X

‘ಕಡಲ ತೀರದ ಗ್ರಾಮ’

‘ಕಡಲ ತೀರದ ಗ್ರಾಮ’ (ಮಕ್ಕಳಿಗಾಗಿ ಬರೆದ ಕಾದಂಬರಿ)

ಕನ್ನಡಾನುವಾದ: ಎಚ್.ಕೆ.ರಾಮಕೃಷ್ಣ

ಪ್ರಕಟಣೆಯ ವರ್ಷ: ೧೯೯೮, ಪುಟಗಳು: ೧೮೩, ಬೆಲೆ: ರೂ.೩೦-೦೦

ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಹೊಸ ದಿಲ್ಲಿ-೧೧೦ ೦೧೬


ಪ್ರಸಿದ್ಧ ಭಾರತೀಯ ಇಂಗ್ಲಿಷ್ ಬರಹಗಾರ್ತಿ ಅನಿತಾ ದೇಸಾಯಿಯವರು(ಜನನ-೧೯೩೭) ಮಕ್ಕಳಿಗಾಗಿ ಬರೆದ ‘ದ ವಿಲೇಜ್ ಬೈ ದ ಸೀ’ಕಾದಂಬರಿಯ ಕನ್ನಡಾನುವಾದ, ಇದು. ೧೯೮೨ರಲ್ಲಿ ಬರೆದ ಈ ಕಾದಂಬರಿಗೆ ಆ ಸಾಲಿನ ‘ಗಾರ್ಡಿಯನ್ ಚಿಲ್ಡ್ರನ್ಸ್ ಫಿಕ್ಷನ್ ಪ್ರಶಸ್ತಿ ಸಿಕ್ಕಿದೆ. ಇವರು ಮೂರು ಬಾರಿ ಮ್ಯಾನ್ ಬೂಕರ್ ಪ್ರಶಸ್ತಿಗೆ ತೀರಾ ಹತ್ತಿರ ಹೋಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಹೊರತಾಗಿ ಇವರಿಗೆ ಪದ್ಮಭೂಷಣವನ್ನೂ ನೀಡಿ ಗೌರವಿಸಲಾಗಿದೆ. ಭಾರತೀಯ ಇಂಗ್ಲಿಷ್ ಲೇಖಕಿ ಮತ್ತು ೨೦೦೬ರಲ್ಲಿ ‘ದ ಇನ್‌ಹೆರಿಟನ್ಸ್ ಆಫ್ ಲಾಸ್’ಕಾದಂಬರಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಕಿರಣ್ ದೇಸಾಯಿಯವರು ಇವರ ಮಗಳು. ಈ ಕಾದಂಬರಿಯ ಹೊರತಾಗಿ ಅನಿತಾ ದೇಸಾಯಿ ಅನೇಕ ಕಾದಂಬರಿಗಳನ್ನೂ ಸಣ್ಣ ಕತೆಗಳನ್ನೂ ಬರೆದಿದ್ದಾರೆ.

