ಗೋಕುಲ: ಕೊಳಲ ಕಲಿಕೆಗೊಂದು ಗುರುಕುಲ

ಇವರು ಕಲಿತದ್ದು ಎಂ.ಎಸ್ಸಿ. ಅಗ್ರಿ. ಸಿಕ್ಕಿದ್ದು ಬ್ಯಾಂಕ್‍ ಆಫೀಸರ್ ನೌಕರಿ; ಕೊನೆಗೆ ಆಯ್ದುಕೊಂಡಿದ್ದು ಸಂಗೀತಕ್ಷೇತ್ರ; ಕೊಳಲು ಕಲಿಸಲಿಕ್ಕೊಂದು ಗುರುಕುಲ. ಇದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಶಿರನಾಲೆಯ ಶ್ರೀ ನಾಗರಾಜ ಹೆಗಡೆ ಅವರು ಸಂಗೀತಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆ.

ಕಲಾಕ್ಷೇತ್ರದಲ್ಲೂ ಸಂಪೂರ್ಣ ಗುರುಕುಲ ಪದ್ಧತಿ ಬಹುತೇಕ ಕಡಿಮೆಯಾಗಿದೆ, ಆಗುತ್ತಿದೆ. ಈಗ ಅನುಸರಿಸುತ್ತಿರುವ ಪದ್ಧತಿ ಅಷ್ಟೇನೋ ಅನುಕೂಲಕರವಲ್ಲದಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ಇದನ್ನೇ ಮುಂದುವರಿಸುವುದು ಅನಿವಾರ್ಯ. ಆದರೂ ಅನೇಕ ಸಂಗೀತಗಾರರು ಗುರುಕುಲಪದ್ಧತಿಯನ್ನೇ ಇಷ್ಟಪಟ್ಟು ಮುಂದುವರಿಸಿರುವುದೂ ಕಂಡುಬರುತ್ತಿದೆ. ಇವರಲ್ಲಿ ನಾಗರಾಜ ಹೆಗಡೆಯವರೂ ಒಬ್ಬರು.

ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿದ್ದಾಗಲೇ ಸಂಗೀತದ ಕಡೆಗೆ ಆಕರ್ಷಿತರಾಗಿದ್ದ ಹೆಗಡೆಯವರು ಮುಂದೆ ಧಾರವಾಡದ ಅಗ್ರಕಲ್ಚರ್ ಯೂನಿವರ್ಸಿಟಿಯಿಂದ ಎಂ.ಎಸ್ಸಿ. ಅಗ್ರಿಯನ್ನು ಬಂಗಾರದ ಪದಕ ಗಳಿಸುವ ಮೂಲಕ ಪಡೆದು ಬ್ಯಾಂಕ್ ಆಫೀಸರ್ ಆಗಿ ಸೇರಿದರು. ವರ್ಷದಲ್ಲೇ ಭಡ್ತಿಯ ಆಸೆಗೂ ಒಳಗಾಗದೆ, ತನಗೆ ಅದು ಸರಿಹೊಂದದೆಂದು ಕೈಬಿಟ್ಟು ಕಲಿತ ಕೊಳಲನ್ನೇ ಕೈಹಿಡಿದರು. ಕೊಳಲಿನಲ್ಲಿ ಪ್ರಾಥಮಿಕ ಶಿಕ್ಷಣ ಧಾರವಾಡದ ಶ್ರೀ ಟಿ.ವಿ. ಚವ್ಹಾಣ್ ಅವರಲ್ಲಿ ಮಾಡಿ ಬಳಿಕ ಸುಮಾರು 14 ವರ್ಷ ಪಂ. ವೆಂಕಟೇಶ್ ಗೋಡಖಿಂಡಿಯವರಲ್ಲಿ ಅಭ್ಯಾಸ ಮುಂದುವರಿಸಿದರು. ಸಿತಾರ್ ವಾದಕ ಶಾಹಿದ್ ಪರ್ವೇಜ್ ಅವರ ಗೈಡೆನ್ಸ್ ಕೂಡ ಪಡೆದಿದ್ದಾರೆ. ತಮ್ಮ ಹಳ್ಳಿಯಲ್ಲೇ ನೆಲೆನಿಂತ ಹೆಗಡೆಯವರು ಉಡುಪಿಯವರ ಬೇಡಿಕೆಯಿಂದಾಗಿ 2007ರಿಂದ 2009ರವರೆಗೆ ಉಡುಪಿಗೆ ಹೋಗಿ ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸತೊಡಗಿದರು. ತದನಂತರ ಊರಾದ ಶಿರನಾಲೆಯಲ್ಲೆ ‘ಗೋಕುಲ ಬಾನ್ಸುರಿ ಗುರುಕುಲ’ವನ್ನು ಒಂದು ಟ್ರಸ್ಟಾಗಿ ಪ್ರಾರಂಭಿಸಿ, ಗುರುಕುಲ ಪದ್ಧತಿಯಲ್ಲಿ ಕಲಿಸತೊಡಗಿದರು. ‘ಅವಿಭಕ್ತ ಕುಟುಂಬದ ಸಹಕಾರ ತನ್ನ ಜೊತೆಗಿದ್ದು, ಸಾಕಷ್ಟು ಸಮಯವೂ ಲಭ್ಯವಾಗುತ್ತಿದೆ, ನೌಕರಿಯಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ’ ಎನ್ನುತ್ತಾರೆ ನಾಗರಾಜ ಹೆಗಡೆಯವರು. ಅವರೊಡನೆ ನಡೆಸಿದ ಮಾತುಕತೆ:

