X

ಬಿರಿಯಾನಿಯ ಐತಿಹ್ಯ!

ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈ-ಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ  ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ, ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ, ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು, ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು  ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..’ ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.

ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂದಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ  ಕೂಡಿದ  ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ  ಬಿಸಿಬಿಸಿಯಾದ  ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗಿಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ  ಜೊತೆಗೆ ತರಿತರಿಯಾದ ಬಿಸಿಮಾಡಿದ ತುಪ್ಪ... ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ದಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!

ನಾವುಗಳು ಜನ ಐದಾದ್ದರಿಂದ ರಾತ್ರಿಯ ಊಟಕ್ಕೆ ಪದಾರ್ಥದ ಪರಿಮಾಣವೂ ಅಷ್ಟೇನೂ ಹೆಚ್ಚಾಗಿ ಬೇಕಾಗಿರಲಿಲ್ಲ. ಯೋಚನೆಯಲ್ಲೇ ಮುಳುಗಿದ್ದ ನನಗೆ ಸೈನಿಕರು ನಾನಿದ್ದಲ್ಲಿಗೆ ಬಂದ ಸದ್ದು ಅರಿವಿಗೆ ಬಾರದಾಯಿತು. ಒಂದರ ಮೇಲೊಂದು ಖಡ್ಗವನ್ನು ಎಸೆದ ಅವರು ಊಟಕ್ಕೆ ಏನು ತಯಾರಿ?’ ಎಂಬಂತೆ ನನ್ನನ್ನೇ ಗುರಾಯಿಸತೊಡಗಿದರು! ಕೂಡಲೇ ಎಚ್ಚೆತ್ತುಕೊಂಡ ನಾನು ಏನನ್ನೂ ಉತ್ತರಿಸಲಾಗದೆ ಅವಸರವಸರವಾಗಿ ಕಾರ್ಯೋನ್ಮುಖನಾದೆ. ಹಿಂದೆಂದೂ ಈ ಬಗೆಯ ಮೈಮರೆಯುವಿಕೆ ಬಂದಿರಲಿಲ್ಲ. ರಾಜರ ಕಟ್ಟಪ್ಪಣೆಯೋ ಏನೋ ಇಂದು ಮನಸ್ಸು ಬಹಳಾನೇ ಬೆದರಿದೆ. ಆದರೆ ಈ ಕ್ಷಣಕ್ಕೆ ನನಗೆ ಬಂದೊದಗಿರುವ ಸವಾಲೆಂದರೆ ಮದವೇರಿದ ಆನೆಗಳಂತೆ ಘೀಳಿಡುವ ನಾಲ್ವರು ಸೈನಿಕರ ಹಸಿವನ್ನು ನೀಗಿಸುವುದು. ಇನ್ನೇನು ಇವರು ತುಸು ಹೊತ್ತಿನಲ್ಲಿ ಪಕ್ಕದಲ್ಲೇ ಇರುವ ಕೆರೆಗೆ ಹೋಗಿ ಸ್ನಾನಾದಿಗಳನ್ನು ಮಾಡಿ ವಾಪಸ್ಸಾಗುತ್ತಾರೆ. ಬೆವತು ದಣಿದ ದೇಹ ಬಯಸಿದರೆ ಒಂದಷ್ಟು ಕಾಲ ಈಜಾಡುವುದೂ ಉಂಟು. ಆದರೆ ಬಂದ ಕೂಡಲೇ ಘಮಘಮಿಸುವ  ಭೀಮಹಾರವೊಂದು ಸಿದ್ಧವಿರಬೇಕು. ಇಂದು ಯಾವುದೇ ಶಿಕಾರಿಯಾಗದಿದ್ದ ಕಾರಣ ಮಾಂಸದ ಅಡಿಗೆ ಇರುವುದಿಲ್ಲವೆಂಬುದು ಅವರುಗಳಿಗೆ ತಿಳಿದಿರುತ್ತದೆ. ಸಮಯ ಓಡತೊಡಗಿತು.

ಅಲ್ಲಿಯವರೆಗೂ ಒಂದೇ ಒಲೆಯಲ್ಲಿ ಅಡುಗೆಯನ್ನು ಮಾಡುತ್ತಿದ್ದ ನಾನು ಸಮಯ ಸಾಧನೆಗಾಗಿ ಎಂಬಂತೆ ತುಸು ಪಕ್ಕದಲ್ಲಿಯೇ ಮೂರು ಕಲ್ಲುಗಳಿಂದ ಮತ್ತೊಂದು ಒಲೆಯನ್ನು ಮಾಡಿಕೊಂಡೆ. ಅಡುಗೆ ಏನೇ ಆದರೂ ಅನ್ನವೆಂಬ ಮೂಲಧಾತು ಅದರಲ್ಲಿ ಇದ್ದಿರಲೇಬೇಕು. ಹಾಗಾಗಿ ಎಲ್ಲಕಿಂತ ಮೊದಲು ಅನ್ನವನ್ನು ಮಾಡೋಣವೆಂದು ನಾಲ್ಕು ಪಾವು ಅಕ್ಕಿಯನ್ನು ಮಡಿಕೆಯ ಪಾತ್ರೆಯೊಂದಕ್ಕೆ ಸುರಿದು ಪಕ್ಕದಲ್ಲೇ ಇದ್ದ ಸಣ್ಣ ಝರಿಯ ಬಳಿಹೋಗಿ ತೊಳೆದು, ಜಾಲಾಡಿಸಿ, ನೀರನ್ನು ತುಂಬಿಕೊಂಡು ತಂದೆ. ಹಳೆಯ ಒಲೆಯ ಮೇಲೆ ಮಣ್ಣಿನ ಮಡಕೆಯನ್ನು ಆಸೀನಪಡಿಸಿ ಬೆಂಕಿಯೊತ್ತಿಸಿದ ಮೇಲೆ ಅರ್ಧ ಕೆಲಸವೇ ಮುಗಿಯಿತು ಎನ್ನುವಷ್ಟು ನಿರಾಳಭಾವ ಮನಸ್ಸನ್ನು ತುಂಬಿತು. ಬೆಂಕಿಯ ಕಾವು ಹಸಿವನ್ನು ನೀಗಿಸುವ ಪುಣ್ಯಕಾರ್ಯಕ್ಕೆ ಎಡೆಬಿಡದೆ ದುಡಿಯುವಂತೆ ಹುರಿಯತೊಡಗಿತು. ತಾನು ಸುಟ್ಟು ಇತರರ ಹೊಟ್ಟೆಯನ್ನು ತುಂಬುವ ತ್ಯಾಗಮಯಿ ಜೇವವೇನೋ ಅದು ಎಂಬಂತೆ ಅದು ನನಗೆ ಭಾಸವಾಹಿತು. ಲೋಕಾರೂಢ ಚಿಂತನೆಗೆ ಅದು ಸಮಯವಲ್ಲ. ಅನ್ನವೇನೋ ಇನ್ನು ಕೆಲನಿಮಿಷಗಳಲ್ಲಿಯೇ ಆಗಿಬಿಡುತ್ತದೆ. ರಾಜಧಾನಿಯಿಂದ ಸೊಪ್ಪು ತರಕಾರಿಗಳನ್ನು ಹೊತ್ತು ಬರುವ ಒಂಟೆಗಳ ಸಾಲು ಬೇರೆ ವಿಳಂಬವಾಗಿದೆ.

ಕಳೆದ ಕೆಲದಿನಗಳಿಂದ ಇಲ್ಲಿಯೇ ತಂಗಿ ಸ್ಥಳಪರಿಚಯವಿದ್ದ ನಾನು, ಕಾಡಿನ ಅಲ್ಲಲಿ ಬೆಳೆದ್ದಿದ್ದ ಭಕ್ಷಿಸಲು ಯೋಗ್ಯವಾದ ಹಸಿರು ತರಕಾರಿ, ಸೊಪ್ಪು ಹಾಗು ಗೆಡ್ಡೆಗೆಣೆಸುಗಳನ್ನು ಗಮನಿಸಿದ್ದೆ. ಅನಿವಾರ್ಯವಿದ್ದ ಕಾರಣ ಒಂದು ಅಂದಾಜಿನ ಮೇಲೆ ತಿಂಗಳಬೆಳಕಿನ ಮಬ್ಬಿನಲ್ಲಿಯೇ ಕಟ್ಟಿಗೆಯ ಬೆಳಕೊಂದನ್ನು ಹಿಡಿದು ಸ್ಥಳವನ್ನು ಗುರುತುಮಾಡಿಕೊಂಡು ಹೆಜ್ಜೆ ಹಾಕಿದೆ. ಡೇರೆಯಿಂದ ಹೆಚ್ಚು ದೂರಹೋಗಬಾರದೆಂಬ ಹೆಚ್ಚರಿಕೆಯ ಕರೆಘಂಟೆ ತಲೆಯೊಳಗೆ ಸದ್ದುಮಾಡುತ್ತಲೇ ಇದ್ದಿತು. ದೇಶದ ಅಲ್ಲಲಿ ಇತ್ತೀಚಿಗೆ ಚಾಲ್ತಿಯಲ್ಲಿ ಬಂದಿರುವ ಹಸಿರಾದ ಹುಳಿಹಣ್ಣನ್ನು ಹಲವೆಡೆ ಅಡುಗೆಗೆ ಬಳಸುವುದನ್ನು ನೋಡಿದ್ದೇನೆ. ಹಸಿರಿರುವ ಇದನ್ನು ಕಿತ್ತು ಇಟ್ಟರೆ ಕೆಲದಿನಗಳಲ್ಲೇ ಕಡುಕೆಂಪುಬಣ್ಣಕ್ಕೆ ತಿರುಗುತ್ತದೆ. ಮೃದುವಾಗುತ್ತದೆ. ಊರಿನ ಗಲ್ಲಿಯ ಮಕ್ಕಳಂತೂ ಹೊಟ್ಟೆ ಬಿರಿಯುವಂತೆ ಇದನ್ನು ಕಾಪುತ್ತ ತಿಂದು ಹೊಟ್ಟೆ ನೋವೆನುತ ಬಿದ್ದು ಹೊರಳಾಡುವುದುಂಟು. ಈಗ ಅದೇ ಹಣ್ಣಿನ ಗಿಡವನ್ನು ನನ್ನ ಕಾಲ ಬಳಿಯೇ ಕಂಡೆ. ಎರಡಡಿ ಉದ್ದದ ಗಿಡದ ಎಲೆಗಳು ತುಂಬೆ ಗಿಡಗಳ ಎಲೆಗಳಂತೆಯೇ ಕಾಣುತ್ತವೆ. ಹೆಸರಿಡದ ಆ ಹಸಿರು ಗಿಡಗಳು ಹಣ್ಣುಗಟ್ಟಿವೆಯೇ ಎಂದು ಪರೀಕ್ಷಿಸಿದರೆ ಅದಾಗಲೇ ಕಾಡ ಇಲಿ ಅಳಿಲುಗಳು ಕಾಯಿಯ ತೊಟ್ಟಷ್ಟನ್ನೇ ಬಿಟ್ಟು ಪೂರಾ ಗೊಂಚಲ್ಲನ್ನು ತಿಂದು ಜಾಗ ಕಿತ್ತಿವೆ. ಆದರೆ ಛಲ ಬಿಡಲಿಲ್ಲ. ಈ ಜಾತಿಯ ಕಾಯಿ ಒಂದೋ ಎರಡು ಮಾತ್ರವಷ್ಟೇ ಬೆಳೆಯವು. ತಮ್ಮ ಸಂಸಾರದ ಕನಿಷ್ಠ ಹತ್ತಿಪ್ಪತ್ತು ಇತರೆ ಗಿಡಗಳಿಗೆ  ಜೊತೆಗೆ ಜನ್ಮನೀಡುವವು. ಕೊಂಚ ಅತ್ತಿಂದಿತ್ತ ಅಲೆದಾಡಿದ ಮೇಲೆ ಮುಳ್ಳು ಆವರಿಸಿದ ಪೊದೆಗಳ ಹಿಂದೆ ಇಂಥದ್ದೇ ಮತ್ತೊಂದು ಗಿಡ ಕಂಡಿತು. ಹಣ್ಣು ಹಣ್ಣಾಗಿದ್ದ ಆ ಗಿಡದ ತುಂಬೆಲ್ಲ ಕೆಂಪು ಕಾಯಿಗಳ ರಾಶಿ ರಾಶಿ ಗೊಂಚಲುಗಳು! ಕೂಡಲೇ ಕವಚದಂತೆ ಆವರಿಸಿದ ಪೊದೆಯನ್ನು ಪಕ್ಕಕ್ಕೆ ಸರಿಸಿ ಕಳೆತ ಮಾವಿನಹಣ್ಣುಗಳಂತೆ ಬಾಡಿ ಬತ್ತಿದ ಹಣ್ಣುಗಳನ್ನು ಒಂದೊಂದಾಗಿಯೇ ಕೀಳತೊಡಗಿದೆ.  ಪೂರಾ ಕಲೆತಿದ್ದ ಹಣ್ಣೊಂದನ್ನು ಅದರ ಲೋಳೆಯಾದ ಸಣ್ಣ ಸಣ್ಣ ಬೀಜಗಳು ಹೊರಬರುವಂತೆ ಕೈಯಲ್ಲಿ ಹಿಸುಕಿ ಹಾಕಿದೆ. ಆಗೊಮ್ಮೆ ಈಗೊಮ್ಮೆ ಬರುವ ಮಳೆಯ ಮಹಿಮೆಗೆ ಇವುಗಳ ಸಂಸಾರ ಇನ್ನೂ ವೃದ್ಧಿಸಲಿ ಎಂಬ ಆಶಯದೊಂದಿಗೆ..

ಡೇರೆಗೆ ಬಂದವನೇ ಮೀಯಲು ಹೋದ ಸೈನಿಕರು ಇನ್ನು ಬಂದಿರಲಿಲ್ಲವೆಂಬ ಖಾತ್ರಿಯನ್ನು ಮಾಡಿಕೊಂಡು, ಬತ್ತಳಿಕೆಯಲ್ಲಿ ತುಂಬಿಕೊಂಡು ಬಂದಿದ್ದ ಕೆಂಪು ಕಾಯಿಗಳನ್ನು ಅಥವಾ ಹಣ್ಣುಗಳನ್ನು ಮತ್ತದೇ ಝರಿಯ ಬಳಿಗೋಗಿ ತೊಳೆದು ತಂದೆ. ಸಾಂಬಾರ ಪದಾರ್ಥಗಳ ಗಂಟುಗಳನ್ನು ಬಿರಬಿರನೆ ತಂದು ಒಂದೊಂದಾಗಿಯೇ ಬಿಚ್ಚತೊಡಗಿದೆ. ಏನು ಮಾಡಹೋಗುತ್ತಿರುವನೆಂದು ತಿಳಿಯುತ್ತಿಲ್ಲ. ಆದರೂ ಯಾರೋ ಅಣಿಮಾಡಿ ಮಾಡಿಸುತ್ತಿರುವಂತೆ ಕೈಗಳು ತಮ್ಮ ಪಾಡಿಗೆ ಬೇಕೆನಿಸಿದ ವಸ್ತುಗಳನ್ನು ಜೋಡಿಸಿಕೊಳ್ಳತೊಡಗಿದವು. ಗಂಟಿನಿಂದ ನಾಲ್ಕೈದು ಈರುಳ್ಳಿಗಳನ್ನು ಹೊರಗೆಳೆದು ಹೆಚ್ಚತೊಡಗಿದೆ. ಕಣ್ಣೀರು ಬಾರದಿರಲಿ ಎನುತ ಅವುಗಳ ಒಂದೆರೆಡು ಸಿಪ್ಪೆಗಳನ್ನು ತಲೆಗೂದಲಿನ ಮಧ್ಯಕ್ಕೆ ತುರುಕಿಸಿದರೆ ಕಣ್ಣೀರು ಒಮ್ಮಿಂದೊಮ್ಮೆಗೆ ಮಂಗಮಾಯಾ! ಅರ್ಧಚಂದ್ರಾಕೃತಿಯ ಹತ್ತಾರು ಹೋಳುಗಳ ನಂತರ ತೊಳೆದು ತಂದಿದ್ದ ಕೆಂಪು ತರಕಾರಿಯನ್ನು ಮೃದುವಾಗಿ ತುಂಡರಿಸತೊಡಗಿದೆ. ಹುಳಿಹುಳಿಯಾದ ವಾಸನೆ ಮೂಗನ್ನು ಬಡಿಯುತ್ತಲೇ ಬೇಡವೆನಿಸಿದರೂ ಮೂಗು ಕ್ರಮೇಣ ಅದಕ್ಕೆ ಹೊಗ್ಗಿಕೊಳ್ಳತೊಡಗಿತು. ನಾಲ್ಕೈದು ಕೆಂಪು ಹಣ್ಣುಗಳನ್ನು ಕೊಯ್ದು ಇನ್ನೇನು ಮಸಾಲಾ ಪದಾರ್ಥಗಳಿಗೆ ಕೈಹಾಕಬೇಕು ಎನ್ನುವಷ್ಟರಲ್ಲಿ ಕಾಡುಕೋಳಿಗೆ ಹಾಕಿದ್ದ ಬಲೆಯ ದಿಕ್ಕಿನಿಂದ ಪಟಪಟನೆ ಬಡಿದುಕೊಳ್ಳುತ್ತಿದ್ದ ರೆಕ್ಕೆಗಳ ಸದ್ದು ಕೇಳಿತೊಡಗಿತು….

