X

ಪದ್ಮ ಪ್ರಶಸ್ತಿ ಪುರಸ್ಕಾರ ಅಂದು-ಇಂದು

2015ರ ಜನವರಿಯಲ್ಲಿ ಪದ್ಮ ಪ್ರಶಸ್ತಿಗಳ ಘೋಷಣೆಯಾದಾಗ ಅದರಲ್ಲಿ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿದ್ದದ್ದನ್ನು ಕಂಡು ಅನೇಕರಿಗೆ ಆಶ್ಚರ್ಯ, ಪುಳಕ, ಬೇಸರ ಆಯಿತು. ಆಶ್ಚರ್ಯ – ಇಷ್ಟು ವರ್ಷಗಳ ಕಾಲ ಇವರಿಗೆ ಒಂದು ಪದ್ಮ ಪ್ರಶಸ್ತಿಯೂ ಬಂದಿರಲಿಲ್ಲವೆ ಎಂಬ ಕಾರಣಕ್ಕೆ. ಪುಳಕ – ಇಷ್ಟು ವರ್ಷಗಳ ಮೇಲಾದರೂ, ಸ್ವಾಮೀಜಿಗಳಿಗೆ ನೂರಾಹತ್ತು ವರ್ಷಗಳು ಸಂದ ಮೇಲಾದರೂ ಭಾರತದ ಸರಕಾರವೊಂದು ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಕೊಡುವ ಕೆಲಸ ಮಾಡಿತಲ್ಲ ಎಂಬುದಕ್ಕೆ. ಬೇಸರ – ಯಾವ್ಯಾವುದೋ ಮಿಷನರಿಗಳಿಗೆಲ್ಲ ಪ್ರಶಸ್ತಿ ಪುರಸ್ಕಾರ ಸಂಮಾನಗಳನ್ನು ಮಾಡುವ ಸರಕಾರಗಳು ಸ್ವಾಮೀಜಿಗಳನ್ನು ಮಾತ್ರ ಪಟ್ಟಿಯಿಂದ ಇಷ್ಟು ದಶಕಗಳ ಕಾಲ ಹೊರಗಿಟ್ಟಿದ್ದವಲ್ಲ ಎಂಬ ಕಾರಣಕ್ಕೆ. ಸ್ವಾಮೀಜಿಗಳು ಇತ್ತೀಚಿಗೆ ಲಿಂಗೈಕ್ಯರಾದ ಬಳಿಕ ಕಾಂಗ್ರೆಸ್‍ನ ಸದ್ಯದ ಶಾಸಕ (ಮತ್ತು ಮಾಜಿ ಮುಖ್ಯಮಂತ್ರಿ) ಸಿದ್ದರಾಮಯ್ಯನವರು ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ವಾಮೀಜಿಗಳಿಗೆ ಭಾರತ ರತ್ನ ಕೊಡಬೇಕೆಂದು ನಾವು ಮೇಲಿಂದ ಮೇಲೆ ಶಿಫಾರಸು ಪತ್ರ ಕಳಿಸಿದೆವು; ಆದರೆ ಕೇಂದ್ರ ಸರಕಾರ ಸ್ಪಂದಿಸಲಿಲ್ಲ ಎಂದು ಬೊಬ್ಬೆ ಹೊಡೆದರು. ಸ್ವತಂತ್ರ ಭಾರತದಲ್ಲಿ ಬರೋಬ್ಬರಿ ಆರು ದಶಕಗಳ ಕಾಲ ಆಳಿದ್ದು ಇವರದ್ದೇ ಕಾಂಗ್ರೆಸ್ ಸರಕಾರವೇ ಅಲ್ಲವೆ? ಹೋಗಲಿ, ಕನ್ನಡಿಗರೇ ಆದ ದೇವೇಗೌಡರೇ ದೇಶದ ಪ್ರಧಾನಿಯಾಗಿದ್ದರಲ್ಲ; ಆಗ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ 80 ವರ್ಷ ದಾಟಿತ್ತು. ಸಾಧನೆ ಎಂದು ಕರೆಸಿಕೊಳ್ಳಬಹುದಾದ ಎಲ್ಲವನ್ನೂ ಅವರು ಸದ್ದಿಲ್ಲದೆ ಮಾಡಿಯೂ ಆಗಿತ್ತು. ರಾಜೀವ್ ಘಂಡಿಗೆ ಭಾರತ ರತ್ನ ಕೊಡಬಹುದಾದರೆ ಶಿವಕುಮಾರ ಸ್ವಾಮಿಗಳಿಗೆ ಅಂಥ ಹತ್ತು ಪ್ರಶಸ್ತಿಗಳನ್ನು ಕೊಡಬಹುದಿತ್ತು! ಆದರೆ ಹಿಂದೂ ಧರ್ಮದ ಸಂರಕ್ಷಣೆಯ ಕೆಲಸ ಮಾಡುತ್ತಿದ್ದ; ತುಮಕೂರಿನಂಥ ಭಾಗದಲ್ಲಿ ಪ್ರತಿನಿತ್ಯ 10,000 ವಿದ್ಯಾರ್ಥಿಗಳಿಗೆ ಅನ್ನ-ಶಿಕ್ಷಣ ಕೊಟ್ಟು ಬೆಳೆಸುತ್ತಿದ್ದ; ಅಷ್ಟರಮಟ್ಟಿಗೆ ಮಿಷನರಿ ಚಟುವಟಿಕೆಗಳನ್ನು ತಡೆದಿದ್ದ ಸ್ವಾಮೀಜಿಗಳು ಈ ದೇಶವನ್ನಾಳಿದ ಸರಕಾರಗಳಿಗೆ ಮಗ್ಗುಲ ಮುಳ್ಳಾಗಿ ಕಂಡರೇ ವಿನಾ ಸಾಧಕ ಎಂದು ಕಾಣಲಿಲ್ಲ. ಇದೇ ಬಗೆಯ ಅಚ್ಚರಿ ಕನ್ನಡಿಗರಿಗಾದದ್ದು 2016ರ ಜನವರಿಯಲ್ಲಿ ಪದ್ಮಪ್ರಶಸ್ತಿಗಳ ಪಟ್ಟಿಯಲ್ಲಿ ಡಾ. ಎಸ್.ಎಲ್. ಭೈರಪ್ಪ ಅವರ ಹೆಸರಿದ್ದುದನ್ನು ಕಂಡು. ಕಾಂಗ್ರೆಸ್ ಪಕ್ಷದ ಭಟ್ಟಂಗಿಯಾಗಿ ಕೆಲಸ ಮಾಡಿದ ಗಿರೀಶ ಕಾರ್ನಾಡರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು ಅವರ 35ನೆಯ ವಯಸ್ಸಿನಲ್ಲಿ. ಆದರೆ, ದೇಶವನ್ನಾಳಿದ ಯಾವೊಂದು ಕಾಂಗ್ರೆಸ್ ಸರಕಾರಕ್ಕೂ ಭೈರಪ್ಪನವರು ಪದ್ಮ ಪ್ರಶಸ್ತಿಗೆ ಅರ್ಹರು ಎಂದು ಅವರ ಎಂಬತ್ತೈದನೆಯ ವಯಸ್ಸಿನವರೆಗೂ ಅನ್ನಿಸಲಿಲ್ಲ! ದುರಂತ ಅಲ್ಲವೆ ಇದು?

