X

ಜೆಮ್ ಶೋ

ಊರಿಂದ ಹೊರಡುವ ಮುಂಚೆಯೇ ಸೊಸೆ `ನಿಮ್ಮನ್ನು ಜೆಮ್ ಶೋಗೆ ಕರೆದುಕೊಂಡು ಹೋಗುತ್ತೇನೆ. ಟಿಕೆಟ್ ಎಲ್ಲಾ ಕಾದಿರಿಸಿದ್ದೇನೆ’ ಎಂದಿದ್ದಳು. ಮುಂದಾಗಿ ದೊರೆತ ಮಾಹಿತಿಯಿಂದ ನನ್ನಾಕೆಗೆ ಖುಶಿಯೇ. ಅದಕ್ಕೇ ಮೊನ್ನೆ ಸಾಂತಾ ಮೋನಿಕಾಕ್ಕೆ ಮುತ್ತು ರತ್ನಗಳ ಮೇಳಕ್ಕೆ ಹೊರಡುವಾಗ ಯಾವ ತಕರಾರಿಲ್ಲದೆ ಹೊರಟುದು. ಇಲ್ಲಿಯ ಬಿಸಿಲು, ಚಳಿ ಎರಡೂ ಆಕೆಗೆ ಅತಿರೇಖವೇ ಆಗಿ ಹೊರಗೆ ಹೊರಡುವುದೆಂದರೆ ಆಕೆಗೆ ಒಂದು ವಿಧದಲ್ಲಿ ಶಿಕ್ಷೆಯೇ. ಅಂತವಳು ಈ ಮೇಳಕ್ಕೆ ಹೊರಟಳೆಂದರೆ ಆಕರ್ಷಣೆ ಎಷ್ಟು ಇರಬೇಕು?

ಸಾಂತಾ ಮೋನಿಕಕ್ಕೆ ಹೋಗುವುದೆ ಕಷ್ಟದ ಕೆಲಸ. ಹೋದ ಮೇಲೆ ಕಾರು ನಿಲ್ಲಿಸುವುದು ಇನ್ನೂ ಸಮಸ್ಯೆಯದು. ಕಾರಣ ಗೊತ್ತಿದ್ದದ್ದೆ. ಈ ಊರಿನ ರಸ್ತೆಗಳಲ್ಲಿ ಕಾರುಗಳ ಪ್ರವಾಹ, ನಿಲ್ಲುವಲ್ಲಿ ಕಾರುಗಳ ಕೆರೆ. ಇವುಗಳಲ್ಲಿ ಗೆದ್ದರೆ ದಿನದ ಕೆಲಸದಲ್ಲಿ ಅರ್ಧಾಂಶ ಆದ ಹಾಗೆ. ಈ ಅರ್ಧಾಂಶ ಕೆಲಸ ಸಾಧಿಸಿ ಟಿಕೆಟ್ ಖರೀದಿಸುವ ಜಾಗಕ್ಕೆ ಬಂದರೆ ಅಲ್ಲಿ ಯಾರೂ ಇಲ್ಲ. ನನ್ನ ಸೊಸೆ ಆಕಡೆ ಈಕಡೆ ನೋಡುತಿದ್ದ ಹಾಗೆ ಕಪ್ಪನೆಯ ಧಡೂತಿ ಹೆಂಗಸೊಬ್ಬಳು ಟಿಕೆಟ್ ಕೌಂಟರಿಗೆ ಬಂದಳು. ನಾವು ಖರೀದಿಸಿದ ಟಿಕೆಟಿನ ಸಂಖ್ಯೆಯನ್ನು ಆಕೆಯಲ್ಲಿ ಹೇಳಿದರೆ ‘ಅದೆಲ್ಲ ಕೂಡದು, ನಿಮ್ಮ ಟಿಕೆಟಿನ ದಾಖಲೆ ಬೇಕೇ ಬೇಕು’ ಎಂದು ಹೇಳುತ್ತ ನಾಲ್ಕು ಕೆಂಪು ಕಾರ್ಡುಗಳನ್ನು ಕೊಟ್ಟಳು. ಇವನ್ನು ಹಿಡಕೊಂಡು ಪ್ರದರ್ಶನದ ಗೇಟಿನಲ್ಲಿ ಕೊಟ್ಟು ಹೋದ ಮೇಲೇ ನಮಗೆ ಗೊತ್ತಾದುದು ಯಾವ ಟಿಕೆಟ್ಟೂ ಅಗತ್ಯವಿಲ್ಲ ಎಂದು. ಅಂತೂ ಟಿಕೆಟ್ಟಿಗೆ ಕೊಟ್ಟ ಹಣ ದಂಡ!

