ಕತೆ ಎಂದ ತಕ್ಷಣ ಕಿವಿ ನೆಟ್ಟಗಾಗುವುದು ಮಕ್ಕಳಿಗೂ ಮುದಿಯರಿಗೂ. ಕತೆಯ ಸಂಗತಿ ಅಡುಗೂಲಜ್ಜಿಯದ್ದಿರಬಹುದು, ವರ್ತಮಾನದ್ದಿರಬಹುದು. ಅವರವರ ರುಚಿಗೆ ಹೊಂದಿಕೊಳ್ಳುವ ಕತೆ ಕೇಳುವುದು, ಓದುವುದು ಇಷ್ಟವೇ. ನಾನೀಗ ಸೂಚಿಸುವುದು ಭೂಮಿಯ ಕತೆ. ಹೇಳಲು ಎಷ್ಟು ಸಮಯ ಬೇಕು, ಓದಲು ಎಷ್ಟು ದಿನಗಳು ಬೇಕು! ಆದರೂ ಒಂದು ಗಳಿಗೆಯ ಕಣ್ಣೋಟದಿಂದ ಕತೆಯ ಗಂಭೀರತೆಯನ್ನು ಗ್ರಹಿಸಬಹುದೋ ಏನೋ. ಕಣ್ಣು ಕಿವಿಗಳನ್ನು ಸೂಕ್ಷ್ಮವಾಗಿಸಿಕೊಂಡು, ಕಾಲನ್ನು ಗಟ್ಟಿಪಡಿಸಿಕೊಂಡು ಭೂಮಿಗೆ ಹತ್ತಿರ ನಡೆದಾಡಿದಾಗ ಹೆಜ್ಜೆಹೆಜ್ಜೆಗೂ ಕತೆಯ ಪುಟಗಳು ತೆರೆಯುತ್ತವೆ. ಹೆಜ್ಜೆಗಳನ್ನಾದರೂ ಸಾಧ್ಯವಾದಷ್ಟು ಮಾನವನ ಹಸ್ತಕ್ಷೇಪವಿಲ್ಲದ ಕಾಡು, ಕಣಿವೆ, ಕರಾವಳಿ, ಬಯಲು, ಬೆಟ್ಟ ಗುಡ್ಡಗಳ ಜಲಮೂಲಗಳಲ್ಲಿ ಇಡುತ್ತಾ ಹೋದಂತೆ ಭೂಮಿಯ ಕತೆ ಅನಾವರಣಗೊಳ್ಳುತ್ತದೆ. ಬೇಡ ಯಾವುದೋ ಒಂದು ಅನಾಮಧೇಯ ಬಂಡೆಗೆ ಕಿವಿ ಒತ್ತಿ, ಕತೆ ಕೇಳುತ್ತದೆ.
ಇಷ್ಟು ಸರಳವಾಗಿರುವಾಗ ಅಮೆರಿಕಾದ ಗ್ರಾಂಡ್ ಕ್ಯಾನಿಯನ್ ನ ಅಂಚಿನಲ್ಲಿ ನಿಂತವನಿಗೆ ಕತೆಗಳ ಸರಮಾಲೆಯೇ ಬಿಡುಗಡೆಯಾಗುತ್ತದೆ. ಅದೇನು ಗ್ರಾಂಡ್ ಕ್ಯಾನಿಯನ್ ನ ಅಂಚಿಗೆ ಹಾರಿ ಬಂದು ನಿಂತೆನೆಂದು ತಿಳಿಯಬೇಡಿ. ವುಡ್ ಲ್ಯಾಂಡ್ ಹಿಲ್ಸ್’ನ ಮಕ್ಕಳಮನೆಯಿಂದ ಹೊರಟವರು ದೊಡ್ಡ ಪ್ರವಾಸವನ್ನೇ ಮಾಡಿದ್ದೆವು. ದಾರಿಯುದ್ದಕ್ಕೂ ಭೂಮಿಯ ಕತೆಯ ಪುಟಗಳನ್ನು ಅವಲೋಕಿಸುತ್ತಲೇ ಬಂದಿದ್ದೆವು. ಕಾರಿನಲ್ಲಿ ವೇಗದಿಂದ ಮುಂದುವರಿದಷ್ಟೂ ಮುಗಿಯದ ಮರುಭೂಮಿ. ರಸ್ತೆಯ ಪಕ್ಕದ ಗುಡ್ಡಗಳ ತಲೆಗಳೆಲ್ಲ ಕರಟಿ ಕಪ್ಪಾಗಿದ್ದವು. ದೂರದಿಂದ ನೋಡುವವರಿಗೆ ಕಪ್ಪು ಕುಲಾವಿ ಧರಿಸಿಕೊಂಡ ಗುಡ್ಡಗಳಂತೆಯೇ. ನಾವೇನೋ ಹವಾನಿಯಂತ್ರಿತ ಕಾರಿನಲ್ಲಿದ್ದೆವು. ಹೊರಗಡೆಯ ಉಷ್ಣತೆ ೧೧೫ಫ್ಯಾರನ್ಹೀಟ್. ಸಾವಿನ ಕಣಿವೆ ಎಂದು ಕರೆಯಲ್ಪಡುವ ದಾರಿಯ ಈ ಪ್ರದೇಶವನ್ನು ಸುಮ್ಮಗೆ ಅನ್ನಲಿಲ್ಲ. ದಾರಿಯಲ್ಲಿ ಯಾರ ಸಾವನ್ನೂ ಕಾಣದಿದ್ದರೂ ಉಷ್ಣಕ್ಕೆ ಸಿಡಿದ ಟಯರಿನ ಚೂರುಗಳು ಹೆದ್ದಾರಿಯುದ್ದಕ್ಕೂ ತೋರಿಸುವ ದೃಶ್ಯ ಭೀಕರದ್ದೆ. ದೃಷ್ಟಿಯಂಚನ್ನು ಮೀರಿದ ಮರುಭೂಮಿ, ಮಿತಿ ಮೀರಿದ ಉಷ್ಣ, ಎಲ್ಲಿಯೂ ಹತ್ತಿರ ವಾಸವಾಗಲೀ, ನೀರಿನ ಆಶ್ರಯವಾಗಲೀ ಇದ್ದ ಹಾಗೇ ಇಲ್ಲ. ನಿರ್ಜನ ದಾರಿಯಲ್ಲೇ ಕಾರುಕೆಟ್ಟರೆ, ಏನುಗತಿ? ಭೂಮಿಯ ಕತೆ ಹೇಳಹೋದವನ ಕತೆ? ಸಾಗಿದ್ದು ಚಾರಿತ್ರಿಕ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೬ ರಲ್ಲಿ. ಅಲ್ಲಲ್ಲಿ ಮೂಲ ರಸ್ತೆಗೆ ಸಮಾನಂತರವಾಗಿ ಹೊಸ ರಸ್ತೆ ಮೂಲ ರಸ್ತೆಗೆ ಅಂಟಿಕೊಂಡಿದ್ದು ಅಂದಿನ ಸಣ್ಣ ಪುಟ್ಟ ಪೇಟೆಗಳು ಇಂದು ಯಾರೂ ಏನೂ ಇಲ್ಲದ ದೆವ್ವದ ಪೇಟೆ ಗಳಾಗಿವೆ. ಹಸುರಿನ ಛಾಯೆಯೇ ಇಲ್ಲದ ಭೂಮಿ, ಅಲ್ಲಲ್ಲಿ ಹಾಳು ಬಿದ್ದ ದೆವ್ವದ ಪೇಟೆಗಳು, ಮಿತಿಮೀರಿದ ಬಿಸಿಲು ಉಷ್ಣ ಸೇರಿ ಎದೆಯಲ್ಲಿ ನಡುಕ ಹುಟ್ಟಿಸುವಂತವು. ದೂರದಲ್ಲಿ ಆಗೊಂದು ಈಗೊಂದು ರೈಲು ಬಂಡಿ ತೆವಳಿಕೊಂಡು ಚೀನೀ ಕೂಲಿಯಾಳುಗಳು ಎಳೆದ ಹಳಿಗಳ ಮೇಲೆ ಹೋಗುವಾಗ ಮನಸ್ಸಿಗೆ ಅನಿಸುವುದು ಎಷ್ಟು ಮಂದಿ ಚೀನೀ ಕೂಲಿಯಾಳುಗಳು ಈ ಪ್ರಕೃತಿಯ ಉಗ್ರತೆಗೆ ಬಲಿಯಾಗಿರಬಹುದು ಎಂದು.
