ಹರಿಯುವ ಕೊಳದಲ್ಲಿ ಬಿಂದಿಗೆಯೋ ಲೋಟವೋ ಕೊನೆಗೆ ನಮ್ಮ ಕೈ ಬೊಗಸೆಯಲ್ಲಿ ತೆಗೆದುಕೊಂಡ ನೀರಷ್ಟೇ ನಮ್ಮದು. ಅದರಲ್ಲೂ ಕುಡಿದಿದ್ದೆಷ್ಟು ಉಳಿದಿದ್ದೆಷ್ಟು ಎನ್ನುವ ಲೆಕ್ಕಾಚಾರ ಬೇರೆ ಬಿಡಿ. ಪ್ರವಾಸಾನುಭವಗಳು ಕೂಡ ಇದಕ್ಕೆ ಹೊರತಲ್ಲ. ನಮ್ಮ ಅರಿವಿಗೆ ನಿಲುಕಿದ್ದು, ಕಂಡದ್ದು ಕೇಳಿದ್ದು… ಹೊರಟಾಗ ಹೋದ ‘ನಾವು’ಗಿಂತ ಬರುವಾಗಿನ ನಾವು ಎಷ್ಟೆಲ್ಲಾ ಹೊಸ ಗ್ರಹಿಕೆ ಪಡೆದಿರುತ್ತದೆ. ಒಮೊಮ್ಮೆ ಅನ್ನಿಸುತ್ತೆ ಅಕಸ್ಮಾತ್ ನಾನಿಲ್ಲಿಗೆ ಬಂದಿಲ್ಲದಿದ್ದರೆ.. ಕೂತ ಟ್ಯಾಕ್ಸಿಗಳು, ಉಂಡ ಹೋಟೆಲ್ಗಳು, ಕಂಡ ಮಾನ್ಯೂಮೆಂಟ್ ಗಳು, ಎಲ್ಲಾ ಹಾಗೆ ಇರುತಿತ್ತು ಅವೇನು ನನ್ನ ಬರುವಿಗೆ ಕಾಯುತ್ತಿರಲಿಲ್ಲ. ಹಾಗಾದರೆ ಇಲ್ಲಿ ಕಳೆದುಕೊಳ್ಳುತ್ತಿದ್ದುದು ಯಾರು? ಈ ಪ್ರಶ್ನೆ ಈ ರೀತಿಯ ಭಾವನೆ ಉಂಟಾಗಿದ್ದು ನಿನ್ಹ್ ಬಿನ್ಹ್ ಹಳ್ಳಿಯನ್ನ ನೋಡಿದ ನಂತರ. ಹೌದು, ಅಕಸ್ಮಾತ್ ಇಲ್ಲಿಗೆ ಬರದೆ ಹೋಗಿದ್ದರೆ ನಿಶ್ಚಿತವಾಗಿ ನಷ್ಟವಂತೂ ನನ್ನದೆ.
ನಿಸರ್ಗ ಸಹಜ
ನಿನ್ಹ್ ಬಿನ್ಹ್ (Ninh binh) ಹಳ್ಳಿ ದಕ್ಷಿಣ ವಿಯೆಟ್ನಾಂನ ಕೊನೆಯಲ್ಲಿದೆ, ಉತ್ತರ ವಿಯೆಟ್ನಾಮ್ ಪ್ರಾರಂಭದಲ್ಲಿ ರೆಡ್ ರಿವರ್ ಡೆಲ್ಟಾ ತಪ್ಪಲಿನಲ್ಲಿ ನೆಲೆಯಾಗಿದೆ. ಇದನ್ನ ವಿಯೆಟ್ನಾಂ ಪ್ರವಾಸಿತಾಣಗಳ ರಾಜ ಎಂದು ಕರೆಯಲು ಅಡ್ಡಿಯಿಲ್ಲ. ಇಲ್ಲಿಯ ಟ್ರಾವೆಲ್ ಏಜೆಂಟ್ಗಳು ಪರ್ಲ್ ಆಫ್ ವಿಯೆಟ್ನಾಂ, ಜೆಮ್ ಆಫ್ ವಿಯೆಟ್ನಾಂ; ಹೀಗೆ ಇನ್ನು ಹತ್ತಾರು ಹೆಸರಿನಿಂದ ಕರೆಯುತ್ತಾರೆ. ಹನೋಯಿ ನಗರದಿಂದ ಇಲ್ಲಿಗೆ ಬಸ್ ಟ್ರೈನ್ ಅಥವಾ ಕಾರು ಮಾಡಿಕೊಂಡು ಬರಬಹುದು. ನೂರು ಕಿಲೋಮೀಟರ್‘ಗಿಂತ ಸ್ವಲ್ಪ ಕಡಿಮೆ ಅಂತರದಲ್ಲಿದೆ. ಎರಡರಿಂದ ಎರಡೂವರೆ ಗಂಟೆಯಲ್ಲಿ ಇಲ್ಲಿಗೆ ಬಂದು ತಲುಪಬಹದು. ಬಸ್ ಅಥವಾ ಟ್ರೈನ್ ಬಜೆಟ್ ಟ್ರಾವೆಲರ್‘ಗಳಿಗೆ ಹೇಳಿ ಮಾಡಿಸಿದಂತಿದೆ. ಹಣದ ಉಳಿತಾಯದ ಜೊತೆಗೆ ಹೊಸ ಅನುಭವ ಕೂಡ ಪಡೆಯಬಹುದು. ಮೂರು ಕಡೆ ಕಡಿದ ಶಿಲೆಗಳಂತೆ ಕಾಣುವ ಪರ್ವತದ ನಡುವೆ ಸೀಳಿಕೊಂಡು ಹರಿಯುವ ನೀರಿನಲ್ಲಿ ಎರಡು ಗಂಟೆ ಹುಟ್ಟುಹಾಕುತ್ತ ಹೋಗುವುದು ಅನುಭವಿಸಿ ತೀರಬೇಕು. ಆಸ್ಟ್ರಿಯಾ, ಸ್ವಿಸ್, ಲಿಚೆನ್ಸ್ಟೈನ್, ದಕ್ಷಿಣ ಫ್ರಾನ್ಸ್’ನ ನೈಸರ್ಗಿಕ ಸೌಂದರ್ಯ ಸವಿದ ಮೇಲೆ ಹುಬ್ಬೇರುವಂತ ಸ್ಥಳಗಳು ನನಗೆ ಸಿಕ್ಕಿದ್ದೆ ಕಡಿಮೆ ಅಥವಾ ಬೇಡದ ತುಲನೆ ಮಾಡುವ ಮನಸ್ಸಿನ ಮೌಢ್ಯವೂ ಇರಬಹದು. ನಿನ್ಹ್ ಬಿನ್ಹ್ ನಿಸ್ಸಂದೇಹವಾಗಿ ಕಡಿಮೆ ದುಡ್ಡಿನಲ್ಲಿ ಮೇಲೆ ಹೇಳಿದ ಎಲ್ಲಾ ದೇಶಗಳಿಗೆ ಸೆಡ್ಡು ಹೊಡೆಯುವಂತ ಪ್ರಕೃತಿ ಸೌಂದರ್ಯದ ಗಣಿ. ಕೆಲವೊಮ್ಮೆ ನಾವು ತೆಗೆದ ಫೋಟೋಗಳೇ ಇರಬಹುದು, ಬರೆದ ಸಾಲುಗಳೇ ಇರಬಹುದು ಅವು ಪೂರ್ಣವಾಗಿ ಅಲ್ಲಿಯ ಪ್ರಕೃತಿಯನ್ನು ಹಿಡಿದಿಡುವಲ್ಲಿ ಖಂಡಿತ ಯಶಸ್ವಿಯಾಗುವುದಿಲ್ಲ. ಇದಕ್ಕೆ ಒಂದೇ ಮದ್ದು ಎಂದರೆ ಸಮಯ ಮಾಡಿಕೊಂಡು ಈ ಸೌಂದರ್ಯವನ್ನು ಸವಿಯುವುದು.
