ಪಾಲಿಗೆ ಬಂದದ್ದು ಪಂಚಾಮೃತ, ಇದ್ದಿದ್ದರಲ್ಲಿ ಬದುಕುವುದು ಕಲಿಯಬೇಕು ಎನ್ನುವುದನ್ನ ತಲೆಮಾರಿನಿಂದ ತಲೆಮಾರಿಗೆ ಹೇಳಿಕೊಡುತ್ತ ಬಂದರು. ನಾವು ಕೂಡ ನಮ್ಮ ಹಿರಿಯರು ಹೇಳಿದ್ದ ಪಾಲಿಸುತ್ತಾ ಬಂದೆವು. ಆದರೆ ಕಳೆದ ಎರಡು ಅಥವಾ ಮೂರು ದಶಕದಲ್ಲಿ ಜಗತ್ತು ಬದುಕುವ ರೀತಿಯೇ ಬದಲಾಗಿ ಹೋಗಿದೆ. ಇದ್ದಿದ್ದರಲ್ಲಿ ಬದುಕಬೇಕು ಎನ್ನುವ ಜಾಗದಲ್ಲಿ ಸಾಲ ಮಾಡಿಯಾದರೂ ಸರಿಯೇ ಗಡಿಗೆ ತುಪ್ಪ ಮಾತ್ರ ಕುಡಿಯಲೇಬೇಕು ಎನ್ನುವ ಹಂತಕ್ಕೆ ಬಂದು ನಿಂತಿದೆ. ನಮ್ಮ ಆದಾಯದ ಮಿತಿಯಲ್ಲಿ ಎಲ್ಲಿಯವರೆಗೆ ಬದುಕುತ್ತಿದ್ದೆವೋ ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ನಮ್ಮ ಹಿರಿಯರಿಗೆ ಬದುಕಿನ ಕೆಲವೊಂದು ನಿಯಮ ತಿಳಿದಿತ್ತು. ಅದನ್ನ ಮೀರಿದರೆ ಏನಾಗಬಹದು ಎನ್ನುವುದರ ಅರಿವೂ ಇತ್ತು. ಆ ಕಾರಣಕ್ಕಾಗಿಯೆ ಅವರು ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದರು. ಅದನ್ನ ಪಾಲಿಸಕೊಂಡ ಬಂದ ನಮ್ಮ ಜನ ಬದುಕನ್ನ ಬಹಳ ಪ್ರೀತಿಯಿಂದ ಆಸ್ವಾದಿಸುತ್ತಿದ್ದರು. ಅಭಿವೃದ್ಧಿಯ ಹೆಸರಲ್ಲಿ ಸಮಾಜದಲ್ಲಿ ಇಂದು, ಎಲ್ಲವೂ ಬದಲಾವಣೆ ಕಂಡಿದೆ. ಕೆಲಸಕ್ಕೆ ಸೇರಿದ ಎರಡನೇ ತಿಂಗಳು ಸಾಲದಲ್ಲಿ ಕೊಂಡ ಕಾರು ಮನೆಯ ಮುಂದೆ ನಿಂತಿರುತ್ತದೆ. ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುವರಿಲ್ಲ. ಹೇಳಿದರೂ ಕೇಳುವ ತಾಳ್ಮೆ ಇಂದಿನ ಜನಾಂಗಕ್ಕೆ ಇಲ್ಲ. ಗಾದೆಯ ಮಾತು ಕೇಳುವುದು ಹಾಗಿರಲಿ ಮನೆಯಲ್ಲಿ ಸ್ವಂತ ತಂದೆ ತಾಯಿಯೊಂದಿಗೆ ವಾಸಿಸುವುದು ಅವರ ಮಾತು ಕೇಳುವುದು ಇಂದು ಆಶ್ಚರ್ಯ ಎನ್ನುವಂತಾಗಿದೆ. ಇರಲಿ
