X

ಆತ್ಮ ಸಂವೇದನಾ: ಅಧ್ಯಾಯ 2

” ಹತ್ತು ಶತಮಾನಗಳ ಹಿಂದೆ.. ಇಂದಿಗೆ ಸಾವಿರ ವರ್ಷಗಳ ಮೊದಲು..”

ರಾತ್ರಿ ಒಂದು ಘಂಟೆ, ಬಿಸಿ ಗಾಳಿ ಮೆಲ್ಲನೆ ಬೀಸುತ್ತಿತ್ತು. ರಸ್ತೆ ದೀಪಗಳ ಮಂದ ಬೆಳಕು. ವಾಹನಗಳ ಭರಾಟೆ. ದೊಡ್ಡ ನಗರದ ವಾಸನೆಗಳಿಂದ ಕೂಡಿದ ದಾರಿಯ ಚಿಕ್ಕ ಗಲ್ಲಿಯ ಮುರಿದು ಬೀಳಲೆಂದೇ ಕಟ್ಟಿದಂತಿರುವ ಸಣ್ಣ ಮನೆಯಲ್ಲಿ ಅಷ್ಟೇ ಹರೆಯ ತುಂಬಿರುವ ತರುಣಿಯೊಬ್ಬಳು ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದಳು.ನೋವು ನಾಭಿಯಾಳದಿಂದ ಹೊರಬರುತ್ತಿತ್ತು.

“ತಾನು ಮಾಡಿದ ಪಾಪ ಕೊಲ್ಲುತ್ತಿದೆಯೇನೋ? ಕತ್ತಲ ರಾತ್ರಿಯ ಕಳ್ಳ ಸುಖದ ಕ್ಷಣಗಳು ನೋವನ್ನು ಹೆಚ್ಚಿಸುತ್ತಿರಬಹುದೆನೋ?” ಎಂಬ ಭಾವ ಅವಳ ಮನದಲ್ಲಿ.

ಹತ್ತಿರದಲ್ಲಿ, ಹತ್ತಿರದಲ್ಲೇನು ಆ ದಾರಿಯಲ್ಲೇ ಮತ್ಯಾವ ಮನೆಗಳೂ ಇರಲಿಲ್ಲ. ನಗರದೊಳಗಿದ್ದರೂ ನಿರ್ಜಿವ ಪಾಳು ಮನೆಯಲ್ಲಿ ಅವಳು ಹೊಸ ಭಾರತರತ್ನನಿಗೆ ಜನ್ಮವೀಯಲು ತನ್ನ ಜೀವವನ್ನು ತೇಯುತ್ತಿದ್ದಳು. ಅದಕ್ಕೆ ಕಾರಣನಾದ ಬಂಡ ಜೀವ ಅಲ್ಲೇ ಪಕ್ಕ ನಿಂತು ಮೂಕ ಪ್ರೇಕ್ಷಕನಾಗಿತ್ತು. ಸುಖ ನರಳಿಕೆಯ ಕ್ಷಣಗಳು ಈಗಕೆಟ್ಟ ಸ್ವಪ್ನದಂತೆ ಕಣ್ಣೆದುರು ಮುಲುಗುತ್ತಿದ್ದವು. ಅನೈತಿಕತೆಯ ಪರಮಾವಧಿ ಅದು. ಇಬ್ಬರೂ ಅನಾಮಿಕ ಪ್ರೇಮಿಗಳು.

ಪ್ರಕೃತಿ ಸುಮ್ಮನೆ ನೋಡುತ್ತಿತ್ತು. ತನಗೇನೂ ಸಂಬಂಧವಿಲ್ಲ ಎಂಬ ನಿರ್ಲಿಪ್ತ ಭಾವ. ಮನುಷ್ಯ ಮತ್ತು ಪ್ರಾಣಿಗೆ ಇರುವ ವ್ಯತ್ಯಾಸ…??

