X

ವಿಶೇಷಚೇತನರ ಆಶಾಕಿರಣ ಈ ದಂಪತಿ

ಅಣ್ಣಪ್ಪ ಅವರ ಹತ್ತಿರದ  ಸಂಬಂಧಿಯೊಬ್ಬರು ಮೆದುಳಿನ ರೋಗಕ್ಕೆ ತುತ್ತಾಗಿ ಸಣ್ಣ ಪ್ರಾಯದಲ್ಲೇ ಇಹಲೋಕವನ್ನು ತ್ಯಜಿಸಿದರಂತೆ. ಅವರ ಕಷ್ಟವನ್ನು ಕಣ್ಣಾರೆ ಕಂಡ ಅಣ್ಣಪ್ಪ, ಇಂತಹಾ ವಿಶೇಷಚೇತನರಿಗಾಗಿ ನಾನೇನಾದರೂ ಮಾಡಬೇಕು ಅಂತ ನಿರ್ಧರಿಸಿದರು. ಅದರ ಭಾಗವಾಗಿಯೇ ಹುಟ್ಟಿಕೊಂಡಿದ್ದು “ಪ್ರಜ್ಞಾ ನರ ಮಾನಸಿಕ ಕೇಂದ್ರ”.

ಪುತ್ತೂರು ತಾಲೂಕಿನ  ಕರ್ಮಲ ಎನ್ನುವಲ್ಲಿ ಸಣ್ಣ ಬಾಡಿಗೆ ಮನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ  ೧೩ ಜನ ವಿಶೇಷಚೇತನರಿದ್ದಾರೆ. ಒಬ್ಬನಿಗೆ ಮಾತು ಬರೋದಿಲ್ಲ, ಮತ್ತೊಬ್ಬನಿಗೆ ಹಿಂದಿನದ್ದು ಯಾವುದೂ ನೆನಪಿಲ್ಲ, ಮತ್ತೊಬ್ಬನಿಗೆ ಕುಳಿತಲ್ಲೇ ಕುಳಿತುಕೊಳ್ಳಲಾಗುವುದಿಲ್ಲ, ಯಾವ ಹೊತ್ತಿನಲ್ಲಿ ಎಷ್ಟು ಆಹಾರ ತೆಗೆದುಕೊಳ್ಳಬೇಕೆನ್ನುವ ಅರಿವು ಇಲ್ಲ, ಮಲ-ಮೂತ್ರ ವಿಸರ್ಜನೆಯ ಅನುಭವವೂ ಕೆಲವರಿಗೆ  ಆಗುವುದಿಲ್ಲ, ರಾತ್ರಿ ನಿದ್ದೆ ಮಾಡುವುದಿಲ್ಲ, ಕೆಲವರಿಗೆ ಕೋಪ ಬಂದರೆ ಅವರನ್ನು ನಿಯಂತ್ರಿಸಲು ಒಬ್ಬರಿಂದಾಗುವುದಿಲ್ಲ. ಹೀಗೆ ಒಬ್ಬೊಬ್ಬರಿಗೂ ಒಂದೊಂದು ಸಮಸ್ಯೆ.