ಈ ಕಾದಂಬರಿಯ ಘಟನೆಗಳು ನಡೆಯುವುದು ಮುಂಬಯಿಗೆ ಅನತಿ ದೂರದಲ್ಲಿರುವ, ಪಶ್ಚಿಮ ಕರಾವಳಿಯ ಗ್ರಾಮ  ಧುಲ್‌ನಲ್ಲಿ. ಮುಂಬಯಿಗೂ ಈ ಕಾದಂಬರಿಯಲ್ಲಿ ಪಾತ್ರವಿದೆ. ಧುಲ್ ಮುಖ್ಯವಾಗಿ ಮೀನುಗಾರರ ಹಳ್ಳಿ.  ಇವರಲ್ಲಿ ಬಹಳಷ್ಟು ಜನರಿಗೆ ಹಿತ್ತಲಿನಂಥ ತುಂಡು ಜಮೀನುಗಳಿವೆ, ಮಳೆಗಾಲದಲ್ಲಿ ನೀರು ತೊಟ್ಟಿಕ್ಕುತ್ತ ಸದಾ ತೇವಗೊಂಡಿರುತ್ತಿದ್ದರೂ ಇವರಿಗೆ ತಮ್ಮ ಮನೆಗಳೆಂದರೆ  ಪ್ರೀತಿ. ಮಳೆಗಾಲದ ನಾಲ್ಕು ತಿಂಗಳು ಬಿಟ್ಟರೆ ಉಳಿದ ದಿನಗಳೆಲ್ಲ ಈ ದುಡಿಯುವ ವರ್ಗಕ್ಕೆ ಮೀನುಗಾರಿಕೆಯೇ ಕಸುಬು. ಆ ದಿನಗಳಲ್ಲಿ ಊಟ, ಬಟ್ಟೆ ಮತ್ತು ಮಕ್ಕಳ ಶಾಲೆಗಾಗಿ ಹಣಕ್ಕೆ ಕೊರತೆಯಾಗುವುದಿಲ್ಲ. ಇಲ್ಲಿ ಮನೆಗಳು ಒತ್ತಟ್ಟಿಗೆ ಸಿಗುವುದಿಲ್ಲ. ಕಂಪೌಂಡು ಮನೆ ಹೊಂದಿರುವ ಅನುಕೂಲಸ್ಥರು ಈ ಊರಿನಲ್ಲಿ ಬೆರಳೆಣಿಕೆಯಷ್ಟೇ. ಹರೆಯದಲ್ಲಿ ದೋಣಿಯನ್ನು ಇಳಿಸಿ ಕಡಲಿಗೆ ನುಗ್ಗುತ್ತಿದ್ದ ಅನೇಕರು ಈಗ ಕುಡುಕರಾಗಿ ದನ-ಕರುಗಳನ್ನೂ ದೋಣಿಯನ್ನೂ ಸಾಲಕ್ಕಾಗಿ ಮಾರಿಕೊಂಡಿದ್ದಾರೆ. ಅಂತಹ ಒಬ್ಬ  ಮೀನುಗಾರನ ಕುಟುಂಬದ ಕತೆ ಈ ಕಾದಂಬರಿ. ಆತ ರಾತ್ರಿಯ ನಿಶೆ ಇಳಿಯದೆ ಹಗಲೆಲ್ಲ ಮನೆಯೊಳಗೆ ಮೂಲೆ ಹಿಡಿದು ಅರೆ ನಿದ್ದೆ ತೆಗೆಯುತ್ತಾನೆ.  ಅವನ ಹೆಂಡತಿಗೆ ಕ್ಷಯರೋಗ. ಆದರೆ ಅದನ್ನು ಅವನಿಗೆ ತಿಳಿಸಿ ಹೇಳುವ ವೈದ್ಯರು ಕೂಡ ಆಸುಪಾಸಿನಲ್ಲಿ ಎಲ್ಲೂ ಇಲ್ಲ. ಆದ್ದರಿಂದ ಮನೆಯ ಪಾಡನ್ನೆಲ್ಲ ಮಕ್ಕಳಾದ ಲೀಲ, ಹರಿ, ಬೇಲ ಮತ್ತು ಕಮಲ ನೋಡಿಕೊಳ್ಳಬೇಕು. ಲೀಲಳ ಕೆಲಸ ಅಮ್ಮನ ಆರೈಕೆ ಮತ್ತು ಅಡುಗೆ. ಇನ್ನೂ ಹದಿಹರೆಯದಲ್ಲಿರುವ ಆಕೆಯ ತಮ್ಮ ಹರಿ ದುಡಿಯುತ್ತಾನೆ, ಅಡಿಗೆಗೆ ಮೀನು ಹಿಡಿದು ತರುತ್ತಾನೆ. ಕಿರಿಯರಾದ ಬೇಲ ಮತ್ತು ಕಮಲ ಇನ್ನೂ ಪುಟಾಣಿ ಹುಡುಗಿಯರು; ಶಾಲೆಗೆ ಹೋಗುತ್ತ ದುಃಖವನ್ನೂ ಅರೆಹೊಟ್ಟೆಯ ಹಸಿವನ್ನೂ ಮರೆಯಬಲ್ಲ ಮುಗ್ಧರು ಅವರು.

