” 2018, ಅಕ್ಟೋಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಮೋದಿ-ಆಬೆ ನೇತೃತ್ವದಲ್ಲಿ ಉಭಯ ದೇಶಗಳ ನಡುವಿನ ಐದನೇ ವಾರ್ಷಿಕ ಶೃಂಗಸಭೆ. ಕಳೆದ ಐದು ವರ್ಷಗಳಲ್ಲಿ ಜಪಾನ್ ದೇಶಕ್ಕೆ ಪ್ರಧಾನಿಯವರ ಮೂರನೇ ಭೇಟಿ. ಹಾಗೂ ವಿವಿಧ ಶೃಂಗಸಭೆಯಲ್ಲಿ 12 ಬಾರಿ ಶಿಂಜೋ ಆಬೆಯವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಮೋದಿಯವರ ಈ ಬಾರಿಯ ಜಪಾನ್‍ನ ಟೋಕಿಯೊ ಪ್ರವಾಸದ ಪ್ರಾಮುಖ್ಯತೆ, ಸಾಂಭಾವಿಕ ಬೆಳವಣಿಗೆಗಳು, ಚರ್ಚೆಯ ವಿಷಯಗಳು ಮತ್ತು ಉಭಯ ದೇಶಗಳ ನಡುವಿನ ಪ್ರಮುಖ ಬೆಳವಣಿಗೆಗಳನ್ನು ವಿವೇಕ್ಷಿಸುವ ಪ್ರಯತ್ನ. “
ಭಾರತ-ಜಪಾನ್ ಸ್ನೇಹದ ಅನಿವಾರ್ಯತೆ
ಹಿಂದಿನಿಂದಲೂ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮಿತ್ರನಾಗಿ ನಿಂತ ರಾಷ್ಟ್ರ ರಷ್ಯಾ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಳೆದ ಕೆಲವು ವರ್ಷಗಳಿಂದ ರಷ್ಯಾದ ನಂತರದ ಎರಡನೇ ಮಿತ್ರ ಸ್ಥಾನವನ್ನು ಜಪಾನ್ ನಿಧಾನವಾಗಿ ತುಂಬುತ್ತಿದೆ. ಪ್ರಜಾಪ್ರಭುತ್ವ, ಮಾರುಕಟ್ಟೆ, ಬೇಡಿಕೆ ಹಾಗೂ ಯುವ ವಯಸ್ಸಿನ ಜನಸಂಖ್ಯೆಯ ಶಕ್ತಿಯ(ಡೆಮೋಗ್ರಾಫಿಕ್ ಡಿವಿಡೆಂಡ್) ಕಾರಣ ಇಂದು ವಿಶ್ವದ ಯಾವುದೇ ದೇಶವೂ ಭಾರತವನ್ನು ನಿರ್ಲಕ್ಷಿಸಿ ಮುಂದೆ ಸಾಗುವುದು ಕಷ್ಟಸಾಧ್ಯ. ಹೊಸಕಾಲದ ತಂತ್ರಜ್ಞಾನ, ಆವಿಷ್ಕಾರ, ಆಧುನಿಕ ಯುದ್ಧ ಶಸ್ತ್ರಾಸ್ತ್ರಗಳು, ಅಪಾರ ಶಕ್ತಿಯಿರುವ ಕೈಗಾರಿಕೆ, ಉತ್ಪಾದನೆ, ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಜಪಾನ್‍ಗೆ ಜಾಗತಿಕವಾಗಿ ನಂಬಲಾರ್ಹ ಜೊತೆಗಾರ ಮತ್ತು ಅಭಿವೃದ್ಧಿ, ವ್ಯಾಪಾರಕ್ಕೆ ಅಪಾರ ಅವಕಾಶವಿರುವ ದೇಶವೆಂದರೆ ಅದು ಭಾರತ. ಹೀಗಾಗಿ ಮುಂದುವರೆಯುತ್ತಿರುವ ಆರ್ಥಿಕ ಶಕ್ತಿಯಾಗಿ, ಹೊಸ ತಂತ್ರಜ್ಞಾನ, ಕೈಗಾರಿಕೆ, ಆವಿಷ್ಕಾರ, ನವಯುಗದ ಬೆಳವಣಿಗೆಗಳನ್ನು ನೆಚ್ಚಿಕೊಂಡು ಮುಂದುವರೆಯಲು ಪ್ರಸ್ತುತ ಭಾರತಕ್ಕೆ ಜಪಾನ್‍ಗಿಂತ ಉತ್ತಮ ನಂಬಲಾರ್ಹ ದೇಶ ದೊರೆಯದು. ವಿಶೇಷವೆಂದರೆ ಜಪಾನ್, ಭಾರತ ಮತ್ತು ರಷ್ಯಾ, ಈ ಎರಡು ದೇಶಗಳೊಂದಿಗೆ ಮಾತ್ರ ಶೃಂಗಸಭೆ ಮಟ್ಟದ ವಾರ್ಷಿಕ ದ್ವಿಪಕ್ಷೀಯ ಸಭೆಯನ್ನು ನಡೆಸುತ್ತಿದೆ.
ಅಗತ್ಯ ಸಂಪನ್ಮೂಲಗಳ ಕೊರತೆಯಿರುವ ಮುಂದುವರೆದ ದೇಶ. ಇಂಧನ, ವಾಣಿಜ್ಯ-ವಹಿವಾಟು, ರಕ್ಷಣೆ ಇತ್ಯಾದಿಗಳಿಗೆ ಸುಲಭ ಮತ್ತು ಅಗ್ಗ ಸಾಗರ ಮೂಲ ಸಾರಿಗೆಯನ್ನೇ ಅವಲಂಬಿಸಿರುವ ದೇಶ. ಏಷ್ಯಾದ ಪೂರ್ವದ ತುತ್ತತುದಿಯಲ್ಲಿರುವ ಜಪಾನ್‍ನ ವಾಣಿಜ್ಯ ವಹಿವಾಟುಗಳನ್ನು ಸಾಗರಮಾರ್ಗವಾಗಿ ಮತ್ತೊಂದು ತುದಿಯಲ್ಲಿರುವ ಪಶ್ಚಿಮ ಏಷ್ಯಾ, ಪರ್ಶಿಯನ್ ಗಲ್ಫ್ ಪ್ರದೇಶಗಳಿಗೆ ಯಾವುದೇ ತೊಡಕಿಲ್ಲದೆ ತಲುಪಿಸುವುದು ಎಂದರೆ ಭಗೀರಥ ಪ್ರಯತ್ನವೇ ಸರಿ. ಉದಾಹರಣೆಗೆ, ನೌಕೆಯೊಂದು ಜಪಾನ್‍ನಿಂದ 12,000 ಕಿಲೋಮೀಟರ್ ದೂರದಲ್ಲಿರುವ ಪರ್ಶಿಯನ್ ಗಲ್ಫ್ ಭೂಪ್ರದೇಶಕ್ಕೆ ತಲುಪಲು ಕನಿಷ್ಟ 18 ದಿನಗಳು ಬೇಕಾಗುತ್ತದೆ. ಈ ಮಧ್ಯೆ ಎದುರಾಗುವ ಕಡಲ್ಗಳ್ಳತನದಂತಹ ಅನೇಕ ಸಮಸ್ಯೆಗಳು. ಎರಡನೇ ಮಹಾಯುದ್ಧದ ತರುವಾಯ ರೂಪುಗೊಂಡ ಜಪಾನ್ ಸಾಂವಿಧಾನಿಕ ಕಟ್ಟುಪಾಡುಗಳ ಅನ್ವಯ, ಜಪಾನ್ ವಿದೇಶಗಳಲ್ಲಿ ತನ್ನ ಸೇನೆಯನ್ನು ಉಳಿಸಿಕೊಳ್ಳುವಂತಿಲ್ಲ ಹಾಗೂ ತನ್ನ ಸೇನೆಯ ಪ್ರಮಾಣವನ್ನು ಹೆಚ್ಚುಗೊಳಿಸುವಂತಿಲ್ಲ.