ಕೆಲವರನ್ನು ಹೆತ್ತವರು ತಮಗೆ ಪ್ರಾಯವಾಯಿತು, ನೋಡಿಕೊಳ್ಳಲು ಆಗುತ್ತಿಲ್ಲವೆನ್ನುವ ಕಾರಣಕ್ಕೆ ಇಲ್ಲಿ ಬಿಟ್ಟು ಹೋಗಿದ್ದಾರೆ. ಮತ್ತೆ ಕೆಲವರನ್ನು ಹೆತ್ತವರಿಲ್ಲ ಎನ್ನುವ ಕಾರಣಕ್ಕೆ ಅವರ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಇಲ್ಲಿ ಬಿಟ್ಟು ಹೋಗಿದ್ದಾರೆ, ತಮ್ಮವರನ್ನು ಒಮ್ಮೆ ಇಲ್ಲಿ ಬಿಟ್ಟು ಹೋದ ನಂತರ ಕೆಲವರು  ಈ ಕೇಂದ್ರದತ್ತ ಸುಳಿದೂ ನೋಡುವುದಿಲ್ಲ, ಏನಾದರೂ ತುರ್ತು ಸಂದರ್ಭವಿದ್ದಾಗ ಫೋನ್ ಕರೆಯನ್ನೂ ಸ್ವೀಕರಿಸುವುದಿಲ್ಲ. ಕೆಲವರ ಹೆತ್ತವರು ತಿಂಗಳ ಖರ್ಚಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ, ಮತ್ತೆ ಕೆಲವರು ಏನೂ ಮಾಡುವುದಿಲ್ಲ. ಮಧ್ಯಾಹ್ನದ ಊಟ ಸ್ಥಳೀಯ ದೇವಸ್ಥಾನದಿಂದ ಬರುತ್ತದೆ, ಬೆಳಗ್ಗಿನದ್ದಕ್ಕೆ ಸತ್ಯ ಸಾಯಿ ಸೇವಾ ಸಮಿತಿಯವರು ವ್ಯವಸ್ಥೆ ಮಾಡುತ್ತಾರೆ, ರಾತ್ರಿ ಕೆಲವು ಸಂಘ ಸಂಸ್ಥೆಗಳೋ, ಇಲ್ಲಾ ಜನ್ಮ ದಿನ ಆಚರಿಸಿಕೊಳ್ಳುತ್ತಿರುವವರು ಯಾರಾದರೂ  ವ್ಯವಸ್ಥೆ ಮಾಡುತ್ತಾರೆ, ಯಾರೂ ಇಲ್ಲದಿದ್ದರೆ ಅಣ್ಣಪ್ಪ-ಜ್ಯೋತಿ ದಂಪತಿಗಳೇ ವ್ಯವಸ್ಥೆ ಮಾಡುತ್ತಾರೆ.   

ಊಟೋಪಚಾರದ ಜೊತೆಗೆ ಕೆಲವರಿಗೆ ಕಂಪ್ಯೂಟರ್ ಟೈಪಿಂಗ್  ಹೇಳಿಕೊಡುತ್ತಾರೆ. ಆಟ ಆಡಿಸುತ್ತಾರೆ. ಪದ್ಯ ಹೇಳಿಸುತ್ತಾರೆ. ಒಬ್ಬರಿಗೊಬ್ಬರು ಬೆರೆತು ಬಾಳುವುದು ಹೇಗೆ ಎನ್ನುವುದನ್ನು ಮನವರಿಕೆ ಮಾಡಿಸುತ್ತಾರೆ. ಅಲ್ಲಿರುವವರಲ್ಲಿ  ಹುಟ್ಟಿನಿಂದ ಬಂದಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಾರೆ. ಇವರ ಪ್ರೋತ್ಸಾಹ ಮತ್ತು ತರಬೇತಿಯನ್ನು ಪಡೆದ ಕೆಲವರು ಮಾನಸಿಕ ಚೈತನ್ಯವನ್ನೇ ಕಳೆದುಕೊಂಡಿರುವ ಮತ್ತೆ ಕೆಲವರಿಗೆ ಊಟ ಮಾಡಿಸುತ್ತಾರೆ, ಅವರ ಆಗುಹೋಗುಗಳಿಗೆ ಸಹಕರಿಸುತ್ತಾರೆ! 

