X

ಬಾನಾಡಿಗಳಿಗೆ ಗೂಡು ಕಟ್ಟಿ ಕೊಡುವ ಸ್ನೇಹಾಲಯ ಜೋಸೆಫ್

ಪುತ್ತೂರಿನಲ್ಲಿ ರಾಮ ಅನ್ನೋ ಒಬ್ಬ ಭಿಕ್ಷುಕ ಕಮ್ ಹುಚ್ಚನೊಬ್ಬನಿದ್ದ. ಹರಕಲು ಕೊಳಕು ಬಟ್ಟೆಯನ್ನು ಹಾಕಿಕೊಂಡು ಉದ್ದದ ಕುರಚಲು ಕೂದಲು ಬಿಟ್ಟುಕೊಂಡು ದಿನಾ ಪೇಟೆಯಿಡೀ ಅತ್ತಿಂದಿತ್ತಾ ಅಲೆಯುತ್ತಿದ್ದ. ನಡೆದಾಡುವಾಗ ಜೋರಾಗಿ ಬೊಬ್ಬೆ ಹೊಡೆಯುವುದು ಆತನ ರೂಢಿಯಾಗಿತ್ತು. ರಾಮನನ್ನು ನೋಡಿದರೆ ಮಕ್ಕಳು, ಹೆಂಗಸರು ಹೆದರುತ್ತಿದ್ದರು, ಕೆಲವರು ಅಯ್ಯೋ ಪಾಪ ಎಂದು ಪ್ರೀತಿ,ಅನುಕಂಪ ವ್ಯಕ್ತ ಪಡಿಸುತ್ತಿದ್ದರು. ಆತ ಮಾತ್ರ ಇದಕ್ಕೆಲ್ಲಾ ಕ್ಯಾರೇ ಎನ್ನದೆ ತನ್ನ ಪಾಡಿಗೆ ತಾನಿರುತ್ತಿದ್ದ.

ಆದರೆ ಕೆಲ ತಿಂಗಳ ಹಿಂದೆ ನಮಗೊಂದು ಆಶ್ಚರ್ಯ ಕಾದಿತ್ತು. ಈ ಮೊದಲು ಉದ್ದುದ್ದ ಕೂದಲು ಬಿಟ್ಟುಕೊಂಡು ಅಲೆಯುತ್ತಿದ್ದ ರಾಮನ ಗಡ್ಡ ಬೋಳಿಸಿದ ಕೂದಲು ಕತ್ತರಿಸಿದ ಸ್ವಚ್ಚಂದ ಫೋಟೋವೊಂದು ಫೇಸ್ ಬುಕ್ ಅಲ್ಲಿ ಬಂದಿತ್ತು. ಮೊದಲು ನೋಡುವಾಗ ಇವನು ಅವನೇನಾ ಎನ್ನುವ ಅನುಮಾನ ಮೂಡಿತ್ತು. ಫೋಟೋ ಜತೆಗಿದ್ದ ಡಿಟೈಲ್ ಓದಿದಾಗ ಇವನು ಅವನೇ ಎನ್ನುವುದು ಕನ್ಫರ್ಮ್ ಆಗಿತ್ತು. ಒಂಟಿಯಾಗಿ ಅಲೆಯುತ್ತಿದ್ದ ಈತನನ್ನು ಮಂಗಳೂರಿನ ಸ್ನೇಹಾಲಯ ಎಂಬ ಸಂಸ್ಥೆ ಹಿಡಿದು ಆತನ ಕೂದಲು ಕತ್ತರಿಸಿ ಗಡ್ಡ ತೆಗೆಸಿ ಸ್ನಾನ ಮಾಡಿಸಿ ಚಿಕಿತ್ಸೆ ಕೊಡಿಸಿ ತನ್ನಲ್ಲಿ ಸೇರಿಸಿಕೊಂಡಿತ್ತು.

ಯಾವುದಿದು ಸ್ನೇಹಾಲಯ? ಏನಿದರ ಉದ್ದೇಶ?