ಮಗ ತಮಾಷೆಗೆ ಅಂದಿದ್ದ ‘ವಿಜಯನಗರ ಸಾಮ್ರಾಜ್ಯದ ಮುತ್ತು, ರತ್ನ ಹರಡಿದ ಬೀದಿಗಳ ಚಿತ್ರ ಇವತ್ತು ನೋಡುತ್ತೀರಿ.’ ದೊಡ್ಡ ಸರ್ಕಸ್ ಗುಡಾರದಂತಹ ಗುಡಾರ. ಒಳಗೆ ಸಾಲುಸಾಲಾಗಿ ಅಂಗಡಿಗಳು. ಹಿನ್ನಲೆಯಲ್ಲಿ ಕರಿ ಬಟ್ಟೆ, ಅಂಗಡಿಯ ಹೆಸರು, ಸಂಖ್ಯೆ ನಮೂದಿಸಿದ್ದರು. ಎದುರು ಬಿಳಿ ಬಟ್ಟೆಯ ಮೇಲೆ ಮುತ್ತು, ರತ್ನ, ಬೆಲೆಬಾಳುವ ಕಲ್ಲುಗಳು ಬಿಡುಬಿಡುವಾಗಿ, ಸರವಾಗಿ. ನಡೆಯ ಎರಡೂ ಬದಿಯಲ್ಲಿ ಸರಕುಗಳ ಮೇಲೆ ಕಣ್ಣುಕುಕ್ಕುವ ವಿದ್ಯುತ್ ಬೆಳಕು. ಒಳ ಹೊಕ್ಕವನಿಗೆ ಬೆಳಕು, ಹೊಳೆತಗಳ ಚಮತ್ಕಾರದಿಂದ ತಬ್ಬಿಬ್ಬಾಗುವುದೇ. ನಮ್ಮ ತಂಡದ ಸ್ಥಿತಿಯೂ ಅದೇ. ಬೀದಿಯಲ್ಲಲ್ಲದಿದ್ದರೂ ನಡೆಯ ಎರಡೂ ಬದಿ ರತ್ನ, ವಜ್ರ ವೈಢೂರ‍್ಯ ಹರಡಿತ್ತು.

ನನ್ನಾಕೆ ಮತ್ತು ನನ್ನ ಸೊಸೆ ಮೊದಲೇ ಕಟ್ಟುನಿಟ್ಟಾಗಿ ಹೇಳಿದ್ದರು ’ನೋಡಿ, ನಾವು ರತ್ನಗಳನ್ನು ಪರಿಶೀಲಿಸುವಾಗ, ನೋಡುವಾಗ, ಆಯ್ಕೆ ಮಾಡುವಾಗ ತಡವಾಯಿತೆಂದು ನಮ್ಮ ತಲೆ ತಿನ್ನಬಾರದು, ಇವತ್ತು ನಮ್ಮದೇ ದಿನ’ ಎಂದು. ಹೇಗೂ ಎಲ್ಲಾ ಅಂಗಡಿಗಳನ್ನು ಸುತ್ತಿ, ನೋಡಿಯಾಗುವಾಗ ಸಮಯ ಸಾಗುತ್ತದಲ್ಲ ಎಂದು ಒಪ್ಪಿಕೊಂಡಿದ್ದೆವು. ಒಂದೆರಡು ಅಂಗಡಿಗಳಿಗೆ ಅತ್ತೆಸೊಸೆಯರ ಜತೆ ಇದ್ದು ನಂತರ ನಾನೂ ಮಗನೂ ನಮ್ಮ ಪಾಡಿಗೆ ಅಂಗಡಿ ಸುತ್ತಲು ಸುರು ಮಾಡಿದೆವು.