ಒಣಗಿದ ಬಳ್ಳಿಯೊಂದಕ್ಕೆ ಸರಗುಣಿಕೆಯನ್ನು ಹಾಕಿ ಒಂದು ಬದಿಯನ್ನು ಪೊದೆಯೊಂದಕ್ಕೆ ಬಿಗಿದು ಕಟ್ಟಿ ನೆಲದ ಅಲ್ಲಲ್ಲಿ ಅಕ್ಕಿಯ ಕಾಳುಗಳನ್ನು ಚೆಲ್ಲಿ ಬಂದಿದ್ದೆ. ಇಂತಹ ಕನಿಷ್ಠ ಪಂಜರಕ್ಕೆ ಯಾವ ತಲೆಕೆಟ್ಟ ಹಕ್ಕಿಯೂ ಸಹ ಬಂದು ಬೀಳುವುದಿಲ್ಲವೆಂಬುದು ಗೊತ್ತಿದ್ದರೂ ಗ್ರಹಚಾರ ಕೆಟ್ಟ ಜೀವಕ್ಕೆ ಹನಿನೀರೂ ಪ್ರವಾಹವಾಗಬಹುದೆಂದುಕೊಂಡು ಬಂದಿದ್ದೆ. ಈಗ ರೆಕ್ಕೆಗಳ ಚಟಪಟ ಸದ್ದು ಅದೇ ದಿಕ್ಕಿನಿಂದ ಬಂದ ಕಾರಣ  ಮಸಾಲೆ ಪದಾರ್ಥಗಳ ಗಂಟನ್ನು ಅಲ್ಲಿಯೇ ಬಿಟ್ಟು ಸದ್ದು ಬರುತ್ತಿದ್ದ ದಿಕ್ಕಿನಲ್ಲಿ ಬಿರಬಿರನೆ ಹೆಜ್ಜೆಹಾಕಿದೆ. ಕೆಲಕ್ಷಣದವರೆಗೂ ಒಂದೇ ಸಮನೆ ಕೇಳುತ್ತಿದ್ದ ರೆಕ್ಕೆಗಳ ಸದ್ದನ್ನು ಇದ್ದಕ್ಕಿದಂತೆ ಯಾರೋ ತಡೆದು ನಿಲ್ಲಿಸಿದಂತಾಯಿತು. ಒಂದಿಷ್ಟು ತಿಂಗಳ ಬೆಳಕು ಆಕಾಶದಲ್ಲಿ ಮಿನುಗುತ್ತಿದ್ದಾರೂ ಅದು ಕರಾಳ ಕಾಡಿನ ಕಪ್ಪು ದೈತ್ಯವನ್ನು ಕರಗಿಸಲಾಗಿರಲಿಲ್ಲ. ರೆಕ್ಕೆಗಳ ಶಬ್ದ ನಿಂತಕೂಡಲೇ ಮಹಾಮೌನವೊಂದು ನಾನಿಂತಿರುವ ಜಾಗವನ್ನು ಆವರಿಸಿತು. ಏಕೋ ಎದೆ ಒಮ್ಮೆಲೇ ಬಡಿದುಕೊಳ್ಳತೊಡಗಿತು. ಏನಾದರಾಗಲಿ ಹುಳಿಹಣ್ಣು ಹಾಗು ಅನ್ನವನು ಬೆರೆಸಿ ಏನಾದರೊಂದು ಆಹಾರವನ್ನು ಮಾಡಬಹುದು. ಹೇಗೋ ಇಂದು ಮಾಂಸಾಹಾರವಿಲ್ಲವೆಂಬುದು ಸೈನಿಕರಿಗೆ ತಿಳಿದೇ ಇದೆ. ಸುಮ್ಮನೆ ಏಕೆ ಮುನ್ನಡೆದು ಅಪಾಯವನ್ನು ಎದೆಯ ಮೇಲೆಳೆದುಕೊಳ್ಳಲಿ? ಜನನಿಬಿಡ ಇಂತಹ ಪ್ರದೇಶಗಳಲ್ಲಿ ಭೂತ ಪ್ರೇತಗಳ ಉಪಟಳವೇನು ಕಡಿಮೆ ಇರುವುದಿಲ್ಲ! ಎಂದುಕೊಂಡು ಇನ್ನೇನು ಹೆಜ್ಜೆಯನ್ನು ಹಿಂದಿಡಬೇಕು ಎನ್ನುವಷ್ಟರಲ್ಲಿ ದಬದಬ ಸದ್ದನ್ನು ಮಾಡುತ್ತಾ ಏನೋ ನನ್ನಡೆಗೆ ಓಡಿಬರುವ ಸದ್ದು ಕೇಳಿತು!