ಜೋಸೆಫ್ ಕ್ರಾಸ್ತಾ… ಒಂದು ಕಾಲಕ್ಕೆ ಒಬ್ಬ ಸಾಮಾನ್ಯ ಡ್ರೈವರ್. ಮಂಗಳೂರು – ಮುಂಬೈ ದಾರಿಯಲ್ಲಿ ದಿನವೂ ತನ್ನ ಲಾರಿ ಸಾಗಿದಂತೆ ಅವರ ಬದುಕೂ ಸಾಗುತ್ತಿತ್ತು. ನಂತರ ಲಾರಿ ಬಿಟ್ಟು ಆಟೋವನ್ನು ಆಯ್ದುಕೊಂಡರು. ಆಟೋ ಓಡಿಸಿ ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದರು.ಒಂದು ದಿನ ಮಂಗಳೂರಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದಾಗ ಬೀದಿ ಬದಿ ಹೆಂಗಸೊಬ್ಬಳು ಚರಂಡಿ ನೀರು ಕುಡಿಯುತ್ತಿದ್ದುದನ್ನು ಕಂಡು ಮರುಕ ಪಡುವ ಜೋಸೆಫ್, ಆಕೆಯ ಬಳಿ ತೆರಳಿ ಆಕೆಗೆ ಕುಡಿಯಲು ಸ್ವಚ್ಛ ನೀರು ಕೊಡುತ್ತಾರೆ. ಅಲ್ಲಿಂದ ಶುರುವಾಗಿದ್ದು ಸ್ನೇಹಾಲಯವೆಂಬ ಬಾನಾಡಿಗಳ ನಿಲಯದ ಜೈತ್ರ ಯಾತ್ರೆ.

ಆತ ಧರ್ಮೇಶ್. ಒಂಬತ್ತನೇ ತರಗತಿ ಓದು ಮುಗಿಸಿ ಹತ್ತಕ್ಕೆ ಕಾಲಿರಿಸಿದ್ದ. ಅಷ್ಟರಲ್ಲಿ ಆತನ ಭವಿಷ್ಯಕ್ಕೆ ಬರಸಿಡಿಲೊಂದು ಬಡಿಯಿತು. ಆತನ ತಂದೆ ತಾಯಿ ಇಬ್ಬರೂ ಆಕಸ್ಮಿಕವಾಗಿ ಪ್ರಾಣ ಕಳೆದುಕೊಂಡರು. ತನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ, ತಂದೆ ತಾಯಿಯ ಸಾವನ್ನು ಅರಗಿಸಿಕೊಳ್ಳಲಾಗದೆ ಆತ ಅತಿಯಾಗಿ ರೋಧಿಸಿದ. ಆತ ಅನಾಥವಾದ, ಕೊರಗಿ ಕೊರಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ. ಬಂಧುಗಳು, ಸಮಾಜದ ಬಹಿಷ್ಕಾರಕ್ಕೊಳಗಾದ. ತಂದೆ ತಾಯಿಯನ್ನು ಬಿಟ್ಟು, ಎಲ್ಲಾ ಇದ್ದೂ ಏನೂ ಇಲ್ಲದಂತಹ ಸ್ಥಿತಿ ಆತನದ್ದಾಯಿತು ಮನೆ-ಮಠ, ಆಸ್ತಿ-ಪಾಸ್ತಿ ಎಲ್ಲವನ್ನೂ ಬಿಟ್ಟು ಬೀದಿಗೆ ಬಿದ್ದ. ಒಂದಿನ ಮಂಗಳೂರಿನ ಬೀದಿ ಬದಿ, ಕೊಳೆತ ಕಸದ ರಾಶಿಯಲ್ಲಿ ಬಿದ್ದಿದ್ದ ಈತನನ್ನು ಜೋಸೆಫ್ ನೋಡುತ್ತಾರೆ, ಹಿಂದೆ ಮುಂದೆ ನೋಡದೆ ಸ್ನೇಹಾಲಯಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ, ಈಗ ಈತ ಮೊದಲಿನಂತಾಗಿದ್ದಾನೆ, ಚೆನ್ನಾಗಿ ಮಾತನಾಡುತ್ತಾನೆ. ಜೋಸೆಫ್ ಅವರ ಉಪಕಾರವನ್ನು ಮನಸಾರೆ ಸ್ಮರಿಸುತ್ತಾನೆ. ಅಷ್ಟೂ ಮಾತ್ರವಲ್ಲದೆ, ಜೋಸೆಫ್ ಆತನ ಚಿಕ್ಕಮ್ಮನನ್ನು ಸಂಪರ್ಕಿಸಿ ವಾಸ್ತವವನ್ನು ಅವರಿಗೆ ಮನದಟ್ಟು ಮಾಡಿಸುತ್ತಾರೆ ನಂತರ ಅವರು ಆತನನ್ನು ತನ್ನ ಬಳಿ ಸೇರಿಸಿಕೊಳ್ಳುತ್ತಾರೆ.

