ನಮ್ಮ ದೇಶ, ಭವ್ಯ ಭಾರತ ಒಂದು ಮಹಾನ್ ರಾಷ್ತ್ರ ಎಂಬುದರಲ್ಲಿ ಸಂಶಯವಿಲ್ಲ ಬಿಡಿ. ವಿವಿಧತೆಯಲ್ಲಿ ಏಕತೆ ಎಂದೆಲ್ಲಾ ಕೊಚ್ಚಿಕೊಳ್ಳುವ ನಾವು ಅಸಲಿಯಾಗಿ ಇರುವ ವಿಷಯವನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ಅರಿತಂತಿಲ್ಲ. ಧರ್ಮ, ಜಾತಿ, ಭಾಷೆ, ಆಚರಣೆಗಳ ವಿಚಾರದಲ್ಲಿ, ಲೋಕದಲ್ಲೆಲ್ಲೂ ಕಾಣದ ವೈವಿಧ್ಯತೆ ನಮ್ಮಲ್ಲಿದೆ. ಬಹುಶಃ, ಇದೇ ಕಾರಣದಿಂದ ನಾವು ಇನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಲ್ಲ. ಯಾಕೆ ಎಂದು ವಿವರಿಸುತ್ತೇನೆ. ಒಂದು ಗುಂಪಿಗೆ, ಪಂಗಡಕ್ಕೆ ಹಿತವಾದದ್ದು ಮತ್ತೊಂದು ಗುಂಪಿಗೆ ಸರಿಯೆನಿಸದು. ಇದು ಮನು ಕುಲದಲ್ಲಿ ಸರ್ವೇ ಸಾಮಾನ್ಯ ಹೌದು, ಆದರೆ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಇದನ್ನು ಪರಿಹರಿಸುವುದು ಕಷ್ಟ. ನಮ್ಮಲ್ಲಿ ಹೆಚ್ಚಿನ ವಿಚಾರಗಳು ಜಾತಿಯ ಮೇಲೆ ಅವಲಂಬಿಸಿದೆ.
ಅಂದಿನ ಕಾಲದಲ್ಲಿ ಮೇಲ್ಜಾತಿ, ಕೀಳು ಜಾತಿ ಎಂಬ ಹಾಳು ಪದ್ದತಿಯಿತ್ತು. ಅದರ ನಿರ್ಮೂಲನೆಗೆ ಹಲವಾರು ಕ್ರಾಂತಿಕಾರಿ ನಡೆಗಳನ್ನು ಕಂಡುಕೊಂಡ ಮಹಾನ್ ವ್ಯಕ್ತಿಗಳ ಬಗ್ಗೆಯೂ ನಾವು ತಿಳಿದಿದ್ದೇವೆ. ಅದರ ನಂತರದಲ್ಲಿ, ಅದನ್ನು ಕಾನೂನಾತ್ಮಕವಾಗಿ ಪಾಲಿಸಲು ಅಂಬೇಡ್ಕರ್ ಅವರು ಉದಿಸಿ ಬಂದರು. ಅಂದಿನ ಪರಿಸ್ಥಿಯಲ್ಲಿ ಅದರ ಅಗತ್ಯ ಇತ್ತು ಮತ್ತು ಉದ್ದೇಶ ಸರಿಯಿತ್ತು. ಆದರೆ ಇಂದು ಅದು ಎಲ್ಲಿಯವರೆಗೆ ಬಂದು ನಿಂತಿದೆ ನೋಡಿ. ಜಾತಿ ಆಧಾರಿತ ಶಿಕ್ಷಣ, ಜಾತಿ ಆಧಾರಿತ ಉದ್ಯೋಗ, ಜಾತಿ ಆಧಾರಿತ ರಾಜಕಾರಣ ಹೀಗೆ ಪ್ರತಿಯೊಂದಕ್ಕೂ ಜಾತಿ ಮಿಶ್ರಣಗೊಂಡು, ಕಲುಷಿತಗೊಂಡಿದೆ. ಇಂದಿನ ದಿನಗಳಲ್ಲಿ ಜಾತಿ ಹೆಸರಲ್ಲಿ ಯಾರನ್ನು ಕೀಳು ಎಂದು ನೋಡುವ ಅಥವಾ ಕೆಟ್ಟದಾಗಿ ನಡೆದುಕೊಳ್ಳುವ ವಿಚಾರ ಕಂಡುಬರುತ್ತಿಲ್ಲ. ಸಂಪೂರ್ಣವಾಗಿ ತೊಲಗಿದೆ ಎಂದು ಹೇಳಲು ಅಸಾಧ್ಯವಾದರೂ, ಬಹುಪಾಲು ಅಂತಹ ಪಿಡುಗು ದೂರವಾಗಿದೆ ಎನ್ನಬಹುದು. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪಂಗಡ ಹೀಗೆ ಹಲವು ವಿಧಗಳಲ್ಲಿ ನೇಮಿಸಿ ಅವರನ್ನು ಸಮಾಜದಲ್ಲಿ ಮೇಲೆತ್ತಲು ಮೀಸಲಾತಿಗಳನ್ನು ತಂದರು. ಅದೀಗ ಯಾವ ಸ್ವರೂಪ ಪಡೆದುಕೊಂಡಿದೆ ಎಂದು ಅರಿಯಬೇಕಾಗಿದೆ. ಉದಾಹರಣೆಗೆ, ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ಹುಡುಗ ಶಾಲೆಗೆ ಸೇರಿ, ವಿದ್ಯಾಭ್ಯಾಸವನ್ನು ಮುಗಿಸಿದ ಎಂದುಕೊಳ್ಳೋಣ. ಮೀಸಲಾತಿಯ ಸಹಾಯದಿಂದ ಆತನಿಗೆ ಒಳ್ಳೆಯ ವಿದ್ಯೆಯೂ, ಮುಂದೆ ಒಂದು ಸರಕಾರಿ ಕೆಲಸವೂ ದೊರೆಯಿತು ಎಂದುಕೊಳ್ಳೋಣ. ಹೀಗೆ ಸಾಗುತ್ತ, ಮುಂದೆ ಅವನು ಮದುವೆಯಾಗಿ, ಮಕ್ಕಳಾಗಿ ಸುಖ ಸಂಸಾರಸ್ಥನಾಗುತ್ತನೆ. ಇವನ ಕೆಲಸದಲ್ಲಿ ಮುಂಬಡ್ತಿಯನ್ನು ಪಡೆಯುತ್ತಾನೆ. ಈಗ ಇವನ ಜಾತಿ ಕೆಳ ವರ್ಗಕ್ಕೆ ಸೇರಿದ್ದು ಎಂದು ಪರಿಗಣಿಸಿದರೂ, ಆರ್ಥಿಕವಾಗಿ ಮುಂದೆ ಬರಲಿಲ್ಲವೆ? ಸರಕಾರಿ ಸಂಬಳ, ಮುಂಬಡ್ತಿ, ಮುಂದೆ ಮಸಾಶನ ಹೀಗೆ ಎಲ್ಲಾ ಸೌಲಭ್ಯಗಳನ್ನು ಪಡೆದ ಈತ ಇವನ ಸಂಸಾರಕ್ಕೆ ಆಧಾರವಗಲಿಲ್ಲವೆ? ಇಷ್ಟಾದ ಮೇಲೂ ಇವನ ಮಕ್ಕಳಿಗೂ ಮೀಸಲಾತಿಯ ಮೇರೆಗೆ ಕಾಲೇಜುಗಳಲ್ಲಿ ಸೀಟು, ರಿಯಾಯಿತಿ ದರಗಳು, ಉದ್ಯೋಗದ ಅಗತ್ಯವಿದೆಯೆ? ಮೀಸಲಾತಿಯ ಉದ್ದೇಶ ಏನಿತ್ತು ಮತ್ತು ಏನು ಆಗುತ್ತಿದೆ ಎಂಬುದನ್ನು ನಾವು ಅವಲೋಕಿಸಬೇಕು. ಯಾವ ದರ್ಜೆಯ ಕೆಲಸ, ಸಂಬಳ ಇತ್ಯಾದಿಗಳ ಹೆಸರಲ್ಲಿ ವಾದ ಮಾಡಬಹುದು ಆದರೆ ಮೀಸಲಾತಿಯ ಫಲವನ್ನು ಪಡೆದು ಅದನ್ನು ಮತ್ತೆ ಮತ್ತೆ, ಮಕ್ಕಳು, ಮೊಮ್ಮಕ್ಕಳು ಹೀಗೆ ಎಲ್ಲರಿಗೂ ನೀಡುವ ಅಗತ್ಯವಿದೆಯೆ? ಅಂದರೆ ಜಾತಿಯಲ್ಲಿ ಸೋ ಕಾಲ್ಡ್ ಮೇಲ್ಜಾತಿ ಎನಿಸಿಕೊಂಡರು, ಆರ್ಥಿಕವಾಗಿ ಹಿಂದುಳಿದವರಿಲ್ಲವೆ? ಯಾವುದೇ ರೀತಿಯ ಮೀಸಲಾತಿ ಇಲ್ಲದೆ ಕಷ್ಟಪಟ್ಟು ಜೀವಿಸುವವರು ನಮ್ಮಲ್ಲೆ ಎಷ್ಟೋ ಜನರಿಲ್ಲವೆ? ಇದನ್ನು ಯೋಚಿಸಿದರೆ ಜಾತಿ ಆಧಾರಿತ ಮೀಸಲಾತಿ ಎಷ್ಟು ಅಪ್ರಸ್ತುತ ಅಲ್ಲವೆ? ಇದು ಜಾತಿ ಆಧಾರಿತ ಮೀಸಲಾತಿಯ ವಿಷಾದಕರ ಸಂಗತಿ.
ಶಿಕ್ಷಣದ ವಿಚಾರಕ್ಕೆ ಬರೋಣ. ಒಬ್ಬ ವಿದ್ಯಾರ್ಥಿ ಪಿ.ಯು.ಸಿ ವಿದ್ಯಾಭ್ಯಾಸವನ್ನು ಮುಗಿಸಿ ಪದವಿ ಶಿಕ್ಷಣಕ್ಕೆ ಕಾಲಿಡಬೇಕಾದರೆ ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕು. ಪ್ರವೇಶ ಪರೀಕ್ಷೆಯ ಅರ್ಜಿ ಶುಲ್ಕದಲ್ಲೂ ಜಾತಿ ಆಧಾರಿತ ಶುಲ್ಕ! ಇನ್ನು ಪರೀಕ್ಷೆಯ ನಂತರ, ಪಾಸ್ ಆಗಲು ಸಾಮಾನ್ಯವರೆಗೆ ವಿದ್ಯಾರ್ಥಿಗೆ 50% ಮಾರ್ಕ್, ಪರಿಶಿಷ್ಟ ಜಾತಿ/ಪಂಗಡವಾದರೆ 40% ಸಾಕು. ಈ ಪದ್ದತಿ ಹೆಚ್ಚಿನ ಪ್ರವೇಶ ಪರೀಕ್ಷೆಗಳಲ್ಲಿ ಇದೆ. ಸಾಮಾನ್ಯ ವರ್ಗದಲ್ಲಿ ಹಣದ ತೊಂದರೆ ಇರುವ ವಿಧ್ಯಾರ್ಥಿಗಳ ಪರಿಸ್ಥಿತಿ ಏನು ? ಇನ್ನು ಅಂಕಗಳ ವಿಚಾರಕ್ಕೆ ಬರುವುದಾದರೆ, ಅದೇಕೆ ಅಂತಹ ರಿಯಾಯಿತಿ? ಹೋಗಲಿ, ಪದವಿ ಪೂರ್ವ ಶಿಕ್ಷಣದಲ್ಲಿ ಓದಿದ ಶಾಲೆಯೋ, ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಗೆ ಬೇಕಾದ ಮಟ್ಟಿನ ಶಿಕ್ಷಣದ ಕೊರತೆಯಿತ್ತು ಎಂದೇನದರು ಅಂದುಕೊಳ್ಳೋಣ. ಒಬ್ಬ ವಿದ್ಯಾರ್ಥಿ ಪದವಿಯನ್ನು ಪಡೆದ ಮೇಲೆ, ಸಾಮಾನ್ಯ ವರ್ಗಕ್ಕೆ ಸೇರಿದವರಾದರೂ, ಹಿಂದುಳಿದ ಜಾತಿಯೋ, ಪರಿಶಿಷ್ಟ ಜಾತಿ/ಪಂಗಡದವರಾದರೋ, ಪದವಿ ಪಡೆದ ಮೇಲೆ ಎಲ್ಲರೂ ಪದವೀಧರರಲ್ಲವೇ? ಒಂದೇ ರೀತಿಯ ಶಿಕ್ಷಣ ಆ ಹಂತದಲ್ಲಿ ಸಿಕ್ಕಂತೆ ಆದಾ ಮೇಲೂ, ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಗಳಲ್ಲಿ ಮತ್ತೇಕೆ ಮೀಸಲಾತಿ? ಮತ್ತೆ ಪುನ: ಅಂಕಗಳಲ್ಲಿ ವ್ಯತ್ಯಾಸ? ಇದರ ಮರ್ಮವೇನು? ಬೌದ್ಧಿಕವಾಗಿ ಹಿಂದುಳಿದವರೆಂದು ಅರಿಯಬೇಕೇ? ಸರಕಾರಿ ಕಾಲೇಜುಗಳಲ್ಲಿ ಇನ್ನು ಹಲವು ವಿಚಾರಗಳಿವೆ. ಒಂದೊಂದಾಗಿ ಬೆಳಕಿಗೆ ತರುತ್ತೇನೆ. ಸರಕಾರಿ ಕಾಲೇಜಿನ ಗ್ರಂಥಾಲಯದಲ್ಲಿ, ಪುಸ್ತಕವೊಂದನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿ ಗರಿಷ್ಟ ಒಂದು ವಾರದ ವರೆಗೆ ಪಡೆದುಕೊಳ್ಳಬಹುದು. ನಂತರ ಹಿಂತಿರುಗಿಸಿ, ಮರು ಓದಿಗೆ ಪಡೆಯಬಹುದು. ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಯಾದರೆ ಪುಸ್ತಕವನ್ನು ಒಮ್ಮೆ ಪಡೆದರೆ ಗರಿಷ್ಟ ಒಂದು ತಿಂಗಳಿನವರೆಗೆ ಇಟ್ಟುಕೊಂಡು ಹಿಂದಿರುಗಿಸಬಹುದು. ಈ ಮಟ್ಟಿಗೆ ಮೀಸಲಾತಿ ಆಕ್ರಮಿಸಿಕೊಂಡಿದೆ! ಇನ್ನು ಸವಲತ್ತುಗಳು, ಸ್ಕಾಲರ್‍ಶಿಪ್‍ಗಳ ಕೊಡುಗೆಗಳೇ ಇದೆ. ಒಬ್ಬ ಬಡ ಕುಟುಂಬದ ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಗೆ ಮೇಲೆ ಹೇಳಿದ ಯಾವ ಮೀಸಲಾತಿಯಾಗಲಿ, ರಿಯಾಯಿತಿಯಾಗಲಿ ಇಲ್ಲ. ಆದರೆ ಆರ್ಥಿಕವಾಗಿ ಮುಂದಿದ್ದರೂ, ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಾದರೆ ಸಕಲ ಸವಲತ್ತುಗಳು, ರಿಯಾಯಿತಿಗಳು ಹಾಗು ಹಲವು ಭಾಗ್ಯಗಳಿವೆ. ಉದ್ಯೋಗದಲ್ಲೂ ಅಷ್ಟೆ, ಒಮ್ಮೆ ಕೆಲಸ ದೊರೆಯಲು ಜಾತಿ ಮೀಸಲಾತಿ, ಮತ್ತೆ ಮುಂಭಡ್ತಿಗೂ ಅದೇ ಅಸ್ತ್ರ. ಇಷ್ಟೆಲ್ಲಾ ಸವಲತ್ತುಗಳನ್ನು ಪಡೆದ ಕೆಲವರು ದೇಶದ ವಿರುದ್ದವೆ ತಿರುಗಿ ಬಿದ್ದು ಮಾಡುವ ಅವಾಂತರಗಳಾನ್ನು ಕಂಡಿದ್ದೇವೆ. ನೀವೆ ಯೋಚಿಸಿ, ಎಷ್ಟು ಜನ ಇದನ್ನು ದುರುಪಯೋಗಪಡಿಸುತ್ತಾರೆ ಎಂದು. ಹಿಂದುಳಿದ ವರ್ಗಕ್ಕೆ ಸೇರಿದವನು ಎಂದೆಲ್ಲಾ ಬೊಬ್ಬಿಡುವ ಹಲವರು ಜುಮ್ ಎಂದು ಬೆನ್ಜ್, ಪಾರ್ಚ್ಯೂನರ್ ಅಂತಹ ದೊಡ್ದ ಕಾರಿಗೆ ಹಿಂದುಳಿದವರ ಅಧ್ಯಕ್ಷ, ಸದಸ್ಯ ಎಂದು ಬೋರ್ಡ್ ಹಾಕಿ ಸುತ್ತಾಡವುದನ್ನು ಕಂಡಿಲ್ಲವೆ? ಇದು ಮೀಸಲಾತಿಯ ಅಸಲಿ ಮುಖ! ಎಲ್ಲದರಲ್ಲೂ ಇರುವ ಮೀಸಲಾತಿ, ದೇಶದ ಅತ್ಯುನ್ನುತ ಸೇವೆಯಾದ ಭಾರತೀಯ ಸೇನೆ, ನೌಕಾ ಪಡೆ ಅಥವಾ ವಾಯು ಪಡೆಯ ಹುದ್ದೆಗಳಿಗೆ ಇಲ್ಲ! ಆದರೂ ಹಿಂದುಳಿದ ವರ್ಗದವರ ಸೇವೆ ಕಮ್ಮಿಯೇನಿಲ್ಲ. ಇದರ ಹಿಂದಿನ ಲಾಜಿಕ್ ಏನು ? ಅದಕ್ಕೆ ಮಾನಸಿಕ ಮತ್ತು ದೈಹಿಕ ಸದೃಢತೆ. ಚತುರತೆ ಮಾನದಂಡವಾದರೆ, ಇತರೆ ಕ್ಷೇತ್ರಗಳಲ್ಲಿ ಅದರ ಅಗತ್ಯವಿಲ್ಲವೆ? ಕೇವಲ ಜಾತಿ ಆಧಾರದಲ್ಲಿ ಎಲ್ಲವೂ ಮುಗಿದುಹೋಗುತ್ತದೆ.
ಇದಕ್ಕೆ ಕೊನೆಯೇ ಇಲ್ಲವೆ? ಯಾಕೆ ಮೀಸಲಾತಿಯನ್ನು ಆರ್ಥಿಕ ಪರಿಸ್ಥಿಯ ಮೇಲೆ ನೀಡಬಾರದು? ಆರ್ಥಿಕ ಪರಿಸ್ಥಿತಿ ಮಾನದಂಡವಾದರೆ ಅದೆಷ್ಟು ಜನರಿಗೆ ಸಹಾಯವಾದೀತು. ಒಂದು ಕುಟುಂಬದ ಯಜಮಾನ ಯಾವ ಕೆಲಸದಲ್ಲಿದ್ದಾನೆ, ಅವನ/ಅವಳ ಸಂಬಳ ಎಷ್ಟು, ಎಷ್ಟರ ಮಟಿಗೆ ಖರ್ಚುಗಳನ್ನ ಬರಿಸಬಲ್ಲರು ಎಂದು ಅರಿಯುವುದರಿಂದ, ಅವರಿಗೆ ಮೀಸಲಾತಿಯ ಅಗತ್ಯವಿದೆಯೇ ಎಂದು ಪರಿಗಣಿಸಬಹುದಲ್ಲವೇ. ಇನ್ನು, ಒಂದು ಕುಟುಂಬದ ಆರ್ಥಿಕ ಪರಿಸ್ಥಿಯ ಮೇರೆಗೆ ಗರಿಷ್ಟ ಒಬ್ಬರೋ, ಇಬ್ಬರಿಗೆ ಮಾತ್ರ ಮೀಸಲಾತಿಯನ್ನು ನೀಡಿದಲ್ಲಿ, ಅದನ್ನು ಪಡೆದ ಅವರು ಕುಟುಂಬ ಇತರರನ್ನು ಮೇಲೆತ್ತಬಹುದಲ್ಲವೇ ? ಇರುವ ಎಲ್ಲಾ ಸೌಲಭ್ಯಗಳನ್ನು ಎಲ್ಲರಿಗೂ ನೀಡುವದರ ಬದಲು, ಮಾನವ ಸಂಪನ್ಮೂಲವನ್ನು ಬಲಪಡಿಸಿದರೆ ಇತರರು ಸ್ವಾವಲಂಬಿಯಾಗಬಹುದಲ್ಲವೆ? ‘ಇನ್‍ಕಮ್ ಬೇಸ್ಡ್ ರಿಸರ್ವೇಶನ್, ಪದ್ಧತಿಯನ್ನು ತಂದರೆ ಯಾವುದೇ ಜಾತಿಯಾಗಲಿ, ಆರ್ಥಿಕವಾಗಿ ತೊಂದರೆಯಿದ್ದರೆ ಮೀಸಲಾತಿ ನೀಡಿದರೆ ಅಂತಹವರಿಗೆ ಉಪಕಾರವಾಗಬಹುದು. ಇದನ್ನು ಸಾಕಾರಗೊಳಿಸಲು ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಬಿಟ್ಟರೆ ಬೇರೇನಿಲ್ಲ ಬಿಡಿ.
ಜಾತಿ ಮೀಸಲಾತಿ ಹೆಸರಲ್ಲಿ ರಾಜಕಾರಣವಂತು ಕಂಡು ಕೇಳರಿಯದ ಪರಿಸ್ಥಿಗೆ ತಲುಪಿದೆ ಬಿಡಿ. ಎಲ್ಲವನ್ನು ಜಾತಿ ಲೆಕ್ಕಚಾರದಲ್ಲಿ ಮಾಡಿ, ನಾವು ಜಾತ್ಯತೀತರು ಎಂದು ಬೀಗುವ ಬಡಾಯಿಕೋರರು ತಮ್ಮದೇ ಸಾಮ್ರಾಜ್ಯದಲ್ಲಿ ಮೆರೆಯುತ್ತಿದ್ದಾರೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ. ಜಾತಿ ಹೆಸರಲ್ಲಿ ಕಚ್ಚಾಡ್ಸುವುದು, ಬಂದ್ ಮಾಡಿಸುವುದು ಇವೆಲ್ಲ ಗಿಮಿಕ್‍ಗಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿವೆ. ಜಾತಿ ಆದಾರದ ಮೇಲೆ ಟಿಕೆಟ್ ನೀಡುವುದು, ಓಲೈಕೆ ರಾಜಕಾರಣ ನಮ್ಮಲ್ಲಿ ಹೊಸತಲ್ಲ ಬಿಡಿ. ಹೀಗೆ ಬರೆಯುತ್ತಾ ಸಾಗಿದರೆ ಪುರಾಣವೇ ಆದಿತು. ಮೀಸಲಾತಿ ಭಿಕ್ಷೆಯಲ್ಲ, ಅದು ಹಕ್ಕು. ಅದನ್ನು ದಮನಿತರು ಪಡೆಯುವಂತಾದರೆ, ಅದರ ಆಶಯ ಈಡೇರಿದಂತಾಗುತ್ತದೆ.
- ಡಾ. ಅಶ್ವಿನ್ ಪರಕ್ಕಜೆ
‘ಹೊಸದಿಗಂತ’ ದಿನಪತ್ರಿಕೆಯಲ್ಲಿ ಪ್ರಕಟಿತ ಬರಹ
Facebook ಕಾಮೆಂಟ್ಸ್