ಯಾರೋ ಕರೆದಂತಾಯಿತು. ಕನಸೋ ನನಸೋ ಗೊತ್ತಾಗಲಿಲ್ಲ. ಸ್ವಪ್ನಾವಸ್ಥೆಯಿಂದ ಜಾಗ್ರದಾವಸ್ಥೆಗೆ ಬರುವುದು ಸುಲಭವೇನೂ ಅಲ್ಲವಲ್ಲ! ಕಷ್ಟಬಿಟ್ಟು ಕಣ್ಣುಬಿಟ್ಟೆ. ಇವತ್ತು ಚಿರಾಪುಂಜಿಗೆ ಹೊರಡಬೇಕೆಂಬುದು ನೆನಪಾಗಿ ಸಟಸಟನೆ ಎದ್ದೆ. “ಆರಾಮ್ ಸೇ ಉಠೋ. ಲೇಟ್ ನಹೀ ಹುವಾ ಹೈ. ಪಹಲೇ ಮೈ ನಹಾಕೆ ಆವೂಂಗಾ” ಎನ್ನುತ್ತಾ ಸುಜಿತ್ ಸ್ನಾನಕ್ಕೆ ಹೊರಟ. ನಾನು ಸಾವರಿಸಿಕೊಂಡು ಕೊಠಡಿಯ ಬಾಗಿಲು ತೆರೆದೆ. ಅಷ್ಟೊತ್ತಿಗಾಗಲೇ ಸೂರ್ಯ ನಗುತ್ತಾ ನಿಂತಿದ್ದ. ಗುವಾಹಟಿಯನ್ನು ಇಬ್ಬಾಗವಾಗಿಸುವ ಬ್ರಹ್ಮಪುತ್ರ, ಅದರಾಚೆಗಿನ ಪೇಟೆ ಪಟ್ಟಣ, ಈಚೆಗಿನ ಹಸಿರು ಕಾನನ, ಪಕ್ಕದಲ್ಲೇ ಇರುವ ಬೆಟ್ಟ, ಎದುರಿನ ಸರೋವರದಲ್ಲಿ ಈಜಾಡುತಗತಿರುವ ಬಾತುಕೋಳಿಗಳು! ಐಐಟಿ ಗುವಾಹಟಿಯ ಪರಿಸರ ಸುಂದರವಾಗಿ ಕಾಣಿಸುತ್ತಿತ್ತು. ಸಮಯ ಇನ್ನೂ ನಾಲ್ಕು ಗಂಟೆ!
ಆಶ್ಚರ್ಯವೇನೂ ಆಗಲಿಲ್ಲ, ಅಲ್ಲಿ ಯಾವಾಗಲೂ ಅಷ್ಟೊತ್ತಿಗೆ ಬೆಳಗಾಗುತ್ತದೆ. ಗುವಾಹಟಿ ಇರುವುದು ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ. ಈಶಾನ್ಯ ಎಂದು ಹೇಳಿದರೂ ಭೌಗೋಳಿಕವಾಗಿ ಭಾರತದ ಉಳಿದ ರಾಜ್ಯಗಳಿಗಿಂತ ಈಶಾನ್ಯ ರಾಜ್ಯಗಳು ಪೂರ್ವಕ್ಕಿವೆ. ಪ್ರೌಢಶಾಲೆಯಲ್ಲಿ ನಕ್ಷೆ ಬಿಡಿಸಿದ ನೆನಪಿರಬೇಕಲ್ಲ! ಹಾಗಾಗಿ ಅಲ್ಲಿ ಬೇಗ ಬೆಳಗಾಗುವುದು ಸಾಮಾನ್ಯ. ಹಾಗೆಯೇ ಗಂಟೆ ಆರಾಗುವುದರೊಳಗಾಗಿ ಸಂಜೆಯೂ ಆಗಿ ಬಿಡುತ್ತದೆ. ಹೀಗಾಗಿ ಈಶಾನ್ಯ ರಾಜ್ಯಗಳ ಕಾಲಮಾನವನ್ನು ಒಂದು ಗಂಟೆ ಮುಂದಿಡಬೇಕೆಂಬ ಬೇಡಿಕೆಯೂ ಇತ್ತು, ಭಾರತ ಸರ್ಕಾರ ಅದನ್ನು ಮನ್ನಿಸಲಿಲ್ಲ ಎಂಬುದು ಬೇರೆ ಮಾತು. ನಿದ್ರೆಗಣ್ಣಿನಲ್ಲೂ ಪ್ರಕೃತಿಯನ್ನು ಆಸ್ವಾದಿಸುತ್ತಿದ್ದ ನನಗೆ ಮೋಹಿತ್ ನನ್ನು ಎಬ್ಬಿಸಬೇಕೆಂಬ ನೆನಪಾಗಿ ಕರೆ ಮಾಡಿದೆ. ದಿನವೂ ತಡವಾಗಿ ಏಳುತ್ತಿದ್ದ ಆ ಮನುಷ್ಯ ಅದಾಗಲೇ ಎದ್ದು ತಯಾರಾಗಿದ್ದ. ನಾನೂ ಗಡಿಬಿಡಿಯಲ್ಲೇ ತಯಾರಾದೆ. ಈ ಮಹಿಳಾಮಣಿಗಳದ್ದು ಇಲ್ಲೂ ತಡವೇ. ಎಲ್ಲರೂ ಸಿದ್ಧರಾಗಿ ಹೊರಡುವಾಗ ಐದು ವರೆ ಆಗಿ ಹೋಗಿತ್ತು.