2015ರಲ್ಲಿ ಎನ್‍ಡಿಎ ಸರಕಾರ ತನ್ನ ಅಧಿಕಾರಾವಧಿಯ ಮೊದಲ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ಮಾತಾಡಿದ್ದರು. ಇಷ್ಟು ವರ್ಷ ನಾವು ನೋಡಿದ್ದ ಪಟ್ಟಿಗೂ ಈಗ ಗಮನಿಸುತ್ತಿರುವ ಪಟ್ಟಿಗೂ ವ್ಯತ್ಯಾಸವಿದೆ. ಹಿಂದಿನ ಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಸೆಲೆಬ್ರಿಟಿಗಳು; ಪತ್ರಿಕೆಗಳಲ್ಲಿ ಟಿವಿ ಮಾಧ್ಯಮದಲ್ಲಿ ಮಿಂಚುತ್ತಿದ್ದವರು; ಜನರ ಕಣ್ಣಿಗೆ ಆಗಾಗ ಬಿದ್ದವರು. ಆದರೆ ಈ ಸಲದ ಪದ್ಮಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹೆಚ್ಚಿನವರೆಲ್ಲ ಅಜ್ಞಾತರು. ಯಾಕೆಂದರೆ ಅವರ್ಯಾರೂ ಪ್ರಚಾರ ಬಯಸಿದವರಲ್ಲ; ಅದಕ್ಕಾಗಿ ಪಕ್ಷಗಳ ಸರಕಾರಗಳ ಸೇವೆ ಮಾಡಿದವರಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಈ ಬಾರಿಯ ಪಟ್ಟಿಯಲ್ಲಿರುವ ಯಾರೂ ತಮಗೆ ಪ್ರಶಸ್ತಿ ಬೇಕು ಎಂದು ಅರ್ಜಿ ಹಾಕಲಿಲ್ಲ; ಯಾರಿಂದಲೂ ಶಿಫಾರಸು ಕೊಡಿಸಲಿಲ್ಲ; ಲಾಬಿ ಮಾಡಲಿಲ್ಲ. ಪ್ರಶಸ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಲಿನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಹೋದ ಸಾಧಕರಿವರು. ಇಂಥವರಿಗೆ ಪ್ರಶಸ್ತಿ ಕೊಡಿ ಎಂದು ಜನರೇ ಶಿಫಾರಸು ಮಾಡಬಹುದಾದ ಒಂದು ಮುಕ್ತ ವ್ಯವಸ್ಥೆಯನ್ನು ನಾವು ಈ ವರ್ಷ ಜಾರಿಗೆ ತಂದೆವು. ನಡುವೆ ಯಾವ ವ್ಯಕ್ತಿ-ಶಕ್ತಿಗಳ ವಶೀಲಿಬಾಜಿ ಅಥವಾ ಮಧ್ಯಸ್ಥಿಕೆ ಇಲ್ಲದಂತೆ ನೋಡಿಕೊಂಡೆವು. ನಿಜವಾದ ಅರ್ಹರು ನೇರವಾಗಿ ಸಮಾಜದಿಂದಲೇ ಆರಿಸಿಬರುವಂಥ ವಿನೂತನ ವ್ಯವಸ್ಥೆ ಇದು. ಹಾಗಾಗಿ ಈ ಸಲದ ಪ್ರಶಸ್ತಿಗಳಿಗೆ ನಿಜವಾದ ಅರ್ಥದಲ್ಲಿ ಮೌಲ್ಯ ಬಂದಿದೆ!

ಕಳೆದ 65 ವರ್ಷಗಳಲ್ಲಿ ಈ ದೇಶದಲ್ಲಿ ಹೇಗೆ ಪದ್ಮ ಪ್ರಶಸ್ತಿಗಳನ್ನು ಕೊಡಲಾಯಿತು ಮತ್ತು ಮೋದಿಯವರ ಅಧಿಕಾರಾವಧಿಯಲ್ಲಿ ಹೇಗೆ ಕೊಡಲಾಯಿತು ಎಂಬ ವ್ಯತ್ಯಾಸ ಅರ್ಥವಾಗಬೇಕಾದರೆ ಈ ಕೆಳಗಿನ ಪಟ್ಟಿಯನ್ನು ನೀವು ಗಮನಿಸಬೇಕು. ಕಳೆದೈದು ವರ್ಷಗಳಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಾದ ಕೆಲವೇ ಕೆಲವು ಗಣ್ಯರ ಪರಿಚಯಮಾಲಿಕೆ ಇದು.

