ಕಳೆದ ಎರಡು – ಮೂರು ದಿನಗಳಿಂದ ಬಹಳ ಚರ್ಚೆಗಳಿಗೆ ಗ್ರಾಸವಾದ ಡಾಕ್ಯುಮೆಂಟರಿ ವೀಡಿಯೋ, “India’s Daughter”! 2012 ರಲ್ಲಿ ನಡೆದ ಅತ್ಯಂತ ಹೀನಾಯ, ಮಾನವ ಸಮಾಜವೇ ತಲೆ ತಗ್ಗಿಸುವ ‘ನಿರ್ಭಯಾ’ ಪ್ರಕರಣದ ಸುತ್ತ ಸುತ್ತುತ್ತದೆ ಈ ಡಾಕ್ಯುಮೆಂಟರಿ. ಇದನ್ನು ವೀಕ್ಷಿಸಿದರೆ ಉಳಿದವರು ಕಂಡಂತೆಎನ್ನಬಹುದೇನೋ! ಎಂದಿಗೂ, ಯಾರೂ ಕ್ಷಮಿಸಲಾರದ ಹೇಯ ಕೃತ್ಯಕ್ಕೆ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿತು, ಪ್ರತಿ ಹೆಣ್ಣು ಮಗಳ ತಂದೆ ತಾಯಿ ಪ್ರತಿ ಕ್ಷಣ ಆತಂಕದ ಕರಿ ಛಾಯೆಯಲ್ಲಿ ಮುಳುಗುವಂತೆ ಮಾಡಿತು.
[dropcap]ಅ[/dropcap]ಲ್ಲಿಗೇ ಇದೆಲ್ಲಾ ಕೊನೆಯಾಗಲಿಲ್ಲ, ಇಂದಿಗೂ ಪ್ರತಿ ದಿನ ಹಲವು ಅತ್ಯಾಚಾರ, ಕಿರುಕುಳ ಹೀಗೆ ಸುದ್ದಿಗಳನ್ನು ಕೇಳುತ್ತಲೇ ಸಾಗುತ್ತಿದೆ ನಮ್ಮ ಜೀವನ. ಖಂಡಿತಾ, , “We want JUSTICE” , ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಪ್ರಶ್ನೆಯೊಡ್ಡುವಷ್ಟಲ್ಲ! ನೀವು ಆ ಸಾಕ್ಷ್ಯ ಚಿತ್ರ ನೋಡಿದ್ದರೆ ಕಣ್ಣಂಚಲ್ಲಿ ಕಂಬನಿ ಹರಿಯದಿರದು, ಅಂತರಾಳದಲ್ಲಿ ಭಾವನೆಗಳ ಕಿತ್ತಾಟ ನಡೆಯದಿರದು! ಅಲ್ಲಿ “A decent girl won’t roam around 9.30, A girl is far more responsible for rape than a boy”, ಎಂದು ಗುಣ ನಡತೆಯ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲದವನೊಬ್ಬ ಹುಡುಗಿಯೊಬ್ಬಳ ನಡತೆಯ ಬಗ್ಗೆ ಮಾತನಾಡುತ್ತಾನೆ, ಮತ್ತೂ ಮುಂದುವರಿದು “About 20% girls are good” ಎಂದು ಹೆಣ್ಣು ಮಕ್ಕಳಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವವನ ಬಗ್ಗೆ ರೋಷ ಸಹಜವಾಗಿ ಉಕ್ಕಿ ಬರುವುದು. “You’re talking about man and woman as friends. Sorry, that doesn’t have any place in our society. A woman means I immediately put the sex in his eyes” ಹೀಗಂತ ಅಪರಾಧಿಗಳ ಪರ ವಕೀಲ ಮಹಾಶಯನೊಬ್ಬ ನಯಾಪೈಸೆ ನಾಚಿಕೆಯಿಲ್ಲದೆ ಹೇಳುವಾಗ ಈತ ಇನ್ನೂ ಯಾವ ಕಾಲದಲ್ಲಿ ಬದುಕಿದ್ದಾನೋ ಎನ್ನುವ ಅಕ್ರೋಶದ ಸಂಶಯ ಮನಸ್ಸಿನಾಳದಿಂದ ಎದ್ದು ಬರುತ್ತದೆ. ಇವನಂತಹ ವಕೀಲರಿರುವುದು ನ್ಯಾಯವನ್ನು ಎತ್ತಿ ಹಿಡಿಯುವುದಕ್ಕೋ ಅಥವಾ ಅನ್ಯಾಯದ ಎಂಜೆಲು ತಿನ್ನುವುದಕ್ಕೊ ಎಂದು ಅಸಹ್ಯವೆನಿಸದೇ ಇರದು. ಇವೆಲ್ಲದರ ಜೊತೆ ಮನಸ್ಸಿನಲ್ಲಿ ಬಂದ ಇನ್ನೊಂದು ಯೋಚನೆಯೇ “ನಮ್ಮ ಮನೆಯ ಹುಳುಕೊಂದನ್ನು ಪಕ್ಕದ ಮನೆಯ ಅಂಗಳದಲ್ಲೋ, ನಮ್ಮ ವಿರೋಧಿಗಳ ಮನೆಯ ಚಾವಡಿಯಲ್ಲೋ ಚರ್ಚೆಯಾಗುವುದು ನಮಗಿಷ್ಟವೇ? ಮನಸ್ಸಿಗೆ ಸಂತಸದ ವಿಚಾರವೇ?” ಇದಕ್ಕೆ ಉತ್ತರ ‘ಇಲ್ಲ’ ಎಂದಾದರೆ ಖಂಡಿತಾ ವಿದೇಶಿ ಮೇಕರ್ ಸಾಕ್ಷ್ಯ ಚಿತ್ರಕ್ಕೂ ಅದೇ ಉತ್ತರ.
ಸಾಕ್ಷ್ಯಚಿತ್ರ ತಯಾರಿಸುವ ವಿದೇಶಿ ಮಹಿಳೆ ಒಬ್ಬಾಕೆ ಭಾರತಕ್ಕೆ ಬರುತ್ತಾಳೆ. ಕೇವಲ 15 ದಿನಗಳಲ್ಲಿ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಚಿತ್ರ ತಯಾರಿಸಲು ಅಂದಿನ ಯುಪಿಎ ಸರ್ಕಾರದಿಂದ ಅನುಮತಿಯೂ ಪಡೆಯುತ್ತಾಳೆ, ಡಾಕ್ಯುಮೆಂಟರಿ ಕೆಲಸವೂ ನಡೆದೇ ಬಿಡುತ್ತದೆ. ಆ ಹೀನ ಅಪರಾಧಕ್ಕಾಗಿ ಮರಣದಂಡನೆಗೆ ಒಳಗಾದ ಖೈದಿಯ ಜೊತೆ ಮಾತುಕತೆಯೂ ಸಾಗುತ್ತದೆ. ಇಲ್ಲಿಗೆ ನಮ್ಮ ಮನೆಯ ಹುಳುಕೊಂದು ಪಕ್ಕದ ಮನೆಯಲ್ಲಿ ವೈಭವೀಕರಣಗೊಳ್ಳಲು ಎಲ್ಲಾ ಸಿದ್ಧತೆಗಳೂ ತಯಾರಾಗುತ್ತದೆ! ಇಷ್ಟೆಲ್ಲಾ ನಡೆದ ಬಳಿಕ, ಕಾನೂನು ಮೀರಿದ್ದಕ್ಕಾಗಿ 2014 ಎಪ್ರೀಲ್ ನಲ್ಲಿ ಭಾರತ ಸರ್ಕಾರ ಡಾಕ್ಯುಮೆಂಟರ್ ಮೇಕರ್ ಗೆ ನೋಟೀಸ್ ಜಾರಿ ಮಾಡುತ್ತದೆ. ಹತ್ತಿರ ಹತ್ತಿರ ಒಂದು ವರ್ಷ ಅಂದರೆ 2015 ಮಾರ್ಚ್ ವರೆಗೂ ಡಾಕ್ಯುಮೆಂಟರಿ ಮೇಕರ್ ನಿಂದ ನೋ ಆನ್ಸರ್! ಆದರೆ ಹಠಾತ್ ಬೆಳವಣಿಗೆ, ಆರು ದೇಶಗಳಲ್ಲಿ ಸಾಕ್ಷ್ಯಚಿತ್ರ ‘ಸಾರ್ವಜನಿಕ ಪ್ರದರ್ಶನ’ಕ್ಕೆ ಆಕೆ ಅನುವು ಮಾಡಿಕೊಳ್ಳುತ್ತಾಳೆ. (ಮತ್ತೆ ನೆನಪಿಸಿಕೊಳ್ಳಿ, ಪಕ್ಕದ ಮನೆಯ ಅಂಗಳದಲ್ಲಿ ನಮ್ಮ ಮನೆಯ ಹುಳುಕಿನ ಚರ್ಚೆ!) ಮತ್ತೆ ಆಕೆ ಭಾರತಕ್ಕೆ ಬರುತ್ತಾಳೆ, ಮಾಧ್ಯಮಗಳಿಗೆ ತೆರಳುತ್ತಾಳೆ, “Right to Speak” ಅಡಿ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾಳೆ. ಅಷ್ಟೂ ಸಾಲದೆಂಬಂತೆ ಪ್ರದರ್ಶನವಾಗದೇ ಇದ್ದರೆ, “India will be isolate in International arena” ಎಂಬ ಧಮ್ಕಿ ಹೇಳಿಕೆಯನ್ನೂ ನೀಡುತ್ತಾಳೆ.
