X

ಅಲ್ಯೂಮಿನಿಯಂ ಏಣಿಯೆಡೆಗೆ ಎಲ್ಲರ ಚಿತ್ತ

ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಒಂದೊಂದಾಗಿ ಆಗುತ್ತಿದ್ದು ಅವುಗಳಲ್ಲಿ ಅಲ್ಯೂಮೀನಿಯಂ ಏಣಿ ಗಳು ಇತ್ತೀಚೆಗೆ ವ್ಯಾಪಕ ಪ್ರಯೋಜನಕ್ಕೆ ಸಿಗುತ್ತಿವೆ. ಬಿದಿರಿನ ಹಳೆ ಏಣಿಗಳ ಎಲ್ಲ ಕೊರತೆಗಳನ್ನು ನೀಗಿಸಿ ಪ್ರವೇಶವಾದ ಈ ಏಣಿಗಳು ಕೃಷಿಕರಿಗೆ ಹಲವು ತೆರದಲ್ಲಿ ಬಳಕೆಗೆ ಉಪಯೋಗವಾಗುತ್ತಿವೆ. ತಮ್ಮದೇ ತಂತ್ರಜ್ಞಾನದಿಂದ ಅಲ್ಯೂಮಿನಿಯಂ ಏಣಿಗಳಲ್ಲಿ ಕೆಲವು ಕೃಷಿ ಪರಿಣಿತರು ಬದಲಾವಣೆ ಮಾಡಿಕೊಂಡಿದ್ದು ಇದು ಮತ್ತಷ್ಟು ಬಳಕೆಗೆ ಪ್ರಯೋಜನಕಾರಿಯಾಗಿದೆ.

ಭಾರ ಮತ್ತು ಅಂಕುಡೊಂಕು

ಬಿದಿರಿನ ಭಾರವಾದ ಏಣಿಗಳನ್ನು ಅಡಿಕೆ ತೋಟಗಳಲ್ಲಿ ಅತ್ತಿಂದಿತ್ತ ಓಡಾಡುವುದು ಪ್ರಯಾಸ.  ಉದ್ದದ ಏಣಿಗಳನ್ನು ಕೇವಲ ಒಬ್ಬನೇ ನಿಭಾಯಿಸುವುದು ಕಷ್ಟಸಾಧ್ಯ.  ಎರಡೆರಡು ಜನ ಪರದಾಡುವ ಕಷ್ಟ ಒಂದೆಡೆ, ಅಂಕುಡೊಂಕಾದ ಏಣಿಯನ್ನು ಮರಗಳಿಗೆ ಆನಿಸಿ ನಿಲ್ಲಿಸುವುದು ಕೂಡ ದೊಡ್ಡ ಸಮಸ್ಯೆ. ಇಂತಹ ಏಣಿಗಳ ಬುಡ ಒಂದೆಡೆಯಿದ್ದರೆ ತುದಿ ಮರಬಿಟ್ಟು ದೂರನಿಂತು ಮರವೇರುವುದು ಅಪಾಯಕಾರಿ ಎಂಬ ಸ್ಥಿತಿ.  ಹೆಚ್ಚಾಗಿ ಬಿದಿರಿನ ಏಣಿಗಳ ಮೆಟ್ಟಿಲುಗಳು ಬಾಳಿಕೆ ಬರುವುದು ಕಡಿಮೆ. ಬೆಳೆದಬಿದಿರು, ಕಡಿಯುವ ಸಮಯ ಮತ್ತು ಜೋಪಾನವಾಗಿ ತೆಗೆದಿರಿಸುವ ಚಾಕಚಕ್ಯತೆಗಳಿದ್ದಲ್ಲಿ ಒಂದಷ್ಟು ಸಮಯ ಉಳಿದು ಬಿಡಬಹುದು. ಆದರೂ ಅದರ ಇತರ ನ್ಯೂನತೆಗಳಿಂದಾಗಿ ಅದನ್ನು ದೂರವಿಡುವ ದಿನಗಳು ಹತ್ತಿರವಾಗುತ್ತಿವೆ.