ಭಯದ ತೀಕ್ಷ್ಣತೆಗೆ ಇಟ್ಟ ಕಾಲನ್ನು ಎತ್ತಿ ಮೇಲಿಡಲೂ ಆಗುತ್ತಿಲ್ಲ. ಇನ್ನೇನು ಪ್ರೇತಾತ್ಮವೊಂದು ನನ್ನ ಬಂದು ಅವರಿಸಿಬಿಟ್ಟಿತು ಎಂದು ಗಡಗಡ ನಡುಗುತ್ತಿರುವಾಗಲೇ ಅತ್ತ ಕಡೆಯಿಂದ ಸೈನಿಕನೊಬ್ಬ ಕಾಡುಕೋಳಿಯ ಕಾಲುಗಳೆರಡನ್ನು ಇಡಿದುಕೊಂಡು ಖುಷಿಯಿಂದ ಡೇರೆಯ ಕಡೆ ಓಡಿ ಬರುತ್ತಿದ್ದಾನೆ. ಕೋಳಿಯ ಕತ್ತು ಅದಾಗಲೇ ಜೋತುಬಿದ್ದು ನೇತಾಡುತ್ತಿದ್ದದರಿಂದ ರಾತ್ರಿಗೆ ಕೋಳಿಮಾಂಸದ ಏನಾದರೊಂದನ್ನು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿತು ಎಂದುಕೊಂಡೆ. ಓಡೋಡಿ ಬರುತ್ತಿದ್ದ ಆತ, ನನ್ನ ನೋಡಿ ಒಮ್ಮೆಲೇ ಅವಕ್ಕಾಗಿ ನಿಂತುಬಿಟ್ಟ. ಬಹುಶಃ ಭಯದ ಸ್ಫೋಟ  ಗರಬಡಿದವನಂತೆ ನಿಂತ ನನ್ನನು ಕಂಡು ಆತನೊಳಗೂ ಆಗ ಜರುಗಿರಬೇಕು! ಕೆಲಕಾಲ ದೂರದಲ್ಲೇ ಅಲುಗಾಡದೆ ನಿಂತು ಯಾರದುಎಂದು ಖಾತ್ರಿಪಡಿಸಿಕೊಂಡು, ನಿಂತಿರುವುದು ನಾನೆಂದು ತಿಳಿದ ಮೇಲೆ ಖುಷಿಯಿಂದ ನನ್ನಡೆಗೆ ಕೋಳಿಯನ್ನು ತಂದು ನೀಡಿದ. ನೆನ್ನೆ ಬಲೆಯನ್ನು ಹಾಕುವಾಗ ನನ್ನೊಟ್ಟಿಗೆ ಬಂದು ನೋಡಿದ ಆತ ಇಂದು ಅದೇ ದಿಕ್ಕಿನಿಂದ ರೆಕ್ಕೆಗಳ ಶಬ್ದ ಬಂದಕೂಡಲೇ ನನಗಿಂತ ಮೊದಲೇ ಓಡೋಡಿ ಹೋಗಿ ಕೋಳಿಯನ್ನು ಹಿಡಿದು ಸಂಹರಿಸಿ ತಂದಿದ್ದ.

ಡೇರೆಯ ಬಳಿಗೆ ಬರುವಷ್ಟರಲ್ಲೇ ವಾಯುದೇವ ಹಚ್ಚಿಬಂದಿದ್ದ ಎರಡೂ ಒಲೆಗಳನ್ನು ಕೆಡಿಸಿತನ್ನ ಅಧಿಪತ್ಯವನ್ನು ಸಾಬೀತುಪಡಿಸಿದ್ದ! ಮೊದಲು ಹೋಗಿ ಅನ್ನದ ಅಗುಳುಗಳನ್ನು ಹಿಸುಕಿ ನೋಡಿದೆ. ಅರೆಬರೆ ಬೆಂದಂತಿದ್ದ ಅಗುಳುಗಳು ಇನ್ನೂ ಸಹ ಪಾತ್ರೆಯ ತಳದಲ್ಲೇ ಉಳಿದಿದ್ದವು. ಕೆಟ್ಟು ಬಿದ್ದಿದ ಓಲೆ, ಅರೆಬರೆ ಹೆಚ್ಚಿದ್ದ ತರಕಾರಿಗಳು, ಅಲ್ಲಲ್ಲಿ ಚದುರಿಕೊಂಡಿದ್ದ ಮಸಾಲಾ ಪದಾರ್ಥಗಳನ್ನು ಕಂಡ ಸೈನಿಕ ಆತನ ಖಡ್ಗವೊಂದನ್ನು ತಂದು ತಾನಾಗಿಯೇ ಕೋಳಿಯನ್ನು ಶುಚಿಗೊಳಿಸಿ ತರುವೆ ಎನುತ ಝರಿಯ ಬಳಿಗೆ ಹೋಗುತ್ತಾನೆ. ಕೊಂಚ ನಿರಾಳನಾದ ನಾನು ಪುನಃ ಬೆಂಕಿಯನ್ನು ಹಚ್ಚುವ ಮುನ್ನ ಬೇಕಾದ ಎಲ್ಲ ಪದಾರ್ಥಗಳನ್ನು ಜೋಡಿಸಿಕೊಳ್ಳತೊಡಗಿದೆ.

ಸೊಂಟಕ್ಕೆ ಕಟ್ಟಿಕೊಂಡಿದ್ದ ಬಟ್ಟೆಯನ್ನು ನೆಲದ ಮೇಲೆ ಹರವಿ ಚೆಕ್ಕೆ, ಲವಂಗ, ಏಲಕ್ಕಿಗಳನ್ನು ನಾಲ್ಕೈದರಂತೆ ಒಂದೊಂದು ಗುಂಪಾಗಿ ಮಾಡಿ ಇಟ್ಟೆ. ಕೊಯ್ದುಕೊಂಡಿದ್ದ ಈರುಳ್ಳಿ ಹಾಗು ಹುಳಿಹಣ್ಣುಗಳನ್ನು ಒಂದು ಗಂಗಾಳದಲ್ಲಿ ಹಾಕಿ ಬದಿಗೆ ಇರಿಸಿಕೊಂಡೆ. ಕೆಂಪು ಕೆಂಪಾದ ತ್ರಿಕೋನಾಕಾರದ ಹುಳಿಹಣ್ಣಿನ ಹೋಳುಗಳು, ಕಾಮನಬಿಲ್ಲಿನಂತೆ ಬಾಡಿಕೊಂಡಿರುವ ಈರುಳ್ಳಿಯ ಎಸಳುಗಳು ಹಾಗು ಅವುಗಳ ಸುಂದರ ಮೈಬಣ್ಣ ಏನೋ ಒಂದು ಬಗೆಯ ಖುಷಿಯ ಸೆಲೆಯನ್ನು ತಾವಿರುವಲ್ಲಿ ಸೃಷ್ಟಿಸಿಕೊಂಡಿದ್ದವು. ಬರುವಾಗ ಡೇರೆಯ ಪಕ್ಕಕೆ ಬೆಳೆದು ನಿಂತಿದ್ದ ಹಸಿರುಮೆಣಸಿನ ಗಿಡದಿಂದ ಏಳೆಂಟು ಕಾಯಿಗಳನ್ನು ಕಿತ್ತು ತರಲು ಮರೆತಿರಲಿಲ್ಲ. ಇನ್ನೇನು ಎಲ್ಲವು ಸಿದ್ದವಾದವು ಎನ್ನುವಷ್ಟರಲ್ಲೇ ಕೋಳಿಯನ್ನು ಶುಚಿಗೊಳಿಸಲು ಹೋಗಿದ್ದ ಸೈನಿಕ ದೊಡ್ಡದೊಂದು ಎಲೆಯಲ್ಲಿ ಮಾಂಸದ ತುಂಡುಗಳನ್ನು ತುಂಬಿಕೊಂಡು ನಾಟಕದ ಯಾವುದೊ ಒಂದು ಸಂಭಾಷಣೆಯನ್ನು ಹೇಳಿಕೊಳ್ಳುತ್ತಾ  ಪ್ರಶಾಂತ ರಾತ್ರಿಯ ಗಾಢಮೌನವನ್ನು ಸೀಳಿಕೊಳ್ಳುತ್ತಾ  ಡೇರೆಯ ಬಳಿಗೆ ಬರತೊಡಗಿದ.