ಗ್ರಾಂಡ್ ಕ್ಯಾನಿಯನ್ ನ ಅಂಚಿನಲ್ಲಿ ನಿಂತವನಿಗೆ ಸಾಗಿ ಬಂದ ದಾರಿಯ ಕಲ್ಪನೆಯೇ ಬರದು. ಯಾಕೆಂದರೆ, ಅಂಚಿನ ಎದುರಿರುವ ಅದ್ಭುತ ಹಿಂದೆ ಕಂಡ ಭೂಮಿಯ ನಿರ್ದಯತೆಯನ್ನು ಮರೆಸುತ್ತದೆ. ಒಮ್ಮೆ ಕಣ್ಣು ಬಿಟ್ಟು ಇಡೀ ಈ ಕಮರಿಯನ್ನು ನೋಡಿದರೆ ನಮ್ಮ ಕಲ್ಪನೆಗಳನ್ನು ಹೇಗೂ ಹೊಸೆಯಬಹುದು. ಎರಡೂ ಬದಿಯ ಅಂಚುಗಳು ಈಗತಾನೆ ಸೀಳಿದ ಸುವರ್ಣ ಗಡ್ಡೆಯ ಬಣ್ಣದಿಂದ ಪದರು ಪದರಾಗಿ, ಮೋಡ ಕವಿದಿದ್ದರೂ ಆಗೊಮ್ಮೆ ಈಗೊಮ್ಮೆ ಸುರಿಯುವ ಬಿಸಿಲಿಗೆ ಕೆಂಪಗಿನ ಕೆಂಡದ ರಾಶಿಯಂತೆ ಕಾಣುತ್ತವೆ. ಬಂಡೆಗಳಿರುವ ಭಾಗ ಥಳಥಳನೆ ಚಿನ್ನದ ಗಟ್ಟಿಗಳಂತೆ ಮಿರುಗುತ್ತವೆ. ಕಮರಿಯ ಬಣ್ಣ ವೈಶಿಷ್ಟ್ಯದ ಎರಡು ಅಂಚುಗಳಿಗೆ ಸೇತುವೆಯನ್ನೇನೂ ನಿರ್ಮಿಸಿಲ್ಲ. ಕಾರಣ ಅಂಚುಗಳ ಮಧ್ಯೆ ಇರುವ ಅಗಾಧ ಅಂತರ. ಶತ ಶತ ಮಾನಗಳಿಂದ ಗಾಳಿ ಮಳೆಗೆ ಕೈ ಜೋಡಿಸಿದ ಕೊಲೆರಡೊ ನದಿ ಭೂಮಿಯನ್ನು ಕೊರೆದು ಕೊರೆದು ಈ ಕಮರಿಯನ್ನಾಗಿಸಿದೆ. ಅಂಚಿನ ಮೇಲಿನಿಂದ ಕೆಳಗೆ ನೋಡಿದಾಗ ಕೊಲೆರಡೊ ನದಿ ಕೇವಲ ಒಂದು ಅಂಕುಡೊಂಕಿನ ಬೆಳ್ಳಿ ಸರಿಗೆಯಂತೆ ಕಾಣುತ್ತದಷ್ಟೆ! ಹಾಗಾಗಿ ಈ ಕಮರಿ ಎಂದರೆ ಗಿರಿಕಂದರವೇ!
