“ಎಲ್ಲಾ ಚೆನ್ನಾಗಿದೆ!” ಎಂದು, ನಮ್ಮ ಪ್ರಧಾನಿ ಅಮೆರಿಕಾದ ನೆಲೆದಲ್ಲಿ ನಿಂತು ಅನಿವಾಸಿಗಳಿಗೆ ಹೇಳಿದಾಗ, ಸದ್ಯ ಕನ್ನಡದಲ್ಲೂ ಹೇಳಿದರಲ್ಲ ಎಂದು ನಾನೂ ಹೆಮ್ಮೆಯಿಂದೊಮ್ಮೆ ಬೀಗಿದೆ. ಆದರೆ ಪ್ರಸ್ತುತ ತಾಯ್ನಾಡಿನ ಪರಿಸ್ಥಿತಿಯ ಅರಿವು, ನೆರೆ ಬಂದು ಹೋದ ಮೇಲೆ, ದೊರಕದ ಸರ್ಕಾರಗಳ ಸಕಾಲಿಕ ಸ್ಪಂದನ, ದಿನಕ್ಕೊಂದು ಹೇಳಿಕೆ, ಅಂಕಿ ಅಂಶ ಹರಿಯಬಿಟ್ಟು ಜೂಟಾಟ ಆಡುತ್ತಿರುವ ನಮ್ಮ ನಾ(ಲಾ)ಯಕರ ಕಿರುನಾಟಕ ಕಣ್ಣೆದುರು ಬಂದು ವಾಸ್ತವಕ್ಕೆ ನನ್ನನ್ನು ತಿರುಗಿಸಿತು. ನಮ್ಮ ಸದ್ಯದ ಪರಿಸ್ಥಿತಿ,
“ನೆರೆ ಬಂದು ಹೋದ ಮೇಲೆ… ನೆರವಿಲ್ಲವಾಗಿದೆ
ಪರಿಹಾರ ಬಯಸಿದರೆ … ಬೆಳಕು ಕಾಣದಾಗಿದೆ
ಹೇಳಿದರೂ ಕೇಳುವವರಿಲ್ಲಿಲವೇ …
ಹೇಳಿಕೊಳಲು ಇನ್ನೇನೂ ಉಳಿದಿಲ್ಲವೇ … ” ಎಂದು ಗುನುಗುನಿಸಿ ಸುಮ್ಮನಾಗಬೇಕಾಗಿದೆ.
ಅತೃಪ್ತರ ಬೆನ್ನ ಮೇಲೆ ಹತ್ತಿ, ಅಧಿಕಾರದ ಚುಕ್ಕಾಣಿ ಹಿಡಿದ ಶ್ರೀಮಾನ್ ಯಡಿಯೂರಪ್ಪ ಪಾಳಯದ ಬಿ.ಜೆ.ಪಿ ಸರ್ಕಾರ ಸುಮಾರು 60 ಕ್ಕೂ ಹೆಚ್ಚು ದಿನಗಳನ್ನು ಪೂರೈಸಿದೆ. ಆರಂಭದ ಇಪ್ಪತ್ತೈದು ದಿನಗಳ ತನಕ ಕನ್ನಡಿಗರಿಗೆ ದೊರಕಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರ, “ಬಲ್ಲಿರೇನಯ್ಯಾ ಬಹುಬಲದ ಪರಾಕ್ರಮಿಯಾ?” ಎಂಬ ಅಮೋಘ ಏಕಪಾತ್ರಾಭಿನಯ! ಆತುರಾತುರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ತನ್ನ ಸರ್ಕಾರಕ್ಕೊಂದು ಸಂಪುಟ ರಚಿಸಿಕೊಳ್ಳುವ ಸ್ವಾತಂತ್ರ್ಯವಿಹಿತರಾಗಿ ವರಿಷ್ಠರ ಮುಂದೆ ತಿರುತಿರುಗಿ ಅಂಗಲಾಚಿ ದಣಿದಿದ್ದರು. ಸರ್ಕಾರ ರಚಿಸಿದ ತಪ್ಪಿಗೆ ಅನಿವಾರ್ಯವಾಗಿ ಕುಣಿ ಕುಣಿದು, ದಣಿದ, ಮುಖ್ಯಮಂತ್ರಿ ಶ್ರೀಮಾನ್ ಯಡಿಯೂರಪ್ಪನವರು, ಆವಾಗಲೇ ಒಂದು ಹಂತಕ್ಕೆ ನಿಸ್ತೇಜರಾಗಿ ಬಿಟ್ಟಿದ್ದರು. ಇವೆಲ್ಲದರ ನಡುವೆ ಮುನಿಸಿಕೊಂಡ ಪ್ರಕೃತಿ ಮಾತೆ, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಭೋರ್ಗೆರೆದು ಸುರಿದ ಮಳೆ, ಹಿಂದೆಂದೂ ಕನ್ನಡನಾಡು ಕಂಡರಿಯದ ಪ್ರವಾಹ ಸೃಷ್ಟಿಸಿ, ಜನಜೀವನ ತಲ್ಲಣಗೊಳಿಸಿಬಿಟ್ಟಿತು.