ಸ್ನೇಹಾಲಯದಲ್ಲಿರುವವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ. ಒಬ್ಬಾಕೆ ಸಂಸಾರದ ತೊಂದರೆಗಳಿಂದ, ಮತ್ತೊಬ್ಬ ವ್ಯಾವಹಾರಿಕ ನಷ್ಟದಿಂದ ಇನ್ನು ಕೆಲವರು ಇನ್ನೇನೋ ಕಾರಣಕ್ಕೆ ಮಾನಸಿಕ ವ್ಯಥೆಗೊಳಗಾಗಿದ್ದಿರಬಹುದು. ಮತ್ತೆ ಕೆಲವರು ಬದುಕಿನಲ್ಲಿ ಹುಟ್ಟುವಾಗಲೇ ಭಿಕ್ಷುಕರಾಗಿ ಹುಟ್ಟಿ, ಇನ್ನು ಕೆಲವರು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಭಿಕ್ಷಾಟನೆಗಿಳಿದವರು, ಇನ್ನೂ ಹಲವರು ಭಿಕ್ಷಾಟನೆಯ ಮಾಫಿಯಾ ನಡೆಸುತ್ತಿರುವ ಕಳ್ಳರ ದೂರ್ತ ಕಣ್ಣುಗಳಿಗೆ ಸಿಲುಕಿ ಭಿಕ್ಷೆ ಬೇಡುತ್ತಿದ್ದವರು. ಒಟ್ಟಿನಲ್ಲಿ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದವರು. ಹೀಗೆ ಬೀದಿಗೆ ಬಿದ್ದವರೇ, ಹೊಟ್ಟೆಪಾಡಿಗಾಗಿ ಕೊಳಚೆ ನೀರನ್ನು ಕುಡಿದು, ಬೀದಿ ಬದಿ ಸಿಕ್ಕಿದ ಕೊಳೆತ ಆಹಾರ ತಿಂದು ಆರೋಗ್ಯ ಕೆಡಿಸಿಕೊಂಡು, ಭೀಕರ ಚರ್ಮ ರೋಗಗಳಿಗೆ ತುತ್ತಾದವರು ಸ್ನೇಹಾಲಯ ಸೇರಿಕೊಂಡಿದ್ದಾರೆ. ಅವರಿಗೆ ಅಲ್ಲಿ ಆಶ್ರಯ ಒದಗಿಸಿ ವಿಶೇಷ ಆರೈಕೆ ನೀಡಲಾಗುತ್ತಿದೆ.

ಸ್ನೇಹಾಲಯದಲ್ಲೀಗ ಭಿಕ್ಷುಕರಿದ್ದಾರೆ, ಮುದುಕರಿದ್ದಾರೆ,ಸಣ್ಣ ಪ್ರಾಯದವರೂ ಇದ್ದಾರೆ. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡವ್ರು ಮತ್ತೆ ಕೆಲವರು ಇನ್ಯಾವುದೋ ರೋಗಗಳಿಗೆ ತುತ್ತಾದವರಿದ್ದಾರೆ. ಹಿಂದುಗಳಿದ್ದಾರೆ, ಮುಸ್ಲಿಮರಿದ್ದಾರೆ, ಕ್ರೈಸ್ತರೂ ಇದ್ದಾರೆ. ಆದರೆ ಅವರೆಲ್ಲರೂ ಜಾತಿ ಮತ ಭೇದವಿಲ್ಲದೆ ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ, ನಿಶ್ಚಿಂತೆಯಿಂದ ಜೀವಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣರಾದವರು ಜೋಸೆಫ್.