ತಮ್ಮ ಕಷ್ಟಗಳನ್ನು ಅವಡುಗಚ್ಚಿ ಸಹಿಸಿಕೊಂಡಿದ್ದ ಆ ಹಳ್ಳಿಗೆ ಬಿರುಗಾಳಿಯಂತೆ ಒಂದು ಸುದ್ದಿ ಬರುತ್ತದೆ. ಧುಲ್‌ನಲ್ಲಿ ಒಂದು ರಸಗೊಬ್ಬರ ಕಾರ್ಖಾನೆ ಶುರುವಾಗಲಿದೆ, ಅದಕ್ಕೆ ಹಳ್ಳಿಯ ಜಮೀನುಗಳನ್ನೆಲ್ಲ ಕಾರ್ಖಾನೆಯ ಮಾಲಿಕರು ಖರೀದಿಸುತ್ತಾರೆ ಎನ್ನುವ ಗುಲ್ಲು ಹಬ್ಬಲು ತಡವಾಗುವುದಿಲ್ಲ. ದೊಡ್ಡಯಂತ್ರಗಳೂ ಮರಮಟ್ಟುಗಳೂ ಬಂದು ಚಟುವಟಿಕೆ ಆರಂಭವಾಗುತ್ತದೆ. ಹರಿಯ ಅಪ್ಪ ಕುಡಿತಕ್ಕೆ ಮಾಡಿದ ಸಾಲ ಬೆಳೆದು ಸಾಲ ಕೊಟ್ಟವರಿಂದ ತುಚ್ಛ ಮಾತು ಕೇಳಬೇಕಾಗುತ್ತದೆ. ಲೀಲಳ ಪಾಲಿಗೆ ಅಳುವುದೊಂದೇ ಉಳಿಯುತ್ತದೆಯಾದರೂ  ಹರಿಗೆ  ಮಾತ್ರ ಮುಂಬಯಿಗೆ ಹೋಗಿ ದುಡಿಯುವ ಕನಸು. ಅದೊಂದೇ ದಾರಿ ಕಾಣುತ್ತದೆ ಅವನಿಗೆ.  ಅಕ್ಕ ತಂಗಿಯರ ಮದುವೆ, ತಾಯಿಗೆ ಔಷಧ ಹೀಗೆ ಏನೆಲ್ಲ ತಾನು ತನ್ನ ಮನೆಗಾಗಿ ಮಾಡಬೇಕಾಗಿದೆ ಎನ್ನುವುದು ಅವನ ಪುಟ್ಟ ಮನಸ್ಸಿಗೆ ತಿಳಿದಿತ್ತು. ಧುಲ್ ಮೀನುಗಾರರ ಉದ್ಧಾರಕ್ಕಾಗಿ, ಕಾರ್ಖಾನೆ ಬೇಡವೆಂದು ಹೋರಾಟಕ್ಕೆ ಮೀನುಗಾರರನ್ನು ಸಜ್ಜುಗೊಳಿಸಲು ಮುಂಬಯಿಯಿಂದ ನೇತಾರನೊಬ್ಬ ಅಲ್ಲಿಗೆ ಬಂದು ಆವೇಶದಲ್ಲಿ ಭಾಷಣ ಮಾಡಿದ್ದರಿಂದ ಆ ಜನರಿಗೆ ಎಲ್ಲಿಲ್ಲದ ಕೆಚ್ಚು ಬರುತ್ತದೆ, ಮುಂಬಯಿಗೆ ಹೋಗಿ ಸರಕಾರಕ್ಕೆ ಮನವಿ ಕೊಡಬೇಕೆನ್ನುವುದು ಧುಲ್ ಜನರ ಉದ್ದೇಶ. ಆ ಗುಂಪಿನೊಡನೆ ಹರಿಯೂ ಮುಂಬಯಿಗೆ ತಲುಪಿ ಗುಂಪಿನಲ್ಲಿ ಹಿಂದೆ ಬಿದ್ದು ಮುಂಬಯಿಯಲ್ಲಿಯೇ ಉಳಿಯುವಂತಾಗುತ್ತದೆ. ಅಸಾಧ್ಯವಾದ ಹಸಿವು, ಭೋರ್ಗರೆವ ಜನಜಂಗುಳಿ, ವಾಹನಗಳ ಆರ್ಭಟಗಳ ನಡುವೆ ಬೀದಿಪಾಲಾಗಬೇಕಾಗಿದ್ದ ಹರಿ ಕೊನೆಗೆ ಸೆರುವುದು ಝೋಪಡಪಟ್ಟಿಯ ಹತ್ತಿರವಿದ್ದ ಒಂದು ಮಬ್ಬುಗತ್ತಲಿನ ಗಲೀಜು ಹೋಟೆಲಿಗೆ. ಅದರ ಮಾಲಿಕ ಮೇಲ್ನೋಟಕ್ಕೆ ಒರಟಾದ ಠೊಣಪ, ಆದರೆ ಬಡತನ ಮತ್ತು ಕಷ್ಟಗಳೊಡನೆಯೇ ಏಗುತ್ತ ಬೆಳೆದ ಅವನಿಗೆ ಹೋಟೆಲಿನ ಕೆಲಸಗಾರರ ಮೇಲೆ ಅನುಕಂಪ. ಹೋಟೆಲ್ ಎದುರಿಗೆ ವಾಚು ರಿಪೇರಿಮಾಡುವ ಅಂಗಡಿಯ ಫಾರ್ಸಿ ಮುದುಕ ಪಾನ್‌ವಾಲಾ ಹರಿಗೆ ವಾಚ್ ರಿಪೇರಿಯ ಮರ್ಮಗಳನ್ನೆಲ್ಲ ಹೇಳಿಕೊಡುತ್ತಾನೆ. ಒಟ್ಟಿನಲ್ಲಿ ಮುಂಬಯಿ ಹರಿಯ ಕೈ ಬಿಡುವುದಿಲ್ಲ.

ಧುಲ್‌ನಲ್ಲಿ ಹರಿಯ ಮನೆಯ ಹತ್ತಿದಲ್ಲೆ ಇದ್ದ ಒಂದು ಹಳೆಯ ವಿಲ್ಲಾವನ್ನು ಡಿಸಿಲ್ವಾ ಖರೀದಿಸುತ್ತಾನೆ, ಡಿಸಿಲ್ವಾ ಮುಂಬಯಿಯಲ್ಲಿ ದೊಡ್ಡ ಉದ್ಯಮಿ. ಆಗಾಗ ಬದಲಾವಣೆಗಾಗಿ ಕುಟುಂಬದೊಡನೆ ಧುಲ್‌ಗೆ ಬಂದು ಹೋಗುವ ಅವನಿಗೆ  ಹರಿಯ ಅಕ್ಕ ಲೀಲ ಮಾಡಿಕೊಡುವ ಮನೆಗೆಲಸ ಮೆಚ್ಚಿಗೆಯಾಗುತ್ತದೆ. ಲೀಲಳ ತಾಯಿಯ ಅನಾರೋಗ್ಯ, ತಂದೆಯ ಹೊಣೆಗೇಡಿತನ, ಹರಿಯ ಕಣ್ಮರೆ ಎಲ್ಲವನ್ನು ಕೇಳಿ ತಿಳಿದ ಡಿಸಿಲ್ವಾನ ಕುಟುಂಬ ಅವರ ನೆರವಿಗೆ ಬರುತ್ತದೆ, ಲೀಲಳ ತಾಯಿಗೆ ಚಿಕಿತ್ಸೆ ದೊರೆಯುತ್ತದೆ, ಪಶ್ಚಾತ್ತಾಪದಿಂದ ಹರಿಯ ತಂದೆ ಬದಲಾಗುತ್ತಾನೆ. ಹರಿ ಕೂಡ ದೀಪಾವಳಿಗೆ ಧುಲ್‌ನ ತನ್ನ ಮನೆಗೆ ಹಿಂದಿರುಗುವಾಗ ತನ್ನ ವರ್ಷದ ಉಳಿತಾಯವನ್ನು ತೆಗೆದುಕೊಂಡು ಬಂದಿರುತ್ತಾನೆ. ಹಳ್ಳಿಗೆ ಮರಳಿ ಬಂದಿದ್ದರೂ ಕೂಡ ಹರಿಯ ಕಿವಿಯಲ್ಲಿ ಧ್ವನಿಸುತ್ತಲೇ ಇರುತ್ತದೆ “ಬದಲಿಸು, ಇಲ್ಲ ಪರಿಸ್ಥಿತಿಗೆ ತಕ್ಕಂತೆ ನೀನೇ ಬದಲಾಗು”ಎನ್ನುವ ಉಪದೇಶ. ಅದನ್ನು ಮುಂಬಯಿಯ ಪಾನ್‌ವಾಲಾ ಹರಿಗೆ ನಿತ್ಯ ಹೇಳುತ್ತಲೇ ಇರುತ್ತಿದ್ದ. ಧುಲ್ ಗ್ರಾಮದಲ್ಲಿ ಹರಿ ಹೊಸ ಉದ್ಯೋಗವೊಂದರ ಅನ್ವೇಷಣೆ ನಡೆಸುತ್ತಲೇ ಇರುತ್ತಾನೆ ಎನ್ನುವುದರೊಡನೆ ಕಾದಂಬರಿ ಮುಗಿಯುತ್ತದೆ.

