ಇಡೀ ದೇಶವೇ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮುಖದಲ್ಲಿರುವ ಶಾಂತತೆ, ಮಾತಿನಲ್ಲಿರುವ ಹಿಡಿತ, ಕಣ್ಣಿನಲ್ಲರುವ ಶೌರ್ಯವನ್ನು ಕೊಂಡಾಡುತ್ತಿದೆ. ಮಿಗ್-21ರ ವೇಗ ಎಷ್ಟು ಗೊತ್ತಾ? ಪ್ರತಿ ಗಂಟೆಗೆ 2,229 ಕಿಮೀ ದೂರ ತಲಪುವಷ್ಟು. ಅಂದರೆ ಅದು ಶಬ್ಧಕ್ಕಿಂತ ದುಪ್ಪಟ್ಟು ವೇಗದಲ್ಲಿ ಚಲಿಸುತ್ತದೆ. ಇಂತಹ ವಿಮಾನವನ್ನು ನಿಯಂತ್ರಿಸುವುದೇ ಕಷ್ಟ ಇನ್ನು ಅದರ ಜೊತೆ ವೈರಿಯ ಜೊತೆ ಕಾದಾಟ ಮಾಡುವ ಯೋಧನ ಬಗ್ಗೆ ಏನು ಹೇಳಬೇಕು, ಅವರ ಮಾನಸಿಕ ಶಕ್ತಿಯ ಮಿತಿಯನ್ನು ಅಳೆಯುವುದಾದರೂ ಹೇಗೆ? ಆ ವೇಗದಲ್ಲಿ ವಿಮಾನ, ಅದೂ ಮುಂಜಾನೆಯ ಮುಸುಕಿನಲ್ಲಿ, ವೈರಿ ದೇಶದ ಇನ್ನೊಂದು ವಿಮಾನವನ್ನು ಬೆನ್ನೆತ್ತಿ ಓಡುತ್ತಿರುವಾಗ ಯೋಧರ ರಕ್ತದೊತ್ತಡ ಎಷ್ಟಿರಬಹುದು? ಇಂದು ಒಂದು ಆ ವಿಮಾನವನ್ನು ಭಸ್ಮ ಮಾಡಬೇಕು, ಇಲ್ಲ ತಪ್ಪಿದರೆ ತಾನೇ ಭಸ್ಮವಾಗಬೇಕು ಆ ಛಲ, ರೋಷ. ಅಂದು ಆಗಿದ್ದು ಇದೇ ಸನ್ನಿವೇಶ. ಮಿಗ್-21 ವಿಮಾನ ಪಾಕಿಸ್ತಾನದ ಒಳಗೆ ನುಗ್ಗಿತ್ತು. ಈಗ ತಾನು ವೈರಿಯ ನೆಲದ ಮೇಲೆ ಹಾರಾಡುತ್ತಿದ್ದೇನೆ, ಗಡಿಯಾಚೆ ಬಂದಿದ್ದೇನೆ, ಕೆಳಗಡೆ ವೈರಿಗಳು ಬಂದೂಕು ಹಿಡಿದು ನಡೆದಾಡುವ ಹದ್ದಿನ ಹಾಗೆ ಕಾಯುತ್ತಿದ್ದಾರೆ, ತನ್ನ ವಿಮಾನದ ಇಂಜಿನ್ ಕೈ ಕೊಡುತ್ತಿದೆ, ಎಷ್ಟು ದೂರವಿದೆ ನನ್ನ ಮಾತೃಭೂಮಿ, ಎಷ್ಟು ಎತ್ತರದಲ್ಲಿ ನಾನಿದ್ದೇನೆ, ಮುಂದೇನು ಮಾಡಬೇಕು, ಕೆಳಗೆ ಬಿದ್ದರೆ ಏನಾಗಬಹುದು? ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಲು ಇರುವ ಕಾಲಾವಕಾಶ ಕೇವಲ ಎರಡರಿಂದ ಮೂರು ಸೆಕೆಂಡ್ ಮಾತ್ರ! ಒಂದು ಸಾಲನ್ನು ಓದಿ ಮುಗಿಸುವಷ್ಟು ಅಷ್ಟೇ. ಅಂತಹ ಸನ್ನಿವೇಶದಲ್ಲಿ ತನ್ನನ್ನು ತಾನೇ ಮಿಗ್-21ರಿಂದ ಇಜೆಕ್ಟ್ ಮಾಡಿಕೊಂಡರು ಅಭಿನಂದನ್. ಈ ಪರಿಸ್ಥಿಯಲ್ಲಿ ತನ್ನ ಜೊತೆ ತಂದಿದ್ದ ಎಲ್ಲ ಸೂಕ್ಷ್ಮವಾದ ಮಾಹಿತಿಯನ್ನೂ ನಾಶ ಮಾಡಿದರು, ಕೆಲವನ್ನು ಸುಟ್ಟಿದರೆ, ಇನ್ನು ಕೆಲವನ್ನು ನುಂಗಿದರು. ಸಾವಿರಾರು ಅಡಿ ಎತ್ತರದ ಆಕಾಶದಿಂದ ಭೂಮಿಗೆ ಜಿಗಿದು ಇಳಿದಾಗ ಮನುಷ್ಯನ ದೇಹದಲ್ಲಿ ಎಷ್ಟು ಶಕ್ತಿ ಉಳಿಯಬಹುದು. ಅಂತಹ ಒಂದು ಜೀವವನ್ನು ಪಾಕಿಸ್ಥಾನದ ಕ್ರೂರಿ ನಾಗರಿಕರು ಹಿಡಿದು ಥಳಿಸಿದರು. ಒಬ್ಬ ಯೋಧ, ಯುದ್ಧೋಪಕರಣ ಇಲ್ಲದೆ ಎಷ್ಟೊಂದು ಹೋರಾಟ ಮಾಡಬಲ್ಲ? ಆತನನ್ನು ಎಳೆದುಕೊಂಡು ಹೋದರು, ಹೊಡೆದರು, ಬಡಿದರು. ಕಮಾಂಡರ್ ಅಭಿನಂದನ್ ಅವರ ಮುಖ ಮೈಯೆಲ್ಲ ರಕ್ತ! ಅಷ್ಟರಲ್ಲಿಯೇ ಪಾಕಿಸ್ಥಾನದ ಸೈನ್ಯ ಬಂದು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ವೈರಿಗಳ ನಡುವೆ ಹುಲಿಯಂತೆ ನಿಂತಿದ್ದರು ನಮ್ಮ ವೀರ ಯೋಧ ಅಭಿನಂದನ್. ನನಗೆ ಅಲೆಕ್ಸಾಂಡರನ ದರಬಾರಿನಲ್ಲಿ ನಿಂತ ಪುರೂರವ ರಾಜನ ನೆನಪಾಯಿತು! ಪಾಕಿಸ್ಥಾನದ ಆರ್ಮಿಯ ಒಂದೊಂದು ಪ್ರಶ್ನೆಗೂ ಹಿಡಿತದಲ್ಲಿ, ಶಾಂತ ರೀತಿಯಲ್ಲಿ, ಗಾಂಭೀರ್ಯದಿಂದ ಉತ್ತರಿಸಿದರು. ಸಾವು ಎರಡು ಅಂಚು ದೂರದಲ್ಲಿದೆ ಎನ್ನುವಾಗ ಹೀಗೆ ಉತ್ತರ ಕೊಡಲು ಸರ್ವೇಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲ. ಇಂತಹ ದೃಢತೆ ಬರಬೇಕು ಅಂದರೆ ಆತ ಸೂಪರ್ ಹ್ಯೂಮನ್ ಆಗಿರಲೇಬೇಕು. ಈ ಹಿಮಾಲಯದೆತ್ತರದ ಧೈರ್ಯ, ಶೌರ್ಯ ಬೆಳೆದಿದ್ದು ಹೇಗೆ? ಯಾರು ಈ ಶೂರ ಅಭಿನಂದನ್ ಅವರ ನರನಾಡಿಯಲ್ಲಿ, ಮಿದುಳಿನಲ್ಲಿ ಇಷ್ಟೊಂದು ಶೌರ್ಯವನ್ನು ತುಂಬಿದ್ದು?
ಅಭಿನಂದನ್ ಅವರ ತಾಯಿ ಸಂಘರ್ಷ ವಲಯದಲ್ಲಿ ಸೇವೆ ಸಲ್ಲಿಸಿದ ವೈದ್ಯೆ!
ವೀರತೆ, ಶೌರ್ಯತೆ ಕಮಾಂಡರ್ ಅವರಿಗೆ ಆನುವಂಶಿಕವಾಗಿ ಬಂದಿದ್ದು. ಅವರ ರಕ್ತದಲ್ಲೇ ವೀರತೆ ಇದೆ. ಅಭಿನಂದನ್ ತಂದೆ ಎಸ್ ವರ್ಧಮಾನ್ ಸ್ವತಃ ವಿಂಗ್ ಕಮಾಂಡರ್ ಆಗಿ ದೇಶ ಸೇವೆ ಮಾಡಿದವರು. ಅಜ್ಜ ಸಹ ಎರಡನೆಯ ಮಹಾಯುದ್ಧದ ಸಮಯದಲ್ಲಿ ಏರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿದವರು. ಆದರೆ ಇದಕ್ಕಿಂತಲೂ ಹೆಚ್ಚಾಗಿ ನಮಗೆ ಗೊತ್ತಿರದ ವಿಷಯ ಅಂದರೆ ಅಭಿನಂದನ್ ಅವರಲ್ಲಿ ಶೌರ್ಯ, ಸಾಹಸವನ್ನು ತುಂಬಿದ್ದು ತಾಯಿ ಡಾ. ಶೋಭಾ ವರ್ಧಮಾನ್! ತಾಯಿಗೆ ತಕ್ಕ ಮಗ ಅಭಿನಂದನ್. ವಿಂಗ್ ಕಮಾಂಡರ್ ತಾಯಿ Doctors Without Borders (Médecins Sans Frontières) ಸಂಸ್ಥೆಯ ಭಾಗವಾಗಿದ್ದವರು. ಇವರು ದೇಶಾತೀತವಾಗಿ ಗಡಿಯಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಹೊತ್ತು ಸಂಘರ್ಷ ವಲಯದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ಹೌದು, ಇಲ್ಲಿಯವರೆಗೆ ಮೀಡಿಯಾ ಎದುರು ಬರದಿರಬಹುದು, ಅವರ ಬಗ್ಗೆ ಡಾಕ್ಯುಮೆಂಟರಿ ಆಗದೇ ಇರಬಹುದು ನಿಜ, ಪುಸ್ತಕ ಬರೆದಿಲ್ಲ, ಬಯಾಗ್ರಫಿ ಬಂದಿಲ್ಲ ಆದರೆ ಇಂದು ಅವರ ಬಗ್ಗೆ ನಾವೆಲ್ಲ ಅರಿಯಲೇ ಬೇಕು. ಶೋಭಾ ವರ್ಧಮಾನ್ ವೈದ್ಯಕೀಯ ಪದವಿಯನ್ನು ಮದ್ರಾಸ್ ಮೆಡಿಲ್ ಕಾಲೇಜಿನಲ್ಲಿ ಪಡೆದರು, ನಂತರ ಇಂಗ್ಲೆಂಡಿಗೆ ಹೋಗಿ ಅಲ್ಲಿಯ ರೋಯಾಲ್ ಕಾಲೇಜ್ ಆಫ್ ಸರ್ಜನ್ ನಲ್ಲಿ Anaesthesiology ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಲಿಂದಲೇ ಅವರ ಗಡಿಯಾಚೆಗಿನ ಸೇವೆಯ ಅಧ್ಯಾಯ ಶುರುವಾಗಿದ್ದು. ದೇಶದ ವೀರ ಕಣ್ಮಣಿ ಎನಿಸಿಕೊಂಡ ಅಭಿನಂದನ್ ಅವರ ತಾಯಿ ಡಾ. ಶೋಭಾ ಅವರು ಲಿಬೇರಿಯಾ, ಇರಾಕ್, ಇರಾನ್, ಐಮೋರಿ ಕೋಸ್ಟ್, Popua New Guinea, ಹೈಯಾಟಿ, ನೈಜೀರಿಯಾ ಹಾಗೂ ಲಾವೋಸ್ ನಂತಹ ಸಂಘರ್ಷ ವಲಯದಲ್ಲಿ ನಿಸ್ವಾರ್ಥ ಸೇವೆ ಮಾಡಿದವರು. ವಿಂಗ್ ಕಮಾಂಡರ್ ಅಭಿನಂದನ್ ಅವರಲ್ಲಿ ಸಂಘರ್ಷದ ನಡುವೆಯೂ ಆ ಚಾತುರ್ಯ, ಧೈರ್ಯ ಬರಬೇಕು ಅಂದರೆ ಅವರ ದೇಹದಲ್ಲಿ ಹರಿಯುತ್ತಿರುವ ಡಾ. ಶೋಭಾರ ರಕ್ತವೇ ಕಾರಣ, ಈ ದೇಶ ಡಾ. ಶೋಭಾ ಅವರಿಗೆ ಆಭಾರಿಯಾಗಿದೆ.
ಇರಾನ್ ಯುದ್ಧ ವಲಯದಲ್ಲಿ ಪ್ರಾಣಾಯಾಮ ಕಲಿಸಿದರು ಈ ತಾಯಿ!