” ಕನಸುಗಳು.. ಯೋಚನೆಗಳ ಸಾಲು..” ವಿಶ್ವ ಮನುಷ್ಯನಿಗೆ ಕೊಟ್ಟ ಬಹುದೊಡ್ಡ ಕೊಡುಗೆ. ಕನಸುಗಳು.. ಮುಗಿಯದಿರುವ ಯೋಚನೆಗಳ ಸಾಲು.. ಪ್ರಾಣಿಗಳು ಪ್ರಾಣಿಗಳಾಗೇ ಉಳಿದಿರಲು ಕಾರಣ ಅವು ಕನಸು ಕಾಣಲಾರವು. ಯೋಚನೆಗಳಿಗೆ ಅರ್ಥ ಹುಡುಕಲಾರವು. ಮನುಷ್ಯ..??

ಮನುಷ್ಯ ಕನಸು ಕಾಣಬಲ್ಲ. ಕತ್ತಲ ರಾತ್ರಿಯಲ್ಲಿ ಅರಿವಿಲ್ಲದ ಕನಸಿನ ಜಾತ್ರೆಗೂ ಮೀರಿ ಬೆಳಗಿನ ಬೆಳಕಿನಲ್ಲೂ ಸ್ವಪ್ನಸಾಗರದಲ್ಲಿ ತೇಲಬಲ್ಲ. ಕಂಡ ಕನಸಿನೆಡೆಗೆ ಓಡಬಲ್ಲ. ಇದೇ ಗುಣ ಮನುಷ್ಯನನ್ನು ಇತರರಿಂದ ಬೇರೆ ನಿಲ್ಲಿಸಿತು. ಹುಟ್ಟಿದ ಕ್ಷಣವೇ ಅಳುವಿನ ಮೊರೆ ಹೋದ ಮನುಷ್ಯ ಬುದ್ಧಿ ಬೆಳೆದಂತೆ ಆಳುವುದನ್ನು ಕಲಿತ.ತನ್ನನ್ನು ಹುಟ್ಟಿಸಿದ ವಿಶ್ವವನ್ನೇ ಆಳಬೇಕೆಂಬ ಹುಂಬತನ.

ವಿಶ್ವ ಗೆಲುವಿನ ಕುದುರೆಯ ಮೇಲೆ ನಾಗಾಲೋಟದಿಂದ ಸಾಗುತ್ತಿತ್ತು. ಮೊಗದಲ್ಲಿ ಗೆದ್ದ ಮಂದಹಾಸ , ಮನದಲ್ಲಿ ಮಾರ್ನುಡಿಯಿತು ವಿಶ್ವ “ನಿನ್ನನ್ನು ನಾನು ಕೊಲ್ಲಬೇಕೆಂದರೆ ಮತ್ತೆ ಹುಟ್ಟಬೇಕಿಲ್ಲ, ನಿನ್ನ ಬುದ್ಧಿ ಶಕ್ತಿಯನ್ನು ಹೆಚ್ಚಿಸಿದರೆ- ನಿನ್ನ ಬದುಕು ನಿನ್ನ ಕೈಯಲ್ಲಿ, ನಿನ್ನ ಸಾವು ಕೂಡಾ ನಿನ್ನ ಕೈಯಲ್ಲಿಯೇ.”

ಎಲ್ಲಕ್ಕಿಂತ ದೊಡ್ಡ ಶಕ್ತಿ ನಿರ್ಜೀವ ಮತ್ತು ಸಜೀವ ವಸ್ತುಗಳು ಬದುಕಲು ಮತ್ತು ಬದುಕದಿರಲು ಕಾರಣನಾದ ವಿಶ್ವದ ಆತ್ಮ; ವಿಶ್ವಾತ್ಮ. ಮನುಷ್ಯನನ್ನು ಅವನಿಂದಲೇ ಅಂತ್ಯವಾಗಿಸುವ ನೂತನ ಪ್ರಯೋಗ ಮಹಾಸಮರ

virtual battle

ವಿಶ್ವಾತ್ಮ ಆ ಹೆಣ್ಣಿನ ಕೂಗನ್ನು ಆನಂದಿಸುತ್ತಿದ್ದ. ” ಅತ್ಯಂತ ಬುದ್ಧಿವಂತನೊಬ್ಬ ಉಸಿರಾಡಲಿದ್ದಾನೆ, ಅವನೇ ನನ್ನ ಆಯುಧ, ಮನುಕುಲದ ಕಥೆಯನ್ನು ವ್ಯಥೆಯನ್ನು ಇತಿಹಾಸವಾಗಿಸಲು ಮನುಷ್ಯನ ಬದುಕುವ ನೀತಿಯನ್ನೆ ನಾಶಮಾಡಲು ಹುಟ್ಟುತ್ತಿರುವ ಮಹಾ ಆಯುಧ.” ವಿಶ್ವವು ಕನಸು ಕಾಣುತ್ತಿತ್ತು.