ಇಂದಿನ ಸ್ಪಾನಿಷ್ ಗಾದೆ ‘Hay que estirar los pies hasta donde llegue la sabana’ (ಹಾಯ್ ಕೆ ಎಸ್ತಿರಾರ್ ಲಾಸ್ ಪಿಯೆಸ್ ಹಸ್ತ ದೊಂದೆ ಯೇಗ ಲ ಸಬನ) ಸ್ಪೇನ್ ನಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ ಹಲವು ಗಾದೆಗಳಲ್ಲಿ ಒಂದು. ಆದರೆ ವಿಪರ್ಯಾಸ ನೋಡಿ ಅಷ್ಟೊಂದು ಪ್ರಸಿದ್ಧ ಗಾದೆಯನ್ನ ಜನ ಅಳವಡಿಸಿಕೊಳ್ಳಲು ವಿಫಲರಾಗಿದ್ದಾರೆ. ಈ ಗಾದೆಯನ್ನು ಸ್ಪಾನಿಷ್ ಜನತೆ ಪಾಲಿಸಿದ್ದೆ ಆಗಿದ್ದಲ್ಲಿ, ಇಂದು ಸ್ಪೇನ್ ಅರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರಲಿಲ್ಲ. ಕೆಲವೊಂದು ಗಾದೆಗಳು ನಮ್ಮ ಕನ್ನಡದಿಂದ ಯಥಾವತ್ತಾಗಿ ಸ್ಪ್ಯಾನಿಷ್ ಭಾಷೆಗೆ ಅನುವಾದ ಮಾಡಿದ್ದಾರೇನೋ ಎನ್ನುವಷ್ಟು ಸಾಮ್ಯತೆ ಹೊಂದಿವೆ. ಕನ್ನಡದ ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎನ್ನುವುದು, ಇಂದಿನ ಸ್ಪ್ಯಾನಿಷ್ ಗಾದೆಯ ಯಥಾವತ್ತು ಅನುವಾದ ಎಂದರೆ ನೀವು ಹುಬ್ಬೇರಿಸಬಹುದು; ಆದರೆ ಇದು ಸತ್ಯ. ಅನುವಾದ ಯಥಾವತ್ತು ಸರಿ, ಅರ್ಥ? ಎನ್ನುವ ನಿಮ್ಮ ಇನ್ನೊಂದು ಪ್ರಶ್ನೆಗೂ ಉತ್ತರ ಅರ್ಥ ಕೂಡ ಡಿಟ್ಟೋ! ಬದುಕಿನಲ್ಲಿ ಸಾಮ್ಯತೆಗಳ ಪಟ್ಟಿ ಮಾಡುತ್ತಾ ಹೋದರೆ ಅಲ್ಲಿ ಇನ್ನೊಂದು ಪ್ರಪಂಚ ತೆಗೆದುಕೊಳ್ಳುತ್ತದೆ.