ನಾಲ್ಕೈದು ಪಾವು ಅಕ್ಕಿ ಹಿಡಿಯುವಷ್ಟು ದೊಡ್ಡದಾದ ಪಾತ್ರೆಯೊಂದನ್ನು ತೆಗೆದುಕೊಂಡು ಹೊಸದಾಗಿ ಪಕ್ಕದಲ್ಲಿ ನಿರ್ಮಿಸಿದ ಒಲೆಯನ್ನು ಹಚ್ಚಿಸಿ ಇಟ್ಟೆ. ಚೊರ್ರ್… ಎಂಬ ಸದ್ದಿನೊಂದಿಗೆ ನೀರು ಆವಿಯಾಗುವುದನ್ನು ಖಾತ್ರಿಪಡಿಸಿಕೊಂಡು ಮಡಿಕೆಯಲ್ಲಿ ಕಾಯಿಸಿದ್ದ ತುಪ್ಪವನ್ನು ಒಂದು ಸೌಟಿನ ತುಂಬ ಬರುವಷ್ಟು ಹಾಕಿದೆ. ಹಿತವಾದ ತುಪ್ಪದ ಕನುವು ಮೂಗಿಗೆ ಬಂದು ಬಡಿಯುವಷ್ಟರಲ್ಲೇ ಹೆಚ್ಚಿದ ಈರುಳ್ಳಿಗಳ ಅಷ್ಟೂ ರಾಶಿಯನ್ನು ಅದರ ಮೇಲೆ ಸುರಿದೆ. ಕಾದ ಖಡ್ಗವನ್ನು ಶಾಂತ ನೀರಿನೊಳಗೆ ಅದ್ದಿದಂತೆ ವಿಪರೀತ ಪ್ರತಿರೋಧ ಒಡ್ಡಿದ ತುಪ್ಪ ಕ್ಷಣಕ್ಷಣಕ್ಕೂ ಸದ್ದನ್ನು ಕಡಿಮೆಗೊಳಿಸುತಾ ಕ್ರಮೇಣ ಈರುಳ್ಳಿಯ ರಾಶಿಯನ್ನು ತನ್ನೊಳಗೆ ಬೆರೆಸಿಕೊಂಡಿತು. ನಂತರ ಏನನ್ನು ಹಾಕುವುದು ಎಂದು ಯೋಚಿಸುತ್ತಿರುವಾಗಲೇ ಡೇರೆಯಿಂದ ತುಸು ದೂರದಿಂದ ಏನೋ ಓಡಿದ ಸದ್ದು ಕೇಳಿಸಿತು! ಹಿತವಾಗ ಗಾಳಿಯ ಅಲೆಗಳನ್ನು ಬೀಸುತ್ತಿದ್ದ ಶಾಂತ ರಾತ್ರಿಗೆ ಆ ಹೆಜ್ಜೆಗಳ ಸದ್ದು ಒಮ್ಮೆಲೇ ನನ್ನ ಎದೆಯನ್ನು ಝಲ್ಲೆನಿಸಿತು! ಅಷ್ಟರಲ್ಲಾಗಲೇ ಸ್ನಾನವನ್ನು ಮುಗಿಸಿಕೊಂಡು ಬಂದು ಊಟಕ್ಕೆ ಅಣಿಯಾಗುತ್ತಿದ್ದ ಸೈನಿಕರೂ ಸಹ ಸದ್ದನ್ನು ಕೇಳಿ ಕೂಡಲೇ ಡೇರೆಯಿಂದ ಹೊರಬಂದರು. ಎಲ್ಲರು ಸದ್ದು ಬಂದ ಕಡೆಗೆ ಕಿವಿನಿಮಿರಿಸಿ ಆಲಿಸತೊಡಗಿದರು. ಶತ್ರು ಸೈನಿಕರು ಹೀಗೆಯೇ ರಾತ್ರೋ ರಾತ್ರಿ ನಾಲ್ಕೈದು ಸೈನಿಕರಿರುವ ಡೇರೆಗಳ ಮೇಲೆ ಧಾಳಿ ನಡೆಸಿ ಧವಸ ದಾನ್ಯಗಳನ್ನು ಲೂಟಿಮಾಡುವುದಲ್ಲದೆ ಹಿಂದಿನಿಂದ ಬಂದು ಚಾಕು ಚೂರಿಯಿಂದ ತಿವಿದು ಸಾಯಿಸುವುದೂ ಉಂಟು ಎಂಬುದನ್ನು ಕೇಳಿದ್ದೆ. ಹಾಗಾದ ಕಾರಣ ಇಂತಹ ಸದ್ದುಗಳನ್ನು ಅಷ್ಟಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲರೂ ಕೆಲನಿಮಿಷಗಳ ಕಾಲ ನಿಂತ ಜಾಗದಿಂದ ಅಲುಗಾಡಲಿಲ್ಲ. ಸೈನಿಕರ  ಕೈಗಳಲ್ಲಾಗಲೆ ಖಡ್ಗಗಳು ಬಡಿದಾಟಕ್ಕೆ ಅಣಿಯಾಗಿದ್ದವು. ಕೆಲಸಮಯದ ನಂತರ ಒಬ್ಬ ಸೈನಿಕ ತುಸುದೂರ ಹೋಗಿ ವಾಪಸ್ಸು ಬಂದ. ತಾನು ಕಂಡ ಹಂದಿಗಳ ಗುಂಪನ್ನು ವರ್ಣಿಸುತ್ತಾ ಮರಿದಡ್ಡೆಯೊಂದು ತನ್ನ ಮರಿಗಳ ಸಮೇತ ಮರದ ಬುಡವೊಂದನ್ನು ಕೊರೆದು ತಿನ್ನುತ್ತಿದ್ದದ್ದನು ಹೇಳಿದ. ಹಂದಿಯ ಹೆಸರನ್ನು ಕೇಳಿ ನಾವೆಲ್ಲ ಒಮ್ಮೆಲೇ ನಿಟ್ಟುಸಿರು ಬಿಟ್ಟೆವು.

ಸೈನಿಕರು ಅಡುಗೆ ನಡೆಯುತ್ತಿರುವುದು ಇಂದಿಗೂ ಅಥವಾ ನಾಳೆಗೂ ಎಂದಾಗಲೇ ಒಲೆಯ ಮೇಲೆ ತುಪ್ಪಕ್ಕೆ ಈರುಳ್ಳಿಯನ್ನು ಸುರಿದ ನೆನಪಾಯಿತು. ಚಂಗನೆ ಒಲೆಯ ಬಳಿಗೆ ನೆಗೆದು ನೋಡುತ್ತೀನಿ, ಕೆಂಬಿಳುಪು ಬಣ್ಣದ ಈರುಳ್ಳಿಯ ಎಸಳುಗಳು ಚಿನ್ನದ ಬಣ್ಣಕ್ಕೆ ತಿರುಗಿ ಇನ್ನೇನು ಸುಟ್ಟು ಕರಕಲಾಗಿ ಹೋಗಲು ಅಣಿಯಾಗಿದ್ದವು! ನನ್ನ ಮಂಕುಬುದ್ಧಿಗೆ ಶಪಿಸಿಕೊಳ್ಳುತ್ತ, ಕೂಡಲೇ ಕರಿದಂತೆ ಕಾಣುತ್ತಿದ್ದ ಅಷ್ಟೂ ಈರುಳ್ಳಿಗಳನ್ನು ಒಂದು ಪಾತ್ರೆಗೆ ಸುರಿದುಕೊಂಡು ಪುನ್ಹ ಮತ್ತೊಂದು ಸೌಟು ತುಪ್ಪವನ್ನು ಅದೇ ಪಾತ್ರೆಗೆ  ಹಾಕಿದೆ. ಕೆಲಕ್ಷಣಗಳ ನಂತರ ಅಷ್ಟೂ ಮಸಾಲಾ ಪದಾರ್ಥಗಳನ್ನು ತುಪ್ಪದ ಮೇಲೆ ಸುರಿದದ್ದೇ ತಡ, ಸುಗಂಧಭರಿತ ಕಾಡುಗಳ ಕಿಕ್ಕಿರಿದ ಪೊದೆಗಳೊಳಗೆ ಹೊಕ್ಕ ಅನುಭವ! ಘಮಘಮಿಸುವ ಮತ್ತಿನಲ್ಲೇ ಕೆಲಕ್ಷಣ ಕಳೆದ ಮೇಲೆ ಮತ್ತೊಂದು ಹಸಿ ಈರುಳ್ಳಿಯನ್ನು ಹೆಚ್ಚಿ ಹಾಕಿದೆ. ಮಸಾಲ ಪದಾರ್ಥಗಳ ಪ್ರವೇಶದಿಂದ ಮುನಿಸಿಕೊಂಡು ಸಿಡಿಮಿಡಿಗೊಳ್ಳುತ್ತಿರುವಂತೆ ಆಡುತ್ತಿದ್ದ ತುಪ್ಪದ ಮತ್ತೊಮ್ಮೆ  ಎಲ್ಲವನ್ನು ಬೆರೆಸಿಕೊಂಡು ವಟಗುಡತೊಡಗಿತು.