ದರಿಪಲ್ಲಿ ರಾಮಯ್ಯ | ತೆಲಂಗಾಣ | ಪದ್ಮಶ್ರೀ 2017


ನಾವೆಲ್ಲ ಪ್ರತಿವರ್ಷ ವನಮಹೋತ್ಸವ ಆಚರಿಸುತ್ತೇವೆ. ಹೆಚ್ಚೆಂದರೆ ಒಂದು ಗಿಡ ನೆಡುತ್ತೇವೆ. ಗಿಡ ನೆಡುವುದಕ್ಕಿಂತ ನೆಡಬೇಕೆಂದು ಕರೆ ಕೊಡುವ ಭಾಷಣಗಳೇ ಹೆಚ್ಚಿರುತ್ತವೆ. ತಡವಾಗಿ ಬಂದ ರಾಜಕಾರಣಿಗಳು ಮರದ ಕುರ್ಚಿಯಲ್ಲಿ ಕೂತು ಮರದ ಪೋಡಿಯಂ ಮುಂದೆ ಭಾಷಣ ಮಾಡಿ ಮರದ ಮೇಜು ಗುದ್ದಿ ಒಟ್ಟಾರೆ ನಾಟಕ ಮಾಡಿ ವನಮಹೋತ್ಸವದ ಕಾರ್ಯಕ್ರಮವನ್ನು ಚಂದಗಾಣಿಸುವುದುಂಟು. ಆದರೆ ಖಮ್ಮಂ ಜಿಲ್ಲೆಯ ದರಿಪಲ್ಲಿ ರಾಮಯ್ಯ ಅವರಿಗೆ ಗಿಡ ನೆಡುವುದು ಎಂದರೆ ಆಡಂಬರವಲ್ಲ; ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬ ತೆವಲಿಗೆ ಮಾಡುವ ಸರ್ಕಸ್ ಅಲ್ಲ. ಅದೇ ಒಂದು ಜೀವನಶ್ರದ್ಧೆ! ಅವರು ಚಿಕ್ಕವರಿದ್ದಾಗ ತಾಯಿ ಬೆಳೆಬೀಜಗಳನ್ನು ಜತನದಿಂದ ಕಾಪಾಡಿ ಮಳೆಗಾಲದಲ್ಲಿ ಬಿತ್ತುತ್ತಿದ್ದರಂತೆ. ವರ್ಷವಿಡೀ ನಿರ್ಜೀವ ವಸ್ತುಗಳಂತೆ ಕಾಣಿಸುತ್ತಿದ್ದ ಆ ಬೀಜಗಳಿಂದಲೇ ಎತ್ತರೆತ್ತರ ಪೈರು ಹುಟ್ಟಿಬರುವುದನ್ನು ಕಂಡ ರಾಮಯ್ಯ ರೋಮಾಂಚನ ಅನುಭವಿಸಿದರು. ಇಷ್ಟು ಪುಟ್ಟ ಬಿತ್ತಿನಲ್ಲಿ ಅದೆಷ್ಟು ಅಗಾಧ ಶಕ್ತಿಯಿದೆ ಎನ್ನಿಸಿತು ಅವರಿಗೆ. ಅಂದಿನಿಂದ ಬೀಜ ಬಿತ್ತುವ ಕೆಲಸ ಪ್ರಾರಂಭವಾಯಿತು.

ಮೊದಲಿಗೆ ತನ್ನ ಊರಲ್ಲಿ ಸುಮಾರು 4 ಕಿಮೀ ಉದ್ದದ ಬೋಳು ರಸ್ತೆಯ ಇಕ್ಕೆಲದಲ್ಲಿ ಬೀಜ ಹಾಕಿದರು. ಹಾಕಿದ ಒಂದೇ ಒಂದು ಬೀಜವೂ ಹಾಳಾಗದಂತೆ ನೋಡಿಕೊಂಡರು. ಅವು ಮೊಳಕೆಯೊಡೆದು ಗಿಡವಾಗಿ ಹುಟ್ಟಿ ಮರವಾಗಿ ಬೆಳೆಯುವವರೆಗೂ ಅವುಗಳ ಕಾಳಜಿ ತೆಗೆದುಕೊಂಡರು. ಅವು ರಸ್ತೆಯುದ್ದಕ್ಕೆ ನೆರಳಿನ ಚಪ್ಪರ ಹಾಸಿದ ಮೇಲೆ ರಾಮಯ್ಯನವರ ನಂಬಿಕೆ ಗಟ್ಟಿಯಾಯಿತು ಊರಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ, ಏನೂ ಬೆಳೆಯದ ಬರಡು ನೆಲ ಇದೆಯೋ ಅಲ್ಲೆಲ್ಲ ಬೀಜ ಬಿತ್ತಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಈ ಕೆಲಸ ನೋಡಿ ನಕ್ಕು ಹಾಸ್ಯ ಮಾಡಿದವರು ಕೂಡ ಕೆಲವರ್ಷಗಳ ನಂತರ ಮೂಗಿನ ಮೇಲೆ ಬೆರಳಿಡುವಂತಾಯಿತು. ಊರಲ್ಲಿ ಎಲ್ಲೆಲ್ಲೂ ಹಸಿರು ಕಾಣಿಸತೊಡಗಿತು. ಊರಲ್ಲಿ ಖಾಲಿ ಜಾಗ ಸಿಗುವುದಿಲ್ಲ ಎಂದಾದಾಗ ರಾಮಯ್ಯ ಗಿಡಗಳನ್ನು ಸೈಕಲಲ್ಲಿ ಹೇರಿಕೊಂಡು ಮೈಲಿಗಟ್ಟಲೆ ದೂರ ಸಾಗುತ್ತಿದ್ದರು. ವೃಕ್ಷಾರೋಪಣ ಕಾರ್ಯ ಹೀಗೆ ಊರ ಹೊರಗೆ ವ್ಯಾಪಿಸಿತು. ನಾನು ಭೂಮಿಯ ಮೇಲಿಟ್ಟ ಒಂದೇ ಒಂದು ಬೀಜವೂ ಹಾಳಾಗದಂತೆ ಸಂರಕ್ಷಿಸಿ ಮರವಾಗಿ ಬೆಳೆಸುವುದೇ ನನ್ನ ಸಂಕಲ್ಪ ಎನ್ನುತ್ತಾರೆ ಚೇಟ್ಲ ರಾಮಯ್ಯ. ಚೇಟ್ಟು ಎಂದರೆ ತೆಲುಗಿನಲ್ಲಿ ಮರ ಎಂದರ್ಥ. ವಯಸ್ಸೀಗ 82 ಆದರೂ ಅವರ ಅಂಗಿಯ ಜೇಬಿನಲ್ಲಿ ಮುಷ್ಟಿತುಂಬ ಬೀಜಗಳಂತೂ ಇದ್ದೇ ಇವೆ!

