X

ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ! 

ಬದುಕು ಎಷ್ಟು ವಿಚಿತ್ರ ಅಂತ ಹಲವು ಸಲ ಅನ್ನಿಸುತ್ತೆ. ಅದಕ್ಕೆ ಕಾರಣ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಸಿಗಬೇಕಾದ ಮನ್ನಣೆ ಆತನಿಗೆ ಸಿಗಬೇಕಾದ ಹಣ ಸಿಗದೇ ಹೋಗುವುದು. ಇದು ಹಿಂದಿನಿಂದಲೂ ನಡೆದು ಬಂದಿದೆ ಅನ್ನುವುದಕ್ಕೆ ಮೇಲಿನ ಗಾದೆಯೇ ಸಾಕ್ಷಿ. ಹಿಂದೆ ವೃತ್ತಿಯಿಂದ ವ್ಯಕ್ತಿಯ ಪರಿಚಯ ಆ ಸಮುದಾಯದಲ್ಲಿ ಇರುತ್ತಿತ್ತು. ಹಾಲು ಮಾರುವವನನ್ನ ಹಾಲಪ್ಪ ಎಂದು, ಮಡಿಕೆ ಮಾಡುವನನ್ನ ಕುಂಬಾರ, ಎಂದು ಹೀಗೆ ಆತನ ಹೆಸರಿಗಿಂತ ಹೆಚ್ಚಾಗಿ ಆತನ ವೃತ್ತಿಯಿಂದ ವ್ಯಕ್ತಿಯ ಪರಿಚಯವಿರುತ್ತಿತ್ತು. ಎಷ್ಟೋ ಸಲ ಹಾಲು ಮಾರುವನ ಮನೆಯ ಮಕ್ಕಳಿಗೆ ಕುಡಿಯಲು ಹಾಲಿಲ್ಲದೆ ಹೋಗುತ್ತಿತ್ತು; ತುಪ್ಪದ ಮಾತು ದೂರವೇ ಉಳಿಯಿತು. ಊರಿಗೆಲ್ಲ ಹಾಲು ತುಪ್ಪ ಮಾರಿದರೂ ತನ್ನ ಮಕ್ಕಳಿಗೆ ನೀರು ಮಜ್ಜಿಗೆ ಕೊಡಲಾಗದ ಸಾಮಾಜಿಕ ವ್ಯವಸ್ಥೆಯ ದಾರುಣ ಚಿತ್ರ ಗಾದೆಯಲ್ಲಿ ವ್ಯಕ್ತವಾಗಿದೆ. ಇಲ್ಲಿ ಇನ್ನೊಂದು ಆಯಾಮವೂ ಇದೆ. ಅದೇನೆಂದರೆ ಹೆಸರು ಇಟ್ಟುಕೊಂಡ ಮಾತ್ರಕ್ಕೆ ಆ ಹೆಸರಿಗೆ ತಕ್ಕದಾಗಿ ಹಣೆಬರಹವೂ ಇರಬೇಕಲ್ಲ? ಎನ್ನುವುದು. ಸಂಪತ್ತು ಎಂದು ಹೆಸರಿಟ್ಟು ಕೊಂಡ ಮಾತ್ರಕ್ಕೆ ಆತನ ಬಳಿ ಸಂಪತ್ತು ಇರಬೇಕು ಎನ್ನುವ ಹಾಗಿಲ್ಲ ಅಲ್ಲವೇ? ಹೆಸರು ಮಾತ್ರ ಸಂಪತ್ತು, ಆದರೆ ಕವಡೆ ಕಾಸು ಇಲ್ಲ  ಎಂದು ಹೊಂದಾಣಿಕೆ ಆಗದ ವಿಷಯವನ್ನ ನಕ್ಕು ಹೇಳವುದು ಗಾದೆಯ ಇನ್ನೊಂದು ಮುಖ. ಕೃಶ ದೇಹ ಹೊಂದಿದವನ ಹೆಸರು ಭೀಮ ಎಂದು, ಸ್ತ್ರೀಲೋಲನಿಗೆ ರಾಮ ಎನ್ನುವ ಹೆಸರಿದ್ದರೆ? ಹೀಗೆ ವ್ಯಕ್ತಿತ್ವಕ್ಕೂ, ಅವರ ಬದುಕಿಗೂ,  ಹೆಸರಿಗೂ ಹೊಂದಾಣಿಕೆ ಆಗದ ಜನರನ್ನ ಕುರಿತು ಲೇವಡಿ ಮಾತಾಗಿಯೂ ಇವುಗಳು ಸೃಷ್ಟಿಯಾಗಿವೆ.

ಈ ಗಾದೆಯನ್ನ ಸ್ವಲ್ಪ ಗಂಭೀರವಾಗಿ ಪರಿಗಣಿಸಿದರೆ ಸಿಗುವುದು ‘ಬೆಳಕಿನ ಕೆಳಗೆ ಕತ್ತಲೆ’ ಎನ್ನುವ ದಾರುಣ ಸತ್ಯ. ಮಡಿಕೆ ಮಾರುವನ ಮನೆಯಲ್ಲಿ ಚಿಪ್ಪಿನಲ್ಲಿ ನೀರು ಕುಡಿದಂತೆ. ಚಮ್ಮಾರನ ಮಕ್ಕಳು ಬರಿಕಾಲಿನಲ್ಲಿ ನಡೆದಂತೆ, ರೈತನ ಮನೆಯಲ್ಲಿ ರಾಗಿಗೆ ಕೊರತೆಯಾದಂತೆ. ಅಂದರೆ ಸಮಾಜಕ್ಕೆ ದುಡಿಯುವುದರಲ್ಲೇ ಇವರ ಜೀವನ ಮುಗಿದು ಹೋಗುತ್ತದೆ. ತಮ್ಮವರಿಗೆ ಅದನ್ನ ಕೊಡುವಷ್ಟು ಆರ್ಥಿಕ ಶಕ್ತಿ ಇರುವುದಿಲ್ಲ ಎನ್ನುವುದರ ಅನಾವರಣ ಇಲ್ಲಿದೆ.