ಇಷ್ಟೇ ಆಗಿದ್ದರೆ, ಅದೇನು ಹೇಳಿಕೊಳ್ಳುವಂತಹ ಸಾಧನೆಯೆನಿಸುತ್ತಿರಲಿಲ್ಲ. ಸ್ನೇಹಾಲಯದ ಮನಸ್ಸು ಬಹು ವಿಶಾಲವಾದದ್ದು ಎನ್ನುವುದಕ್ಕೆ ಮತ್ತೊಂದು ಬಲವಾದ ಕಾರಣವಿದೆ. ಇಲ್ಲಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡವರನ್ನು ಕರೆದುಕೊಂಡು ಬರುತ್ತಾರಲ್ಲ, ಅವರನ್ನು ಮಂಗಳೂರಿನ ಕಂಕನಾಡಿ ಆಸ್ಪತ್ರೆಗೋ, ಬೆಂಗಳೂರಿನ ನಿಮ್ಹಾನ್ಸ್ ಗೋ ದಾಖಲಿಸುವುದಿಲ್ಲ. ಬದಲಾಗಿ ಅವರಿಗೆ ಸ್ನೇಹಾಲಯದಲ್ಲೇ ಸೂಕ್ತ ಚಿಕಿತ್ಸೆ ಕೊಡಿಸಿ, ಸಮಯಗಳ ನಂತರ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಿ ಮತ್ತೆ ನೈಜ ಮನುಷ್ಯರಂತೆ ಮಾಡಲಾಗುತ್ತದೆ. ಸ್ವತಃ ಜೋಸೆಫ್ ಅವರೇ ನಿತ್ಯವೂ ಎಲ್ಲರಿಗೂ ವ್ಯಾಯಾಮ ಮಾಡಿಸುತ್ತಾರೆ. ಡ್ಯಾನ್ಸ್ ಮಾಡಿಸುತ್ತಾರೆ. ಆ ಮೂಲಕ ಎಲ್ಲರಲ್ಲೂ ಹೊಸ ಜೀವನೋತ್ಸಾಹ ಮೂಡಿಸುತ್ತಾರೆ. ಇಲ್ಲಿ ಸ್ನೇಹಾಲಯಕ್ಕೆ ಮತ್ತೊಂದು ಚಾಲೆಂಜ್ ಇದೆ. ಈ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಭಿಕ್ಷಾಟಿಸುತ್ತಿದ್ದವರು ಎಲ್ಲಾ ತಮ್ಮ ಮನೆ ಮಠಗಳನ್ನು ಮರೆತಿರುತ್ತಾರೆ. ಆದರೆ ಜೋಸೆಫ್ ಅವರು ತಾಳ್ಮೆಯಿಂದ ಅವರನ್ನೆಲ್ಲಾ ನಿಭಾಯಿಸಿ ಸಂತ್ರಸ್ತರ ಮನೆಯವರನ್ನು ಸಂಪರ್ಕಿಸಿ ಅವರನ್ನು ಇಲ್ಲಿ ಬರ ಹೇಳಿ ಈ ಸಂತ್ರಸ್ತರನ್ನು ಅವರ ಮನೆಯವರಿಗೊಪ್ಪಿಸಿ ಧನ್ಯತಾ ಭಾವ ಪಡೆಯುತ್ತಾರೆ. ಮೋದಿ ನೇಪಾಳ ಭೇಟಿ ಸಂದರ್ಭದಲ್ಲಿ ದಾರಿ ತಪ್ಪಿ ಭಾರತಕ್ಕೆ ಬಂದು ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡಿದ್ದ ಯುವಕನೊಬ್ಬನನ್ನು ಆತನ ಕುಟುಂಬ ಸೇರಿಸಿ ಸುದ್ದಿಯಾಗಿದ್ದರಲ್ಲಾ, ಅಂತಹ ಹಲವರನ್ನು ದಿನವೂ ಮನೆ ಸೇರಿಸಿ ಜೋಸೆಫ್ ಸುದ್ದಿಯಾಗುತ್ತಾರೆ.

