X
    Categories: ಕಥೆ

ವಾಸನೆ

ಬಸ್ ಸ್ಟಾಪಿನಿಂದ ನನ್ನನ್ನು ಕರೆದೊಯ್ಯಲು ಬಂದ ಅಪ್ಪ ಕಾರಿನೊಳಗೆ ನನ್ನ ದೊಡ್ಡ ಬ್ಯಾಗನ್ನು ತಳ್ಳುತ್ತ ಹೇಳಿದ, “ಪುಟ್ಟಿ, ನಮಗೆ ಜಾತ್ರೆ ಇಲ್ಲ ಸಲ. ಹೊನ್ನಾವರದಲ್ಲಿ ನಮ್ಮ ಕುಟುಂಬದವನೊಬ್ಬ ಹಾವು ಕಚ್ಚಿ ಸತ್ತು ಹೋದ, ಅದೇ ಮಂಜ ಭಟ್ಟ. ಮೂರು ದಿನದ ಸೂತಕ“.

ನಾನು ಎಂದೂ ಭೇಟಿಯಾಗದವನ ಬಗೆಗೂ ಅಯ್ಯೋ ಪಾಪ ಎನ್ನಿಸಿತು.

ನಾನು ಬೆಂಗಳೂರಿನಲ್ಲೊಬ್ಬ ಟೆಕ್ಕಿ. ಕಂಪನಿ ಬದಲಾವಣೆಯ ಕ್ರಿಯೆಯಲ್ಲಿ ಸಿಕ್ಕ ಸಮಯದಲ್ಲಿ ಒಂದಿಷ್ಟು ದಿನ ಮಲೆನಾಡಿನ ಹಳ್ಳಿ ಮನೆಗೆ ಬಂದಿದ್ದೆ. ಕೆಲಸ ಬದಲಾಯಿಸಲು ಕಾರಣವಿತ್ತು, ಹಾಗೇ ಊರಿಗೆ ಬಂದಿದ್ದಕ್ಕೂ ಕೂಡ.

ಮನೆಯಲ್ಲಿರುವುದು ಅಜ್ಜಅಜ್ಜಿ, ದೊಡ್ಡಪ್ಪದೊಡ್ಡಮ್ಮ ಮತ್ತು ಅಪ್ಪಅಮ್ಮ. ದೊಡ್ಡಪ್ಪನ ಮಕ್ಕಳಿಬ್ಬರೂ ನಾನು ಹುಟ್ಟುವುದಕ್ಕೂ ಮುಂಚೆಯೇ ಸಮುದ್ರದ ಪಾಲಾದರಂತೆ. ದೊಡ್ಡಪ್ಪನಿಗೆ ಮತ್ತೆ ಮಕ್ಕಳಾಗಲಿಲ್ಲವೋ ಅಥವಾ ಅವನೇ ಮಾಡಿಕೊಳ್ಳಲಿಲ್ಲವೋ ಗೊತ್ತಿಲ್ಲ. ನಮ್ಮಪ್ಪನಿಗೆ ನಾನೊಬ್ಬಳೇ ಮಗಳು. ಮನೆಯಲ್ಲಿ ಆಡಲು ಮಕ್ಕಳ್ಯಾರೂ ಇಲ್ಲದ್ದರಿಂದ, ನಾಲ್ಕೈದು ವರ್ಷಕ್ಕೆ ದೊಡ್ಡವನಾದರೂ, ಪಕ್ಕದ ಮನೆಯ ಕೇಶವನೇ ಆಪ್ತನಾದ. ನಾನು ಮನೆಗೆ ಬಂದ ಸ್ವಲ್ಪ ಹೊತ್ತಿಗೇ ಹೇಡಿಗೆಯ ಮೇಲೆ ನಿಂತು, ಶಿರಬಳೆಯ(ದೊಡ್ಡದಾದ ಕಿಟಕಿಯ ಉದ್ದದ ಸರಳುಗಳು) ಮೂಲಕ ಜಗುಲಿಯ ಕಡೆಗೆ ಇಣುಕುತ್ತ, “ಪುಟ್ಟೀ, ಪುಟ್ಟೀಎಂದು ಕೂಗಿದ್ದು ಅಡುಗೆ ಮನೆಯಲ್ಲಿ ದೋಸೆ ತಿನ್ನುತ್ತ ಕುಳಿತಿದ್ದ ನನಗೆ ಕಾಣಿಸಿತು. ಆದರೆ ನಾನು ಪ್ರತಿಕ್ರಿಯಿಸಲಿಲ್ಲ. ಕೇಶವನೆಂದರೆ ತಾತ್ಸಾರ ಮಾಡುವಷ್ಟು ಸಲಿಗೆ. ಮನೆಯೊಳಗೇ ಬಂದು ಮುಖ ನೋಡಿ ಮಾತಾಡಿಸಲಿ ಎಂಬ ಆಸೆ ಒಳಗೊಳಗೇ ಇತ್ತು. “ದೋಸೆ ತಿಂದು, ಚಾ ಕುಡ್ದು ಹೊಳೆ ಕಟ್ಟಿನ ಹತ್ರ ಬಾ; ಪನ್ನೇರಲ ಹಣ್ಣು ಕುಯ್ತಿರ್ತೇನೆಎಂದು ಹೇಳಿದ ಕೇಶವ, ಕಡೆಗೇ ಹೋದನೆನ್ನಿಸಿತು.