ಅಷ್ಟರಲ್ಲಾಗಲೇ ಸೈನಿಕರು ಎರೆಡೆರೆಡು ಬಾರಿ ಬಂದು ನಾನು ಏನು ಮಾಡುತ್ತಿರುವೆನೆಂದು ಕೇಳಿಕೊಂಡು ಹೋದರು. ನಾ ಮಾಡುತ್ತಿರುವ ಬಾಡೂಟದ ಹೆಸರಾದರೂ ಏನು? ಉತ್ತರ ದೊರೆಯಲಿಲ್ಲ. ಮೊದಲು ತಯಾರಿಸಿ ನಂತರ ಹೆಸರಿಡುವ ಕಾರ್ಯಕ್ರಮವನ್ನು ಮಾಡುವ ಎಂದುಕೊಂಡು ಹಸಿರುಮೆಣಸಿನಕಾಯಿ ಹಾಗೂ ಹುಳಿಹಣ್ಣುಗಳ ಕೆಂಪುರಾಶಿಯನ್ನು ಪಾತ್ರೆಗೆ ಸುರಿದೆ. ಕಾದ ತುಪ್ಪದ ಸಿಟ್ಟು ತನ್ನ ಎಲ್ಲ ಎಲ್ಲೆಯನ್ನು ಮೀರಿ ನನ್ನನೇ ಸುಡುವ ಮಟ್ಟಕ್ಕೆ ಹೋಯಿತು. ಆದದರಿಂದಲೋ ಏನೋ ಒಂದೆರೆಡು ಹನಿಗಳು ಕೈಮೇಲೆ ಹಾರಾರಿ ಬಿದ್ದವು! ಕಾದ ತುಪ್ಪದ ಸಿಟ್ಟಿನ ಭಯಕ್ಕೆ ಎನ್ನುವಂತೆ ಹುಳಿಹಣ್ಣುಗಳು ಶರವೇಗದಲ್ಲಿ ಕರಗತೊಡಗಿದವು. ಇವುಗಳ ಮದ್ಯೆ ಕೆಂಪು ಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಹರಿಶಿಣದ ಕೊಂಬು ಹಾಗು ಸಂಬಾರ ಬೀಜಗಳನ್ನು ಪುಡಿಮಾಡಲು ಬದಿಗೆ ಇರಿಸಿಕೊಂದ್ದ ನೆನಪಾಗಿ, ಎಲ್ಲ ದೋಷವನ್ನು ಮತ್ತೊಮ್ಮೆ ನನ್ನ ಬುದ್ದಿಯ ಮೇಲೆಯೇ ಹೊರಿಸಿ,  ಕುಟ್ಟುವ ಕಲ್ಲನ್ನು ಬಳಿಗೆ ತಂದು, ನೋಡಿದರೇನೇ ಕರುಣೆ ಬರುವಂತೆ ಒಣಗಿ ಬೆಂಡಾಗಿದ್ದ ಕೆಂಪು ಮೆಣಸಿನಕಾಯಿ, ವಕ್ರ ವಕ್ರವಾಗಿ ನಾನಿರುವುದೇ ಹೀಗೆ ಎಂಬಂತೆ ಬೆಳೆದುಕೊಂಡಿದ್ದ ಅರಿಶಿಣದ ಕೊಂಬು ಹಾಗು ಗಂಡು ಹೆಣ್ಣು, ಮೇಲು ಕೀಳು, ಬಡವ ಬಲ್ಲಿದನೆಂಬ ಯಾವೊಂದು ತಾರತಮ್ಯವಿಲ್ಲದೆ ಎಲ್ಲವೂ ಒಂದೇ ಎಂಬಂತೆ ಕಾಣುತ್ತಿದ್ದ ಸಂಬಾರ ಬೀಜಗಳನ್ನು ಒಟ್ಟಿಗೆ ಬೆರೆಸಿ ಕುಟ್ಟತೊಡಗಿದೆ. ಒಂದೆಡೆ ಹಸಿ ಕೋಳಿಮಾಂಸದ ರಾಶಿ, ಪಕ್ಕದಲ್ಲಿ ಅರೆಬರೆ ಬೆಂದ ಅಕ್ಕಿಯ ಕಾಳುಗಳು, ಇತ್ತಕಡೆ ಬೆಂಕಿಯ ಹಾಗು ತುಪ್ಪದ ಶಾಖದಲ್ಲಿ ವಿಲೀನರಾಗಿ ಸುತ್ತಲ ಪರಿಸರವನ್ನು ಘಮಮಯವಾಗಿಸಿರುವ ಮಸಾಲಾ ಪದಾರ್ಥಗಳು…. ಸಮುದ್ರದ ಮರಳಿಗಿಂತಲೂ ನಯವಾದ ಮೆಣಸು, ಹರಿಶಿಣದ ಕೊಂಬು ಹಾಗು ಸಂಬಾರಬೀಜಗಳ ಪುಡಿಯನ್ನು ಒಲೆಯ ಮೇಲೆ ಬೇಯುತ್ತಿದ್ದ ಮಸಾಲಾ ಪದಾರ್ಥಗಳ ಮೇಲೆ ಸುರಿದೆ. ತದಾನಂತರ ಶುಂಠಿ ಬೆಳ್ಳುಳ್ಳಿಗಳನ್ನು ಒಟ್ಟಿಗೆ ಜಜ್ಜಿ ಬೆರೆಸಿದಾಗ ಬಂದ ಘಮ ನನ್ನ ನಾಲಿಗೆಯನ್ನು ಒದ್ದೆ ಮಾಡಿದಂತೂ ಸುಳ್ಳಲ್ಲ! ಕೂಡಲೇ ಅಷ್ಟೂ ಮಾಂಸದ ಚೂರುಗಳನ್ನು ಹಾಕಿ ಹುರಿದು ಜೊತೆಗೆ ಒಂದು ಹಿಡಿಯಷ್ಟು ಉಪ್ಪನ್ನು ಹುದುರಿಸಿ ಕೊನೆಗೆ ಎಂಟತ್ತು ಪಾವು ನೀರನ್ನು ಹಾಕಿ ಎಲ್ಲವನ್ನು ಬೆರೆಸಿದೆ. ಗಡಿಬಿಡಿಯಲ್ಲಿ ಅಚಾತುರ್ಯವೊಂದು ನಡೆದದ್ದು ನನ್ನ ಅರಿವಿಗೆ ಬಂದದ್ದು ತುಸು ಸಮಯದ ನಂತರವೇ! ಮಸಾಲೆ ಪದಾರ್ಥಗಳನ್ನು ಹಾಕುವ ಭರದಲ್ಲಿ ಸಣ್ಣ ಮಡಕೆಯಲ್ಲಿ ಊಟದ ಕೊನೆಗೆ ಬಡಿಸಲು ಇಟ್ಟುಕೊಂಡಿದ್ದ ಗಟ್ಟಿ ಮೊಸರನ್ನೂ ಅದರೊಳಗೆ ಸುರಿದಿದ್ದೆ. ಅಡಿಗೆ ಕೆಟ್ಟಿತು ಎನುತ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತ ನನ್ನಲ್ಲಿ ಆತ್ಮವಿಶ್ವಾಸ ಮಾತ್ರ ಒಂದಿನಿತು ಕ್ಷೀಣಿಸಲಿಲ್ಲ. ಆದದ್ದು ಆಗಲಿ ಎನುತ ಸುಮ್ಮನಿದ್ದೆ.  ಕೆಲನಿಮಿಷಗಳಲ್ಲಿಯೇ ಕುದಿಯತೊಡಗಿದ ಕಡುಕೆಂಪುಬಣ್ಣದ ಮಸಾಲಾನೀರಿಗೆ ಅರೆಬರೆ ಬೆಂದ ಅಕ್ಕಿಯನ್ನು ಬಸಿದು ಸುರಿಯತೊಡಗಿದೆ. ಅರ್ಧದಷ್ಟು ಅಕ್ಕಿಯನ್ನು ಸುರಿಯುವಷ್ಟರಲ್ಲಿ ತುಪ್ಪದಲ್ಲಿ ಬೆಂದು ಕರಕಲಾದ ಈರುಳ್ಳಿಗಳ ರಾಶಿಗಳು ನೆನಪಾಗಿ, ಸುರಿಯುವ ಕಾಯಕವನ್ನು ಅಲ್ಲಿಗೆ ನಿಲ್ಲಿಸಿ, ಅವುಗಳನ್ನು ಬಳಿಗೆ ತಂದು ಒಂದೆರೆಡು ಎಸಳುಗಳನ್ನು ಬಾಯಲ್ಲಿ ಇರಿಸಿದೆ. ಕರಕಲಾಗದರೂ ಏನೋ ಒಂದು ಬೇಗೆಯ ರುಚಿ ಅವುಗಳಲ್ಲಿ ಕಾಣಿಸಿತು. ಅದಾದ್ದಾಗಲಿ ಎನುತ ಬೆಳ್ಳನೆ ಹರಡಿಕೊಂಡಿದ್ದ ಅನ್ನದ ರಾಶಿಯ ಮೇಲೆ ಒಂದೇ ಸಮನಾಗಿ ಅವುಗಳನ್ನು ಹುದುರಿಸಿ ಉಳಿದ ಅನ್ನವನ್ನೂ ಅದರ ಮೇಲೆ ಪದರವಾಗಿ ಹರಡಿದೆ.