ಸರಿ-ತಪ್ಪು, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳನ್ನು ಗುರುತಿಸಿ ಬೇರಾಗಿಸುವುದು ಸುಲಭ. ಪ್ರೇಮ ಮತ್ತು ಕಾಮ ಅಂತರ ತಿಳಿಯುವುದು ಕಷ್ಟ; ಬಹಳವೇ ಕಷ್ಟ. ಅದೊಂದಿಷ್ಟು ತಲೆಗಳು ಕಾಮಿಸಿ , ಪ್ರೇಮಿಸಿದ್ದೇನೆ ಎಂದು ಭ್ರಮಿಸುತ್ತಾರೆ; ಇನ್ನೊಂದಿಷ್ಟು ತಲೆಗಳು ಪ್ರೇಮಿಸಿದ್ದು ಸತ್ಯ ಕಾಮ ಸಹಜ ಎಂದು ನಿಲ್ಲುತ್ತಾರೆ.

ಅವೆಷ್ಟೋ ನಿರ್ಭಾವುಕರಲ್ಲಿ, ಭಾವನೆಗಳ ಜೊತೆಯೇ ಇಲ್ಲದೆ ಬದುಕಿದವರಲ್ಲಿ ಪ್ರೇಮವೇ ಸುಳ್ಳು, ದೇಹದ ಆಸೆ ಮುಗಿದರೆ ಎಲ್ಲವೂ ಸುಖವೇ ಎಂಬ ಹುಚ್ಚು ಯೋಚನೆಗಳು ಬರುವುದಿದೆ. ವಿಶ್ವಾತ್ಮನ ದೃಷ್ಟಿಯಲ್ಲಿ ಪ್ರೇಮ ಮತ್ತು ಕಾಮ ಎರಡು ಬೇರೆಯಾ..??

ಪ್ರಾಣಿಗಳು ಕಾಮಿಸುತ್ತವೆ, ಸ್ವಚ್ಚಂದವಾಗಿ ವಿಹರಿಸುತ್ತವೆ. ಪ್ರೇಮದ ಯೋಚನೆ ಅವುಗಳ ಯೋಚನೆಗೆ ಬರುವಂಥದ್ದಲ್ಲ.ಅವುಗಳಿಗೆ ಆ ಕ್ಷಣದ ತೃಪ್ತಿ ಮುಖ್ಯ. ಪ್ರಾಣಿಗಳು ಹುಟ್ಟಿಸುವುದಕ್ಕಾಗಿ ವಿಹರಿಸುತ್ತವೆ. ಮನುಷ್ಯ ತನ್ನದು ಎಂಬ ಭಾವದಲ್ಲಿ ಬದುಕುತ್ತಾನೆ.

ಹುಟ್ಟಿಸಿದ್ದು ವಿಶ್ವಾತ್ಮ; ಎಲ್ಲದಕ್ಕೂ ಒಂದೊಂದು ವಿಶೇಷತೆ ಕೊಟ್ಟ. ಭೂಮಿಗೆ ಹಸಿರನಿತ್ತರೆ ಚಿಗರೆಗೆ ಹಸಿವನಿತ್ತ; ಅದ ಬೇಟೆಯಾಡುವ ಚಿರತೆಗೆ ವೇಗ ಕೊಟ್ಟ. ಹಾವಿಗೆ ಇಲಿಯು ಊಟವಾದರೆ ಹದ್ದಿಗೆ ಅದ ಹುಡುಕುವ ಕಣ್ಣು ಕೊಟ್ಟ. ಮನುಷ್ಯನಿಗೆ ಒಂದಿಷ್ಟು ಬುದ್ಧಿ ಹಿಡಿಯಷ್ಟು ಭಾವುಕತೆ ಕೊಟ್ಟ. ಅಲ್ಲಿಗೆ ಮನುಷ್ಯನು ಒಂದುಪ್ರಾಣಿ ವಿಶ್ವಾತ್ಮನಿಗೆ.