ಡಾ. ಸುಬ್ರತೋ ದಾಸ್ | ಗುಜರಾತ್ | ಪದ್ಮಶ್ರೀ
ಅದೊಂದು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸುಬ್ರತೋ ಅವರಿಗೆ ಅಪಘಾತವಾಯಿತು. ಹೆದ್ದಾರಿಯಲ್ಲಿ ಅಪಘಾತ ಎಂಬುದೇನೂ ಅಂಥ ವಿಶೇಷ ಘಟನೆಯಲ್ಲ. ಪ್ರತಿನಿತ್ಯ ನಮ್ಮ ದೇಶದಲ್ಲಿ ಹೆದ್ದಾರಿಗಳಲ್ಲಿ ಒಂದಿಲ್ಲೊಂದು – ಸಣ್ಣ ದೊಡ್ಡ – ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಅಂದು ಸುಬ್ರತೋ ಅವರಿಗೆ ಕೂಡಲೇ ವೈದ್ಯಕೀಯ ಸಹಾಯ ಸಿಗಲಿಲ್ಲ. ಸ್ವತಃ ವೈದ್ಯರಾದರೂ ಆ ಕ್ಷಣದಲ್ಲಿ ಅವರು ನಿಸ್ಸಹಾಯಕರಾಗಿದ್ದರು. ಯಾರಿಗೆ ಕರೆ ಮಾಡಬೇಕು; ಎಲ್ಲಿಗೆ ಹೋಗಬೇಕು; ಅಂಬುಲೆನ್ಸ್ ಕರೆಸುವುದು ಹೇಗೆ ಎಂಬ ಯಾವ ಮಾಹಿತಿಯೂ ಅವರ ಬಳಿ ಇರಲಿಲ್ಲ. ಕೊನೆಗೆ ಹೇಗುಹೇಗೋ ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಷ್ಟರಲ್ಲಿ ಸುಬ್ರತೋ ಅವರಿಗೆ ಬವಳಿಬಂದಿತ್ತು. ಉಳಿದವರಾದರೆ ಏನು ಮಾಡುತ್ತಿದ್ದರು? ಸರಕಾರವನ್ನು, ವ್ಯವಸ್ಥೆಯನ್ನು ಮನಸಾರೆ ಬಯ್ದು ಕೊನೆಗೆ ಆ ಪ್ರಕರಣವನ್ನು ದುಃಸ್ವಪ್ನವೆಂದು ಮರೆತುಬಿಡುತ್ತಿದ್ದರು. ಆದರೆ ಡಾ. ಸುಬ್ರತೋ ಹಾಗೆ ಮಾಡಲಿಲ್ಲ!

ಅವರು ಭಾರತದ ಉದ್ದಗಲ ಹೆದ್ದಾರಿಗಳಲ್ಲಿ ದಿನನಿತ್ಯ ಸಂಭವಿಸುವ ಅಪಘಾತಗಳ ಅಂಕಿ-ಅಂಶ ತೆಗೆದರು. ಬೆಚ್ಚಿಬೀಳಿಸುವ ಸಂಖ್ಯೆ ಅದು. ಬಹುತೇಕರು ಮೃತರಾಗುವುದು ಅಪಘಾತದಲ್ಲಿ ಅಲ್ಲ; ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಸಿಗದೇ ಇರುವುದರಿಂದ ಎಂಬ ಅಂಶ ಅವರಿಗೆ ಗೊತ್ತಾಯಿತು. ಅದಕ್ಕಾಗಿ ಲೈಫ್‍ಲೈನ್ ಫೌಂಡೇಶನ್ ಎಂಬ ಸಂಸ್ಥೆ ಕಟ್ಟಿಕೊಂಡರು. ರಾಜ್ಯದ ಹೆದ್ದಾರಿಗಳನ್ನೆಲ್ಲ ಹತ್ತಿರದ ಆರೋಗ್ಯ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ಜೋಡಿಸಿದರು. ಯಾವುದೇ ಹೆದ್ದಾರಿಯಲ್ಲಿ ಯಾರೇ ಕರೆ ಮಾಡಿದರೂ ಕೇವಲ 15 ನಿಮಿಷದೊಳಗಾಗಿ ಅಲ್ಲಿಗೆ ಅಂಬುಲೆನ್ಸ್ ಸೇವೆ ಸಿಗುವಂಥ ವ್ಯವಸ್ಥೆ ರೂಪಿಸಿದರು. ಗುಜರಾತ್‍ನಲ್ಲಿ ಪ್ರಾರಂಭವಾದ ಈ ತುರ್ತು ವೈದ್ಯಕೀಯ ಸೇವೆ ಮಹಾರಾಷ್ಟ್ರ, ಕೇರಳ, ರಾಜಸ್ಥಾನ್ ಮತ್ತು ಪಶ್ಚಿಮ ಬಂಗಾಳಗಳಿಗೆ ಹಬ್ಬಿತು. ಅಲ್ಲಿಂದ ಮುಂದೆ ದೇಶದ 20 ರಾಜ್ಯಗಳು ಸುಬ್ರತೋ ಅವರ ಲಹೆ ಪಡೆದು ಹೆದ್ದಾರಿಯಲ್ಲಾಗುವ ಅವಘಡಗಳಿಗೆ ಗಮನಕೊಡುವ ಸೇವೆಯನ್ನು ಪ್ರಾರಂಭಿಸಿದವು. ಸುಬ್ರತೋ ಅವರ ಸಂಸ್ಥೆ ಇಲ್ಲಿಯವರೆಗೆ 1500 ಕ್ಕೂ ಹೆಚ್ಚು ಹೆದ್ದಾರಿಯ ದುರ್ದೈವಿಗಳನ್ನು ರಕ್ಷಿಸಿ ಅವರ ಪ್ರಾಣ ಉಳಿಸಿದೆ.