ಸಾಗರ ಮಾರ್ಗದಲ್ಲಿ ನಿಯಂತ್ರಣಕ್ಕೆ ಸಿಗದಷ್ಟು ಮಟ್ಟದಲ್ಲಿ ನಡೆಯುತ್ತಿರುವ ವಾಣಿಜ್ಯ, ಇಂಧನ ಮತ್ತು ಕೈಗಾರಿಕಾ ಉತ್ಪನ್ನಗಳ ಕಳ್ಳತನವನ್ನು ತಡೆಯುವುದು ಜಪಾನ್‍ಗೆ ತಲೆನೋವಾದ ಸಂಗಂತಿ. ತನ್ನ ವಾಣಿಜ್ಯ ಸಾಗಾಟದ ಹಾದಿಯಲ್ಲಿ ಉತ್ತಮ ಜಲಸಾರಿಗೆ, ಬಂದರು ಮತ್ತು ಸಂಪರ್ಕವನ್ನು ಹೊಂದಿರುವ ಎರಡು ದೇಶಗಳೆಂದರೆ ಒಂದು ಪ್ರಜಾಪ್ರಭುತ್ವವಾದಿ, ಮುಕ್ತಸಂಚಾರದ ಪ್ರವಾದಿ ಭಾರತ ಮತ್ತೊಂದು ಕೇವಲ ತನ್ನದೇ ಸಾರ್ವಭೌಮತೆಯನ್ನು ಸ್ಥಾಪಿಸಲು ಹೊರಟಿರುವ ವಿಸ್ತಾರವಾದಿ ಚೀನ. ಹಾಗಾಗಿ ತನ್ನ ಹಿತಾಸಕ್ತಿಗಳ ಕಾಯುವಿಕೆಗೆ ಜಪಾನ್‍ಗೂ ಭಾರತ ಅನಿವಾರ್ಯವೇ. ಭೌಗೋಳಿಕವಾಗಿ ತನ್ನ ವಾಣಿಜ್ಯ ಮಾರ್ಗದ ಮಧ್ಯದಲ್ಲಿರುವ ಭಾರತ ದೇಶದ ಸ್ನೆಹವೆಂದರೆ ಹಿಂದೂ ಮಹಾಸಾಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಂತಿ, ಸುರಕ್ಷತೆ, ಮತ್ತು ಸಹಾಯಗಳು ಸುಲಭವಾಗಿ ದೊರೆಯುತ್ತವೆ. ತನ್ನ ಸೇನಾಬಳಕೆಗೆ ಮಿತಿಯೊಡ್ಡಿರುವ ಕಾರಣ ಸುಲಭವಾಗಿ ಭಾರತ ತನ್ ಮಿತ್ರರಾಷ್ಟ್ರಗಳಿಗೆ ಸೇನಾ ರಕ್ಷಣೆಯನ್ನು ನೀಡುತ್ತದೆ. ಹಾಗಾಗಿಯೇ ಭಾರತ-ಜಪಾನ್ ಅನೇಕ ಬಹುಪಕ್ಷೀಯ ವೇದಿಕೆಗಳಲ್ಲಿ, ಸಹಭಾಗಿ ಯೋಜನೆಗಳಲ್ಲಿ ಒಂದಾಗುತ್ತಿರುವುದು.
ಮುಂಬರುವ ಒಲಂಪಿಕ್ಸ್ ತಯಾರಿ ಮೊದಲಾದ ಕಾರಣಗಳನ್ನು ನೀಡುತ್ತಿರುವ ಜಪಾನ್ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಸಧ್ಯ ಚೀನಾ ಮತ್ತು ಅಮೆರಿಕ ಎಂಬ ಎರಡು ದೇಶಗಳು, ಅವುಗಳ ನೀತಿಗಳು ಭಾರತ ಮತ್ತು ಜಪಾನ್ ದೇಶಗಳನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತಿವೆ. ದಕ್ಷಿಣ ಚೀನಾ, ಪೂರ್ವ ಚೀನಾ ಸಾಗರಗಳಲ್ಲಿ ಚೀನಾದ ವಿಸ್ತಾರವಾದಿ ಧೋರಣೆ ಜಪಾನ್ ಅಸ್ತಿತ್ವಕ್ಕೆ ಮಾರಕ. “ಒಂದು ಬೆಲ್ಟ್ ಒಂದು ಯೋಜನೆ” ಯಶಸ್ವಿಯಾದರೆ ದಕ್ಷಿಣ ಚೀನಾ ಸಾಗರ ಪ್ರದೇಶದಿಂದ, ಹಿಂದೂ ಮಹಾಸಾಗರ, ಪರ್ಶಿಯನ್ ಗಲ್ಫ್ ಮೊದಲಾಗಿ ಯುರೋಪ್‍ವರೆಗಿನ ಸಾಗರ ಹಾಗೂ ರಸ್ತೆಯ ಮಾರ್ಗಗಳಲ್ಲಿ, ವಾಣಿಜ್ಯ-ವಹಿವಾಟುಗಳಲ್ಲಿ ಸಮಗ್ರ ಹಿಡಿತವನ್ನು ಸಾಧಿಸಲಿದೆ. ದೂರಗಾಮಿಯಾಗಿ ಚೀನಾದ ಆರ್ಥಿಕ ಭದ್ರತೆಯನ್ನು ದೃಢಪಡಿಸಿ ಜಾಗತಿಕ ಹಾಗೂ ಸ್ಥಳೀಯ ಮಟ್ಟದಲ್ಲಿ ಏಕೈಕ “ಭೌಗೋಳಿಕ ಶಕ್ತಿ”ಯಾಗಿ ಹೊರಹೊಮ್ಮಲಿದೆ.