ಪ್ರ: ಈ ಪದ್ಧತಿಯಲ್ಲೇ ಕಲಿಸುವುದು ಯಾಕೆ?
ಉ: ನಾನು ಬೇರೆಡೆ ಹೋಗಿ ಕಲಿಸಿದರೆ ನನಗಾಗುವ ವೆಚ್ಚಕ್ಕಾಗಿಯಾದರೂ ಶುಲ್ಕ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಅಪ್ಪ/ಅಮ್ಮನ ಒತ್ತಾಯಕ್ಕೆ, ಶೋಕಿಗೆ, ನೋಡೋಣ, ಟ್ರೈ ಮಾಡೋಣ ಎನ್ನುವವರೆಲ್ಲ ಇರುತ್ತಾರೆ. ನಿಜವಾದ ಆಸಕ್ತಿ ಇರುತ್ತದೆಯೋ ಇಲ್ಲವೋ ಗೊತ್ತಿರುವುದಿಲ್ಲ. ಈ ರೀತಿ ಕಲಿಸುವುದರಿಂದ ನನ್ನ ಸಮಯವೂ ವ್ಯರ್ಥ, ಅವರ ಹಣವೂ ವ್ಯರ್ಥ. ನಾನು ಕಲಿಸುವುದು, ಹಣ ತೆಗೆದುಕೊಳ್ಳುವುದು ಗ್ಯಾರಂಟಿಯೇ ವಿನಾ ಅವರು ಕಲಿಯುತ್ತಾರೆ ಎನ್ನುವುದು ಗ್ಯಾರಂಟಿಯಾಗುವುದಿಲ್ಲ. ವಿದ್ಯಾರ್ಥಿಗಳು ನಾನು ಬರುತ್ತೇನೋ ಎಂದು ಬರುತ್ತಾರೋ, ನಿಜವಾದ ಆಸಕ್ತಿಗೆ ಬರುತ್ತಾರೋ ಹೇಳಲಾಗದು. ಆಸಕ್ತಿ ಇಲ್ಲದವರಿಗೆ ಕಲಿಸುವುದರಿಂದ ಅವರು ಮುಂದುವರಿಸುತ್ತಾರೋ ಇಲ್ಲವೋ ಹೇಳಲಾಗದು. ಇದೆಲ್ಲ ಕಾರಣದಿಂದಲೇ ಉಡುಪಿ ವಿದ್ಯಾರ್ಥಿಗಳಿಗೆ ಶುಲ್ಕವೇನೂ ಬೇಡ, ನಿಮ್ಮ ಪ್ರವಾಸದ ವೆಚ್ಚ ಮಾತ್ರ ನೋಡಿಕೊಳ್ಳಿ. ಆಸಕ್ತರು ನಮ್ಮ ಊರಿಗೆ ಬಂದು ಕಲಿಯಿರಿ ಎಂದೆ. ಇಲ್ಲಿಗೇ ಬರುತ್ತಾರೆಂದರೆ ಫಿಲ್ಟರ್ ಆಗಿಯೇ ಬರುತ್ತಾರೆ. ಈಗಲೂ ಉಡುಪಿ, ಶೃಂಗೇರಿ, ಪುತ್ತೂರ ಕಡೆಯ ಸಾಕಷ್ಟು ವಿದ್ಯಾರ್ಥಿಗಳು ಬಂದು ಉಳಿದು ಕಲಿತು ಹೋಗುತ್ತಾರೆ. ಪ್ರಸ್ತುತ ದಿನಗಳಲ್ಲಿ ಸಂಗೀತವೊಂದನ್ನೇ ಮಾಡುವವರಿಲ್ಲದ ಕಾರಣ ಇಲ್ಲಿ ಯಾರೂ ಖಾಯಂ ಉಳಿಯುವ ವ್ಯವಸ್ಥೆ ಮಾಡಿಲ್ಲ.