ಅಷ್ಟರಲ್ಲಾಗಲೇ ಸೈನಿಕರ ಕೋಪ ಅವರ ನೆತ್ತಿಯನ್ನು ಮುಟ್ಟಿರಬೇಕು. ಒಬ್ಬರಿಂದೊಬ್ಬರು ಬಂದು ನನ್ನ ಹೆಸರನ್ನು ಹಿಡಿದು ಅರಚತೊಡಗಿದರು. ದಿನಗಳ ಕಾಲ ಹಸುವೆಯನ್ನು ಬೇಕಾದರೆ ನೀಗಿಕೊಂಡು ಬದುಕಬಹುದು ಆದರೆ ಹಸಿವಿನಿಂದ ಕೆಂಗೆಟ್ಟ ಸೈನಿಕನ ಕೋಪವನ್ನು ಕ್ಷಣಮಾತ್ರವೂ ಸಹಿಸಲು ಆಗದು. ಅನ್ನವನ್ನು ಬೇಗ ಹರಳಿಸಬೇಕು ಎಂದುಕೊಂಡು ಪಾತ್ರೆಗೆಂದೇ ಮಾಡಿದ್ದ ಮಣ್ಣಿನ ಮುಚ್ಚನ್ನು ತಂದು ಮುಚ್ಚಿ ಅದರ ಮೇಲೆ ಒಂತಿಷ್ಟು ಕೆಂಡವನ್ನೂ ಸುರಿದೆ! ಇಲ್ಲೇ ನಿಂತರೆ ಬೈಗುಳದಲ್ಲೇ ನನ್ನ ಜೀವವನ್ನು ತೆಗೆದಾರು ಎಂದುಕೊಂಡು ಒಂದಿಷ್ಟು ಬಾಳೆಯ ಎಲೆಗಳನ್ನು ಕೊಯ್ದು ತರಲು ಹೊರಟೆ. ಅಲ್ಲೊಂದು ಇಲ್ಲೊಂದು ಬೆಳೆದ ಬಾಳೆಗಿಡಗಳನ್ನು ಹುಡುಕಿ ಎಲೆಗಳನ್ನು ಕೊಯ್ದು ಬಂದು ನೋಡುತ್ತೇನೆ, ನಾಲ್ವರು ಸೈನಿಕರು ಅದಾಗಲೇ ಒಲೆಯ ಮೇಲಿಟ್ಟಿದ್ದ ಪಾತ್ರೆಯನ್ನು ನೆಲದ ಮೇಲಿರಿಸಿ, ಪಾತ್ರೆಯ ತಳ ಸೇರಿದ್ದ ಮಸಾಲಾಪದಾರ್ಥಗಳನ್ನು ಹದವಾಗುವಂತೆ ಮಿಶ್ರಿಸಿ, ಒಂದೊಂದು ಹಿಡಿ ಅನ್ನವನ್ನೂ ಬಾಯೊಳಗೆ ಹಾಕಿಕೊಂಡು ಇಂಶಾಲ್ಲ…!ಎನುತ ಕಣ್ಣು ಮುಚ್ಚಿ ರುಚಿಯನ್ನು ಆಸ್ವಾದಿಸುತ್ತಿದ್ದರು. ನನ್ನನ್ನು ಕಂಡ ಕೂಡಲೇ ಶಹಭಾಷ್ ಮೇರೇ ಶೇರ್..ಎನುತ ನನ್ನನು ಮುತ್ತುವರೆದು ಕೈಲಿದ್ದ ಬಾಳೆಯ ಎಲೆಗಳನ್ನು ಕಸಿದುಕೊಂಡು ಅನ್ನ ಹಾಗು ಕೋಳಿಯ ಚೂರುಗಳನ್ನು ಒಟ್ಟಿಗೆ ಹಾಕಿಕೊಂಡು ಗಬಗಬನೆ ತಿನ್ನತೊಡಗಿದರು. ಅಡುಗೆ ಅಷ್ಟು ಚೆನ್ನಾಗಿದಿರುವುದರ ಬಗ್ಗೆ ನನಗೆ ನಂಬಿಕೆಯೇ ಬರಲಿಲ್ಲ.