ಇದು ಶಾಂತಿ, ಸುವ್ಯವಸ್ಥೆ, ಪರಸ್ಪರ ಗೌರವ, ಪರಸ್ಪರ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಪ್ರತಿಯೊಂದು ದೇಶದ ಸಾರ್ವಭೌಮತೆಯನ್ನು ದಮನಗೊಳಿಸುತ್ತದೆ ಎಂಬ ಆತಂಕ ಭಾರತ ಮತ್ತು ಜಪಾನ್ ದೇಶಗಳನ್ನು ಸಮಾನವಾಗಿ ಕಾಡುತ್ತಿದೆ. ಅಮೆರಿಕದ ನೂತನ ಅಧ್ಯಕ್ಷರ ಏಕಪಕ್ಷೀಯ ಹಿಂಲಾಗ ಅಥವಾ “ಫ್ಲಿಪ್ ಫ್ಲಾಪ್” ನೀತಿಗಳು ಎರಡೂ ದೇಶಗಳನ್ನು ಆತಂಕದಲ್ಲಿ ದೂಡುವಂತೆ ಮಾಡಿದೆ. “ಟ್ರಾನ್ಸ್ ಫೆಸಿಫಿಕ್ ಫಾಟ್ರ್ನರ್ಶಿಪ್”(ಟಿಪಿಪಿ)ನಿಂದ ಅಮೆರಿಕ ಹಿಂದೆ ಸರಿದಿದ್ದರಿಂದ ಮುಕ್ತ ವ್ಯಾಪಾರ ನೆಲೆಯಲ್ಲಿ ಪೂರ್ವ ಏಷ್ಯಾ ಮತ್ತು ಫೆಸಿಫಿಕ್ ದೇಶಗಳನ್ನು ಪರೋಕ್ಷವಾಗಿ ಚೀನಾದ ತೆಕ್ಕೆಗೆ ನೀಡಿದಂತಾಗಿದೆ. ಉತ್ತರ ಕೊರಿಯಾ ಜೊತೆಗಿನ ಮಾತುಕತೆಯಲ್ಲಿ ನಡೆಯುತ್ತಿರುವ ಏಳು-ಬೀಳುಗಳು ಜಪಾನ್ ದೇಶವನ್ನು ಚಿಂತೆಗೀಡುಮಾಡಿದೆ.
ಇರಾನ್ ಮೇಲಿನ ನಿರ್ಬಂಧ, ಇತ್ತೀಚೆಗೆ ಭಾರತದ ಮೇಲೆ ಅಮೆರಿಕ ಹೇರಿರುವ ವಾಣಿಜ್ಯ ಸುಂಕಗಳು, ಬಹುಪಕ್ಷೀಯ ಮುಕ್ತ ವ್ಯಾಪಾರ ವಹಿವಾಟುಗಳ (ವಲ್ಡ್ ಟ್ರೇಡ್ ಆರ್ಗನೈಜೇಶನ್) ನಿಯಮಗಳನ್ನು ಮುರಿದು ಜಾಗತಿಕರಣಕ್ಕೆ ವಿರುದ್ಧವಾದ ರಕ್ಷಣಾತ್ಮಕ ನೀತಿಯನ್ನು ಅನುಸರಿಸುತ್ತಿರುವುದು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಸಮಸ್ಯೆಯನ್ನುಂಟುಮಾಡಿದೆ. ಇದರಿಂದ ಭಾರತದಂತಹ ಅಭಿವೃದ್ಧಿಹೊಂದುತ್ತಿರುವ ದೇಶಗಳು, ಅಮೆರಿಕವನ್ನು ನೆಚ್ಚಿಕೊಂಡ ಜಪಾನ್‍ನಂತಹ ಸಣ್ಣ ದೇಶಗಳು ಹೆಚ್ಚು ತೊಂದರೆಗೊಳಗಾಗುತ್ತಿವೆ. ಈ ಸಂಗತಿಗಳು ಎರಡೂ ದೇಶಗಳನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತಿವೆ. ಅಮೆರಿಕ ಮತ್ತು ಚೀನ ಎರಡು ದೇಶಗಳ ಇಂತಹ ಹಿಂಚಲನೆಯ ನೀತಿಗಳನ್ನು ಹಿಮ್ಮೆಟ್ಟಿಸುವ ಜೊತೆಗೆ ಅವುಗಳನ್ನು ನೇರವಾಗಿ ಎದುರುಹಾಕಿಕೊಳ್ಳದೆ ಪರಸ್ಪರ ಹಿತಾಸಕ್ತಿಗಳನ್ನು ಮುನ್ನಡೆಸುವ ವಿಚಾರ ಪ್ರಧಾನಿಗಳಿಬ್ಬರ ಮಾತುಕತೆಯಲ್ಲಿ ಪ್ರಮುಖ ಸ್ಥಾನಪಡೆಯಲಿದೆ.
ಅದಕ್ಕೆ ಪೂರಕವೆಂಬಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ದೇಶದ ಪ್ರಧಾನ ಮಂತ್ರಿ ಶಿಂಜೋ ಆಬೆ ನಡುವೆ ವೈಯ್ಯಕ್ತಿಕವಾಗಿ ಬೆಳೆಯುತ್ತಿರುವ, ಪರಸ್ಪರ ಪ್ರೀತಿ, ಗೌರವ, ಆತ್ಮೀಯತೆಗಳಿಂದ ರೂಪುಗೊಳ್ಳುತ್ತಿರುವ ಸ್ನೇಹ ಸಂಬಂಧಗಳೂ ಕಾರಣ. ಇದಕ್ಕೊಂದು ಉತ್ತಮ ಉದಾಹರಣೆ, ಕಳೆದ ವರ್ಷ ಆಬೆ ಭಾರತಕ್ಕೆ ಬಂದಿದ್ದಾಗ ಸಾಬರಮತಿ ಆಶ್ರಮಕ್ಕೆ ಕರೆದುಕೊಂಡುಹೋಗಿದ್ದ ಮೋದಿಯವರಿಗೆ ಈ ಬಾರಿ ತಮ್ಮ ರಜಾದಿನಗಳನ್ನು ಕಳೆಯುವ ವಿಲಾಸಿ ಬಂಗಲೆಯಲ್ಲಿ ಔತಣಕೂಟವನ್ನು ಏರ್ಪಡಿಸುವ ಮೂಲಕ ತಮ್ಮ ಸ್ನೇಹದ ಬಾಂಧವ್ಯವನ್ನು ಮರುಕಳಿಸುತ್ತಿದ್ದಾರೆ.