ಕಮರಿಯ ಮಧ್ಯೆಯೂ ಅಲ್ಲಲ್ಲಿ ಕುದುರು ಗುಡ್ಡಗಳಿವೆ. ನೋಡಲು ಪಾಳು ಬಿದ್ದ ಬೃಹದಾಕಾರದ ದೇವಾಲಯಗಳಂತೆಯೋ, ಪಗೋಡಗಳಂತೆಯೋ. ಗ್ರಾಂಡ್ ಕ್ಯಾನಿಯನ್ ನ ಅಂಚಿನ ಬೇರೆ ಬೇರೆ ಕಡೆ ನಿತ್ತು ನೋಡಿದರೆ ಬೇರೆ ಬೇರೆ ಆಕಾರ! ಮೇದರ್ ಪೋಯಿಂಟ್ ಕಮರಿಯ ಅಂಚಿನಲ್ಲೊಂದು ಜಾಗ. ಅಲ್ಲೊಂದು ದುರ್ಬೀನು ಇದೆ. ಅದನ್ನು ಬೇರೆ ಬೇರೆ ದಿಕ್ಕಿಗೆ ತಿರುಗಿಸ ಬಹುದು. ಅದರ ಪೀಠದಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ಯಾವ ಯಾವ ಕುದುರು ಗುಡ್ಡಗಳಿವೆ ಎಂದು ಸೂಚಿಸಲಾಗಿದೆ. ಹಾಗೇ ಗುಡ್ಡಗಳಿಗೆ ಹೆಸರು. ಝರಾಸ್ಟ್ರಿಯನ ದೇವಾಲಯ, ಪಗೋಡಾ, ಬುದ್ಧನ ದೇವಾಲಯ, ಐರಿಸಳ ಗುಡಿ, ಪಿರಮಿಡ್ ಇತ್ಯಾದಿ! ಅಂಚಿನುದ್ದಕ್ಕೂ ನಡೆದಾಗ ಗ್ರಾಂಡ್ ಕ್ಯಾನಿಯನ್ ನ ದೃಶ್ಯಗಳೇ ಬೇರೆ ಬೇರೆ. ಸೂಕ್ಷ್ಮವಾಗಿ ಗ್ರಾಂಡ್ ಕ್ಯಾನಿಯನ್ ನ ಅಂಚನ್ನು ಗಮನಿಸಿದರೆ ತೆಳ್ಳಗೆ ಹುಳ ಓಡಾಡಿದ ದಾರಿಯಂತೆ ಕಾಣುವುದು ಸಾಹಸೀ ಚಾರಣಿಗರ ದಾರಿ ಇರಬೇಕು. ಹೆಲಿಕಾಪ್ಟರಿನಲ್ಲಿ ಕುಳಿತು ಕೆಳ ನೋಡಿದರೆ ಇನ್ನೂ ವಿಚಿತ್ರಗಳು ಕಾಣಬಹುದು.
ಗ್ರಾಂಡ್ ಕ್ಯಾನಿಯನ್ ನ ಅಂಚಿನಲ್ಲಿ ನಿಂತಾಗ ನನಗೆ ನೆನಪಾದುದು ನೇಪಾಳದ ಗಂಡಕಿ ಕಮರಿ. ಎರಡೂ ಪ್ರಪಂಚದ ಅತ್ಯಂತ ಆಳ ಕಮರಿಗಳು. ಒಂದನ್ನು ಕೊಲೆರಡೊ ನದಿ ರೂಪಿಸಿದ್ದರೆ ಮತ್ತೊಂದನ್ನು ಗಂಡಕಿ ನದಿ ಕೆತ್ತಿದೆ. ಎರಡರ ತಳಗಳಲ್ಲೂ ಮೂಲ ನಿವಾಸಿಗಳು ಇಂದಿಗೂ ವಾಸಿಸುತ್ತಿದ್ದಾರೆ. ಎರಡೂ ಗಾಳಿ ನೀರಿನ ಕೊರೆತಕ್ಕೆ ಸಿಕ್ಕವೇ. ಬಣ್ಣದಲ್ಲಿ ಮಾತ್ರ ವ್ಯತ್ಯಾಸ. ಗ್ರಾಂಡ್ ಕ್ಯಾನಿಯನ್ ನ ಹೊಟ್ಟೆ ಇಟ್ಟಿಗೆ ಕೆಂಪಾದರೆ, ಗಂಡಕಿಯ ಹೊಟ್ಟೆ ಬೂದು ಬಡುಕ. ಗ್ರಾಂಡ್ ಕ್ಯಾನಿಯನ್ ನ ಆಕಡೆ ಈಕಡೆ ಸ್ವಲ್ಪವಾದರೂ ಮರಮಟ್ಟು ಕಂಡುಬಂದರೆ ಗಂಡಕಿಯ ತಲೆ ಬೋಳು. ನನ್ನ ಮಟ್ಟಿಗೆ ವ್ಯತ್ಯಾಸವಿಷ್ಟೆ, ಗ್ರಾಂಡ್ ಕ್ಯಾನಿಯನ್ ನಲ್ಲಿ ನಾನಿದ್ದುದು ಮೇಲೆ ಅಂಚಿನ ಬಾಯಿಯಲ್ಲಿ, ಗಂಡಕಿಯಲ್ಲ್ಲಿ ತಳದಲ್ಲಿ! ಭೂಮಿಯ ಕತೆಯ ಪುಟಗಳು ಹೇಗಿವೆ!