ಹಗುರ ಮತ್ತು ಸಲೀಸು

ಅಲ್ಯೂಮಿನಿಯಂ ಏಣಿಗಳ ಶ್ರೇಣಿ  ಹಗುರವಾದದ್ದು. ಇಲ್ಲಿ ನಮಗೆ ಬೇಕಾದಂತೆ ಆಯ್ಕೆಗಳಿವೆ. ಇಪ್ಪತು ಅಡಿ, ಹತ್ತು ಅಡಿ ಉದ್ದದ ಅಳತೆಯ ವೈವಿಧ್ಯತೆಗಳಿವೆ. ಇಪ್ಪತ್ತು ಅಡಿ ಉದ್ದ ಸಾಕಾಗದಿದ್ದರೆ ಅದಕ್ಕೆ ಮತ್ತೆ ಹತ್ತು ಅಡಿ ಜೋಡಿಸುವ ವ್ಯವಸ್ಥೆ ಏಣಿಗಳಲ್ಲಿವೆ. ಕಾಳುಮೆಣಸು ಕೊಯ್ಯುವ ಸಮಯದಲ್ಲಿ ಮರದ ಎತ್ತರಕ್ಕೆ ಬಳ್ಳಿ ಹಬ್ಬಿದ್ದರೆ ಇಪ್ಪತ್ತು ಅಡಿ ಏಣಿಗೆ ಮತ್ತೆ ಹತ್ತುಅಡಿ ಮರದಲ್ಲೇ ಜೋಡಿಸಬಹುದಾದ್ದು ಈ ಏಣಿಯ ವಿಶೇಷತೆ. ಮರಕ್ಕೆ ಏಣಿ ಆತು ನಿಲ್ಲುತ್ತದೆ. ಏಣಿಯ ತುದಿಯಲ್ಲಿ ಇಂಗ್ಲಿಷ್ನ ‘ಯು’ ಆಕಾರದ ಸರಳುಗಳು ಮರವನ್ನು ಗಟ್ಟಿ ಹಿಡಿದಿಡುವುದರಿಂದ ಮತ್ತು ಏಣಿಯ ಬುಡದಲ್ಲಿ ಸೂಜಿಯಾಕಾರದ ಕಬ್ಬಿಣದ  ಸರಳುಗಳಿದ್ದು ಅವುಗಳು ನೆಲದಲ್ಲಿ ಹೂತು ಏಣಿಯನ್ನು  ತಿರುಗದಂತೆ ರಕ್ಷಿಸುವುದರಿಂದ ಎಲ್ಲರಿಗೆ ಮರವೇರುವ ಸುರಕ್ಷಿತ ಖಾತ್ರಿ ಈ ಏಣಿಗಳಿಂದ ದೊರೆಯುತ್ತವೆ. ಬಿದಿರ ಏಣಿಯಲ್ಲಾದರೆ ಸ್ವಲ್ಪ ಹೊತ್ತು ನಿಲ್ಲುವುದರಿಂದ ಕಾಲು ನೋಯಲು ಆರಂಭವಾಗುತ್ತದೆ. ಆದರೆ ಅಲ್ಯೂಮಿನೀಯಂ ಏಣಿಗಳಲ್ಲಿ ಬಹಳ ಹೊತ್ತು ನಿಂತು ಕಾಳು ಮೆಣಸು ಕೀಳುವುದು ಕಷ್ಟವಲ್ಲ. ನಮ್ಮ ಪಾದವಿಡೀ  ನಿಲ್ಲುವಷ್ಟು ಅಗಲ, ಬಿಸಿಲು-ಮಳೆಗೆ ಹಾಳಾಗದ ಆಧುನಿಕ ತಂತ್ರಜ್ಞಾನದ ಬಹಳ ಗಟ್ಟಿಯಾದ ಮೆಟ್ಟಿಲುಗಳು ಇದರಲ್ಲಿವೆ. ಏನಾದರೂ  ತೊಂದರೆಗಳಿಂದಾಗಿ ಮೆಟ್ಟಿಲುಗಳು ತುಂಡಾದರೆ ಅದೇ ಜಾಗಕ್ಕೆ ಮತ್ತೆ ಜೋಡಿಸಬಹುದಾಗಿದೆ. ಎರಡೆರಡು ಬೋಲ್ಟ್  ಸಹಾಯದಿಂದ ಮೆಟ್ಟಿಲುಗಳು ಜೋಡಿಸಲ್ಪಟ್ಟಿರುತ್ತವೆ.

ರೆಡಿಮೇಡ್

ಸಾಮಾನ್ಯವಾಗಿ ಅಲ್ಯೂಮಿನೀಯಂ ಏಣಿಗಳು ಮಾರುಕಟ್ಟೆಯಲ್ಲಿ ರೆಡಿಮೇಡ್ ಆಗಿ ಸಿಗುತ್ತವೆ. ಹೆಚ್ಚಾಗಿ ಎರಡು ಇಂಚಿನ ಪೈಪ್ಗೆ ಮೆಟ್ಟಿಲುಗಳನ್ನು ಜೋಡಿಸಿರುತ್ತಾರೆ. ಗಮನಿಸಬೇಕಾದ್ದು ಪೈಪ್ ಗುಣಮಟ್ಟವನ್ನು. ಇತ್ತೀಚೆಗೆ ಕೆಲವು ಕೃಷಿಕರು ಮರಕ್ಕೆ ಏಣಿಯನ್ನಿಟ್ಟು ಹಗ್ಗದಿಂದ ಕಟ್ಟುವಾಗ ಏಣಿ ಬಾಗುತ್ತದೆ ಎಂಬ ಆರೋಪ ಮಾಡಿದ್ದರು. ತೆಳುವಾದ ಪೈಪ್ ಆದರೆ ಈ ಸಮಸ್ಯೆ ಬಂದೆ ಬರುತ್ತದೆ. ಉತ್ತಮ ಗುಣಮಟ್ಟದ ಪೈಪ್ಗಳನ್ನು  ಆಯ್ಕೆ ಮಾಡಿ ಅದಕ್ಕೆ ಮೆಟ್ಟಿಲುಗಳನ್ನು ಜೋಡಿಸಲು ಹೇಳುವುದು ಅನುಕೂಲಕರ. ಬಾಗುವಷ್ಟು ತೆಳುವಾದ ಪೈಪ್ ಆದರೆ ಕೇವಲ ಮರಕ್ಕೆ ಆನಿಸಿ ಹತ್ತುವುದಾದರೆ ಆಗಬಹುದೇ ಹೊರತು ಮರಕ್ಕೆ ದೂರದಿಂದ ಏಣಿ ಇಡುವಂತಿಲ್ಲ. ಇದು ಪ್ರಯೋಜನಕಾರಿಯಾಗದು. ಆದ್ದರಿಂದ ನಿಮ್ಮ ಆಯ್ಕೆ ಜಾಗ್ರತೆಯಿಂದ ನಡೆಯಬೇಕು.

ನಾವೇ ತಯಾರಿಸಿದರೆ?

ಮಾರುಕಟ್ಟೆಯ ವಸ್ತುಗಳೆಂದರೆ ಯಾವತ್ತೂ ಹಾಗೆಯೇ! ಅದು ಹೆಚ್ಚಾಗಿ ಹಣಮಾಡುವ ದೃಷ್ಟಿಯಿಂದ ಕೂಡಿರುವಂತಾದ್ದು. ಗುಣಮಟ್ಟಕ್ಕೆ ಒತ್ತು ಕೊಡುವ ತಯಾರಕರು ಬಹಳ ಕಡಿಮೆ. ಮಾರುಕಟ್ಟೆಯ ಏಣಿಯನ್ನು ಮರೆತು ಅಲ್ಲಿಂದ ಕೇವಲ ಮೆಟ್ಟಿಲು ತಂದು ನಾವೇ ಏಣಿಯನ್ನು ತಯಾರಿಸಬಹುದಲ್ಲ. ಈ ನಿಟ್ಟಿನಲ್ಲಿ ಹಲವರು ಈಗಾಗಲೇ ಯಶಸ್ವಿಯಾಗಿದ್ದಾರೆ. ಹಳೆಯ ನೀರಾವರಿ ಪದ್ಧತಿಯಲ್ಲಿ ಅಲ್ಯೂಮಿನೀ0ಯಂ ಪೈಪುಗಳನ್ನು ಬಳಕೆ ಮಾಡುತ್ತಿದ್ದರು. ನೀರಾವರಿ ಪದ್ದತಿಗಳು ಬದಲಾದ ಮೇಲೆ ಅಂತಹ ಪೈಪುಗಳನ್ನು ಕೆಲವರು ಮಾರಾಟಮಾಡಿದ್ದಾರೆ. ಕೆಲವರ ಮನೆಗಳಲ್ಲಿ ಈಗಲೂ ಪೈಪುಗಳು ಉಳಿದುಕೊಂಡಿವೆ. ಚಪ್ಪರ ಹಾಕುವಾಗ ಉಪಯೋಗಕ್ಕೆ ಸುಲಭವಾಗುತ್ತದೆ ಎಂಬುದರಿಂದಾಗಿ ಇವುಗಳು ಉಳಿಯಲು ಕಾರಣ. ಅದಿರಲಿ. ಅಂತಹ ಪೈಪುಗಳು ಸಿಕ್ಕಿದರೆ ಗಟ್ಟಿ ಮುಟ್ಟಾದ ಏಣಿಯನ್ನು ನಾವೇ ತಯಾರಿಸಿಕೊಳ್ಳಬಹುದು. ಮೆಟ್ಟಿಲು, ಬುಡಕ್ಕೆ-ತುದಿಗೆ ಕೊಕ್ಕೆಗಳನ್ನು ಮಾಡಿಸಿ ತಂದು ಜೋಡಿಸಿದರಾಯಿತು. ಮಾರುಕಟ್ಟೆಯಿಂದ ತಂದುದಕ್ಕಿಂತ ಅಸಲು ಹೆಚ್ಚಾದರೂ ಚಿಂತಿಲ್ಲ. ಅದರಿಂದ ಮೂರುಪಾಲು ಗಟ್ಟಿ ಏಣಿ ನಿಮ್ಮದಾಗುತ್ತದೆ.