ಇಂದು ಭಾರತ ಮತ್ತು ಜಪಾನ್ ನಡುವಿನ ಸ್ನೇಹ, ಸಂಬಂಧ, ವ್ಯಾಪಾರ-ವಹಿವಾಟು, ಕೊಡುಗೆಗಳು ಉತ್ತಮ ಗತಿಯಲ್ಲಿ ಬೆಳೆಯುತ್ತಿರುವುದಕ್ಕೆ ಆ ಒಂದು ವಿಚಾರವೂ ಕಾರಣವಾಗಿದೆ. ಮೇಲಾಗಿ ಹಿಂದೂ ಮಹಾಸಾಗರ, ದಕ್ಷಿಣ ಏಷ್ಯಾದಲ್ಲಿ ಭಾರತಕ್ಕೂ, ಫೆಸಿಪಿಕ್ ಸಾಗರದಲ್ಲಿ ಜಪಾನ್‍ಗೂ ಹತ್ತಿರವಿದ್ದುಕೊಂಡೇ ಆ ಪ್ರಾಂತ್ಯಗಳ ಮೇಲೆ ಏಕಮೇವಾದ್ವಿತಿಯ ಅಧಿಕಾರ ಸ್ಥಾಪಿಸಲು ಹೊರಟಿರುವ “ಚೀನಾ” ದೇಶದ ಸಮಸ್ಯೆ, ಅದನ್ನು ಒಟ್ಟಾಗಿ ಎದುರಿಸಿ ತಮ್ಮ ಅಸ್ಮಿತೆ, ಸ್ವಾತಂತ್ರ್ಯ, ಪರಸ್ಪರ ಹಿತಾಸಕ್ತಿಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎರಡೂ ದೇಶಗಳಿಗಿದೆ.
ಮೋದಿ ಜಪಾನ್ ಪ್ರವಾಸದ ಹಿಂದಿರುವ ನಿರೀಕ್ಷೆ, ಅವಕಾಶ, ಸವಾಲುಗಳು:
ಭಾರತ ಹಾಗೂ ಜಪಾನ್ ದೇಶಗಳಿಗೆ ಹೊಸ ಆರ್ಥಿಕ ಪುನಚ್ಛೇತನ ನೀಡುವ ಪ್ರಯತ್ನದಲ್ಲಿರುವ ಮೋದಿ-ಆಬೆ ಈ ಬಾರಿ ಟೋಕಿಯೊದಲ್ಲಿ ಒಟ್ಟಾದಾಗ ಮುಖ್ಯವಾಗಿ ವ್ಯಾಪಾರ-ವಾಣಿಜ್ಯ, ರಕ್ಷಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಹಿಂದೂ ಮಹಾಸಾಗರದಲ್ಲಿ ಕಡಲತೀರದ ಸಹಕಾರ, ಬಂದರು ಅಭಿವೃದ್ಧಿ ಮತ್ತು ಪರಸ್ಪರ ಸರಕುಗಳ ರಕ್ಷಣಾ ಒಪ್ಪಂದಗಳಿಗೆ ಸಹಿಹಾಕುವ ನಿರೀಕ್ಷೆಯಿದೆ.
ಜಪಾನ್ ತಂತ್ರಜ್ಞಾನ ಹಾಗೂ ಸಹಭಾಗಿತ್ವಕ್ಕೆ “ದೆಹಲಿ ಮೆಟ್ರೋ” ಯೋಜನೆ ಉತ್ತಮ ಉದಾಹರಣೆ. ಇಂದು ಸಂಪೂರ್ಣವಾಗಿ ಭಾರತವೇ ನಿರ್ವಹಿಸುತ್ತಿರುವ ಅತ್ಯಂತ ಯಶಸ್ವಿ ಮತ್ತು ಮಾದರಿ ಸಂಚಾರ ವ್ಯವಸ್ಥೆ. ಅತ್ಯಂತ ಕಡಿಮೆ ಬಡ್ಡಿದರ ಹಾಗೂ ತಂತ್ರಜ್ಞಾನದೊಂದಿಗೆ ಕಳೆದ ವರ್ಷ ಶಂಕುಸ್ಥಾಪನೆಗೊಂಡ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾಮಗಾರಿ ಜಪಾನ್ ದೇಶದ ಶಿಂಕಾನ್ಸೆನ್ ತಂತ್ರಜ್ಞಾನ ಅಥವಾ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸಹಭಾಗಿತ್ವಕ್ಕೆ ಮತ್ತೊಂದು ಉದಾಹರಣೆ. ಬುಲೆಟ್ ರೈಲು ಯೋಜನೆಗೆ ಅಗತ್ಯ ಭೂಪ್ರದೇಶದ ಒತ್ತುವರಿಯಲ್ಲಿ ತೊಡಕಾಗುತ್ತಿದೆ ಮತ್ತು ನಿರೀಕ್ಷಿತ ವೇಗದಲ್ಲಿ ಈ ಯೋಜನೆ ಸಾಗುತ್ತಿಲ್ಲ ಎಂಬ ವರದಿಗಳ ನಡುವೆಯೇ, ಜಪಾನ್ ಮೊದಲ ಕಂತಿನ 5,500 ಕೋಟಿ ರೂಪಾಯಿಗಳ ಸಾಲವನ್ನು ಬಿಡುಗಡೆಗೊಳಿಸಿದೆ.
ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಹೊಸ ಕ್ಷೇತ್ರ, ಶಿಸ್ತುಗಳಲ್ಲಿ ಜಪಾನ್‍ನಿಂದ ಹೆಚ್ಚಿನ ಹೂಡಿಕೆ ಆಗುವ ನಿರೀಕ್ಷೆಯಿದೆ. ಆದರೆ ಜಪಾನ್‍ನೊಂದಿಗಿನ ಬಾಂಧವ್ಯದಿಂದ ಕೇವಲ ತಂತ್ರಜ್ಞಾನದ ಬಳಕೆ ಆಗುತ್ತಿದೆಯೇ ಹೊರತು “ಸಂಕೀರ್ಣ ತಂತ್ರಜ್ಞಾನಗಳ ವರ್ಗಾವಣೆ” ಆಗುತ್ತಿಲ್ಲ ಎಂಬುದು ಗಂಭೀರವಾದ ವಿಚಾರ. ರೋಬೋಟಿಕ್ಸ್, ಕೃತಕ ಬುದ್ಧಿವಂತಿಕೆ, ಹೊಸಯುಗದ ರಕ್ಷಣಾ ತಂತ್ರಜ್ಞಾನಗಳು ಇತ್ಯಾದಿಗಳಲ್ಲಿ ಜಪಾನ್ ಅಗ್ರಸ್ಥಾನದಲ್ಲಿದೆ. ಅಂತಹ ತಂತ್ರಜ್ಞಾನ ಆವಿಷ್ಕಾರಗಳನ್ನು ಭಾರತ ಕೊಂಡುಕೊಂಡರೂ, “ಮೇಕ್ ಇನ್ ಇಂಡಿಯಾ” ಯೋಜನೆಯಡಿಯಲ್ಲಿ ಭಾರತದಲ್ಲಿ ನಿರ್ಮಾಣ ಘಟಕಗಳನ್ನು ಸ್ಥಾಪಿಸುವ ಒಪ್ಪಂದಗಳಾದರೂ ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆ ಆಗುವ ವಿಚಾರದಲ್ಲಿ, ಅಂದರೆ ಅವುಗಳನ್ನು “ಮೇಡ್ ಇನ್ ಇಂಡಿಯಾ”ಗಳಾಗಿಸಿಕೊಳ್ಳುವುದರಲ್ಲಿ ಭಾರತ ಒಂದು ಹೆಜ್ಜೆ ಹಿಂದಿದೆ. ಜಪಾನ್ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ತಂತ್ರಜ್ಞಾನ ವರ್ಗಾವಣೆಗೆ ತಮ್ಮ ಒಪ್ಪಿಗೆಯನ್ನು ನೀಡುವುದಿಲ್ಲ. ಹಾಗಾಗಿ ಈ ಬಾರಿಯ ಶೃಂಗಸಭೆಯಲ್ಲಿ ಇದಕ್ಕೆ ತಾರ್ಕಿಕ ಪರಿಹಾರವನ್ನು ಕಂಡುಕೊಂಡರೆ ಭಾರತಕ್ಕೂ ಪ್ರಯೋಜನ ಮತ್ತು ಶೃಂಗಸಭೆಯೂ ಸಾರ್ಥಕ.