ಪ್ರತಿ ಮೂರು ಅಥವಾ ನಾಲ್ಕು ಜನರಿಗೆ ಒಂದು ಸಣ್ಣ ದೋಣಿಯನ್ನ ಕೊಡುತ್ತಾರೆ. ಹುಟ್ಟು ಹಾಕಲು ಸ್ಥಳೀಯ ನಾವಿಕರು ನಮ್ಮ ಜೊತೆಯಲ್ಲಿ ಇರುತ್ತಾರೆ. ಜೊತೆಗೆ ಇಷ್ಟ ಪಟ್ಟು ನಾವೇ ಹುಟ್ಟು ಹಾಕುತ್ತೇವೆ ಎಂದರೆ ಅದೂ ಕೂಡ ಮಾಡಬಹದು. ನಮ್ಮದು ಏಳು ಜನರ ತಂಡ. ನಾಲ್ಕು ಜನ ಒಂದರಲ್ಲಿ ಉಳಿದ ಮೂವರು ಒಂದರಲ್ಲಿ ಕುಳಿತೆವು. ಸ್ವಂತ ಹುಟ್ಟು ಹಾಕುತ್ತ ಹೀಗೆ ಗಂಟೆಗಟ್ಟಲೆ ನೀರಿನ ಮೇಲೆ ಪ್ರಯಾಣಿಸಿದ್ದು ಇದೆ ಮೊದಲು. ಎರಡು ಗಂಟೆಗೂ ಮೀರಿದ ಪ್ರಯಾಣದಲ್ಲಿ ಒಂದೆರೆಡು ಗವಿಗಳು (ಕೇವ್) ಎದುರಾದವು. ಹಾಡುಹಗಲೇ ರಾತ್ರಿಯ ಅನುಭವ ಕಟ್ಟಿಕೊಟ್ಟವು. ಜೊತೆಗೆ ಸಣ್ಣದಾಗಿ ಜಿನುಗುವ ನೀರಿನ ಹನಿಗಳು ನಮ್ಮ ಮೇಲೆ ಬೀಳುತ್ತಿದ್ದವು. ಅದೊಂದು ಅನುಭವಿಸಿಯೆ ತೀರಬೇಕಾದ ಅನುಭವ. ಕೊನೆಯ ಗವಿಯ ಬಳಿ ತಮ್ಮ ಸಣ್ಣಪುಟ್ಟ ದೋಣಿಗಳಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವ ವಿಯೆಟ್ನಾಮಿ ಮಹಿಳೆಯರು ಸಿಕ್ಕರು. ಬಾಯಾರಿದೆಯೆ ಕೋಕಾಕೋಲಾ ತಗೋಳಿ, ನೀರು ಬೇಕೇ? ಹೀಗೆ ನಯವಿನಯದಿಂದ ಮಾತನಾಡಿ ತಮ್ಮ ಬಳಿ ಇದ್ದ ವಸ್ತುವನ್ನು ತಮಗೆ ಬಂದ ಭಾಷೆಯಲ್ಲಿ ಮಾರಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಬಗ್ಗದ ಜನರಿಗೆ ‘ ನೋಡಿ ಪಾಪ ನಿಮ್ಮ ಭಾರವನ್ನೆಲ್ಲ ಕೇವಲ ತಾನೊಬ್ಬಳೆ ಹುಟ್ಟು ಹಾಕುತ್ತಿದ್ದಾಳೆ. ಅವಳು ದಣಿದಿದ್ದಾಳೆ ಅವಳಿಗಾದರು ಒಂದು ಎನರ್ಜಿ ಡ್ರಿಂಕ್ ಕೊಡಿಸಿ’ ಎಂದು ದುಂಬಾಲು ಬೀಳುತ್ತಿದ್ದರು. ಈ ಮಧ್ಯೆ ನಮ್ಮ ವೇಗಕ್ಕೆ ತಕ್ಕಂತೆ ನಮ್ಮ ಹಿಂದೆ ಮುಂದೆ ಫೊಟೋ ತೆಗೆಯುವ ನುರಿತ ಫೋಟೋಗ್ರಾಫರ್’ಗಳ ದಂಡು ಬೇರೆ! ಹೌದು, ನಿಮ್ಮ ಹಿಂದೆಯೆ ಅವರೂ ಹುಟ್ಟು ಹಾಕುತ್ತ ಬಂದು ಉತ್ತಮ ಸ್ಥಳಗಳಲ್ಲಿ ನಮಗರಿವಿಲ್ಲದೆ ಕೆಲವೊಮ್ಮೆ ಅನುಮತಿ ಪಡೆದು ಫೋಟೋ ತೆಗೆಯುತ್ತಾರೆ. ಪ್ರಯಾಣ ಮುಗಿಸಿ ದಡ ತಲುಪುವ ವೇಳೆಗೆ ನಮ್ಮ ಫೋಟೋ ಆಲ್ಬಮ್ ಸಿದ್ಧವಿರುತ್ತದೆ.