ತನ್ನ ದೇಹದ ಒಂದು ಭಾಗವೇ ಬೇರೆಯಾಯಿತೇನೋ ಎಂಬಂತೆ ಚೀರಿದಳು ತರುಣಿ. ಹಿಂದೆಯೇ ಮಗುವಿನ ಅಳು. ಅಳುವಿನ ಹಿಂದೆ ವಿಶ್ವವನ್ನೇ ಆಳುವ ಹುಚ್ಚು ಕನಸುಗಳ ಕಲಾವೇದಿಕೆ. ವಿಶ್ವಾತ್ಮನಿಗೆ ಆವ ಹುಟ್ಟಿಸಿದ ಅಗಾಧ ಪ್ರಾಣಿ ಸಂಕುಲಕ್ಕೆ ಮತ್ತೊಂದು ಜೀವದ ಸೇರ್ಪಡೆ ಅಷ್ಟೆ.

ರಕ್ತದಲ್ಲಿ ತೊಯ್ದ ಮಗುವನ್ನು ದೂರದಲ್ಲೇ ನಿಂತು ನೋಡಿದ ಆತ. ಅವಳ ಹಣೆಯ ಮೇಲೆ ಬೆವರಿನ ಸಾಲು, ಮುಖದಲ್ಲಿ ಸಮಾಧಾನದ ಛಾಯೆ. ಅವನಿಗೆ ಮುಂದೇನು?? ಎಂಬ ಪ್ರಶ್ನೆ. ಅನೈತಿಕ ಬದುಕಿನ ಎದುರು ವಿಶ್ವದ ಪ್ರತಿಕ್ರಿಯೆ ಇದು.

ಹೆಣ್ಣು.. ವಿಶ್ವಾತ್ಮನೂ ತಲೆ ಬಾಗುವ ಶಕ್ತಿ ಅವಳು. ಹೊತ್ತು ತಿರುಗಿ ಹುಟ್ಟಿಸುವುದು ಎಷ್ಟು ಕಷ್ಟ?? ಅದನ್ನು ನಿಭಾಯಿಸಬಲ್ಲ ಶಕ್ತಿ, ಹೆತ್ತು ತಡೆದುಕೊಳ್ಳುವ ಸಾಮರ್ಥ್ಯ, ಇತಿಹಾಸ ಸೃಷ್ಟಿಸುವುದು ಅವಳು. ಭವಿಷ್ಯತ್ತಿಗೆ ವೇದಿಕೆಯಾಗುವುದು ಹೆಣ್ಣು. ವಿಶ್ವಾತ್ಮನೇ ಬೆರಗಾಗಿ ಬಿಟ್ಟಿರುವ ತನ್ನ ಸೃಷ್ಟಿಯ ಎದುರು.

ಅವನು ಹತ್ತಿರ ಬಂದು ಮಗುವನ್ನು ನೋಡಿದ. ಚಿಕ್ಕ ಮಾಂಸದ ಮುದ್ದೆ ಮಗು. ಇನ್ನು ಕಣ್ಣುಗಳು ಅರಳಿಲ್ಲ. ಅಸ್ಪಷ್ಟ ಕನಸುಗಳ ಬಗ್ಗೆ ಕನವರಿಸಿಲ್ಲ. ಆಗಷ್ಟೇ ಹರಿದ ಹೊಕ್ಕಳು ಬಳ್ಳಿಯಿಂದ ರಕ್ತದ ಒಂದೊಂದೇ ಹನಿಗಳು ನೆಲ ಸೇರುತ್ತಿದ್ದವು. ಎಲ್ಲವೂ ಹೊಸತು ಮಗುವಿಗೆ. ಅಗಾಧ ಕತ್ತಲಿನಿಂದ ಶಾಶ್ವತ ಬೆಳಕಿನೆಡೆಗಿನಅವೆಷ್ಟೋ ತಿಂಗಳುಗಳ ಪಯಣ ಪರಿಪೂರ್ಣವಾಗಿತ್ತು. ಏನೂ ಅರ್ಥವಾಗುತ್ತಿಲ್ಲವೆಂಬಂತೆ ಮಗು ಗಟ್ಟಿಯಾಗಿ ಅಳುತ್ತಿತ್ತು. ಅಳುವೇ ಮಾರ್ನುಡಿಯುತ್ತಿದ್ದರು ಕೇಳುವವರಾರು ಇರಲಿಲ್ಲ ಹತ್ತಿರದಲ್ಲಿ.