ಒಟ್ಟು ಹನ್ನೊಂದು ಜನ. ಎರಡು ಕಾರುಗಳಲ್ಲಿ ನಮ್ಮ ಸವಾರಿ ಹೊರಟಿತ್ತು. ನಮ್ಮ ಕಾರಿನಲ್ಲಿ ಏಳು. ಇನ್ನೊಂದರಲ್ಲಿ ನಾಲ್ಕು. ಚಾಲಕ ಹಿಂದಿ ಹಾಡುಗಳನ್ನು ಹಾಕಿದ. ನಮ್ಮ ಮಾತುಗಳು ಕಮ್ಮಿಯಾದವು. ಹೆಚ್ಚಿನವರು ಕುಳಿತಲ್ಲೇ ಕಣ್ಣುಗಳನ್ನು ಮುಚ್ಚಹತ್ತಿದರು. ತಲೆಗೆ ಆಧಾರವಿಲ್ಲದ ಸಣ್ಣ ಸೀಟು ನನ್ನ ಪಾಲಿಗೆ ಬಂದಿದ್ದರಿಂದ ಸ್ವಲ್ಪ ಅಡಚಣೆಯಾಗುತ್ತಿತ್ತು. ಎದುರಿನ ಸೀಟಿನಲ್ಲಿದ್ದ ಮೋಹಿತ್ ತನ್ನ ನಿದ್ರೆಯನ್ನೆಲ್ಲ ತೀರಿಸಿಕೊಳ್ಳತೊಡಗಿದ. ಕಾರು ಬ್ರಹ್ಮಪುತ್ರವನ್ನು ವೇಗವಾಗಿ ದಾಟುತ್ತಿತ್ತು. ನಾನು ಆ ವಿಸ್ತಾರವಾದ ಜಲರಾಶಿಯನ್ನೇ ನೋಡುತ್ತಾ ಕುಳಿತೆ.
ಅಸ್ಸಾಂ,ಮೇಘಾಲಯ,ಮಣಿಪುರ,ಮಿಜೋರಾಂ,ತ್ರಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ. ಸಪ್ತ ಸಹೋದರಿಯರೆಂದೇ ಕರೆಸಿಕೊಳ್ಳಲ್ಪಡುವ ಈಶಾನ್ಯದ ರಾಜ್ಯಗಳು ಪ್ರಕೃತಿ ಸೌಂದರ್ಯಕ್ಕೆ ಹೆಸರಾದವುಗಳು. ಬ್ರಹ್ಮಪುತ್ರಾ, ಬರಾಕ್ ನದಿಕಣಿವೆ, ಮೇಘಾಲಯ ತ್ರಿಪುರಾದ ಪರ್ವತ ಪ್ರದೇಶಗಳನ್ನೊಳಗೊಂದು ಭಾರತಿಯ ಸೌಂದರ್ಯಕ್ಕೆ ಮುಕುಟವಿಟ್ಟಂತೆ ಈ ಏಳು ರಾಜ್ಯಗಳು ಕಾಣಸಿಗುತ್ತವೆ. ಪ್ರತಿ ರಾಜ್ಯದಲ್ಲೂ ವಿಭಿನ್ನ ಸಂಸ್ಕೃತಿ-ಸಂಪ್ರದಾಯ, ವಿಭಿನ್ನ ಆಚಾರ-ವಿಚಾರ, ವಿಭಿನ್ನ ಭಾಷೆ ಇದೆ. ಆ ಭಿನ್ನತೆಯೊಳಗಿನ ಏಕತೆಯೂ ಇದೆ.
ಈ ರಾಜ್ಯಗಳು ಆಧುನಿಕವಾಗಿ ಮುಂದುವರೆದ ರಾಜ್ಯಗಳೇನೂ ಅಲ್ಲ. ಒಂದು ಹಂತದಲ್ಲಿ ಆಧುನಿಕತೆಯಿಂದ ಈ ಪ್ರದೇಶ ಸಂಪೂರ್ಣವಾಗಿ ಹೊರಬಿದ್ದಿತ್ತು. ಕೆಲ ದಶಕಗಳಿಂದ ಇಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಲವು ಐಐಟಿ, ಎನ್ ಐಟಿ ಯಂತಹ ಪ್ರತಿಷ್ಠಿತ ಸಂಸ್ಥೆಗಳನ್ನೂ ಸ್ಥಾಪಿಸಲಾಗುತ್ತಿದೆ. ಬಹಳ ಕಾಲ ಸಮಸ್ಯೆಯಾಗಿ ಉಳಿದಿದ್ದ ನಾಗಾ ಸಂಘಟನೆಗಳ ಬಮಡಾಯ ಈಗ ಸುಖಾಂತ್ಯ ಕಾಣುತ್ತಿದೆ. ಆದರೆ ಅರುಣಾಚಲದ ಬಗೆಗಿನ ಚೀನಾದ ನಿಲುವುಗಳು ಇಂದಿಗೂ ಬಗೆಹರಿಯದ ಕಗ್ಗಂಟು.
