಮರ್ಥಿಸಿಕೊಂಡರೇ ಹೊರತು ಯಾವೊಬ್ಬ ಸಾಹಿತಿಯೂ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗಳನ್ನು ಮನವೊಲಿಸಲಿಲ್ಲ. ಟೌನ್ ಹಾಲ್ ಮುಂದೆ ಧರಣಿ ಕೂರಲಿಲ್ಲ.

ಈ ಅತ್ಯಾಚಾರ, ಕೊಲೆಗಳ ಸುದ್ದಿ ಬಿಡಿ. ಇಂದು ರಾಜ್ಯ ಹಿಂದೆಂದೂ ಕಾಣದ ಬರಗಾಲದಿಂದ ತತ್ತರಿಸುತ್ತಿದೆ. ಮಳೆಯಿಲ್ಲ, ಬೆಳೆಯಿಲ್ಲ. ರೈತರು ಒಬ್ಬರ ಹಿಂದೆ ಮತ್ತೊಬ್ಬರಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸೌಜನ್ಯಕ್ಕೂ ಕೂಡಾ ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಸಾಹಿತಿಗಳ್ಯಾರೂ ಇಲ್ಲ. ಸಾಲಮನ್ನಾ ಮಾಡಿ, ಗೊಬ್ಬರಗಳಿಗೆ ಸಬ್ಸಿಡಿ ನೀಡಿ, ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಿ ಎಂದಾಗಲೀ ಅಥವಾ ಮುಖ್ಯಮಂತ್ರಿಗಳನ್ನೂ ಸೇರಿಸಿ ಜಡತ್ವದಿಂದ ತುಕ್ಕು ಹಿಡಿದು ಹೋಗಿರುವ ಕರ್ನಾಟಕ ಸರಕಾರಕ್ಕೆ ‘ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಸ್ವತಃ ಸಚಿವರುಗಳೇ ಸ್ಪೂರ್ತಿ ತುಂಬಿ, ಧೈರ್ಯ ಹೇಳಿ, ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಿ ’ ಎಂದು ಯಾವ ಸಾಹಿತಗಳೂ ಅದೇಶಿಸಲಿಲ್ಲ. ಮತ್ತೊಂದೆಡೆ ಮಹದಾಯಿ ಕುರಿತಾಗಿ ಕಳಸಾ ಬಂಡೂರಿ ಹೋರಾಟ ಕಾವು ಪಡೆದುಕೊಳ್ಳುತ್ತಿದ್ದು ಮೊನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಾಹಿತಿಗಳ್ಯಾರೂ ಈ ಹೋರಾಟವನ್ನು ಬೆಂಬಲಿಸಿಲ್ಲ. ಕನಿಷ್ಟ ಪಕ್ಷ ‘ಬಿಜೆಪಿ, ಕಾಂಗ್ರೆಸ್ಸ್ ಎಂಬ ರಾಜಕೀಯ ಮಾಡದೇ ಕ್ರೀಯಾತ್ಮಕವಾಗಿ ಸಮಸ್ಯೆ ಬಗೆಹರಿಸುವಲ್ಲಿ ಕೆಲಸ ಮಾಡಿ’ ಎಂದು ಯಾರೂ ಸಹ ಹೇಳಲಿಲ್ಲ. ಕರಾವಳಿಯಲ್ಲಿ ನೈತಿಕ ಪೋಲೀಸ್’ಗಿರಿಯಾದರೆ ತಮಗೇ ಪೆಟ್ಟು ಬಿದ್ದಂತೆ ಬೊಬ್ಬಿರಿಯುವ ಸಾಹಿತಿಗಳೆಲ್ಲಾ ಇಲ್ಲಿನ ಹಿಂದೂ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಹರಿಹಾಯುತ್ತಾರೆ. ಈವಾಗ ಅದೇ ಸಂಘಟನೆಗಳೆಲ್ಲಾ ನೇತ್ರಾವತಿಯ ಉಳಿವಿಗಾಗಿ ನಡೆದ ಬೃಹತ್ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದಾಗ ವಿಚಾರವಾದಿಯಾಗಲೀ, ಸ್ವಘೋಷಿತ ಸಂಶೋಧಕನಾಗಲೀ, ಸಾಹಿತಿಯಾಗಲೀ ಬಾಯಿ ಬಿಟ್ಟಿಲ್ಲ .