ಅರೇ! ಇದರಿಂದ ಜೋಸೆಫ್ ಗೆ ಏನು ಲಾಭ ಎಂದು ಕೇಳಬೇಡಿ. ಜೋಸೆಫ್ ಇಂದು ತನ್ನದಲ್ಲದವರನ್ನು ತನ್ನವರನ್ನಾಗಿ ಮಾಡಿಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಇದಕ್ಕಾಗಿ ಅವರು ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ. ಸ್ನೇಹಾಲಯಕ್ಕಾಗಿ ‘ಕಾಯಾ ವಾಚಾ ಮನಸಾ’ ತೊಡಗಿಸಿಕೊಂಡಿದ್ದಾರೆ. ತನ್ನ ತಂದೆಯ ಪಾಲಿನಲ್ಲಿ ಸಿಕ್ಕಿದ ಜಾಗವನ್ನು ಮಾರಿ ಅದರಿಂದ ಬಂದ 14 ಲಕ್ಷವನ್ನು ಹೂಡಿ ಬಾಡಿಗೆಗೆ ಮನೆಯೊಂದನ್ನು ಪಡೆದು ಅಲ್ಲಿಯೇ ಸ್ನೇಹಾಲಯವನ್ನೂ ಸ್ಥಾಪಿಸಿ, ಇಂದು ಆಶ್ರಮವನ್ನು ಬಹು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಹೆಚ್ಚು ಕಡಿಮೆ ನೂರು ಜನರಿಗೆ ಆಶ್ರಯ ನೀಡಿರುವ ಸ್ನೇಹಾಲಯಕ್ಕೆ ಇವತ್ತು ಎರಡು ಎಕರೆ ಜಾಗದಲ್ಲಿ ವಿಶಾಲವಾದ ಕಟ್ಟಡವೊಂದಿದೆ. ಅದರಲ್ಲಿ ಸುಸಜ್ಜಿತವಾದ ಬೆಡ್, ಅಡುಗೆ ಮನೆ, ಶುಶ್ರೂಷೆಗಾಗಿ ನರ್ಸ್ ಗಳಿದ್ದಾರೆ. ಈ ಎಲ್ಲಾ ಕಾರ್ಯಗಳಿಗೆ ತನ್ನ ಹಣವನ್ನು ವಿನಿಯೋಗಿಸುವುದರೊಂದಿಗೆ ಜೋಸೆಫ್ ಉಳಿದ ದಾನಿಗಳ ಸಹಾಯವನ್ನೂ ಪಡೆದಿದ್ದಾರೆ. ಇಬ್ಬರು ಮಕ್ಕಳು, ಪತ್ನಿಯ ತನ್ನ ಕುಟುಂಬವೂ ಸಹ ಅವರಿಗೆ ಬೆನ್ನೆಲುಬಾಗಿ ನಿಂತಿದೆ. ಈಗ ಸ್ನೇಹಾಲಯದಲ್ಲಿ ಒಂದು ಕಮಿಟಿಯೇ ಇದೆ. ಸ್ನೇಹಾಲಯದ ಸ್ವಚ್ಛತೆ, ಅಗತ್ಯವಿರುವ ಚಿಕಿತ್ಸೆಗಳು, ಸ್ನೇಹಾಲಯದ ಕಟ್ಟಡ ವಿಸ್ತರಣೆ ಹಾಗೂ ಇತರ ಅಗತ್ಯತೆಗಳ ಬಗ್ಗೆ ಎಲ್ಲರೂ ಸೇರಿ ನಿರ್ಧರಿಸುತ್ತಾರೆ.

ಜೀವನದಲ್ಲಿ ಯಾರೂ ಕೂಡಾ ಬಯಸಿ ಭಿಕ್ಷುಕರಾಗುವುದಿಲ್ಲ, ಯಾರೂ ಕೂಡಾ ಬೇಕೆಂದೇ ಮಾನಸಿಕ ರೋಗಿಯಾಗುವುದಿಲ್ಲ, ಸುಮ್ಮನೇ ಅನಾಥರಾಗುವುದಿಲ್ಲ, ನಿರ್ಗತಿಕರಾಗುವುದಿಲ್ಲ. ಅದರ ಹಿಂದೆ ಮನ ಮಿಡಿಯುವ ಕಥೆಗಳಿರುತ್ತದೆ. ಅಂತಹವರನ್ನು ಕಂಡರೆ ನಾವು ಮೈಲು ದೂರ ಸರಿಯುತ್ತೇವೆ. ಅವರನ್ನು ಸ್ನಾನ ಮಾಡಿಸುವುದು ಬಿಡಿ, ನೋಡಲೂ ಅಸಹ್ಯ ಪಡುತ್ತೇವೆ. ಅಂಥಾದ್ದರಲ್ಲಿ ಜೋಸೆಫ್ ಸಮಾಜದ ಬಹಿಷ್ಕಾರಕ್ಕೊಳಗಾದವರನ್ನು ಕರೆದು ತಂದು ಸ್ನಾನ ಮಾಡಿಸಿ ಚಿಕಿತ್ಸೆ ಕೊಡಿಸಿ ಅವರ ಜೀವನದ ಗತಿಯನ್ನೇ ಬದಲಿಸುತ್ತಾರೆಂದರೆ ಇದಕ್ಕಿಂತ ಗ್ರೇಟ್ ಎನ್ನುವಂತಹ ಕೆಲಸ ಬೇರೆ ಏನಾದರೂ ಇದೆಯಾ? ಬಹುಶಃ, ಇದಕ್ಕೇ ಅಲ್ಲವಾ ಮನುಷ್ಯತ್ವ ಎನ್ನುವುದು???

Hats off to you Joseph..

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post