ತನ್ನ ಸೌಂದರ್ಯದ ಕಾರಣದಿಂದ ಸಹಜವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ ಈ ನಾಡುಗಳು. ಅದರಲ್ಲೂ ಮೇಘಾಲಯವೆಂತೂ ಭುವಿಯ ಮೇಲಿನ ಸ್ವರ್ಗವೆಂದೇ ಕರೆಯಲ್ಪಡುವ ಜಾಗ. ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುವ ಚಿರಾಪುಂಜಿ-ಮಾಸಿನ್ ರಾಮ್ ಇರುವುದು ಇಲ್ಲೇ! ಗಣಿತದ ಕಾರ್ಯಾಗಾರಕ್ಕಾಗಿ ಐಐಟಿ ಗುವಾಹಟಿಯಲ್ಲಿ ಸೇರಿದ್ದ ನಾವುಗಳು ಚಿರಾಪುಂಜಿ ನೋಡದೆ ಬಂದರೆ ಹೇಗೆ? ಒಂದು ಭಾನುವಾರ ಬಿಡುವ ಮಾಡಿಕೊಂಡು ಹೊರಟೇಬಿಟ್ಟೆವು.
ನಾವು ಹೊರಟು ಸುಮಾರು ಎರಡು ಗಂಟೆ ಹೊತ್ತಾಗಿರಬಹುದೇನೋ. ಕಾರು ತಿರುವುಗಳಲ್ಲಿ ತಿರು ತಿರುಗಿ ಸಾಗುತ್ತಿದ್ದರೆ ನನಗೆ ಪಶ್ಚಿಮ ಘಟ್ಟದ ನೆನಪಾಗುತ್ತಿತ್ತು. ಇವುಗಳ ಅನುಭವವಿಲ್ಲದವರು ಅಲ್ಲಲ್ಲಿ ವಾಂತಿ ಮಾಡಬೇಕಾದ ಅನಿವಾರ್ಯತೆಯೂ ಬಂತು. ಸ್ವಲ್ಪ ಸುಧಾರಿಸಿ ಮುಂದುವರೆಯುವುದೊಳಿತೆಂಬುದು ಎಲ್ಲರ ಅಭಿಪ್ರಾಯ. “ಲೇಕ್ ಕೆ ಪಾಸ್ ರುಕ್ ಸಕ್ತೇ ಹೈ, ಅಭೀ ಆಯೇಗಾ” ಅಂದ ಡ್ರೈವರ್ ದಾದಾ. ಆತ ಹೇಳಿದಂತೆ ಎರಡೇ ನಿಮಿಷಗಳಲ್ಲಿ ದೊಡ್ಡ ಸರೋವರವೊಂದು ದಾರಿಯ ಬದಿಯಲ್ಲಿ, ಮರಗಿಡಗಳ ಅಡಿಯಲ್ಲಿ ಕಾಣಿಸತೊಡಗಿತು. ಇನ್ನಷ್ಟು ಮುಂದೆ ಹೋದಂತೆ ಇನ್ನಷ್ಟು ಸ್ಪಷ್ಟವಾಯಿತು. ದಾದಾ ಗಾಡಿಯನ್ನು ಬದಿಯಲ್ಲಿ ನಿಲ್ಲಿಸಿದ . ಎದುರಿನಲ್ಲೇ ಚಹಾ ಅಂಗಡಿಯಿತ್ತು. ಇಲ್ಲಿ ಒಂದಕ್ಕೆ ಎರಡು ಪಟ್ಟು ಹಣ ಕೇಳಬಹುದೆಂದು ದಾದಾ ಹೇಳಿದ. ತೊಂದರೆಯಿಲ್ಲ, ಚಳಿಗೆ ಏನಾದರೂ ಬೇಕಲ್ಲ ಎಂದುಕೊಂಡು ಹಾಲು ಹಾಕದ ಚಹಾ ಕುಡಿಯತೊಡಗಿದ ನಮ್ಮಗಳ ದೃಷ್ಟಿ ಮಾತ್ರ ಸರೋವರದ ಅಂದಕ್ಕೆ ಮಾರುಹೋಗಿತ್ತು.