ಪ್ರ: ನಿಮ್ಮದು ಗೋಕುಲ ಗುರುಕುಲವೆನ್ನಿಸಿಕೊಳ್ಳುವ ಕಾರಣವೇನು?
ಉ: ಗೋಕುಲವೆಂದು ಹೆಸರನ್ನಿಟ್ಟೆ ಯಾಕೆಂದರೆ, ಗೋಕುಲಕ್ಕೂ ಕೃಷ್ಣನ ಕೊಳಲಿಗೂ ಇರುವ ಸಂಬಂಧದ ಬಗ್ಗೆ ವಿವರಿಸಬೇಕಾಗಿಲ್ಲ. ಗುರುಕುಲ ಯಾಕೆಂದರೆ, ಈ ವ್ಯವಸ್ಥೆಯಲ್ಲಿ ನಿಗದಿತ ಪಠ್ಯ, ಪರೀಕ್ಷೆ ಇರುವುದಿಲ್ಲ. ಪರೀಕ್ಷೆ ವಿಧಾನದಲ್ಲಿ ಪರೀಕ್ಷೆಗೆ ಬೇಕಾದ್ದನ್ನು, ಅಂದರೆ ಒಂದಷ್ಟು ರಾಗ, ಒಂದಷ್ಟು ಆಲಾಪ/ತಾನು ಇಷ್ಟರ ಮೇಲೇ ಹೆಚ್ಚಿನ ಗಮನವಿರುತ್ತದೆ. ಕಲೆ ಬರಬಹುದು ಅಥವಾ ಬರದೆಯೂ ಇರಬಹುದು. ಆದರೆ ಗುರುಕುಲ ಪದ್ಧತಿಯಲ್ಲಿ ಕಲೆಗೇ ಪ್ರಾಶಸ್ತ್ಯ. ಈ ರೀತಿಯಲ್ಲಿ ಕಲಿತು ಕಛೇರಿಹಂತಕ್ಕೆ ತಲಪಿದಾಗ ಯಾವುದಾದರೂ ಪರೀಕ್ಷೆ ಬೇಕೆನಿಸಿದರೆ ಮಾರ್ಗದರ್ಶನ ಮಾಡುತ್ತೇನೆ. ಆರ್ಟ್‍ರೂಪದಲ್ಲೇ ಕಲಿತ ನಾನು ಅದನ್ನೇ ಕಲಿಸಲು ಇಷ್ಟಪಡುವೆ. ವಿದ್ಯಾರ್ಥಿಗೆ ಕಲೆಯರೀತಿ ಕಲಿಸಬೇಕೆಂದರೆ ಆತ ಯಾವುದರಿಂದ ಕಲಿಸಿದರೆ ಅದನ್ನು ಪಿಕ್‍ಅಪ್ ಮಾಡುತ್ತಾನೆ, ಆತನ ಲೆವೆಲ್ ಏನು, ಯಾವುದನ್ನು ಹೇಳಿದರೆ ಆತನಿಗೆ ಅರ್ಥವಾಗುತ್ತದೆ, ಅಲ್ಲಿಂದ ಕಲಿಸಿದರೆ ಅವರು ಕಲಿಯುತ್ತಾರೆ. ಹಾಗಾಗಿ ನಾನು ಸಿಸ್ಟಂನ್ನು ವೇರಿ ಮಾಡಬೇಕಾಗಬಹುದು, ಒಬ್ಬನಿಗೆ ಹೇಳುವ ರೀತಿಯಲ್ಲೇ ಇನ್ನೊಬ್ಬನಿಗೆ ಹೇಳಿದರೆ ಕನ್ವಿನ್ಸ್ ಆಗುವುದಿಲ್ಲ. ನನಗೆ ಗೋಡಖಿಂಡಿಯವರೂ ಸಹ ‘ನಿನಗೆ ಆರ್ಟ್ ಬೇಕು, ಕಛೇರಿ ಮಾಡಬೇಕು ಎಂದಾದರೆ ಮಾತ್ರ ನನ್ನ ಬಳಿ ಬಾ, ಪರೀಕ್ಷೆಗೆ ಕಲಿಯುವೆ ಎಂದರೆ ನನ್ನ ಬಳಿ ಬರಬೇಡ’ ಎಂದೇ ಹೇಳಿದ್ದರು. ನನಗೂ ಅದೇ ಬೇಕಾಗಿತ್ತು. ಇವತ್ತಿಗೂ ನನಗೆ ಅದೇ ಇಷ್ಟ. ಮೊದಲು ಆರ್ಟ್ ಬರಬೇಕು, ಬಳಿಕ ಪರೀಕ್ಷೆ. ಇಲ್ಲಿ ಶುಲ್ಕ ತೆಗೆದುಕೊಳ್ಳುವುದಿಲ್ಲ. ಟ್ರಸ್ಟಿಗೆ ಕೊಡುವುದು ಬಿಡುವುದು ಅವರವರ ಇಷ್ಟ. ಅಮೆರಿಕ ಮೊದಲಾದ ದೇಶಗಳ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕವೂ ಕಲಿಸುವೆ, ಅದಕ್ಕೆ ಅಂತರ್ಜಾಲದ ವೆಚ್ಚ, ಇಲ್ಲಿ ವಿದ್ಯುತ್ ತೊಂದರೆ ಇರುವ ಕಾರಣ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ; ಬ್ರಾಡ್‍ಬ್ಯಾಂಡ್ ಕೂಡ ವರ್ಕಿಂಗ್ ಇದ್ದರೆ ಮಾತ್ರ ಕ್ಲಾಸ್ ಮಾಡಲಾಗುತ್ತದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಇವತ್ತಿಲ್ಲ ನಾಳೆ ಬಾ ಎನ್ನಬಹುದು; ಆದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಅವರ ವೇಳೆಗೆ ನಮ್ಮನ್ನು ಸೆಟ್ ಮಾಡಿಕೊಳ್ಳಲೇಬೇಕಾಗುತ್ತದೆ. ಅಲ್ಲಿಗೆ ವೀಕ್ಲಿ ಇಂಥಾ ವೇಳೆಗೆ ಅಂದ್ರೆ ಅದೇ ವೇಳೆಗೆ ನಾವು ಕಮಿಟ್ ಆಗಿರಬೇಕಾಗುತ್ತದೆ. ಹಾಗಾಗಿ ಶುಲ್ಕ ವಿಧಿಸುವುದು ಅನಿವಾರ್ಯ.

ಪ್ರ: ಒಬ್ಬ ವಿದ್ಯಾರ್ಥಿ ಕಛೇರಿಮಟ್ಟಕ್ಕೆ ಬೆಳೆಯಲು ಎಷ್ಟು ಅವಧಿ ಬೇಕು ಎಂದು ನಿಮಗನಿಸುತ್ತದೆ?
ಉ: ಗೋಡಖಿಂಡಿಯವರು ಹೇಳುತ್ತಿದ್ದರು, ‘ಸಂಗೀತವನ್ನು ಇಪ್ಪತ್ತನಾಲ್ಕು ತಾಸು ಮಾಡಬೇಕು, ಅಂದರೆ ಆಹತ ನಾದ ಅರ್ಧ ಗಂಟೆ, ಅನಾಹತ ನಾದ ಇಪ್ಪತ್ಮೂರುವರೆ ಗಂಟೆ ಎಂದು ಅದರ ಅರ್ಥ’ ಎಂದು. ಆಹತ ಎಂದರೆ ಕಿವಿಗೆ ಕೇಳಿಸುವುದು, ಅದು ನಮ್ಮ ಅಭ್ಯಾಸ. ಅನಾಹತ ನಾದ ಎಂದರೆ ಮನಸ್ಸಿನಲ್ಲೇ ನಡೆಯುವುದು. ಸಂಗೀತ ಎಂದರೆ ಏನು, ಅದರ ಪ್ರಸೆಂಟೇಶನ್ ಹ್ಯಾಗೆ? ಈ ಕುರಿತಾದ ಮನಸ್ಸಿನ ಚಿಂತನೆಯೂ ಮುಖ್ಯ. ಸಂಗೀತವೂ ಒಂದು ಭಾಷೆ. ನಾವು ಮಾತನಾಡುವ ಭಾಷೆಗಿಂತ ಮೇಲಿನ ಭಾಷೆ. ಅದಕ್ಕಾಗಿಯೇ ಅದಕ್ಕೆ ದೇಶ, ಭಾಷೆಯ ಹಂಗಿಲ್ಲ. ಈ ಭಾಷೆಯ ಪದ, ವ್ಯಾಕರಣ, ವಾಕ್ಯರಚನೆ ಇವೆಲ್ಲವೂ ಒಂದು ಕಲೆ. ಇವೆಲ್ಲವನ್ನೂ ಹೇಳಿಕೊಟ್ಟು ಆ ವಿಚಾರದಲ್ಲಿ ಆಸಕ್ತಿಯನ್ನು ಹುಟ್ಟಿಸಿ, ಅವರನ್ನು ಯೋಚನೆಗೆ ಹಚ್ಚಬೇಕು. ನಾನು ಕಲಿತದ್ದೂ ಹೀಗೆಯೇ, ಅನುಸರಿಸುವುದೂ ಇದನ್ನೆ. ನಾನು ಕಲಿಸುವ ಆರಂಭದಲ್ಲಿ ಏನೂ ಗೊತ್ತಿಲ್ಲದೆ ಬಂದವರಿಗೆ ಅಲಂಕಾರಗಳಾದ ಬಳಿಕ ಒಂದು ರಾಗದಲ್ಲಿ ಒಂದಷ್ಟು ನಿಗದಿತ ವಿಷಯ ನೀಡಿ, ಯಾವ ರೀತಿ ತಾಳಗಳ ಜೊತೆಗೆ ನುಡಿಸಬೇಕು, ಯಾವ್ಯಾವ ಹಂತಗಳು ಬರುತ್ತವೆ, ಎಲ್ಲಿ ಆಲಾಪ, ತಾನು ಬರುತ್ತದೆ ಇವುಗಳನ್ನು ತಿಳಿಸುವುದಕ್ಕಾಗಿ ಒಂದೆರಡು ರಾಗ ಕಲಿಸಿದ ಬಳಿಕ ಮುಂದಿನ ರಾಗಗಳನ್ನು ನಾನು ನುಡಿಸುತ್ತೇನೆ, ಆತ ನನ್ನನ್ನು ಅನುಸರಿಸಬೇಕು. ಈ ಹಂತದಿಂದ ಬಂದಿಶ್ ಬಿಟ್ಟರೆ ಬೇರೆ ಯಾವುದನ್ನೂ ಬರೆದುಕೊಡುವುದಿಲ್ಲ. ಈ ಬಗೆಯಲ್ಲಿ ಅವರು ಅರ್ಥ ಮಾಡಿಕೊಂಡು, ಯೋಚನೆ ಮಾಡುವುದನ್ನು ಕಲಿಯುತ್ತಾರೆ, ಅದೇ ಕಲೆ. ಅದನ್ನೇ ಬೆಳೆಸಬೇಕು ಎನ್ನುವುದೇ ಬೇಸಿಕ್ ಐಡಿಯಾ. ವಿದ್ಯಾರ್ಥಿಯ ಸಾಮಥ್ರ್ಯ, ಹಿನ್ನೆಲೆ, ಆಸಕ್ತಿಯ ಮೇಲೆ ಆತ ಮುಂದೆ ಬರುತ್ತಾನೆ. ಕೆಲವರಿಗೆ ಕೌಟುಂಬಿಕ ಹಿನ್ನೆಲೆ, ಮನೆಯಲ್ಲಿ ಸಂಗೀತದ ವಾತಾವರಣವಿದ್ದರೆ, ಕೆಲವರದು ಹುಟ್ಟುಪ್ರತಿಭೆ. ಇಂತವರು ಸಹಜವಾಗಿ ಬೇಗ ಕಲಿಯುತ್ತಾರೆ. ಇದ್ಯಾವುದೂ ಇಲ್ಲದವರಿಗೆ ಜಾಸ್ತಿ ಅಭ್ಯಾಸ, ಸಮಯ ಬೇಕು. ಹಿನ್ನೆಲೆ ಇರುವವರಿಗೆ ಮೂರು ನಾಲ್ಕು ವರ್ಷದಲ್ಲಿ ಒಂದು ಹಂತದಲ್ಲಿ ತಯಾರು ಮಾಡಬಹುದು. ಆ ಬಳಿಕದ ಪ್ರಗತಿ ಅವರವರ ಸಾಧನೆಯನ್ನು ಅವಲಂಬಿಸಿರುತ್ತದೆ.