ಇದರ ಜೊತೆಗೆ ಜಪಾನ್ ಪ್ರಾಯೋಜಿತ “ಡೆಡಿಕೆಟೆಡ್ ಫ್ರೈಟ್ ಕಾರಿಡಾರ್”ಯೋಜನೆಗಳು ಸುಲಭ ಮತ್ತು ವೇಗವಾದ ಸರಕು ಸಾಗಾಟಕ್ಕೆ ಸಹಕಾರಿ. ಇವು ನಿರರ್ಗಳ ಭೂಸಾರಿಗೆ ಸಂಪರ್ಕ ಹಾಗೂ ಸಂವಹನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲಿವೆ. ದೆಹಲಿ ಮತ್ತು ಮುಂಬಯಿ ನಡುವಿನ ಸರಕು ಸಾಗಾಟದ ಅವಧಿಯನ್ನು ಕಡಿತಗೊಳಿಸಿ ಸುಮಾರು 12 ಕೈಗಾರಿಕಾ ಟೌನ್‍ಶಿಪ್‍ಗಳನ್ನು ಸೃಷ್ಟಿಸಿ ಅನೇಕ ಹೊಸ ಉದ್ಯೋಗ ಹಾಗೂ ಉತ್ಪಾದನೆಯನ್ನು ಹೆಚ್ಚಿಸಲಿರುವ, “ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್”, ಬೆಂಗಳೂರು-ಚೆನೈ ಕೈಗಾರಿಕಾ ಕಾರಿಡಾರ್‍ಗಳು ಕೂಡ ಅಲ್ಲಲ್ಲಿ ಭೂ ಒತ್ತುವರಿ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ. ಅವುಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವ ಹೊಣೆಗಾರಿಕೆ ಭಾರತದ ಮೇಲಿದೆ. ಇವುಗಳ ಜಾರಿಯ ಜೊತೆಗೆ ಈ ಬಾರಿಯ ದ್ವಿಪಕ್ಷೀಯ ಶೃಂಗಸಭೆಯಲ್ಲಿ, ಎರಡೂ ದೇಶಗಳು ಚೀನಾದ “ಒಂದು ಬೆಲ್ಟ್ ಒಂದು ರಸ್ತೆ” ಯೋಜನೆಗೆ ಪರ್ಯಾಯ ಯೋಜನೆ ಮತ್ತು ಎರಡೂ ದೇಶಗಳ ಸಾರ್ವಭೌಮತೆಗೆ ಧಕ್ಕೆಯಾಗದಂತೆ ಮುಕ್ತ ವ್ಯಾಪಾರ ವ್ಯವಸ್ಥೆಗೆ ಇಂಬುಕೊಡುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಿವೆ. ಅದಾಗಲೇ ಭಾರತ-ಜಪಾನ್ ಮತ್ತು ಕೆಲವು ಆಫ್ರಿಕಾ ದೇಶಗಳ ಸಹಭಾಗಿತ್ವದಲ್ಲಿ ಘೋಷಿಸಿರುವ “ಏಷ್ಯಾ-ಆಫ್ರಿಕಾ ಗ್ರೋಥ್ ಕಾರಿಡಾರ್(ಎಎಜಿಸಿ)”, ಒಬಿಒಆರ್‍ಗೆ ಪರ್ಯಾಯ ಯೋಜನೆ ಆಗಲಿದೆ.
ಈಗಾಗಲೇ ಹೇಳಿರುವಂತೆ ಭಾರತದ ಈಶಾನ್ಯ ರಾಜ್ಯಗಳ ಮಧ್ಯೆ ಉತ್ತಮ ಸಂಚಾರ, ಸಂಪರ್ಕಕ್ಕೆ ಪೂರಕವಾದ ಯೋಜನೆಯನ್ನು ಘೋಷಿಸಲಿದ್ದಾರೆ. ಅದು ಬಂದರು ಅಭಿವೃದ್ಧಿಯ ಯೋಜನೆ ಆಗಿರಲಿದೆ ಎಂಬ ಸೂಚನೆ ದೊರೆತಿದೆ. ಚೀನಾದ ಒಬಿಒಆರ್ ಬಂದರು ಹಾಗೂ ಸ್ಥಳಿಯ ಸಂಚಾರ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿಕೊಳ್ಳುವ ಯೋಜನೆ. ಪಾಕಿಸ್ತಾನದ ಗ್ವಾದಾರ್, ಶ್ರೀಲಂಕಾದ ಹಂಬಂಟೋಟ ಬಂದರುಗಳು ಉತ್ತಮ ನಿದರ್ಶನ. ಭಾರತವೇ ನಿರ್ಮಿಸಿರುವ ಇರಾನ್‍ನ ಛಾಬಹಾರ್ ಬಂದರು, ಎಎಜಿಸಿ, ಪೂರ್ವ ಏಷ್ಯಾ- ಆಗ್ನೇಯ ಏಷ್ಯಾವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯಲು ಹೊರಟಿರುವ ಬಂದರು ಯೋಜನೆ ಭಾರತ, ಜಪಾನ್ ಹಾಗೂ ಚೀನಾ ವಿಸ್ತಾರವಾದಿ ಧೋರಣೆಯಿಂದ ಬೇಸತ್ತಿರುವ ದೇಶಗಳಿಗೆ ವರದಾಯಕವಾಗಲಿದೆ. ಅದೇ ಯೋಜನೆಯ ಭಾಗವಾಗಿ ಅಥವಾ ಪ್ರತ್ಯೇಕವಾಗಿ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ದೇಶಗಳನ್ನು ಈಶಾನ್ಯ ಭಾರತದ ಜೊತೆಗೆ ಬೆಸೆಯುವ ಯೋಜನೆಯೂ ವ್ಯವಸ್ಥಿತ ಸಂಚಾರ, ಸುವ್ಯವಸ್ಥೆಯನ್ನು ನಿರ್ಮಿಸುವ ದೃಷ್ಟಿಯಿಂದ ಮಹತ್ವಪೂರ್ಣವಾಗಿರಲಿದೆ.
