X

ಆಪತ್ತಿಗಾದವನೇ ಸ್ನೇಹಿತ /ನೆಂಟ

ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ. ಬಂಧು-ಬಳಗ ದೂರದ ಮಾತಾಯಿತು. ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ. ಕೆಲಸ-ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ, ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು. ಭೂಮಿಯ ಬೆಲೆ ಬೆಂಗಳೂರಿನಲ್ಲಿ ಗಗನ ಮುಟ್ಟಿದ್ದೆ ತಡ ಸಂಬಂಧಗಳು ಪಾತಾಳಕ್ಕಿಳಿದಿವೆ. ಹೀಗಾಗಿ ಇಂದು ಸಮಾನಮನಸ್ಕರ ಜೊತೆ ಮಾತನಾಡಿದಷ್ಟು ವೇಳೆ ಒಡಹುಟ್ಟಿದವರ ಜೊತೆ ಅಥವಾ ಬಂಧುಗಳ ಜೊತೆ ಮಾತಾಡುವುದಿಲ್ಲ. ಇದು ಇವತ್ತಿನ ಮಾತಾಯಿತು. ಹಾಗಾದರೆ ಆಪತ್ತಿಗಾದವನೇ ನೆಂಟ ಅಂತಲೋ ಅಥವಾ ಸ್ನೇಹಿತ ಅಂತಲೋ ಗಾದೆ ಮಾತು ಏಕೆ ಹುಟ್ಟಿತು? ಅವತ್ತು ಕೂಡ ಸಂಬಂಧಗಳಲ್ಲಿ ಇಂದಿನಂತೆ ಬಿರುಕಿತ್ತೇ? ಎನ್ನುವ ಪ್ರಶ್ನೆ ಸಹಜವಾಗೇ ಉಧ್ಭವಾಗುತ್ತದೆ. ಗಮನಿಸಿ ಹಿಂದಿನ ದಿನಗಳಲ್ಲಿ ಇಂದಿನಂತೆ ವೇಗವಾಗಿ ಒಂದೂರಿನಿಂದ ಇನ್ನೊಂದೂರಿಗೆ ತಲುಪಲು ಸಾಧ್ಯವಿರಲಿಲ್ಲ. ಅಲ್ಲದೆ ನಮಗೆ ಹೀಗಾಗಿದೆ ಬಂದು ಸಹಾಯ ಮಾಡಿ ಎಂದು ಹೇಳಲು ಸಂವಹನ ಮಾಧ್ಯಮಗಳು ಕೂಡ ಈ ಮಟ್ಟದಲ್ಲಿ ಬೆಳದಿರಲಿಲ್ಲ. ಹೀಗಾಗಿ ಅಂದಿನ ಕಷ್ಟಕ್ಕೆ ಯಾರು ಸ್ಪಂದಿಸುತ್ತಿದ್ದರು ಅಂದರೆ ಹತ್ತಿರ ಇದ್ದ ಯಾರಾದರೂ ಸರಿಯೇ ಅವರೇ ನೆಂಟರು ಅಥವಾ ಸ್ನೇಹಿತರು ಎನ್ನುವ ಅರ್ಥದಲ್ಲಿ ಈ ಗಾದೆ ಮಾತು ಹುಟ್ಟಿರಬಹುದು.

ಇಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕು. ಸಮಯ ಯಾವುದೇ ಇರಲಿ ಅಂದೂ-ಇಂದೂ ಉತ್ತಮ ಸಂಬಂಧ ಹೊಂದಿದ ಜನರ ಸಂಖ್ಯೆ ಇದ್ದೆ ಇದೆ, ಹಾಗೆಯೇ ಸಂಬಂಧದಲ್ಲಿ ಅಂದಿನ ದಿನದಲ್ಲೂ ಬಿರುಕು ಇದ್ದವರೂ ಇದ್ದರು. ಗಾದೆ ಕೇವಲ ಸಂಬಂಧದ ಆಧಾರದಲ್ಲಿ ಹುಟ್ಟಿಲ್ಲ. ಎಲ್ಲವೂ ಸರಿಯಿದ್ದು ರಸ್ತೆ ಮಧ್ಯದಲ್ಲಿ ಏನಾದರೂ ತೊಂದರೆಯಾದರೆ ಆ ಗಳಿಗೆಯಲ್ಲಿ ಸಹಾಯಕ್ಕೆ ಬಂದವನನ್ನ ಸ್ನೇಹಿತ ಅನ್ನಲಾಗದೆ? ಇಲ್ಲಿ ಒಂದಲ್ಲ ಹಲವು ಆಯಾಮಗಳಿವೆ. ಅದೇನೇ ಇರಲಿ ಅದನ್ನೆಲ್ಲ ಮೀರಿದ ಒಂದು ಬಾಂಧವ್ಯ ಇಲ್ಲಿದೆ. ಜಾತಿ, ಧರ್ಮ, ಗೋತ್ರದ ಹಂಗಿಲ್ಲದೆ ನಮ್ಮ ಹಿಂದಿನವರು ನಮ್ಮ ಕಷ್ಟಕ್ಕೆ ಮರುಗಿದ ಅಥವಾ ಸಹಾಯ ಹಸ್ತ ಚಾಚಿದ ಜೀವ ನಮ್ಮ ನೆಂಟ ಅಥವಾ ಗೆಳೆಯ ಎನ್ನುವ ವಿಶಾಲ ಮನೋಭಾವವನ್ನ ಪ್ರದರ್ಶಿಸಿದ್ದಾರೆ.

ಇನ್ನು ನಮ್ಮ ಸ್ಪಾನಿಶರು ಇದನ್ನ ‘Amigo en la adversidad es un amigo de verdad’ (ಅಮಿಗೋ ಇನ್ ಲ ಆಡ್ವೇರ್ಸ್ಸಿದಾದ್ ಇಸ್ ಉನ್ ಅಮಿಗೋ ದೆ ವೇರ್ದಾದ್) ಎನ್ನುತ್ತಾರೆ. ಪ್ರತಿಕೂಲತೆಯಲ್ಲಿ ಜೊತೆಗಿದ್ದವನೆ ನಿಜವಾದ ಸ್ನೇಹಿತ ಎನ್ನುವುದು ಯಥಾವತ್ತು ಅನುವಾದ. ನಮ್ಮಲ್ಲಿ ಒಂದು ಮಕ್ಕಳ ಕಥೆಯಿದೆ. ಮೂವರು ಗೆಳೆಯರು ಒಮ್ಮೆ ಕಾಡಿನಲ್ಲಿ ನಡೆದು ಹೋಗುತ್ತಿದ್ದರಂತೆ; ಆಗ ಇದ್ದಕಿದ್ದ ಹಾಗೆ ಕರಡಿಯೊಂದು ಎದುರಾಯಿತಂತೆ. ಆಗ ಇಬ್ಬರು ಗೆಳೆಯರು ಓಡಿ ಮರ ಹತ್ತಿದರಂತೆ, ಮರ ಹತ್ತಲು ಬಾರದ ಗೆಳೆಯ ಅರೆಕ್ಷಣ ತಬ್ಬಿಬ್ಬಾದರು ಸಾವರಿಸಿಕೊಂಡು ಉಸಿರು ಬಿಗಿ ಹಿಡಿದು ಸತ್ತವನಂತೆ ನೆಲದ ಮೇಲೆ ಮಲಗಿದ, ಆತನ ಬಳಿ ಬಂದ ಕರಡಿ ಅವನನ್ನ ಮೂಸಿ ಹೊರತು ಹೋಯಿತಂತೆ. ನಂತರ ಮರದಿಂದ ಇಳಿದು ಬಂದ ಗೆಳೆಯರು ಕರಡಿ ನಿನ್ನ ಬಳಿ ಬಂದಿತ್ತು ಸಾಲದಕ್ಕೆ ನಿನ್ನ ಕಿವಿಯಲ್ಲಿ ಏನೋ ಹೇಳಿತು ಏನದು? ಎಂದರಂತೆ. ಬದುಕಿದೆಯಾ ಬಡಜೀವ ಎಂದು ಆಗಷ್ಟೇ ಕರಡಿಯಿಂದ ಬಚಾವಾಗಿದ್ದ ಮಿತ್ರ ‘ಕಷ್ಟದಲ್ಲಿ ಆದವನೇ ನಿಜವಾದ ಸ್ನೇಹಿತ’ ಎಂದು ಹೇಳಿತು ಎಂದನಂತೆ. ಇದೆ ಕಥೆ ಸ್ಪಾನಿಷ್ ಮಕ್ಕಳು ಓದುತ್ತಿವೆ. ನಿಜವಾದ ಸ್ನೇಹದ ಅನಾವರಣ ಸುಖದ ಸಮಯದಲ್ಲಿ ಆಗುವುದಕ್ಕಿಂತ ಕಷ್ಟದ ಸಮಯದಲ್ಲಿ ಆಗುತ್ತದೆ ಎನ್ನುವುದು ಹೂರಣ. ಸ್ಪ್ಯಾನಿಷ್ ಗಾದೆ ಮಾತಿನ ನಿಜವಾದ ಅರ್ಥವೂ ಇದೆ.