ಪ್ರ: ಈ ವ್ಯವಸ್ಥೆಯಡಿ ಕಲಿಯುವ ಲಾಭಗಳೇನು?
ಉ: ಕಲಿಸುವವರ ಜೊತೆ ನಾವು ಎಷ್ಟು ಹೆಚ್ಚು ಸಮಯ ಕಳೆಯುತ್ತೇವೋ ಅಷ್ಟು ಹೆಚ್ಚು ನಮಗೆ ವಿಷಯ ದೊರಕುತ್ತಾ ಹೋಗುತ್ತದೆ. ಯಾವ ವೇಳೆ ಯಾವುದು ನೆನಪಾಗುತ್ತದೆ, ಯಾವ ವೇಳೆ ಯಾವುದನ್ನು ಹೇಳುತ್ತಾರೆ ಎನ್ನುವುದನ್ನು ಹೇಳಲಾಗದು. ಹಳೆ ಕಥೆ, ಅನುಭವ ಇರಬಹುದು. ರಾಗಕ್ಕೆ ಸಂಬಂಧಿಸಿದ ವಿಷಯಗಳಿರಬಹುದು, ಆಯಾ ಮಾತು ಬಂದಾಗ ಅದರ ಬಗ್ಗೆ ಗುರುಗಳು ವಿವರಿಸುತ್ತಾರೆ, ಗುರು-ಶಿಷ್ಯ ಸಂಬಂಧ ಇಲ್ಲಿ ಗಟ್ಟಿಯಾಗುತ್ತದೆ, ಸಂಶಯ ಬಂದರೆ ಅಲ್ಲೇ ಕೇಳಬಹುದು. ಅವರು ಗಾಯನವನ್ನೂ ಕಲಿಸುತ್ತಿದ್ದಾಗ ನಾನು ಕೇಳುತ್ತಿದ್ದೆ. ಚಿಕ್ಕಮಕ್ಕಳಿಗೆ, ದೊಡ್ಡವರಿಗೆ ಕಲಿಸುವ ರೀತಿ ಭಿನ್ನವಾಗಿರುತ್ತದೆ. ಕಲಿಸುವ ಕಲೆಯನ್ನೂ ಅವರಿಂದಲೇ ಕಲಿತೆ. ಇದೆಲ್ಲವೂ ಗುರುಕುಲಪದ್ಧತಿಯಲ್ಲೇ ಸಾಧ್ಯವಾಗುತ್ತದೆ.