ಮಳೆಸುರಿಯುತ್ತಿದ್ದರೂ, ಪಕ್ಕದ ರಾಜ್ಯದವರು ತಂತಮ್ಮ ಡ್ಯಾಮ್ ಗಳಿಂದ ಹೆಚ್ಚುವರಿ ನೀರು ನಮ್ಮ ರಾಜ್ಯದ ಕಡೆ ಹರಿಬಿಡುತ್ತಿದ್ದರೂ, ಸಂಪುಟ ರಚನೆಗೆ ಅನುಮತಿ ಪಡೆಯಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಗಳಿಗೆ, ವರಿಷ್ಠರೇ ಹೇಳುವ ತನಕ ಮೊದಲ ಆದ್ಯತೆ ಪ್ರವಾಹ ಪ್ರದೇಶದ ಜನ ಜೀವನದ ಸುರಕ್ಷತೆ ಎಂದು ಅರಿವಿಗೆ ಬಂದಿರಲಿಲ್ಲ. ತದನಂತರ ದೆಹಲಿಯಿಂದ ಮರಳಿದ ಮುಖ್ಯಮಂತ್ರಿಗಳು, ಉತ್ತರಕರ್ನಾಟಕದಲ್ಲಿ ಕೆಲ ದಿನ ನೆಲೆ ನಿಂತು ಪ್ರವಾಹ ಪ್ರದೇಶಗಳ ಮೇಲುಸ್ತುವಾರಿಗೆ ಸ್ವತಃ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು, ವರಿಷ್ಠರ ಅಣತಿಯಂತೆ ತಾನಿದನ್ನು ಮಾಡುತಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳುವುದರ ಮೂಲಕ, ಹೈ ಕಮಾಂಡ್ ಗೆ ತಮ್ಮ ವಿಧೇಯತೆಯನ್ನು ಬಹಿರಂಗವಾಗಿ, ಮನ ಮುಟ್ಟುವಂತೆ ಪ್ರದರ್ಶಿಸಿಯೂ ಬಿಟ್ಟರು.
ಮಂತ್ರಿಗಳಿಲ್ಲವೆಂಬ ಚಿಂತೆ ಬೇಡ ನಮ್ಮೆಲ್ಲ ಜನಪ್ರತಿನಿಧಿಗಳು ಮಂತ್ರಿಗಳಂತೆಯೇ!, ಪ್ರವಾಹ ಪರಿಹಾರ, ಜನ ಜೀವನದ ಸುರಕ್ಷತೆಗೆ ಕಟಿಬದ್ದರೆಂಬ ಎಂಬ ಅಭಯ ಕೊಡಲಾಯಿತು. ಜನ ಪರ ಕಾಳಜಿ ಇರುವ ಹಲವು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿದ್ದಾರೆ ಎಂಬುದನ್ನು ದೃಢಪಡಿಸುವ ಸತ್ಕಾರ್ಯ, ಸಹಾಯ ಹಲವು ಜನಪ್ರತಿನಿಧಿಗಳು, ನಾಯಕರು ಮಾಡಿತೋರಿಸಿದ್ದು ಒಂದು ಹಂತದಲ್ಲಿಕೊಂಚ ಆತ್ಮವಿಶ್ವಾಸ ಬರಿಸಿತು. ಸಂಪುಟದಲ್ಲಿ ಸ್ಥಾನ ಪಡೆಯುವ ಅರ್ಹತೆ ಹೆಚ್ಚಿಸಿಕೊಳ್ಳಲು, ತಮ್ಮಪಾಲಿನ ಕಟ್ಟಕಡೆಯ ಸದವಕಾಶ ಎಂದರಿತ ಆಡಳಿತ ಪಕ್ಷದ ಜನಪ್ರತಿನಿಧಿಗಳಂತೂ ಶಕ್ತಿ ಮೀರಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡು, ತನು, ಮನ, ಧನ ಎಲ್ಲವನ್ನೂ ಧಾರೆ ಎರೆದದ್ದೂ ವರದಿಯಾಯಿತು. ಕೇಂದ್ರ ಗೃಹ ಸಚಿವರೂ, ಹಣಕಾಸು ಸಚಿವರೂ ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿ, ಮೂಕವಿಸ್ಮಿತರಾಗಿದ್ದರು!