ಹೊಳೆ ಹತ್ತಿರ ಹೋದಾಗ ಹಂಬಾಳೆಯಲ್ಲಿ ಒಂದಿಷ್ಟು ಪನ್ನೇರಲ ಹಣ್ಣನ್ನು ತುಂಬಿಸಿಟ್ಟು, ಹೊಳೆಕಟ್ಟಿನ ಕೆಳಭಾಗದಲ್ಲಿ ವಿರಳವಾಗಿ ಹರಿಯುವ ನೀರಿನಲ್ಲಿ ಕಾಲಿಟ್ಟುಕೊಂಡು, ಅಲ್ಲೇ ಒಂದು ಬಂಡೆ ಕಲ್ಲಿನ ಮೇಲೆ ಕುಳಿತಿದ್ದ. ನನ್ನ ಹತ್ತಿರ ಹಲುಬಿಕೊಳ್ಳಲು ಏನೋ ಇದೆ ಎನ್ನುವುದು ಅವನು ಕೆಲಸ ಬಿಟ್ಟು ಬಂದು ಕುಳಿತಿರುವುದನ್ನು ನೋಡಿದರೇ ಗೊತ್ತಾಗುತ್ತಿತ್ತು. ಮೊಣಕಾಲು ಮಟ್ಟಕ್ಕೂ ಹರಿಯದ ನೀರಿನಲ್ಲಿ ನಿಂತು ನಾನೇ ಮಾತಿಗೆ ಶುರುವಿಟ್ಟೆ, “ಏನು ಕೇಶವಾ?” ಕೇಶವ, “ನಿನಗೆ ಹೇಗೆ ಹೇಳುವುದೋ ತಿಳಿಯುತ್ತಿಲ್ಲಎಂದರೂ ಮುಂದುವರಿಸಿದ, “ನೀನು ಕಾಲೇಜಿಗೆ ಹೋಗುವಾಗ ಪ್ರೀತಿಸುತ್ತಿದ್ದ ಮದನ್ ಈಗೊಂದು ವಾರದ ಹಿಂದೆ ಆಕ್ಸಿಡೆಂಟಿನಲ್ಲಿ ಸತ್ತುಹೋದನಂತೆ“. ನನ್ನ ದೃಷ್ಟಿ ಒಂದೇ ಕಡೆಗೆ ನೆಟ್ಟಿತ್ತು. ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಾಗದೇ ಹಾಗೇ ನಿಶ್ಚಲವಾಗಿದ್ದೆ.

ಪುಟ್ಟಿ, ಬೇಜಾರಾಗಬೇಡ. ಹೋಗಿ ಅವನ ಸಮಾಧಿಯನ್ನಾದರೂ ನೊಡಿಕೊಂಡು ಬರೋಣ“.

ಕೇಶವಾ, ನನ್ನದೂ ಅವನದೂ ಸಂಬಂಧ ಯಾವಾಗಲೋ ಕಡಿದುಹೋಗಿದೆ. ಪಿಯುಸಿ ಮುಗಿಸಿ ಮೈಸೂರಿಗೆ ಹೋಗುವ ಮುನ್ನವೇ ನಾನು ಅವನನ್ನು ಮರೆತುಬಿಟ್ಟಿದ್ದೆ. ಅವನು ಬಯಸುವ ಉತ್ಕಟವಾದ ಪ್ರೀತಿಯನ್ನು ನನ್ನಿಂದ ಕೊಡಲಾಗಲಿಲ್ಲ. ನಿನಗೆ ಅರ್ಥವಾಗುತ್ತದಲ್ಲವೇ ನನ್ನ ಮಾತು? ಅನಿವಾರ್ಯವಾಗಿ ಅವನನ್ನು ದೂರಮಾಡಬೇಕಾಗಿ ಬಂತು. ಅವನದು ನಿಜವಾದ ಪ್ರೀತಿಯಾಗಿತ್ತೋ ಅಥವಾ ಆಕರ್ಷಣೆಯೋ ಗೊತ್ತಿಲ್ಲ. ಆದರೂ ಈಗ ಅವನ ಸಾವನ್ನು ನೆನೆದರೆ ಸಂಕಟ ಹೊಟ್ಟೆಯೊಳಗೇ ಕುಣಿಯುತ್ತಿರುವಂತೆ ಅನ್ನಿಸುತ್ತಿದೆ. ಸಾವು ಎಷ್ಟು ವಿಚಿತ್ರ ಅಲ್ಲವೇ! ಶತ್ರು ಸತ್ತಾಗಲೂ ಸಂಭ್ರಮಿಸುವವರು ಕಡಿಮೆಯೇ“. ಕೇಶವ ತಲೆ ಅಲ್ಲಾಡಿಸಿದ. ನಾನು ಬಿಕ್ಕಿಬಿಕ್ಕಿ ಅಳದಿದ್ದುದೇ ಅವನಿಗೆ ಸಮಾಧಾನ. ಪನ್ನೇರಳೆ ಹಣ್ಣುಗಳನ್ನು ನನ್ನ ಕೈಗೆ ಕೊಟ್ಟು, ಕತ್ತಿ ಹಿಡಿದು, ಸಂಜೆ ಸಿಗೋಣವೆಂದು ಹೇಳಿ, ತೋಟದ ಕಡೆಗೆ ಹೊರಟುಹೋದ.