ಒಬ್ಬರ ಅಭಿಪ್ರಾಯ ಇದು ನಿರ್ಭಯಾಳ ಗೌರವಕ್ಕೆ ಕೊಡಲಿಯೇಟು, ಇನ್ನೊಬ್ಬರಂದರು ಅಪರಾಧಿಗೂ ತನ್ನ ಹಕ್ಕುಗಳಿವೆಯೆಂದು! ಒಂದು ಗುಂಪು ಸಾಕ್ಷ್ಯ ಚಿತ್ರ ಬಾನ್ ಆಗಲಿ ಎಂದರೆ ಮತ್ತೊಂದು ಗುಂಪು ಬೇಡ ಎಂದು. ಆದರೆ ಇವೆಲ್ಲಾ ಚರ್ಚೆ, ವಾದ-ವಿವಾದಗಳ ನಡುವೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು, ಘನತೆ ಇವೆಲ್ಲವನ್ನು ನಾವು ಮರೆತೇ ಬಿಟ್ಟೆವು. ನಮಗೆ ಹಕ್ಕುಗಳು ಎಷ್ಟಿವೆಯೋ ಅಷ್ಟೇ ಕರ್ತವ್ಯಗಳೂ ಇವೆ. ನೆನಪಿರಲಿ, ತಾಯ್ನಾಡ ಮಾನ ರಕ್ಷಣೆಯೂ ನಮ್ಮ ಹೊಣೆ.
ಟಾಮಿ ರಾಬಿನ್ ಸನ್ ಎಂಬ ಬ್ರಿಟಿಷ್ ಪ್ರಜೆಯೊಬ್ಬ ಟ್ವೀಟಿಸುತ್ತಾನೆ: ” Why are the BBC travelling to India to make a documentary about rape when we have more rapes per head population than India and a rape jihad happening”. ಆದರೆ ನಮಗೆ ಇದ್ಯಾವುದರ ಪರಿವೆಯೇ ಇಲ್ಲ. ವಿಶ್ವ ಸಂಸ್ಥೆ ನೀಡಿದ ಜಾಗತಿಕ ಮಟ್ಟದ ರೇಪ್ ಪ್ರಮಾಣ (ಪ್ರತಿ ಲಕ್ಷ ಮಂದಿಗೆ) ಭಾರತ-2, ಬ್ರಿಟನ್-24.1, ಅಮೆರಿಕಾ-28.6. ಏನೆನ್ನೋಣ ಇದಕ್ಕೆ?? ದಿಟ್ಟ ಸ್ವರದಿಂದ ಮತ್ತೆ ಹೇಳುತ್ತೇನೆ, ನಮ್ಮಲ್ಲಿ ಈ 2%ದ ಚಿತ್ರಣವೂ ನಿರ್ನಾಮವಾಗಬೇಕು. ಆದರೆ ಈ ಸಾಕ್ಶ್ಯ ಚಿತ್ರದ ಮೂಲಕ ಅವರು ತೋರಿಸ ಹೊರಟಿರುವ ಉದ್ದೇಶವೇನೆಂದರೆ, ಭಾರತೀಯ ಪುರುಷ ಸಮಾಜ ನೂರಕ್ಕೆ ನೂರು ಶೇಕಡಾ ಕೆಟ್ಟು ಹೋಗಿದೆ, ಸಾಮಾಜಿಕ ಜೀವನ ವ್ಯವಸ್ಥೆಯೇ ಅತ್ಯಂತ ಕೀಳು ಮಟ್ಟದಲ್ಲಿದೆ ಎಂದು ಬಿಂಬಿಸುವುದು, ಆಲ್ಲಿಗೆ ವಿದೇಶಿ ರಾಷ್ಟ್ರವೊಂದರ ಹುನ್ನಾರದ ಸಾಧನೆಯೂ ನಡೆಯಿತು. ಜಗತ್ತಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ, ಎಲ್ಲಾ ದೇಶಗಳ ಕಣ್ಣು ಭಾರತದ ಮೇಲಿದೆ, ಭಾರತೀಯರ ಏಳಿಗೆಯ ಮೇಲಿದೆ. ಇದೊಂದು ವಿಷಯದ ಮೂಲಕ ಭಾರತದ ಹೆಸರನ್ನೇ ಎಲ್ಲರೂ ಹಿಡಿದುಕೊಂಡು ಹೀಗಳೆಯುವಂತಾಯಿತು. ನಮ್ಮೊಳಗಿನ ಹುಳುಕನ್ನು ನಾವು ಸರಿ ಮಾಡೆಬೇಕೇ ಹೊರತು, ಇನ್ನೊಬ್ಬರು ಅದನ್ನು ಆಡಿಕೊಳ್ಳುವಂತೆ ಮಾಡುವುದಲ್ಲ.
ಸಾಕ್ಶ್ಯ ಚಿತ್ರ ನಿರ್ಮಾಪಕಿಯೇ ನಮ್ಮದೊಂದು ಪುಟ್ಟ ಪ್ರಶ್ನೆ, ನೀವಂದಂತೆ ” ಅಪರಾಧಿಯನ್ನು ಸೃಷ್ಟಿಸಿದ್ದು ಸಮಾಜ” ಸರಿ ಒಪ್ಪಿಕೊಳ್ಳೋಣ! ಹಾಗಿದ್ದರೆ ಬ್ರಿಟನ್ ಅಲ್ಲಿ ನಡೆಯುತ್ತಿರುವ 24.1 ಶೇಕಡಾ ರೇಪ್ ಪ್ರಕರಣಗಳಿಗೆ ಅಲ್ಲಿಯ ಸಮಾಜ ಕಾರಣವಲ್ಲವೇ? ನೀವೂ ಆ ಸಮಾಜದ ಜವಾಬ್ದಾರಿಯುತ ಪ್ರಜೆಯಲ್ಲವೇ?? ಯಾವುದೇ ನೈತಿಕ ಹಕ್ಕುಗಳನ್ನೂ ಉಳಿಸಿಕೊಳ್ಳದೇ, ನೀವು ಸುಖಾಸುಮ್ಮನೆ “ಮಹಿಳೆಯರನ್ನು ಆಕ್ಷೇಪಾರ್ಹ ರೀತಿಯಲ್ಲಿ ಭಾರತ ನಡೆಸಿಕೊಳ್ಳುತ್ತದೆ. ಈ ಸಂಸ್ಕೃತಿಯ ಕೆಟ್ಟ ರೋಗದ ಭಾಗ” ಎಂದು ಸಂದರ್ಶನದಲ್ಲಿ ಹೇಳಿಗೆ ನೀಡುತ್ತೀರಲ್ಲಾ?? ಸಂಸ್ಕೃತಿಯ ಅರಿವಾದರೂ ನಿಮಗಿದೆಯೇ? ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಸುಲಭವಾಗಿ ಕೆಡವಬೇಕೆಂಬ ಆಕೆಯ ಉದ್ದೇಶ ಇಲ್ಲಿಯೇ ನಿರೂಪಿತವಾಗುತ್ತದೆ.