ಅನಂತರ ಜಾತಿ, ಪ್ರಾಂತ್ಯಾಧಾರಿತ, ಹೈ ಕಮಾಂಡ್ ಬೆಂಬಲಿತ ಹದಿನೇಳು ಸಚಿವರ ‘ಬೈ – ಟೂ’ (ಇದುಅರ್ಧವಷ್ಟೇ ಅಂತೇ!, ಇನ್ನರ್ಧ ಸಶೇಷ! ) ಸಂಪುಟ ವೇನೋ ರಚಿಸಿಬಿಟ್ಟರು. ಕನ್ನಡಿಗರಿಗೆ ಪ್ರಪ್ರಥಮ ಬಾರಿಗೆ ಮೂವರು ಉಪಮುಖ್ಯಮಂತ್ರಿಗಳ ಸೌಭಾಗ್ಯ! ಅಲ್ಲಿಗೇ ಮಂತ್ರಿಗಿರಿ ಅವಕಾಶ ವಂಚಿತರ ಅಸಹಕಾರ ಪರ್ವ ಪ್ರಹಸನವೂ, ಅಲ್ಲಲ್ಲಿ ಕಾಣಿಸತೊಡಗಿತು. ಸರ್ಕಾರವೇ ಅಳೆದೂ, ತೂಗಿ, ಪರಾಂಬರಿಸಿ ಅಂದಾಜಿಸಿದಂತೆ ನೆರೆಯ ಹಾವಳಿಗೆ ಸಿಕ್ಕಿ ನಲುಗಿದ್ದು ಸುಮಾರು ಒಂದು ಸಾವಿರ ಗ್ರಾಮಗಳು ಮತ್ತು ಒಂದು ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು. ಕೃಷಿ ಭೂಮಿ, ಮನೆ ಮಠ, ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳೇ ನಿರ್ನಾಮವಾಗಿ, ಹಾನಿಗೊಂಡು, ಉಂಟಾದ ಒಟ್ಟು ನಷ್ಟದ ಅಂದಾಜು 35 ಸಾವಿರ ಕೋಟಿಗೂ ಹೆಚ್ಚಿನದು ಎಂದು ಕೇಂದ್ರದ ನೆರವಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಯಿತು. ಕೇಂದ್ರವೇನೋ, ಜಾಣ ಕುರುಡು ಪ್ರದರ್ಶಿಸುತ್ತಾ ಕನ್ನಡಿಗರ ನೋವಿಗೆ ಸ್ಪಂದಿಸುವುದನ್ನೇ ಮರೆತು ನಿಂತಿದ್ದು, ಕನ್ನಡಿಗರ ದೌರ್ಭಾಗ್ಯ. ಈ ಹಂತದಲ್ಲಿ ರಾಜ್ಯ ಸರ್ಕಾರವೂ ಮನೆ ಕಳೆದುಕೊಂಡವರಿಗಿಷ್ಟು, ಮನೆ ಹಾನಿಯಾದವರಿಗಿಷ್ಟು ಅಂತಾ ಘೋಷಣೆಯೂ ಮಾಡಿತು. ಇವೆಲ್ಲ ಬಹುತೇಕ ಘೋಷಣೆಯಾಗಿಯೇ ಉಳಿಯಿತು. ಮುಖ್ಯಮಂತ್ರಿಗಳು ಕೇವಲ 10-15 ನಿಮಿಷಗಳ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ಕಣ್ಮರೆಯಾದ ಕಿರು ಪ್ರಹಸನಗಳೂ ನೆಡೆಯಿತು. ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಲ್ಲಿ ಸಾಲುತ್ತದೆ ಹೇಳಿ?
ನಂತರ ಶುರುವಾಗಿದ್ದೇ ದೊಂಬರಾಟ. ಪ್ರಶ್ನಿಸಿದವರಿಗೆಲ್ಲ ತರೇವಾರಿ ಉತ್ತರ. ಒಬ್ಬರು ಅದಾಗಲೇ ಒಂದೂವರೆ ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ ಅಂದರೆ, ಇನ್ನೊಬ್ಬರು ಐದು ನೂರು ಕೋಟಿ ಎಂದರು. ತ್ರಿಮೂರ್ತಿಗಳಲ್ಲಿ ಒಬ್ಬರಾದ ಉಪಮುಖ್ಯಮಂತ್ರಿ ಮಹಾಶಯರೊಬ್ಬರು ವಿದ್ಯಾರ್ಥಿಗಳೆಲ್ಲ ದೇಣಿಗೆ ಎತ್ತಿ ಸಂತ್ರಸ್ತರ ನೆರವಿಗೆ ಮುಂದಾಗಬೇಕೆಂಬ ಕರೆಯನ್ನೂ ಕೊಟ್ಟರು. ಪಾಪ, ಅವರಿಗೆ ತಾನೀಗ ಉಪಮುಖ್ಯಮಂತ್ರಿ, ವಿದ್ಯಾರ್ಥಿ ನಾಯಕನಲ್ಲ ಎಂಬ ಅರಿವಿರಲಿಲ್ಲವೆನಿಸುತ್ತೆ! ಇನ್ನು ರಾಜ್ಯದ ಸಂಸದರದ್ದು ಇನ್ನೊಂದು ಪಾಡು. ಒಬ್ಬರು ಪಕ್ಷೇತರರು, ಇನ್ನೊಬ್ಬರು ವೈಯಕ್ತಿಕ ಸಂಕಷ್ಟಕ್ಕೆ ಸಿಲುಕಿ ಓಡಾಡುತ್ತಿದ್ದರೆ, 25 ಬಿ ಜೆ ಪಿ ಸಂಸದರದ್ದು (ಕೆಲವರು ಪರಬಾವೀ ಮಂತ್ರಿಗಳೂ ಹೌದೆನ್ನಿ! ) ಹಿರಿಯರೆದುರು ತಲೆಯೆತ್ತಿ ನಿಲ್ಲಬಾರದು ಎಂಬಷ್ಟು ವಿಧೇಯತೆ, ತನ್ನ ಮತದಾರರಿಗೋ, ನಾಡಿಗೋ ಅಲ್ಲ, ಹೈ ಕಮಾಂಡ್ಗೆ! ಅದೂ ಸರಿಯೆನ್ನಿ ಅವರೇನಿದ್ದರೂ, “ಅಬ್ ಕೀ ಬಾರ್ ಮೋದಿ ಸರ್ಕಾರ್”, ಎಂದು ಮೋದಿಯ ಹೆಸರಲ್ಲೇ ಗೆದ್ದಿರುವವರಲ್ಲವೇ? ಕೇಂದ್ರ ಸರಕಾರ, ಕೂಲಂಕುಷವಾಗಿ ಹಾನಿಯ ವರದಿ ತಯಾರಿಸುತ್ತಿದೆ, 370 ನೇ ಪರಿಚ್ಛೇದದ ಹಿಂಪಡೆಯುವಿಕೆ, ಅನುಷ್ಠಾನ ಮತ್ತು ಕಾಶ್ಮೀರದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತೊಡಗಿಕೊಂಡಿದೆ, ಸ್ವಲ್ಪ ತಾಳ್ಮೆ ಇರಲಿ, ಕೇಂದ್ರ ಖಂಡಿತ ನಮ್ಮ ನೆರವಿಗೆ ನಿಲ್ಲುತ್ತೆ ಅನ್ನುತ್ತಿದ್ದವರು, ನಂತರ ಮೋದಿ ವಿದೇಶ ಪ್ರವಾಸದಿಂದ ಬಂದು ಈಗಷ್ಟೆ ದಣಿವಾರಿಸಿಕೊಳ್ಳುತ್ತಿದ್ದಾರೆ, ತಾಳ್ಮೆ ಇರಲಿ ಎಂದು ವರಸೆ ಬದಲಿಸಿಯೂ ಬಿಟ್ಟರೆನ್ನಿ. ಒಬ್ಬ ಸಂಸದರು, ಕೇಂದ್ರದ ನೆರವೇ ಬೇಕಿಲ್ಲ ಕರ್ನಾಟಕ ಸರಕಾರದ ಬಳಿ ಅಗತ್ಯ ಸಂಪನ್ಮೂಲ ಯಥೇಚ್ಚವಾಗಿದೆ ಎನ್ನುವ ಮೂಲಕ ವಿಜಯನಗರ ಸಾಮ್ರಾಜ್ಯದ ದಿನಗಳನ್ನು ನೆನಪಿಸಿದರೆ, ಇನ್ನೊಬ್ಬರು ಪ್ರಧಾನಿಯನ್ನು ಪ್ರಶ್ನೆ ಮಾಡುವವರು ನೆಗೆಪಾಟಲಿಗೀಡಾಗಬೇಕು ಎಂದೂ ಬಿಟ್ಟರು. ನಾನೇ ಮೋದಿಯವರ ಆತ್ಮ ಚರಿತ್ರೆ ಬರೆದಿದ್ದು, ನನ್ನಷ್ಟು ಅವರನ್ನು ಬಲ್ಲವರು ಇನ್ನ್ಯಾರೂ ಇಲ್ಲ, ಸುಮ್ಮನಿರಿ ಎಂಬುದು ಅವರ ಸ್ವಸಮರ್ಥನೆಯ ತಿರುಳು.
ಕರುನಾಡಿನ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಹಿರಿಯ ಮಂತ್ರಿಗಳೂ ಆಗಿರುವ ಮಹಾನುಭಾವರೊಬ್ಬರಂತೂ, ಪ್ರಶ್ನಿಸಿದವರಿಗೆ ಮಹಾತ್ಮರ ಜನ್ಮದಿನದಂದೇ, ಗಾಂಧೀಜಿಯ ಪ್ರಕಾರ ಈ ರೀತಿ ಪ್ರಶ್ನಿಸುವವರು ದೇಶದ್ರೋಹಿಗಳು, ಎಂದು ಗಾಂಧೀಜಿಯನ್ನೇ ಸುಳ್ಳು ಉದಾಹರಿಸಿಯೂ ಬಿಟ್ಟರು! ಸನ್ಮಾನ್ಯರು, ಗಾಂಧೀಜಿ ಎಲ್ಲಿ? ಯಾವಾಗ ? ಹಾಗೆ ಹೇಳಿದ್ದಾರೆ ಎಂಬುದನ್ನು ವಿವರಿಸುವ ಜವಾಬ್ದಾರಿ ಹೊತ್ತು ತಮ್ಮನ್ನು ಸಮರ್ಥಿಸಿಕೊಳ್ಳುವ ಅಥವಾ ಕ್ಷಮೆ ಕೋರುವ ನೈತಿಕತೆ ತೋರಿಸದಿದ್ದರೆ, ಅದು ಗಾಂಧೀಜಿಗೆ ಅವರಿಂದಾದ ದೊಡ್ಡ ಅಪಚಾರ ಎಂಬುದಂತೂ ಜನಮಾನಸದಲ್ಲಿ ದಾಖಲಾಗಲಿದೆ. ಮೋಹನ್ ದಾಸ್ ಕರಮ್ ಚಂದ್ ಗಾಂಧೀಜಿ ಅಲ್ಲದೇ ಇತ್ತೀಚಿನ ಗಾಂಧಿಗಳನ್ನಾದರೂ ಈ ವಿಷಯದಲ್ಲಿ ಅವರು ‘ಕೋಟ್’ ಮಾಡುವುದು ಅಸಾಧ್ಯವೆನಿಸುತ್ತೆ! ತಮಗೆ ಕೇಂದ್ರವನ್ನು ಕೇಳುವ ಬಲವಿಲ್ಲ, ಕೇಳಿದವರಿಗೆ ಹಾಗೆಲ್ಲ ಕೇಳಬಾರದು ಅದು ಸರಿಯಲ್ಲವೆನ್ನುವುದರಿಂದ ಹಿಡಿದು, ಅದು ದೇಶದ್ರೋಹಿಯ ಲಕ್ಷಣ ಎನ್ನುವಷ್ಟು ಮತಿಭ್ರಮಣೆಗಾಳಾಗಿ ಬಿಟ್ಟಿದ್ದಾರೆ ಈ ನಾ(ಲಾ)ಯಕರು. ಕೇಂದ್ರದಲ್ಲಿ ಬಿ ಜೆ ಪಿ ನೇತೃತ್ವದ ಸರಕಾರವಿದ್ದಾಗಲೆಲ್ಲ, ಪಕ್ಷ ರಹಿತವಾಗಿ ಕನ್ನಡಿಗರಿಗೆ, ರಾಜ್ಯಕ್ಕೆ ಕೇಂದ್ರದ ಅಗತ್ಯ ನೆರವು ದೊರಕುವಂತೆ ಕೆಲಸ ಮಾಡುತಿದ್ದ ದಿವಂಗತ ಅನಂತಕುಮಾರ್ ಅಂತಹ ನಾಯಕರ ನಿರ್ಗಮನದ ನಿರ್ವಾತ ಅರಿವಿಗೆ ಬಂತೆನ್ನಿ. ಸ್ವಂತಿಕೆ, ಸ್ವಾಭಿಮಾನ ರಹಿತರಾಗಿ ಭಜನೆಯಲ್ಲಿ ತೊಡಗಿರುವ ಈ ಸಂಸದರನ್ನು ಖಂಡಿಸುವುದರ ಜೊತೆಗೆ, ತೆರೆಮರೆಯಲ್ಲಿ ರಾಜ್ಯದ ಹಿತಾಸಕ್ತಿಯ ನೆರವಿಗೆ ಧಾವಿಸಿಬರುತ್ತಿದ್ದ ಅನಂತಕುಮಾರ್ ಅವರನ್ನು ನೆನಪಿಸಿಕೊಂಡು ಕೃತಜ್ಞತೆ ಅರ್ಪಿಸುವುದೂ ಅಗತ್ಯವೆನಿಸುತ್ತಿದೆ.