ಮೀನಾಕ್ಷಿ ಅಮ್ಮ | ಕೇರಳ | ಪದ್ಮಶ್ರೀ
ಕೇವಲ ಏಳು ವರ್ಷದ ಮೀನಾಕ್ಷಿ ಎಂಬ ಹುಡುಗಿಗೆ ಗುರುವಿನಿಂದ ಕಳರಿ ಪಡೆದು ಒಂದು ಕಲೆಯನ್ನು ಕಲಿಯಲು ಪ್ರಾರಂಭ ಮಾಡಿದ ದಿನದಲ್ಲಿ ಅದು ತನ್ನ ಬದುಕಿನ ಭಾಗವೇ ಆಗಿಬಿಡುತ್ತದೆಂಬುದು ಗೊತ್ತಿತ್ತೋ ಇಲ್ಲವೋ. ಯಾಕೆಂದರೆ ಅವರಿಗೀಗ 80 ವರ್ಷ ವಯಸ್ಸು. ಕಳೆದ 65ಕ್ಕೂ ಹೆಚ್ಚು ವರ್ಷಗಳಿಂದ ಅವರು ಕೇರಳದಲ್ಲಿ ಕಳರಿಪಯಟ್ಟು ಹೇಳಿಕೊಡುತ್ತಿದ್ದಾರೆ. ಶಿಕ್ಷಣದಲ್ಲಿ, ಪ್ರಾರಂಭದಲ್ಲಿ ಶುಲ್ಕ ಪಡೆಯಬಾರದು ಎಂಬುದು ಕಳರಿಪಯಟ್ಟಿನ ನಿಯಮವಾದ್ದರಿಂದ ಅವರು ಯಾವ ಬಗೆಯ ಫೀಸನ್ನೂ ಪಡೆಯದೆ ಕಳರಿ ಹೇಳಿಕೊಡುತ್ತಾರೆ. ಹಾಗೆ ಕಲಿತವರ ಸಂಖ್ಯೆ ನೂರಲ್ಲ ಸಾವಿರಗಳ ಸಂಖ್ಯೆಯಲ್ಲಿದೆ! ವಿದ್ಯಾರ್ಥಿಗಳ ಪಾಲಿಗೆ ಮಾತ್ರವಲ್ಲ ಇಡೀ ಊರಿಗೇ ಆಕೆ ಮೀನಾಕ್ಷಿ ಗುರುಕ್ಕಳ್.

ಕಳರಿ ಕಲೆಯ ಜಗತ್ತಿನೊಳಗೆ ಕಾಲಿಟ್ಟಾಗ ಮೀನಾಕ್ಷಿ ಅಮ್ಮನವರಿಗೆ ಕೇವಲ ಏಳರ ಹರೆಯ. ಆದರೆ ಬರಬರುತ್ತ ಅದರಲ್ಲಿ ತಾದಾತ್ಮ್ಯ ಸಾಧಿಸಿದ ಅವರು ಕಳರಿಯ ಎಲ್ಲ ಹಂತಗಳನ್ನೂ ಅರಗಿಸಿಕೊಂಡರು. ದಂಡದಿಂದ ಉರುಮಿಯವರೆಗಿನ ಯಾವ ತಂತ್ರವನ್ನು ಪ್ರಯೋಗಿಸುವುದಕ್ಕೂ ಅವರು ಸೈ. ಹದಿನೇಳನೆ ವಯಸ್ಸಿನಲ್ಲಿ ಮೀನಾಕ್ಷಿಯವರು ತನ್ನ ಕಳರಿ ಗುರುವನ್ನೇ ಮದುವೆಯಾದರು. ನಂತರವೂ ಕಳರಿ ಹೇಳಿಕೊಡುವುದನ್ನು ಅವರು ನಿಲ್ಲಿಸಲಿಲ್ಲ. ಸಂಸಾರದ ಎಲ್ಲ ಜವಾಬ್ದಾರಿಗಳ ಮಧ್ಯೆಯೂ ಕಳರಿ ಕಲೆಯನ್ನು ಕಲಿಸುವುದನ್ನು ಏಕಶ್ರದ್ಧೆಯಿಂದ ಮಾಡಿದರು. ನಾಲ್ಕು ಸಲ ಗರ್ಭವತಿಯಾಗಿ ಮಕ್ಕಳನ್ನು ಹೆತ್ತು ತಾಯಿಯಾದವಳು ಕೂಡ ಕಳರಿಯನ್ನು ಅಭ್ಯಾಸ ಮಾಡಬಹುದು ಎಂಬುದನ್ನು ಸ್ವತಃ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು! ಕೇರಳದಲ್ಲಿ ಅತ್ಯಂತ ಹಿರಿಯ ಕಳರಿಪಯಟ್ಟು ತರಬೇತುದಾರರೆಂಬ ಹೆಗ್ಗಳಿಕೆ ಓರ್ವ ಮಹಿಳೆಯ ಹೆಸರಲ್ಲಿರುವುದು ವಿಶೇಷ ಅಲ್ಲವೆ?

ಸೂಲಗಿತ್ತಿ ನರಸಮ್ಮ | ಕರ್ನಾಟಕ | ಪದ್ಮಶ್ರೀ 2018
2018ರ ಡಿಸೆಂಬರ್ 25ರಂದು ತುಮಕೂರಿನ ಸೂಲಗಿತ್ತಿ ನರಸಮ್ಮ ತೀರಿಕೊಂಡರು – ತನ್ನ 98ನೆಯ ವಯಸ್ಸಿನಲ್ಲಿ. ಆಕೆಯ ಸಾವಿಗೆ ರಾಜ್ಯದಾದ್ಯಂತ ಸಾವಿರ ಸಾವಿರ ಹೃದಯಗಳು ಅಶ್ರುತರ್ಪಣ ಕೊಟ್ಟವು. ಯಾಕೆಂದರೆ, ಶಾಲೆ ಕಲಿಯದ ಅನಕ್ಷರಸ್ಥೆ ನರಸಮ್ಮನವರು 15,000ಕ್ಕೂ ಹೆಚ್ಚು ಮಕ್ಕಳನ್ನು ತಾಯಹೊಟ್ಟೆಯಿಂದ ಯಶಸ್ವಿಯಾಗಿ ಭೂಮಿಗಿಳಿಸಿದ ಮಹಾಮಾತೆ.