ಗ್ರಾಂಡ್ ಕ್ಯಾನಿಯನ್ ನಂತಹ ಕಮರಿಗಳು ಕೊರೆದು, ಕರಗಿ ಈಗಿನ ಆಕೃತಿಗೆ ಬರುವಾಗ ಎಷ್ಟು ತಲೆಮಾರಿನ ಮಾನವ ಜೀವಗಳು ಹುಟ್ಟಿ, ಬಾಳಿ, ಅಳಿದಿರಬೇಕು? ಈಗೇನೋ ಗ್ರಾಂಡ್ ಕ್ಯಾನಿಯನ್ ನ ಪಕ್ಕ ಹೋಪಿ ಹೌಸ್ ಎಂಬ ಮೂಲನಿವಾಸಿಗಳ ಕಲಾಕೃತಿಗಳ ಸಂಗ್ರಹಾಲಯ, ಮರದ ದಿಮ್ಮಿಗಳಿಂದಲೇ ಕಟ್ಟಿದ ಅತಿಥಿ ಗೃಹಗಳೆಲ್ಲಾ ಮೂಲವನ್ನು ನೆನಪಿಸಲು ಇದ್ದರೂ ಇಲ್ಲಿಯ ಮಾನವ ಮೂಲ ಇವು ತೋರಿಸುವುದಕ್ಕಿಂತಲೂ ಹಳೆಯದ್ದೇ ಆಗಿರಬೇಕು.
ಗ್ರಾಂಡ್ ಕ್ಯಾನಿಯನ್ ನಲ್ಲಿ ಒಂದು ನಮುನೆಯ ಆದಿವಾಸಿಗಳ ಛಾಯೆ. ಕಣಿವೆ ಇಡೀ ಹಬ್ಬಿದ್ದರೆ ಅಲ್ಲಿಗೆ ಬರುವ ದಾರಿಯ ಪುಟ್ಟು ಪೇಟೆ, ರಾಷ್ಟ್ರೀಯ ರಸ್ತೆ ೬೬ ರ ಪಕ್ಕದ್ದು, ವಿಲಿಯಮ್ ವಲಸೆಗಾರರ ವಸಾಹಿತಿನ ಛಾಯೆಯಿಂದ ಇದೆ. ತುಂಬ ಆತ್ಮೀಯ ಪೇಟೆಯ ಜನ, ಮನೆಗಳ ಮುಂದೆ ಹೊಟೇಲುಗಳ ಮುಂದೆ ಸಂಗೀತ ಕುಣ ತ, ತಮಾಷೆಗೆ ಹಿಂದಿನ ಪಿಸ್ತೂಲಿನ ದ್ವಂದ್ವ ಯುದ್ಧ, ಹತ್ತಿರವೇ ಅಲ್ಲಿಯೇ ಅಂತ್ಯಗೊಳ್ಳುವ ರೈಲು ಮಾರ್ಗ, ಸಂದುಗೊಂದುಗಳ ಕೇರಿಗಳೆಲ್ಲ ಶುಚಿಯಾಗಿದ್ದು ಮುಸ್ಸಂಜೆಯ ಬೆಳಕಿನಲ್ಲಿ ವಿಶಿಷ್ಟವಾಗಿ ಕೆಲವು ದಶಕಗಳ ಹಿಂದಿನ ನಿಧಾನಗತಿಯ ಜನ ಜೀವನವನ್ನು ಬಿಂಬಿಸುತ್ತದೆ. ಇಲ್ಲಿಯೇ ನಾವು ಒಂದು ರಾತ್ರಿ ಕಳೆದುದು. ನಾವು ಉಳಕೊಂಡ ಪುಟ್ಟ ಹೋಟೇಲಿನ ಕಿಟಕಿಯಿಂದ ದೂರದಲ್ಲಿ ಗ್ರಾಂಡ್ ಕ್ಯಾನಿಯನ್ನ ಮೇಲೆ ಗುಡುಗು, ಮಿಂಚು, ಮಳೆಯ ಜೀವಂತ ಚಿತ್ರಣ ನಡೆಯುವುದು ಕಾಣುತಿತ್ತು.