ಅದು ಮೇಘಾಲಯದ ಉಮಿಯಾಮ ಸರೋವರ. ಶಿಲ್ಲಾಂಗ್ ನಿಂದ ಸುಮಾರು ೧೫ ಕಿ.ಮೀ. ದೂರದಲ್ಲಿದೆ. ಇದು ಪ್ರಾಕೃತಿಕವಾಗಿ ಇದ್ದದ್ದಾಗಲೀ ಅಥವಾ ಪ್ರವಾಸೋದ್ಯಮಕ್ಕಾಗಿ ನಿರ್ಮಿಸಿದ್ದಾಗಲೀ ಅಲ್ಲ. ಅಸ್ಸಾಂ-ಮೇಘಾಲಯದ ಜಲವಿದ್ಯುತ್ ಯೋಜನೆಗಾಗಿ ಎಪ್ಪತ್ತರ ದಶಕದಲ್ಲಿ ಕಟ್ಟಿದ ಅಣೆಕಟ್ಟಿನ ಹಿನ್ನೀರು ಅದು. ಆದರೆ ಸುತ್ತಲಿನ ನಯನ ಮನೋಹರವಾದ ಪರಿಸರದ ಕಾರಣ ಸರೋವರ ಪ್ರವಾಸಿಗರನ್ನು ಸೆಳೆಯಲು ತುಂಬ ಸಮಯವೇನೂ ತೆಗೆದುಕೊಳಿಲ್ಲ. ಇಂದು ಶಿಲ್ಲಾಂಗ್-ಚಿರಾಪುಂಜಿ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಇದೂ ಒಂದು.
ಅದೇ ದಾರಿಯಲ್ಲಿ ದಿನನಿತ್ಯ ಓಡಾಡುವನೇ ಆದರೂ ಉಮಿಯಾಮಿನ ಸೌಂದರ್ಯವನ್ನು ಉಪೇಕ್ಷಿಸಿ ಸಾಗುವುದು ಅಸಾಧ್ಯ. ಡೊಂಕು ಡೊಂಕಾಗಿ ಹರಡಿರುವ ಜಲರಾಶಿ, ಅದರ ಹಿನ್ನಲೆಯಲ್ಲಿ ವಿಸ್ತಾರವಾಗಿ ಕಾಣಸಿಗುವ ಕಾಸೀ ಪರ್ವತಶ್ರೇಣಿಯ ಬೆಟ್ಟಗಳು, ಅವುಗಳ ಸಂದಿನಲ್ಲಿ ತೂರಿ ಬಂದು ನೀರಿನಿಂದ ಪ್ರತಿಫಲನಗೊಳ್ಳುವ ಸೂರ್ಯಶ್ಮಿ , ತಣ್ಣಗೆ ಬೀಸುವ ಗಾಳಿ, ಗಂಟಲಲ್ಲಿ ಇಳಿಯುತ್ತಿರುವ ಬಿಸಿಬಿಸಿ ಚಹಾ. ಆಹಾ! ಸೊಗಸೇ.
ಕುಳಿತಲ್ಲಿಂದ ಏಳುವ ಮನ ಯಾರಿಗೂ ಇರಲಿಲ್ಲ. ಆದರೆ ಕಾಲ ನಮ್ಮ ಕೈಲಿಲ್ಲವಲ್ಲ! ಒಂದಷ್ಟು ಸ್ವಂತಿ (ಸೆಲ್ಫಿ)ಗಳನ್ನು ತೆಗೆದುಕೊಂಡದ್ದಾಯಿತು. ಒಂಬತ್ತು ಗಂಟೆಯ ನಂತರ ದೋಣಿ ವಿಹಾರವೇ ಮೊದಲಾದವುಗಳು ಇವೆಯೆಂದು ಯಾರೋ ಹೇಳಿದರು. ಅದಕ್ಕಾಗಿ ಕಾಯುವ ಮನಸ್ಸಿದ್ದರೂ ಸಮಯ ಇರಲಿಲ್ಲ. ಉಮಿಯಾಮಿನ ಸೌಂದರ್ಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆವು. ಅತ್ತ, ನಮ್ಮನ್ನು ಬರಮಾಡಿಕೊಳ್ಳಲು ಶಿಲ್ಲಾಂಗ್ ತಯಾರಾಗಿತ್ತು!
ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಹಸಿರು ಹುಲ್ಲು, ಮರಗಿಡಗಳು ನಮ್ಮ ಆಗಮನಕ್ಕೆ ಶುಭ ಕೋರುತಲಿದ್ದವು. ಮಲೆನಾಡಿನ ದಟ್ಟಾರಣ್ಯದ ಮಡಿಲಲ್ಲಿ ಬೆಳೆದ ನನಗೆ ಹಸಿರು ವಿಶೇಷವೇನಲ್ಲ. ಆದರೆ ಈಶಾನ್ಯದ ಹಸಿರಿನಿದ್ದು ಒಂಥರ ಹೊಸ ಅನುಭವ. ಮಲೆನಾಡಿಗಿಂತ ಭಿನ್ನವಾದ ಸೂಚೀಪರ್ಣ ಮರಗಳು, ಸುರಿಯುವ ಮಳೆಯಿಂದ ಪಾರಾಗಲು ಪ್ರಕೃತಿಯೇ ಕಂಡುಕೊಂಡ ಪರಿಹಾರವೆಂಬಂತೆ ಕಾಣುತ್ತಿದ್ದವು. ಎತ್ತರದ, ವಿಶಾಲ ಮರಗಳು ಇದ್ದವಾದರೂ ಪುಟ್ಟ ಪುಟ್ಟ ಜಾತಿಯ ಮರಗಳೇ ಹೆಚ್ಚು ಸುಂದರವಾಗಿ ಕಾಣುತ್ತಿದ್ದವು. ಆ ಸೂಚೀಪರ್ಣ ಗಿಡಗಳು ನನ್ನ ಪ್ರಾಥಮಿಕ ಶಾಲೆಯಲ್ಲಿ ಚಂದಕ್ಕೆಂದು ಬೆಳೆಸಿದ್ದ ಗಿಡಗಳನ್ನು ನೆನಪಿಸುತ್ತಿದ್ದವು. ತೆರೆದ ಕಿಟಕಿಯಿಂದ ತಣ್ಣನೆಯ ಗಾಳಿ ಮೈಸೋಕುತ್ತಿತ್ತು. “ಬಹುತ್ ತಂಡ್ ಹೈ ನಾ” ಎಂದಳು ನೀಲಂ. “ಲೇಕಿನ್ ದೀದಿ, ಕ್ಲಾಸ್ ಪೆ ಎಸಿ ಔರ್ ಫ್ಯಾನ್ ಸಾಥ್ ಸಾಥ್ ಡಾಲನೇ ಸೇ ಭೀ ತಂಡ್ ನಹೀ ಲಗ್ತಾ, ತುಮ್ ಲೋಗೋಂ ಕೋ” ನಾನು ಸ್ವಲ್ಪ ಕಾಲೆಳೆದೆ. “ಸುಮುಖ್ ಯಹಾ ಆನೇ ಕೇ ಬಾದ್ ತೋಡಾ ಬಹುತ್ ಹಿಂದಿ ಸೀಖ್ ಲಿಯಾ ಹೈ” ಎಂದ ನಿಲಾಂಜನ್. “ಜಾನೇ ಕೇ ವಕ್ತ್ ಸಬ್ ಕುಚ್ ಸೀಖ್ ಕೇ ಜಾವುಂಗಾ. ತುಮ್ ಭೀ ಕನ್ನಡ ಸೀಖ್ ಲೇನಾ ಮುಝ್ ಸೇ” ಅಂದೆ.
ಮಾತಿನ ಮಧ್ಯೆ ಶಿಲ್ಲಾಂಗ್ ತಲುಪಿದ್ದೇ ಗೊತ್ತಾಗಲಿಲ್ಲ. ಶಿಲ್ಲಾಂಗ್ ಪರ್ವತಗ ಮಧ್ಯೆ ಇರುವ ಪಟ್ಟಣ. ಮೇಘಾಲಯದ ರಾಜಧಾನಿ. ಗುಡ್ಡಬೆಟ್ಟಗಳಿಂದಲೂ, ಉದ್ಯಾನವನಗಳಿಂದಲೂ, ವಿಭಿನ್ನ ರೀತಿಯ ಕಟ್ಟಡ ರಚನೆಗಳಿಂದಲೂ ಕೂಡಿ ಪ್ರವಾಸಿಗರನ್ನು ಸೆಳೆಯುವ ಪ್ರದೇಶ. ಇಡೀ ಊರು ಕಾಣಿಸುವ ಶಿಲ್ಲಾಂಗ್ ವ್ಯು ಪಾಯಿಂಟ್, ನೀರಾಟಕ್ಕೆ ಯೋಗ್ಯವಿರುವ ಪುಟ್ಟದಾದ ಎಲಿಫೆಂಟ್ ಜಲಪಾತ ಇಲ್ಲಿಯ ಪ್ರಮುಖ ಆಕರ್ಷಣೆ. ಒಂದು ದಿನದ ಸಮಯ ಚಿರಾಪುಂಜಿಗೇ ಸಾಲದ್ಧರಿಂದ ಶಿಲ್ಲಾಂಗ್ ನಲ್ಲಿ ಸಮಯ ವ್ಯಯಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಮುಂದೆ ಸಿಗಲಿರುವ ಮುತ್ತುಗಳಿಗಾಗಿ ಹರಳುಗಳನ್ನು ತ್ಯಾಗ ಮಾಡುವುದು ನಮಗೆ ದೊಡ್ಡದೆನಿಸಲಿಲ್ಲ. ಹಾಗಂತ ಶಿಲ್ಲಾಂಗ್ ಅನ್ನು ಸಂಪೂರ್ಣ ಬಿಡುವ ಮನಸ್ಸೂ ನಮಗಿರಲಿಲ್ಲ. ಡ್ರೈವರ್ ದಾದಾಗೆ ಗಾಡಿಯನ್ನು ಸ್ವಲ್ಪ ನಿಧಾನವಾಗಿಸುವಂತೆ ಹೇಳಿದೆವು. ಅಲ್ಲಿಯ ಮನೆ, ಬಂಗಲೆಗಳ ಆಕಾರವನ್ನು ನೋಡುವುದೇ ಒಂದು ಚಂದ. ಆಧುನಿಕತೆಯ ಘಾಟಿನ ಹೊರತಾಗಿಯೂ ಈಶಾನ್ಯದ ದೇಸೀ ಸೊಗಡು ಕಡಿಮೆಯಾಗಿರಲಿಲ್ಲ. ಸೂಚೀಪರ್ಣ ಮರಗಳ ರೀತಿಯಲ್ಲೇ ಕಾಣುವ ಚೂಪು ಚೂಪಾದ, ಪುಟ್ಟ ಪುಟ್ಟ ಕಟ್ಟಡಗಳು ನೋಡುಗರ ಕಣ್ಮನ ತಣಿಸದೆ ಹೋಗುವುದಿಲ್ಲ.