ಪ್ರ: ನಿಮ್ಮ ಕಲಿಕೆ ಹೇಗಿತ್ತು, ಯಾವ ಪದ್ಧತಿ ನಿಮ್ಮದು?
ಉ: ಗೊಡಖಿಂಡಿಯವರ ಮನೆಯಲ್ಲಿ ನಾನು ಉಳಿಯದಿದ್ದರೂ ಬೆಳಗ್ಗೆ ಹೋದರೆ ರಾತ್ರಿ ಅಲ್ಲಿಂದ ಬರುತ್ತಿದ್ದೆ. ದಿನವಿಡೀ ನುಡಿಸದಿದ್ದರೂ ಎಷ್ಟೋ ವಿಷಯದ ಮೇಲೆ ಚರ್ಚಿಸುತ್ತಿದ್ದೆವು. ಮಾತನಾಡುತ್ತಿದ್ದೆವು, ಒಟ್ಟಿಗೆ ಕುಳಿತು ಕೇಳುತ್ತಿದ್ದೆವು, ನುಡಿಸುತ್ತಿದ್ದೆವು, ಒಂದು ರಾಗವನ್ನು ಯಾವ ರೀತಿ ಪ್ರಸೆಂಟ್ ಮಾಡಬಹುದು ಎನ್ನುವದೆಲ್ಲ ಅಲ್ಲಿ ಗಟ್ಟಿಯಾಗುತ್ತಿತ್ತು. ನಮ್ಮದು ಕಿರಾಣಾ ಆಧಾರಿತ. ಗೊಡಖಿಂಡಿಯವರು ಕೊಳಲಿಗೆ ಪ್ರತ್ಯಕ್ಷ ಗುರುಗಳಿಲ್ಲದೆ ಏಕಲವ್ಯನಂತೆ ಕಲಿತು, ಭೀಮಸೇನ ಜೋಶಿ, ಅಮೀರ್ ಖಾನ್ ಮೊದಲಾದವರನ್ನು ಅನುಕರಿಸಿದರು. ದೊಡ್ಡಕಲಾವಿದರಿಗೆ ಹಾರ್ಮೋನಿಯಂ ಸಾಥ್ ಮಾಡುವಾಗ ಅವರು ಹಾಡಿದ್ದನ್ನು ಇವರು ನುಡಿಸುತ್ತಿದ್ದರು. ಅದನ್ನೇ ತೆಗೆದು ಕೊಳಲಿನಲ್ಲಿ ಹಾಕಿದರು. ನಮ್ಮದು ಗಾಯಕಿ ಅಂಗವಾಗಿದ್ದು, ತಂತ್ರಕಾರಿಯನ್ನೂ ಬಳಸಿಕೊಳ್ಳಲಾಗುತ್ತದೆ.