ನರಸಮ್ಮನವರ ಅಜ್ಜಿ ಮರಿಗೆಮ್ಮ ಸೂಲಗಿತ್ತಿಯಾಗಿದ್ದರಂತೆ. ನರಸಮ್ಮನವರ ಮೊದಲ ಐದು ಹೆರಿಗೆಗಳನ್ನು ಮಾಡಿಸಿದ್ದು ಕೂಡ ಅವರ ಅಜ್ಜಿಯೇ. ನಂತರ ಅಜ್ಜಿಯಿಂದ ಕಲಿತ ಕೌಶಲವನ್ನು ಚೆನ್ನಾಗಿ ಕರಗತ ಮಾಡಿಕೊಂಡ ನರಸಮ್ಮ ತಮ್ಮ 20ನೆಯ ವಯಸ್ಸಿನಲ್ಲೇ ಗರ್ಭವತಿ ಮಹಿಳೆಯರ ಸಹಜ ಹೆರಿಗೆ ಮಾಡಿಸಲು ಪ್ರಾರಂಭಿಸಿದರು. 93ನೆಯ ವಯಸ್ಸಿನವರೆಗೂ ನಿರಂತರವಾಗಿ ಹೆರಿಗೆ ಮಾಡಿಸುವ ಕಾಯಕ ಮಾಡುತ್ತಲೇ ಬಂದರು. ಹೆರಿಗೆ ಮಾಡಿಸುವುದು ಮಾತ್ರವಲ್ಲದೆ ಬಾಣಂತಿಗೆ ಬೇಕಾದ ಔಷಧಗಳನ್ನು ಸಹಜವಾಗಿ ಸಿಗುವ ಗಿಡಮೂಲಿಕೆಗಳಿಂದ ತಯಾರು ಮಾಡುವ ಕಲೆಯನ್ನೂ ಅವರು ಕಲಿತುಕೊಂಡರು. ಮಗು ಭ್ರೂಣಾವಸ್ಥೆಯಲ್ಲಿದ್ದಾಗ ಅದರ ನಾಡಿಮಿಡಿತವನ್ನು ಅರಿಯಬಲ್ಲ ತಜ್ಞತೆ ನರಸಮ್ಮನವರಿಗಿತ್ತು. ಅವರು ತಮ್ಮ ದೀರ್ಘ ಸೂಲಗಿತ್ತಿಯ ಜೀವನದಲ್ಲಿ ಮಾಡಿಸಿದ ಎಲ್ಲ 15,000 ಹೆರಿಗೆಗಳೂ ಸಹಜ, ಉಚಿತ, ಯಶಸ್ವಿ ಹೆರಿಗೆಗಳೇ!

ಡಾ. ಭಕ್ತಿ ಯಾದವ್ | ಮಧ್ಯಪ್ರದೇಶ | ಪದ್ಮಶ್ರೀ 2017
ಡಾ. ಭಕ್ತಿ ಯಾದವ್ 2017ರ ಏಪ್ರಿಲ್ 14ರಂದು ತೀರಿಕೊಂಡರು. ಆಗವರಿಗೆ 91 ವರ್ಷ ವಯಸ್ಸಾಗಿತ್ತು. ಆ 91 ವರ್ಷಗಳ ಜೀವನದಲ್ಲಿ ಬರೋಬ್ಬರಿ ಏಳು ದಶಕಗಳನ್ನು ಭಕ್ತಿ ಅವರು ಡಾಕ್ಟರ್ ಆಗಿ ಸೇವೆ ಮಾಡುವ ಮೂಲಕ ಕಳೆದಿದ್ದರು. ಭಕ್ತಿಯವರು ಚಿಕ್ಕವರಿದ್ದಾಗ ಊರಲ್ಲಿ ಹುಡುಗಿಯರು ಶಾಲೆ ಕಲಿಯುವ ಪದ್ಧತಿಯೇ ಇರಲಿಲ್ಲ. ಹುಡುಗಿಯರಿಗೆ ಯಾಕೆ ಸಾಲಿ? ಮದುವೆಯಾಗಿ ಗಂಡನ ಮನೆಯಲ್ಲಿ ಮುಸುರೆ ತಿಕ್ಕುವ ಕೆಲಸವೇ ಅವರಿಗೆ ನಿಕ್ಕಿ – ಎಂಬ ಭಾವನೆ ಬಲವಾಗಿದ್ದ ಕಾಲಘಟ್ಟ ಅದು. ಆದರೆ ಈ ಹುಡುಗಿ ಅವೆಲ್ಲ ಪರಂಪರಾಗತ ನಿರಾಕರಣೆಗಳನ್ನು ಮೆಟ್ಟಿನಿಂತು, ನನಗೆ ಶಾಲೆಗೆ ಹೋಗಬೇಕು ಎಂದಿತು. ತಂದೆ ತನ್ನ ಮಗಳ ಬೇಡಿಕೆಗೆ ಇಲ್ಲವೆನ್ನಲಿಲ್ಲ. ತನ್ನೂರಲ್ಲಿ ಅಲ್ಲವಾದರೆ ಪಕ್ಕದೂರಲ್ಲಾದರೂ ಕಲಿಯಲಿ ಎಂದು ಮಗಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು. ಭಕ್ತಿ ಶಾಲೆ ಮುಗಿಸಿ, ಕಾಲೇಜು ಸೇರಿದರು. ಕಾಲೇಜಿಗೆ ಟಾಪರ್ ಆದರು. ವೈದ್ಯ ತರಬೇತಿ ಪಡೆಯುತ್ತಿದ್ದಾಗ ಕಾಲೇಜಿನ 40 ಮಂದಿಯಲ್ಲಿ ಈಕೆಯೊಬ್ಬರೇ ಹೆಣ್ಣು!


ವೈದ್ಯಕೀಯ ಪದವಿ ಮುಗಿಸಿ ಹೊರಬಂದ 23ರ ಹರೆಯದ ಹೆಣ್ಣುಮಗಳು ಉಚಿತ ವೈದ್ಯಕೀಯ ಸೇವೆಗೆ ನಿಂತುಬಿಟ್ಟರು! ಗೈನಕಾಲಜಿಸ್ಟ್ ಆಗಿದ್ದ ಭಕ್ತಿ, ತನ್ನ ಎಪ್ಪತ್ತು ವರ್ಷಗಳ ಅವಿರತ ಸೇವಾವಧಿಯಲ್ಲಿ ಬರೋಬ್ಬರಿ 1 ಲಕ್ಷ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಹೆಚ್ಚುಕಡಿಮೆ ಅಷ್ಟೇ ಸಂಖ್ಯೆಯ ಹೆರಿಗೆಯನ್ನೂ ಮಾಡಿಸಿದ್ದಾರೆ. ಇಂದೋರ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಭಕ್ತಿಯವರು, ತನ್ನೂರ ಬಡ ಕಾರ್ಮಿಕ ವರ್ಗದ ಕುಟುಂಬಗಳಿಂದ ವೈದ್ಯಕೀಯ ತಪಾಸಣೆಗೆ ಒಂದೇ ಒಂದು ಪೈಸೆ ಶುಲ್ಕವನ್ನೂ ತೆಗೆದುಕೊಳ್ಳುತ್ತಿರಲಿಲ್ಲ.

