ಕೃಷಿ ಮತ್ತು ಗೋಸಾಕಾಣಿಕೆಗೆ ಅವಿನಾಭಾವ ಸಂಬಂಧ. ಸಾಂಪ್ರದಾಯಿಕ ಕೃಷಿವಿಧಾನಗಳತ್ತ ಒಮ್ಮೆ ಹೊರಳಿ ನೋಡಿ. ನಮ್ಮ ಹಿರಿಯರು ಅದೆಷ್ಟು ಬೇಸಾಯವನ್ನು ಗೋಸಂಪತ್ತಿನ ಸಹಾಯದಿಂದ ಪೂರೈಸುತ್ತಿದ್ದರೆಂಬ ಅರಿವು ನಿಮಗಾದೀತು. ಇಂದು ಹಳ್ಳಿಯಲ್ಲಿ ವಾಸವಾಗಿರುವ ಅರುವತ್ತು ದಾಟಿದ ಹಿರಿಯ ನಾಗರಿಕರ ಅನುಭವವನ್ನು ಕೇಳಿನೋಡಿ. ಒಂದೊಂದು ಮನೆಯಲ್ಲೂ ಹತ್ತಾರು ಜಾನುವಾರುಗಳು. ಬೇಸಾಯವೆ ಎತ್ತು, ಕೋಣಗಳ ಉಳುಮೆ ಸಹಾಯದಿಂದ ಸಾಗುತ್ತಿತ್ತು. ಅವುಗಳ ಸಾಕಾಣಿಕೆಗಾಗಿಯೆ ಒಂದೊ ಎರಡೊ ಆಳುಗಳು ಖಾಯಂ ನಿಯೋಜನೆಗೊಳ್ಳುತ್ತಿದ್ದರು. ಗದ್ದೆಯಿಂದ ಬರುವ ಬೈಹುಲ್ಲು, ಗದ್ದೆ ತೋಟಗಳಲ್ಲಿ ಸಿಗುವ ಹಸಿಹುಲ್ಲು, ಗುಡ್ಡಗಳಲ್ಲಿ ಸಿಗುವ ಕೆಲವೊಂದು ವಿಶಿಷ್ಟ ಬಗೆಯ ಸೊಪ್ಪುಗಳು ಆಹಾರವಾಗಿಬಿಡುತ್ತಿತ್ತು. ಅಂದು ಸಂಪತ್ತನ್ನು ಅಳತೆ ಮಾಡುವುದು ಎಷ್ಟು ಗೋವುಗಳನ್ನು ಮನೆಯಾತ ಸಾಕುತ್ತಾನೆಂಬುದರ ಮೂಲಕ. ಗೋಸಾಕಾಣಿಕೆಯಿರುವ ಮನೆಗೆ ವಿಶೇಷ ಮರ್ಯಾದೆ. ಒಬ್ಬ ಹುಡುಗನಿಗೆ ಹೆಣ್ಣುಕೊಡುವಾಗಲೂ ಅಳತೆಯ ಮಾನದಂಡ ಗೋಸಾಕಾಣಿಕೆಯೇ ಆಗಿರುತ್ತಿತ್ತು. ಆಗೇನೂ ಈಗಿನ ಆಧುನಿಕ ತಳಿಗಳಿರಲಿಲ್ಲ. ಎಲ್ಲ ಊರಿನ ಗೋಕುಟುಂಬ. ಒಂದೊಂದಕ್ಕೂ ದೇವದೇವಿಯರ, ನದಿಗಳ ಹೆಸರುಗಳು. ಗುಡ್ಡಬೆಟ್ಟಗಳಿಗೆ ಮೇಯಲು ಬಿಟ್ಟು ಸಂಜೆ ಕರೆದಾಗ ಅಂಬಾ ಎಂದು ಹಟ್ಟಿಗೆ ಬರುವ ವಿನಯತೆ, ವಿನಮ್ರತೆ ಮತ್ತು ಶಿಸ್ತು. ದನಗಳು ಹಾಲು ಕುಡಿದು ದೊಡ್ಡಗಾದ ತಮ್ಮ ಮಕ್ಕಳನ್ನು ಗುಡ್ಡಕ್ಕೆ ಮೇಯಲು ಕರೆದುಕೊಂಡುಹೋಗುವ ಕ್ರಮ. ಅವಕ್ಕೆ ಕಲಿಸಿಕೊಡುವ ಜೀವನಪಾಠಗಳಿಗೆ ನಾವೆಲ್ಲ ಕುಬ್ಜರಾಗಿಬಿಡಬೇಕು. ಅಂದಿನವರಿಗೆ ಕುಟುಂಬ ಜೀವನ ಪರಿಪೂರ್ಣವಾಗಬೇಕಾದರೆ ಹಟ್ಟಿತುಂಬ ಜಾನುವಾರುಗಳು ಬೇಕು. ಮನೆ ಮಕ್ಕಳ ಲಾಲನೆ ಪೋಷಣೆಗೆ ಕಡಿಮೆಯಿಲ್ಲದ ಪೋಷಣೆ ಹಟ್ಟಿಯವಕ್ಕೂ ಸಿಗುತ್ತಿತ್ತು. ಆ ನೆನಪು ಗೋಕುಟುಂಬಕ್ಕೂ ಇರುತ್ತಿತ್ತು. ಇದೆಲ್ಲ ಇಂದು ಹಿರಿಯರ ಬಾಯಿಂದ ಕೇಳಿ ತಿಳಿಯಬಹುದಾದ ರಸಗವಳಗಳು. ಹಳ್ಳಿಯೊಳಗೆ ಅಲ್ಲಿ ಇಲ್ಲಿ ಇಂಥಹ ಗೋಸಾಕಾಣಿಕೆ ಮಾಡುವ ಕುಟುಂಬಗಳು ಇಂದೂ ಇವೆ. ಅವರು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಂಡದ್ದು, ಪ್ರಶಸ್ತಿ ಬಾಚಿಕೊಂಡದ್ದು ಕಡಿಮೆಯಾಗಿರಬಹುದು. ಆದರೆ ಅವರು ಗೋಕುಟುಂಬದ ಸದಸ್ಯರಾಗಿ ಅವುಗಳೊಳಗೆ ತಾವು ಪಶುಗಳಾಗಿ ಕೃಷಿಯನ್ನು ಖುಷಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ದೇಸಿ ದನಗಳ ಹಾಲು ಮಜ್ಜಿಗೆ ಬೆಣ್ಣೆ ತುಪ್ಪ ಸವಿಯುತ್ತಿದ್ದಾರೆ. ದುರಂತವೆಂದರೆ ಈ ಆಧುನಿಕ ಯುಗದ ಬಿರುಗಾಳಿಯಲ್ಲಿ ಅವರ ಗೋಸಾಕಾಣ ಕೆಯ ಅನುಭವವನ್ನು ಗಮನಿಸುವ ತಾಳ್ಮೆ ನಮಗೆ ಇಲ್ಲವೇ ಇಲ್ಲ.
ಇಂದು
ಇಂದು ಪರಿಸ್ಥಿತಿ ತೀರಾ ಭಿನ್ನ. ಇಂದು ಗೋಸಾಕಾಣಿಕೆ ಮಾಡುವವರಿಗೆ ಬೆಲೆಯಿಲ್ಲ. ಮಾಡುತ್ತಿದ್ದರೂ ಆತ ದೊಡ್ಡ ಮಟ್ಟಿಗೆ ಹೈನುಗಾರಿಕೆ ಮಾಡಿದರೆ ಮಾತ್ರ ಬೆಲೆ. ದೇಸೀ ತಳಿಯ ದನಗಳ ಹಾಲು ಕಣ್ಣಿಗೆ ಕಾಣದ ಸ್ಥಿತಿ. ಮನೆಯಲ್ಲಿ ಜಾನುವಾರು ಸಾಕಾಣಿಕೆಯಿದೆಯೆಂದಾದರೆ ಮನೆಯ ಹುಡುಗನಿಗೆ ಹುಡುಗಿ ಒಲಿಯುವುದು ಕಷ್ಟ. ಯಾಕೆಂದರೆ ಈಗಿನ ಶೇಕಡಾ ತೊಂಭತ್ತು ಯುವಜನಾಂಗಕ್ಕೆ ಹಾಲು ಕುಡಿದುಗೊತ್ತು