ಹಳ್ಳಿಗೆ ಹೋಗಿ ಬಡವರ ಸೇವೆ ಮಾಡಲು ತಯಾರಿಲ್ಲದ ಕಾಲವಿದು, ಅಂತಹುದರಲ್ಲಿ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಾಕ್ಟರ್ ಏನು ಮಾಡಬಹುದು? ಆರಾಮಾಗಿ ಪೇಟೆಯಲ್ಲೊಂದು ದೊಡ್ಡ ನರ್ಸಿಂಗ್ ಹೋಮ್ ಕಟ್ಟಿಕೊಂಡು ಪ್ರಾಕ್ಟೀಸ್ ಮಾಡಬುದಿತ್ತಲ್ಲವೇ? ಬೇಕಾದಷ್ಟು ಹಣ ಮಾಡಬಹುದಿತ್ತಲ್ಲವೇ? ದೇಶವಿಡೀ ಚೈನ್ ಆಫ್ ಹಾಸ್ಪಿಟಲ್ ಕಟ್ಟಬಹುದಿತ್ತಲ್ಲವೇ? ಡಾ. ಶೋಭಾ ವರ್ಧಮಾನ ಎಲ್ಲವನ್ನೂ ಬದಿಗಿಟ್ಟು ಜಗತ್ತಿನ ಅತೀ ಸೂಕ್ಷ್ಮ ಸಂಘರ್ಷ ವಲಯಕ್ಕೆ ಹೋದರು, ಅಲ್ಲಿ ಹೋಗಿ ಗರ್ಭಿಣಿ ಮಹಿಳೆಯರ, ಶಿಶುಗಳ ಜೀವ ರಕ್ಷಣೆ ಮಾಡಿದರು. ಎಷ್ಟೇ ಯುದ್ಧ ಭೀತಿಯಿಂದ ಮುಸುಕಿದ ವಾತಾವರಣವಿರಲಿ, ಅವಶ್ಯಕತೆ ಬಂದಾಗಲೆಲ್ಲ ಹೋದರು. ಯುದ್ಧ ನಡೆಯುತ್ತಿರುವ ಜಾಗಕ್ಕೂ ಬಂದರು. ಗುಂಡಿನ ಚಕಮಕಿಯ ನಡುವೆ ಜೀವದ ಆಸೆಯ ಆಚೆ ನಿಂತು ಮಹಿಳೆಯರ, ಪುರುಷರ, ಹಸುಗೂಸುಗಳ ಜೀವ ಉಳಿಸಿದ್ದೂ ಇದೆ. 2010ರ ಹೈಯಾಟಿಯ ಭೂಕಂಪ, ಅದು ಮೂರು ಲಕ್ಷ ಜನರನ್ನು ನುಂಗಿತು. ಆ ಸಂಧರ್ಭದಲ್ಲಿ ಅಲ್ಲಿಗೆ ತೆರಳಿದರು. ಹೈಯಾಟಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತು. ನೈಜೀರಿಯಾಕ್ಕೆ ಕರೆ ಬಂತು. ನೈಜೀರಿಯಾ ಅಂತರ್ಯುದ್ಧದಲ್ಲಿ ತತ್ತರಿಸಿ ಹೋಗಿತ್ತು. ವಿಶ್ವಸಂಸ್ಥೆಯು ಮಧ್ಯಸ್ಥಿಕೆ ವಹಿಸಿ ಅಲ್ಲಿಯ ಸನ್ನಿವೇಶ ನಿಯಂತ್ರಣಕ್ಕೆ ತಂದಿತು. ಆದರೆ ಅಲ್ಲಿಯ ವೈದ್ಯಕೀಯ ಸೇವೆಯ ಅವಶ್ಯಕತೆ ಬಂತು. ಮಿಷನ್ ನೈಜೀರಿಯಾಯವನ್ನು ಕೈಲಿ ಎತ್ತಿಕೊಂಡರು. ಅಲ್ಲಿಯ ಬ್ಲಡ್ ಬ್ಯಾಂಕ್, ತುರ್ತು ಸೇವೆ, ಇವನ್ನೆಲ್ಲ ಮೆಡಿಕಲ್ ಡೈರೆಕ್ಟರ್ ಆಗಿ ನಿರ್ವಹಿಸಿದರು. ನಂತರ Papua New Guinea ಗೆ ಚೀಫ್ ಮೆಡಿಕಲ್ ಆಫಿಸರ್ ಆಗಿ ಹೋದರು. ಎರಡನೇಯ ಗಲ್ಫ್ ಯುದ್ಧದ ಸಮಯ ಅದು ಸುಲಮೇನಿಯಾಕ್ಕೆ ಹೋಗಲು ಸಿದ್ಧರಾದರು. ಮನೆ, ಮಕ್ಕಳು, ಆಸ್ತಿ, ಪಾಸ್ತಿ, ತನ್ನ ಆರೋಗ್ಯ ಎಲ್ಲದಕ್ಕೂ ಮಿಗಿಲಾಗಿ ಸೇವೆಯನ್ನೇ ಜೀವನದ ಗುರಿಯಾಗಿ ಆರಾಧಿಸಿದರು. ಇರಾನಿನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಒಂದು ಸಂದರ್ಭದಲ್ಲಿ ಜನರ ಆರೋಗ್ಯ ಸುಧಾರಣೆಗೆ ಪ್ರಾಣಾಯಾಮ ಮಾಡಲು ಪ್ರಚೋದಿಸಿದರು. ಅಲ್ಲಿದ್ದ ಜನರಿಗೆ ಯೋಗ, ಪ್ರಾಣಾಯಾಮ ಹೇಳಿಕೊಟ್ಟರು. ಇವರು ಸೇವೆ ಸಲ್ಲಿಸುವ ಸಮಯದಲ್ಲಿ ಅದೆಷ್ಟು ಬಾರಿ ಸಾವಿನ ಜೊತೆ ಪಾರಾಗಿ ಬಂದಿದ್ದಾರೆಯೋ ಅವರೇ ಹೇಳಬಲ್ಲರು. ಒಮ್ಮೆ ಇರಾಕಿನಲ್ಲಿ ಕಾರ್ಯನಿರತರಾಗಿದ್ದಾಗ ಪಕ್ಕದಲ್ಲಿಯೇ ಬಾಂಬ್ ಸ್ಫೋಟವಾಗಿತ್ತಂತೆ!
(ಮೂಲ ಮಾಹಿತಿ :- ನಾರ್ಥಈಸ್ಟ್ ಪೋಸ್ಟ್)
ಮನುಷ್ಯ ರೂಪದ ದೇವತೆ!
ಇಷ್ಟೆಲ್ಲಾ ಸೇವೆ ಮಾಡಿ ಅವರಿಗೆ ಸಿಕ್ಕಿದ್ದಾದರೂ ಏನು? ಹಣ, ಸಂಪತ್ತು, ಸವಲತ್ತು, ಪಬ್ಲಿಸಿಟಿ, ಪವರ್, ಏನೂ ಅಲ್ಲ. ಜನರ ಆಶೀರ್ವಾದ. ಮಕ್ಕಳ, ಮಹಿಳೆಯರ, ಅಬಲೆಯರ, ಅಸಹಾಯಕರ ಮನಃಪೂರ್ವಕವಾದ ಹಾರೈಕೆ. ಇವರಿಂದ ಸಾವಿರಾರು ಜನರು ಪುನರ್ಜನ್ಮ ಪಡೆದಿದ್ದಾರೆ. ಅವರ ಆಶೀರ್ವಾದಕ್ಕಿಂತ ಹೆಚ್ಚು ಇನ್ನೇನಿದೆ?
ಇದೇ ಇಂದು ಅವರ ಮಗನನ್ನು ವೈರಿಯ ಪಡೆಯಿಂದ ಸುರಕ್ಷಿತವಾಗಿ ವಾಪಸ್ಸಾಗಿ ಕರೆತಂದಿದೆ. ಡಾ. ಶೋಭಾ ವರ್ಧಮಾನ್ ಜನಸೇವೆಯನ್ನೇ ಬದುಕಿನ ಅಂಗವಾಗಿ, ಗಡಿಯಾಚೆಗೂ ಹೋಗಿ, ದೇಶ, ಜನ, ಜಾತಿ, ಲಿಂಗಭೇದವಿಲ್ಲದೆ ಚಿಕಿತ್ಸೆ ನೀಡುತ್ತ ಬದುಕಿದರು. ಯಾವುದನ್ನೂ ಬಯಸದೇ, ಪ್ರತಿಫಲಾಕ್ಷೆ ಇಡದೆ, ಸಂಘರ್ಷ ವಲಯದಲ್ಲಿ, ಯುದ್ಧ ಪೀಡಿತ ಪ್ರದೇಶದಲ್ಲಿ, ವೀರತೆ ಮೆರೆದು, ಜೀವ ಬೆದರಿಕೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡಿದ ಇವರಿಗೆ ಮನುಷ್ಯ ರೂಪದಲ್ಲಿಯ ದೇವತೆ ಎನ್ನಲೇ ಬೇಕು ಅಲ್ಲವೇ!
Facebook ಕಾಮೆಂಟ್ಸ್