X

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ. ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟ ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು, ಹತ್ತಿರ ಹೋಗಿ ಪ್ರಯತ್ನಿಸಿದ ಮೇಲಷ್ಟೇ ಗೊತ್ತಾಗುತ್ತದೆ. ಹಾಗೆಯೇ ಸಂಬಂಧಗಳೂ ಕೂಡ! ದೂರದಿಂದ ಬಹಳ ಸುಂದರ ಎನ್ನಿಸುವ ಸಂಬಂಧಗಳು ಹತ್ತಿರವಾದಾಗ ಹಳಸುತ್ತವೆ. ಇದನ್ನ ಸಾಂಕೇತಿಕವಾಗಿ ನಮ್ಮ ಹಿರಿಯರು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದರು.

ಇದನ್ನ ನಮ್ಮ ಹಿರಿಯರು ಆಡು ಭಾಷೆಯಲ್ಲಿ ‘ದೂರವಿದ್ದರೆ ಪರಿಮಳ, ಹತ್ತಿರ ಬಂದರೆ ವಾಸನೆ’ ಎಂದು ಕೂಡ ಕರೆಯುತ್ತಾರೆ. ಅರ್ಥ ಬಹಳ ಸರಳ. ಯಾವುದು ದೂರದಿಂದ ಸುಂದರವಾಗಿಯೂ, ಎಲ್ಲವೂ ಸರಿಯಾಗಿದೆ ಎನ್ನುವಂತೆ ಕಾಣುತ್ತದೆಯೋ, ಅದು ಹತ್ತಿರದಿಂದ ಬೇರೆಯದೇ ರೀತಿಯ ನೋಟವನ್ನ ಒದಗಿಸುತ್ತದೆ ಎನ್ನುವುದು ಗಾದೆ ಮಾತಿನ ಗುಟ್ಟು.

ಎಲ್ಲವೂ ಸರಿಯಾಗಿದೆ ಎನ್ನಿಸಿದರೂ ಅದನ್ನು ಮತ್ತೊಮ್ಮೆ ವಿವರವಾಗಿ ಪರಿಶೀಲಿಸಿ ನೋಡಬೇಕು ಎನ್ನುವುದು ಒಂದು ನೋಟವಾದರೆ. ನಾವೆಂದುಕೊಂಡಂತೆ, ನಮ್ಮಲ್ಲಿ ಮಾತ್ರ ಅವ್ಯವಸ್ಥೆ ಇಲ್ಲ; ಎಲ್ಲೆಡೆಯೂ ಅಷ್ಟೇ ಎನ್ನುವ ಅರ್ಥವನ್ನೂ ಕೂಡ ಗಾದೆ ಬಿಡಿಸಿ ಹೇಳುತ್ತದೆ. ಜಗತ್ತಿನೆಲ್ಲೆಡೆ ಮನುಷ್ಯನ ಸ್ವಭಾವ ಒಂದೇ, ಇಲ್ಲಿ ಸರಿ ಇಲ್ಲ, ಇಲ್ಲಿನ ವ್ಯವಸ್ಥೆ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಹೋಗುವುದಾದರೂ ಎಲ್ಲಿಗೆ? ಇಲ್ಲಿಂದ ತುಂಬಾ ಚೆನ್ನಾಗಿ ಕಾಣುವ ಇತರ ಪ್ರದೇಶದ ವ್ಯವಸ್ಥೆಯ ನಿಜ ಬಣ್ಣ ಅಲ್ಲಿಗೆ ಹೋದ ಮೇಲಷ್ಟೇ ಗೊತ್ತಾಗುವುದು ಅಲ್ಲವೇ?  ಹಾಗೆಯೇ ದೂರದ ಸಂಬಂಧಗಳು ಚೆನ್ನಾಗಿಯೇ ಇರುತ್ತವೆ. ಅವುಗಳ ನೈಜ್ಯತೆ ತಿಳಿಯುವುದು ಹತ್ತಿರ ಬಂದಾಗಲೇ ಎನ್ನುವುದು ಕೂಡ ಗಾದೆಯ ಅರ್ಥ.

ಇದನ್ನ ಸ್ಪಾನಿಶರು ‘La luz de adelante es la que alumbra’ (ಲ ಲೂಸ್ ದೆ ಅದೇಲಂತೆ ಈಸ್ ಲ ಕೆ ಅಲುಮ್ಬರ) ಎಂದರು. ಅರ್ಥ ಇಲ್ಲಿಯೂ ಸೇಮ್. ‘ಎದುರುಗಡೆಯ ಬೆಳಕು ಹೆಚ್ಚು ಪ್ರಕಾಶಿಸುತ್ತದೆ’ ಎನ್ನುವುದು ಯಥಾವತ್ತು ಅನುವಾದ.

ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ. ನಮ್ಮ ಕೈಗೆ ಯಾವುದು ಎಟುಕುವುದಿಲ್ಲ ಅದು ಯಾವಾಗಲೂ ಹೆಚ್ಚು ಬೆಲೆ ಅನ್ನಿಸುತ್ತದೆ. ಅದು ಸಿಕ್ಕ ಮೇಲೆ ಬೇರೆಯದೇ ಕಥೆ. ಇರಲಿ. ಮನುಷ್ಯನ ಮೂಲಭೂತ ಗುಣವೇ ಹಾಗೆ, ಎದುರು ಮನೆಯ ಬಲ್ಬ್ ಹೆಚ್ಚು ಹೊಳೆಯುತ್ತದೆ. ಎದುರು ಮನೆಯಾತನ ಕಾರು, ಮನೆ ಎಲ್ಲವೂ ಚೆನ್ನಾಗಿ ಕಾಣುತ್ತದೆ. ನಮ್ಮ ವಸ್ತು ಮಾತ್ರ ಮಬ್ಬು ಮಬ್ಬು.  ಇದಕ್ಕೆ ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವುದು. ಹಿಂದಿ ಭಾಷಿಕರು ‘ಘರ್ ಕ ಮುರ್ಗಿ ದಾಲ್ ಬರಾಬರ್’ ಎನ್ನುತ್ತಾರೆ. ಇವೆಲ್ಲಾ ಏನೇ ಇರಲಿ ಅರ್ಥ ಮಾತ್ರ ಒಂದೇ. ನಾವೆಲ್ಲಾ ಒಂದೇ, ನಮ್ಮ ಭಾವನೆಯೊಂದೇ.

ಇನ್ನು ಇಂಗ್ಲಿಷ್ ಭಾಷಿಕರು  ‘The grass is greener on the other side’ ಎಂದರು. ಪಕ್ಕದ ಪ್ರದೇಶದ ಹುಲ್ಲು ಹೆಚ್ಚು ಹಸಿರಾಗಿದೆ ಎನ್ನುವುದು ನೇರ ಅನುವಾದ. ಇಲ್ಲಿಯೂ ಹುಲ್ಲು ಮತ್ತು ಹಸಿರು ಸಾಂಕೇತಿವಾಗಿ ಬಳಕೆಯಾಗಿವೆ. ನಿಜಾರ್ಥದಲ್ಲಿ, ನಮ್ಮಲ್ಲಿರುವ ವಸ್ತುವಿಗಿಂತ ಬೇರೆಯವರ ಕೈಲಿರುವ ವಸ್ತು ಹೆಚ್ಚು ಆಕರ್ಷವಾಗಿ ಕಾಣುತ್ತದೆ ಎನ್ನುವುದೇ ಆಗಿದೆ. ನಾವೆಂದುಕೊಂಡದ್ದು ನಿಜವಲ್ಲ ಎನ್ನುವುದನ್ನ ಕೂಡ ಗಾದೆಮಾತು ಪಿಸುದನಿಯಲ್ಲಿ ನುಡಿಯುತ್ತಿದೆ. ಅದನ್ನ ಮನಗಾಣುವ ಮತ್ತು ಅಳವಡಿಸಿಕೊಳ್ಳುವ ತಾಳ್ಮೆ, ಬುದ್ದಿವಂತಿಕೆ ನಮಗೆ ಇರಬೇಕು ಅಷ್ಟೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ : 

La luz: ಬೆಳಕು, ಲೈಟ್ ಎನ್ನುವ ಅರ್ಥ ಕೊಡುತ್ತದೆ. ಲ ಲೂಸ್ ಎನ್ನುವುದು ಉಚ್ಚಾರಣೆ.

De adelante:  ಮುಂದಿನ, ಅಹೆಡ್ ಎನ್ನುವ ಅರ್ಥ, ದೆ ಅದೇಲಂತೆ ಎನ್ನುವುದು ಉಚ್ಚಾರಣೆ.

es la que alumbra: ಹೊಳೆಯುವುದು, ಪ್ರಕಾಶಿಸುವುದು, ಹೆಚ್ಚು ಬೆಳಕು ಕೊಡುವುದು ಎನ್ನುವ ಅರ್ಥ. ಈಸ್ ಲ ಕೆ ಅಲುಮ್ಬರ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post