ಮಧ್ಯಾಹ್ನ ಊಟಕ್ಕೆ ಮನೆಯ ಗಂಡಸರ ಪಂಕ್ತಿಯ ತುದಿಯಲ್ಲಿ ನಾನೂ ಕುಳಿತೆ. ಮಧ್ಯಾಹ್ನದ ಊಟಕ್ಕೆ ಗಂಡಸರ ಪಂಕ್ತಿ ಇರುವುದು ಬಹಳವೇ ಅಪರೂಪ. ಎಲ್ಲರೂ ಪೌರೋಹಿತ್ಯಕ್ಕೆ ಹೋಗುವವರೇ. ಈಗ ಸೂತಕವೆಂದು ಮನೆಯಲ್ಲೇ ಉಣ್ಣುತ್ತಿದ್ದರು. ಅಜ್ಜ ಊಟದ ಸಮಯದಲ್ಲಿ ಮಾತನಾಡುವುದಿಲ್ಲ. ಅಪ್ಪ ಭೋಜನಪ್ರಿಯ, ತಲೆಯೆತ್ತದೇ ಉಣ್ಣುತ್ತಾನೆ. ದೊಡ್ಡಪ್ಪನ ಗುಣ ಬೇರೆಯೇ. ಅಮ್ಮ ಬಾಳೆಕಾಯಿಯ ಹುಳಿ ಬಡಿಸಿದಳು. ದೊಡ್ಡಪ್ಪ ಮಾತು ಶುರುಮಾಡಿದ, “ಪುಟ್ಟೀ, ನಿನಗೆ ಯಾರಾದರೂ ಹೊಳೆ ಬಾಳೆಕಾಯಿ(ಮೀನು) ತಿನ್ನುವ ಸ್ನೇಹಿತರು ಇದ್ದಾರಾ?”. “ಅಯ್ಯೋ, ದೊಡ್ಡಪ್ಪ, ಎಂಥಾ ಹೇಳುವುದು, ಸುಮಾರು ಎಲ್ಲರೂ ಅವರೇ.  ಜಾತಿಭೇದ ಇಲ್ಲದೇ ಎಲ್ಲರೂ ತಮಗಿಷ್ಟವಾದದ್ದನ್ನು ತಿನ್ನುತ್ತಾರೆ. ಮನಸ್ಸು ಗಟ್ಟಿ ಇರಬೇಕೆಂದು ತಿನ್ನುವವರು ಹೇಳುತ್ತಾರೆನಾನೆಂದೆ. ಅದಕ್ಕೆ ಪ್ರತಿಯಾಗಿ ದೊಡ್ಡಪ್ಪ ಹೇಳಿದಅವರವರ ಸಂಸ್ಕೃತಿಯಲ್ಲಿ ನಡೆದು ಬಂದಂತೆ ನಡೆದುಕೊಂಡು ಹೋಗುವ ಕಾಲವಿತ್ತು. ಈಗ ಒಂದು ಸಂಸ್ಕೃತಿಯನ್ನು ಸರಿಯಾಗಿ ಅನುಸರಿಸುವ ಜನಾಂಗ ಎಲ್ಲಿದೆ ಹೇಳು?! ವೃತ್ತಿ ಆಧಾರಿತ ಸಂಸ್ಕೃತಿಯಿಲ್ಲ, ಜನಾಂಗ ಆಧಾರಿತ ಸಂಸ್ಕೃತಿಯಿಲ್ಲ, ಪ್ರದೇಶ ಆಧಾರಿತ ಸಂಸ್ಕೃತಿಯಿಲ್ಲ. ಯಾವ ಕೆಲಸ ಬೇಕಾದರೂ ಮಾಡು; ಏನು ಬೇಕಾದರೂ ತಿನ್ನು. ನಮ್ಮ ಜಾತಿಯಲ್ಲೇ ನೋಡು, ಮಡಿಮೈಲಿಗೆ ಎಲ್ಲಾ ನಮ್ಮಂಥಾ ಹಳೇ ತಲೆಮಾರಿಗೇ ಮುಗಿಯಿತು“. ನೊಂದುಕೊಂಡಂತೆ ಮುಖ ಮಾಡಿದ ದೊಡ್ಡಪ್ಪ, ಅನ್ನಕ್ಕಿಂತ ಜಾಸ್ತಿ ಮಜ್ಜಿಗೆ ಹಾಕಿಸಿಕೊಂಡು ಸೊರ್ ಎಂದು ಕೈಯಿಂದ ಸುರಿಯಹತ್ತಿದ.

ನನ್ನ ಮನಸ್ಸು ಬೇರೆಡೆಗೆ ಹೋಯಿತು. ಮಿಹಿರ ಅದೆಷ್ಟು ಬಾರಿ ತನ್ನ ಫಿಶ್ ಬಿರಿಯಾನಿಯ ಚಮಚವನ್ನು ನನ್ನ ವೆಜ್ ಬಿರಿಯಾನಿಯ ತಟ್ಟೆಗೆ ಹಾಕಿಲ್ಲ? ಇಷ್ಟಕ್ಕೇ ಮುಗಿಯದೇ, ಅವನೆಷ್ಟು ಸಲ ಫಿಶ್ ಬಿರಿಯಾನಿ ತಿಂದ ತುಟಿಯಿಂದ ನನ್ನನ್ನು ಮುಟ್ಟಿಲ್ಲ? ಮೂರು ವರ್ಷಗಳಿಂದ ಗೆಳೆಯನಾದರೂ, ಆರು ತಿಂಗಳುಗಳಲ್ಲಿ ಆದ ಬದಲಾವಣೆಯೇ ಬೇರೆ. ಮನೆಯೊಳಗೆ ಬಂದು  ಮನೆಯನ್ನೆಲ್ಲ ಮೈಲಿಗೆ ಮಾಡಿದೆನೋ ಎಂದೆನ್ನಿಸಿಬಿಟ್ಟಿತು. ಇಷ್ಟು ಹೊತ್ತೂ ಅಂತಹ ಯೋಚನೆಯೇ ಮನಸ್ಸಿನಲ್ಲಿ ಸುಳಿದಿರಲಿಲ್ಲ. ಒಮ್ಮೆಲೆ ದುಗುಡವಾಗಹತ್ತಿತು. ಮೊದಲೇ ಏಕೆ ಯೋಚಿಸಲಿಲ್ಲವೋ!

ಅಜ್ಜ, ದೊಡ್ಡಪ್ಪ ಮತ್ತು ಅಪ್ಪ ಮೂವರೂ ಬೆಳಿಗ್ಗೆ ಆರಕ್ಕೇ ಎದ್ದು, ಸ್ನಾನ ಮಾಡಿ ಸಾಲಾಗಿ ಮಣೆ ಹಾಕಿಕೊಂಡು ಕುಳಿತು ಗಾಯತ್ರೀ ಮಂತ್ರವನ್ನು ಪಠಿಸಿ, ಎಲ್ಲರೂ ಒಂದೇ ಸ್ವರದಲ್ಲಿ ರುದ್ರಚಮೆಗಣಪತಿ ಉಪನಿಷತ್ತುಶಿವ ನಾಮಾವಳಿಗಳನ್ನು ಹೇಳಲು ಪ್ರರಂಭಿಸಿದರೆಂದರೆ ಮನೆಯೊಳಗೆಲ್ಲ ಒಂದು ಬಗೆಯ ಕಂಪನ ಹುಟ್ಟುತ್ತದೆ. ಮನೆಯ ಚರಾಚರ ವಸ್ತುಗಳಲ್ಲಿ ಲವಲವಿಕೆ ಮೂಡುತ್ತದೆ. ಇಡೀ ದಿನ ಮನೆಯೊಳಗೆಲ್ಲ ಧ್ವನಿ ತರಂಗಗಳು ಚಲಿಸುತ್ತಲೇ ಇರುತ್ತವೆ. ಮಧ್ಯಾಹ್ನ ಎಲ್ಲರೂ ಎಲ್ಲಿಗಾದರೂ ಪೌರೋಹಿತ್ಯಕ್ಕೆ ಹೋಗುತ್ತಾರೆ; ಮತ್ತೆ ಸಂಧ್ಯಾಕಾಲದಲ್ಲಿ ಗಾಯತ್ರಿ ಮಂತ್ರವನ್ನು ಜಪಿಸುತ್ತ ಕುಳಿತುಕೊಳ್ಳುತ್ತಾರೆ. ಅನುಷ್ಠಾನಗಳನ್ನು ಯಾವತ್ತೂ ತಪ್ಪಿಸುವುದಿಲ್ಲ, ಸೂತಕದ ದಿನಗಳಲ್ಲೊಂದು ಬಿಟ್ಟು. ಮನೆಯ ಸಂಪ್ರದಾಯವನ್ನೇ ನಾನು ಮೈಲಿಗೆ ಮಾಡಿಬಿಟ್ಟೆನೇ ಎಂದು ಒಳಗೊಳಗೇ ಅಂಜಿದೆ. ಇನ್ನೆರಡು ದಿನ, ಸೂತಕ ಕಳೆದ ಮೇಲೆ ಹೇಗೂ ಮನೆಗೆಲ್ಲ ಪಂಚಗವ್ಯವನ್ನು ಹಾಕುತ್ತಾರೆ. ಸೂತಕ ಕಳೆಯುವುದರೊಳಗೇ ಮರಳಿ ಬೆಂಗಳೂರಿಗೆ ಹೋಗಿಬಿಡಬೇಕೆಂಬ ನಿರ್ಧಾರ ಮಾಡಿದರೂ ಮನೆಯವರ ಒತ್ತಡಕ್ಕೆ ಸಿಕ್ಕಿ ಬಿದ್ದು ಒದ್ದಾಡುವಂತಾಯ್ತು.