ಇದನ್ನ ಸ್ಪಾನಿಷ್ ಜನ ‘En casa de carpintero, puerta de cuero’ (ಎನ್ ಕಾಸ ದೆ ಕಾರ್ಪಿನ್ತೆರೋ ಪೂರ್ತ ದೆ ಕುರೋ) ಎನ್ನುತ್ತಾರೆ. ಕಾರ್ಪೇಂಟರ್ ಅಥವಾ ಮರಗೆಲಸ ಮಾಡುವನ ಮನೆಯ ಬಾಗಿಲು ಚರ್ಮದ್ದು ಎನ್ನುವ ಅರ್ಥ. ಅಂದರೆ ವೃತ್ತಿಯಿಂದ ಮರಗೆಲಸ ಮಾಡುವನಾಗಿದ್ದರೂ ತನ್ನ ಮನೆಗೆ ಮರದ ಬಾಗಿಲು ಹೊಂದುವ ಶಕ್ತಿ ಅವನಿಗಿಲ್ಲ; ಅವನ ಮನೆಯ ಬಾಗಿಲು ಚರ್ಮದಿಂದ ಮಾಡಿದ್ದಾಗಿದೆ. ಕೈ ಕೆಲಸ ಕಲಿತ ಜನರಲ್ಲಿ ಬಡತನ ಯಾವ ಮಟ್ಟದಲ್ಲಿತ್ತು ಎನ್ನುವುದರ ಜೊತೆಗೆ, ಹಿಂದಿನಿಂದಲೂ ಸಮಾಜದಲ್ಲಿ ಆಡಳಿತ ಮತ್ತು ಹಣ ಎರಡೂ ಕೆಲವೇ ಕೆಲವು ಜನರ ಹಿಡಿತದಲ್ಲಿತ್ತು ಎನ್ನುವುದು ಕೂಡ ಇದರಿಂದ ಇನ್ನಷ್ಟು ನಿಖರವಾಗುತ್ತದೆ.

ಇನ್ನು ಇದನ್ನ ಇಂಗ್ಲಿಷ್ ಜನತೆ ‘The shoemaker’s son always goes barefoot’ ಎಂದರು. ಚಪ್ಪಲಿ ಹೊಲಿಯುವನ ಮಗ ಯಾವಾಗಲೂ ಬರಿಗಾಲಿನಲ್ಲಿ ಹೋಗುತ್ತಾನೆ  ಎನ್ನುವುದು ಯಥಾವತ್ತು ಅರ್ಥ. ಇದನ್ನ ವಿಶೇಷವಾಗಿ ಬಿಡಿಸಿ ಹೇಳುವ ಅವಶ್ಯಕೆತೆ ಕೂಡ ಇಲ್ಲ . ಕನ್ನಡ ಮತ್ತು ಸ್ಪಾನಿಷ್ ಆಡುಮಾತುಗಳಲ್ಲಿ ಹೇಳಿದ್ದನ್ನೆ ಇವರು ಕೂಡ ಪುನರುಚ್ಚರಿಸಿದ್ದಾರೆ.

ನಮ್ಮ ಭಾಷೆ, ವೇಷ, ದೇಶ ಬದಲಾಗಬಹದು ಆದರೇನು ಮೂಲದಲ್ಲಿ ನಮ್ಮ ಭಾವನೆಯೊಂದೇ! ನಮ್ಮನ್ನು ವಿಭಜಿಸುವ ಅಂಶಕ್ಕಿಂತ ಒಂದುಗೂಡಿಸುವ ಅಂಶಗಳು ಹೆಚ್ಚಾಗಿವೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

En casa  de: ಮನೆ, ಅವನ ಮನೆ  ಎನ್ನುವ ಅರ್ಥ. ಎನ್ ಕಾಸ (ಮನೆ)  ಎನ್ ಕಾಸ ದೆ  (ಅವನ ಮನೆ) ಎನ್ನುವುದು ಉಚ್ಚಾರಣೆ.

carpintero: ಕಾರ್ಪೇಂಟರ್, ಮರದ ಕೆಲಸ ಮಾಡುವವನು ಎನ್ನುವ ಅರ್ಥ. ಕಾರ್ಪಿನ್ತೆರೋ ಎನ್ನುವುದು ಉಚ್ಚಾರಣೆ.

puerta: ಬಾಗಿಲು ಎನ್ನುವುದು ಅರ್ಥ. ಪೂರ್ತ ಎನ್ನುವುದು ಉಚ್ಚಾರಣೆ.

de cuero: ಚರ್ಮ, ಚರ್ಮದ ಎನ್ನುವ ಅರ್ಥ ನೀಡುತ್ತದೆ. ದೆ ಕುರೋ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post