ರಕ್ಷಣೆ:
ಈ ಬಾರಿಯ ಶೃಂಗಸಭೆ ಭಾರತ ಹಾಗೂ ಜಪಾನ್ ನಡುವಿನ ಗಾಢವಾದ ಮಿಲಿಟರಿ ಸಂಬಂಧಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಜಪಾನ್‍ನಿಂದ “ಶಿನ್ಮೇವಾ ಯುಎಸ್-2 ಆಂಫಿಬಿಯನ್ ಯುದ್ಧವಿಮಾನ”ಗಳನ್ನು ಖರೀದಿಸಲು ನಿರ್ಧರಿಸಿರುವ ಭಾರತದಿಂದ ಹೆಚ್ಚಿನ ಬೆಳವಣಿಗೆಗಳು ಕಂಡುಬಂದಿಲ್ಲ. ಜಪಾನ್ ಜಲಸೇನೆಯ “ಕ್ರೌನ್ ಜುವೆಲ್” ಎಂದು ಹೆಸರಾದ “ಸೊರ್ಯು ಕ್ಲಾಸ್ ಡಿಸೆಲ್-ಎಲೆಕ್ಟ್ರಿಕ್ ಅಟಾಕ್ ಸಬ್ಮೆರಿನ್”ಗಳ ಖರೀದಿ, ತಂತ್ರಜ್ಞಾನ ಹಸ್ತಾಂತರ ಇತ್ಯಾದಿ ಸಂಗತಿಗಳ ಬಗೆಗೂ ಸ್ಪಷ್ಟತೆ ದೊರೆಯುವ ಸಾಧ್ಯತೆಯಿದೆ. ಫ್ರಾನ್ಸ್ ಯುದ್ಧ ವಿಮಾನ ಖರೀದಿ ಸುತ್ತ ನಡೆಯುತ್ತಿರುವ ಬಿಸಿಬಿಸಿ ಚರ್ಚೆಯ ಕಾರಣದಿಂದ ಒಂದೋ “ಶಿನ್ಮೇವಾ ವಿಮಾನ” ಕೊಳ್ಳುವ ಪ್ರಕ್ರಿಯೆ ವೇಗಪಡೆಯಬಹುದು ಅಥವಾ ನಿಧಾನವೂ ಆಗಬಹುದು.
ಜಪಾನ್, ಅಮೆರಿಕ, ಆಸ್ಟ್ರೇಲಿಯ ಮತ್ತು ಭಾರತ ದೇಶಗಳು ಆರಂಭಿಸಿದ, 4 ದೇಶಗಳ “ಕ್ವಾಡ್” ಅಥವಾ “ಕ್ವಾಡ್ರಿಲ್ಯಾಟ್ರಲ್ ಸೆಕ್ಯುರಿಟಿ ಡೈಲಾಗ್” ಚೀನಾದ ಬೆಳೆಯುತ್ತಿರುವ ಆಕ್ರಮಣಶೀಲ ಪ್ರವೃತ್ತಿಗೆ ಪರ್ಯಾಯವಾದ ರಕ್ಷಣಾ ಒಪ್ಪಂದ. ನಾಲ್ಕೂ ದೇಶಗಳು ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲಿ ಮುಕ್ತ ಓಡಾಟ, ಮುಕ್ತ ವಾಯುನೆಲೆ, ಅಂತರಾಷ್ಟ್ರೀಯ ಕಾನೂನುಗಳಿಗೆ ಬದ್ಧತೆ ಮೊದಲಾದ ನೆಲೆಗಳಲ್ಲಿ ಚರ್ಚೆಗಳನ್ನು ನಡೆಸುತ್ತಿವೆ. ಯಾವುದೇ ಕ್ರಿಯಾಯೋಜನೆ, ದೂರಗಾಮಿ ಆಯಕಟ್ಟಿನ ಸಿದ್ಧತೆಯಿಲ್ಲದೆ ಇದನ್ನು “ನೀರಿನ ಮೇಲಿನ ಗುಳ್ಳೆ” ಎಂಬಂತೆ ಪರಿಗಣಿಸಲಾಗುತ್ತಿದ್ದರೂ ಚೀನಾ “ಕ್ವಾಡ್”ನಿಂದ ಆತಂಕಕ್ಕೊಳಗಾಗಿರುವುದು ಸುಳ್ಳಲ್ಲ. ಕ್ವಾಡ್‍ನ ಮುಂದುವರೆದ ಭಾಗವಾಗಿ ಹಿಂದೂ ಮಹಾಸಾಗರದಲ್ಲಿ ಜಪಾನ್-ಅಮೆಇಕ ಮತ್ತು ಭಾರತ ಜಲಸೇನೆಗಳ ಮಧ್ಯೆ ನಡೆಯುವ ವಾರ್ಷಿಕ “ಮಲಬಾರ್ ವ್ಯಾಯಾಮ” ಮಿಲಿಟರಿ ಶಕ್ತಿಪ್ರದರ್ಶನ ಹಾಗೂ ಹೊಸ ಸವಾಲುಗಳ ಕಲಿಕೆಯ ವೇದಿಕೆಯಾಗಿ ರೂಪುಗೊಂಡಿದೆ. ನವೆಂಬರ್‍ನಲ್ಲಿ ನಡೆಯಲಿರುವ ಭಾರತ-ಜಪಾನ್ ಭುಸೇನಾ ಮಿಲಿಟರಿ ವ್ಯಾಯಾಮ ಮತ್ತು ತದನಂತರ ನಡೆಯಬಹುದಾದ ವಾಯುಸೇನಾ ವ್ಯಾಯಾಮಗಳು ದ್ವಿಪಕ್ಷೀಯವಾಗಿ ಎರಡೂ ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ಹತ್ತಿರವಾಗುತ್ತಿರುವುದಕ್ಕೆ ಸೂಚನೆ.
