ಪಿಡಿದ ದೀಪಕೂ ಮೀರಿ ಬೆಳಕ ಸೂಸುತಲಿಹುದು
ಮಂದ ನಗೆ ಬೀರುತಿಹ ನಿನ್ನ ವದನ
ಓ ನಾರಿ,ನೀ ಸಾರಿ ಹೇಳಬಾರದೆ ನನಗೆ
ಕತ್ತಲೆಯ ಒಡನಿಹುದೆ ನಿನಗೆ ಕದನ?
ತಳುಕು ಬಳಕಿನ ಗೊಡವೆ ಇಲ್ಲದಿಹ ನಿನಗಿಂದು
ಆಗಿಹುದು ಒಡನಾಡಿ ಮಿಣುಕು ಬೆಳಕು
ಬೆಳಕು ಕತ್ತಲಿನ ಕತ್ತು ಕೊಯ್ದಂತೆ,ನೀನೆದ್ದು
ಬಾ,ತೊಡೆದು ಹಾಕು ಈ ಜಗದ ಕೊಳಕು
ಬಚ್ಚಿಡಲುಬೇಡ ಬೆಳಕ ಕಿರಣಗಳ, ನೀನಿಂದು
ಪಸರಿಸಲು ಬಿಡು ಅದನು ಇಡಿಯ ಜಗಕೆ
ನಿನ್ನ ಆತ್ಮವನು ನೀನು ಬಂಧಿಸಿದ ರೀತಿಯಲಿ
ಬೆಳಕ ಹಿಡಿದಿರಲಾರೆ,ಎಂದೂ ಬೆಳಕು ಬೆಳಕೇ!
ಬೆಳಕು ನಿನ್ನಾವರಿಸೆ,ನೆರಳು ನರಳುವುದು
ಕಾಲಕ್ರಮದಲ್ಲಿ ತಿಳಿಯಾಗಿ ಆಗುವುದು ಮರೆ
ನಿನ್ನ ಹಿಡಿದಿಹ ಅಷ್ಟೂ ಕಾಣದ ಕೈಗಳಿಗೆ
ಜ್ಞಾನ ಜ್ಯೋತಿಯ ಹಿಡಿದು ಹಾಕು ನೀ ಬರೆ
ಮುತ್ತುವರಿಯಲು ನಿನ್ನ ಸುತ್ತ ಕಡುಕತ್ತಲೆಯು
ಆತ್ಮದೀಪ್ತಿಯ ಬೆಳಗಿ ಬೆಳಕ ಬೀರಿ
ಮನುಕುಲಕೆ ಹೊಸದೊಂದು ದಾರಿಯನು ತೋರು
ನೀ ಸಾರು ಜಗಕೆ ನಿನ್ನ ಶಕ್ತಿಯನು ನಾರಿ!
ಕತ್ತಲೆಯ ಜೊತೆಗೆ ಸಂಘರ್ಷದಲಿ ನೀ ಗೆದ್ದು
ಬಾ ನಿನಗೆ ಹೊರಜಗವು ಕಾಯುತಿಹುದು
ವಿಶ್ವಮಾತೆಯು ನೀನು ಜಾಗೃತಿಯನು ಹೊಂದೆ ;
ನೀ ಬೆಳೆಯೆ, ನೀ ಬೆಳಗೆ ಜಗವು ಬೆಳಗುವುದು
Facebook ಕಾಮೆಂಟ್ಸ್