ಗ್ರಾಂಡ್ ಕ್ಯಾನಿಯನ್ ನಲ್ಲಿ ಇದ್ದಷ್ಟು ಸಮಯ, ಕಮರಿಯನ್ನು ನೋಡಿದಷ್ಟು ಹೊತ್ತು ನನಗನಿಸುತಿದ್ದದ್ದು ಭೂಮಿಯೇ ಅಷ್ಟಗಲ ಬಾಯಿ ತೆರೆದಿದೆಯೋ ಏನೊ ಎಂದು! ಕಮರಿಯಿಂದ ದೂರ ಸರಿದಂತೆ ಅದರ ಅಗಾಧತೆ, ಗಾಳಿ ನೀರಿನ ಸಾಹಸ ಮನಸ್ಸಿನಲ್ಲೇ ದೊಡ್ಡದಾಗಿ ಗುಡ್ಡಕಟ್ಟಲು ಸುರುವಾಗುತ್ತದೆ. ಕ್ಯಾಲಿಫೋರ್ನಿಯಾವನ್ನು ಹಿಂದೆ ಬಿಟ್ಟು, ಅರಿಝೋನ ದಾಟಿ ನೇವಡ ರಾಜ್ಯವನ್ನು ಪ್ರವೇಶಿಸಿದಾಗಲೂ ಮನಸ್ಸಲ್ಲಿ ಈ ಗುಡ್ಡ ಇದ್ದೇ ಇರುತ್ತದೆ. ಕೊಲೆರಡೊಗೇ ಅಡ್ಡಕಟ್ಟಿ ಹೂವರ್ ಅಣೆಕಟ್ಟನ್ನು ನೋಡುತ್ತಾ ದಾರಿಸವೆಸಿದರೂ ಈ ಭಾವನೆ ಅಳಿದು ಹೋಗುವುದಿಲ್ಲ.
ಮಧ್ಯದಲ್ಲಿ ಸ್ವಲ್ಪ ಬದಲಾವಣೆ, ಕಾರಿನಲ್ಲೇ ಅಷ್ಟೂ ದೂರ ಸಾಗಿದ್ದಷ್ಟೆ! ಒಂದಿಷ್ಟು ಕಾಲು ಚಾಚೋಣಂತೆ. ಸಂಜೆ ಗಂಟೆ ಏಳಕ್ಕೆ ತಲಪಿದರೂ ಲಾಸ್ ವೇಗಸ್ ನಲ್ಲಿ ಕುಲುಮೆಗೆ ಇಳಿದ ಭಾವನೆ. ತಣ್ಣಗಿದ್ದ ೬೦೦೦ ಎತ್ತರದ ಗ್ರಾಂಡ್ ಕ್ಯಾನಿಯನ್ ನಿಂದ ಬಂದಾಗ ಲಾಸ್ ವೇಗಸ್ ನಲ್ಲಿ ಸಂಜೆಯಾಗಿ ಕತ್ತಲಾದರೂ ೧೦೮ಫೆ ಉಷ್ಣ. ಆದರೆ ಲಾಸ್ ವೇಗಸ್ ಒಂದು ವಿಚಿತ್ರ ಲೋಕ. ವಿದ್ಯುತ್ ದೀಪಗಳ ಬೆಳಕಿನ ಆಟದ ಕೂಟ. ಉಡುಪಿಯ ಪರ್ಯಾಯ ಸಂಭ್ರಮವನ್ನು ಮೀರುವ ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ. ಯಾವುದೇ ವಿಶೇಷ ಸಮಾರಂಭವಲ್ಲ, ಲಾಸ್ ವೇಗಸ್ ನಲ್ಲಿ ಇದು ನಿತ್ಯದ ಜಾತ್ರೆ. ಲಾಸ್ ವೇಗಸ್‌ನ ಜೀವ ಕಳೆಗಟ್ಟುವುದೇ ರಾತ್ರಿಯಲ್ಲಿ. ವಿದ್ಯುತ್ ಎಷ್ಟು ಪೋಲು ಮಾಡಬಹುದೆಂಬುದಕ್ಕೆ ಒಳ್ಳೇ ಮಾದರಿ. ಆದರೆ ಅಂದೆನಲ್ಲ, ಮನೋರಂಜನೆ. ಜಗಮಗಿಸುವ ಬೀದಿ ಬೀದಿಗಳಲ್ಲಿ ವೈಭವೋಪೇತ ಜುಗಾರಿ ಅಡ್ಡೆಗಳು, ದೀಪಕ್ಕೆ ಮುಕುರುವ ಹುಳಗಳಂತೆ ಪ್ರಪಂಚದ ಎಲ್ಲಾ ಭಾಗಗಳಿಂದ ಜೂಜಿನ ಆಸಕ್ತರ ದಂಡು. ನನ್ನಂತಹವರೂ ಹಲವಾರು ಮಂದಿ ಗೌಜು ನೋಡಲು. ನೀರಿನ ಕಾರಂಜಿ, ಕಾಲುವೆ, ವೆನಿಸ್ ಪೇಟೆ, ಪಿರಮಿಡ್, ಸಮುದ್ರ ಕಿನಾರೆ, ಸರ್ಕಸ್ ಟೆಂಟು, ಎಲ್ಲಾ ತರಹದ ಆಕರ್ಷಣೆ ಜುಗಾರಿ ಆಡಲು. ಇವೆಲ್ಲಾ ಒಂದು ಹನಿ ನೀರಲ್ಲದ ಮರುಭೂಮಿಯ ಮಧ್ಯೆ! ಬೆಳಗ್ಗೆ ಎದ್ದು ನೋಡಿದರೆ ಎಲ್ಲಾ ರಸ್ತೆಗಳು ಬಿಕೋ ಅನ್ನುವವು. ಒಟ್ಟಾರೆ ಗ್ರಾಂಡ್ ಕ್ಯಾನಿಯನ್ ಮತ್ತು ಲಾಸ್ ವೇಗಸ್ಸನ್ನು ಒಟ್ಟಿಗೆ ವಿಚಾರಿಸಿಕೊಂಡರೆ ನಾನು ಹೇಳತೊಡಗಿದ ಕತೆ ಕಲಸು ಮೇಲೋಗರವಾದೀತು.
ಮೂರು ರಾಜ್ಯಗಳನ್ನು ಸುತ್ತಿ ಮತ್ತೆ ನನ್ನಾಕೆಯೊಂದಿಗೆ ಮಕ್ಕಳ ಮನೆಗೆ ಮರಳುವಾಗ ನಾನು ಹೇಳಲು ಉದ್ದೇಶಿಸಿದ ಕತೆ ಏನಾಯಿತೊ? ಭೂಮಿಯಂತು ಇದ್ದಲ್ಲೇ ಇದೆ ಅದರ ಕಕ್ಷದಲ್ಲೋ, ಅಕ್ಷದಲ್ಲೋ. ಹಾಗಾಗಿ ಇನ್ನಾರಾದರೂ ಚೆಂದದ ರೂಪಕೊಟ್ಟು ರಸವತ್ತಾಗಿ ಕತೆ ಹೇಳಿಯಾರು. ಕಾಯೋಣ!
Facebook ಕಾಮೆಂಟ್ಸ್