ಸರಕು-ಸಾಮಾನು ತೆರಿಗೆ, ಆದಾಯ ತೆರಿಗೆ, ರಸ್ತೆ ತೆರಿಗೆ , ವಿದೇಶಿ ವಿನಿಮಯದ ಸಂಗ್ರಹ ಎಲ್ಲದರಲ್ಲೂ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾದ ನಮ್ಮ ರಾಜ್ಯಕ್ಕೆ ಬಂದೊದಗಿದ ವಿಪತ್ತಿಗೆ ನೆರವಾಗಬೇಕೆಂಬ ಅರಿವು ಕೇಂದ್ರಕ್ಕಿಲ್ಲವೇ ? ನಮಗೇನೂ ಭಿಕ್ಷೆ ಬೇಕಿಲ್ಲ, ಪಾರದರ್ಶಕ ಸೂತ್ರದಡಿ ನಮಗೆ ದೊರಕಬೇಕಾದ ನೆರವು ಪಡೆಯುವ ಕೆಲಸ ನಮ್ಮ ಸರ್ಕಾರ, ಜನಪ್ರತಿನಿಧಿಗಳ ಜವಾಬ್ದಾರಿಯಲ್ಲವೇ? ತತಕ್ಷಣ ಕೊಡಲಾಗದಿದ್ದರೂ, ನಿಮ್ಮ ನೋವು ನಮ್ಮ ಅರಿವಿಗೆ ಬಂದಿದೆ, ಸದ್ಯವೇ ಯಥೋಚಿತವಾಗಿ ನೆರವಾಗುತ್ತೇವೆ ಎಂದು ಸ್ಪಂದಿಸುವ ನೈತಿಕ ಜವಾಬ್ದಾರಿ ಚುನಾಯಿತ ಸರ್ಕಾರ ಮತ್ತದರ ನೇತಾರರು ಮರೆತು ಬಿಟ್ಟರೆ? ರಾಜ್ಯದ ವಿರೋಧ ಪಕ್ಷದವರಂತೂ, ತಾವು ಅಧಿಕಾರ ಕಳೆದುಕೊಂಡ ಗುಂಗಿನಿಂದ ಹೊರಬಂದು ತಮ್ಮ ನಾಯಕ ಯಾರೆಂಬ ಗೊಂದಲದಲ್ಲೇ ಇದ್ದಾರೆನ್ನಿ! ಪರಿಹಾರದ ಕೋರಿಕೆ ನಿರ್ದೇಶಿತ ಕ್ರಮದಲ್ಲಾಗಲಿಲ್ಲ, ಅಂಕಿ ಸಂಖ್ಯೆ ಪರಿಪೂರ್ಣವಲ್ಲ ಎಂಬ ಕುಂಟು ತಾಂತ್ರಿಕ ನೆಪ ಮುಂದಿಟ್ಟು ಕೇಂದ್ರ, ಬಿ ಜೆ ಪಿ ಹೈ ಕಮಾಂಡ್ ಯಾರನ್ನೇ ಮಣಿಸುವ ಉದ್ದೇಶ ಹೊಂದಿದ್ದರೂ, ಅದರ ತಾಪ ತಟ್ಟಿದ್ದು ಅಸಂಖ್ಯಾತ ಸಂತ್ರಸ್ತ ಕನ್ನಡಿಗರಿಗೆ. ಇಲ್ಲಿಯ ತನಕ ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಪಾಳಯದ ಸರ್ಕಾರಗಳಿದ್ದು ಅನುದಾನದ ವಿಷಯದಲ್ಲಿ ನಾವು ಯಾವಾಗಲೂ ವಂಚಿತರಾಗುತ್ತೇವೆ ಎಂಬ ಕೊರಗಿತ್ತು. ಆದರೆ ಈಗ ಒಂದೇ ಪಾಳಯದ ಅಧಿಕಾರ ಎರಡೂ ಕಡೆ ಇದ್ದರೂ ಕನ್ನಡಿಗರ ಬವಣೆ, ಶಾಪ ವಿಮೋಚನೆಯಾದಂತೆ ಕಾಣಿಸುತ್ತಿಲ್ಲ. ನೆಲೆ ಕಳೆದುಕೊಂಡ ಶ್ರೀ ಸಾಮಾನ್ಯನಿಗೆ ಸಕಾಲದಲ್ಲಿ ಸ್ಪಂದಿಸದೆ, ಪರಸ್ಪರ ರಾಜಕೀಯ ದಾಳದ ಹುಚ್ಚಾಟದಲ್ಲಿ ನೊಂದವರ ಆಕ್ರೋಶಕ್ಕೆ ತುಪ್ಪ ಸುರಿಸಿ, ಪ್ರಭುತ್ವದ ಎದುರು ಸಿಡಿದೇಳುವ ಜನಾಂದೋಲನ, ಅಸಮಾನತೆಯ ಸೃಷ್ಟಿಗೆ ಎಡೆ ಮಾಡಿಕೊಟ್ಟಿತೆಂಬ ಕನಿಷ್ಠ ಪ್ರಜ್ಞೆ ನಮ್ಮನ್ನಾಳುವ ನಾಯಕರಿಗೆ ಇಲ್ಲವಾಗಿದ್ದು ದುರಂತವೇ ಸರಿ.
ನಿಜವಾದ ಸಮಸ್ಯೆ ಮತ್ತು ತಕ್ಷಣದ ಸಂಕಟಕ್ಕೆ ಸ್ಪಂದಿಸುವ ಬದಲು ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗಳನ್ನು ಸೆಣಸಿ ಗೆಲ್ಲುವ ಅತೀಯಾದ ಅಂಧ ವಿಶ್ವಾಸ ಯಾವದೇ ಪ್ರಜಾಪ್ರಭುತ್ವಕ್ಕೆ ಆತಂಕಕಾರಿ. ಸ್ಥಳೀಯ ನಾಯಕತ್ವದ ಮೇಲೆ ನಂಬಿಕೆ ಇರಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸುವ ಸ್ವಾತಂತ್ರ್ಯ ನೀಡುವತ್ತ ಬಿಜೆಪಿ ಹೈ ಕಮಾಂಡ್ ಗಮನ ಹರಿಸಬೇಕಾಗಿದೆ. ಈಗಿನ ನಾಯಕತ್ವ, ಅದರ ಸಾಮರ್ಥ್ಯದಲ್ಲಿ ಹೈ ಕಮಾಂಡ್ ಪೂರ್ಣ ಪ್ರಮಾಣದ ನಂಬಿಕೆ ಹೊಂದಿಲ್ಲದಿದ್ದಲ್ಲಿ, ಅಂತಹ ನಂಬಿಕೆ, ಸಾಮರ್ಥ್ಯ ಹೊಂದಿರುವ ನಾಯಕನಿಗೆ ಸರ್ಕಾರದ ನೇತೃತ್ವ ನೀಡುವ ಹೊಣೆಗಾರಿಕೆಯೂ ಅದಕ್ಕಿದೆ. ಎಲ್ಲವೂ ತನ್ನ ಮುಷ್ಟಿಯಲ್ಲಿಯೇ ನಿಯಂತ್ರಿಸುತ್ತೇವೆ ಎಂಬ ಭ್ರಮೆಯಲ್ಲಿ ಮುಳುಗಿದ್ದರೆ ಸ್ಥಳೀಯ ಸರ್ಕಾರವೊಂದರ ಆಡಳಿತ ಪರಿಣಾಮಕಾರಿಯಾಗಲಾರದು.
ಇಷ್ಟು ದಿನಗಳ ನಿರಂತರ ಶೋಷಣೆಯ ನಂತರ ಕೇಂದ್ರ ಇದೀಗ ಮಧ್ಯಂತರ ನೆರವಿನ ಘೋಷಣೆಯೇನೋ ಮಾಡಿದೆ. ಇದು ಸ್ವಾಗತಾರ್ಹವಾದರೂ, ಸಮಯಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕನ್ನಡಿಗರ ನೋವು ಇದು ಎಂದಿಗೂ ಅಳಿಸಿಹಾಕಲಾರದು. ಮಧ್ಯಂತರ ನೆರೆವಿಗೇ ಈ ಪರಿಯ ಪ್ರಹಸನ ನೆಡೆದರೆ, ಪೂರ್ಣ ಪ್ರಮಾಣದ ನೆರವು ಯಾವಾಗ ದೊರಕಲಿದೆಯೋ? ಅದಕ್ಕಿನ್ನೂ ಏನೇನೂ ಕಾದಾಟವಿದೆಯೋ ಕನ್ನಡಮ್ಮನೆ ಬಲ್ಲಳು!