ಇಂಗ್ಲಿಷ್ ಭಾಷಿಕರು ಇದನ್ನೇ ‘A friend in need is a friend indeed’ ಎಂದರು. ಭಾವನೆ, ಅರ್ಥ ಮಾತ್ರ ಒಂದೇ. ಬದಲಾದದ್ದು ಕೇವಲ ಉಚ್ಚಾರಣೆ, ಭಾಷೆ.

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಇದು ಪಡೆದುಕೊಳ್ಳುತ್ತಿರುವ ಆಯಾಮ ಬೇರೆಯದೇ ತೆರನಾಗಿದೆ. ಅದೇನೇ ಇರಲಿ ನಮ್ಮ ಭಾವನೆ ಮಾತ್ರ ಒಂದೇ, ಸಮಯದ ಹೆಸರಲ್ಲಿ ಅದನ್ನ ತಿರುಚಿ ಬೇರೆಯದೇ ಅರ್ಥ ಕೊಡುತ್ತಿರುವರು ಮಾತ್ರ ನಾವೇ. ನಿಷ್ಕಲ್ಮಶ ಸ್ನೇಹ ಎಂತಹ ನೋವನ್ನು ಮರೆಸಬಲ್ಲದು, ಸೋಲಲ್ಲಿ ಪುಟಿದೇಳುವ ಶಕ್ತಿ ನೀಡುವುದು. ಅಂತಹ ಸ್ನೇಹ ಸಿಕ್ಕಲ್ಲಿ ಅದು ಎಲ್ಲಾ ಆಸ್ತಿಗಿಂತ ದೊಡ್ಡದು.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

Amigo: ಗೆಳೆಯ, ಸ್ನೇಹಿತ, ಫ್ರೆಂಡ್ ಎನ್ನುವ ಅರ್ಥ ಅಮಿಗೋ ಎನ್ನುವುದು ಉಚ್ಚಾರಣೆ.

en la adversidad: ಪ್ರತಿಕೂಲ ಸ್ಥಿತಿಯಲ್ಲಿ, ಕೆಟ್ಟ ಕಾಲದಲ್ಲಿ ಅಥವಾ ಆಡ್ವೇರ್ಸಿಟಿ ಎನ್ನುವ ಅರ್ಥ. ಇನ್ ಲ ಆಡ್ವೇರ್ಸ್ಸಿದಾದ್ ಎನ್ನುವುದು ಉಚ್ಚಾರಣೆ.

es un amigo: ಅವನು ಒಬ್ಬ ಮಿತ್ರ, ಸ್ನೇಹಿತ ಎನ್ನುವ ಅರ್ಥ. ಇಸ್ ಉನ್ ಅಮಿಗೋ ಎನ್ನುವುದು ಉಚ್ಚಾರಣೆ.

de verdad: ನಿಜವಾದ, ಉತ್ತಮವಾದ, ಒಳ್ಳೆಯ ಎನ್ನುವ ಅರ್ಥ. ದೆ ವೇರ್ದಾದ್ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post