ಯಾಕೆ? ಯಾಕೆ ಎಂಬುದೇ ದೊಡ್ಡ ಪ್ರಶ್ನೆ. ಉತ್ತರ ಮಾತ್ರ ವೆರಿ ಸಿಂಪಲ್. ಏನೆಂದರೆ ಮೇಲಿನ ಯಾವೊಂದು ಪ್ರಕರಣದಲ್ಲೂ ಈ ಬುಜೀಗಳ ಬೇಳೆ ಬೇಯುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ಕಗ್ಗಂಟಾಗಿರುವ ಈ ಪ್ರಕರಣಗಳ ಬಗ್ಗೆ ಬಾಯಿಬಿಟ್ಟರೆ ಎಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೋ ಎಂಬ ಭಯ. ಆ ಮೂಲಕ ಮುಂದೆ ಸಿಗಲಿರುವ ಪ್ರಶಸ್ತಿ, ಸ್ಥಾನಮಾನಗಳನ್ನು ಎಲ್ಲಿ ಕಿತ್ತುಕೊಂಡು ಬಿಡುತ್ತಾರೋ ಎಂಬ ಆತಂಕ. ತಮಾಷೆಯೆಂದರೆ ಕಲ್ಬುರ್ಗಿ ಸಾವಿನ ಸತ್ಯ ಹೊರಹಾಕುವುದಲ್ಲಿ ವಿಫಲವಾಗಿರುವ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿ ಕೆಲ ಸಾಹಿತಿಗಳು ಜಿದ್ದಿಗೆ ಬಿದ್ದು ತಮಗೆ ದೊರೆತಿದ್ದ ಪ್ರಶಸ್ತಿಗಳನ್ನು ವಾಪಾಸ್ ಮಾಡುತ್ತಿದ್ದಾರೆ. ಬೇಕೆಂದಾದಾಗ ಭಟ್ಟಂಗಿತನ ಪ್ರದರ್ಷಿಸಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು, ಈಗ ತಮ್ಮ ಸೋ ಕಾಲ್ಡ್ ವೈಚಾರಿಕತೆಯ ಪ್ರದರ್ಶನಕ್ಕಾಗಿ ಪ್ರಶಸ್ತಿಗಳನ್ನು ವಾಪಾಸ್ ಮಾಡುವುದು. ಭಲೇ ಇದೆ ಇದು!

ಈ ಸಾಹಿತಿ ಮಹಾಶಯರುಗಳಿಗೆ ನಿಜವಾಗಿಯೂ ಸಾಮಾಜಿಕ ಕಳಕಳಿ, ಸಾಮಾಜಿಕ ನ್ಯಾಯದ ಕುರಿತು ನಂಬಿಕೆ ಎಂಬುದು ಇದ್ದಿದ್ದರೆ ನಂದಿತಾ ಸಾವು, ಸೌಜನ್ಯ ಮೇಲಿನ ದೌರ್ಜನ್ಯ, ಹಸುಳೆಗಳ ಮೇಲೆ ನಡೆದಿರುವ ಲೈಂಗಿಕ ಕಿರುಕುಳಗಳ ಬಗ್ಗೆ ಸೊಲ್ಲೆತ್ತದೆ ಎಂದೋ ನಡೆದಿದೆ ಎನ್ನಲಾಗುತ್ತಿರುವ ಅತ್ಯಾಚಾರಗಳ ಅದರಲ್ಲೂ ನಿರ್ಧಿಷ್ಟವಾಗಿ ಒಂದೇ ಕೇಸಿನ ಕುರಿತಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿರಲಿಲ್ಲ. ಬಂಡೆ, ರವಿ ಸಾವಿನ ತನಿಖೆ ಶೀಘ್ರ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಎನ್ನುವುದು ಬಿಟ್ಟು ಕೇವಲ ಕಲ್ಬುರ್ಗಿಯವರ ಹಂತಕರನ್ನು ಪತ್ತೆಹಚ್ಚಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿರಲಿಲ್ಲ. ಅನ್ನದಾತರ ಪರವಾಗಿ ನಿಲ್ಲದೆ ಕೇವಲ ತಮ್ಮ ಅಜೆಂಡಾಗಳ ಹೇರಿಕೆಯಲ್ಲಿಯೇ ಉತ್ಸಾಹ ತೋರುತ್ತಿರಲಿಲ್ಲ. ವಾಚಾಮಗೊಚರ ವಾಚಾಳಿತನ ತೋರಿಸುತ್ತಿರಲಿಲ್ಲ. ವಿಚಾರವಾದಿಗಳೆಂಬ ಬಿರುದಾಂಕಿತ ಈ ಬುದ್ಧಿಜೀವಿಗಳಿಗೇಕೆ ಈ ಪರಿ ದುರ್ಬುಧ್ಧಿ? ಕಲ್ಬುರ್ಗಿಯವರ ಹತ್ಯೆ ವೈಚಾರಿಕತೆಯ ಹತ್ಯೆಯಾದ್ರೆ ರವಿ ಸಾವು ಪ್ರಾಮಾಣಿಕತೆಯ ಸಾವಲ್ಲವೇ? ಬಂಡೆಯವರ ಕೊಲೆ ಕರ್ತವ್ಯ ಪ್ರಜ್ಞೆಯ ಕೊಲೆಯಲ್ಲವೇ?