ಗಾಢವಾಗುತ್ತಿರುವ ರಕ್ಷಣಾ ಮಿತ್ರತ್ವ ಮುಂದೆ ಉಭಯ ದೇಶಗಳೂ ರಕ್ಷಣಾ ಉಪಕರಣಗಳ ಕೊಡು-ಕೊಳ್ಳುವಿಕೆಯಲ್ಲಿ ಸಕ್ರಿಯ ಪಾತ್ರವಹಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಸಾಗರ ಸರಕು ಸಂಚಾರ ರಕ್ಷಣಾ ಒಪ್ಪಂದ ಇದಕ್ಕೆ ಪೂರಕವಾಗಿ ಬರುತ್ತಿರುವುದು ಉಭಯದೇಶಗಳಿಗೂ ಉಪಯೋಗವಾಗಲಿದೆ. ಜಪಾನ್‍ಗೆ ರಕ್ಷಣೆ ದೊರೆತರೆ, ಭಾರತಕ್ಕೆ ಜಪಾನ್ ಸರಕುಗಳ ಹಾಗೂ ಸ್ನೇಹದ ಲಭ್ಯತೆ ಮತ್ತು ಬೆಳೆಯುತ್ತಿರುವ ಚೀನಾದ ಪ್ರಾಬಲ್ಯಕ್ಕೆ ಪರ್ಯಾಯ ಶಕ್ತಿ ಒಕ್ಕೂಟವನ್ನು ನಿರ್ಮಿಸಿಕೊಂಡಂತಾಗುತ್ತದೆ. ಏನೂ ಮಾಡದೆ ಚೀನಾ ದೇಶಕ್ಕೆ ಸಂದೇಶ ಹಾಗೂ ಏಷ್ಯಾ-ಫೆಸಿಫಿಕ್ ಪ್ರಾಂತ್ಯವನ್ನು ಶಾಂತಿ, ಸುವ್ಯವಸ್ಥೆ ಮತ್ತು ಮುಕ್ತವಾಗಿ ಉಪಯೋಗಿಸಿಕೊಳ್ಳುವ ವಾತಾವರಣ ನಿರ್ಮಿಸಲು ಪೂರಕವಾಗಲಿದೆ.
ವ್ಯಾಪಾರ ಮತ್ತು ವಹಿವಾಟು:
ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಜಪಾನ್ ಮೊದಲಸ್ಥಾನದಲ್ಲಿದೆ. ಮೋದಿ 2014ರಲ್ಲಿ ಭೂತಾನ್‍ನಂತರ ಕೈಗೊಂಡ ಎರಡನೇ ಪ್ರವಾಸದಲ್ಲಿ ಜಪಾನ್‍ನ ಹೂಡಿಕೆಗೆ ಪ್ರತ್ಯೇಕ ವ್ಯವಸ್ಥೆ ಒದಗಿಸುವ ಕೆಂಪುಹಾಸಿನ ಸ್ವಾಗತವನ್ನು ಕೋರಲಾಗುವುದು ಮತ್ತು ವ್ಯಾಪಾರದಲ್ಲಿ ಸರಳತೆಯ ಸುಧಾರಣೆಯನ್ನು ತರುವುದಾಗಿ ಘೋಷಿಸಿದ್ದರು. ಜಂಟಿ ಸುದ್ದಿಗೋಷ್ಟಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಭಾರತಕ್ಕೆ 35 ಬಿಲಿಯನ್ ಡಾಲರ್‍ಗಳನ್ನು ಹೂಡುವುದಾಗಿ ಹೇಳಿದ್ದರು. ಆದರೆ ಅದರಲ್ಲಿ ಕೇವಲ 12-13 ಬಿಲಿಯನ್ ಡಾಲರ್‍ಗಳಷ್ಟೇ ಭಾರತಕ್ಕೆ ಹರಿದುಬಂದಿದೆ. ನಿಧಾನಗತಿಯಲ್ಲಿ ಸಾಗುತ್ತಿರುವ ಜಪಾನ್ ಆರ್ಥಿಕತೆಯಿಂದ ನಿರೀಕ್ಷಿತ ಪ್ರಮಾಣದ ಹೂಡಿಕೆ ಸಧ್ಯಕ್ಕೆ ಈಡೇರುವಂತೆ ತೋರುತ್ತಿಲ್ಲ. 2014ರ ನಂತರ ಕೇಂದ್ರ ಸರಕಾರ ಕೈಗೊಂಡ ಕೆಲವಾರು ಆಡಳಿತ ಸುಧಾರಣೆಯಿಂದ 2017ರಲ್ಲಿ ಮೊದಲಬಾರಿಗೆ ವಿಶ್ವಬ್ಯಾಂಕ್‍ನ “ಈಸ್ ಆಫ್ ಡೂಯಿಂಗ್ ಬಿಸ್ನೆಸ್” ಶ್ರೇಣಿಯಲ್ಲಿ 130ನೇ ಸ್ಥಾನದಿಂದ ಭಾರತ 100ನೇ ಸ್ಥಾನಕ್ಕೆ ಜಿಗಿಯಿತು.
ಆದರೂ ಪರಸ್ಪರ ದೇಶಗಳ ನಡುವಿನ ವ್ಯಾಪರ-ವಹಿವಾಟಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಪಾರ ಪ್ರಮಾಣದ ಕೊರತೆ ಕಂಡುಬರುತ್ತಿದೆ. ಎರಡೂ ದೇಶಗಳ ನಡುವಿನ ವಾರ್ಷಿಕ ವ್ಯಾಪಾರದ ಪ್ರಮಾಣ 16ಬಿಲಿಯನ್ ಡಾಲರ್‍ಗಳಿಂದ 13ಬಿಲಿಯನ್ ಡಾಲರ್‍ಗಳಿಗೆ ಇಳಿದಿದೆ. ಅದೇ ಹೊತ್ತಿಗೆ ಚೀನಾ ಹಾಗೂ ಜಪಾನ್ ನಡುವೆ 300 ಬಿಲಿಯನ್ ಡಾಲರ್‍ಗಳಷ್ಟು ಪ್ರಮಾಣದ ಬೃಹತ್ ವ್ಯಾಪಾರ ವಹಿವಾಟು ನಡೆಯುತ್ತಿದೆ. ಜೊತೆಗೆ ಭಾರತೀಯ ವ್ಯಾಪಾರಸ್ಥರಿಗೆ ಜಪಾನ್‍ನ ಮಾರುಕಟ್ಟೆ ಸರಿಯಾಗಿ ತೆರೆದುಕೊಂಡಿಲ್ಲ. ಭಾರತದ ವಸ್ತುಗಳ ಮೇಲೆ ಹೆಚ್ಚಿನ ಗುಣಮಟ್ಟದ ನಿಯಂತ್ರಣ ಹೇರುವ ಕಾರಣ ಭಾರತ ಮೂಲದ ಉತ್ಪನ್ನ ಹಾಗೂ ಸೇವೆಗಳಿಗೆ ಜಪಾನ್‍ನಲ್ಲಿ ಬಾಗಿಲು ಮುಚ್ಚಿದಂತಹ ವಾತಾವರಣ ನಿರ್ಮಾಣವಾಗಿದೆ. 2011ರಲ್ಲಿ ಎರಡೂ ದೇಶಗಳು “ಸಮಗ್ರ ಆರ್ಥಿಕ ಪಾಲುದಾರಿಕೆ” ಒಪ್ಪಂದಕ್ಕೆ ಸಹಿಹಾಕಿದ್ದರೂ ಪರಸ್ಪರ ಭಾಷೆ ಹಾಗೂ ದಿನನಿತ್ಯದ ಸಣ್ಣಪುಟ್ಟ ಕಿರಿಕಿರಿಗಳ ಪರಿಣಾಮ ಎರಡು ದೇಶಗಳ ನಡುವಿನ ವ್ಯಾಪಾರ, ವಹಿವಾಟಿನಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಸಂಭವಿಸುತ್ತಿಲ್ಲ. ತಾತ್ವಿಕವಾಗಿ ಎರಡೂ ದೇಶಗಳು ಹತ್ತಿರವಾಗುತ್ತಿದ್ದರೂ ವಾಸ್ತವಿಕ ವ್ಯವಹಾರಗಳಲ್ಲಿ, ನೆಲದಲ್ಲಿ ಯಾವುದೇ ಬದಲಾವಣೆಗಳು ಸಂಭವಿಸುತ್ತಿಲ್ಲ. ಮೋದಿ-ಆಬೆ ಶೃಂಗಸಭೆಯಲ್ಲಿ ಇದಕ್ಕೊಂದು ಪರಿಹಾರ.