ಶಿಲ್ಲಾಂಗ್ ಕಳೆಯಿತು. ಮುಂದೆ ಸಿಗಲಿರುವುದು ಮಾವ್ಕಡಾಕ್ ಕಣಿವೆ. ಕಣ್ಣಿಗೇನೋ ರಸದೌತಣ ಯಥೇಚ್ಛವಾಗಿ ದೊರೆಯುತ್ತಿತ್ತು, ಆದರೆ ಹೊಟ್ಟೆ ತಾಳ ಹಾಕ ಹತ್ತಿತ್ತು. ತಿಂಡಿ ಏನಾದರೂ ತಿನ್ನೋಣವೆಂದು ಗಾಡಿ ನಿಲ್ಲಿಸಿ ಮಾವ್ಕಡಾಕ್ ಬಳಿಯೇ ಇದ್ದ ಸಣ್ಣ ಹೋಟೆಲ್ ನತ್ತ ಹೆಜ್ಜೆ ಇಟ್ಟೆವು. ನಮ್ಮಂತೆಯೇ ಹಲವು ಪ್ರವಾಸಿಗರ ವಾಹನಗಳು ಅಲ್ಲೇ ನಿಂತಿದ್ದವು. ಇವತ್ತಿಗೆ ತಿಂಡಿ ಸಿಗಬಹುದೇ ಎಂಬ ಅನುಮಾನ ನಮಗೆ. ಒಳ ಹೋಗಿ ನೋಡಿದರೆ ನಮ್ಮ ಯೋಚನೆಗೂ ಮೀರಿ ಜನ. ಹೋಟೆಲ್ ನ ಮಾಲಿಕ ಈಗ ಆಗುತ್ತೆ ಕುಳಿತುಕೊಳ್ಳಿ ಎಂದ. ಮೂರು ಪ್ಲೇಟ್ ಪರೋಟ, ಆರು ನೂಡಲ್ಸ್ ಗೆ ಹೇಳಿದೆವು. ಸದ್ಯಕ್ಕೆ ಸಿದ್ಧವಾಗುವ ಯಾವುದೇ ಲಕ್ಷಣಗಳು ಕಾಣದ ಕಾರಣ ನಾವು ಮೂವರು ಒಂದು ಸುತ್ತು ಹಾಕಿ ಬರೋಣ ಎಂದು ಹೊರಹೊರಟೆವು.
ಆ ಹೋಟೆಲ್ ನ ಕೆಳ ಭಾಗದಲ್ಲೇ ಹರಿಯುವ ತೊರೆಗೆ ಅಡ್ಡಲಾಗಿ ಕಟ್ಟಿದ್ದ ಕಟ್ಟು ಇತ್ತು. ಅದೇನೂ ಅಣೆಕಟ್ಟೇನೂ ಆಗಿರಲಿಲ್ಲ, ಮಲೆನಾಡಿನಲ್ಲಿ ಗದ್ದೆ-ತೋಟಗಳಿಗೆ ನೀರು ತಿರುಗಿಸಲು ಹೊಳೆಗೆ ಹಾಕುವ ಕಟ್ಟಿನ ರೀತಿಯದ್ದೇ. ಆದರೆ ಸಿಮೆಂಟ್ ನಲ್ಲಿ. ನನ್ನ ಜೊತೆಗಾರರಿಬ್ಬರಿಗೂ ಆ ತೊರೆಯಲ್ಲಿಳಿದು ಆಡುವ ಆಸೆ. ಸರಿಯೆಂದು ನಾನೂ ಹೊರಟೆ. ನನಗೆ ಅವರಂತೆ ಶೂ ತೆಗೆಯುವ ಅಗತ್ಯವಿರದ ಕಾರಣ ನಾನೇ ಮೊದಲು ನೀರಿಗಿಳಿದೆ. ನೀರಿನ ತಂಪಿಗೆ ಕಾಲು ಕತ್ತರಿಸಿದ ಅನುಭವ. ಆದರೆ ಅದನ್ನು ಮುಖದಲ್ಲಿ ತೋರಗೊಡದೆ ಅವರನ್ನೂ ಬರ ಹೇಳಿದೆ. ಆಮೇಲೆ ಬೈಗುಳವನ್ನೂ ತಿಂದೆ ಎಂದು ಬೇರೆ ಹೇಳಬೇಕಿಲ್ಲವಲ್ಲ!
ಉಳಿದವರಿಗೆ ಈ ಪರಿಸರ ಅದ್ಭುತವೆನಿಸುವ ಅನುಭವಗಳನ್ನು ನೀಡುತ್ತಿತ್ತು. ನನಗೆ ಅವರ ಉದ್ಗಾರಗಳಷ್ಟು ವಿಶೇಷವೇನೂ ಕಾಣುತ್ತಿರಲಿಲ್ಲ. ಆದರೆ ಈ ಜಾಗ ನನಗೆ ಬೇರೆಯದ್ದೇ ರೀತಿಯ ಉಲ್ಲಾಸವನ್ನು ಕೊಡಹತ್ತಿತ್ತು. ಮಲೆನಾಡಿನಂತೆಯೇ ತುಂಬಿದ್ದ ಹಸಿರು, ವಿರಳ ಜನವಸತಿ, ಅಲ್ಲಲ್ಲಿ ಕಂಡಿದ್ದ ಭತ್ತ ಬೆಳೆಯುವ ಗದ್ದೆ, ಈ ತೊರೆಯ ಬದಿಯಲ್ಲಿದ್ದ ಬಾಳೆ ಮರಗಳು, ಹೂ ಬಿಟ್ಟಿದ್ದ ದಾಸವಾಳ ಗಿಡ, ಎಲ್ಲಕ್ಕಿಂತ ಮುಖ್ಯವಾಗಿ ಬೆಳೆದುಕೊಂಡಿದ್ದ ಅಡಿಕೆ ಮರಗಳು. ಕಾಡು ಮರಗಳು ಸೂಚೀಪರ್ಣ ರೂಪದವು ಎಂಬುದನ್ನು ಹೊರತುಪಡಿಸಿದರೆ ಅದು ನಮ್ಮ ಮಲೆನಾಡಿನಂತೆಯೇ ಕಾಣಿಸಿತು. ಎಷ್ಟಂದರೂ ಎರಡೂ ಘಟ್ಟಗಳಲ್ಲವೇ! ಒಂದು ಪಶ್ಚಿಮ ಘಟ್ಟವಾದರೆ ಇನ್ನೊಂದು ಈಶಾನ್ಯ ಘಟ್ಟ. ಅದು ತಾಯಿನಾಡಾದರೆ ಇದು ಚಿಕ್ಕಮ್ಮನೂರೆಂಬಂತೆ ಭಾಸವಾಯಿತು. ಇಲ್ಲಿ ಕಂಡ ಇನ್ನೊಂದು ವಿಶೇಷವೆಂದರೆ ಅಡಿಕೆ ಮರಗಳು ಬೆಳೆದಿರುವ ಪರಿ. ನಮ್ಮಲ್ಲಿ ನೀರುಣಿಸಿ, ಮರದ ಬುಡ ಬಿಡಿಸಿ, ಗೊಬ್ಬರ ಹಾಕಿ ಮುದ್ದಾಗಿ ಅಡಿಕೆ ಮರಗಳನ್ನು ಬೆಳೆಸುತ್ತೇವಲ್ಲ? ಅಲ್ಲಿ ಕಾಡು ಕಾಡು ಮರಗಳ ಜೊತೆಗೇ ಇವುಗಳೂ ಬೆಳೆದು ನಿಂತಿದ್ದವು. ದಾರಿಯಲ್ಲಿ ಇನ್ನೂ ಹಲವು ಕಡೆ ಈ ರೀತಿಯಾದದ್ದನ್ನ ನೋಡಿದ್ದೆ. ಇಲ್ಲಿಯ ಜನರು ಗುಡ್ಡಬೆಟ್ಡದ ಮೇಲೆಲ್ಲಾ ಅಡಿಕೆ ಬೆಳೆಸುತ್ತಾರೋ ಅಥವಾ ಅದಾಗಿಯೇ ಹುಟ್ಟುತ್ತದೆಯೋ ಎಂಬ ಸಂದೇಹ ಮೂಡಿತು. ತೊರೆಯ ಆಚೆ ಬದಿಯಲ್ಲಿ ಟವೆಲ್ ಉಟ್ಟುಕೊಂಡು ಬೀಡಿ ಸೇದುತ್ತಿದ್ದ ಅಜ್ಜನನ್ನು ಕೇಳಿಯೇ ಬಿಟ್ಟೆ. ಅಡಿಕೆಗೆ ಹಿಂದಿಯಲ್ಲಿ ಏನನ್ನಬೇಕೆಂದು ನನಗೆ ನೆನಪಾಗಲಿಲ್ಲ, ಹೇಗೋ ಕೇಳಿದೆ. ಕೆಲವರು ಬೆಳೆಸುತ್ತಾರೆ, ಹಾಗೆಯೂ ಬೆಳೆಯುತ್ತದೆ. ಗುಡ್ಡದಲ್ಲಿ ಹುಟ್ಟಿದ ಗಿಡಗಳನ್ನು ತಂದು ನೆಡುವವರೂ ಇದ್ದಾರೆ ಎಂದ. ಅವನಿಗೂ ಹಿಂದಿ ಸರಿಯಾಗಿ ಬರುತ್ತಿರಲಿಲ್ಲವೆನಿಸುತ್ತದೆ, ಆದರೆ ನನಗೆ ಅವನು ಹೇಳಿದ್ದು