ಮನೆಯಲ್ಲಿ ವಿಷಯ ಹೇಳಿ ಮದುವೆಗೆ ಒಪ್ಪಿಸಿ ಬರುತ್ತೇನೆ ಎಂದು ಮಿಹಿರನಿಗೆ ಕೊಟ್ಟ ಮಾತು ಆಗಾಗ ನೆನಪಾಗುತ್ತಿತ್ತು. ಹೇಳುವುದು ಹೇಗೆಂಬುದು ಗೊತ್ತಾಗದೆ ಸಂಕಟ ಅನುಭವಿಸುತ್ತಿದ್ದೆ. ಆದರೆ ಜನರ ನಡುವೆ ಇರುವಾಗ ಹೇಳಿಕೊಳ್ಳಲಾಗದ ದುಗುಡವನ್ನು ಮುಖದಲ್ಲಾಗಲೀ, ನಡತೆಯಲ್ಲಾಗಲೀ ತೋರಿಸಿಕೊಳ್ಳುವಂತಿಲ್ಲ.

ಒಂದು ವಾರ ಕಳೆದುಹೋಯಿತು. ವಿಷಯವನ್ನು ಪ್ರಸ್ತಾಪಿಸುವ ಧೈರ್ಯ ಬರಲೇ ಇಲ್ಲ. ಧೈರ್ಯ ಮಾಡುವುದು ಹೋಗಲಿ, ಏಳು ದಿನಗಳಲ್ಲಿ ಎಪ್ಪತ್ತು ಬಗೆಯ ವಿಚಾರಗಳು ಮನಸ್ಸಿನೊಳಗೆ ಸುಳಿದು ಹೋದವು. ಅವುಗಳಲ್ಲೊಂದಿಷ್ಟು ಗಾಢವಾದವು.

ಪುರೋಹಿತ ಅಪ್ಪನೊಡನೆ, ಗೆಳತಿಯ ಮನೆಯ ಪೂಜೆಯೊಂದಕ್ಕೆ ಹೋದೆ. ಯಾರನ್ನೋ ಪ್ರೀತಿಸಿ ಇನ್ನ್ಯಾರನ್ನೋ ಮದುವೆಯಾದ ಅವಳ ಬಗ್ಗೆ ಅಷ್ಟೇನೂ ಗೌರವ ನನಗಿಲ್ಲ; ಆದರೂ ಬಾಲ್ಯದ ಗೆಳೆತನವನ್ನು ಬಿಡಲಾಗುವುದಿಲ್ಲವಲ್ಲ! “ಭಟ್ಟರೇ, ನಿಮ್ಮಿಷ್ಟದ ಸಾರು, ಪಲ್ಯ, ಪಾಯಸವನ್ನೇ ಮಾಡಿದ್ದೇನೆಎಂದು ಅವಳು ಹೇಳಿದಾಗ, ಅವಳ ಮನೆಯವರೆಲ್ಲ ನನ್ನ ಅಪ್ಪನಿಗೆ ಕೊಡುವ ಗೌರವವನ್ನು ನೋಡಿದಾಗ, ನಾನು ಮೀನು ತಿನ್ನುವವನನ್ನು ಮದುವೆಯಾದರೆ ಅಪ್ಪನಿಗಾಗಬಹುದಾದ ಅವಮಾನ ನನ್ನ ಪ್ರೀತಿಯನ್ನು ಹಿಂದೇಟು ಹಾಕುವಂತೆ ಮಾಡಿತು. ಆದರೆ ಇನ್ನ್ಯಾವುದೋ ಯೋಚನೆ ನನ್ನ ಮತ್ತು ಮಿಹಿರನ ಮದುವೆಯ ಆಸೆಯನ್ನು ಚಿಗುರಿಸಿತು.