ಒಂದು ದಿನ ಎನ್ನುವುದು ಅದೆಷ್ಟು ಕಡಿಮೆ ಅವಧಿ ಎನ್ನುವ ಅರಿವು ನಿನ್ಹ್ ಬಿನ್ಹ್ ಮಾಡಿಸಿತು. ಎರಡೂವರೆ ಗಂಟೆ ಹುಟ್ಟು ಹಾಕಿಯೂ ಕೈ-ಕಾಲಿನಲ್ಲಿ ನೋವಿನ ಛಾಯೆಯು ಇರಲಿಲ್ಲ. ನೀವು ವಿಯೆಟ್ನಾಮಿನಲ್ಲಿ ಏನನ್ನಾದರೂ ನೋಡಿ ಅಥವಾ ಬಿಡಿ, ನಿನ್ಹ್ ಬಿನ್ಹ್ ನೋಡಲು ಮರೆತರೆ ಅರ್ಥ ನೀವು ವಿಯೆಟ್ನಾಮ್ ಪ್ರವಾಸಿ ತಾಣಗಳ ಮಕುಟಮಣಿಯನ್ನ ನೋಡದ ಹಾಗೆ! ನನ್ನ ಮಟ್ಟಿಗಂತೂ ವಿಯೆಟ್ನಾಮ್ ಅಂದರೆ ನಿನ್ಹ್ ಬಿನ್ಹ್.
ಸಸ್ಯಾಹಾರಿಗಳಿಗೇನಿದೆ ಪರಿಹಾರ?
ನೋಡೋಕೆ ಚಂದ. ಆದರೆ ಸಸ್ಯಾಹಾರಿಗಳಿಗೆ ವಿಯೆಟ್ನಾಮ್ ಬಹಳ ಕಠಿಣ. ಇಲ್ಲಿ ರಸ್ತೆಯಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ ಎಲ್ಲೆಂದರಲ್ಲಿ ಜನ ನಿಗದಿತ ಸಮಯದ ಗೊಡವೆಯಿಲ್ಲದೆ ದಿನ ಪೂರ್ತಿ ತಿನ್ನುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಬೌಲ್’ನಲ್ಲಿ ಶಾವಿಗೆಯಂತ ವಸ್ತುವನ್ನು ನೀರಿನಿಂದ ಬೇರ್ಪಡಿಸಿ ‘ಸೊರ್ ಸೊರ್’ ಸದ್ದಿನೊಂದಿಗೆ ಕುಡಿಯುತ್ತಾ ತಿನ್ನುತ್ತಾರೆ. ಸಾಕಷ್ಟು ಕರಿದ ಪದಾರ್ಥಗಳು ಉಂಟು. ಹನೋಯಿ ನಗರದ ಮಧ್ಯಭಾಗದಲ್ಲಂತೂ ಪ್ರತಿ ಹೆಜ್ಜೆಗೂ ತಿಂಡಿತಿನಿಸು ಮಾರುವವರ ದಂಡು ಕಾಣಸಿಗುತ್ತದೆ. ಮತ್ತೊಂದು ಅಚ್ಚರಿಯ ವಿಷಯವೆಂದರೆ ಅಷ್ಟೊಂದು ಜನ ಮಾರುವರಿಗೂ ಗ್ರಾಹಕರು ಇರುವುದು. ಇವರೇನು ಮನೆಯಲ್ಲಿ ಅಡುಗೆ ಮಾಡುವುದಿಲ್ಲವೆ? ಎನ್ನುವ ಸಂಶಯ ಬರುವುದು ಗ್ಯಾರಂಟಿ. ಇಷ್ಟೊಂದು ತಿಂಡಿ ಮಾರುವರಿದ್ದೂ ನನ್ನಂತ ಪುಳಿಚಾರಿಗರಿಗೆ ಮಾತ್ರ ಸ್ಥಳೀಯ ಆಹಾರದ ರುಚಿ ನೋಡಲು ಆಗುವುದೇ ಇಲ್ಲ. ಎಲ್ಲವೂ ಮಾಂಸಮಯ; ಹಣ್ಣು, ತರಕಾರಿ ಸಿಗುತ್ತೆ. ಸಲಾಡ್ ಸಿಗುತ್ತೆ. ಜೊತೆಗೆ ಹನೋಯಿ ನಗರದಲ್ಲಿ ನಾಲ್ಕೈದು ಭಾರತೀಯ ಹೋಟೆಲ್ಗಳಿವೆ. ಹಾಗಾಗಿ ಹೊಟ್ಟೆಗೆ ತೊಂದರೆ ಆಗುವುದಿಲ್ಲ. ಆದರೆ ಅಲ್ಲಿನ ಸ್ಥಳೀಯ ಆಹಾರದಲ್ಲಿ ಕನಿಷ್ಠ ಒಂದಾದರು ಸಸ್ಯಾಹಾರ ಇದ್ದರೆ ಅದನ್ನ ಅನುಭವಿಸಬಹುದು. ಅಷ್ಟರಮಟ್ಟಿಗೆ ವಿಯೆಟ್ನಾಮ್ ಪುಳಿಚಾರಿಗರಿಗೆ ನಿರಾಸೆ ಉಂಟು ಮಾಡುತ್ತದೆ. ಒಂದೆರಡು ಸಿಹಿತಿಂಡಿಗಳನ್ನು ಚಪ್ಪರಿಸಬಹುದು.