ಯೂಟ್ಯೂಬ್ನಲ್ಲಿ ಈ ವೀಡಿಯೋ “BBC Storyville India’s Daughter” ಎಂಬ ಶೀರೋನಾಮೆಯಡಿಯಲ್ಲಿ ಬಿತ್ತರವಾಗುತ್ತಿತ್ತು. ಕೆಳಗೆ ಕೆಲವು ಕಾಮೆಂಟ್ಸ್ಗಳೂ ಇದ್ದವು. ಒಬ್ಬ ವಿದೇಶೀ ವ್ಯಕ್ತಿ ಬರೆಯುತ್ತಾನೆ: “Indian Army is known to rape and mass murder people in Kashmir, they are even known to abuse women from other Nation…..” ಹೀಗೆ ಸಾಗುತ್ತದೆ ಆತನ ವ್ಯರ್ಥ ಪ್ರಲಾಪ. ಥತ್! ನಮ್ಮ ಹೆಮ್ಮೆಯ ಸೈನ್ಯ, ಸೈನಿಕರ ಬಗ್ಗೆ ಇಂತಹಾ ಮಾತು ಕೇಳಿಸಿಕೊಳ್ಳುವ ಸ್ಥಿತಿ ನಮ್ಮದು. ಇಂತಹ ಹಲವಾರು ಕಾಮೆಂಟ್ಸ್ಗಳು ಹರಿದಾಡುತ್ತಿತ್ತು.
ಜೊತೆಗೆ ಇನ್ನೊಂದು ಆಯಾಮದಲ್ಲಿ ನೋಡಿದಾಗ ನಮ್ಮಲ್ಲಿ ಮೂಡುವ ಪ್ರಶ್ನೆ: ಸರಿ, ಸಾಕ್ಷ್ಯಚಿತ್ರ ನಿಷೇಧಿಸದಿರೋಣ ಆದರೆ ಅದೇ ಚಿತ್ರದಲ್ಲಿ ಅತ್ಯಾಚಾರವನ್ನು ಸಮರ್ಥಿಸಿಕೊಳ್ಳುವ ಹಲವು ಹುಚ್ಚು-ಹುಚ್ಚು ಮಾತುಗಳ ಪ್ರದರ್ಶನ ನಡೆಯುತ್ತದೆ. ಇವೆಲ್ಲ ನಮಗೆ ಆದರ್ಶವಾಗಲು ಸಾಧ್ಯವಿಲ್ಲ ಅಲ್ಲವೇ? ಇಂತಹಾ ಹುಚ್ಚು ಪ್ರದರ್ಶನ ಬೇಡ ಎನ್ನುವುದೇ ಮನದಾಳದ ಬಯಕೆ.
ಒಬ್ಬ ವಿದೇಶೀಯನ ಕೈಯಲ್ಲಿ ನಮ್ಮ ದೇಶದ ವಿಚಾರವನ್ನು ನೀಡುವ ಮೊದಲು ಯೋಚಿಸಬೇಕಿತ್ತು ಸರ್ಕಾರ. ಭಾರತ ದೇಶದ ಸಾರ್ವಭೌಮತ್ವಕ್ಕೆ ಪ್ರಶ್ನೆ ಎಸೆದು ನಿಂತಿದ್ದಾಳೆ ಆಕೆ. ನಿಜ, “We don’t TOLERATE rape”, ಅದೇ ರೀತಿ ನಮ್ಮ ತಾಯಿಯ, ತಾಯ್ನಾಡ ಮಾನ ಹರಣವನ್ನೂ ನಾವು ಸಹಿಸಲಾರೆವು. ಅದೆಲ್ಲೋ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಹೇಳಿಕೊಂಡು, ಸಾಕ್ಷ್ಯ ಚಿತ್ರ ತಯಾರಿಸಿ, “India will be isolate in International arena” ಎನ್ನುತ್ತಾ, ತಮ್ಮ ಆಹಾರ ಸಂಪಾದಿಸುವ ಮಾರ್ಗವಾಗಿ ನಮಗಿದು ಕಾಣಿಸುತ್ತಿಲ್ಲವೇ? ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಜಾಗತಿಕ ಮಟ್ಟದಲ್ಲಿ ಭಾರತದ ಘನತೆಗೆ ಧಕ್ಕೆಯಾಗದಂತೆ ಸದಾ ಜಾಗ್ರತವಾಗಿರಬೇಕು.
ಮತ್ತೆ ಹೇಳುತ್ತಿದ್ದೇನೆ, “We don’t TOLERATE rape and we want JUSTICE”,
ಆದರ ಜೊತೆಗೇ ಭಾರತ ಮಾತೆಯ ಘನತೆ , ಮಾನ ಹರಣವನ್ನೂ ನಾವು ಸಹಿಸಲಾರೆವು!
Facebook ಕಾಮೆಂಟ್ಸ್