ಅಮೆರಿಕೆಯ ವಿವಿಧ ಭಾಗಗಳ ಮುತ್ತುರತ್ನ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಗಳಲ್ಲಿ ಬೆಲೆಬಾಳುವ ಹರಳುಗಳನ್ನು ರಾಶಿ ಹಾಕಿದ್ದರು. ಕೆಲವು ಅಂಗಡಿಗಳಲ್ಲಿ ಮುತ್ತುರತ್ನ ಖಚಿತ ಆಭರಣಗಳೂ ಲಭ್ಯ. ಚಿನ್ನ, ಬೆಳ್ಳಿಯಲ್ಲಿ ಕಟ್ಟಿದ ರತ್ನಗಳ ಆಭರಣಗಳು, ಒಂದು ಗ್ರಾಂ ಚಿನ್ನದ ತಗಡಿನ ರತ್ನಾಭರಣಗಳು ವಿವಿಧ ರೀತಿಯವು. ಇವೆಲ್ಲಕ್ಕಿಂತಲೂ ಬಿಡಿ ರತ್ನಗಳು, ಮಾಲೆಗಳು ರಾಶಿ ರಾಶಿ. ಕೆಲವು ಕಡೆ ಗಾಜಿನ ಮಣಿಗಳೂ.  ನಮಗೆ ನಮ್ಮ ತಿಳುವಳಿಕೆಗೆ ಗಾಜಿನ ಮಣಿ, ರತ್ನ ಎಲ್ಲಾ ಒಂದೇ. ಕೆಲವು ಅಂಗಡಿಗಳಲ್ಲಿ ಆಕಾರ ಕೊಡದ ಬೆಲೆ ಬಾಳುವ ಕಲ್ಲುಗಳನ್ನು ನೀರಿನ ತಟ್ಟೆಯಲ್ಲಿ ಇಟ್ಟಿದ್ದರು. ಯಾಕೆಂದು ವಿಚಾರಿಸಿದಾಗ ’ಅವುಗಳ ಗುಣಮಟ್ಟ ಗೊತ್ತಾಗುವುದೇ ನೀರಿನಲ್ಲಿದ್ದಾಗ’ ಎಂದುತ್ತರ. ರತ್ನಗಳು ನೀರಲ್ಲಿದ್ದಾಗ ಬಿರುಕು ಬಿಡುವುದಿಲ್ಲವಂತೆ ಎಂದು ಮತ್ತೊಬ್ಬ ಅಂಗಡಿಯವನ ಉತ್ತರ. ಈ ಮಧ್ಯೆ ಹಾಗೊಮ್ಮೆ ತಿರುಗಿ ಅತ್ತೆ ಸೊಸೆಯರು ಏನು ಮಾಡುತ್ತಾರೆಂದು ನೋಡ ಹೋದೆವು. ಯಾವುದೋ ಮಳಿಗೆಯಲ್ಲಿ ರತ್ನ ಪರಿಶೀಲಿಸುವುದರಲ್ಲಿ ಮಗ್ನರಾಗಿದ್ದರು. ಇನ್ನೂ ಯಾವುದನ್ನೂ ಆಯ್ದುಕೊಂಡಿರಲಿಲ್ಲ.  

ನಾವು ಅಂಗಡಿ ಅಂಗಡಿ ತಿರುಗುತ್ತಿದ್ದಾಗ ಗಮನಕ್ಕೆ ಬಂದುದು ಮೇಳಕ್ಕೆ ಜಮಾಯಿಸಿದ ಜನ. ಒಮ್ಮೆ ನೋಡಿದರೆ ಭಾರತದ ಮಾರುಕಟ್ಟೆಗೆ ವಿದೇಶೀಯರೂ ಬಂದಿದ್ದಾರೋ ಎಂದು. ಅಂಗಡಿಗಳಲ್ಲಿ ಹೆಚ್ಚಿನವು ಭಾರತೀಯ ಮೂಲದ ಮಾರ್ವಾಡಿ, ಸರ್ದಾರ್ಜಿ, ಚೆಟ್ಟಿಯಾರ್’ಗಳದ್ದೇ. ಗಿರಾಕಿಗಳೂ ಅಷ್ಟೆ. ಬಣ್ಣಬಣ್ಣದ ಚೂಡಿದಾರ. ಸೀರೆ ಕುಪ್ಪಸಗಳೇ ಹೆಚ್ಚಿಗೆ ಕಾಣುವುದು. ತಪ್ಪಿದರೆ ಹಳದಿ ಬಣ್ಣದ ಮಂದಿ. ಅಂತೂ ಏಷ್ಯಾ ಖಂಡ ಮೂಲದವರದ್ದೇ ಕಾರುಬಾರು. ಅಮೆರಿಕೆಯ ಕರಿ ಬಿಳಿ ಮಂದಿ ಕಡಿಮೆಯೇ. ಹೆಚ್ಚಿನವರು ಮಧ್ಯವಯಸ್ಕರಾಗಿದ್ದು ’ಯುವ’ ವಯಸ್ಸಿನವರು ಇಲ್ಲವೆಂದೇ ಹೇಳಬೇಕು. ಒಂದು ವೇಳೆ ‘ಜೆಮ್’ ಕೊಂಡುಕೊಳ್ಳುವುದಿದ್ದರೆ  ತಮ್ಮ ಅನುಭವ ಸಾಲದೆ ಟೋಪಿ ಹಾಕಿಸಿಕೊಳ್ಳುವುದು ಬೇಡವೆಂದೊ ಏನೋ. ಇರಬಹುದು, ಕರಿ ಬಿಳಿಯ ಹಿರಿಯ ಮಹಿಳೆಯರು ದೊಡ್ಡದೊಡ್ಡ ಚಾಕಲೇಟು ಗಾತ್ರದ ಹರಳುಗಳನ್ನೇ ಆಯ್ದುಕೊಳ್ಳುತ್ತಿದ್ದರು!