ಉಪಸಂಹಾರ:
ತಾತ್ವಿಕವಾಗಿ ಭಾರತ ಹಾಗೂ ಜಪಾನ್ ಮತ್ತು ಎರಡೂ ದೇಶಗಳ ಪ್ರಧಾನಿಗಳು ಬಹುಹತ್ತಿರವಾಗುತ್ತಿದ್ದಾರೆ ಆದರೆ ವಾಸ್ತವಿಕ ನೆಲದಲ್ಲಿ ಆ ತಾತ್ವಿಕತೆಗಳು ನಿರೀಕ್ಷಿತ ಉತ್ಪಾದಕ ಕ್ರಿಯೆಯಾಗಿ, ಫಲಿತಾಂಶವಾಗಿ ಹೊರಹೊಮ್ಮುತ್ತಿಲ್ಲ ಎಂಬುದೇ ಎರಡೂ ದೇಶಗಳ ನಡುವಿನ ಸಂಬಂಧಗಳ ನಡುವಿರುವ ಕೊರತೆ. ‘ಹಲವರು ಒಟ್ಟಾಗುತ್ತಾರೆ, ಆದರೆ ಕೆಲವರು ಮಾತ್ರವೇ ಸಾಧಿಸುವ ಪಣ ತೊಡುತ್ತಾರೆ ಮತ್ತು ಸಾಧಿಸಿ ತೋರಿಸುತ್ತಾರೆ’ ಎಂಬ ಮಾತು ಭಾರತ-ಜಪಾನ್ ಬಾಂಧವ್ಯಕ್ಕೆ ಹಿಡಿಯುವ ಕನ್ನಡಿ ಆಗಬೇಕಿದೆ. ಅದಕ್ಕಾಗಿ ವರ್ಷಂಪ್ರತಿ ನಡೆಯುವ ದ್ವಿಪಕ್ಷೀಯ ಶೃಂಗಸಭೆ ಉತ್ತಮ ವೇದಿಕೆ ಮತ್ತು ಅವಕಾಶ. ಅದನ್ನು ಸಮರ್ಥವಾಗಿ ಬಳಸಿಕೊಂಡು ಉಭಯ ದೇಶಗಳ ನಡುವಿನ ವಾಸ್ತವಿಕ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.
ಜಪಾನ್ ಶಕ್ತಿ ಮತ್ತು ಭಾರತದ ಆಸಕ್ತಿ ಎರಡೂ ಒದಕ್ಕೊಂದು ಅಭಿನಂದಿಸಿಕೊಳ್ಳುವ ಸಂಗಂತಿ. 21ನೇ ಶತಮಾನ ಏಷ್ಯಾದ್ದಾಗಬೇಕಾದರೆ ಈ ಎರಡೂ ಶಕ್ತಿಗಳು ಬಹುತೇಕ ಎಲ್ಲಾ ಆಯಕಟ್ಟಿನ ಕ್ಷೇತ್ರಗಳಲ್ಲಿ ಮತ್ತಷ್ಟು ಹತ್ತಿರವಾಗಬೇಕು, ರಕ್ಷಣೆ, ವ್ಯಾಪಾರ, ಜಾಗತಿಕ ವೇದಿಕೆಗಳಲ್ಲಿ ಪರಸ್ಪರ ಹಿತಾಸಕ್ತಿಗಳಿಗೆ ಅನುಗುಣವಾದ ಕಾರ್ಯತಂತ್ರದ ಪಾಲುದಾರರಾಗಬೇಕು. ಭಾರತಕ್ಕೆ ಜಪಾನ್‍ನಿಂದ ಹರಿದುಬರುವ ಬಂಡವಾಳ, ಯೋಜನೆಗಳ ಜೊತೆಗೆ ತಂತ್ರಜ್ಞಾನ ಹಸ್ತಾಂತರ, ಹೊಸ ಆವಿಷ್ಕಾರಗಳ ಪರಸ್ಪರ ಹಂಚಿಕೊಳ್ಳುವಿಕೆಯೂ ಅತ್ಯಗತ್ಯ. ಜಪಾನ್ ಎಂದ ಕೂಡಲೇ ಅಣುಶಕ್ತಿಯ ನೆನಪೂ ಆಗುತ್ತದೆ. 2016ರಲ್ಲಿ ಭಾರತ ಹಾಗೂ ಜಪಾನ್ ನಾಗರಿಕ ಅಣು ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಆ ನೆಲೆಯಲ್ಲಿ ಯಾವುದೇ ಬೆಳವಣಿಗೆಗಳಾಗಿಲ್ಲ ಎಂಬುದೂ ಸತ್ಯ. ಶೃಂಗಸಭೆಯಲ್ಲಿ ಈ ನಿಟ್ಟಿನಲ್ಲಿ ಅಗತ್ಯ ಬೆಳವಣಿಗೆಗಳು ಆಗಬೇಕಿವೆ.
‘ನಾಯಕರ ಸಾಮಥ್ರ್ಯಕ್ಕೆ ತಕ್ಕಂತೆ ದೇಶಗಳ ನಡುವಿನ ಸಂಬಂಧ ನಿರ್ಧರಿತವಾಗುತ್ತದೆ’. ಅದರಂತೆ ಭಾರತ ಮತ್ತು ಜಪಾನ್‍ಗೆ ಇಬ್ಬರೂ ಸಮರ್ಥ ನಾಯಕರು ದೊರೆತಿದ್ದಾರೆ. ಶಿಂಜೋ ಆಬೆಯವರಿಗೆ ಪ್ರಧಾನಿಯಾಗಿ ಇನ್ನೂ ಮೂರು ವರ್ಷಗಳ ಅವಧಿಯಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರಕಾರ ಆರಿಸಿಬಂದರೆ ಅಥವಾ ಇದಕ್ಕಿಂತಲೂ ಶಕ್ತ ಸರಕಾರ ರಚನೆಯಾದರೆ ಈ ಬಾಂಧವ್ಯ ಬೃಹತ್ ಮೈಲಿಗಲ್ಲನ್ನು ಸಾಧಿಸುವುದರಲ್ಲಿ ಅನುಮಾನವಿಲ್ಲ.
– _ಶ್ರೇಯಾಂಕ ಎಸ್ ರಾನಡೆ.
Facebook ಕಾಮೆಂಟ್ಸ್