ಗಿರೀಶ ಭಾರದ್ವಾಜ | ಕರ್ನಾಟಕ | ಪದ್ಮಶ್ರೀ 2017
ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಗಿತ್ತು. ಆದರೆ ಅದಕ್ಕೆ ತಕ್ಕ ಉದ್ಯೋಗ ಸಿಗಲಿಲ್ಲ. ಸಿಗಲಿಲ್ಲ ಎಂದು ಹುಡುಗ ಅಳುತ್ತ ಕೂರಲಿಲ್ಲ. ತನ್ನದೇ ಒಂದು ವರ್ಕ್‍ಶಾಪ್ ತೆರೆದ. ಅದೊಂದು ದಿನ ಪಕ್ಕದ ಹಳ್ಳಿಯ ಒಂದಷ್ಟು ಜನ ಬಂದು ಈ ಇಂಜಿನಿಯರಿಂಗ್ ಪದವೀಧರನ ಮುಂದೆ ಕೈಮುಗಿದು ನಿಂತರು. “ನೀವು ಇಂಜಿನಿಯರ್ ಅಲ್ಲವೆ? ಮಳೆನೀರು ನುಗ್ಗಿ ನಮ್ಮ ಹಳ್ಳಿ ಸುತ್ತಲಿನ ಹಳ್ಳಿಗಳಿಂದ ಸಂಪರ್ಕ ಕಳೆದುಕೊಂಡಿದೆ. ಸಂಪರ್ಕ ಕಲ್ಪಿಸುವ ಸೇತುವೆ ಕಟ್ಟುವುದಕ್ಕೆ ನಿಮಗೆ ಸಾಧ್ಯವಾ?” ಎಂಬುದು ಅವರ ಬೇಡಿಕೆ. “ನಾನು ಸೇತುವೆ ಕಟ್ಟುವ ಸಿವಿಲ್ ಇಂಜಿನಿಯರ್ ಅಲ್ಲ; ಯಂತ್ರಗಳನ್ನು ಚಲಾಯಿಸುವ ಮೆಕ್ಯಾನಿಕಲ್ ಇಂಜಿನಿಯರ್” ಎಂದು ಹೇಳಹೊರಟವರು ತಡೆದು “ಯಾಕೆ ಒಂದು ಕೈ ನೋಡಬಾರದು?” ಎಂದು ಯೋಚಿಸಿದರು. ಹಳ್ಳಿಯವರಿಗೆ “ಹ್ಞೂ” ಎಂದುಬಿಟ್ಟರು. ಹಾಗೆ ಶುರುವಾಯಿತು ಗಿರೀಶ ಭಾರದ್ವಾಜರ ಸೇತುವೆ ಕಟ್ಟುವ ಹೊಸ ಸಾಹಸ!

ಸ್ಟೀಲ್ ಸೇತುವೆಗಳನ್ನು ಕಟ್ಟಲು ಮೂರು ವರ್ಷ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಗಿರೀಶ್, ಕಡಿಮೆ ಖರ್ಚಿನ, ಕಡಿಮೆ ಸಮಯದಲ್ಲಿ ಕಟ್ಟಬಹುದಾದ ತೂಗುಸೇತುವೆಗಳ ನಿರ್ಮಾಣಕ್ಕೆ ಕೈ ಹಾಕಿದರು. ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟುವ ಸೇತುವೆಗೆ ಖರ್ಚಾಗುವುದ ದುಡ್ಡಿನ ಕೇವಲ 10%ರಲ್ಲಿ ಅವರು ಸೇತುವೆ ಕಟ್ಟಿ ತೋರಿಸಿದರು. ಸೇತುವೆಗೆ ಆಗುವ ಖರ್ಚನ್ನು ಹೊರತುಪಡಿಸಿ ಉಳಿದೆಲ್ಲ ಖರ್ಚುವೆಚ್ಚಗಳೂ ಉಚಿತ! ಕನ್ಸಲ್ಟೇಶನ್ ಕೂಡ ಉಚಿತ! ಸುದ್ದಿ ಬಾಯಿಂದ ಬಾಯಿಗೆ ಹಬ್ಬಿತು; ದಕ್ಷಿಣ ಕನ್ನಡದ ಹಲವು ಹಳ್ಳಿಗಳಲ್ಲಿ ಚಿಕ್ಕ-ದೊಡ್ಡ ಸೇತುವೆಗಳು ನಿರ್ಮಾಣಗೊಳ್ಳತೊಡಗಿದವು. ಸರಕಾರದ ಅನುದಾನಕ್ಕೆ ಅರ್ಜಿ ಹಾಕಿ ದಶಕಗಳನ್ನೇ ಕಳೆದು ಆಸೆಬಿಟ್ಟಿದ್ದ ಮಂದಿಯೆಲ್ಲ ಗಿರೀಶರ ಬಳಿ ಬಂದು ಸೇತುವೆ ನಿರ್ಮಾಣದ ರೂಪುರೇಷೆ ಪಡೆದು ತಾವೇ ಮುಂದಾಗಿ ಅವನ್ನು ನಿರ್ಮಿಸಿಕೊಂಡರು. ಒಂದಲ್ಲ ಎರಡಲ್ಲ, ನೂರಾರು ಸೇತುವೆಗಳ ನಿರ್ಮಾಣ ನಡೆದುಹೋಯಿತು ಕೆಲವೇ ವರ್ಷಗಳಲ್ಲಿ. ಆಂಧ್ರದಲ್ಲಿ ಒಮ್ಮೆ ಕೆಲಸ ಮಾಡುತ್ತಿದ್ದಾಗ ಗಿರೀಶರನ್ನು ನಕ್ಸಲರು ಕಿಡ್ನಾಪ್ ಮಾಡಿ, ತಮಗೂ ಒಂದು ತೂಗು ಸೇತುವೆ ನಿರ್ಮಿಸಿಕೊಂಡರಂತೆ! ಇವರಿಗೆ ಜನಸಾಮಾನ್ಯರು ಕೊಟ್ಟಿರುವ ಬಿರುದು “ಸೇತುಬಂಧು”.