ನಾಗರಾಜ ಹೆಗಡೆ ಅವರ ಸಾಧನೆ:
1995ರಲ್ಲಿ ಕರ್ನಾಟಕ ಸಂಗೀತ-ನಾಟಕ ಅಕಾಡೆಮಿ ನಡೆಸುವ ಸ್ವರ-ವಾದ್ಯ ವಾದನ ವಿಭಾಗ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಅಖಿಲ ಭಾರತೀಯ ಆಕಾಶವಾಣಿ ಮತ್ತು ದೂರದರ್ಶನದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಬಿ ಹೈ’ ಗ್ರೇಡ್ ಕಲಾವಿದರಾಗಿದ್ದಾರೆ. ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯ ನಡೆಸುವ ಸಂಗೀತ ಅಲಂಕಾರ ಪರೀಕ್ಷೆಯಲ್ಲಿ 2012ರಲ್ಲಿ ಅಖಿಲಭಾರತ ಮಟ್ಟಕ್ಕೆ ಮೊದಲ ರಾಂಕ್ ಗಳಿಸಿದ್ದಾರೆ.

ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮಂಗಳೂರು, ಕೊಲ್ಹಾಪುರ, ಮಡಗಾಂ ಮೊದಲಾದೆಡೆ ಕೊಳಲಿನ ಕಛೇರಿ ನಿರ್ವಹಿಸಿದ್ದಾರೆ. ಅನೇಕ ಉತ್ಸವಗಳಲ್ಲೂ ಇವರ ಕಛೇರಿ ನಡೆದಿದ್ದು, ಅಮೆರಿಕದ ಅಕ್ಕ ಸಮ್ಮೇಳನ, ಟೊರಾಂಟೋ, ಸಿಡ್ನಿ, ಮೆಲ್‍ಬೋರ್ನ್, ಅಮೆರಿಕದ ಅನೇಕ ನಗರಗಳಲ್ಲೂ ಸೊಲೊ ಕಛೇರಿ ಹಾಗೂ ಅನೇಕ ಜುಗಲ್‍ಬಂದಿ ಕಛೇರಿ ನಡೆಸಿದ್ದಾರೆ. ಪ್ರತಿವರ್ಷ ತಮ್ಮ ಊರಿನಲ್ಲೇ ಸಂಗೀತದ ಕಛೇರಿ ನಡೆಸಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವುದಲ್ಲದೆ, ಸಾಧಕರನ್ನೂ ಕರೆಸುತ್ತಾರೆ. ಸಂಗೀತಕ್ಕೊಂದು ಲೈಬ್ರರಿ ಇಟ್ಟು, ಅಲ್ಲಿ ಪುಸ್ತಕಗಳು, ಆಡಿಯೋ-ವಿಸುವಲ್ ಸಂಗ್ರಹಗಳೂ ದೊರಕುವಂತೆ ಮಾಡಬೇಕು ಎಂಬುದು ಇವರ ಕನಸು.

 

ರಾಗ ಧನಶ್ರೀ ಪತ್ರಿಕೆ ಪ್ರಕಟಿತ ಬರಹ

Facebook ಕಾಮೆಂಟ್ಸ್

Saroja Prabhakar: ‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.
Related Post
whatsapp
line