ಅರ್ಥವಾಯಿತು. ಅಡಿಕೆ ಅಷ್ಟೇ ಅಲ್ಲ, ನಾಲ್ಕೈದು ಜಾತಿಯ ಬಾಳೆ ಹಣ್ಣುಗಳು ದೊರಕುವುದು ಕಾಡಿನಲ್ಲಿ ಬೆಳೆಯುವ ಮರಗಳಿಂದ ಎಂದೂ ಹೇಳಿದ. ಕಲ್ಲು ಬಾಳೆ, ಕಾಡು ಬಾಳೆಗಳು ತಾನೇ ತಾನಾಗಿ ಬೆಳೆಯುವುದು ಗೊತ್ತಿತ್ತು. ಆದರೆ ತಿನ್ನಲು ಬಳಸುವ, ಅದರಲ್ಲೂ ನಾಲ್ಕೈದು ಜಾತಿಯ ಬಾಳೆ ತಾನಾಗಿಯೇ ಬೆಳೆಯುತ್ತದೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು. ಬಾಳೆ ಮರಗಳು ಬೆಳೆಯಲು ಶುರುವಾದರೆ ಹಿಂಡು ಹಿಂಡಾಗಿ ಬೆಳೆದುಬಿಡುತ್ತವಂತೆ. ಅವುಗಳನ್ನೆಲ್ಲ ಸವರಿ ಅಡಿಕೆ ಗಿಡಕ್ಕೆ ಜಾಗ ಮಾಡಿಕೊಡಬೇಕಾಗುತ್ತದೆ ಎಂದಾಗ ನನಗೆ ನಂಬಲಾಗಲಿಲ್ಲ! ನಾವು ಬೆಳೆಸಿದರೆ ಅವು ಬೆಳೆಯುತ್ತವೆ ಎಂಬುದೂ ಅಹಂಕಾರವಲ್ಲವೆ ಎನ್ನಿಸಿ ಪುಲಿಗೆರೆ ಸೋಮನಾಥನ “ಗಿಡ ವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್
ಕಡು ಕಾರ್ಪಣ್ಯದಿ ಕೇಳ್ವವೇ ಶಿಖಿ ಜಲೋರ್ವೀ ಮಾರುತಾಕಾಶಮಂ
ಮೃಡ ನೀನಲ್ಲದದಾರು ಕಾಯ್ವರು ಜಗದ್ರಕ್ಷಾಕರಂ ನೀನಲೈ
ಕೊಡುವರ್ ಕೊಂಬರು ಮರ್ತ್ಯರೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ” ಎಂಬ ಮಾತುಗಳು ನೆನಪಾದವು. ಇಷ್ಟೆಲ್ಲಾ ಆಗುವಾಗ ತಿಂಡಿ ಬಂದಿದೆಯೆಂಬ ಕರೆ ಬಂದಿತ್ತು. ಆತನಿಗೊಂದು ಧನ್ಯವಾದ ಹೇಳಿ ತಿಂಡಿಗೆ ಹೊರೆಟೆವು.
ನೂಡಲ್ಸ್ ನುಂಗಲು ಕಷ್ಟವೆನಿಸಿತಾದರೂ ಪರೋಟ ತುಂಬಾ ಹಿಡಿಸಿತು. ತಿಂಡಿ ಮುಗಿಸಿ ಮಾವ್ಕಡಾಕ್ ಕಣಿವೆಯೆದುರು ಬಂದು ನಿಂತೆವು. ಹಸಿರು ಬಣ್ಣ ತುಂಬಿದಂತಿದ್ಸ ಅಭೇದ್ಯವಾದ ಕಾಡುಗಳನ್ನು ಹೊಂದಿರುವ ಪರ್ವತರಾಶಿಗಳು, ಅದರ ನಡುವಿನ ಕಣಿವೆ ಪ್ರದೇಶಗಳು ಕಣ್ಮನ ಸೆಳೆಯುತ್ತಿದ್ದವು. ಚಿರಾಪುಂಜಿಯ ಪ್ರವೇಶದ್ವಾರಗಳಂತೆ ಕಾಣುತ್ತಿದ್ದ ಆ ಪೂರ್ವ ಕಾಸಿ ಪರ್ವತಗಳು ಮುಂದೆ ಕಾಣಲಿರುವ ಅಪೂರ್ವ ದೃಶ್ಯಾವಳಿಗಲಳಿಗೆ ಮುನ್ನುಡಿ ಬರೆದಿದ್ದವು.
– Sumukh Sagar
Facebook ಕಾಮೆಂಟ್ಸ್