X

ಸಾಂತ್ವನ

ಆ ದಿನ

ನನಗೆ ಅಳು ಒಂದೇ ಸಮನಾಗಿ ಬರುತ್ತಿತ್ತು|

ತಡೆಯಲಾರದ ಅಳು, ಬಿಕ್ಕು, ತೊಟ್ಟುತೊಟ್ಟಾಗಿ ಹರಿಯುವ ಕಣ್ಣೀರು

ಹೊರಬರುವ ಕಣ್ಣೀರ ಸೆರಗ ತುದಿಯಿಂದ ಒರೆಸಲಾಗದ ಅಸಹಾಯಕ ನಾನು||

 

ಹೋಗಿ ಅಮ್ಮನ ತಬ್ಬಿದೆ; ಅಚ್ಚರಿಗೊಂಡು ಕೈಹಿಡಿದಳು

ಕೆಲವೇ ಕ್ಷಣ, ನೀನೊಬ್ಬ ಹುಚ್ಚಿ, ಪಕ್ಕಕ್ಕೆ ಸರಿಸಿದಳು|

ಅಪ್ಪನ ಹಿಡಿದೆ, ಏನಾಯ್ತು ಮಗಳೇ? ಕೇಳಿದ

ಕೆಲವೇ ಗಳಿಗೆ, ಅವನ ಕೈ ನನ್ನನ್ನು ದೂರ ಸರಿಸಿತ್ತು||

 

ತಡೆಯಲಾರದ ಕಣ್ಣೀರು ಹೊರಬರುತ್ತಲೇ ಇತ್ತು

ಪತಿಯ ಬಳಿ ಹೋಗಿ ತಬ್ಬಿದೆ ನನ್ನ ಕಣ್ಣು ಆತನನ್ನು ಬೇಡಿತ್ತು|

ಕಣ್ಣೀರ ಒರೆಸು, ಪತಿ ತಬ್ಬಿಬ್ಬಾದ, ಗಟ್ಟಿಯಾಗಿ ತಬ್ಬಿದ, ಸಮಾಧಾನಿಸಿದ

ಕಣ್ಣೀರು ಇನ್ನೂ ಹರಿಯುತ್ತಲೇ ಇತ್ತು, ಆತನ ಕೈ ನನ್ನ ದೂರ ಸರಿಸಿತ್ತು||

 

ಹರಿವ ಕಣ್ಣೀರ ತಡೆಯಲಾರದಾದೆ, ಮಕ್ಕಳ ಬಳಿ ಹೋದೆ ಬಾಚಿ ತಬ್ಬಿದರು

ತಲೆನೇವರಿಸಿದರು, ಕೆಲವೇ ಗಳಿಗೆ ಕೈ ನನ್ನ ಬಿಟ್ಟಿತ್ತು|

ಕಣ್ಣೀರು ಹೊರಬರುತ್ತಲೇ ಇತ್ತು, ಸೆರಗಚುಂಗು ಒರೆಸುತ್ತಲೇ ಇತ್ತು

ಕಾಲು ಕರೆದೊಯ್ದಿತ್ತು ಬಾಲ್ಯಸಖ ಬೆಟ್ಟದಾಚೆ ಅಂಚಿನ ಮರದ ಬಳಿಗೆ

 

ಹೋಗಿ ತಬ್ಬಿದೆ, ಒರೆಸು ನನ್ನ ಕಣ್ಣೀರ

ಕೇಳಿದೆ, ತಬ್ಬಿದೆ, ಇನ್ನಷ್ಟು ಮತ್ತಷ್ಟು ಬಿಗಿಬಿಗಿಯಾಗಿ|

ಕಣ್ಣೀರು ಹರಿಯುತ್ತಲೇ ಇತ್ತು, ಸಮಯ ಕಳೆಯುತ್ತಿತ್ತು

ಮರ ನನ್ನ ದೂರ ಸರಿಸಲೇ ಇಲ್ಲ||

 

ತಾಸುತಾಸು ತಬ್ಬಿದ ಮರಕ್ಕೆ ನಾನು ಬೇಸರವಾಗಲಿಲ್ಲ

ಹರಿವ ಕಣ್ಣೀರು ಮರದ ಕಾಂಡ ತೋಯಿಸಿತು|

ಒದ್ದೆಯಾದ ಕಾಂಡ, ಹಸಿಯಾದ ಹಸಿರೆಲೆ ಕಣ್ಣೀರ ನುಂಗಿದ ತಾಯಿಬೇರು

ಮರ ನನ್ನ ದೂಡಲಿಲ್ಲ, ಕೈ ಸರಿಸಲಿಲ್ಲ||

 

ಕಣ್ಣೀರು ಇಂಗಿತ್ತು, ಸುಖದ ನೆಮ್ಮದಿ ಮೆದುಳ ತುಂಬ

ತಲೆ ಕೊಟ್ಟ ಬೇರು ತಾಯಮಡಿಲಂತೆ, ಬಿಸುಪ ನೀಡುವ ತಂಗಾಳಿ|

ನಿದ್ದೆ ಝೋಂಪಿನ ಜೋಗುಳ, ಎಲ್ಲ ದೂರಾಗಿ ಹಗುರಾದ ಭಾವ

ಎಲೆಮರೆಯ ಕಾಂಡ ಬೇರುಗಳು ನಸುನಗುತ್ತ ತಂಗಾಳಿ ಬೀಸಿ ಬೀಳ್ಕೊಟ್ಟವು||

Facebook ಕಾಮೆಂಟ್ಸ್

Saroja Prabhakar: ‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.
Related Post