ಈ ಕಾದಂಬರಿಯನ್ನು “….ಭಾರತದ ಗ್ರಾಮ ಜೀವನದ ಸತ್ಯಕಥೆ” ಎಂದು ‘ಟೈಮ್ಸ್ ಎಜುಕೇಷನಲ್ ಸಪ್ಲಿಮೆಂಟ್’ ವರ್ಣಿಸುತ್ತದೆ. ಆದರೆ ಈ ಕಾದಂಬರಿ ಇಷ್ಟು ಮಾತ್ರವಾಗಿ ಮುಗಿಯದೆ ಮಕ್ಕಳ ಮನಸ್ಸಿನಲ್ಲಿ ಭರವಸೆ ತುಂಬುವ ಯತ್ನ ಮಾಡುತ್ತದೆ. ಮಕ್ಕಳಲ್ಲಿ ಆಶಾವಾದ, ಮನುಷ್ಯರ ಸದ್ಗುಣಗಳಲ್ಲಿ ನಂಬುಗೆ, ಮತ್ತು ಹೋರಾಟದ ಬದುಕನ್ನು ಪ್ರೋತ್ಸಾಹಿಸುವ ಅಸದೃಶವಾದ ಕೃತಿ ಇದು. ಓರ್ವ ಸಾಮಾನ್ಯ ಬರಹಗಾರನ ಕೈಯ್ಯಲ್ಲಿ ಈ ಕಥಾವಸ್ತು ಸಿಕ್ಕಿದ್ದರೆ, ಆತ ಕೃತಿಯೊಳಗೆ ವರ್ಗಸಂಘರ್ಷ, ಜಾತಿವ್ಯವಸ್ಥೆ, ಮಹಾನಗರದ ಅಮಾನುಷ ಕ್ರೌರ್ಯ, ಶೋಷಣೆ, ಎಲ್ಲವನ್ನೂ ತಂದು ಎಳೆಯರ ಮನಸ್ಸುಗಳಿಗೆ ಬೆಂಕಿ ಹಚ್ಚಿಬಿಡುತ್ತಿದ್ದ. ಕನ್ನಡದಲ್ಲಿ  ಇಂತಹ ಋಣಾತ್ಮಕ ಚಿಂತನೆಯ ಹಲವು ಕೃತಿಗಳಿವೆ. ದೀರ್ಘಕಾಲದಿಂದ ಭಾರತದ ಹೊರಗೆ ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯಲ್ಲಿ ತೊಡಗಿರುವ ಅನಿತಾ ದೇಸಾಯಿಯವರಿಗೆ ಈ ಕಥಾವಸ್ತ್ನು ಇಷ್ಟೊಂದು ಸೃಜನಶೀಲವಾಗಿ ದಕ್ಕಿದೆ ಎನ್ನುವುದೇ ಇಂದು ಸಂಭ್ರಮಿಸಬೇಕಾದ ವಿಷಯ.

Facebook ಕಾಮೆಂಟ್ಸ್

R D Hegade Aalmane: ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.
Related Post