ಒಟ್ಟು ಕುಟುಂಬದಲ್ಲಿ ಅಪ್ಪಅಮ್ಮ ಒಬ್ಬರಿಗೊಬ್ಬರು ಸಮಯವನ್ನು ಕೊಟ್ಟುಕೊಳ್ಳುವುದನ್ನು ನಾನೆಂದೂ ನೋಡಿಲ್ಲ. ಪರಸ್ಪರರ ಜವಾಬ್ದಾರಿಗಳೇ ಜೀವನವನ್ನು ತೂಗಿಸುತ್ತವೆಯೇ ವಿನಾ ಪ್ರೀತಿಯಲ್ಲ. ಇಂಥದ್ದರಲ್ಲಿ ನಾನು ಹುಟ್ಟಿದ್ದೂ ಅಶ್ಛರ್ಯವೇ ಇರಬಹುದು. ಈಗೊಂದು ವರ್ಷದ ಹಿಂದೆ ನನಗೆ ಮನೆಯಲ್ಲಿ ತೋರಿಸಿದ್ದ ಗಂಡಿಗೆ ಮದುವೆಯಾಗಿ, ವಿಚ್ಛೇದನವೂ ಆಯಿತೆನ್ನುವ ಸುದ್ದಿ ನನ್ನನ್ನು ಆಗಾಗ ಹೆದರಿಸುತ್ತಲೇ ಇರುತ್ತದೆ. ಯಾರಿಗೂ ಹೇಳದೇ ಕೇಳದೇ ಮಿಹಿರನನ್ನು ಮದುವೆ ಮಾಡಿಕೊಂಡುಬಿಡಲೇ? ಮಿಹಿರ ಏನೆನ್ನುತ್ತಾನೋ ಏನೋ? ಪಾಪದವನು, ಇತ್ತೀಚೆಗಷ್ಟೇ ತಂದೆತಾಯಿಯನ್ನು ಕಳೆದುಕೊಂಡಿದ್ದಾನೆ. ಕಳೆದುಕೊಳ್ಳುವುದರ ಬೆಲೆ ಅವನಿಗೆ ಗೊತ್ತಿದೆ. ಹಾಗಾಗಿಯೇ ಮದುವೆಗೆ ಮನೆಯಲ್ಲಿ ಒಪ್ಪಿಸಿ ಬರಲು ನನ್ನನ್ನು ಕಳಿಸಿದ್ದಿರಬೇಕು. ಹಾಗೆಂದು, ನನ್ನನ್ನು ಮಿಹಿರನಿಗೆ ಕೊಟ್ಟು ಮದುವೆ ಮಾಡಿದರೆ ಯಾರೂ ಮನೆಯವರನ್ನು ಪೌರೋಹಿತ್ಯಕ್ಕೆ ಕರೆಯುವುದಿಲ್ಲ. ಮುಂದೆ ಇವರ ಜೀವನೋಪಾಯಕ್ಕೇನು?

ಬೇರೆ ಬೇರೆ ಬಗೆಗಳಲ್ಲಿ ಯೋಚಿಸಿದ ಹಾಗೂ ನನ್ನ ಚಿಂತೆ ಜೋರಾಯಿತು. ನಾನೇನಾದರೂ ಓಡಿ ಹೋಗಿ ಮಿಹಿರನನ್ನು ಮದುವೆಯಾದರೆ, ಮನೆಯವರೆಲ್ಲ ಆಘಾತದಿಂದ ಸಾಯುತ್ತಾರೆ ಎಂದು ಅನ್ನಿಸಿ ಕಂಗಾಲಾದೆ. ನಡುವೆ ಒಂದು ದಿನ ಮಿಹಿರನೇ ಮನೆಯ ಸ್ಥಿರ ದೂರವಾಣಿಗೆ ಕರೆ ಮಾಡಿ ವಿಚಾರಿಸಿದ. ನಾನು ಇನ್ನೂ ಒಂದು ನಿರ್ಧಾರಕ್ಕೆ ಬಂದಿರಲಿಲ್ಲ. ಮಿಹಿರನನ್ನು ಮದುವೆಯಾಗಲು ಮನೆಯವರನ್ನು ಒಪ್ಪಿಸಬೇಕೆಂದು ಬೆಂಗಳೂರಿನಿಂದ ಹುಮ್ಮಸ್ಸಿನಿಂದ ಬಂದವಳಿಗೆ ಇಲ್ಲಿನ ವಾತಾವರಣ ವಾಸ್ತವವನ್ನು ತೆರೆದು ತೋರಿಸುತ್ತಿತ್ತು.