ಈಗ ಮಾಲತಿ ಪಟ್ಟಣಶೆಟ್ಟಿಯವರ ಹೇಳಿಕೆಯ ವಿಷಯಕ್ಕೆ ಬರೋಣ. ಅಯೋಗ್ಯನೊಬ್ಬನಿಗೆ ಪ್ರಶಸ್ತಿ ನೀಡುವುದನ್ನು ಪ್ರಶ್ನಿಸಿದ್ದನ್ನವರು ಅರೆಬೆಂದ ಸ್ಥಿತಿಯವರು ಎಂದಿದ್ದಾರೆ. ಇರಲಿ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದೆ ರಾಮಾಯಣದ ಬಗ್ಗೆಯೇ ಬರೆದ ಕುವೆಂಪುರವರಿಗೂ ನೀಡಿದೆ. ಮಹಾಭಾರತದ ಕುರಿತಾಗಿ ಬರೆದ ಡಿವಿಜಿಯವರಿಗೂ ನೀಡಿದೆ. ಈಗ ಅದೇ ರಾಮಯಣ ಮತ್ತು ಮಹಾಭಾರತವನ್ನು ನಿತ್ಯವೂ ತೆಗಳುತ್ತಿರುವ ಭಗವಾನ್’ಗೂ ನೀಡಿದೆ. ಸಾಹಿತ್ಯ ಅಕಾಡೆಮಿಯವರದ್ದು ಎಂತಹಾ ಮನಸ್ಥಿತಿಯಿದು ಹಾಗಾದ್ರೆ? ಅರೆಮರುಳಿನ ಮನಸ್ಥಿತಿಯೇ? ಅನರ್ಹ ವ್ಯಕ್ತಿಗೆ ಪ್ರಶಸ್ತಿ ನೀಡುವುದರಿಂದ ಆ ಪ್ರಶಸ್ತಿಗೂ, ಹಿಂದೆ ಆ ಪ್ರಶಸ್ತಿ ಪಡೆದವರಿಗೂ ಅವಮಾನವಾಗುತ್ತದೆಯೆಂದು ಸಾತ್ವಿಕ ಹೋರಾಟ ಮಾಡುತ್ತಿರುವವರದ್ದು ಅರೆಬೆಂದ ಮನಸ್ಥಿತಿಯೇ ಅಲ್ಲಾ ರಾಮಾಯಣವನ್ನು ಹೊಗಳಿ ಬರೆದವರಿಗೂ ತೆಗಳಿ ಬರೆದವನಿಗೂ ಪ್ರಶಸ್ತಿ ನೀಡುತ್ತಿರುವ ಸಾಹಿತ್ಯ ಅಕಾಡೆಮಿಯವರದ್ದೋ? ಆಕಡೆ ನಮ್ಮ ಸಾಹಿತಿಗಳು ಸಾಹಿತ್ಯ, ವೈಚಾರಿಕತೆಯ ಸೋಗಿನಲ್ಲಿ ತಮ್ಮ ಅಜೆಂಡಾಗಳ ಹೇರಿಕೆಯಲ್ಲಿ, ಸಾವಿನ ಮನೆಯಲ್ಲಿ ಬೇಳೆ ಬೇಯಿಸುವುದರಲ್ಲಿ ನಿರತರಾಗಿದ್ದಾರೆ. ರಾಜ್ಯವೇ ಬರಗಾಲದಲ್ಲಿ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಇವರುಗಳು ಪಿಟೀಲು ಕುಯ್ಯುತ್ತಿದ್ದಾರೆ. ಇದಲ್ಲವೇ ಅರೆಬೆಂದ ಮನಸ್ಥಿತಿಯೆಂದರೆ? ನೀವೇ ಹೇಳಿ!

ಯಾರೇನೇ ಹೇಳಲಿ. ಸಹಿ ಸಂಗ್ರಹ ಏಳು ಸಾವಿರವನ್ನು ದಾಟಿದೆ. ನಂಬರ್ ಎಷ್ಟಾಯ್ತು ಎಂಬುದು ಮುಖ್ಯವಲ್ಲ. ಪ್ರಶಸ್ತಿ ಹಿಂಪಡೆಯುವವರೆಗೂ ಮುಂದುವರೆಸೋಣ.

President of Karnataka Sahitya Academy, Chief Minister of Karnataka, India: Karnataka Sahitya Academy awardees list must be reconsidered for changes and rectification – Sign the Petition!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post