ಮತ್ತೊಮ್ಮೆ ಅತ್ತೆಸೊಸೆಯರ ವ್ಯಾಪಾರದ ಪ್ರಗತಿ ಕಾಣಲು ಹೋದೆವು. ಯಾವುದೂ ಕಣ್ಣಿಗೆ ಮೆಚ್ಚಿಗೆ ಯಾದುದು ಬೆಲೆಗೆ ಮೆಚ್ಚದೆಯೊ, ಅಥವಾ ಬೆಲೆಗೆ ಮೆಚ್ಚಿಗೆಯಾದುದು ಕಣ್ಣಿಗೆ ಮೆಚ್ಚಿಗೆಯಾಗದೆಯೊ, ಆಕಾರ ಸರಿಕಾಣದೆ, ಬಣ್ಣ ಸರಿಕಾಣದೆ ಯಾವುದೂ ಕುದುರದೆ ರತ್ನಗಳ ಪರಿಶೀಲನೆ ನಡೆದೇ ಇತ್ತು. ನಾವು ಎರಡನೇ ಬಾರಿ ಅವರನ್ನು ನೋಡ ಬಂದರೂ ಆಗಲೇ ನಾವು ಎಷ್ಟು ಕಿಲೋ ಮೀಟರ್ ನಡೆದಿದ್ದೆವೋ. ನನ್ನ ಮತ್ತು ಮಗನ ಕಾಲುಗಳು ಆಗಲೇ ದೂರು ಹೇಳ ಶುರುಮಾಡಿದ್ದವು. ಹೊಟ್ಟೆಗಳೂ ಹಾಗೇ ಸಣ್ಣಗೆ ತಾಳಹಾಕಲು ಶುರುಮಾಡಿದ್ದವು.

ಮೂರನೆ ಬಾರಿ ಬರುವ ಸಂದರ್ಭ ಕಲ್ಪಿಸಿಕೊಳ್ಳಲಿಲ್ಲ. ನಾವು ಜತೆಗಿದ್ದಾಗಾದರೂ, ನಮ್ಮ ಪಾಡು ನೋಡಿಯಾದರೂ ಅವರ ರತ್ನ ವ್ಯಾಪಾರ ಕುದುರಬಹುದೆಂದು. ನಾವೂ ಅವರ ಜತೆಗೆ ಅಂಗಡಿ ಸುತ್ತಲು ಶುರುಮಾಡಿದೆವು. ಒಂದು ಅನುಕೂಲವಾಗಿತ್ತು. ದೊಡ್ಡ ಡೇರೆಯೊಳಗಿದ್ದ ಕಾರಣ ಬಿಸಿಲ ಹೊಡೆತವಿರಲಿಲ್ಲ. ನೀರಿನ ಬಾಟಲಿ ಜತೆಗಿದ್ದು ಧೈರ್ಯವಾಗಿದ್ದೆವು, ತಿರುಗಾಡಿದೆವು. ರತ್ನಗಳ ಪರಿಶೀಲನೆಯ ಭರದಲ್ಲಿ ಒಮ್ಮೆ ಹೋದ ಅಂಗಡಿಗೆ ಮರಳಿ ಭೇಟಿ ಕೊಟ್ಟರೂ ಅಂಗಡಿಯವರು ನಗುಮೊಗದಿಂದಲೇ ಸ್ವಾಗತಿಸಿ ತಮ್ಮ ಒಡವೆಗಳನ್ನು ತೋರಿಸುತ್ತಿದ್ದರು. ಮನಸ್ಸಿನಲ್ಲೇ ಅವರ ತಾಳ್ಮೆಗೆ ಮೆಚ್ಚಿದೆ. (ತಾಳ್ಮೆ ಏನು ಬಂತು? ಹೇಗೂ ಬಂದವರು ಖೆಡ್ಡಾಕ್ಕೆ ಬಿದ್ದೇ ಬೀಳ್ತಾರೆಂದು ಖಾತ್ರಿ!) ಆದರೆ ನನ್ನ ಮಗನೇನೋ ಹಿಮಗಲ್ಲಿನಂತಿದ್ದರೂ ನಾನು ಕರಗತೊಡಗಿದೆ (ಅಸಹನೆಯ ಬಿಸಿಗೆ!) ಕಾಲು ಸೋಲತೊಡಗಿತ್ತು. ಅತ್ತೆ ಸೊಸೆಯರು ಚೌಕಾಶಿ ಮಾಡುತ್ತಿದ್ದ ಅಂಗಡಿಯ ಎದುರಂಗಡಿಯಲ್ಲಿ ಖಾಲಿ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡೆ. ಎಲ್ಲಿದ್ದವಳೋ ಅಂಗಡಿಯ ಒಡತಿ ನಗುತ್ತಾ ಬಂದು ’ನನ್ನ ಅಂಗಡಿಯನ್ನು ವಹಿಸಿಕೊಳ್ಳುತ್ತೀರ?’ ಅಂದಳು. ಮುಜುಗರಗೊಂಡು ನಾನು ‘ಕ್ಷಮಿಸಿ, ಕಾಲು ಸೋತಿತ್ತು ಹಾಗೆ ಕುಳಿತುಕೊಂಡೆ’ ಎನ್ನುತ್ತಾ ಎದ್ದು ನನ್ನ ಪಂಗಡ ಸೇರಿಕೊಂಡೆ.