” ನನ್ನ ನೆತ್ತರು ಹೀರುತ್ತಿರುವ ನಿಮ್ಮೆಲ್ಲರ ರಕ್ತದ ರುಚಿ ನಾನೂ ನೋಡುತ್ತೇನೆ. ರಕ್ತದ ಕಣ ಕಣವೂ ನನ್ನ ಸ್ವತ್ತಾಗಲಿದೆ.” ಭೂಮಿ ಬಾಯಿ ತೆರೆದಂತಿತ್ತು. ರಕ್ತ ಕೆಲವೊಮ್ಮೆ ಬೆವರಾಗಿ ನೆಲ ಸೇರಿದರೆ, ಇನ್ನು ಕೆಲವೊಮ್ಮೆ ಸತ್ತು ಕೊಳೆತು ಮಣ್ಣಾಗುತ್ತವೆ. ಕೊನೆಯಲ್ಲಿ ಎಲ್ಲವೂ ಸೇರುವುದು ಮಣ್ಣಿಗೆ; ಎಲ್ಲರೂ ಮರೆಯಾಗುವುದುವಿಶ್ವದ ಅಭೂತ ಚೇತನದಲ್ಲೇ.

ಅಷ್ಟೊಂದು ಕಷ್ಟ ತಡೆದು ಹೊಸ ಜೀವಕ್ಕೆ ಉಸಿರನಿತ್ತ ತಾಯಿ ಹೃದಯ ನಿದ್ರೆಗೆ ಜಾರಿತ್ತು. ಅವನು ಆ ಮಗುವನ್ನು ಮುಟ್ಟಲೋ ಬೇಡವೋ ಎಂಬ ಸಂಶಯದಿಂದಲೇ ಎತ್ತಿ ಪಾಳು ಮನೆಯಿಂದ ಹೊರಗೆ ಹೆಜ್ಜೆ ಹಾಕಿದ. ಅವಳಿನ್ನೂ ಮಗುವಿನ ಮುಖವನ್ನೇ ನೋಡಿರಲಿಲ್ಲ. ಸಂಬಂಧ ಯಾವುದಾದರೇನು ತಾಯಿಗೆ ಮಗುವೇ ಹೆತ್ತಮೇಲೆ! ಅವಳಿಗೆ ಗಾಢ ನಿದ್ರೆ. ಸಮಯದ ಪರಿವೆಯಿರಲಿಲ್ಲ.

ಕೂಸು ಮತ್ತೆ ಅಳುತ್ತಿತ್ತು. ಹಸಿವು ಯಾರನ್ನೂ ಸುಮ್ಮನೆ ಬಿಟ್ಟಿಲ್ಲ. ಊಟವೇ ಹಸಿವನ್ನು ಹೆಚ್ಚಿಸುವುದು. ಹಸಿವಾಗಬಾರದೆಂಬ ಕಾರಣಕ್ಕೆ ಹೊಟ್ಟೆ ತುಂಬಿಸುವುದು. ಕಣ್ಣೇ ಅರಳದ ಮಗು, ಮಾತು ಎಲ್ಲಿಂದ ಬರಬೇಕು..?? ಮತ್ತೂ ಜೋರಾಗಿ ಅಳತೊಡಗಿತು. ಗಂಟಲು ಕಿತ್ತು ಹೋಗುವುದೇನೋ ಎಂಬಂತೆ; ಈಗಷ್ಟೇ ಬಂದಉಸಿರು ನಿಂತು ಹೋಗುವಂತೆ..