ಹೊರತು, ಹಾಲು ಹಿಂಡಿ ಗೊತ್ತಿಲ್ಲ. ಅವುಗಳ ಮೂತ್ರ, ಸೆಗಣಿ ಮುಟ್ಟಲು ಹೇಸಿಗೆ. ಪೇಟೆಯಲ್ಲಿ ಯಥೇಚ್ಛ ಹಾಲು ಸಿಗುತ್ತದಲ್ಲ. ನಾವು ದನ ಸಾಕಿ ಕಷ್ಟಪಡುವ ಅಗತ್ಯವೇನಿದೆ ಎಂಬ ಪ್ರಶ್ನೆಗಳು ಪುಂಖಾನುಪುಂಖವಾಗಿ ಬಂದೇ ಬಿಡುತ್ತದೆ. ಒಂದು ಮನೆಯೊಳಗೆ ನಾಲ್ಕು ಮಂದಿಯಿದ್ದರೆ ಪರಸ್ಪರ ಸಹಕಾರದ ಜೀವನ ಇಲ್ಲ. ಹಳ್ಳಿಯಲ್ಲಿ ಜೀವನ ಮತ್ತು ಕೃಷಿ ಜೊತೆಜೊತೆಯಾಗಿ ಸಾಗಬೇಕಾಗಿರುವುದರಿಂದ ಇಲ್ಲಿ ಸಹಕಾರವಿಲ್ಲದೆ ಒಬ್ಬೊಬ್ಬ ಏನೂ ಮಾಡಲಾಗುವುದಿಲ್ಲ. ಅಂತಹ ಸಹಕಾರ ಬಹುತೇಕ ಕಡೆ ಸತ್ತುಹೋಗಿದೆ. ಪ್ರತಿಯೊಬ್ಬ ಕೃಷಿಕ ಕುಟುಂಬ ಸದಸ್ಯ ಸ್ವಂತದ್ದನ್ನೆ ಯೋಚಿಸುತ್ತನೆಯೇ ಹೊರತು ಸಮಷ್ಠಿಯನ್ನಲ್ಲ.
ಹಟ್ಟಿಗಳು ಖಾಲಿ
ದೊಡ್ಡ ದೊಡ್ಡ ಹಟ್ಟಿಗಳು ಹಳ್ಳಿಗಳಲ್ಲಿ ಖಾಲಿ ಉಳಿದಿವೆ. ಇವು ಅಂತಿಂಥ ಹಟ್ಟಿಗಳಲ್ಲ. ಸರ್ವ ಸನ್ನದ್ಧ ಸ್ಥಿತಿಯಲ್ಲಿರುವ ಹಟ್ಟಿಗಳು. ಇಗ ಅವುಗಳೊಳಗೆ ಗುಜುರಿ ತುಂಬಿದ್ದಾರೆ ಇಲ್ಲವೆ ಸೌದೆ ಪೇರಿಸಿಟ್ಟಿದ್ದಾರೆ. ಕೆಲವಂತು ಖಾಲಿ ಬಿದ್ದಿದ್ದು ಗೆದ್ದಲು ಹರಡುತ್ತಿದೆ. ಅಂಬಾ ಕರೆ ಕೇಳಬೇಕಾದ ಹಟ್ಟಿಗಳೀಗ ಬಿಕೋ ಅನ್ನುತ್ತಿವೆ. ಅರುವತ್ತು ಎಪ್ಪತ್ತು ಹರೆಯದ ಹಿರಿಯರಿಂದ ಗೋಸಾಕಾಣ ಕೆಯಂತು ಸಾಧ್ಯವಾಗದು. ಕಾರ್ಮಿಕರ ಬಲವಂತು ಇಲ್ಲ ಅನ್ನುವಷ್ಟು ಕೃಷಿ ಕ್ಷೇತ್ರ ಕಂಗಾಲಾಗಿಬಿಟ್ಟಿದೆ. ಆದರೆ ಸಾಧ್ಯವಿದ್ದವರು, ಶಕ್ತಿ ಸಾಮರ್ಥ್ಯ ಇದ್ದವರು ಇನ್ನೂ ಹಳ್ಳಿಯೊಳಗೆ ಇದ್ದಾರಲ್ಲ. ಅವರಿಗೆ ಗೋಸಾಕಾಣಿಕೆ ಮಾಡಬಹುದಲ್ಲ? ಎಂಬ ಪ್ರಶ್ನೆ ಸಹಜವಾಗಿ ಮೂಡಿಬರುತ್ತಿದೆ. ಹಳ್ಳಿಯೊಳಗೆ ಒಂದೆರಡು ದೇಸಿ ದನಗಳನ್ನು ಮತ್ತು ಒಂದು ಹೋರಿಯನ್ನು ಸಾಕುವುದು ಖಂಡಿತ ಕಷ್ಟವಲ್ಲ. ಗೋವನ್ನು ರಾಷ್ಟ್ರೀಯ ಪ್ರಾಣ ಯೆಂದು ಘೋಷಿಸಬೇಕು, ಅವಳನ್ನು ಮತ್ತೆ ಕೃಷಿ ಕ್ಷೇತ್ರದಲ್ಲಿ ಸರ್ವಶಕ್ತೆಯನ್ನಾಗಿ ಮಾಡಬೇಕು, ಪ್ರತಿ ಮನೆಯಲ್ಲಿ ಗೋಉತ್ಪನ್ನಗಳ ಬಳಕೆ ಆಗಬೇಕು ಮುಂತಾದ ಯೋಜನೆ ಯೋಚನೆ ಮುಂದಿಟ್ಟು ಈಗಾಗಲೆ ಬಹಳ ದೊಡ್ಡ ಚಳುವಳಿ ಆರಂಭವಾಗಿದೆ. ಗೋವನ್ನು ರಾಷ್ಟ್ರದ ಪರಮವೈಭವದಲ್ಲಿ ಪ್ರಮುಖ ಸೂತ್ರಧಾರಿಣಿಯನ್ನಾಗಿ ಮಾಡಲು ಹಲವು ಜನರು ಮತ್ತು ಸಂತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಚಳುವಳಿಯನ್ನು ಬೆಂಬಲಿಸುವಾಗ ನಮ್ಮ ಹಟ್ಟಿ ಖಾಲಿಯಿರುವುದು ನಮಗೆ ಶೋಭೆ ತರುವ ಸಂಗತಿಯಲ್ಲ.
ಮನೆಗೆ ಪೇಟೆ ಹಾಲು
ನಮ್ಮ ಹಳ್ಳಿಯ ಬದುಕಿಗೆ ಕಪ್ಪುಚುಕ್ಕೆ ಬರಲು ಆರಂಭವಾದದ್ದೆ ಪೇಟೆಯ ಹಾಲಲ್ಲಿ ಮುಳುಗೇಳಲು ಶುರುಮಾಡಿದಾಗ. ನಿಜವಾಗಿ ಕೃಷಿಕ ತಾನು ಒಂದು ನಿಮಿಷ ಹಾಳುಮಾಡುವ ಜಾಯಮಾನದವನಲ್ಲ. ಆದರೆ ಗೋಸಾಕಾಣಿಕೆಗೆ ತಿಲಾಂಜಲಿ ಕೊಟ್ಟ ನಂತರ ಹಾಲು ಬೇಕಲ್ಲ. ಪೇಟೆಗೆ ಸವಾರಿ ಹೊಡೆದರೆ ಅಲ್ಲಿ ಸಿಗುತ್ತದಲ್ಲ. ಬಿಸಿ ಬಿಸಿ ಕೆನೆಹಾಲು ಮನೆಯೊಳಗೆ ಉಕ್ಕಿಸುತ್ತಿದ್ದ ಮನೆಗಳಲ್ಲಿ ಸತ್ವ ತೆಗೆದ ಎಂದೊ ಹಿಂಡಿ ತಂದ ಹಾಲು ಹೆಸರಿನ ಬಿಳಿಯ ಬಣ್ಣದ್ದನ್ನು ಉಪಯೋಗಿಸಬೇಕಾದ ಪ್ರಾರಬ್ಧ. ಹಾಲು ಕರೆದು ಹತ್ತಿರದ ನೆಂಟರ ಮನೆಯ ಕಾರ್ಯಕ್ರಮಗಳಿಗೆ ಮಜ್ಜಿಗೆ ತುಪ್ಪ ಕೊಂಡುಹೋಗುತ್ತಿದ್ದ ಮನೆಯವರಿಂದು ತಮ್ಮ ಮನೆಯ ಕಾರ್ಯಕ್ರಮಕ್ಕೆ ಪೇಟೆಯಿಂದ ಹಾಲು ತುಪ್ಪ ತರುವ ಅವಸ್ಥೆ ಬಂದಿದೆ.