ಹಾಗೂ ಹೀಗೂ ವ್ಯವಹಾರ ಕುದುರಿಸಿ, ಖರೀದಿಸಿ ಹೊರಟಾಗ ಪಾರಾದೆ ಅಂದುಕೊಂಡೆ. ‘ಮಾವ, ಇವತ್ತು ನನ್ನ ಮತ್ತು ಅತ್ತೆಯವರ ಶಾಪಿಂಗ್ ಮಧ್ಯೆ ಕೇಳಿದ್ದಕ್ಕೆಲ್ಲ ‘ಹೌದು’ ಎಂದು ವ್ಯಾಪಾರ ಬೇಗ ಮುಗಿಸುವ ಯತ್ನ ಮಾಡಬೇಡಿ’ ಎಂದು ಸೊಸೆ ಮೊದಲೇ ಎಚ್ಚರಿಕೆ ನೀಡಿದ್ದರಿಂದ ಏನೂ ಮಾತನಾಡದೆ ‘ಜೆಮ್ ಶೊ’ ದ ಡೇರೆಯಿಂದ ನಿಧಾನವಾಗಿ ಕಾಲೆಳೆಯುತ್ತ ಬಂದೆ. ಪ್ರಾಯೋಜಕರು ಅಲ್ಲೆಲ್ಲಾದರೂ ಸಲಹೆ ಸೂಚನೆಗಳು ಎಂದು ಕೇಳಿದ್ದರೆ ಖಂಡಿತವಾಗಿ ಕೊಡುತ್ತಿದ್ದೆ. ’ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚು, ಕುರ್ಚಿ. ಹಾಗೇ ನೋಡಲು ವ್ಯಾಪಾರ ಮಾಡಲು ಬಂದ ಮಹಿಳೆಯರ ಗಂಡಂದಿರಿಗೆ ಮಾತ್ರ’ ಎಂದು ವ್ಯವಸ್ಥೆ ಮಾಡಬೇಕೆಂದು.

ಡೇರೆಯ ಗೇಟಿನಿಂದ ಹೊರಬರುವಾಗ ಸೊಸೆ ಇನ್ನೊಂದು ‘ಜೆಮ್ ಶೋ’ದ ಪುಕ್ಕಟೆ ಟಿಕೆಟ್ ಗಿಟ್ಟಿಸಿಕೊಂಡು ಖುಶಿಯಿಂದ ಹೊರಬಂದಳು. ‘ಹೇಗೂ ಆ ಪ್ರದರ್ಶನಕ್ಕೆ ನಾವು ಇರುವುದಿಲ್ಲವಲ್ಲ’ ಎಂದು ನಿರಾಳದ ಉಸಿರುಬಿಟ್ಟುಕೊಂಡೆ.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post