ಅನಾಮಿಕ ನಿರ್ಭಾವುಕ ಪ್ರಿಯಕರ ದೂರದಲ್ಲಿ ಕಾಣುತ್ತಿದ್ದ ಕಸದ ತೊಟ್ಟಿಯ ಬಳಿ ಸಾಗಿದ. ಯಾವ ಭಾವಗಳು ಅವನ ಹೆಜ್ಜೆಯನ್ನು ನಿಧಾನವಾಗಿಸಲಿಲ್ಲ. ಮನಸ್ಸನ್ನು ತಂದೆಯಂತೆ ವರ್ತಿಸಲು ಪ್ರೇರೆಪಿಸಲಿಲ್ಲ. ಗಾವುದದವರೆಗೆ ವಾಸನೆ… ಸರಕಾರದ ಕೆಲಸವೇ ಹೀಗೆ ಎಂದು ಗೊಣಗಿಕೊಂಡು ಮೂಗಿನೆದುರು ಕೈ ಇಟ್ಟುತೊಟ್ಟಿಯ ಬಳಿ ಸಾಗಿದ. ಎಲ್ಲವೂ ಬಳಸಿ ಬಿಟ್ಟ ವಸ್ತುಗಳೇ ಅಲ್ಲಿ. ಮಗು..?? ಅದೂ ಕಸದ ವಾಸನೆಯ ಮಧ್ಯ ಸೇರಿಹೋಯಿತು. ತಾಯಿಯ ಎದೆಹಾಲನ್ನೂ ಸವಿಯದ ಮುಗ್ಧ ಕೂಸು ಕೊಳಕು ವಾಸನೆಗೆ ಚಿಲ್ಲನೆ ಚೀರಿತು. ಇಷ್ಟಾದರೂ ಕೂಗು ಯಾರಿಗೂ ಕೇಳಿಸಲಿಲ್ಲ. ಅಗಾಧ ಬೆಳಕಿನಿಂದ ಸುಧೀರ್ಘ ಕತ್ತಲಿನೆಡೆಗೆ..

ಮಾಂಸದ ಮುದ್ದೆಯ ಅರಿವಿರದ ಹೋರಾಟ ಸಾಗುತ್ತಲೇ ಇತ್ತು. ಪಾಳು ಮನೆಗೆ ಹಿಂದಿರುಗಿದ ಪ್ರಿಯಕರ ” ಪೀಡೆ ತೊಲಗಿತು, ಏಳು ಹೋಗೋಣ ” ಎಂದ. ಮಾತಾಡಲಿಲ್ಲ ಅವಳು. ಸ್ವಲ್ಪ ಸನಿಹ ಬಂದು ಕೈ ತಟ್ಟಿ ಮೆಲ್ಲಗೆ ಉಸುರಿದ ” ನಮ್ಮ ಸುಖದ ಪರಿಕಲ್ಪನೆಯ ಹಾದಿ ತೆರೆದಾಗಿದೆ ಏಳು ಜೊತೆಯಾಗಿ ಸಾಗೋಣ.”

ಮುಟ್ಟಿದ ಕೈಗಳೇಕೋ ತಣ್ಣನೆಯ ಅನುಭೂತಿ ನೀಡಿದ್ದವು. ವಿಶ್ವಾತ್ಮ ತನ್ನ ಮೊದಲ ಬಲಿ ತೆಗೆದುಕೊಂಡಾಗಿತ್ತು. ಯಾರಿಗೂ ಅರ್ಥವಾಗದ ರೀತಿಯಲ್ಲಿ ಯುದ್ಧ ಪ್ರಾರಂಭವಾಗಿತ್ತು. ನಿರ್ಭಾವುಕನ ಹಣೆಯಲ್ಲಿ ಬೆವರಿನ ಸಾಲುಗಳು ಮೂಡಿದ್ದವು. ನಿಲ್ಲಲು ಮನಸ್ಸಾಗಲಿಲ್ಲ; ಮನಸ್ಸಿರದ ಅವನಿಗೂ ನಿಲ್ಲಲು ಮನಸ್ಸಾಗಲಿಲ್ಲ!! ಏನುಮಾಡಬೇಕೆಂದು ತಿಳಿಯದೇ ದೂರದಲ್ಲಿ ನಿಂತಿದ್ದ ತನ್ನ ಕಾರಿನೆಡೆಗೆ ಓಡಿದ. ಅವೆಷ್ಟೋ ಕೋಟಿಗಳ ಕಾರಿನ ಒಡೆಯ ಕಳ್ಳನಂತೆ ಬಾಗಿಲು ತೆಗೆದು ಸ್ಟಿಯರಿಂಗ್ ಹಿಡಿದು ಮರೆಯಾಗಿ ಬಿಟ್ಟ ಕತ್ತಲಿನ ನೀರವತೆಯಲ್ಲಿ; ಇರುಳಿನ ಕ್ರೂರತೆಯಲ್ಲಿ.