ಈ ಜನ್ಮಕ್ಕಿಷ್ಟು ಸಾಕು.. ಎಂಬ ಆತ್ಮತೃಪ್ತಿಯಿಂದ ಸೈನಿಕರು ನಾ ಮಾಡಿರುವ ಅಡುಗೆಯನ್ನು ತಿನ್ನುವುದನ್ನೇ ನೋಡತೊಡಗಿದೆ. ಏನೋ ಒಂದು ಹೊಸದಾದ ಖಾದ್ಯವನ್ನು ಪರಿಚಯಿಸಿದ ಹೆಮ್ಮೆ. ಅಡುಗೆಯ ರುಚಿಯೋ ಅಥವಾ ಹಸಿವಿನ ವೇದನೆಯೋ ಸೈನಿಕರಂತೂ ನಿಂತೇ ತಿನ್ನತೊಡಗಿದರು. ಸ್ವಲ್ಪ ಅತ್ತ ಕಡೆ ಕಣ್ಣೊರಳಿಸಿ ನೋಡುತ್ತನೆ, ನಮ್ಮ ಸೈನಿಕರು ನಿಂತ ಸ್ಥಳದಿಂದ ತುಸುದೂರದಲ್ಲಿ ಇನ್ನೂ ನಾಲ್ಕು ಸೈನಿಕರ ಗುಂಪು ಕೈಕಟ್ಟಿ ಊಟವನ್ನು ತಿನ್ನುತ್ತಿದ್ದ ಸೈನಿಕರನ್ನೇ ನೋಡುತ್ತಾ ನಿಂತಿದೆ. ಕೆಲಕ್ಷಣದಲ್ಲೇ ಅವರನ್ನು ನೋಡಿದ ನಮ್ಮ ಸೈನಿಕರು ಅವರ ವೇಷಭೂಷಣಗಳಿಂದ ಅದು ವೈರಿಪಡೆಯೆಂದು ಖಾತ್ರಿಪಡಿಸಿಕೊಂಡು ಕೂಡಲೇ ತಮ್ಮ ತಮ್ಮ ಖಡ್ಗಗಳನ್ನು ತಂದು ಕಾದಾಡಲು ಅಣಿಯಾಗಿ  ನಿಂತರು. ಕೂಡಲೇ ಆ ಗುಂಪಿನ ಒಬ್ಬ ಸೈನಿಕ ಮಾತನಾಡಿ ಸಾಹೇಬ್, ತಾಳ್ಮೆ ತಂದುಕೊಳ್ಳಿ. ನಿಮ್ಮ ಡೇರೆಯನ್ನು ನಾಶಮಾಡಿ ನಿಮ್ಮ ಒಬ್ಬೊಬ್ಬರನ್ನು ಕೊಂದು ಬನ್ನಿ ಎಂಬ ಆಜ್ಞೆ ನಮ್ಮ ಸೈನ್ಯಾಧಿಪತಿಯಿಂದ ಆಗಿರುವುದೇನೋ ನಿಜ. ಆದರಂತೆ ನಾವುಗಳು ಸರ್ವಸನ್ನದ್ಧರಾಗಿ ನಿಮ್ಮ ಮೇಲೆ ಆಕ್ರಮಣ ಮಾಡಲು ಬಂದೆವು. ನಮ್ಮ ಸದ್ದನ್ನು ಕೇಳಿ ನೀವುಗಳು ಹೊರಬಂದು ದೂರದಲ್ಲೆಲೋ ಇದ್ದ ಹಂದಿಯ ಸದ್ದೆಂದು ಸುಮ್ಮನಾದಿರಿ. ಅದೇ ಸುಸಮಯವೆಂದು ಇನ್ನೇನು ನಾವುಗಳು ನಿಮ್ಮ ಹಿಂದಿನಿಂದ ಬಂದು ಆಕ್ರಮಣ ಮಾಡಬೇಕು ಎನ್ನುವಷ್ಟರಲ್ಲಿ ಹಿಂದೆಂದೂ ಆಸ್ವಾದಿಸಿರದ ಸುವಾಸನೆಯೊಂದು ನಮ್ಮ ಮೂಗನ್ನು ಬಂದು ಬಡಿಯಿತು. ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನು ನಾವು ನಿಯಂತ್ರಿಸಲೇ ಆಗಲಿಲ್ಲ. ಪರಿಣಾಮವಾಗಿ ಅಡುಗೆ ಪೂರ್ತಿಯಾಗಲು ಕಾಯತೊಡಗಿದೆವು. ಗಂಟಲಲ್ಲಿ ಅನ್ನ ಇಳಿಯುತ್ತಿರುವಾಗ ನಿಮ್ಮ ಮೇಲೆ ಆಕ್ರಮಣ ಮಾಡಿ ಆಹಾರವನ್ನು ಕಸಿದು ತಿನ್ನುವುದು ಪಾಪದ ಕಾರ್ಯ. ಅಲ್ಲಾವು ಅದನ್ನು ಮೆಚ್ಚನು. ಆದರಿಂದ ನಿಮ್ಮಿಂದ ಬೇಡಿಯೇ ಸರಿ, ಆ ಅಮೂಲ್ಯ ಭಕ್ಶ್ಯದ ಸವಿಯನ್ನು ಸವಿಯಬೇಕೆಂದು ನಿಮ್ಮೆದುರಿಗೆ ಬಂದೆವು. ನೀವಿಲ್ಲಿರುವುದಾಗಲಿ, ನಿಮ್ಮ ಅಸ್ತ್ರ ಶಸ್ತ್ರಗಳ ಬಗೆಯಾಗಲಿ ನಾವುಗಳು ಯಾರಿಗೂ ತಿಳಿಸೆವು. ದಯೆಮಾಡಿ ನಮ್ಮ ಹೊಟ್ಟೆಗೊಂದಿಷ್ಟು ಆ ಅನ್ನವನ್ನು ಕೊಟ್ಟು ಕರುಣಿಸಿಎಂಬ ಮಾತನ್ನು ಕೇಳಿದ ನಮ್ಮ ಸೈನಿಕರು ತೆರದ ಬಾಯನ್ನು ಮುಚ್ಚದೆಯೇ ನನ್ನಡೆ ತಿರುಗಿದರು. ಖಡ್ಗ ಚೂರಿಗಳಿಲ್ಲದೆಯೇ ಕೇವಲ ಅಡುಗೆಯೆಂಬ ಅಸ್ತ್ರದಿಂದ ವಿರೋಧಿ ಸೈನಿಕರನ್ನು ಕೆಡವಿದ ಗರ್ವದ ನೋಟದಿಂದ ನಾನೂ ಕೂಡ ಅವರನ್ನು ದಿಟ್ಟಿಸತೊಡಗಿದೆ…..!


ಇಂದು ವಿಶ್ವದೆಲ್ಲೆಡೆ ಸುಪ್ರಸಿದ್ಧವಾಗಿರುವ ಬಿರಿಯಾನಿಯ ಐತಿಹ್ಯವಿದು. ಬಿರಿಯಾನಿಯ ಉಗಮಕ್ಕೆ ಇಂತಹ ಹಲವಾರು ಐತಿಹ್ಯ/ಕತೆಗಳಿವೆ. ಆದರೆ ಹೆಚ್ಚು ಕಡಿಮೆ ಎಲ್ಲವೂ ಬಿರಿಯಾನಿಯ ಉಗಮ ಭಾರತದ ಉತ್ತರ ಭಾಗ ಅಥವ ಮದ್ಯಪ್ರಾಚ್ಯ ದೇಶಗಳೆಂದೇ ಹೇಳುತ್ತವೆ. ಈ ಕತೆಯನ್ನೂ ಸುಮಾರು ಸಾವಿರ ವರ್ಷಗಳ ಕಾಲ ಹಿಂದೆ ಜರುಗಿರಬಹುದಾದ ಘಟನೆಯೆಂದು ಕಲ್ಪಿಸಿ ಹೆಣೆಯಲಾಗಿದೆ. ಟೊಮೊಟೊ ಹಣ್ಣುಗಳು ಆಗಷ್ಟೇ ಜನರಿಗೆ ಪರಿಚಯವಾಗುತ್ತಿದ್ದರಿಂದ ಅವುಗಳನ್ನು ಹುಳಿಹಣ್ಣುಗಳೆಂದು ಹೇಳಲಾಗಿದೆ. ಹಾಗು ಪುದೀನ ಹಾಗು ಕೊತ್ತಂಬರಿ ಸೂಪ್ಪುಗಳು ನಂತರದ ಕಾಲಘಟ್ಟದಲ್ಲಿ ಬಿರಿಯಾನಿ ತಯಾರಿಯಲಿ ಅಳವಡಿಸಿಕೊಂಡಿರಬಹುದಾದರಿಂದ ಅವುಗಳನ್ನು ಇಲ್ಲಿ ಕೈಬಿಡಲಾಗಿದೆ. ಇದು ಮೊದಲ ಬಾರಿಗೆ ಮಾಡಿರಬಹುದಾದ ಬಿರಿಯಾನಿಯಾದರಿಂದ  ಬಾದಾಮಿ, ಕೇಸರಿ ಹಾಗು ಇನ್ನೂ ಹಲವು ಪದಾರ್ಥಗಳನ್ನು ಇಲ್ಲಿ ಸೇರಿಸಲಾಗಿಲ್ಲ. ಒಂದು ವೇಳೆ ಇದೇ ರೀತಿಯೇ ಬಿರಿಯಾನಿಯನ್ನು ಮಾಡಲೋಗಿ ವಾರಾಂತ್ಯವೇನಾದರೂ ಕೆಟ್ಟರೆ ಅದಕ್ಕೆ ಅವರವರೇ ನೇರ ಹೊಣೆಯಾಗುತ್ತಾರೆ! 🙂

 

ಸಾಂದರ್ಭಿಕ ಚಿತ್ರ: ಕುಕ್ ಟ್ಯೂಬ್

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post