ಅಣ್ಣಪ್ಪ ಮನಸ್ಸು ಮಾಡಿದಿದ್ದರೆ ನಮ್ಮೆಲ್ಲರಂತೆ ಒಳ್ಳೆಯ ನೌಕರಿ ಹಿಡಿದು ಲಕ್ಷಗಟ್ಟಲೆ ಸಂಪಾದಿಸಬಹುದಿತ್ತು, ಬೇಕು ಬೇಕಾದದ್ದನ್ನು ಪಡೆದುಕೊಂಡು   ಹಾಯಾಗಿ ಬದುಕಬಹುದಿತ್ತು, ಅದು ಬಿಟ್ಟು ನಯಾ ಪೈಸೆ ಸಂಪಾದನೆಯಿಲ್ಲದ, ಇರುವ ಅಷ್ಟೂ ಇಷ್ಟು ಹಣವನ್ನು ಬೇರೆಯವರ ಉಪಯೋಗಕ್ಕೆ ಬಳಸುವ, ಹಗಲೂ ರಾತ್ರಿ ಆ ಹದಿಮೂರು ಜನರ ಚಿಂತೆಯಲ್ಲಿ ಬದುಕುವ ದರ್ದು ಅಣ್ಣಪ್ಪನಿಗೇನಿತ್ತು? ಹದಿಮೂರು ಜನರ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಇವರಿಗೆ ತಮ್ಮ ವೈಯಕ್ತಿಕ ಬದುಕೆನ್ನುವುದೇ ಇಲ್ಲ. ನೆಂಟರಿಷ್ಟರ ಮನೆಗೆ, ಮದುವೆ ಮುಂಜಿಗೆಂದು ಇಲ್ಲಿರುವವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ, ಯಾಕೆಂದರೆ ಇಲ್ಲಿರುವ ವಿಶೇಷಚೇತನರು ಮನೆಯಲ್ಲಿ ಯಾರೂ ಇಲ್ಲದಿರುವಾಗ ಏನು ಬೇಕಾದರೂ ಮಾಡಿಕೊಳ್ಳಬಹುದು. ದಿನದ ಇಪ್ಪತ್ತನಾಲಕ್ಕು ಘಂಟೆಯೂ, ವಾರದ ಏಳು ದಿನವೂ ವರ್ಷದ ಮುನ್ನೂರ ಅರುವತ್ತೈದು ದಿನವೂ ಅಣ್ಣಪ್ಪ- ದಂಪತಿಗೆ ಈ ಹದಿಮೂರು ಜನರದ್ದೇ ಯೋಚನೆ-ಯೋಜನೆ!  ಐದು ವರ್ಷದ ಸ್ವಂತ ಮಗುವನ್ನು ಜೊತೆಗಿರಿಸಿಕೊಂಡು ಹದಿಮೂರು ವಿಶೇಷಚೇತನರನ್ನೂ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಅಣ್ಣಪ್ಪ ದಂಪತಿಗಳಿಗೂ ಸರಿಯಾದ ನಿದ್ದೆ-ವಿಶ್ರಾಂತಿಯಿಲ್ಲ, ಆದರೆ ಅವರು ಮಾಡುವ ಕೆಲಸದಲ್ಲಿ ಸುಖ ಮಾತ್ರ ಇದೆ! ಒಂದು ರಾಶಿ ನೆಮ್ಮದಿಯಂತೂ ಖಂಡಿತಾ ಇದೆ!

ಇನ್ನು ಅಣ್ಣಪ್ಪರ ಹತ್ತಿರ ನಿಮಗೇನು ಬೇಕು ಅಂತ ಕೇಳಿ, ಸ್ವಂತಕ್ಕೆ ಹಣ ಬೇಕು, ಆಸ್ತಿ ಬೇಕು ಎನ್ನುವ ಉತ್ತರ ತಪ್ಪಿಯೂ ಬರುವುದಿಲ್ಲ. ನನ್ನ ಮಗಳಿಗೆ ಏನಾದರೂ ಬೇಕು ಅಂತ ಕೇಳುವುದಿಲ್ಲ. ‘ಇಲ್ಲಿರುವ ಪುಟ್ಟ ಬಾಡಿಗೆ ಮನೆಯಲ್ಲಿ ಹದಿನೈದು ಜನಕ್ಕಿಂತ ಹೆಚ್ಚಿನ ಜನರನ್ನು ನೋಡಿಕೊಳ್ಳುವುದಕ್ಕೆ ಸಾಧ್ಯ ಇಲ್ಲ‌. ಜೊತೆಗೆ ಏಳುವರೆ ಸಾವಿರ ಬಾಡಿಗೆ ಕಟ್ಟುವುದು ಒಮ್ಮೊಮ್ಮೆ ಕಷ್ಟವಾಗ್ತಾಯಿದೆ. ಹಾಗಾಗಿ ಇನ್ನೂ ಹೆಚ್ಚು ಜನರನ್ನು ಸೇರಿಸಿಕೊಳ್ಳುವುದಕ್ಕೆ ನಮ್ಮ ಸ್ವಂತ ಜಾಗದಲ್ಲಿ ಸ್ವಲ್ಪ ವಿಶಾಲವಾದ ಕಟ್ಟಡವನ್ನು ಯಾರಾದರೂ ನಿರ್ಮಾಣ ಮಾಡಿಕೊಟ್ಟರೆ ಅದಕ್ಕಿಂತ ದೊಡ್ಡ ಉಪಕಾರ ಇನ್ನೊಂದಿಲ್ಲ ಎನ್ನುತ್ತಾರೆ ಅಣ್ಣಪ್ಪ. ನಮ್ಮ ಸ್ವಂತ ಒಡಹುಟ್ಟಿದವರನ್ನೇ ನೋಡಿಕೊಳ್ಳಲು ಹಿಂದೇಟು ಹಾಕುವ ನಮ್ಮಂತವರಿರುವ ಜಗತ್ತಿನಲ್ಲಿ ಅಣ್ಣಪ್ಪರಿಗೆ ನೋಡಿಕೊಳ್ಳುವುದಕ್ಕೆ  ಇನ್ನೂ ಜನ ಬೇಕಂತೆ ಮಾರ್ರೆ! 