ವಿಶ್ವಾತ್ಮ ಅವನನ್ನೇ ಹಿಂಬಾಲಿಸುತ್ತಿದ್ದ. ಕತ್ತಲಿನಲ್ಲೂ ನೆರೆಳಿನಂತೆ ಹೆಜ್ಜೆ ಸೇರಿಸಿದ್ದ. ಹಿಂಬಾಲಿಸಿದ್ದು ಅಭಿಮಾನದಿಂದಲ್ಲ; ಅವಮಾನಗಳ ಸರಪಳಿ. ಸಾಯಬೇಕಾದವನು ನಿರ್ಭಾವುಕ ಪ್ರಿಯಕರ. ನನ್ನ ಸೃಷ್ಟಿಯ ಶ್ರೇಷ್ಠ ದೇವತೆ ಹೆಣ್ಣು, ಅವಳನ್ನು ಪ್ರೇಮವೆಂದು ನಂಬಿಸಿ ಕಾಮನೆಗಳ ಗೀಳಿಗೆ ಬೀಳಿಸಿ, ಬಲಿಯಾಗಿಸಿನಾಗಾಲೋಟದಿಂದ ಅವಳ ಬೆತ್ತಲೆಯನ್ನು ಸವಿದ ನೀನು ಸಾಯಬೇಕು, ಸುಲಭವಾಗಿ ಅಲ್ಲ; ಅದಕ್ಕೋಸ್ಕರವೇ ನೀನು ಬದುಕಿರುವುದು, ಇನ್ನು ನಿನ್ನ ಸಾವು ನನ್ನ ಕೈಯಲ್ಲಿ ಎಂದು ಅವನ ಹಿಂದೆ ಹಿಂದೆಯೆ ಹೆಜ್ಜೆ ಹಾಕುತ್ತಿದ್ದ. ಅವನಿಗೆ ಏನೂ ಕೇಳಿಸುತ್ತಿಲ್ಲ, ಕಾರು ವೇಗವಾಗಿ ಓಡುತ್ತಲೇ ಇತ್ತು, ಅವನೇ ಸೃಷ್ಟಿಸಿಕೊಂಡಸಮಸ್ಯೆಯ ಹತ್ತಿರದೆಡೆಗೆ.

ರಕ್ತದ ವಾಸನೆ ಹಿಡಿದು ಎರಡು ಬಿಡಿ ನಾಯಿಗಳು ತೊಟ್ಟಿಯ ಬಳಿ ಬಂದವು. ಹಸಿವು ಕೆರಳಿಸಿರಬೇಕು. ಒಂದು ನಾಯಿ ಕಸದ ಮಧ್ಯೆ ಏನನ್ನೋ ಕೆದಕುತ್ತಿದ್ದರೆ, ಇನ್ನೊಂದು ಮಗುವಿನ ಬಳಿ.. ಒಂದೊಂದೆ ಹೆಜ್ಜೆ.. ಮಗುವಿಗೆ ಮತ್ತಷ್ಟೂ ಸನಿಹವಾಗುತ್ತಿತ್ತು. ವಿಶ್ವಾತ್ಮನ ಒಂದೇ ನೋಟ ತೊಟ್ಟಿಯ ಕಡೆಗೆ, ಎಲ್ಲವೂತಾನಂದುಕೊಂಡಂತೆಯೇ ನಡೆಯುತ್ತಿದೆ ಎಂದು ತನ್ನೊಳಗೆ ನಕ್ಕ ವಿಶ್ವಾತ್ಮ.

ಯುದ್ಧಕ್ಕೆ ಮುನ್ನುಡಿ ಬರೆದನು.

————————-ಮುಂದುವರೆಯುತ್ತದೆ ———————————-

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post