ನಾನು ನನ್ನ ಮುಂದಿನ ಜೀವನವನ್ನು ಕಳೆಯಬೇಕಾಗಿರುವುದು ನನ್ನ ಸಂಗಾತಿಯೊಂದಿಗೇ ಆದರೂ; ಹುಟ್ಟಿದ ಮನೆ, ಆಡಿ ಬೆಳೆದ ಊರು, ಪ್ರೀತಿಯಿಂದ ಬೆಳೆಸಿದ ಮನೆಯವರನ್ನೆಲ್ಲ ಸಂಪೂರ್ಣವಾಗಿ ಮತ್ತೆಂದೂ ಭೇಟಿಯೇ ಆಗದಂತೆ ತೊರೆದು ಹೋಗುವುದು ನನ್ನಿಂದ ಆಗದ ಕೆಲಸವೆನ್ನಿಸಿತು. ಹಾಗೆಂದು ಬೇರೆ ಯಾರನ್ನೋ ಸ್ವೀಕರಿಸುವ ಧೈರ್ಯವೂ ಆಗಲಿಲ್ಲ. ಇನ್ನೆರಡು ವರ್ಷಗಳು ನನ್ನಲ್ಲಿ ಮದುವೆಯ ಪ್ರಸ್ತಾಪವನ್ನೇ ಮಾಡಬೇಡಿರೆಂದು ಮನೆಯಲ್ಲಿ ತಾಕೀತು ಮಾಡಿದೆ. ಬದಲಾಗುವ ಸಮಯಕ್ಕಾಗಿ ಕಾಯೋಣ ಎಂಬ ಸದ್ಯದ ಪರಿಸ್ಥಿತಿಯಿಂದ ಪಾರಾಗುವ ನಿರ್ಧಾರ ಮಾಡಿದೆ.

ಹೊರಡುವ ದಿನ ಬೆಳಿಗ್ಗೆ ಕೇಶವನಲ್ಲಿ ಎಲ್ಲವನ್ನೂ ಹೇಳಿಕೊಂಡೆ. ಅದಕ್ಕವನು ಗಾಬರಿಯಾಗಿ ಹೇಳಿದ, “ಪುಟ್ಟಿ, ನೀನು ಮಿಹಿರನ ಆಸೆಯನ್ನು ಬಿಡುವುದೇ ಒಳ್ಳೆಯದು. ನೀನು ಅವನನ್ನು ಮದುವೆಯಾಗಿದ್ದೇ ಆದಲ್ಲಿ, ನೀನು ಹುಟ್ಟಿದ ಮನೆ ಮೈಲಿಗೆಯಾಗಿ, ಹೊಸ್ತಿಲು ಬಾಗಿಲಿನಲ್ಲಿರುವ ಮಂತ್ರಶಕ್ತಿಗೆ ಭಂಗವಾಗಿ, ಇಡೀ ಮನೆಯೇ ಕುಸಿದು ಬೀಳುತ್ತದೆ. ನಾನು ಹೇಳುವುದು ಸುಳ್ಳೆನಿಸಿದರೆ, ನಿನ್ನ ಅಜ್ಜನಿಂದಲೇ ಮೈಲಿಗೆಯ ಬಗೆಗಿನ ವಿಚಾರಗಳನ್ನು ತಿಳಿದುಕೋ“.

ಮನಸ್ಸು ಭಾರವಾಗಿತ್ತು. ಕೇಶವನ ಮಾತು ಭಯ ಹುಟ್ಟಿಸಿತ್ತು. ರಾತ್ರಿ ಬಸ್ಸಿನಲ್ಲಿ ಮಲಗಿದವಳಿಗೆ ನಿದ್ದೆ ಹತ್ತಲಿಲ್ಲ. ಬೆಂಗಳೂರಿನಲ್ಲಿ ಬಸ್ ಇಳಿಯುವ ಹೊತ್ತಿಗೆ ಸರಿಯಾಗಿ ಮಿಹಿರ ಬಂದು ತನ್ನ ಮನೆಗೇ ಕರೆದೊಯ್ದ.

ಅದೆಷ್ಟು ಸಲುಗೆಯಿದ್ದರೂ, ನಾನು ಮಾಡಿಕೊಂಡ ನಿರ್ಧಾರದಿಂದಾಗಿ ಅವನೊಡನೆ ಮುಕ್ತವಾಗಿ ಮಾತನಾಡುವುದಿರಲಿ, ಮುಖ ನೋಡಲೂ ಕೂಡ ಸಾಧ್ಯವಾಗಲಿಲ್ಲ. ನನ್ನ ನಡತೆಯೇ ಅವನಿಗೆ ನನ್ನ ಸ್ಥಿತಿಯನ್ನು ಹೇಳಿರಬಹುದು.

