ಎಂದಿನಂತಲ್ಲದ ಅದೊಂದು ಬೆಳಗು
ಎಲ್ಲ ರಸ್ತೆಗಳಂತೆಯೇ ಆ ರಸ್ತೆಯಲ್ಲಿ
ಇನ್ನೂ ಗಡಿಬಿಡಿ ತನ್ನ ಪಯಣ ಆರಂಭಿಸಿಲ್ಲ
ಮಂಜಿನ ತುಣುಕುಗಳನ್ನು ಬಿಸಿಲಕೋಲು
ಚುಚ್ಚಿ ಬುಟ್ಟಿಗಿಳಿಸುತ್ತಿದೆ
ತರಗೆಲೆಗಳ ಉದುರಿಸಲೂ ಮರೆತಂತೆ
ಸ್ತಬ್ಧ ಮರ
ಇಲ್ಲಿ ತನ್ನ ತಟ್ಟೆಗೇನು ಭಿಕ್ಷೆ ಬಿದ್ದೀತೆಂಬ
ದುಗುಡದಲ್ಲೇ ಕಾಯುತ್ತಿದ್ದಾನೆ
ರಸ್ತೆಯಂಚಿಗೆ ಯಾರೋ ಮುಟ್ಟಿಸಿಹೋದ
ಮೊಂಡು ಕಾಲುಗಳ ಮುದುಕ
ಕವಿದ ಮೌನವನ್ನು ಕಡಿಯುತ್ತ
ತನ್ನ ಭಾರಬೂಟುಗಳಲ್ಲಿ ಖಟ್ ಖಟ್ಟೆನಿಸಿ
ನಡೆದು ಹೋಗಿದ್ದಾನೆ ಯೋಧ
ಬಂದೂಕು ಗುಂಡು ಬೆನ್ನ ಚರ್ಮವೇ
ಆದ ಚೀಲ ಹೊತ್ತು
ಪಯಣದ ಕೊನೆಯಲ್ಲಿ ಇದ್ದೀತೊಂದು
ಬಾಂಬು ಗುಂಡು ಅಥವಾ
ಅವನ ಹುಡುಗಿಯ ಕಣ್ಣೀರು- ಬಿಸಿಯಪ್ಪುಗೆ
ಆ ಮಗು ನಿನ್ನೆ ಅದೇ ರಸ್ತೆಯಲ್ಲಿ
ಕಳಕೊಂಡ ಕೆಂಪು ಹಸಿರು ಬಲೂನುಗಳ
ಹುಡುಕುತ್ತಿದೆ ಅಲ್ಲೆಲ್ಲೋ ಬೇಲಿಯಲ್ಲಿ
ಸಿಕ್ಕ ದಾರಗಳಲ್ಲಿ
ಅರೇ, ಅದರ ಇನ್ನೊಂದು ಕಾಲಿನ ಶೂ
ಹೋಯಿತೆಲ್ಲಿಗೆ ?
ಇರುವಾಗ-
ಮೃದುಪಕಳೆಗಳ ಹೂವೊಂದು
ಉದುರಿ ಸಮಾ ನಡುವಿಗೆ
ಬಿದ್ದಿದೆ
ಯಾರದನು ಎತ್ತಿ ಮೂಸಿ ಅಥವಾ
ಮೂಸದೆಯೂ ಈಚೆಗೆ ಇರಿಸುತ್ತಾರೆ
ರಸ್ತೆಯಂಚಿನ ಗಾಡಿಗಳಿಗೆ
ಜೀವ ಬರುವ ಮೊದಲು.
– ಗೋವಿಂದ ಹೆಗಡೆ
Facebook ಕಾಮೆಂಟ್ಸ್