ನಾವು ನಮ್ಮ ಕಷ್ಟವೇ ದೊಡ್ಡದು ಎನ್ನುತ್ತಾ ಚಿಂತಿಸುತ್ತಿರುವಾಗ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದಕ್ಕಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವ ಅಣ್ಣಪ್ಪ- ಜ್ಯೋತಿ ದಂಪತಿ ನಿಜಕ್ಕೂ ಗ್ರೇಟ್ ಅಲ್ವಾ? ಯಾರಿಗೋ ಒಂದು ಸಾವಿರ ಕೊಟ್ಟದ್ದನ್ನೇ ಊರಿಡೀ ಹೇಳಿಕೊಂಡು ಬರುವ, ದೇವಸ್ಥಾನಕ್ಕೆ ದೇಣಿಗೆ ಕೊಟ್ಟದ್ದಕ್ಕೆ ಅಮೃತಶಿಲೆಯಲ್ಲಿ ಹೆಸರು ಬಳಸಿಕೊಳ್ಳುವ ನಾವು, ಯಾರೂ ಮಾಡಲು ಮುಂದೆ ಬಾರದ ಮಹತ್ಕಾರ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ತೆರೆಮರೆಯಲ್ಲಿ  ಮಾಡುತ್ತಿರುವ ಅಣ್ಣಪ್ಪ-ಜ್ಯೋತಿ ದಂಪತಿಯ ಮುಂದೆ ಎಷ್ಟು ಕುಬ್ಜರಲ್ಲವೇ?

ನಾವು ಇಂತಹಾ ಯಾವ ಪುಣ್ಯದ ಕೆಲಸ ಮಾಡುತ್ತೇವೋ ಬಿಡುತ್ತೇವೋ, ದೇವನೇ ಬಲ್ಲ. ಆದರೆ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟು ಅಲ್ಲಿರುವ ವಿಶೇಷಚೇತನರೊಂದಿಗೆ ಕುಳಿತು ಊಟ ಮಾಡಿ, ಅವರ ಸುಖದುಃಖಗಳನ್ನು ವಿಚಾರಿಸಿ ಬಂದರೆ ಅವರ ಕಷ್ಟದ ಮುಂದೆ ನಮ್ಮದೇನೇನೂ ಅಲ್ಲ ಎನ್ನುವ ಭಾವನೆ ಬರುತ್ತದೆ, ಅಷ್ಟ್ರ ಮಟ್ಟಿಗೆ ನಾವು ನಿರಾಳರಾಗುತ್ತೇವೆ. ಜೊತೆಗೆ ಅಣ್ಣಪ್ಪರಂತೆ ನಮಗೂ ಸಮಾಜಕ್ಕೆ ಏನಾದರೂ ಮಾಡಬೇಕೆನ್ನುವ ರಾಶಿ ರಾಶಿ ಪ್ರೇರಣೆ ಸಿಗುತ್ತದೆ.

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post