ಅರವಿಂದ್ ಗುಪ್ತ |
ನಿಮಗೆ ವಿಜ್ಞಾನದ ಮಾದರಿಗಳು ಬೇಕೆ? ಹಾಗಾದರೆ ಸಾವಿರ ರುಪಾಯಿ ಪಾವತಿಸಿ; ಅಥವಾ 10,000 ರುಪಾಯಿ ಕೊಡಿ; ಒಳ್ಳೆಯ ಗುಣಮಟ್ಟದ ಆಟಿಕೆ ರವಾನಿಸುತ್ತೇವೆ – ಎಂದೆಲ್ಲ ಶಾಲೆಗಳಿಗೆ ಆಟಿಕೆ, ಮಾದರಿ ರವಾನಿಸುವ ದೊಡ್ಡ ಇಂಡಸ್ಟ್ರಿಯೇ ಇದೆ. ನೋಡಿ ಕಲಿ, ಮಾಡಿ ತಿಳಿ ಎಂಬ ಮಾತು ಬದಿಗೆ ಸರಿದು ಮಾಡಿಕೊಟ್ಟದ್ದನ್ನು ಕೇವಲ ನೋಡಿಬಿಡಿ, ಅಷ್ಟೇ ಸಾಕು ಎಂಬಲ್ಲಿಗೆ ಶಿಕ್ಷಣ ಹೆಜ್ಜೆ ಹಾಕುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಳಸುವ ಅವೆಷ್ಟೋ ಮಾದರಿಗಳನ್ನು ಅವರೇ ತಮ್ಮ ಪರಿಸರದಲ್ಲೇ ಸಿಗುವ ಹಲವು ವಸ್ತುಗಳನ್ನು ಬಳಸಿಕೊಂಡು ತಯಾರಿಸಬಹುದು ಎಂದು ತಿಳಿಸಿಹೇಳುವ ಶಿಕ್ಷಕರು ಕಡಿಮೆಯಾಗುತ್ತಿದ್ದಾರೆ. ಇಲ್ಲವೇ ಇಲ್ಲ ಎಂದರೂ ಸರಿಯೇ. ಇಂಥ ನಿರಾಶಾದಾಯಕ ವ್ಯವಸ್ಥೆಯಲ್ಲಿ ಹುಟ್ಟಿದವರು ಅರವಿಂದ್ ಗುಪ್ತ. ಮೂಲತಃ ಇಂಜಿನಿಯರ್. ಕಾನ್ಪುರದ ಐಐಟಿಯ ಪದವೀಧರ. ಗುಪ್ತ, ತನ್ನ ತರುಣದಿನಗಳಲ್ಲೇ ಶಾಲೆಗಳಲ್ಲಿ ನಡೆಯುತ್ತಿರುವ ನೀರಸ ಪಾಠೇತರ ಚಟುವಟಿಕೆಗಳನ್ನು ಗಮನಿಸಿದರು. ಅಲ್ಲಿ ವಿದ್ಯಾರ್ಥಿಗಳಿಗೆ ತಾವೇ ಸ್ವತಃ ಪಾಲ್ಗೊಳ್ಳಲು ಅವಕಾಶವಿರುವ ಚಟುವಟಿಕೆಗಳು ಕಡಿಮೆಯಾಗುತ್ತಿವೆ ಎಂಬುದು ಅವರ ಗಮನಕ್ಕೆ ಬಂತು. ಹುಡುಗರಿಗೆ ವಿಜ್ಞಾನ ಮಾದರಿಗಳನ್ನು ಮಾಡಲು ಬಿಡಬೇಕು; ಆಟಿಕೆಗಳನ್ನು ಅವರೇ ತಮ್ಮ ಕೈಯಾರೆ ಮಾಡಿಕೊಳ್ಳುವಂತೆ ಅವರನ್ನು ಉತ್ತೇಜಿಸಬೇಕು. ಅದೇನೋ ಸರಿ, ಆದರೆ ಅದಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಎಲ್ಲಿಂದ ತರುವುದು? ಇದ್ದೇ ಇದೆಯಲ್ಲ ಸಮಾಜದಲ್ಲಿ ಎಲ್ಲೆಂದರಲ್ಲಿ ಕಾಣುವ ಕಸ! ಕಸದಿಂದ ರಸ ತೆಗೆಯುವ ಸಂಕಲ್ಪ ಅರವಿಂದ್ ಗುಪ್ತ ಅವರದ್ದಾಯಿತು. ಅವರ ಹೊಸ ಪಯಣ ಶುರುವಾದದ್ದು ಹಾಗೆ.


“ಟಾಯ್ಸ್ ಫ್ರಮ್ ತ್ರಾಶ್” (ಕಸದಿಂದ ಆಟಿಕೆ) ಎಂಬುದು ಗುಪ್ತರ ಒಂದು ಪ್ರಸಿದ್ಧ ಅಭಿಯಾನ. ಅವರು ದೇಶಾದ್ಯಂತ 3000 ಶಾಲೆಗಳನ್ನು ಭೇಟಿ ಮಾಡಿದ್ದಾರೆ. ಕಸದಿಂದ, ಅನುಪಯುಕ್ತ ವಸ್ತುಗಳಿಂದ ಆಟಿಕೆ/ಮಾದರಿ ತಯಾರಿಸುವುದು ಹೇಗೆಂಬುದನ್ನು ವಿವರಿಸುವ ಒಂದಲ್ಲ ಎರಡಲ್ಲ ಬರೋಬ್ಬರಿ 6200 ವಿಡಿಯೋಗಳನ್ನು ತಯಾರಿಸಿದ್ದಾರೆ. ಒಟ್ಟು 18 ಭಾಷೆಗಳಲ್ಲಿರುವ ಅವನ್ನು ದೇಶದ ಉದ್ದಗಲಕ್ಕೆ ಕೊಂಡೊಯ್ದು ಮಕ್ಕಳಿಗೆ ತೋರಿಸಿದ್ದಾರೆ. ಅವರ ಮ್ಯಾಚ್‍ಸ್ಟಿಕ್ ಮಾಡೆಲ್ಸ್ ಎಂಬ ಕೃತಿ 12 ಭಾಷೆಗಳಿಗೆ ಅನುವಾದಗೊಂಡು ಐದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

 

ವಿಕ್ರಮ ವಾರಪತ್ರಿಕೆ ಪ್ರಕಟಿತ ಬರಹ

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post