ವಿದ್ಯುತ್ ಇದ್ದರೆ ಜೋಕೆ

ನಿಮ್ಮ ತೋಟದಲ್ಲಿ ವಿದ್ಯುತ್ ತಂತಿ ಹಾದು ಹೋಗುವುದಾದಲ್ಲಿ ನೀವು ಅಲ್ಯೂಮಿನೀಯಂ ಏಣಿ ಹೊಂದಿದವರಾಗಿದ್ದರೆ ತೀರಾ ಜಾಗ್ರತೆ ಬೇಕು. ಅದರ ಸನಿಹ ಎತ್ತರಕ್ಕೇರಿಯಾ ಮುತುವರ್ಜಿ ಇದ್ದವರಾದರೆ ಚಿಂತಿಲ್ಲ. ಇಲ್ಲದೆ ಹೋದರೆ ಕೃಷಿಕ ಸಿಕ್ಕಿಹಾಕಿಕೊಳ್ಳುವ ಏರ್ಪಾಡು ಎಂಬುದು ನೆನಪಿರಬೇಕು. ಏಣಿಯನ್ನು ತೋಟದಲ್ಲಿ ಒಯ್ಯುವಾಗಲೂ ಅಡಿಕೆ, ತೆಂಗಿನ ಮರಗಳಿಗೆ ತಾಗದಂತೆ ಜಾಗ್ರತೆ ಅಗತ್ಯ. ಬಿದಿರ ಏಣಿಯನ್ನು ಹೊಗೆಬಡಿಯುವಲ್ಲಿ ಕಟ್ಟಿದಂತೆ ಈ ಏಣಿಯನ್ನು ಕಟ್ಟುವಂತಿಲ್ಲ. ಇದು ಹಾಳಾಗಿ ಹೋದೀತು.

ಒಟ್ಟಿನಲ್ಲಿ ಕೃಷಿಗೆ ಆಧುನಿಕತೆ ಬಂದಂತೆಲ್ಲ ಅದನ್ನು ಸರಿಯಾಗಿ ಗಮನಿಸಿ ನಾವೂ ಅಳವಡಿಸಿಕೊಳ್ಳುವುದು ಜಾಣತನ. ಕಾರ್ಮಿಕರ ತೀವ್ರ ಕೊರತೆ ಕಾಡುತ್ತಿರುವ ಈ ಸಮಯದಲ್ಲಿ ಸುಲಭದಲ್ಲಿ ಕೆಲಸಗಳನ್ನು ಪೂರೈಸುವ ಏರ್ಪಾಡುಗಳಾಗಬೇಕಾದ್ದು ಅನಿವಾರ್ಯ.

– Shamna Khandige

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post