ಇನ್ನು ಇಂಗ್ಲಿಷ್ ಭಾಷಿಕರು, ಇದನ್ನೇ ‘Stretch Your Legs According to the Size of Your Quilt’ ಎನ್ನುತ್ತಾರೆ. ಮೆರ್ಸಿಡೆಸ್ ಕಾರು ಕೊಳ್ಳಲು ಶಕ್ತಿ ಇಲ್ಲದಿದ್ದರೆ ಅದನ್ನ ಕೊಳ್ಳಬೇಡ ಎನ್ನುವುದು ಬ್ರಿಟಿಷ್ ಹಿರಿಯರ ಕಿವಿಮಾತಾಗಿತ್ತು. ಜೇಬಿನಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಬೇರೆಯವರಿಂದ ಹಣ ಪಡೆದು ನೀನು ಬಯಸಿದ್ದು ಪಡೆಯಬೇಡ ಎನ್ನುವುದು ಅವರು ಕೂಡ ಪಾಲಿಸಿಕೊಂಡು ಬಂದದ್ದು. ಆದರೇನು, ಈವತ್ತು, ಮುಂದೆ ಹತ್ತಾರು ವರ್ಷ ದುಡಿಯುವ ಹಣವನ್ನ ಇಂದೇ ಪಡೆದು ವ್ಯಯಿಸಿ ಕಂತು ಕಟ್ಟುವ ಜೀವನ ಬ್ರಿಟಿಷರದ್ದು, ಮುಕ್ಕಾಲು ಪಾಲು ಜಗತ್ತಿನ ಜನರದ್ದು. ಇದೆ ಮಾತನ್ನ ಈಜಿಪ್ಟ್ ನಲ್ಲಿ ಕೂಡ ಹೇಳುತ್ತಾರೆ. ಮುಕ್ಕಾಲು ಪಾಲು ಜಗತ್ತಿನ ಎಲ್ಲಾ ದೇಶಗಳಲ್ಲಿ ಯೋಗ್ಯತೆಗೆ ತಕ್ಕಂತೆ ಬದುಕಲು ಸಲಹೆ ನೀಡಿದ್ದಾರೆ.
ಗಮನಿಸಿ ನೋಡಿ ನಮ್ಮ ಬಳಿ ಇರುವುದರಲ್ಲಿ ತೃಪ್ತಿಯಿಂದ ಬಾಳುವುದ ಕಲಿಯಬೇಕು ಎನ್ನುವುದು ದೇಶ, ಭಾಷೆ, ಧರ್ಮದ ಎಲ್ಲೆ ಮೀರಿ ಎಲ್ಲಾ ನಾಗರಿಕತೆ ಹೇಳುತ್ತದೆ. ಇದನ್ನ ಧಿಕ್ಕರಿಸಿ ಬದುಕಿದ್ದರ ಫಲವನ್ನ ನಾವು ಇಂದು ಉಣ್ಣುತ್ತಿದ್ದೇವೆ ಅಲ್ಲವೇ? ಮುಂದಾದರೂ ಇದನ್ನ ಪಾಲಿಸುವುದ ಕಲಿಯುವುದು ಅಥವಾ ಬಿಡುವುದು ಆಯ್ಕೆ ನಮ್ಮದೆ. ಆಯ್ಕೆಯಲ್ಲಿ ನಮ್ಮ ಜಾಣತನ ತೋರಿಸೋಣವೇ?
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:
Hay que estirar: ಹಿಗ್ಗಿಸು, ಲಂಬಿಸು ಅಥವಾ ಚಾಚು. ಟು ಸ್ಟ್ರೆಚ್ ಎನ್ನುವ ಅರ್ಥ. ಹಾಯ್ ಕೆ ಎಸ್ತಿರಾರ್ ಎನ್ನುವುದು ಉಚ್ಚಾರಣೆ.
los pies: ಕಾಲುಗಳನ್ನ. ಕಾಲನ್ನ. ಎನ್ನುವ ಅರ್ಥ. ಲಾಸ್ ಪಿಯೆಸ್ ಎನ್ನುವ ಉಚ್ಚಾರಣೆ.
hasta donde llegue: ಎಲ್ಲಿಯವರೆಗೆ ಸಾಧ್ಯವೋ, ಎಲ್ಲಿಯವರೆಗೆ ಮುಟ್ಟುತ್ತದೆಯೋ ಎನ್ನುವ ಅರ್ಥ. ಹಸ್ತ ದೊಂದೆ ಯೇಗ ಎನ್ನುವುದು ಉಚ್ಚಾರಣೆ.
la sabana : ಹೊದ್ದಿಗೆ, ಶೀಟ್ ಅಥವಾ ಬೆಡ್ ಶೀಟ್ ಎನ್ನುವ ಅರ್ಥ. ಲ ಸಬನ ಎನ್ನುವುದು ಉಚ್ಚಾರಣೆ.
Facebook ಕಾಮೆಂಟ್ಸ್