ಡ್ಯಾನಿಶ್ ಸಮಾಜದಲ್ಲಿ ಪ್ರಚಲಿತವಿರುವ, “ಬಟ್ಟೆ ರಹಿತ ಚಕ್ರವರ್ತಿ (Emperor with no cloth)” ಕಥೆ ಇಲ್ಲಿ ಪ್ರಸ್ತುತವೆನಿಸುತ್ತೆ. ಆ ಕಥೆಯ ಪ್ರಕಾರ, ಒಂದಾನೊಂದು ಕಾಲದಲ್ಲಿ, ಒಂದೂರಿನಲ್ಲಿ ಒಬ್ಬ ಅಸಮರ್ಥ, ಶೋಕಿಲಾಲ ಚಕ್ರವರ್ತಿ ಇದ್ದನಂತೆ. ಆ ಚಕ್ರವರ್ತಿಗೆ ವಿವಿಧ ಬಟ್ಟೆ ಬರೆ ಮತ್ತು ಬಗೆ ಬಗೆಯ ಪೋಷಾಕಿನ ಮೇಲೆ ಅತೀವ ಆಸಕ್ತಿ. ಅವುಗಳನ್ನು ಧರಿಸಿ, ಪ್ರದರ್ಶಿಸಿ, ತಾನು ತುಂಬಾ ಸುಂದರವಾಗಿ ಕಾಣಿಸುತ್ತಿದ್ದೇನೆ ಎಂದು ಜನರಿಂದ ಪದೇ ಪದೇ ಹೊಗಳಿಸಿಕೊಳ್ಳುವುದು ಬಿಟ್ಟರೆ, ಆಡಳಿತದಲ್ಲಿ ಅವನ ಆಸಕ್ತಿ ಅಷ್ಟಕಷ್ಟೇ. ಬಗೆ ಬಗೆಯ ಉಡುಗೆ ಕೊಟ್ಟವರಿಗೆ, ತನ್ನನು ಹೊಗಳಿದವರಿಗೆ ಬಹುಮಾನ ಮತ್ತು ಯಾವದೇ ಒಂದು ಉಡುಗೆ ಒಪ್ಪುತ್ತಿಲ್ಲ ಅಂದವರಿಗೆ ಶಿಕ್ಷೆ ಖಂಡಿತ ಎನ್ನುವುದು ಆ ಸಾಮ್ರಾಜ್ಯದ ಸತ್ಪ್ರಜೆಗಳಿಗೆಲ್ಲ ತಿಳಿದ ವಿಷಯವಾಗಿತ್ತು. ಇಂತಿರ್ಪ ಸಮಯದಲ್ಲಿ, ರಾಜನ ಈ ಗುಣ ಅರಿತ ಬುದ್ದಿವಂತ ದರ್ಜಿಯೊಬ್ಬ, ದರ್ಬಾರಿಗೆ ಬಂದು ಎಲ್ಲ ಮಂತ್ರಿ ಮಾಗಧರ ಸಮ್ಮುಖದಲ್ಲಿ, ಮಹಾಪ್ರಭುಗಳೇ, ನಿಮಗೆಂದೇ ತಾನೊಂದು ವಿಶಿಷ್ಟ ಉಡುಗೆ ತಯಾರಿಸಿದ್ದೇನೆ. ಇಂತಹ ಉಡುಗೆ ಪ್ರಪಂಚದಲ್ಲಿ ಬೇರೆಲ್ಲೂ, ಬೇರಾರಿಗೂ ಸಿಗಲಾರದು. ಈ ಪೋಷಾಕಿನ ವಿಶೇಷತೆ ಎಂದರೆ ಇದು ಸಂಪೂರ್ಣ ಭಾರ ಮತ್ತು ವರ್ಣ ರಹಿತ. ಇದನ್ನು ತೊಟ್ಟರೆ ನಿಮಗೆ ಬಟ್ಟೆ ತೊಟ್ಟ ಅನುಭವವೇ ಆಗಲಾರದು. ಅಷ್ಟು ಹಗುರ ಮತ್ತು ತೆಳ್ಳಗಿನ ವಿಶೇಷ ಉಡುಗೆ ಇದು! ಈ ಪೋಷಾಕಿನ ಇನ್ನೊಂದು ವೈಶಿಷ್ಟ್ಯ , ಅದು ಕೇವಲ ಸಮರ್ಥ ಮತ್ತು ಬುದ್ಧಿವಂತರಿಗೆ ಮಾತ್ರ ಕಾಣಿಸುತ್ತದೆ. ಯಾರಿಗೇ ಕಾಣಿಸುವುದಿಲ್ಲವೋ ಅವರು ಖಂಡಿತಾ ಅಸಮರ್ಥರು ಮತ್ತು ಅವರವರ ಪದವಿಗೆ ಅನರ್ಹರು. ಇಂಥಾ ಉಡುಗೆ ನೀವೇಕೆ ಒಮ್ಮೆ ಧರಿಸಬಾರದು? ಎಂದು ಕೇಳಿಕೊಳ್ಳುತ್ತಾನೆ. ದರ್ಜಿಯ ನಿರೂಪಣೆಗೆ ಮನಸೋತ ಶೋಕಿಲಾಲ ಸಾಮ್ರಾಟ, ಆಗಲಿ, ನಿನ್ನ ಆ ವಿಶಿಷ್ಟ ಉಡುಗೆ ನನಗೆ ತೊಡಿಸಿ ಶೃಂಗರಿಸುವವನಾಗು. ರಾಜ ದರ್ಬಾರಿಗೆ ತೆರಳಿ ಈ ವಿಶಿಷ್ಟ ಉಡುಗೆಯನ್ನು ಪ್ರದರ್ಶಿಸಿಯೇ ಬಿಡುತ್ತೇನೆ ಎನ್ನುತ್ತಾನೆ. ದರ್ಜಿ ಮತ್ತವನ ಸಂಗಡಿಗರು ಮರುದಿನ ರಾಜದರ್ಬಾರಿನ ಮುಂಚೆ ಅಂತಃಪುರಕ್ಕೆ ತೆರಳಿ ರಾಜನನ್ನು ಹೊಸ ಉಡುಗೆ ತೊಡಿಸಿ ಶೃಂಗರಿಸುತ್ತಾರೆ. ಬಟ್ಟೆ ತೊಟ್ಟ ಅನುಭವವೇ ಇಲ್ಲದ ರಾಜನೂ ಈ ಉಡುಗೆಯ ವಿಶಿಷ್ಟತೆಯಿಂದ ಪುಳಕಿತನಾಗುತ್ತಾನೆ. ತನ್ನ ಹೊಸ ಪೋಷಾಕಿನಲ್ಲಿ ದರ್ಬಾರಿಗೆ ತೆರಳಿದಾಗ ಮಂತ್ರಿ ಮಾಗಧರೆಲ್ಲ ನೋಡಿ ಕ್ಷಣಾರ್ಧ, ರಾಜರು ಬಟ್ಟೆಯೇ ತೊಟ್ಟಿಲ್ಲವಲ್ಲ ಎಂದು ಕಳವಳಕ್ಕೀಡಾಗುತ್ತಾರೆ. ಆದರೆ ಹೇಳುವ ಹಾಗಿಲ್ಲವಲ್ಲ! ಹೊಸ ಧಿರಿಸಿನಲ್ಲಿ ತಾನು ಹೇಗೆ ಕಾಣಿಸುತ್ತಿದ್ದೇನೆ? ಎಂದು ಪ್ರಭುಗಳು ಕೇಳಿದಾಗ, ನಿಜ ವಿಷಯ ಹೇಳಿದರೆ ತಮ್ಮನ್ನು ತಾವು ಅಸಮರ್ಥರೆಂದು ನಿರೂಪಿಸಿಕೊಂಡು ತಂತಮ್ಮ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂಬ ಅರಿವಾಗಿ, ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ ಮಾಹಾಪ್ರಭುಗಳೇ, ನಿಮ್ಮ ಈ ಹೊಸ ಪೋಷಾಕು ಅದ್ಭುತ ಮತ್ತು ವಿಶಿಷ್ಟ ಆವಿಷ್ಕಾರ ಎಂದು ಹೊಗಳಿಕೆಗೆ ತೊಡಗುತ್ತಾರೆ. ಈ ಸೂಕ್ಷ್ಮ ಅರಿಯದ ದರ್ಬಾರಿನಲ್ಲಿದ್ದ ಪುಟ್ಟ ಮಗುವೊಂದು, ಅಯ್ಯೋ, ಮಹಾರಾಜರೇ, ನೀವು ಬಟ್ಟೆಯೇ ಧರಿಸಿಲ್ಲವಲ್ಲ ಎಂದು ಗಟ್ಟಿಯಾಗಿ ನಿಜ ಹೇಳಿಬಿಡುತ್ತದೆ. ಭಟ್ಟಂಗಿಗಳ ಮಧ್ಯೆ ತನ್ನ ಅರಿವೆಯ ಅರಿವನ್ನೇ ಕಳೆದುಕೊಂಡಿದ್ದ ಸಾಮ್ರಾಟ, ಈ ಮಗುವೇಕೋ ನನಗೆ ಅವಮಾನ ಮಾಡುತ್ತಿದ್ದೆ ಎಂಬ ಕೋಪದಿಂದ, ನಿಜ ಹೇಳಿದ ಮಗುವನ್ನು ಶಿಕ್ಷೆಗೊಳಪಡಿಸುತ್ತಾನೆ. ನಮ್ಮರಾಜ್ಯದಲ್ಲಿ ನೆರೆ ಬಂದು ಹೋದ ಮೇಲೆ ನೆರವಿಗಾಗಿ ನೆಡೆದ, ನೆಡೆಯುತ್ತಿರುವ ಹಾಹಾಕಾರದಲ್ಲಿ ನಮ್ಮ ಸಂಸದರು ಮತ್ತು ಮಂತ್ರಿಗಳು, ಈ ಕಥೆಯಲ್ಲಿನ ಮಂತ್ರಿ ಮಾಗಧರಿಂದ ಇನ್ನೂ ಒಂದು ಹೆಜ್ಜೆ ಮುನ್ನುಗಿದ್ದಾರೆ. ಮಹಾರಾಜರು ಕೇಳುವ ಮುಂಚೆಯೇ ಎದೆ ಉಬ್ಬಿಸಿ ನಮ್ಮ ಸಾರ್ವಭೌಮರು ಸರ್ವ ಶಕ್ತರೂ ಮತ್ತು ತ್ರಿಕಾಲ ಜ್ಞಾನಿಗಳು, ಯಾರ್ಯಾರಿಗೆ ಯಾವ್ಯಾವ ಸಂಧರ್ಭದಲ್ಲಿ ನೆರವು ನೀಡಬೇಕೆಂಬ ಸಂಪೂರ್ಣ ಅರಿವು ಅವರಿಗಿದೆ. ಅವರನ್ನು ಬಡಿದೆಚ್ಚರಿಸಿ ನಮ್ಮ ಹಕ್ಕು ಪ್ರತಿಪಾದಿಸುವ, ವಾಸ್ತವ ತಿಳಿಸುವ, ಪ್ರಶ್ನಿಸುವ, ಹಕ್ಕು ಯಾರಿಗೂ ಇಲ್ಲ ಎಂದು ಸಾರುವ ಮೂಲಕ ತಮ್ಮನ್ನು ತಾವೇ ಬೆತ್ತಲು ಮಾಡಿಕೊಂಡರು ಎನಿಸುವುದಿಲ್ಲವೇ?
ಜಿ. ಪ್ರತಾಪ್ ಕೊಡಂಚ.
Facebook ಕಾಮೆಂಟ್ಸ್