ಸಂಸಾರ ಬೀಜದೊಳಗಿಂದ
ಮೊಳೆಯಿತೊಂದು ಜೀವನ ವೃಕ್ಷ..!
ಆಗಸದೆತ್ತರಕ್ಕೆ ಬೆಳೆಯುವ
ಹಂಬಲವಾದರೂ..
ಎಷ್ಟೊಂದು ಅಡೆತಡೆಗಳು..?
ಮೃದುತಳಿರ ಚಿವುಟಿ ಕೆಣಕಿ
ಮತ್ಸರಿಸುವ ಕೈಗಳು..
ಫಲಗಳ ಕುಟುಕಿ ನೋಯಿಸಲು
ಹವಣಿಸುವ ಹಕ್ಕಿಗಳು..
ಎಳೆಬೇರ ತಿಂದು ಕೃಶವಾಗಿಸಿ
ಬಾಧಿಸುವ ಹುಳುಗಳು..
ಉರಿಬಿಸಿಲ ಧಗೆಯಲಿ ದಹಿಸಿ
ಬಾಡುವ ಹಸಿರೆಲೆಗಳು..
ಸಾರಸತ್ವವ ಹೀರಲು
ಸುತ್ತಲೂ ಮುತ್ತಿರುವ ಕಳೆಗಳು..!
ಬದುಕಿನಹೊಲವ ಹಸನುಗೊಳಿಸಿ
ಬಾಳವೃಕ್ಷವ ಚಿಗುರಿಸುವ ತವಕದಲಿ..
ಏರಬೇಕಿದೆ ಎತ್ತರೆತ್ತರ
ಚಿವುಟುವ ಕೈಗಳಿಗೆ
ಎಟುಕದಷ್ಟೂ…ಎತ್ತರ..!
ಸಾಗಬೇಕಿದೆ ದೂರದೂರ
ಆಳಕಿಳಿಯಲಿ ಭಧ್ರಬೇರುಗಳು
ವಕ್ರದೃಷ್ಟಿಗೆ ನಿಲುಕದಷ್ಟೂ…ದೂರ..!
ಮುತ್ತಿರುವ ಕಳೆಯ ಕಿತ್ತೆಸೆದು
ಕಾಂಡಕೊಂಬೆಗಳು ಗಟ್ಟಿಗೊಳ್ಳಲಿ
ಹಬ್ಬುವ ಬಳ್ಳಿಗಳಿಗಾಸರೆಯಾಗಿ.!
ಸುಡದಿರಲಿ..ದಹಿಸಿ ಬಾಡದೆಯೇ
ಹಸಿರೆಲೆಗಳು ಪಸರಿಸಲಿ
ಬಿಸಿಲಧಗೆಯ ಸಹಿಸುವ ನೆರಳಾಗಿ.!
ಹೊಡೆತಗಳ ಮೆಟ್ಟಿ ಬೆಳೆಯಬೇಕಿದೆ
ಉಳಿಯೇಟಿಗೆ ಉದಿಸುವ ಶಿಲ್ಪದಂತೆ..
ಬವಣೆಗಳ ನಡುವೆ ಗೆಲ್ಲಬೇಕಿದೆ
ಕೆಸರಿನಲ್ಲೂ ಅರಳುವ ಕಮಲದಂತೆ..!
Facebook ಕಾಮೆಂಟ್ಸ್