ಕೃಷಿಗೂ ಕಷ್ಟ
ಮನೆಯೊಳಗೆ ಮನೆ ಗೋವುಗಳ ಉತ್ಪನ್ನಗಳಿಲ್ಲ. ತೋಟಕ್ಕೆ ಗೊಬ್ಬರವಿಲ್ಲ. ಯಾವುದೋ ಊರಿನ ಮಣ್ಣು ಕೆಸರಿನಲ್ಲಿ ಅದ್ದಿದ ಜೈವಿಕ ಗೊಬ್ಬರ, ಪ್ಲಾಸ್ಟಿಕ್ ತುಂಬಿದ ಇನ್ನು ಹಲವು ಸಾವಯವ, ಭಾರಿ ಫಸಲಿಗಾಗಿ ರಾಸಾಯನಿಕ ಗೊಬ್ಬರಗಳು ನಮ್ಮ ತೋಟದೊಳಗೆ ತುಂಬುತ್ತಿವೆ. ಗೋಆಧಾರಿತ ಕೃಷಿಯನ್ನು ಮರೆತ ಫಲವಾಗಿ ಬರುವ ಸಂಕಷ್ಟಗಳೆಲ್ಲ ಒಂದೊಂದಾಗಿ ಬರುತ್ತಲಿವೆ. ಫಸಲಿನ ಕೊರತೆ, ಗುಣಮಟ್ಟದ ಕೊರತೆ, ಹತ್ತಾರು ರೋಗಗಳು, ಸಮಸ್ಯೆಗಳು ಕೃಷಿಕರ ಬೆನ್ನು ಹತ್ತುತ್ತಿವೆ. ನಾವು ಸರಿಯಾದ ಕೃಷಿಕರಾದರೆ ನಮಗೆ ಗೋಸಾಕಾಣ ಕೆ ಅನಿವಾರ್ಯ. ಅದನ್ನು ನಮ್ಮ ಹಿರಿಯರು ಹಿಂದೆಯೆ ಸಾಬೀತು ಮಾಡಿದ್ದರೆ. ಗೋಸಾಕಾಣಿಕೆ ಹೊರತು ಕೃಷಿ ಇಲ್ಲವೆ ಎನ್ನುವ ಪ್ರಶ್ನೆಗಳು ಬರುತ್ತವೆ ಎಂಬುದು ಗೊತ್ತು. ಮನಸ್ಸಿಲ್ಲದ ಮನಸ್ಸುಗಳಲ್ಲಿ ಇಂತಹ ಪ್ರಶ್ನೆಗಳು ಮೊದಲು ಏಳುತ್ತವೆ. ವಿಚಿತ್ರವೆಂದರೆ ಮೆಲ್ಲ ಮೆಲ್ಲಗೆ ಕೆಲವರಿಗೆ ಸತ್ಯದ ಅರಿವು ಆಗುತ್ತಿದೆ. ಸತ್ಯವನ್ನು ಕೆಲವು ಕಡೆ ಕೊರೆದು ಕೊರೆದು ತುಂಬಿದಾಗ ಒಂದಷ್ಟು ಜನರ ಮನಸ್ಸಿನಲ್ಲಿ ಗೋಸಾಕಾಣಿಕೆ ಅನಿವಾರ್ಯ ಅನಿಸಲು ಆರಂಭವಾಗಿದೆ. ಇದು ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯ ಲಕ್ಷಣ. ಯಾರಿಗೂ ಅರಿವಿಗೆ ಬಾರದಂತೆ ಕೆಲವರು ಗೋಸಾಕಾಣಿಕೆ ಬಿಟ್ಟುಬಿಟ್ಟವರು ಮತ್ತೆ ಅದನ್ನು ಆರಂಭಿಸಿ ತಮ್ಮ ಕೃಷಿಯನ್ನು ಬಂಗಾರಮಯವಾಗಿಸುತ್ತಿರುವುದು ಕೂಡ ಸುಳ್ಳಲ್ಲ.
Facebook ಕಾಮೆಂಟ್ಸ್