ಮಧ್ಯಾಹ್ನದ ಹೊತ್ತಿಗೆ ತಲೆ ತಿರುಗಿದಂತಾಗಿ, ಹೊಟ್ಟೆ ಕಲಕಿದಂತಾಗಿ, ನಾಲ್ಕೈದು ಬಾರಿ ವಾಂತಿ ಮಾಡಿಕೊಂಡೆ. ಹತ್ತಿರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮಿಹಿರನೇ ಕರೆದೊಯ್ದ. ಏನೇನೋ ಪರೀಕ್ಷೆಗಳ ನಂತರ ಸಿಕ್ಕ ಉತ್ತರ ನಾನು ಗರ್ಭಿಣಿ ಎಂಬುದಾಗಿತ್ತು. ಹಲವಾರು ಗೋಜಲುಗಳ ಯೋಚನೆಯಲ್ಲಿ ನಾನು ಹೆಣ್ಣಿನ ತಿಂಗಳ ಲೆಕ್ಕಾಚಾರವನ್ನೇ ಮರೆತಿದ್ದೆ. ಮಿಹಿರ ಖುಷಿಯಿಂದ ಕುಣಿದಾಡಿದ. ಈಗಲೇ ಬೇಕಾದರೂ ಮದುವೆಯಾಗಿಬಿಡೊಣ ಎಂಬ ಭರವಸೆ ಕೊಟ್ಟ. ನನಗೆ ಇದನ್ನು ಹೇಗೆ ಸ್ವೀಕರಿಸಬೇಕೆಂಬುದು ಕ್ಷಣಕ್ಕೆ ಹೊಳೆಯಲಿಲ್ಲ. ಖುಷಿಯ ಭಾವ ನನ್ನಲ್ಲಿ ಮೂಡಲೂ ಅವಕಾಶವಿಲ್ಲದಷ್ಟು ಯೋಚನೆಗಳು ನನ್ನನ್ನು ಸುತ್ತಿಕೊಂಡವು.

ಜಾತಿಬಿಟ್ಟು ಮದುವೆಯಾಗುವುದಕ್ಕೂ, ಮೈಲಿಗೆಯಾಗುವುದಕ್ಕೂ ಸಂಬಂಧವಿಲ್ಲ ಎನ್ನಿಸಿತು. ಆದರೂ ಊರಿನ ಮನೆ ಎಷ್ಟು ಹೊತ್ತಿಗಾದರೂ ಕುಸಿದು ಬಿದ್ದರೇನು ಗತಿ ಎಂಬ ಭ್ರಮೆಯಲ್ಲಿ ನಾನು ಕುಗ್ಗಿದೆ. ಫೋನ್ ಮಾಡಿಯಾದರೂ ವಿಚಾರಿಸೋಣ ಎಂದೆನ್ನಿಸಿದರೂ, ಏನೆಂದು ಹೇಳುವುದು? ಏನನ್ನು ಕೇಳುವುದು? ಆದರೂ ಮನಸ್ಸು ತಡೆಯಲಿಲ್ಲ. ಮಾತಿಗೆ ಸಿಕ್ಕಿದ ಅಪ್ಪ ಒಂದು ವಿಚಾರವನ್ನು ಹೇಳಿದ, “ಬೆಳಿಗ್ಗೆ ಹೊಸ್ತಿಲನ್ನು ಒರೆಸುವಾಗ ಹೊಸ್ತಿಲ ಪಟ್ಟಿ ಚೂರಾಗಿ ಹೋಯಿತು. ರಾಶಿರಾಶಿ ಗೆದ್ದಲುಗಳು ಹೊರಬಂದವು. ಬಾಗಿಲಪಟ್ಟಿಯ ಮೇಲ್ಭಾಗ, ಬದಿಗಳನ್ನೆಲ್ಲ ಗೆದ್ದಲುಗಳು ಒಳಗಿನಿಂದಲೇ ತಿಂದು ಮುಗಿಸಿವೆ. ಹೊಸ ಹೊಸ್ತಿಲನ್ನು ಮಾಡಿಸಲು ಆಚಾರಿಗೆ ಹೇಳಿ ಬಂದೆ.” ಅಪ್ಪ ಅದನ್ನು ಸಹಜವೆಂಬಂತೆ ಪರಿಗಣಿಸಿದಂತಿತ್ತು. ನನಗೆ ಮಡಿಮೈಲಿಗೆಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ಆಗಲಿಲ್ಲ.

ಸಿಗ್ನಲ್ ನಲ್ಲಿ ಮಿಹಿರ ಕಾರು ನಿಲ್ಲಿಸಿದ. ಪಕ್ಕದ ಮೀನಿನಂಗಡಿಯಿಂದ ವಾಸನೆ ಹೊಡೆಯಿತು. ಕಾರಿನ ಗಾಜನ್ನೇರಿಸಿಕೊಂಡರೂ, ಲೋಕದ ವಾಸನೆಗೆ ವಾಕರಿಕೆ ಬಂದಂತಾಯಿತು.

ಶ್ರೀಕಲಾ ಹೆಗಡೆ ಕಂಬ್ಳಿಸರ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post