ವಿಯೆಟ್ನಾಮಿನ ಒಂದಷ್ಟು ವಿಶಿಷ್ಟ ಪ್ರವಾಸಿ ಅನುಭವಗಳು:
- ಹಿಂದಿ ಚಲನಚಿತ್ರಗಳು ಮೊರಾಕೊನಿಂದ ಹಿಡಿದು ಜಪಾನ್, ಜರ್ಮನಿ, ರಷ್ಯಾ, ಫ್ರಾನ್ಸ್, ಮಲೇಷ್ಯಾದಲ್ಲಿ ಪ್ರಸಿದ್ಧ ಎನ್ನುವು ಗೊತ್ತಿತ್ತು. ಆದರೆ ವಿಯೆಟ್ನಾಮ್’ನಲ್ಲಿ ಹಿಂದಿ ಸೀರಿಯಲ್ಗಳು ಕೂಡ ಭಾರಿ ಜನಪ್ರಿಯ! ವಿಯೆಟ್ನಾಮೀಸ್ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತವೆ. ನನ್ನ ಹೆಂಡತಿ ಮತ್ತು ಅಮ್ಮ ಇಬ್ಬರು ಸಹಮತದಿಂದ ಇರುವುದು ‘ಬಾಲಿಕಾ ವಧು’ ಸೀರಿಯಲ್ ನೋಡುವಾಗ ಎಂದು ನಕ್ಕ ನಮ್ಮ ಡ್ರೈವರ್ ವಿಯೆಟ್ನಾಮ್ನ ಇನ್ನೊಂದು ಮುಖ ಪರಿಚಯಿಸಿದ.
- ಹನೋಯ್ ನಗರದ ಜನಸಂಖ್ಯೆ ಹತ್ತಿರತ್ತಿರ ೮೦ ಲಕ್ಷ (೮ ಮಿಲಿಯನ್ ). ನೀರಿನಂತೆ ಹರಿದು ಹೋಗುವ ವಾಹನ ಮತ್ತು ಜನಸಾಗರ. ಸಾಯಂಕಾಲವಂತೂ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಜನದಟ್ಟಣೆ ಇದೆ. ಹೀಗಿದ್ದೂ ಶುಕ್ರವಾರ, ಶನಿವಾರ ಮತ್ತು ಭಾನುವಾರ ಇಲ್ಲಿನ ಮುಖ್ಯ ರಸ್ತೆಯನ್ನ ‘ಪೆಡೆಸ್ಟ್ರಿಯನ್’ ರಸ್ತೆಯನ್ನಾಗಿ ಮಾರ್ಪಡಿಸುತ್ತಾರೆ. ಮಕ್ಕಳು ತಮ್ಮಿಚ್ಚೆಯಂತೆ ಕುಣಿಯಬಹುದು. ಹಾಡುಕುಣಿತ ಎಲ್ಲೆಡೆ.
- Tran Quoc Pagoda ಅತ್ಯಂತ ಪ್ರಸಿದ್ಧ ಬುದ್ಧನ ಆಲಯ. ಪಗೋಡ ಅಂದರೆ ದೇವಸ್ಥಾನ ಅಥವಾ ಬುದ್ಧನ ಆಲಯ ಎನ್ನುವ ಅರ್ಥ ಕೊಡುತ್ತದೆ . ಹಾಗೆ ನೋಡಲು ಹೋದರೆ ಇಡಿ ವಿಯೆಟ್ನಾಮ್ ಬುದ್ಧನ ಮಂದಿರಗಳಿಂದ ತುಂಬಿ ಹೋಗಿದೆ. ನಾವಿದ್ದಷ್ಟು ದಿನವೂ ಪಗೋಡ ಅನ್ನುವ ಪದ ಬಳಸದೆ ಇರಲು ಆಗಲಿಲ್ಲ. ಈ ದೇಶ ಹೆಸರಿಗಷ್ಟೆ ಕಮ್ಯುನಿಸ್ಟ್. ನನ್ನ ಅರಿವಿಗೆ ನಿಲುಕಿದ ಪ್ರಕಾರ ಇದೊಂದು ಪರಿಪೂರ್ಣ ಬೌದ್ಧ ದೇಶ. ವಿಯೆಟ್ನಾಂನ ಹನೋಯಿ ನಗರದಲ್ಲಿ ೧೫೦೦ ವರ್ಷ ಹಳೆಯ ಬುದ್ಧನ ದೇವಾಲಯವಿದೆ. ಟೈಮ್ ಟ್ರಾವೆಲ್ ಮಾಡುವುದು ಸೈಂಟಿಫಿಕ್ ಫಿಕ್ಷನ್ ಇರಬಹುದು, ಆದರೆ ನಿಜ ಜೀವನದಲ್ಲಿ ಕಡೇಪಕ್ಷ ಹಿಂದಕ್ಕೆ ಹೋಗುವ ಅವಕಾಶ ಇನ್ನೂ ಇದೆ. ಅದೊಂದು ಸಂತೋಷ, ಅವಕಾಶ ಸಿಕ್ಕರೆ ಈ ದೇವಾಲಯ ಭೇಟಿ ನೀಡಲು ಮರೆಯಬೇಡಿ. ನಮ್ಮ ಗೈಡ್ ಬಳಿ ನಿನ್ನ ಧರ್ಮ ಯಾವುದು ಅಂತ ಕೇಳಿದಾಗ ಯಾವುದು ಎಂದೇ ಗೊತ್ತಿಲ್ಲ ಎಂದ. ಬೌದ್ಧ ಧರ್ಮಿಯರು ಹೆಚ್ಚು ಉಳಿದಂತೆ ಕ್ಯಾಥೊಲಿಕ್ ಕೂಡ ಒಂದೇಳು ಪ್ರತಿಶತ ಇದ್ದಾರೆ. ಮುಸ್ಲಿಮರ ಸಂಖ್ಯೆ ಮಾತ್ರ 0.2 ಪ್ರತಿಶತ. ಪ್ರತಿ ಊರಿಗೆ ಹತ್ತು ಪಗೋಡ (ದೇವಸ್ಥಾನ) ಸಿಗುತ್ತೆ. ಒಂದೇ ಒಂದು ಮಸೀದಿ ನನ್ನ ಕಣ್ಣಿಗೆ ಬೀಳಲಿಲ್ಲ. ಹನೋಯಿ ನಗರದಿಂದ ನೂರಾರು ಮೈಲಿ ದೂರದಲ್ಲಿ ಕೂಡ ಅಲ್ಲೊಂದು ಇಲ್ಲೊಂದು ಚರ್ಚು ಮಾತ್ರ ಕಣ್ಣಿಗೆ ಬಿದ್ದವು.
- ಹನೋಯಿ ನಗರದಿಂದ ೮೫ ಕಿಲೋಮೀಟರ್ ದೂರದಲ್ಲಿ ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ đường lâm ಎನ್ನುವ ಹಳ್ಳಿಯಿದೆ. ಹೆಸರಿಗೆ ಹನೋಯಿ ನಗರದಿಂದ ೮೫ ಕಿಲೋಮೀಟರ್ ದೂರ. ನಗರದ ಅಬ್ಬರ ಆರ್ಭಟಗಳಿಂದ ಮುನ್ನೂರು ವರ್ಷ ಹಿಂದೆ ಇದ್ದಾರೆ. ಇಲ್ಲಿಗೆ ಕೋಲ್ಗೇಟ್ ಬಂದು ನಿಮ್ಮ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಕೇಳಲಾಗಿಲ್ಲ! ಏಕೆಂದರೆ ಹಳ್ಳಿಯ ಹಿರಿಯರು ಹಲ್ಲಿಗೆ ಒಂದು ವಿಶಿಷ್ಟ ಮರದಿಂದ ತೆಗೆದ ರಸವನ್ನ ಹಚ್ಚುತ್ತಾರೆ. ಹೀಗಾಗಿ ಇವರ ಹಲ್ಲುಗಳು ಕಪ್ಪು ಬಣ್ಣ! ನಮಗೆ ಸಿಕ್ಕ ಮುಕ್ಕಾಲು ಪಾಲು ಜನರ ಹಲ್ಲಿನ ಬಣ್ಣ ಕಪ್ಪು. ಇಲ್ಲಿ ೯೩ರ ಹರಯದ ವ್ಯಕ್ತಿಗಳ ಹಲ್ಲು ಇನ್ನೂ ಕಬ್ಬನ್ನ ಸಿಗಿದು ತಿನ್ನುವಷ್ಟು ಗಟ್ಟಿಮುಟ್ಟಾಗಿವೆ.
- ನಾವೆಲ್ಲಾ ಮೂಲದಲ್ಲಿ ಒಂದೇ ಎನ್ನುವ ವಿಷಯ ಪ್ರತಿ ದೇಶಕ್ಕೆ ಭೇಟಿ ಕೊಟ್ಟ ನಂತರ ನನಗೆ ಮತ್ತಷ್ಟು ಮನದಟ್ಟಾಗುತ್ತೆ. ಇಲ್ಲಿ ಆಮೆಯನ್ನ (ಕೂರ್ಮಾವತಾರ?) ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ಬುದ್ಧನ ದೇವಾಲಯದಲ್ಲಿ ಇರುವ ಆಮೆಯ ತಲೆಯನ್ನ ಮುಟ್ಟುವುದ್ದರಿಂದ ಅದೃಷ್ಟ ಜೊತೆಯಾಗುತ್ತೆ ಎನ್ನುವುದು ಜನರ ನಂಬಿಕೆ! ಕೇಳೋದಿನ್ನೇನು ಆಮೆಯ ತಲೆ ಸವರಿ ಸವರಿ ಅದರ ಬಣ್ಣವೇ ಬದಲಾಗಿದೆ. ದೇವಾಲಯದ ಹೊರಗೆ ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಆಮೆ ಮರಿಗಳನ್ನ ಬಕೆಟ್’ನಲ್ಲಿ ಹಾಕಿಕೊಂಡು ಕೂತಿರುತ್ತಾಳೆ. ಜನ ಎರಡು ಡಾಲರ್ ತೆತ್ತು ಅದನ್ನ ಕೊಂಡು ಕೊಳಕ್ಕೆ ಬಿಡುತ್ತಾರೆ. ಹೀಗೆ ಬಿಡುವ ಮುನ್ನ ಮನದಲ್ಲಿನ ಆಸೆ ಹೇಳಿಕೊಂಡರೆ ಅದು ಈಡೇರುತ್ತಂತೆ.
- ವಿಯೆಟ್ನಾಂ ದೇಶದ ಜನಸಂಖ್ಯೆ 9.5 ಕೋಟಿ. ಅದರಲ್ಲಿ ಹತ್ತು ಪ್ರತಿಶತಕ್ಕೂ ಹೆಚ್ಚು ಸೀನಿಯರ್ ಸಿಟಿಜನ್ಸ್! ಇನ್ನೆರೆಡು ದಶಕದಲ್ಲಿ ಇಲ್ಲಿಯ ಜನಸಂಖ್ಯೆಯ ೩೫ ಪ್ರತಿಶತ ಸೀನಿಯರ್ ಸಿಟಿಜನ್ ಪಟ್ಟಿಗೆ ಸೇರುತ್ತಾರೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಯುವಜನತೆ ಹುಡುಕಿದರೂ ಸಿಗುವುದಿಲ್ಲ. ಇಲ್ಲಿಯ ಹಳ್ಳಿಗಳ ರಸ್ತೆಯ ಮಧ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನೃತ್ಯದಂತಹ ಹಲವು ಕಾರ್ಯಗಳನ್ನ ವಯೋವೃದ್ಧರು ನಡೆಸುವುದು ಸಾಮಾನ್ಯ ದೃಶ್ಯವಾಗಿದೆ. ಹನೋಯಿ ಈ ದೇಶದ ರಾಜಧಾನಿ, ಇಲ್ಲಿ ಫ್ರೆಂಚ್ ಮಾತನಾಡುವರ ಸಂಖ್ಯೆ ಬಹಳವಿದೆ. ಫ್ರೆಂಚರ ವಸಾಹತು ಆಗಿದ್ದರ ನೆನಪು ತರುವ ಫ್ರೆಂಚ್ ಶೈಲಿಯ ವಾಸ್ತುಶಿಲ್ಪವುಳ್ಳ ಕಟ್ಟಡಗಳು ಕೂಡ ಹೇರಳವಾಗಿವೆ.
- ಎಲ್ಲಾ ಅನುಭವಗಳೂ ಒಳ್ಳೆಯವೆ! ಕೆಲವು ನೆನಪಿನ ಬುತ್ತಿ ಹಿಗ್ಗಿಸುತ್ತವೆ, ಕೆಲವೊಂದು ಅನುಭವಗಳು ಪಾಠ ಕಲಿಸುತ್ತವೆ. ಹೀಗೆ ಪಾಠ ಕಲಿಸುವ ಅನುಭವವೂ ಆಯಿತು. ಹನೋಯಿ ನಗರ ಅತ್ಯಂತ ಜನನಿಬಿಡ, ಸಾಯಂಕಾಲವಾದರಂತೂ ಹೊರಗೆ ಕಾಲಿಡುವುದೆ ಬೇಡ ಅನ್ನುವಷ್ಟು ಜನಸಂದಣಿ. ಸಂಸಾರ ಸಮೇತ ಇಂಡಿಯನ್ ರೆಸ್ಟುರಾಂಟ್’ನಲ್ಲಿ ಊಟ ಮುಗಿಸಿ ಟ್ಯಾಕ್ಸಿಗಾಗಿ ಕಾಯುತ್ತ ನಿಂತಿದ್ದೆವು. ಮೋಟಾರ್ ಬೈಕ್’ನಲ್ಲಿ ಬಂದ ವ್ಯಕ್ತಿ ಹೆಲ್ಮಟ್ ತೆಗೆದು ಕಣ್ಣು ಹೊಡೆದು ‘ಮಸಾಜ್ ಮಸಾಜ್’ ಎಂದು ಮುಖ ನೋಡಿದ. ನಾನು ಬೇಡವೆನ್ನುವಂತೆ ಕೈ ಆಡಿಸಿದರೂ ಬಿಡದೆ ವ್ಯಾಪಾರ ಕುದಿರಿಸಿಯೆ ಸಿದ್ಧ ಎನ್ನುವಂತಿತ್ತು ಅವನ ಹಾವಭಾವ. ಅವನನ್ನ ಸಾಗುಹಾಕುವುದರಲ್ಲಿ ಮತ್ತೊಬ್ಬ ಪ್ರತ್ಯಕ್ಷ! ಮತ್ತದೆ ರಿಪೀಟ್. ಊರೆಂದ ಮೇಲೆ ಹೊಲಸು ಇರಲೇಬೇಕಲ್ಲವೆ? ಜಗತ್ತಿನ ಅತ್ಯಂತ ಹಳೆಯ ವೃತ್ತಿ ಇಲ್ಲೂ ಅಭಾದಿತ.
ಇರಲಿ ನಿಮ್ಮ ಪ್ರೀತಿ
ನೀವು ವಿಯೆಟ್ನಾಮ್’ಗೆ ಪ್ರಯಾಣಿಸುವರಿದ್ದರೆ ಇಲ್ಲಿ ಟಿಪ್ಸ್ ಕೊಡುವುದು ಅತ್ಯಂತ ಮುಖ್ಯವಾಗಿ ಮಾಡಲೇಬೇಕಾದ ಕೆಲಸ. ಭಾಷೆಯ ತೊಂದರೆ, ಸಂಕೋಚ ಹೀಗೆ ಹಲವು ಕಾರಣದಿಂದ ಬಹಳ ಜನ ನಿಮ್ಮ ಟಿಪ್ಸ್ ಕೇಳದೆ ಇರಬಹದು. ಇಲ್ಲಿನ ಸಾಮಾನ್ಯನ ಸಂಭಾವನೆ ಅತ್ಯಂತ ಕಡಿಮೆ. ಹೀಗಾಗಿ ಟಿಪ್ಸ್ ಕೊಡುವುದು ಇಲ್ಲಿಯ ಸಂಪ್ರಾಯದವಾಗಿ ಹೋಗಿದೆ. ಅವರು ಕೇಳಲಿ ಬಿಡಲಿ ಒಂದಷ್ಟು ಟಿಪ್ಸ್ ಕೊಟ್ಟರೆ ಕಳೆದುಕೊಳ್ಳುವುದು ಏನೂ ಇಲ್ಲ. ಬದಲಿಗೆ ಹಸನ್ಮುಖತೆಯಿಂದ ಶಿರಬಾಗಿ ವಂದಿಸುತ್ತಾರೆ. ಆ ನಗುವಿಗೆ, ಆ ಪ್ರೀತಿ-ಗೌರವಕ್ಕೆ ಬೆಲೆ ಕಟ್ಟಲಾದೀತೆ? ಐವತ್ತರಿಂದ-ಎಪ್ಪತ್ತೈದು ಸಾವಿರ ರೂಪಾಯಿ ಖರ್ಚು ಮಾಡಿದರೆ ಒಬ್ಬರು ಒಂದು ವಾರ ಸುತ್ತಾಡಿ ಬರಬಹುದು. ಫೆಬ್ರವರಿಯಿಂದ ಏಪ್ರಿಲ್, ನಂತರ ಆಗಸ್ಟ್’ನಿಂದ ಅಕ್ಟೋಬರ್ ಇಲ್ಲಿಗೆ ಭೇಟಿ ನೀಡಲು ಬಹಳ ಉತ್ತಮ ಸಮಯ .
ತಡವಿನ್ನೇಕೆ? ಹೊರಡಿ. ಶುಭ ಪ್ರಯಾಣ.
Facebook ಕಾಮೆಂಟ್ಸ್